ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಡೆವೆಲಪರ್ ಲ್ಯಾಪ್‌ಟಾಪ್

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಲ್ಯಾಪ್‌ಟಾಪ್‌ಗಳಲ್ಲಿ ಹಲವು ನಮೂನೆ. ಸಾಮಾನ್ಯ ಕೆಲಸಗಳಿಗೆ, ಸ್ವಲ್ಪ ಜಾಸ್ತಿ ಶಕ್ತಿ ಬೇಕು ಎನ್ನುವ ಡೆವೆಲಪರ್‌ಗಳಿಗೆ (ಪ್ರೋಗ್ರಾಮರ್), ಇನ್ನೂ ಅಧಿಕ ಶಕ್ತಿ ಬೇಕಾಗುವ ಗೇಮಿಂಗ್, ಹೀಗೆ ಹಲವು ನಮೂನೆಯಲ್ಲಿ ಲ್ಯಾಪ್‌ಟಾಪ್‌ಗಳು ದೊರೆಯುತ್ತವೆ. ಅವುಗಳ ಶಕ್ತಿಯನ್ನು ಹೊಂದಿಕೊಂಡು ಅವುಗಳ ಬೆಲೆಯೂ ನಿಗದಿಯಾಗುತ್ತದೆ.

ಡೆವೆಲಪರ್ ಲ್ಯಾಪ್‌ಟಾಪ್‌ಗಳನ್ನು ಗಣಕ ತಂತ್ರಾಂಶ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಅಂದರೆ ಪ್ರೋಗ್ರಾಮರ್‌ಗಳು ಬಳಸುತ್ತಾರೆ. ಇವುಗಳಲ್ಲಿ ಶಕ್ತಿಶಾಲಿಯಾದ ಪ್ರೊಸೆಸರ್, ಅಧಿಕ ಮೆಮೊರಿ, ಸ್ವಲ್ಪ ಜಾಸ್ತಿ ಶಕ್ತಿಯ ಗ್ರಾಫಿಕ್ಸ್ ಮತ್ತು ಗ್ರಾಫಿಕ್ಸ್ ಮೆಮೊರಿ, ಹೆಚ್ಚು ಸಂಗ್ರಹ ಶಕ್ತಿಯ ಹಾರ್ಡ್‌ಡಿಸ್ಕ್ ಇತ್ಯಾದಿಗಳಿರುತ್ತವೆ. ಈ ವಾರ ಅಂತಹ ಒಂದು ಲ್ಯಾಪ್‌ಟಾಪ್ ಕಡೆಗೆ ನಮ್ಮ ವಿಮರ್ಶಾ ನೋಟ. ಅದುವೇ ಏಸುಸ್ ವಿವೊಬುಕ್ ಎಸ್ 510 (ASUS VivoBook S510U).

ಇದರ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ತೆಳ್ಳಗಿದ್ದು, ನೋಡಲು ಸುಂದರವಾಗಿದೆ. ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ಉತ್ತಮವಾಗಿದೆ. ಆದರೆ ಇದರ ದೇಹ ಗಡುಸಾಗಿಲ್ಲ. 1.8 ಸೆ.ಮೀ. ದಪ್ಪ ಎಂದರೆ ಅತಿ ತೆಳ್ಳಗಿನ ಲ್ಯಾಪ್‌ಟಾಪ್ ಅಲ್ಲ ಎನ್ನಬಹುದು. 15.6 ಇಂಚು ಗಾತ್ರದ ಪರದೆ ಕೂಡ ದೊಡ್ಡದೇ. ಚಿಕ್ಕ ಲ್ಯಾಪ್‌ಟಾಪ್ ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ. ವಿಮಾನದಲ್ಲಿ ಪ್ರಯಾಣಿಸುವಾಗ ಇದರಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಇದನ್ನು ಅಷ್ಟು ಸೀಮಿತ ಸ್ಥಳದಲ್ಲಿ ಬಳಸುವಂತಿಲ್ಲ. ಹ್ಞಾಂ, ನೀವು ಬ್ಯುಸಿನೆಸ್ ದರ್ಜೆಯಲ್ಲಿ ಪ್ರಯಾಣಿಸುವವರಾದರೆ ಬಳಸಲು ಸಾಧ್ಯ.

ಆದರೆ ಹಗುರ ಹಾಗೂ ಶಕ್ತಿಶಾಲಿ ಯಾದ ಡೆವೆಲಪರ್ ಲ್ಯಾಪ್‌ಟಾಪ್ ಬೇಕು ಎನ್ನುವವರು ಇದನ್ನು ಬಳಸಬಹುದು. ಇದರ ದೇಹ ತುಂಬ ಗಡುಸಾಗಿಲ್ಲ. ನೀವು ಬಸ್ಸು, ಕಾರು, ರೈಲುಗಳಲ್ಲಿ ಹಳ್ಳಿ ಕಡೆ ಪ್ರಯಾಣಿಸುವವರಾದರೆ ಇದನ್ನು ಎಚ್ಚರಿಕೆಯಿಂದ ಕೊಂಡೊಯ್ಯಬೇಕು.

ಈಗಾಗಲೇ ತಿಳಿಸಿದಂತೆ ಇದು ಪ್ರೋಗ್ರಾಮರ್‌ಗಳಿಗಾಗಿರುವ ಲ್ಯಾಪ್‌ಟಾಪ್. ನಾನು ಇದರಲ್ಲಿ ವಿಶುವಲ್ ಸ್ಟುಡಿಯೊ, ಯುನಿಟಿ ಹಾಗೂ ಕೆಲವು ಸರ್ವರ್‌ಗಳನ್ನು ಹಾಕಿದ್ದೇನೆ. ಪ್ರಾಥಮಿಕ ಡ್ರೈವ್ ಎಸ್‌ಎಸ್‌ಡಿ ಆಗಿರುವುದರಿಂದ ವಿಶುವಲ್ ಸ್ಟುಡಿಯೊ ಮತ್ತು ಇತರೆ ಕಂಪೈಲರ್‌ಗಳು ವೇಗವಾಗಿ ಲೋಡ್ ಆಗುತ್ತವೆ. 5 ವರ್ಷ ಹಳೆಯ ಲೆನೊವೊ ಡೆವಲಪರ್ ಲ್ಯಾಪ್‌ಟಾಪ್‌ನಲ್ಲಿ ಲೋಡ್ ಆಗಿ ಕಂಪೈಲ್ ಆಗಲು ತುಂಬ ಒದ್ದಾಡುತ್ತಿದ್ದ ಒಂದು ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಇದರಲ್ಲಿ ಆರಾಮವಾಗಿ ಲೋಡ್ ಆಗಿ ಎರಡು ನಿಮಿಷಗಳಲ್ಲಿ ಕಂಪೈಲ್ ಆಗಿ ಎಮುಲೇಟರ್‌ನಲ್ಲಿ ಕೆಲಸವನ್ನೂ ಮಾಡಿತು. ತುಂಬ ಪ್ರೊಸೆಸಿಂಗ್ ಶಕ್ತಿಯನ್ನು ಬೇಡುವ ಹಲವು ತಂತ್ರಾಂಶಗಳನ್ನು ಏಕಕಾಲದಲ್ಲಿ ಬಳಸಿಯೂ ನೋಡಿದ್ದೇನೆ. ನಾನು ಬಳಸುವಾಗ ಸಾಮಾನ್ಯವಾಗಿ ಹಲವು ತಂತ್ರಾಂಶಗಳು ಮತ್ತು ಸರ್ವರ್‌ ಏಕಕಾಲದಲ್ಲಿ ಕೆಲಸ ಮಾಡುತ್ತಿರುತ್ತವೆ. ನನಗೆ ಕೆಲಸ ಮಾಡುವಾಗ ಯಾವ ಅಡೆತಡೆ ಅನ್ನಿಸಲಿಲ್ಲ.

ಇದರಲ್ಲಿರುವ ಗ್ರಾಫಿಕ್ಸ್ ಉತ್ತಮವಾಗಿದೆ. ಅದಕ್ಕೆಂದೇ 2 ಗಿಗಾಬೈಟ್ ಅಧಿಕ ಮೆಮೊರಿ ಇದೆ. ಆದ್ದರಿಂದ ಗ್ರಾಫಿಕ್ಸ್ ಕೆಲಸ ಮಾಡುವವರಿಗೂ ಇದು ಬಳಸಬಹುದಾದ ಲ್ಯಾಪ್‌ಟಾಪ್. ಫೋಟೊಶಾಪ್, ವಿಡಿಯೊ ಎಡಿಟಿಂಗ್, ಇತ್ಯಾದಿಗಳನ್ನು ತೊಂದರೆಯಿಲ್ಲದೇ ಮಾಡಬಹುದು. ಪರದೆಯ ಗುಣಮಟ್ಟ ಚೆನ್ನಾಗಿದೆ. ಎಲ್‌ಇಡಿ ಪರದೆಯಾಗಿರುವುದರಿಂದ ವ್ಯೂವಿಂಗ್ ಆ್ಯಂಗಲ್ ಕೂಡ ಚೆನ್ನಾಗಿದೆ. ಎಲ್ಲ ಬಣ್ಣಗಳ ಪುನರುತ್ಪತ್ತಿ ತೃಪ್ತಿದಾಯಕವಾಗಿದೆ. ಪ್ರಖರತೆಯೂ ಚೆನ್ನಾಗಿದೆ. ಸಿನಿಮಾ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಆಟ ಆಡುವ ಅನುಭವವೂ ಪರವಾಗಿಲ್ಲ. ಆಡಿಯೊ ಕೂಡ ತೃಪ್ತಿದಾಯಕವಾಗಿದೆ ಎನ್ನಬಹುದು. ಆದರೂ ಇದು ಪೂರ್ಣಪ್ರಮಾಣದ ಗ್ರಾಫಿಕ್ಸ್ ಅಥವಾ ಗೇಮಿಂಗ್ ಲ್ಯಾಪ್‌ಟಾಪ್ ಅಲ್ಲ. ಈ ಲ್ಯಾಪ್‌ಟಾಪ್‌ನಲ್ಲಿರುವುದು ಶಕ್ತಿಶಾಲಿ ಬ್ಯಾಟರಿ ಅಲ್ಲ. ಆದರೂ ಬ್ಯಾಟರಿ ಚೆನ್ನಾಗಿದೆ. ಇಷ್ಟು ಶಕ್ತಿಶಾಲಿಯಾದ ಲ್ಯಾಪ್‌ಟಾಪ್ ಆಗಿದ್ದೂ ಬ್ಯಾಟರಿ ಸುಮಾರು 5 ರಿಂದ 7 ಗಂಟೆ ಕಾಲ ಬಾಳಿಕೆ ಬರುತ್ತದೆ.

ತುಂಬ ಶಕ್ತಿಶಾಲಿಯಾದ ಲ್ಯಾಪ್‌ಟಾಪ್‌ಗಳ ಬಗ್ಗೆ ಒಂದು ಪ್ರಮುಖ ದೂರು ಎಂದರೆ ಅವು ತುಂಬ ಬಿಸಿಯಾಗುತ್ತವೆ ಎಂದು. ಈ ಲ್ಯಾಪ್‌ಟಾಪ್ ಅಷ್ಟೇನೂ ಬಿಸಿಯಾಗುವುದಿಲ್ಲ. ಆದ್ದರಿಂದ ತೊಡೆ ಮೇಲೆ ಇಟ್ಟುಕೊಂಡೂ ಕೆಲಸ ಮಾಡಬಹುದು.

ಈ ಲ್ಯಾಪ್‌ಟಾಪ್‌ನಲ್ಲಿ ಡಿವಿಡಿ ಡ್ರೈವ್ ಮತ್ತು ವಿಜಿಎ ಪೋರ್ಟ್‌ಗಳು ಇಲ್ಲ. ಅವೆಲ್ಲ ಈಗ ಹಳೆಯದಾಗಿವೆ. ಒಂದು ವಿಶೇಷ ಯುಎಸ್‌ಬಿ-ಸಿ ಕಿಂಡಿ ಇದೆ. ಆದರೆ ಎತರ್‌ನೆಟ್ ಕಿಂಡಿ ಇಲ್ಲ ಎನ್ನುವುದು ಸ್ವಲ್ಪ ಅಸಮಾಧಾನದ ಸಂಗತಿ. ಒಟ್ಟಿನಲ್ಲಿ ಹೇಳುವುದಾದರೆ ನೀವು ಡೆವಲಪರ್ ಆಗಿದ್ದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಬಳಸುವವರಾಗಿದ್ದಲ್ಲಿ, ನಿಮಗೆ ಇದು ಸೂಕ್ತ ಲ್ಯಾಪ್‌ಟಾಪ್ ಎನ್ನಬಹುದು.

*


ವಾರದ ಆ್ಯಪ್‌(app) ವೂಟ್
ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಸಿನಿಮಾ, ಕಾರ್ಟೂನ್, ಟಿ.ವಿ. ಕಾರ್ಯಕ್ರಮಗಳನ್ನು ನೋಡಲು ಅನುವು ಮಾಡಿಕೊಡುವ ಹಲವು ಕಿರುತಂತ್ರಾಂಶಗಳು (ಆ್ಯಪ್) ಲಭ್ಯವಿವೆ. ಕೆಲವು ಸಂಪೂರ್ಣ ಉಚಿತ ಕೂಡ. ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Voot TV Shows Movies Cartoons ಎಂದು ಹುಡುಕಬೇಕು ಅಥವಾ http://bit.ly/gadgetloka314 ಜಾಲತಾಣಕ್ಕೆ ಭೇಟಿ ನೀಡಬೇಕು. ಇದರಲ್ಲಿ ಹಲವು ಭಾಷೆಯ ಟಿ.ವಿ. ಚಾನೆಲ್‌ಗಳು, ಸಿನಿಮಾಗಳು, ಇತರೆ ಕಾರ್ಯಕ್ರಮಗಳು ಎಲ್ಲ ಇವೆ.

ಕನ್ನಡದವುಗಳೂ ಇವೆ. ಇದರಲ್ಲಿರುವ ಬಹುತೇಕ ಕಾರ್ಯಕ್ರಮಗಳು, ಸಿನಿಮಾಗಳು ಮತ್ತು ಟಿ.ವಿ. ಚಾನೆಲ್‌ಗಳು ಉಚಿತ. ಇದರಲ್ಲಿ ಮಕ್ಕಳಿಗೆಂದೇ ಪ್ರತ್ಯೇಕ ವಿಭಾಗ ಇದೆ.

*
ಗ್ಯಾಜೆಟ್‌ ಪದ: Augmented Reality ವರ್ಧಿತ ವಾಸ್ತವ
ಯಾವುದಾದರೊಂದು ವಸ್ತು, ದೃಶ್ಯ ಅಥವಾ ಕೆಲಸವನ್ನು ಮೂರು ಆಯಾಮಗಳಲ್ಲಿ ಕೃತಕವಾಗಿ ಸೃಷ್ಟಿಸಿದಂತೆ ಭ್ರಮೆ ಮೂಡಿಸುವುದು ಮಿಥ್ಯಾವಾಸ್ತವ ತಂತ್ರಜ್ಞಾನ. ನೀವು ನಿಮ್ಮ ಫೋನ್ ಕ್ಯಾಮೆರಾದ ಮೂಲಕ ನಿಮ್ಮ ಮನೆಯನ್ನೇ ವೀಕ್ಷಿಸುತ್ತಿದ್ದೀರೆಂದಿಟ್ಟುಕೊಳ್ಳಿ. ಈ ರೀತಿ ವೀಕ್ಷಿಸುತ್ತಿರುವ ದೃಶ್ಯದ ಮೇಲೆ ಗಣಕ ಸೃಷ್ಟಿಸಿದ ಪೀಠೋಪಕರಣಗಳನ್ನು ಇರಿಸಿ ನೋಡಿದರೆ ಅವು ಹೇಗಿರಬಹುದು? ಅದುವೇ ವರ್ಧಿತ ವಾಸ್ತವ. ನಿಮ್ಮ ಮನೆಯ ಮುಂದೆ ಅಥವಾ ಗ್ಯಾರೇಜಿನಲ್ಲಿ ಬಿಎಂಡಬ್ಲ್ಯು ಕಾರು ನಿಲ್ಲಿಸಿದರೆ ಹೇಗೆ ಕಾಣಬಹುದು ಎಂಬುದನ್ನೂ ಅದು ತೋರಿಸಬಲ್ಲುದು. ಹೀಗೆ ತೋರಿಸುವಾಗ ಅದು ಈ ದೃಶ್ಯವನ್ನು ಮೂರು ಆಯಾಮದಲ್ಲಿ ಸೃಷ್ಟಿಸುತ್ತದೆ.

*
ಗ್ಯಾಜೆಟ್‌ ಸಲಹೆ
ರಾಘವೇಂದ್ರರ ಪ್ರಶ್ನೆ: ನಾನು ಒಂದು ಉತ್ತಮ ಫೋನ್ ತೆಗೆದುಕೊಳ್ಳಬೇಕು. ನನ್ನ ಆಯ್ಕೆಯಲ್ಲಿ ಹೋನರ್ 8 ಪ್ರೊ ಇದೆ. ಇದು ಹೇಗಿದೆ? ಕೊಳ್ಳಬಹುದೇ?
ಉ: ಚೆನ್ನಾಗಿದೆ. ಕೊಳ್ಳಬಹುದು.

*
ಗ್ಯಾಜೆಟ್ ತರ್ಲೆ
ಕಿವಿಯಿಂದ ಇಯರ್‌ಫೋನ್ ಬೀಳಿಸಿಕೊಳ್ಳುವುದು ನಿಮ್ಮ ಸಮಸ್ಯೆಯೇ? ನಿಮಗಾಗಿ ಹೊಸದಾಗಿ ಝುಮಕಿ ವಿನ್ಯಾಸದ ಇಯರ್‌ಫೋನ್ ಬಂದಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT