ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಕಂಪೆನಿಗಳ ಲಾಭದಾಯಕ ಅವಕಾಶ

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಷೇರುಪೇಟೆಯ ಬೆಳವಣಿಗೆಗಳನ್ನು ವಹಿವಾಟುದಾರರು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳುವರು ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿನ ಪೇಟೆಯ ಚಲನೆಯಿಂದ ತಿಳಿಯಬಹುದಾಗಿದೆ. 

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪ್ರಯೋಗಾತ್ಮಕವಾಗಿ ಐದು ನಗರಗಳಲ್ಲಿ ದಿನ ನಿತ್ಯ ಬೆಲೆ ನಿಗದಿಪಡಿಸುವ ಕ್ರಿಯೆಯನ್ನು ಅಳವಡಿಸಿಕೊಳ್ಳುವುದು ಆ ವಲಯದ ಷೇರುಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗಳಲ್ಲಿ  ಉತ್ಸಾಹ ಮೂಡಿಸಿದೆ. 

ಮಾರ್ಚ್ ತಿಂಗಳಲ್ಲಿ ಈ ಕಂಪೆನಿಗಳು ವಿತರಿಸಿದ ಮಧ್ಯಂತರ ಲಾಭಾಂಶದ ನಂತರ ಬೆಲೆ ಕುಸಿದಿದ್ದು, ಷೇರಿನ ಬೆಲೆ ಪುಟಿದೇಳುವಂತೆ ಮಾಡಲು ನೆಪವನ್ನು ಹುಡುಕುತ್ತಿದ್ದ ವಹಿವಾಟುದಾರರಿಗೆ ಈ ಸುದ್ದಿಯು ಪೂರಕ ವಾತಾವರಣ ಒದಗಿಸಿತು. 

ಸೋಮವಾರ ದಿನದ ಆರಂಭದಲ್ಲಿ ಲಿಂಡೆ ಇಂಡಿಯಾ ಷೇರಿನ ಬೆಲೆಯು ₹495 ರವರೆಗೂ ಜಿಗಿದು ನಂತರ ₹460ರ ಸಮೀಪಕ್ಕೆ ಇಳಿಕೆ ಕಂಡು ಚೇತರಿಕೆ ಪಡೆಯಿತು.  ಈ ಕಂಪೆನಿಯು ಇಂಡಸ್ಟ್ರಿಯಲ್ ಗ್ಯಾಸ್ ವಲಯದ್ದಾಗಿದ್ದು,  ಈ ತಿಂಗಳ 18 ರಂದು  ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆ ಕರೆದಿರುವುದು ಈ ಜಿಗಿತಕ್ಕೆ ಕಾರಣವಿರಬಹುದು.   ಈ ಕಂಪೆನಿಯು ಶೇ 7.50ರ ಲಾಭಾಂಶ ಪ್ರಕಟಿಸಿದ್ದು, 7ರಿಂದ ಲಾಭಾಂಶ ರಹಿತ ವಹಿವಾಟು ಆರಂಭಿಸಿದೆ.  ಈ ಷೇರಿನ ಬೆಲೆಯು ₹383 ರಿಂದ  ವಾರ್ಷಿಕ ಗರಿಷ್ಠ ₹499 ರವರೆಗೂ ಒಂದೇ ತಿಂಗಳಲ್ಲಿ ಏರಿಕೆ ಕಂಡಿದೆ.  ಇದಕ್ಕೆ ಸಂಸ್ಥೆಯ ಹಣಕಾಸು ಸಾಧನೆಗಿಂತ ಬಾಹ್ಯ ಕಾರಣಗಳ ಪ್ರಭಾವವೇ ಹೆಚ್ಚು ಆಗಿದೆ.

ಲಾಭದಾಯಕ ಅವಕಾಶ: ಉತ್ತಮ ಕಂಪೆನಿಗಳು ಪೇಟೆಯಲ್ಲಿ ಇಂತಹ ಲಾಭದಾಯಕ ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ ಎಂಬುದಕ್ಕೆ ಹಿಂದಿನ ವಾರ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಪ್ರದರ್ಶಿಸಿದ ಏರಿಕೆಯು ಉತ್ತಮ ಉದಾಹರಣೆಯಾಗುತ್ತದೆ.
ಈ ಕಂಪೆನಿಯ ಷೇರು ಮಂಗಳವಾರ ದಿಢೀರ್‌ ಏರಿಕೆ ಕಂಡು,  ಬುಧವಾರ ₹211ರ ಗರಿಷ್ಠ  ತಲುಪಿತು. ಈ ಷೇರು ಕಳೆದ ನವೆಂಬರ್‌ನಲ್ಲಿ ₹113 ರ ಸಮೀಪವಿದ್ದು,    ಒಂದು ತಿಂಗಳಲ್ಲಿ ₹155ರಿಂದ ₹211 ರವರೆಗೂ ಏರಿಕೆ ಕಂಡುಕೊಂಡಿದೆ.  ಅಲ್ಲದೆ ಈ ಕಂಪೆನಿಯು ಒಂದು ವರ್ಷದಲ್ಲಿ  ಪ್ರತಿ ಷೇರಿಗೆ   ₹31 ರಂತೆ  ಲಾಭಾಂಶ ವಿತರಿಸಿದೆ.  

ಫೆಬ್ರುವರಿ 2016ರಲ್ಲಿ ಪ್ರತಿ ಷೇರಿಗೆ ₹12,  ಸೆಪ್ಟೆಂಬರ್‌ನಲ್ಲಿ ಪ್ರತಿ ಷೇರಿಗೆ ಒಂದರಂತೆ ಬೋನಸ್ ಷೇರು ವಿತರಣೆ ಹಾಗೂ ಈ ವರ್ಷದ ಫೆಬ್ರವರಿಯಲ್ಲಿ ಪ್ರತಿ ಷೇರಿಗೆ ₹7ರಂತೆ (ಬೋನಸ್ ನಂತರ) ಲಾಭಾಂಶ ವಿತರಿಸಿದೆ.  ಇವೆಲ್ಲವುದರ ಜೊತೆಗೆ ಪೇಟೆಯಲ್ಲಿ ಷೇರಿನ ಬೆಲೆಯು ಗಗನಕ್ಕೆ ಏರಿರುವುದು, ಷೇರುದಾರರಿಗೆ ಹೆಚ್ಚಿನ ಲಾಭ ಗಳಿಸಿಕೊಟ್ಟಿದೆ.

ಬುಧವಾರದ ಚಟುವಟಿಕೆ  ಆರಂಭಿಕ ಕ್ಷಣಗಳಲ್ಲಿ ರಿಲಯನ್ಸ್  ಕ್ಯಾಪಿಟಲ್ ಷೇರಿನ ಬೆಲೆಯು ₹630ರ ಸಮೀಪಕ್ಕೆ ಅತಿ ವೇಗದ ಜಿಗಿತ ಕಂಡು ನಂತರ ತಣ್ಣಗಾಯಿತು. ಅದರಂತೆ ಕೋಲ್ಕತ್ತ ಕಂಪೆನಿ ಗ್ಲೋಸ್ಟರ್ ಲಿಮಿಟೆಡ್ ₹623 ರವರೆಗೂ ಏರಿಕೆ ಕಂಡು ತಕ್ಷಣದಲ್ಲಿ ₹570ರ ಸಮೀಪಕ್ಕೆ ಬಂದಿತು. ಇದಕ್ಕೆ ಬೆಂಬಲವಾಗಿ ಲಾಡ್ ಲೋ ಜ್ಯುಟ್ ಷೇರಿನ ಬೆಲೆಯು ಸಹ ಹಿಂದಿನ ದಿನದ ₹93 ರ ಸಮೀಪದಿಂದ ₹112.40ರ ಗರಿಷ್ಠ ಆವರಣ ಮಿತಿ ತಲುಪಿತು.  
ಕೇಂದ್ರ ಸರ್ಕಾರ  ಪ್ರತಿ ಕ್ವಿಂಟಲ್‌ ಕಚ್ಚಾ ನಾರಿಗೆ ₹300ರಂತೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದು ಈ ರೀತಿಯ ಜಿಗಿತಕ್ಕೆ ಮುಖ್ಯ ಕಾರಣವಾಗಿದೆ.   ಇದು ಶೇ 9.40ರಷ್ಟು ಹೆಚ್ಚಳವಾಗಿದೆ.  ಹಿಂದಿನ ವರ್ಷ ಅಂದರೆ 2016–17ರಲ್ಲಿ ಶೇ 18.50 ರಷ್ಟು ಹೆಚ್ಚಳವಾಗಿತ್ತು. 

ಈ ವಲಯದ ಷೇರುಗಳು ಸಹ ಆಗಿಂದಾಗ್ಗೆ ರಭಸದ ಏರಿಳಿತ ಪ್ರದರ್ಶಿಸುತ್ತಿರುತ್ತವೆ ಎಂಬುದಕ್ಕೆ  ಕೆಲವು ತಿಂಗಳ ಹಿಂದೆ ನಡೆದ ನಿರ್ಧಾರ ಕಾರಣ.  ಈ ವರ್ಷದ ಜನವರಿಯಲ್ಲಿ ಕೇಂದ್ರ ಸರ್ಕಾರವು, ಬಾಂಗ್ಲಾ ದೇಶದಿಂದ ಆಮದಾಗುವ ನಾರು ಉತ್ಪನ್ನಗಳಿಗೆ    ಸುರಿ ವಿರೋಧಿ ತೆರಿಗೆ  ವಿಧಿಸಿದ ಕಾರಣ ಇದೆ ರೀತಿಯ ಜಿಗಿತ ಕಂಡು ಇಳಿದಿರುವುದು ಗಮನಾರ್ಹ ಅಂಶ.

ಮುಂದಿನ ದಿನಗಳಲ್ಲಿ ಹೆಚ್ಚಿನ ಕಂಪೆನಿಗಳು ತಮ್ಮ ಫಲಿತಾಂಶ ಪ್ರಕಟಿಸುವ ಕಾರಣ ಏರಿಳಿತಗಳು ಆ ಅಂಕಿ ಅಂಶಗಳನ್ನು ಆಧರಿಸಿರುತ್ತವೆ.
ಒಟ್ಟಿನಲ್ಲಿ ಸಂವೇದಿ  ಸೂಚ್ಯಂಕದ  ಭಾಗವಾದ    ಐಟಿಸಿ, ಕೋಲ್  ಇಂಡಿಯಾ,   ಮಾರುತಿ ಸುಜುಕಿ,  ಎಚ್‌ಡಿಎಫ್‌ಸಿ,  ಲಾರ್ಸನ್ ಆ್ಯಂಡ್ ಟೋಬ್ರೊ, ರಿಲಯನ್ಸ್ ಇಂಡಸ್ಟ್ರೀಸ್   ಏರಿಳಿತದಿಂದ  ಸೂಚ್ಯಂಕದಲ್ಲಿ ಸಮತೋಲನೆ ಮೂಡಿಸಲು  ಪ್ರಯತ್ನಿಸಿದವು. 

ಆದರೆ,  ವಿದೇಶಿ ವಿತ್ತೀಯ ಸಂಸ್ಥೆಗಳ ಸತತ ಮಾರಾಟ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮೂಡುತ್ತಿರುವ ಗೊಂದಲಗಳು ಮತ್ತು ಮುಖ್ಯವಾಗಿ ಸೂಚ್ಯಂಕಗಳು ವಾರ್ಷಿಕ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಪೇಟೆ ಒತ್ತಡದಲ್ಲಿದೆ. 
ವಿದೇಶಿ ವಿತ್ತೀಯ ಸಂಸ್ಥೆಗಳು ಈ ವಾರ ₹2,457 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹1,794 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಆದರೂ ಸಂವೇದಿ ಸೂಚ್ಯಂಕ 245 ಅಂಶ ಇಳಿಕೆ ಕಂಡಿದೆ. ಮಧ್ಯಮ, ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕ ಕ್ರಮವಾಗಿ 117ಮತ್ತು 119 ಅಂಶಗಳ ಏರಿಕೆ ಕಂಡಿದೆ.

ಅಂದರೆ, ವಿದೇಶಿ ವಿತ್ತೀಯ ಸಂಸ್ಥೆಗಳು ಸಂವೇದಿ ಸೂಚ್ಯಂಕದ ಷೇರುಗಳಲ್ಲಿ ಮಾರಾಟ ನಡೆಸಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ಇತರೆ ಷೇರುಗಳನ್ನು ಖರೀದಿಸಿರಬಹುದು.

ಪೇಟೆಯ ಬಂಡವಾಳೀಕರಣ ಮೌಲ್ಯ ₹123.17 ಲಕ್ಷ ಕೋಟಿಯಲ್ಲಿದ್ದು, ಮಂಗಳವಾರದ ₹123.99 ಲಕ್ಷಕೋಟಿ ಸರ್ವಕಾಲೀನ ಗರಿಷ್ಠವಾಗಿದೆ.
ಲಾಭಾಂಶ: ಇನ್ಫೊಸಿಸ್ ಪ್ರತಿ ಷೇರಿಗೆ ₹12.75 ( ಮುಖಬೆಲೆ ₹5, ನಿಗದಿತ ದಿನ: ಜೂನ್ 3), ಗೋವಾ ಕಾರ್ಬನ್ ಪ್ರತಿ ಷೇರಿಗೆ ₹3.
ಬೋನಸ್ ಷೇರು: ಮುತ್ತೂಟ್ ಕ್ಯಾಪಿಟಲ್ ಸರ್ವಿಸಸ್ ಲಿ. 18ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.
ಕಂಪೆನಿ ವಿಲೀನ ವಿಚಾರ: ಕೈರ್ನ್ ಇಂಡಿಯಾ ಲಿ ಕಂಪೆನಿಯು ವೇದಾಂತ ಕಂಪೆನಿಯಲ್ಲಿ ವಿಲೀನಗೊಳ್ಳಲು ಈ ತಿಂಗಳ 27 ನಿಗದಿತ ದಿನವಾಗಿದೆ. 
ಪ್ರತಿ ಒಂದು ಕೈರ್ನ್ ಇಂಡಿಯಾ ಷೇರಿಗೆ ಒಂದು ವೇದಾಂತ ಷೇರು,
ಶೇ 4- ಶೇ 7.5ರ ರಿಡೀಮಬಲ್ ಪ್ರಿಫರೆನ್ಸ್ ಷೇರು ಮತ್ತು ಪ್ರತಿ ಷೇರಿಗೆ ₹17.70ರ ಲಾಭಾಂಶ ದೊರೆಯುವುದು.

ವಾರದ ವಿಶೇಷ

ಓದುಗರೊಬ್ಬರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.  ಇದು ಇತರೆ ಹೂಡಿಕೆದಾರರಿಗೆ ಮಾರ್ಗದರ್ಶನವಾಗಲಿ ಎಂಬ ಉದ್ದೇಶದಿಂದ ಕೆಳಗಿನ ವಿವರ ನೀಡಿದ್ದೇನೆ.

ಅವರು ಓರ್ವ ಕಮಾಡಿಟಿ  ಬ್ರೋಕರ್ ಗೆ ₹10 ಲಕ್ಷ ಹಣ ನೀಡಿದ್ದಾರೆ. ಅದಕ್ಕೆ ಆ ಬ್ರೋಕರ್ ಶೇ 10 ರಂತೆ ಮಾಸಿಕ ಆದಾಯ ನೀಡುವ ಭರವಸೆ ನೀಡಿದ್ದರಂತೆ. ಆದರೆ ಐದಾರು ತಿಂಗಳುಗಳಿಂದ ಹಣ ಹಿಂದಿರುಗಿಸಲು ಒತ್ತಾಯ ಮಾಡಿದರೂ, ಹಿಂದಿರುಗಿಸಿಲ್ಲ ಇದಕ್ಕೆ ಪರಿಹಾರವೇನಾದರೂ ಇದೆಯೇ? ಎಂಬುದು ಅವರ ಪ್ರಶ್ನೆ.

ಇಲ್ಲಿ ಬ್ರೋಕರ್  ನಿಗದಿತ ಆದಾಯವನ್ನು ಚಟುವಟಿಕೆ ಮೂಲಕ ನೀಡುವ ಗ್ಯಾರಂಟಿ ನೀಡುವಂತಿಲ್ಲ. ಏಕೆಂದರೆ ಪೇಟೆಯ ಚಲನೆಯನ್ನು ಮುಂಚಿತವಾಗಿ ನಿಖರವಾಗಿ ಕಲ್ಪಿಸಿ ಕೊಳ್ಳಲು ಸಾಧ್ಯವಿಲ್ಲ. 

ಬ್ಯಾಂಕ್ ಬಡ್ಡಿ ದರ ಸತತವಾಗಿ ಕು ಸಿಯುತ್ತಿರುವ ಈಗಿನ ದಿನಗಳಲ್ಲಿ ಶೇ 10 ರಂತೆ ಪ್ರತಿ ತಿಂಗಳು ಆದಾಯ ಒದಗಿಸುತ್ತೇನೆ ಎಂಬುದು ಸಂದೇಹಾಸ್ಪದ ಅಂಶ. ಈ ರೀತಿ ನೀಡಿದ ಹಣವನ್ನು ಮರಳಿ ಪಡೆಯಲು ನಿಯಂತ್ರಕರ ಬಾಗಿಲು ತಟ್ಟುವುದು ಸಹ ಪ್ರಯೋಜನಕಾರಿಯಾಗುವುದಿಲ್ಲ. ಕಾರಣ ಇದು ಪೇಟೆಯ ವಹಿವಾಟಿಗೆ ಸಂಬಂಧಿಸಿದ ವಿಷಯವಾಗಿರದೆ, ಸಿವಿಲ್ ವಿಷಯವಾಗಿದೆ.ಈ ರೀತಿಯ ಆಶ್ವಾಸನೆಯ ಚಟುವಟಿಕೆಗಳಿಂದ ದೂರವಿದ್ದಲ್ಲಿ ನಿಮ್ಮ ಮೂಲ ಬಂಡವಾಳ ಸುರಕ್ಷಿತವಾಗಿರುತ್ತದೆ.

ಹೆಚ್ಚಿನ ಲಾಭದ ಆಸೆಯಿಂದ ಇಂತಹ ಆಶ್ವಾಸನೆಗೆ ಬಲಿಯಾದರೆ ಬಂಡವಾಳ ನಾಶವಾಗುವ ಸಾಧ್ಯತೆ ಹೆಚ್ಚು. ಅತಿ ಆಸೆಗಿಂತ ಸುರಕ್ಷಿತ ಅಲ್ಪ ಆದಾಯದಿಂದ ಬಂಡವಾಳ ಉಳಿಸಿಕೊಳ್ಳಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT