ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರು ಬಿಗಿಹಿಡಿದು ಪರಮಾಣು ಕ್ಷಣಗಣನೆ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಪ್ರಧಾನಿಯವರ ವಿಮಾನ ಅಮೆರಿಕಕ್ಕೆಂದು ಅತ್ತ ಪಶ್ಚಿಮಕ್ಕೆ ಸಾಗುತ್ತಿರುವಾಗ ನಾವೀಗ ಇತ್ತ ಪೂರ್ವಕ್ಕೆ ಜಪಾನಿಗೆ ಪಯಣ ಬೆಳೆಸೋಣ. ಎರಡೂ ಪಯಣಗಳಿಗೆ ಪರಮಾಣುವೇ ಪ್ರಮುಖ ಕಾರಣ ಅನ್ನೋದು ಗಮನದಲ್ಲಿದ್ದರೆ ಸಾಕು. ಪ್ರಧಾನಿಯವರು ಅಮೆರಿಕದೊಂದಿಗಿನ ಪರಮಾಣು ಒಪ್ಪಂದಕ್ಕೆ ಅಂತಿಮ ಅಂಕಿತ ಹಾಕಿ ಹೊಸ ಚರಿತ್ರೆ ಬರೆಯುವ ಹುಮ್ಮಸ್ಸಿನಲ್ಲಿದ್ದಾರೆ. ಇತ್ತ ಜಪಾನದ ಫುಕುಶಿಮಾ ಪರಮಾಣು ದುರಂತ ದಿನದಿನಕ್ಕೆ ಹೊಸ ಸಮಸ್ಯೆಯನ್ನು ಸೃಷ್ಟಿ ಮಾಡುತ್ತಿದ್ದು ಅದನ್ನು ನಿಭಾಯಿಸುವ ಹೊಣೆಯನ್ನು ಕೇವಲ ಜಪಾನಿಗಷ್ಟೇ ಬಿಟ್ಟರೆ ಇಡೀ ಭೂಚರಿತ್ರೆಯನ್ನೇ ಅದು ಹೊಸಕಿ ಹಾಕೀತೆಂಬ ಭಯ ಅನೇಕರನ್ನು ಕಾಡತೊಡಗಿದೆ. ಪರಮಾಣು ಶಕ್ತಿ ಬೇಕೇ ಬೇಕು ಎನ್ನುವ ನಮ್ಮ ಪ್ರಧಾನಿ ಹಾಗೂ ಪರಮಾಣು ಸಹವಾಸ ಸಾಕೋ ಸಾಕೆಂಬಂತೆ ಹೆಣಗುತ್ತಿರುವ ಜಪಾನೀ ಪ್ರಧಾನಿ ಇವರಿಬ್ಬರ ತಾಂತ್ರಿಕ ಮತ್ತು ರಾಜತಾಂತ್ರಿಕ ಸರ್ಕಸ್‌ಗಳ ಅವಲೋಕನ ಇಲ್ಲಿದೆ.

ಎರಡು ವರ್ಷಗಳ ಹಿಂದೆ 11.3.11ರಂದು ಸಂಭವಿಸಿದ ಭೂಕಂಪನ ಮತ್ತು ಸುನಾಮಿಗೆ 18 ಸಾವಿರ ಜನ ಬಲಿಯಾಗಿ ಜಪಾನಿನ ಫುಕುಶಿಮಾ ದಾಯಿಚಿ ಪರಮಾಣು ಸ್ಥಾವರದ ವ್ಯವಸ್ಥೆಗಳೆಲ್ಲ ಕುಸಿದು ಬಿದ್ದು ಅಲ್ಲಿನ ನಾಲ್ಕೂ ರಿಯಾಕ್ಟರುಗಳು ನಿಯಂತ್ರಣ ತಪ್ಪಿ ಒಂದಂತೂ ಸ್ಫೋಟಕ ಸ್ಥಿತಿಗೆ ಬಂದು ಇಡೀ ಜಿಲ್ಲೆಯ 160 ಸಾವಿರ ಜನರು ತುರ್ತಾಗಿ ಎಲ್ಲೆಲ್ಲೋ ಎತ್ತಂಗಡಿಯಾದರು. ತಾಂತ್ರಿಕ ನೆರವಿಗೆ ಬಂದ ಅಮೆರಿಕದ ತಂತ್ರಜ್ಞರು ಅಲ್ಲಿನ ದೃಶ್ಯಗಳನ್ನು ನೋಡಿ ಎಂಟುನೂರು ಮೀಟರ್ ದೂರದಲ್ಲೇ ನಿಂತು ಕಂಗಾಲಾಗಿ ಮರಳಿ ಹೋದರು. ಜಪಾನೀಯರು ಹರಸಾಹಸ ಮಾಡಿ ಸರಣಿ ಸ್ಫೋಟ ಕೈಮೀರುವುದನ್ನು ತಪ್ಪಿಸಿದರು. ಸಾಕಷ್ಟು ದೊಡ್ಡ ಪ್ರಮಾಣದ ವಿಕಿರಣಯುಕ್ತ ನೀರು ಸಮುದ್ರಕ್ಕೆ ಸೇರಿತು. ಅದು ಶಾಂತ ಸಾಗರದ ಆಚೆ ದಡದಲ್ಲಿದ್ದ ಅಮೆರಿಕದ ಅನೇಕ ನಗರಗಳವಾಸಿಗಳ ಆತಂಕಕ್ಕೂ ಕಾರಣ ವಾಯಿತು. ಆಗಿನ ಪರಿಸ್ಥಿತಿ ಅದೆಷ್ಟು ಭೀಕರವಾ ಗಿತ್ತೆಂದರೆ ಜಪಾನ್ ಸರ್ಕಾರ ತನ್ನ ಎಲ್ಲ 50 ರಿಯಾಕ್ಟರುಗಳನ್ನು ಬಂದ್ ಮಾಡಿತು. ಎಲ್ಲವುಗಳ ಸುರಕ್ಷಾ ವ್ಯವಸ್ಥೆಯನ್ನು ಹೊಸದಾಗಿ ತಪಶೀಲು ಮಾಡಿದ ನಂತರವೇ ಮತ್ತೆ ಆರಂಭಿ ಸೋಣ ಎಂದು ಆಗ ಸರ್ಕಾರ  ಹೇಳಿತ್ತು.

ಎರಡು ವರ್ಷಗಳಾದರೂ ಮತ್ತೆ ಆರಂಭಿಸಲು ಸಾಧ್ಯ ವಿಲ್ಲದಷ್ಟು ಜನಾಕ್ರೋಶ ಇಡೀ ಜಪಾನಿಗೆ ವ್ಯಾಪಿಸಿತ್ತು. ಆದರೆ ಎರಡು ರಿಯಾಕ್ಟರುಗಳು ಆಗತಾನೇ ಓವರ್ಹಾವ್ಲಿಂಗ್ ಮಾಡಿಸಿಕೊಂಡು ಸುರಕ್ಷಾ ಸರ್ಟಿಫಿಕೇಟ್ ಪಡೆದಿದ್ದರಿಂದ ವಿದ್ಯುತ್ ಉತ್ಪಾದನೆ ಆರಂಭಿಸಿದ್ದವು. ಅವುಗಳಲ್ಲಿ ಒಂದು ಅನಿವಾರ್ಯವಾಗಿ ರಿಪೇರಿಗೆ ಬಂದಿದ್ದರಿಂದ ಮುಚ್ಚಿದ್ದೇ ತಡ, ಸುಸ್ಥಿತಿಯಲ್ಲಿದ್ದ ಆ ಇನ್ನೊಂದನ್ನೂ ಮುಚ್ಚುವಂತೆ ಸರ್ಕಾರ ಆದೇಶಿಸಿತು. ಹೀಗಾಗಿ ಜಪಾನ್ ತನ್ನೆಲ್ಲ ಪರಮಾಣು ಸ್ಥಾವರಗಳನ್ನು ಮುಚ್ಚಿರುವುದಾಗಿ ಹೇಳಿ ಹತ್ತು ದಿನಗಳ ಹಿಂದಷ್ಟೇ ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿ ಮಾಡಿತು.

ಈಗಿನ ಆತಂಕ ಏನೆಂದರೆ ಫುಕುಶಿಮಾದ ಸ್ಥಗಿತ ಸ್ಥಾವರಗಳು ಮತ್ತೆ ಸದ್ದು ಮಾಡತೊ ಡಗಿವೆ. ಸುನಾಮಿಯಲ್ಲಿ ನುಗ್ಗಿ ಬಂದ ನೀರು ಅಲ್ಲಿನ ಯಾಂತ್ರಿಕ ಸಲಕರಣೆಗಳ ಮಧ್ಯೆ ನುಗ್ಗಿ, ವಿಷಯುಕ್ತವಾಗಿ ಮಡುಗಟ್ಟಿತ್ತಲ್ಲ? ಅವನ್ನೆಲ್ಲ ಹುಷಾರಾಗಿ 620 ಬೃಹತ್ ಟ್ಯಾಂಕ್ ಗಳಲ್ಲಿ ತುಂಬಿ, ಆ ನೀರು ಮತ್ತೆ ಸಮುದ್ರಕ್ಕೆ ಸೇರದಂತೆ ಶೇಖರಿಸಿ ಇಡಲಾಗಿತ್ತು. ಅವುಗಳಲ್ಲಿ ಕೆಲವು ಟ್ಯಾಂಕ್ ಗಳು ಸೋರುತ್ತಿವೆ. ಅದು ದೊಡ್ಡ ಸುದ್ದಿಯಾಗಿ ಅಮೆರಿಕದ ಮಾಧ್ಯಮಗಳಲ್ಲಿ ಕೋಲಾಹಲ ಎಬ್ಬಿಸುತ್ತಿವೆ. ಅಂತರ್ಜಲದ ಮೂಲಕ ಪ್ರತಿ ದಿನವೂ 300 ಲೀಟರ್ ವಿಕಿರಣಯುಕ್ತ ನೀರು ಸಮುದ್ರಕ್ಕೆ ಹೋಗುತ್ತಿದೆ ಎಂದು ಫುಕುಶಿಮಾ ಸ್ಥಾವರಗಳ ನಿರ್ವಹಣೆ ಮಾಡುತ್ತಿದ್ದ ಟೆಪ್ಕೊ ಕಂಪೆನಿಯೇ ಹೇಳಿದೆ. ಅಂತರ್ಜಲವಾಗಿ ವಿಷದ್ರವ್ಯಗಳು ಸಮುದ್ರ ಸೇರುವುದನ್ನು ತಪ್ಪಿಸಲೆಂದು 'ಬರ್ಫದ ಭಿತ್ತಿ' ನಿರ್ಮಿಸಲು ಸಿದ್ಧತೆ ನಡೆದಿದೆ. ಅಂದರೆ, ಕರಾವಳಿಗುಂಟ ಲೋಹದ ಪೈಪ್‌ ಗಳನ್ನು ಸಾಲಾಗಿ ನಿಲ್ಲಿಸಿ, ಅದರಲ್ಲಿ ಹೆಪ್ಪುದ್ರವವನ್ನು ಸುರಿಯಲಾಗುತ್ತದೆ. ವಿಕಿರಣದ್ರವ್ಯ ದಾಟದಂಥ ಆ ತಡೆಗೋಡೆಗೆ 47 ಕೋಟಿ ಡಾಲರ್ ಸುರಿಯಲು ಜಪಾನ್ ಸಿದ್ಧವಾಗಿದೆ.

ಅದಕ್ಕಿಂತ ದೊಡ್ಡ ಸಂಗತಿ ಇನ್ನೊಂದಿದೆ: ಫುಕುಶಿಮಾ ಸುತ್ತಲ  ಸ್ಥಳವನ್ನೆಲ್ಲ ಶುಚಿ ಮಾಡಿ, ವಲಸೆ ಹೋಗಿದ್ದ ಲಕ್ಷಾಂತರ ಜನರನ್ನು ಮರಳಿ ತಮ್ಮೂರಿಗೆ ಕರೆಸಬೇಕಾಗಿದೆ. ಸಮಸ್ಯೆ ಏನೆಂದರೆ ಫುಕುಶಿಮಾದ ಸುತ್ತ ವಿಕಿರಣ ಮೇಘ ಏಕರೂಪವಾಗಿ ಹರಡಿರಲಿಲ್ಲ. ಕೆಲವು ದಿಕ್ಕಿನಲ್ಲಿ ಜಾಸ್ತಿ ವಿಕಿರಣ ವಿಸ್ತರಣೆ ಆದಲ್ಲೆಲ್ಲ ಜನರು ತಾವಾಗಿ ಮನೆಮಾರು ಬಿಟ್ಟು ಹೋಗಿದ್ದಾರೆ. ಅವರಿಗೆಲ್ಲ ಬದಲೀ ಉದ್ಯೋಗ, ಜೀವನಾಂಶ ಅದೂ ಇದೂ ವ್ಯವಸ್ಥೆ ಮಾಡಿ ಸರ್ಕಾರ  ಹೈರಾಣಾಗಿದೆ.

ಶುಚಿ ಕೆಲಸವೇನು ಸುಲಭವೆ? ವರ್ಷಕ್ಕೆ 20 ಮಿಲಿ ಸಿವರ್ಟ್ ಗಿಂತ ಹೆಚ್ಚಿನ ವಿಕಿರಣ ಇದ್ದಲ್ಲೆಲ್ಲ ಇಂಚಿಂಚೂ ತೊಳೆಯಬೇಕು (ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ ವರ್ಷಕ್ಕೆ 1 ಮಿಲಿ ಸಿವರ್ಟ್  ಗಿಂತ ಹೆಚ್ಚಿನ ವಿಕಿರಣ ಇರಕೂಡದು). ಕೆಲವು ದಿಕ್ಕಿನಲ್ಲಿ 40 ಕಿ.ಮೀ. ದೂರದಲ್ಲಿ ಈಗಲೂ 120 ಮಿ.ಸಿ.ಗಿಂತ ಹೆಚ್ಚು ವಿಕಿರಣ ಇದೆ. ಅಡಿಯಿಂದ ಮುಡಿಯವರೆಗೆ ಮುಖವಾಡ ಧರಿಸಿದ ಸಿಬ್ಬಂದಿ ಪ್ರತಿ ಮನೆಗೂ, ಪ್ರತಿ ಹೊಲಕ್ಕೂ ಹೊಕ್ಕು   ಕೆಲಸ ಮಾಡಬೇಕು. ಹೊಲದ ಐದು ಸೆಂಟಿಮೀಟರ್ ಮಣ್ಣನ್ನು ಕೆರೆಸಿ ತೆಗೆದು ದೂರದಲ್ಲಿ ರಾಶಿಹಾಕಿ ನೀಲಿ ಟಾ ರ್ಪಾಲಿನ್ ಮುಚ್ಚಿ ‘ಈ ಸ್ಥಳ ಈಗ ಸುರಕ್ಷಿತ’ ಎಂಬ ಫಲಕ ಹಾಕಿ ಆಚೆ ಹೋದ ಮರುವಾರವೇ ಮಳೆ ಬಂದು ಪಕ್ಕದ ಗುಡ್ಡಬೆಟ್ಟಗಳಿಂದ ಇನ್ನಷ್ಟು ವಿಕಿರಣದ್ರವ್ಯ ಹರಿದು ಬರುತ್ತದೆ.

ಮಿನಾಮಿಸೊಮಾ ಪಟ್ಟಣದ 70 ಸಾವಿರ ಜನರಲ್ಲಿ ಮುಕ್ಕಾಲುಪಾಲು ಜನರು ಮನೆಮಾರು ತೊರೆದು ಹೋಗಿದ್ದಾರೆ. ಅದೊಂದೇ ಊರಿನಲ್ಲಿ 650 ಜನರನ್ನು ವಿಕಿರಣ ಗುಡಿಸಲೆಂದೇ ನೇಮಕ ಮಾಡಲಾಗಿದೆ (ಇವೆಲ್ಲ ‘ಐರಿಶ್ ಟೈಮ್ಸ್’ ಪತ್ರಿಕೆಯ ಮೊನ್ನೆಯ, ಅಂದರೆ ಸೆಪ್ಟೆಂಬರ್ 24ರ ವರದಿಯ ಸಾರಾಂಶ). ಇಂಥ ಶುಚಿ  ಕೆಲಸದ ವೆಚ್ಚವೇ 50 ಶತಕೋಟಿ ಡಾಲರ್ ಆಗುತ್ತದೆಂದೂ ಒಟ್ಟೂ ವೆಚ್ಚ 600 ಶತಕೋಟಿ ಮೀರಲಿದೆ ಎಂದೂ ಟೋಕಿಯೋದ ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ.

2020ರ ಒಲಿಂಪಿಕ್ ಕ್ರೀಡೆಯನ್ನು ತಾನೇ ಆಯೋಜಿಸುತ್ತೇನೆಂದು ಹೇಳಿರುವ ಜಪಾನ್ ಆ ವೇಳೆಗೆ ಎಲ್ಲವೂ ಸುರಕ್ಷಿತ ಆಗಲಿದೆ ಎಂದು ಜಾಗತಿಕವಾಗಿ ಘೋಷಿಸಬೇಕಿದೆ. ಎರಡು ವಾರಗಳ ಹಿಂದೆ ಕೊನೆಯ ರಿಯಾಕ್ಟರನ್ನೂ ಸ್ಥಗಿತಗೊಳಿಸಿ ಒಲಿಂಪಿಕ್ಸ್ ಸಮಿತಿಯ ಮನವೊಲಿಸಲೆಂದೇ ಅರ್ಜೆಂಟೈನಾಕ್ಕೆ ಜಪಾನೀ ಪ್ರಧಾನಿ ಅಬೇ ಧಾವಿಸಿದ್ದರು.

ಈ ಮಧ್ಯೆ ಜನಸಾಮಾನ್ಯರು ಮನೆ ಮನೆಗಳಲ್ಲಿ ಸೌರಶಕ್ತಿ, ಗಾಳಿಶಕ್ತಿ ಮತ್ತು ಇಂಧನಕೋಶಗಳನ್ನು ಬಳಸುತ್ತ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಹೊಸ ಹೊಸ ಸುರಕ್ಷಿತ ತಂತ್ರಜ್ಞಾನದ ಸಂಶೋಧನೆಗೆ ತ್ವರಿತ ಆದ್ಯತೆ ಸಿಕ್ಕಿದೆ. ಪರಮಾಣು ಶಕ್ತಿ ಇಲ್ಲದೆ ಬದುಕಲು ಕಲಿತುಬಿಟ್ಟಾರೆಂಬ ಆತಂಕ ಈ ಐವತ್ತು ಸ್ಥಾವರಗಳ ಮುಖ್ಯಸ್ಥರಿಗೆ ತಲೆದೋರಿದೆ. ಬಲುಬೇಗ ರಿಯಾಕ್ಟರುಗಳನ್ನು ಚಾಲೂ ಮಾಡುವಂತೆ  ಪ್ರಧಾನಿಯ ಮೇಲೆ ಒತ್ತಡ ಹೇರುತ್ತಿದ್ದಾರೆ.

ದುರಂತ ನಡೆಯುತ್ತಿದ್ದಾಗ ಜೀವದ ಹಂಗಿಲ್ಲವೆಂಬಂತೆ ಹೋರಾಡಿ ಹೀರೊ ಎನಿಸಿದ ಸರ್ವೋಚ್ಚ ಎಂಜಿನಿಯರ್ ಮಸಾವೊ ಯೊಶಿದಾ (58) ಎರಡು ತಿಂಗಳ ಹಿಂದಷ್ಟೆ ಅನ್ನನಾಳದ ಕ್ಯಾನ್ಸರಿನಿಂದ ಸತ್ತಿದ್ದಾರೆ. ಸುನಾಮಿ ಅಪ್ಪಳಿಸಿ ಆರೂ ರಿಯಾಕ್ಟರುಗಳ ತಂಪುನೀರಿನ ಕೊಳವೆಗಳು ಧ್ವಂಸವಾಗಿ (ಅವುಗಳಲ್ಲಿ ಎರಡು ರಿಯಾಕ್ಟರುಗಳು ಮೊದಲೇ ಕೆಲಸ ನಿಲ್ಲಿಸಿದ್ದವು) ಮೂರು ರಿಯಾಕ್ಟರುಗಳು ನಿಯಂತ್ರಣ ತಪ್ಪಿ ಪ್ರೆಶರ್ ಕುಕರ್ ಮಾದರಿಯಲ್ಲಿ ಕುದಿದು, ಅವುಗಳಲ್ಲಿನ ಯುರೇನಿಯಂ ಸರಳುಗಳು ಕರಗಿ, ಜಲಜನಕ ಹೊರಸೂಸಿ ಸ್ಫೋಟಿಸಿ ಸುತ್ತೆಲ್ಲ ವಿಕಿರಣ ಮೇಘ ಹೊರಸೂಸಿದಾಗಲೂ ಈ ನ್ಯೂಕ್ಲಿಯರ್ ಎಂಜಿನಿಯರ್ ಎದೆಗುಂದದೆ, ನೆಲಮಾಳಿಗೆಯ ಬಂಕರನ್ನೇ ತನ್ನ ಹೆಡ್ ಆಫೀಸ್ ಮಾಡಿಕೊಂಡು ಕೆಲಸಗಾರರಿಗೆ ಅಹರ್ನಿಶಿ ನಿರ್ದೆೇಶನ ಕೊಡುತ್ತಿದ್ದ ವಿಡಿಯೋ ಇಡೀ ದೇಶಕ್ಕೆ ಪ್ರಸಾರವಾಗಿತ್ತು.

ಕೆಲಸಗಾರರನ್ನು ಕೆಲವೆಡೆ ಅಟ್ಟುವುದು ಅಪಾಯವೆಂದು ಗೊತ್ತಿದ್ದೂ ಕಣ್ಣಂಚಿನಲ್ಲಿ ನೀರು ಸುರಿಸುತ್ತಲೇ ‘ದೇಶದ ರಕ್ಷಣೆಗಾಗಿ ನಾವಿದನ್ನು ಮಾಡಲೇಬೇಕು’ ಎಂದು ಹೇಳುತ್ತಲೇ ಆತ ನಿರ್ವಹಿಸಿದ್ದು ಅಮೋಘವಾಗಿತ್ತು. ಪರಮಾಣು ಕುಲುಮೆ ಇರುವ ಗರ್ಭಸ್ಥಳ ಕರಗಿ ಕುಸಿಯುತ್ತ ನೆಲ ನಡುಗಿದಾಗಲೂ ತಾನು ಮೊದಲು ಹೊರಕ್ಕೆ ಹೋಗಲೊಪ್ಪದೆ ಸಿಬ್ಬಂದಿಯನ್ನೆಲ್ಲ ಕಳಿಸಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿ, ನಂತರವೂ ಮುಂದೆ ಎಂಟು ತಿಂಗಳ ಕಾಲ ಅಲ್ಲಿನ ಕ್ಲೀನಪ್ ಕೆಲಸವನ್ನು ನಿರ್ದೇಶಿಸಿ ಕ್ಯಾನ್ಸರ್ ಗೆ ತುತ್ತಾಗಿದ್ದು ಇಡೀ ದೇಶವನ್ನೇ ಭಾವುಕಗೊಳಿಸಿತ್ತು. ವಿಕಿರಣದಿಂದ ಅಷ್ಟು ಬೇಗ ಕ್ಯಾನ್ಸರ್ ಬರಲು ಸಾಧ್ಯವಿಲ್ಲವೆಂದೂ ಬೇರೇನೋ ಕಾರಣ ಇದ್ದೀತೆಂದೂ ಪರಮಾಣು ವೈದ್ಯಾಧಿಕಾರಿಗಳು ಹೇಳಿದ್ದರೂ ಫುಕುಶಿಮಾ ಸ್ಥಾವರದ ದಫನ ಕಾರ್ಯದಲ್ಲಿ ತೊಡಗಿರುವ ಇತರ ಸಾವಿರಾರು ಸಿಬ್ಬಂದಿ ಮಾನಸಿಕವಾಗಿ ತತ್ತರಿಸಿದ್ದಾರೆ.

ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಏನೆಂದರೆ, ಫುಕುಶಿಮಾದ 4ನೇ ರಿಯಾಕ್ಟರಿನ ಅರೆಬರೆ ಉರಿದ ಯುರೇನಿಯಂ ಸರಳುಗಳು ಮತ್ತೆ ಬಿಸಿಯಾಗುತ್ತಿವೆ. ನೆಲಮಟ್ಟದಿಂದ 100 ಅಡಿ ಎತ್ತರದ ತೊಟ್ಟಿಯಲ್ಲಿ 1535 ಸರಳುಗಳನ್ನು ಮುಳುಗಿಸಿ ಇಡಲಾಗಿದೆ. ಅಲ್ಲಿಗೆ ತಂಪು ನೀರನ್ನು ನಿರಂತರ ಪಂಪ್ ಮಾಡುತ್ತಿರಬೇಕು. ಆದರೆ ಅದರಿಂದ ಉಗಿ ಹೊರಬರುವುದು ವರದಿಯಾಗಿದೆ. ಅಕಸ್ಮಾತ್ ಜ್ವಾಲೆ ಹೊಮ್ಮಿದರೆ, ಅಥವಾ ಇನ್ನೊಂದು ಭೂಕಂಪನ ಸಂಭವಿಸಿ ಆ ಸರಳುಗಳು ಪರಸ್ಪರ ಸ್ಪರ್ಶಿಸಿದರೆ ನಿಯಂತ್ರಣ ತಪ್ಪಿ ಅವೆಲ್ಲ ಉರಿಯುತ್ತವೆ. ಯಾರೂ ಸಮೀಪ ಹೋಗುವ ಪ್ರಶ್ನೆಯೂ ಇಲ್ಲ; ಸುತ್ತ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ನೆಲಮಟ್ಟದಲ್ಲಿ ತಂಪಾಗುತ್ತಿರುವ ಇತರ 6375 ಸರಳುಗಳನ್ನು ಕೂಡ ದೂರ ಸಾಗಿಸುವುದು ಅಸಾಧ್ಯವಾದೀತು. ಟೋಕಿಯೊ ನಗರವನ್ನೇ ಖಾಲಿ ಮಾಡಬೇಕಾದೀತು. ‘ಅಂಥ ಭಾನಗಡಿ ಏನಾದರೂ ಸಂಭವಿಸಿದರೆ ಹಿರೊಶಿಮಾಕ್ಕಿಂತ 15 ಸಾವಿರ ಪಟ್ಟು ಹೆಚ್ಚು ವಿಕಿರಣ ಸೂಸಿ ಇಡೀ ಜಗತ್ತೇ ಸಾವಿರಾರು ವರ್ಷಗಳ ಸಂಕಷ್ಟಕ್ಕೆ ಸಿಲುಕೀತು’ ಎಂದು ಜಪಾನಿನ ಹನ್ನೆರಡು ಸಂಸ್ಥೆಗಳು ಒಂದಾಗಿ ವಿಶ್ವಸಂಸ್ಥೆಗೆ ಸಹಾಯಕ್ಕಾಗಿ ಮನವಿ ಮಾಡಿವೆ. ನೂರಡಿ ಎತ್ತರದಲ್ಲಿ ತೀರ ಅಪಾಯಕಾರಿ ಸ್ಥಿತಿಯಲ್ಲಿರುವ ಸರಳುಗಳನ್ನು ‘ಹೇಗಾದರೂ ಈಗಲೇ ಸುರಕ್ಷಿತ ಹೊರಕ್ಕೆ ತೆಗೆಯಲು ಜಗತ್ತಿನ ಎಲ್ಲ ತಾಂತ್ರಿಕ ಶಕ್ತಿಗಳೂ ಒಂದಾಗಬೇಕು’ ಎಂಬ ಜಾಗತಿಕ ಮನವಿಗೆ ನಾನಾ ದೇಶಗಳ 13 ಸಾವಿರ ಜನರು ಸಹಿ ಹಾಕಿದ್ದಾರೆ.

ಈ ಹಂತದಲ್ಲಿ ಭಾರತದಲ್ಲಿ ಹೊಸ ಪರಮಾಣು ಕ್ರಾಂತಿಗೆ ಶ್ರೀಕಾರ ಹಾಕಬೇಕೆಂಬ ಕನಸಿನೊಂದಿಗೆ ಪ್ರಧಾನಿ ಡಾ. ಸಿಂಗ್ ನಾಳೆ ಒಬಾಮಾ ಜತೆ ಸಭೆ ನಡೆಸಲಿದ್ದಾರೆ. ಒಪ್ಪಂದಕ್ಕೆ ಅವರಿಬ್ಬರ ಸಹಿ ಬಿದ್ದರೆ ಒಂದರ ಹಿಂದೊಂದರಂತೆ 40 ಹೊಸ ವಿದೇಶೀ ಪರಮಾಣು ರಿಯಾಕ್ಟರ್ ಗಳು ನಮ್ಮಲ್ಲಿ ಸ್ಥಾಪಿತಗೊಳ್ಳಲು ರಹದಾರಿ ಸಿಕ್ಕಂತಾಗುತ್ತದೆ. ಅಕಸ್ಮಾತ್ ಯಾವುದಾದರೂ ಒಂದು ಸ್ಥಾವರ ದುರಂತಕ್ಕೀಡಾದರೆ ಪರಿಹಾರವನ್ನು ಯಾರು ಕೊಡಬೇಕು, ಸ್ಥಾವರದ ನಿರ್ವಹಣೆ ಮಾಡುವ ಭಾರತೀಯ ಎನ್ಪಿಸಿಎಲ್ ನಿಗಮವೇ ಕೊಡಬೇಕೊ ಅಥವಾ ರಿಯಾಕ್ಟರನ್ನು ನಮಗೆ ಮಾರಿದ ಅಮೆರಿಕದ ಕಂಪನಿ ಕೊಡಬೇಕೊ ಎಂಬ ಬಗ್ಗೆ ನಾಲ್ಕು ವರ್ಷಗಳ ಕಾಲ ಜಟಾಪಟಿ ನಡೆದಿತ್ತು. ದುರಂತ ಪರಿಹಾರಕ್ಕೆ ಬಾಧ್ಯಸ್ಥನಾಗಲು ಅಮೆರಿಕ ಒಪ್ಪುತ್ತಿಲ್ಲ. ಸುರಕ್ಷಿತ ಸ್ಥಾವರಗಳನ್ನೂ ಮುಚ್ಚಬೇಕಾಗಿ ಬಂದ ಜಪಾನೀ ಉದಾಹರಣೆ ಯಾರ ಗಮನಕ್ಕೂ ಬಂದಂತಿಲ್ಲ. ಹೇಗೋ ನಮ್ಮ ದೇಶದ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಒಪ್ಪಂದವಾಗಲಿದೆ ಎಂದು ಸಿಂಗ್ ಹೇಳಿದ್ದಾರೆ.

ಜಪಾನೀಯರಷ್ಟೇ ಅಲ್ಲ, ನಾವೂ ಉಸಿರು ಬಿಗಿಹಿಡಿದು ಮುಂದಿನ ಬೆಳವಣಿಗೆಯನ್ನು ನೋಡಬೇಕಾಗಿದೆ.

    -ನಿಮ್ಮ ಅನಿಸಿಕೆ ತಿಳಿಸಿeditpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT