ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಶೀಲತೆ: ಅಮೆರಿಕದ ಧೋರಣೆ ಪಾಠವಾಗಲಿ

Last Updated 8 ಮೇ 2012, 19:30 IST
ಅಕ್ಷರ ಗಾತ್ರ

ಆ ಉದ್ದಿಮೆ ಸಂಸ್ಥೆಯ ಒಟ್ಟಾರೆ ಬಂಡವಾಳ ಮಾರುಕಟ್ಟೆ ಮೌಲ್ಯ, ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಒಂದು ಮೂರಾಂಶದಷ್ಟಿದೆ! ಅಂದರೆ ಅಂದಾಜು ರೂ 28 ಲಕ್ಷ ಕೋಟಿಗಳಿಂದ ರೂ 30 ಲಕ್ಷ ಕೋಟಿಗಳಷ್ಟಿದೆ. (560 - 600 ಶತಕೋಟಿ ಡಾಲರ್).

ಕಳೆದ ತ್ರೈಮಾಸಿಕದಲ್ಲಿ (ಕಳೆದ ವರ್ಷವಲ್ಲ) ಸಂಸ್ಥೆಯ ಒಟ್ಟು ವರಮಾನ (40 ಶತಕೋಟಿ ಡಾಲರ್) ರೂ 2 ಲಕ್ಷ  ಕೋಟಿಗಳಷ್ಟಾಗಿತ್ತು.  ಈ ತ್ರೈಮಾಸಿಕದಲ್ಲಿ ಅದರ ಲಾಭವು ರೂ 60,000 ಕೋಟಿಗಳಷ್ಟು (12 ಶತಕೋಟಿ ಡಾಲರ್) ದಾಖಲಾಗಿದೆ.

ನಾನು ಇಲ್ಲಿ ನೀಡುತ್ತಿರುವ ಮಾಹಿತಿಯು ಯಾವ ಸಂಸ್ಥೆ ಬಗ್ಗೆ ಎಂದು ಓದುಗರು ಊಹಿಸಿರಬಹುದು. ಆ್ಯಪಲ್. ಹೌದು ನಿಮ್ಮ ಊಹೆ ಸರಿ. ನಾನು ಇಲ್ಲಿ ಪ್ರಸ್ತಾಪಿಸಿರುವುದು, ಸ್ಟೀವ್ ಜಾಬ್ಸ್ ಕಟ್ಟಿ ಹೆಮ್ಮರವಾಗಿ ಬೆಳೆಸಿರುವ ಆ್ಯಪಲ್ ಸಂಸ್ಥೆಯು, ತನ್ನ ಸಹ ಸ್ಥಾಪಕನ ಅಗಲಿಕೆ  ನಂತರವೂ ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಸಾಧನೆಯ ಹಾದಿಯಲ್ಲಿ ದಾಪುಗಾಲು ಹಾಕುತ್ತಿರುವುದು ಅನೇಕರ ಪಾಲಿಗೆ ಅಚ್ಚರಿ ಮೂಡಿಸಿದೆ.

ಜಾಬ್ಸ್ ಮೃತಪಟ್ಟ  ನಂತರದ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಆ್ಯಪಲ್‌ನ ಬಂಡವಾಳ ಮೌಲ್ಯವು ಶೇ 50ರಷ್ಟು ಹೆಚ್ಚಳಗೊಂಡಿದೆ. ಕಳೆದ ವರ್ಷಾಂತ್ಯದಲ್ಲಿ ನಾನು ಸ್ಟೀವ್ ಜಾಬ್ಸ್‌ಗೆ ಶ್ರದ್ಧಾಂಜಲಿ ರೂಪದಲ್ಲಿ ಬರೆದಿದ್ದ ಲೇಖನದಲ್ಲಿ  ಆತನ ವಿಶಿಷ್ಟ ನಾಯಕತ್ವ ಗುಣ, ಹೊಸ ಹೊಸ ಆಲೋಚನೆ ಮತ್ತು ಯಶೋಗಾಥೆ ಬಗ್ಗೆ ಗುಣಗಾನ ಮಾಡಿದ್ದೆ.  

ಜಾಬ್ಸ್ ಮರೆಯಾದ ನಂತರ, ಆ್ಯಪಲ್‌ನ ವರಮಾನ, ಲಾಭದ ಪ್ರಮಾಣ ಕಡಿಮೆ ಆಗಲಿದೆ. ಅದರ ಪ್ರತಿಷ್ಠಿತ ಸ್ಥಾನಮಾನಕ್ಕೆ ತೀವ್ರ ಧಕ್ಕೆ ಒದಗಲಿದೆ ಎಂದೇ ಅನೇಕರು ನಿರೀಕ್ಷಿಸಿದ್ದರು. ಆದರೆ, ಎಲ್ಲ ಟೀಕಾಕಾರರ  ನಿರೀಕ್ಷೆಗಳು ಹುಸಿಯಾಗಿವೆ. ಆ್ಯಪಲ್ ಸಂಸ್ಥೆ ದಾಖಲೆ ಪ್ರಮಾಣದಲ್ಲಿ ವರಮಾನ ಮತ್ತು ಲಾಭ ಬಾಚಿಕೊಳ್ಳುತ್ತ ತನ್ನ ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ.

ಇನ್ನೊಂದು ಸಂಸ್ಥೆಯ ಯಶೋಗಾಥೆಯನ್ನೂ ಇಲ್ಲಿ ಉಲ್ಲೇಖಿಸಲೇಬೇಕು. ಆ್ಯಪಲ್‌ಗೆ ಹೋಲಿಸಿದರೆ ಇದೊಂದು ಇನ್ನೂ ಬಾಲ್ಯಾವಸ್ಥೆಯಲ್ಲಿ ಇದೆ. ಕೇವಲ 8 ವರ್ಷಗಳಷ್ಟು ಹಳೆಯದು. 2004ರಲ್ಲಿ  ಅಸ್ತಿತ್ವಕ್ಕೆ ಬಂದಿದೆ. ಕಂಪ್ಯೂಟರ್ ಕಾರ್ಯನಿರ್ವಹಣೆ ಮತ್ತು ಕಂಪ್ಯೂಟರ್‌ಗಳಲ್ಲಿನ ಮಾಹಿತಿ ಕದಿಯುವುದರಲ್ಲಿ (ಹ್ಯಾಕಿಂಗ್) ಪರಿಣತನಾಗಿದ್ದ 20 ವರ್ಷದ ಯುವಕನೊಬ್ಬ ಈ ಸಂಸ್ಥೆ ಸ್ಥಾಪಿಸಿದ್ದಾನೆ.

ಸಂಸ್ಥೆ ಅಸ್ತಿತ್ವಕ್ಕೆ ಬಂದ ಕೆಲವೇ ಕೆಲ ವಾರಗಳಲ್ಲಿ  ಸಂಸ್ಥೆಯ ಷೇರು ಮಾರುಕಟ್ಟೆ ಮೌಲ್ಯ ನಮ್ಮ ರಿಲಯನ್ಸ್ ಇಂಡಸ್ಟ್ರೀಸ್‌ಗಿಂತ ಹೆಚ್ಚಾಗಿತ್ತು. ಹೌದು, ನಿಜವಾಗಿಯೂ `ಆರ್‌ಐ~ಗಿಂತ ಹೆಚ್ಚಾಗಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆ ಕಂಪನಿ ಹೆಸರು `ಫೇಸ್‌ಬುಕ್~.  ಮಾರ್ಕ್ ಜುಕರ್‌ಬರ್ಗ್ ಇದರ ಸಹ ಸ್ಥಾಪಕ.
 
ರಿಲಯನ್ಸ್ ಇಂಡಸ್ಟ್ರೀಸ್‌ನ ಬಂಡವಾಳ ಮಾರುಕಟ್ಟೆ ಮೌಲ್ಯ ರೂ 2.75 ಲಕ್ಷ ಕೋಟಿಗಳಿಂದ  ರೂ 3 ಲಕ್ಷ ಕೋಟಿಗಳಷ್ಟು ಇರುವಾಗ (55ರಿಂದ 60 ಶತಕೋಟಿ ಡಾಲರ್), ಫೇಸ್‌ಬುಕ್‌ನ ಮಾರುಕಟ್ಟೆ ಮೌಲ್ಯ ರೂಪಾಯಿ 5 ಲಕ್ಷ ಕೋಟಿ (100 ಶತಕೋಟಿ ಡಾಲರ್) ಗಳಷ್ಟಿದೆ.

ಯಶಸ್ವಿ ಉದ್ದಿಮೆ ಸಂಸ್ಥೆಗಳಾದ ಆ್ಯಪಲ್, ಫೇಸ್‌ಬುಕ್‌ಗಳ ಸಹ ಸ್ಥಾಪಕರಾದ ಸ್ಟೀವ್ ಜಾಬ್ಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ದಂತಕತೆಯಾಗಿರುವ ಬಗ್ಗೆ ನಾನು ಇಲ್ಲಿ ಉಲ್ಲೇಖಿಸಲು ಸಕಾರಣಗಳಿವೆ.

ಆ್ಯಪಲ್ ಪಾಲಿಸಿಕೊಂಡು ಬಂದಿರುವ ಉದ್ಯಮ ಸಂಸ್ಕೃತಿ ಹಾಗೂ ವಹಿವಾಟಿನಲ್ಲಿ ಅಳವಡಿಸಿಕೊಂಡಿರುವ ಹೊಸತನ ಮತ್ತು ಫೇಸ್‌ಬುಕ್‌ನ ಹೊಸ ಬಗೆಯ ಸೇವಾ ಮಾರಾಟ ಕೌಶಲ್ಯವು, ಅಮೆರಿಕದ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಸಂಸ್ಕೃತಿಯನ್ನು ಸಮರ್ಥವಾಗಿ ಪ್ರತಿಫಲಿಸುತ್ತವೆ.

ವಿಶ್ವದ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿರುವ ಅಮೆರಿಕವು, ನಿಧಾನವಾಗಿ ಮತ್ತು ಖಚಿತವಾಗಿ ಪುನಶ್ಚೇತನದ ಹಾದಿಯಲ್ಲಿ ಸಾಗಿದೆ. ಅಲ್ಲಿನ ಅನೇಕ ದೈತ್ಯ ಉದ್ದಿಮೆ ಸಂಸ್ಥೆಗಳು ಮತ್ತು `ಡೋವ್ ಸೂಚ್ಯಂಕ~ದಲ್ಲಿ ಸೇರ್ಪಡೆಯಾಗಿರುವ ಸಂಸ್ಥೆಗಳು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆರೋಗ್ಯಕರ ರೀತಿಯಲ್ಲಿ ವರಮಾನ ವೃದ್ಧಿ ಮತ್ತು ಲಾಭ ಗಳಿಸುತ್ತಿವೆ.

ಪ್ರತಿ ತಿಂಗಳಿಗೊಮ್ಮೆ ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿ ಹೊಸ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ. ಅರ್ಥ ವ್ಯವಸ್ಥೆಯ ಎಲ್ಲ ಮಗ್ಗಲುಗಳೂ ಚೇತರಿಕೆಯ ಹಾದಿಯಲ್ಲಿ ಇವೆ.

ಒಂದೆರಡು ದಶಕದ ಹಿಂದೆ ಆಗಿರಲಿ ಅಥವಾ ಸದ್ಯದ ದಿನಗಳಲ್ಲೇ ಆಗಿರಲಿ, ಜಾಗತಿಕ ಅರ್ಥ ವ್ಯವಸ್ಥೆಯು, ಅಮೆರಿಕದ ಅರ್ಥ ವ್ಯವಸ್ಥೆಯ ಚೇತರಿಕೆ ಮತ್ತು ಬೆಳವಣಿಗೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. 

ಅತ್ಯಂತ ಬಲಿಷ್ಠ ಮತ್ತು ಸದಾ ಹೊಸತನಕ್ಕೆ ಸ್ಪಂದಿಸುವ ಅರ್ಥ ವ್ಯವಸ್ಥೆ ಆಗಿರುವುದನ್ನು ಅಮೆರಿಕದ ಅರ್ಥ ವ್ಯವಸ್ಥೆಯು ಯಾವುದೇ ಅನುಮಾನಕ್ಕೆ ಎಡೆ ಇಲ್ಲದಂತೆ ಇನ್ನೊಮ್ಮೆ ಇಡೀ ವಿಶ್ವಕ್ಕೆ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.

ಅಮೆರಿಕದಲ್ಲಿನ ಆರ್ಥಿಕ ಪ್ರಗತಿಗೆ ಹೋಲಿಸಿದರೆ ನಮ್ಮಲ್ಲಿ ಮಾತ್ರ ಕಣ್ಣಿಗೆ ರಾಚುವಷ್ಟು ವ್ಯತಿರಿಕ್ತ ಚಿತ್ರಣ ಕಂಡು ಬರುತ್ತದೆ. ಅಮೆರಿಕವು  ಪೂರಕ ಪರಿಸರ ಮತ್ತು ತೆರಿಗೆ ಉತ್ತೇಜನದಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಉದ್ದಿಮೆ ವಹಿವಾಟು ಆರಂಭಿಸುವುದಕ್ಕೆ ಪ್ರೇರಣೆ ನೀಡುವ, ಉತ್ಸಾಹಿಗಳಲ್ಲಿ ಉದ್ಯಮಶೀಲತೆ ಹೆಚ್ಚಿಸುವ ಸಂಸ್ಕೃತಿಯನ್ನು ಅನೇಕ ಏಳುಬೀಳುಗಳ ಮಧ್ಯೆ ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿದೆ.
 
ಈ ಮೂಲಕ ಉದ್ದಿಮೆದಾರರು ಏಳಿಗೆ ಹೊಂದಲು, ಉದ್ದಿಮೆಯನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲು ಉತ್ತೇಜನ  ನೀಡುತ್ತಲೇ ಇದೆ.ಇಂತಹ ಕ್ರಮಗಳ ಮೂಲಕ ಜಾಗತಿಕ ಉದ್ಯಮಕ್ಕೂ ಅಮೆರಿಕವು ಸ್ಫೂರ್ತಿ ನೀಡುತ್ತ ಬಂದಿದೆ. ಆದರೆ, ನಮ್ಮಲ್ಲಿ (ಭಾರತದಲ್ಲಿ) ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಪರಿಸ್ಥಿತಿ ಇದೆ. 

ಮಹತ್ವಾಕಾಂಕ್ಷೆಯ, ಉದ್ಯಮಶೀಲರಾದ ಲಕ್ಷಾಂತರ ಯುವಕರು ಹೊಸ ಉದ್ಯಮ ಸ್ಥಾಪಿಸುವ ಕನಸು ಹೊಂದಿದವರಾಗಿದ್ದಾರೆ. ಆದರೆ, ಉದ್ಯಮಶೀಲತೆ ಉತ್ತೇಜಿಸುವ -  ಪೋಷಿಸುವ ಲಕ್ಷಣಗಳೇ ನಮ್ಮಲ್ಲಿ ಕಾಣುತ್ತಿಲ್ಲ. ಹೊಸ ಉದ್ಯಮಿಗಳಿಗೆ ಪೂರಕವಾದ ಪರಿಸರ ಕಲ್ಪಿಸುವ ಸಾಧ್ಯತೆಗಳೂ ಕಂಡು ಬರುತ್ತಿಲ್ಲ. ಉದ್ಯಮ ಸ್ಥಾಪನೆಗೆ ಪೂರಕ ಪರಿಸರ ನಿರ್ಮಾಣಕ್ಕೆ  ಅಗತ್ಯವಾದ ನೆರವನ್ನೂ ಕಲ್ಪಿಸುತ್ತಿಲ್ಲ.

ಕೇಂದ್ರ ಸರ್ಕಾರದ ಇಂತಹ ದಿವ್ಯ ನಿರ್ಲಕ್ಷ್ಯದ ಧೋರಣೆಗೆ ಸಾಕಷ್ಟು ನಿದರ್ಶನಗಳಿವೆ.  ವಿವೇಕರಹಿತ ಹೊಸ ಪ್ರಸ್ತಾವ ಏನೆಂದರೆ, 2012-13ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಯಾವುದೇ ಖಾಸಗಿ ಸಂಸ್ಥೆಯಲ್ಲಿನ ಆರಂಭಿಕ ಹೂಡಿಕೆಯನ್ನೂ `ವರಮಾನ~ ಎಂದೇ ವರ್ಗೀಕರಿಸಲಾಗಿದೆ.

ಸಂಸ್ಥೆಯ ಪ್ರವರ್ತಕರು, ತಮ್ಮ ಹೊಸ ಉದ್ದಿಮೆಯಲ್ಲಿ ತೊಡಗಿಸುವ ಹಣವನ್ನು ಹೂಡಿಕೆ ಎಂದು ತೆರಿಗೆ ಅಧಿಕಾರಿಗಳ ಮುಂದೆ ಸಮರ್ಥಿಸಿಕೊಂಡರೆ ಮಾತ್ರ `ವರಮಾನ~ದಿಂದ ವಿನಾಯ್ತಿ ದೊರೆಯಲಿದೆ. ಇಲ್ಲದಿದ್ದರೆ ಇಂತಹ  ಹೂಡಿಕೆಯೂ ತೆರಿಗೆಗೆ (ಸ್ಟಾರ್ಟ್ ಅಪ್  ಟ್ಯಾಕ್ಸ್) ಒಳಪಡಲಿದೆ.

ಈ ಪ್ರಸ್ತಾವವು, ಉದ್ಯಮಶೀಲ ಅರ್ಥ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಲಿದ್ದು, ಹೊಸದಾಗಿ ಉದ್ಯಮ ಆರಂಭಿಸುವವರ ಉತ್ಸಾಹದ ರೆಕ್ಕೆಪುಕ್ಕಗಳನ್ನೇ ಕತ್ತರಿಸಲಿದೆ. ಉದ್ಯಮ ಆರಂಭಿಸಲು ಅಗತ್ಯವಾದ ಬಂಡವಾಳ ಕ್ರೋಡಿಕರಣವೇ ನಮ್ಮಲ್ಲಿ ದೊಡ್ಡ ಸವಾಲಿನ ಕೆಲಸವಾಗಿದೆ.
 
ಇಂತಹ ಪ್ರತಿಕೂಲ ವಾತಾವರಣದಲ್ಲಿ,  ಸರ್ಕಾರವೇ ಹೊಸದಾಗಿ ಉದ್ದಿಮೆ ಆರಂಭಿಸುವವರ,  ಸಾಹಸ ಬಂಡವಾಳ ಹೂಡಿಕೆದಾರರ ಉತ್ಸಾಹ ಉಡುಗಿಸಲು ತೆರಿಗೆ ವಿಧಿಸಲು ಮುಂದಾಗಿದೆ. ಸರ್ಕಾರದ ಇಂತಹ ಧೋರಣೆಯು ಅವಿವೇಕತನದಿಂದ ಕೂಡಿದೆ ಎನ್ನದೇ ವಿಧಿ ಇಲ್ಲ.

ನಮ್ಮಲ್ಲಿನ ಇಂತಹ ನಿರುತ್ತೇಜಕ ಪರಿಸ್ಥಿತಿಗೂ, ಅಮೆರಿಕದಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಹೊಸ ಉದ್ಯಮ ಕಾಯ್ದೆಗೂ (ಜಂಪ್‌ಸ್ಟಾರ್ಟ್ ಅವರ್ ಬಿಸಿನೆಸ್ ಸ್ಟಾರ್ಟ್‌ಅಪ್ಸ್ ಆ್ಯಕ್ಟ್) ಅಜಗಜಾಂತರ ಇದೆ. ಈ ಮಸೂದೆಯನ್ನು ಈ ವರ್ಷಾರಂಭದಲ್ಲಿ ಅಂಗೀಕರಿಸಲಾಗಿದೆ.

ಸಣ್ಣ, ಸಣ್ಣ ಉದ್ದಿಮೆದಾರರನ್ನು ಉತ್ತೇಜಿಸುವ ಉದ್ದೇಶ ಈ ಮಸೂದೆ ಒಳಗೊಂಡಿದೆ. ಉದ್ಯಮ ಸ್ಥಾಪನೆಗೆ ಅಗತ್ಯವಾದ ಬಂಡವಾಳವು ಸುಲಭವಾಗಿ ದೊರೆಯುವಂತೆ ಈ ಮಸೂದೆ ನೆರವಾಗುತ್ತಿದೆ. ಸಣ್ಣ, ಸಣ್ಣ ಉದ್ದಿಮೆ ಸಂಸ್ಥೆಗಳು ತಮ್ಮ ವಹಿವಾಟು ಆರಂಭ ಮತ್ತು ವಿಸ್ತರಣೆಗೆ ಅಗತ್ಯವಾದ ಸಂಪನ್ಮೂಲ ಸಂಗ್ರಹಕ್ಕೆ ಅಧಿಕ ಸಂಖ್ಯೆಯ ಸಾಮಾನ್ಯ ಹೂಡಿಕೆದಾರರಿಂದ ಬಂಡವಾಳ ಕ್ರೋಡಿಕರಿಸಲು ಮಸೂದೆ ನೆರವಾಗುತ್ತಿದೆ.

ಈ ಮಸೂದೆ ಅಂಗೀಕಾರವಾಗಲು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಖುದ್ದು ಆಸಕ್ತಿ ವಹಿಸಿದ್ದರು. ಈ ಮಸೂದೆ ಅಂಗೀಕಾರವು ಜಾಗತಿಕವಾಗಿ ಗಮನ ಸೆಳೆಯುವಂತಹ ಸುದ್ದಿಯಾಗಿರಲಿಲ್ಲ.

ಆದರೆ, ಅಮೆರಿಕದಲ್ಲಿ ಮಾತ್ರ ಇದೊಂದು ದೊಡ್ಡ  ವಿದ್ಯಮಾನವಾಗಿತ್ತು. ಅಮೆರಿಕ ಸರ್ಕಾರದ ಇಂತಹ ಸಕಾರಾತ್ಮಕ ಮತ್ತು ಪೂರಕ ಪ್ರಯತ್ನಗಳು ಉದ್ಯಮಶೀಲತೆ ವ್ಯವಸ್ಥೆ ರೂಪುಗೊಳ್ಳಲು ನೆರವಾಗಿವೆ. ಸಣ್ಣ - ಪುಟ್ಟ ಉದ್ದಿಮೆಗಳಿಗೆ ಅಗತ್ಯವಾಗಿದ್ದ ಬೆಂಬಲ ನೀಡುವಲ್ಲಿಯೂ ಇದರ ಕೊಡುಗೆ ಗಮನಾರ್ಹವಾಗಿದೆ.

ಅಮೆರಿಕ ಮತ್ತು ಭಾರತದಲ್ಲಿನ ಎರಡು ವಿಭಿನ್ನ ಉದ್ದೇಶದ ಈ ಮಸೂದೆಗಳು  ಎರಡು ಬೇರೆ, ಬೇರೆ ಸರ್ಕಾರಗಳು ಉದ್ದಿಮೆ ರಂಗವನ್ನು ಯಾವ ರೀತಿಯಲ್ಲಿ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತವೆ ಎನ್ನುವುದಕ್ಕೆ ತಾಜಾ ನಿದರ್ಶನವಾಗಿವೆ.

ಉದ್ಯಮಶೀಲತೆ ಬಗ್ಗೆಯಾಗಲಿ, ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಕುರಿತಾಗಲಿ ನಮ್ಮ ಪ್ರಧಾನಿ ಅಥವಾ ಹಣಕಾಸು ಸಚಿವರು ಉತ್ತೇಜನಕಾರಿ ಮಾತುಗಳನ್ನು ಆಡಿರುವುದು ನಿಮಗೇನಾದರೂ ನೆನಪಿದೆಯಾ.

ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಮತ್ತು ಚೇತರಿಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಣ್ಣ ಉದ್ದಿಮೆ ರಂಗದ ಬಗ್ಗೆ ನಮ್ಮ ಸರ್ಕಾರಿ ಪ್ರಭುತಿಗಳು ಉದ್ದಕ್ಕೂ ದಿವ್ಯ ನಿರ್ಲಕ್ಷ್ಯ ಧೋರಣೆ ತಳೆಯುತ್ತಲೇ ಬಂದಿದ್ದಾರೆ.

ಹತ್ತು ವರ್ಷಗಳ ಹಿಂದೆಯಾಗಲಿ ಮತ್ತು ಪ್ರಸ್ತುತ ಸಂದರ್ಭದಲ್ಲಾಗಲಿ ಹಲವಾರು ಹೊಸ ಹೊಸ ಉದ್ದಿಮೆಗಳೂ ನಮ್ಮಲ್ಲಿ ಕಾರ್ಯಾರಂಭ ಮಾಡಿವೆ. ಸಾವಿರಾರು ಯುವ ಉತ್ಸಾಹಿ ಉದ್ಯಮಿಗಳು ಹೊಸ ಉದ್ದಿಮೆ ಆರಂಭಿಸಿದ್ದಾರೆ. ಉದ್ದಿಮೆಯನ್ನೇ ತಮ್ಮ ವೃತ್ತಿ ಬದುಕಾಗಿ ಸ್ವೀಕರಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಸೇವಾ ರಂಗದಲ್ಲಿ ತಮ್ಮ ಹೊಸ ಉದ್ದಿಮೆಗಳಿಗೆ ಶ್ರೀಕಾರ ಹಾಕಿದ್ದಾರೆ.

ಇದಕ್ಕೆ ಪೂರಕವಾಗಿ ಹೊಸ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮತ್ತು ಸಮಾಜಕ್ಕೆ ನೆರವಾಗುವ ಉದ್ಯಮಶೀಲತೆ ಪ್ರವೃತ್ತಿ ಉತ್ತೇಜಿಸಲು ನಮ್ಮ ಸರ್ಕಾರ ಇನ್ನಷ್ಟು ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಮೆರಿಕದಿಂದ ಸಾಕಷ್ಟು ಪಾಠಗಳನ್ನೂ ಕಲಿಯಬೇಕಾಗಿದೆ.

(ನಿಮ್ಮ ಅನಿಸಿಕೆ ತಿಳಿಸಿ; editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT