ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತುವಾರಿ ಎಂದರೆ ಹೀಗಿರಬೇಕು...

Last Updated 3 ಜೂನ್ 2017, 19:30 IST
ಅಕ್ಷರ ಗಾತ್ರ

ಒಂದೊಂದು ಸಾರಿ ವಿಚಿತ್ರಗಳು ಘಟಿಸುತ್ತವೆ. ‘ಈ ಕಾಂಗ್ರೆಸ್ಸು ಮುದುಕರ ಪಕ್ಷ, ಮಕಾಡೆ ಮಲಗಿರುವ ಇದು ಯಾವಾಗ ಎದ್ದೇಳಬೇಕು, ಯಾವಾಗ ನಿರ್ಧಾರ ತೆಗೆದುಕೊಳ್ಳಬೇಕು’ ಎಂದೆಲ್ಲ ಜನರು ಗೇಲಿ ಮಾಡುತ್ತಿರುವಾಗಲೇ ಅದು ಅಚ್ಚರಿಗಳನ್ನು ಮಾಡುತ್ತದೆ. ಅಂಥ ಅಚ್ಚರಿಗಳು ಬಹಳ ಇರಲಿಕ್ಕಿಲ್ಲ. ಆದರೆ, ಒಂದು ಸಾರಿ ನೀವು ಗೋಡೆಗೆ ಒತ್ತಿಸಿಕೊಂಡಾಗ, ಇನ್ನೂ ಹಿಂದೆ ಹೋಗಲು ದಾರಿ ಇಲ್ಲ ಎನಿಸಿದಾಗ ಇಂಥ ಅಚ್ಚರಿಗಳು ಘಟಿಸುತ್ತವೆ. ಅಂಥ ಒಂದು ಅಚ್ಚರಿ ಕರ್ನಾಟಕದ ಉಸ್ತುವಾರಿ ಪ್ರಧಾನ  ಕಾರ್ಯದರ್ಶಿಯಾಗಿ ಕೇರಳದ ಸಂಸದ ಕೆ.ಸಿ.ವೇಣುಗೋಪಾಲ್‌ ಅವರನ್ನು ನೇಮಕ ಮಾಡಿದ್ದು.

ಕಾಂಗ್ರೆಸ್ಸಿಗೆ ಗೋಡೆಗೆ ಒತ್ತಿಸಿಕೊಂಡ ಅನುಭವ ಏಕೆ ಆಗುತ್ತಿದೆ ಎಂದರೆ ಇಡೀ ದಕ್ಷಿಣ ಭಾರತದಲ್ಲಿ ಇರುವ ತನ್ನ ಏಕೈಕ ಸರ್ಕಾರವನ್ನು ಅದು ಉಳಿಸಿಕೊಳ್ಳಬೇಕಾಗಿದೆ. ಎಲ್ಲಿಯೋ ಗುಟುಕು ಉಸಿರು ಹಿಡಿದುಕೊಂಡಂತೆ ಏದುಸಿರು ಬಿಡುತ್ತಿರುವ ಪಕ್ಷಕ್ಕೆ ಕರ್ನಾಟಕ ಪ್ರಾಣವಾಯು ಇದ್ದಂತೆ. ಇಡೀ ದೇಶದಲ್ಲಿ ಅದು ಅಧಿಕಾರದಲ್ಲಿ ಇರುವ ದೊಡ್ಡ ರಾಜ್ಯ ಇದು; ಮತ್ತೆ ಅಧಿಕಾರಕ್ಕೆ ಬರಲು ಅವಕಾಶ ಇರುವ ರಾಜ್ಯವೂ ಇದೇ.

ವೇಣುಗೋಪಾಲ್‌ ನೇಮಕವಾದುದು ಇದೇ ಏಪ್ರಿಲ್ 29ರಂದು. ಅವರ ಜೊತೆಗೆ ಇನ್ನೂ ಮೂವರು ಸಹಾಯಕ ಕಾರ್ಯದರ್ಶಿಗಳು ನೇಮಕ ಆಗಿದ್ದಾರೆ. ಇವರಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿಯವರು ಏನು ಹೇಳಿ ಕಳಿಸಿದರೋ ಗೊತ್ತಿಲ್ಲ. ವೇಣುಗೋಪಾಲ್‌ ಬೆಂಗಳೂರಿಗೆ ಬಂದು ಇಳಿದವರೇ ಕೆಲಸ ಶುರು ಮಾಡಿದರು.

ಕುಮಾರಕೃಪಾ ಅತಿಥಿ ಗೃಹಕ್ಕೆ ಬಂದು ತಂಗಿದ ಅವರು ದಿನಕ್ಕೆ 12 ಗಂಟೆ ಮೀರಿ ಕೆಲಸ ಮಾಡಿದರು. ಒಬ್ಬೊಬ್ಬರನ್ನೇ ಕರೆಸಿ ಮಾತನಾಡಿದರು. ತಮ್ಮ ಮಟ್ಟದಲ್ಲಿ ಭಿನ್ನಾಭಿಪ್ರಾಯ ಬಗೆಹರಿಸಬಹುದು ಎಂದು ಅನಿಸಿದರೆ ಕುಳಿತು ಸಂಧಾನ ಮಾಡಿದರು. ಸ್ವಲ್ಪ ಕಠಿಣ ಎಂದೆನಿಸಿದರೆ  ರಾಹುಲ್‌ ಗಾಂಧಿ ತಲೆಗೆ ಕಟ್ಟಿದರು. ಆದರೆ, ಹೀಗೆ ಪಕ್ಷದ ಎಲ್ಲರನ್ನು ಕರೆಸಿ ‘ನಿಮ್ಮ ಸುಖದುಃಖ ಏನು’ ಎಂದು ‘ಮಧ್ಯಪ್ರದೇಶದ ಮಹಾರಾಜ’ರು ಒಂದು ದಿನವೂ ಕೇಳಿರಲಿಲ್ಲ ಎಂಬುದು ಜಗಜ್ಜಾಹೀರು ಆಗಿ ಹೋಯಿತು.

ಹಿಂದೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿಗ್ವಿಜಯ್‌ ಸಿಂಗ್‌ ಅವರಿಗೆ ಪಕ್ಷದ ಕಾರ್ಯಕರ್ತರು ಅಭಿಮಾನದಿಂದ ‘ಮಧ್ಯಪ್ರದೇಶದ ಮಹಾರಾಜ’ರು ಎಂದು ಕರೆಯುತ್ತಿದ್ದರು. ಕೆಲವರು ಇದು ವ್ಯಂಗ್ಯದ ಮಾತು ಎಂದು ಅರ್ಥ ಮಾಡಿಕೊಂಡಿದ್ದರು! ಒಂದು ಸಂಗತಿ ನಿಜ: ದಿಗ್ವಿಜಯ್‌ ಸಿಂಗ್‌  ಅವರು ತಮ್ಮ  ಉಸ್ತುವಾರಿ ಅಧಿಕಾರದ ಮೂರು ವರ್ಷಗಳ ಅವಧಿಯಲ್ಲಿ ಮೂರು ಸಾರಿ ಮಾತ್ರ ಕೆಪಿಸಿಸಿ ಕಚೇರಿಗೆ ಬಂದಿದ್ದರು.

ಅದೂ ಪಕ್ಷದ ಕಾರ್ಯಕರ್ತರ ಜೊತೆಗೆ ಮಾತನಾಡಲು ಅಲ್ಲ. ಯಾವುದೋ ಕಾರ್ಯಕ್ರಮ ಇತ್ತು ಎಂದು, ಅದರಲ್ಲಿ ಭಾಗವಹಿಸಿದರು; ಹೋದರು. ಒಂದು ಸಾರಿ ಅವರನ್ನು ಭೇಟಿಯಾದ  ಕಾರ್ಯಕರ್ತರು ಇನ್ನೊಂದು ಸಾರಿ ಭೇಟಿ ಮಾಡಲು ಬಯಸುತ್ತಿರಲಿಲ್ಲ. ಮತ್ತೆ ಭೇಟಿ ಮಾಡಬಾರದು ಎಂದು ನಿರ್ಧರಿಸಿಯೇ ಅವರು ವಾಪಸು ಹೋಗುತ್ತಿದ್ದರು. ಅಲ್ಲಿ ಏನಾಗುತ್ತಿತ್ತು ಮತ್ತು ಅವರಿಗೆ ಎಂಥ ‘ಮರ್ಯಾದೆ’ ಸಿಗುತ್ತಿತ್ತು ಎಂದು ವೇಣುಗೋಪಾಲ್‌ ಅವರು ತಿಳಿದುಕೊಳ್ಳಲು ಅವಕಾಶ ಇದೆ!

ಹೈಕಮಾಂಡ್‌  ಪ್ರತಿನಿಧಿಗಳು ಎಂದರೆ ಪಕ್ಷದ ಕೇಂದ್ರ  ನಾಯಕರ ಹಾಗೂ ರಾಜ್ಯಗಳ ನಾಯಕರ ನಡುವೆ ಒಂದು ಸೇತುವೆ ಇದ್ದಂತೆ. ಬರೀ ರಾಜ್ಯ ನಾಯಕರು ಮಾತ್ರವಲ್ಲ ರಾಜ್ಯ ಮಟ್ಟದ ಎಲ್ಲ ಹಂತಗಳ ಕಾರ್ಯಕರ್ತರ ಅಳಲನ್ನೂ ಅವರು ಕೇಳಬೇಕು. ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ನ್ಯಾಯ ಒದಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಉಸ್ತುವಾರಿ ಎಂದರೆ ಅನೇಕ ಸಾರಿ ಉಸಾಬರಿಯೇ ಇರುತ್ತದೆ. ಉಸಾಬರಿ ನಿರ್ವಹಿಸುವುದರಲ್ಲಿಯೂ ಒಂದು ರೀತಿ ಸಂತೋಷ ಇರುತ್ತದೆ. ಉಸಾಬರಿ ಎಂದರೆ ಹೊತ್ತುಕೊಂಡು ಮಾಡುವುದು ಎಂದು ಅರ್ಥ.

ದಿಗ್ವಿಜಯ್ ಅವರು ಉಸ್ತುವಾರಿ ಆಗಿದ್ದಾಗ ಹೀಗೆ ಎಲ್ಲರನ್ನೂ ಕರೆದು  ಸುಕ್ಕುಗಟ್ಟಿದ ಸಂಬಂಧಗಳನ್ನು ಇಸ್ತ್ರಿ ಮಾಡಿ ಸರಿಪಡಿಸಲು ಪ್ರಯತ್ನ ಮಾಡಲಿಲ್ಲ ಎಂಬ ದೂರು  ಬೀದರ್‌ನಿಂದ ಚಾಮರಾಜನಗರದ ವರೆಗೆ ತೀವ್ರವಾಗಿತ್ತು. ರಾಜ್ಯಕ್ಕೆ ಬಂದಾಗ ಅವರಿಗೆ ವೇಳೆಯೇ ಇರುತ್ತಿರಲಿಲ್ಲ. ಕೊಡಗಿನ ಕಾಡಿನಲ್ಲಿ ಅವರು ಹೆಚ್ಚು ಸಮಯ ಕಳೆಯುತ್ತಿದ್ದರು.

ಮೊನ್ನೆ ಮೊನ್ನೆ ಗೋವಾ ರಾಜ್ಯದ ಸರ್ಕಾರ ರಚನೆ ಆಗುವ ಸಮಯದಲ್ಲಿಯೂ ಅದೇ ರಾಜ್ಯದಲ್ಲಿನ ಪಂಚತಾರಾ ಹೋಟೆಲ್‌ವೊಂದರಲ್ಲಿ ಅವರು ತಂಗಿದ್ದರು. ‘ಅವರು ಮೈ ಮರೆತುದರಿಂದ  ನಾವು ಸರ್ಕಾರ ರಚಿಸಲು ಸಾಧ್ಯವಾಯಿತು’ ಎಂದು ಬಿಜೆಪಿಯವರು ಛೇಡಿಸಿದರು. ಬಿಜೆಪಿಯವರ ಮಾತು ನಿಜವೇ ಇರಬೇಕು. ಏಕೆಂದರೆ ಸರ್ಕಾರವನ್ನಂತೂ ಬಿಜೆಪಿಯವರೇ ರಚಿಸಿದರು.

ಇದು  ಬರೀ ಸಿಂಗ್‌ ಅವರಿಗೆ ಮಾತ್ರ ಅನ್ವಯಿಸುವ ಮಾತಲ್ಲ. ಹೈಕಮಾಂಡ್‌ನ ಪ್ರತಿನಿಧಿಯಾಗಿ ಬರುವ ಎಲ್ಲ ಉಸ್ತುವಾರಿಗಳು ಸುಖಪುರುಷರು, ಲೋಲುಪರು. ಅವರ ಸರ್ವ ಸುಖಗಳನ್ನು ರಾಜ್ಯದಲ್ಲಿ ಅಧಿಕಾರ ಮಾಡುವವರು ಪೂರೈಸಬೇಕಾಗುತ್ತದೆ. ಏಕೆಂದರೆ ಇವರ ಬಗೆಗೆ ಅವರು ದೆಹಲಿಗೆ ಹೋಗಿ ಇಲ್ಲಸಲ್ಲದ್ದನ್ನು ಹೇಳಿ ಹೈಕಮಾಂಡಿನ ಕಿವಿಯೂದಿದರೆ ಏನು ಮಾಡುವುದು?

ಒಂದು ಕಾಲವಿತ್ತು, ಒಂದು ಕ್ಷಣದಲ್ಲಿ ಮುಖ್ಯಮಂತ್ರಿಯನ್ನು ಮನೆಗೆ ಕಳಿಸುವಷ್ಟು ಹೈಕಮಾಂಡು ಬಲಿಷ್ಠವಾಗಿತ್ತು. ಉಸ್ತುವಾರಿಕೆ ಎನ್ನುವುದು ಒಂದು ರೀತಿ ರಾಜಕೀಯ ಪಕ್ಷಗಳಲ್ಲಿ ಮುಂದುವರಿದಿರುವ ಅದೇ ಪಾಳೇಗಾರಿಕೆ ವ್ಯವಸ್ಥೆ. ಕೇಂದ್ರ ಮಟ್ಟದಲ್ಲಿನ ‘ಮಹಾರಾಜ’ರ ಪ್ರತಿನಿಧಿಯಾಗಿ ಉಸ್ತುವಾರಿಗಳು ಕೆಲಸ ಮಾಡುತ್ತಾರೆ.

ರಾಜ್ಯದಲ್ಲಿ ಆಡಳಿತ ಮಾಡುವ ‘ಸಾಮಂತ’ರು ಈ ಪ್ರತಿನಿಧಿಗೆ  ಕಪ್ಪ ಕಾಣಿಕೆ ಕೊಡುತ್ತ ಹೈಕಮಾಂಡ್‌ನ ಕಾಕದೃಷ್ಟಿ ತಮ್ಮ ಮೇಲೆ ಬೀಳದಿರಲಿ ಎಂದು ಪ್ರಯತ್ನಿಸಬೇಕಾಗುತ್ತದೆ; ಪ್ರಾರ್ಥಿಸಬೇಕಾಗುತ್ತದೆ. ಮತ್ತು, ಹೈಕಮಾಂಡಿನಲ್ಲಿ ಇರುವವರಿಗೆ ಸಮಾಧಾನ ಮಾಡಲು ರಾಜ್ಯದಿಂದ ಸೂಟ್‌ಕೇಸ್‌ಗಳನ್ನು ಕಳುಹಿಸಿಕೊಡಲೂ ಬೇಕಾಗುತ್ತದೆ.

ಸೂಟ್‌ಕೇಸ್‌ಗಳಲ್ಲಿ ಏನು ಇಟ್ಟು ಕಳಿಸುತ್ತಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಹಲವು ವರ್ಷಗಳ ಹಿಂದೆ ಇದೇ ರೀತಿ ರಾಜ್ಯದ ಉಸ್ತುವಾರಿ ಆಗಿದ್ದ ಒಬ್ಬ ಪ್ರಧಾನ ಕಾರ್ಯದರ್ಶಿಯ ಸೂಟ್‌ಕೇಸಿನಿಂದ ನೋಟುಗಳು ಇಣುಕುತ್ತಿದ್ದ ವ್ಯಂಗ್ಯಚಿತ್ರವನ್ನು ನೋಡಿದ ನೆನಪು ನನಗೆ ಇದೆ. ಅವರು ಯಾವ ಪಕ್ಷದವರು ಎಂಬುದು ಇಲ್ಲಿ ಅಪ್ರಸ್ತುತ.

ಇಂಥ ಉದಾಹರಣೆಗಳೆಲ್ಲ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳ ಬಗೆಗೆ ಒಳ್ಳೆಯ ಅಭಿಪ್ರಾಯವನ್ನೇನೂ ಮೂಡಿಸುವುದಿಲ್ಲ. ಆದರೆ,  ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯಲ್ಲಿ ಇದನ್ನು ನಾವು ಒಪ್ಪಿಕೊಂಡು ಬಂದಿದ್ದೇವೆ. ಇಂಥ ಪ್ರಧಾನ ಕಾರ್ಯದರ್ಶಿಗಳು ಮಾಜಿ ಮುಖ್ಯಮಂತ್ರಿಗಳು ಅಥವಾ ಸಂಸದರು ಆಗಿದ್ದರೆ ಅವರನ್ನು ರಾಜ್ಯ ಸರ್ಕಾರದ ಅತಿಥಿಯಾಗಿ ಪರಿಗಣಿಸಲು ರೂಢಿಯಲ್ಲಿ ಅವಕಾಶ ಇದೆ; ಅಧಿಕೃತವಾಗಿ ಇಲ್ಲ.

ಸರ್ಕಾರದ ಅತಿಥಿಗಳಿಗೆ ಸಾಮಾನ್ಯವಾಗಿ ಸರ್ಕಾರದ ಕುಮಾರಕೃಪಾ ಅತಿಥಿಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುತ್ತಾರೆ. ಆದರೆ, ಸಂಜೆಯಾದ ಮೇಲೆ ಹತ್ತಿರದ ಅಶೋಕ, ವಿಂಡ್ಸರ್‌ ಶೆರಟನ್‌, ವೆಸ್ಟ್‌ ಎಂಡ್‌ ಮುಂತಾದ ಪಂಚತಾರಾ ಹೋಟೆಲ್‌ಗಳಿಗೆ ಅವರ ವಾಸ್ತವ್ಯ ಬದಲಾಗುತ್ತದೆ. ಇದನ್ನೆಲ್ಲ ಅವರ ಸಂಪ್ರೀತಾರ್ಥ ಮಾಡಲಾಗುತ್ತದೆ. ಇದರಲ್ಲಿ ಅಂಥ ವಿಶೇಷವೇನೂ ಇಲ್ಲ ಎಂದು ಸರ್ಕಾರದ ಮತ್ತು ಪಕ್ಷದ ವಲಯದಲ್ಲಿ ಒಪ್ಪಿಕೊಂಡಿರಲಾಗುತ್ತದೆ. ಅಲ್ಲಿನ ಖರ್ಚು ವೆಚ್ಚಗಳ ಬಿಲ್‌ ಅನ್ನು ಪಾವತಿ ಮಾಡಲು ಯಾರೋ ಒಬ್ಬರು ತುದಿಗಾಲ ಮೇಲೆ ನಿಂತಿರುತ್ತಾರೆ.

ಈ ಸಂಪ್ರದಾಯವನ್ನು ವೇಣುಗೋಪಾಲ್‌ ಮೊದಲ ಬಾರಿಗೆ ಮುರಿದರು. ತಾವು ಕುಮಾರಕೃಪಾ ಅತಿಥಿಗೃಹದಲ್ಲಿಯೇ ತಂಗುವುದಾಗಿಯೂ ತಮಗೆ  ಬೇರೆ ಪಂಚತಾರಾ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಬಾರದು ಎಂದೂ ಅವರು ತಾಕೀತು ಮಾಡಿದರು. ನೈತಿಕವಾಗಿ ಒಬ್ಬ  ಮನುಷ್ಯ ಇತರರ ಮೇಲೆ ಹಿಡಿತ ಸಾಧಿಸುವುದು ಇಂಥ ನಡೆಗಳಿಂದ. ಅವರು ಊಟ ತಿಂಡಿ ಮಾಡಲೂ ಬಹಳ ದೂರ ಹೋಗಲಿಲ್ಲ.

ಕುಮಾರಕೃಪಾ ಅತಿಥಿ ಗೃಹದ ಸುತ್ತಮುತ್ತಲಿನ ಹೋಟೆಲ್‌ಗಳಿಂದಲೇ ಊಟ ತರಿಸಿಕೊಂಡರು. ಜನಾರ್ದನ ಹೋಟೆಲ್‌ ವರೆಗೆ  ಹೋಗಿ ದೋಸೆ ತಿಂದು ಬಂದರು. ಮತ್ತೆ ಬಂದು ಕುಳಿತುಕೊಂಡು ಪಕ್ಷದ  ಕಾರ್ಯಕರ್ತರ, ಶಾಸಕರ ದುಃಖ ದುಮ್ಮಾನ ಕೇಳಿದರು. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂದು ಯಾರಿಗೆಲ್ಲ ತಿಳಿಸಿಬೇಕಿತ್ತೋ ಅವರಿಗೆಲ್ಲ ತಿಳಿಸಿದರು.

ತಮ್ಮನ್ನು ಯಾರು ಬಂದು ಭೇಟಿ ಮಾಡಬೇಕಿತ್ತೋ ಅವರೇ ಬಂದು ಭೇಟಿ ಮಾಡುವ ವರೆಗೆ, ಅವರು ಎಷ್ಟೇ ದೊಡ್ಡವರು ಇದ್ದರೂ, ಅವರನ್ನು ಭೇಟಿ ಮಾಡಲು ಹೋಗಲಿಲ್ಲ. ಅವರು ಬಂದು ಭೇಟಿ ಮಾಡಿದ ನಂತರವೇ ಅವರು ಕರೆದಲ್ಲಿಗೆ ಇವರು ಹೋದರು. ಹಾಗೆಂದು ಮನಸ್ಸಿನಲ್ಲಿ ಕಹಿ ಉಳಿಸಿಕೊಳ್ಳಲಿಲ್ಲ. ಹೈಕಮಾಂಡಿಗೆ ವರದಿ ಕೊಡುವಾಗ ನ್ಯಾಯವಾಗಿಯೇ ವರದಿ ಕೊಟ್ಟರು. ಅವರಿಗೆ ಏನು ಸಲ್ಲಬೇಕೋ ಆ ಅಧಿಕಾರ ಸಿಗುವಂತೆ ನೋಡಿಕೊಂಡರು.

ಅವರ ವರದಿಯ ಅನುಸಾರವೇ ಅಥವಾ ಅದನ್ನು ಆಧಾರವಾಗಿ ಇಟ್ಟುಕೊಂಡೇ ಈಗ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಮುಂದಿನ ಚುನಾವಣೆ ಎದುರಿಸಲು ಸೇನಾಪಡೆಯನ್ನು ಸಜ್ಜುಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೇನಾಪತಿ ಪಟ್ಟ ಕಟ್ಟಲಾಗಿದೆ. ಅದು ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ಗೆಲುವು ಒಂದು ಬಣ್ಣಿಸಲು ಅವಕಾಶ ಇದೆ.

ಆದರೆ, ಸಿದ್ದರಾಮಯ್ಯ ಅವರಿಗೆ ನೇತೃತ್ವ ಕೊಡದೇ ಪಕ್ಷಕ್ಕೆ ಬೇರೆ ದಾರಿ ಇರಲಿಲ್ಲ. ಅವರು ಹಾಲಿ ಮುಖ್ಯಮಂತ್ರಿ. ಅಂದರೆ ಅವರ ಕೈಯಲ್ಲಿ ಅಸೀಮವಾದ ಅಧಿಕಾರ ಇದೆ. ಚುನಾವಣೆ ಬಂದಾಗ ಹಣ ಕ್ರೋಡೀಕರಿಸಬೇಕಾದವರು ಮತ್ತು ಅದನ್ನು ಕಣದಲ್ಲಿ ಇಳಿದ ಅಭ್ಯರ್ಥಿಗಳಿಗೆ ವಿತರಿಸಬೇಕಾದವರು ಮುಖ್ಯಮಂತ್ರಿ ಎಂಬುದು ಕೂಡ ಹಾಲಿ ಚುನಾವಣೆ ವ್ಯವಸ್ಥೆಯಲ್ಲಿ ಅಪರಿಚಿತವಾದ ಸಂಗತಿಯಲ್ಲ. ಅಭ್ಯರ್ಥಿಗಳಿಗೆ ಹಣಕಾಸಿನ ಸಹಾಯ ಒದಗಿಸುವ ದೃಷ್ಟಿಯಿಂದ ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಹೆಸರು ಇದೆ.

ಚುನಾವಣೆ ಸಮಯದಲ್ಲಿ ತಮಗೆ ಬಂದ ಹಣದ  ಸಹಾಯವನ್ನು ಹಾಗೆಯೇ ಅಭ್ಯರ್ಥಿಗಳಿಗೆ ವರ್ಗಾಯಿಸುತ್ತಾರೆ ಎಂದೂ ಅಭ್ಯರ್ಥಿಗಳು ಅವರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ಹಾಗಿರುವಾಗ ಅವರಿಗೆ ನೇತೃತ್ವ ಕೊಡದೇ ಇದ್ದರೆ ಅವರು ಚುನಾವಣೆಯಲ್ಲಿ ಆಸಕ್ತಿ ವಹಿಸಲು ಹೇಗೆ ಸಾಧ್ಯವಿತ್ತು? ಎಲ್ಲರ ಮುಂದೆಯೂ ಒಂದು ಆಸೆಯ ಗಜ್ಜರಿಯೋ, ಸೌತೆಕಾಯಿಯೋ ಇರಲೇಬೇಕು! ವೇಣುಗೋಪಾಲ್‌ ಆ ದೃಷ್ಟಿಯಿಂದ ಚಾಣಾಕ್ಷತನದಿಂದ ನಡೆದುಕೊಂಡಿದ್ದಾರೆ. ಅವರ ಸಲಹೆಯನ್ನು ಪಕ್ಷದ ಹೈಕಮಾಂಡ್‌ ಒಪ್ಪಿಕೊಂಡಿದೆ.

ಸಿದ್ದರಾಮಯ್ಯ ಅವರಿಗೆ ನಾಯಕತ್ವವನ್ನು ವಹಿಸಿಯೂ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಇರುವಂತೆ ವೇಣುಗೋಪಾಲ್‌ ನೋಡಿಕೊಂಡಿದ್ದಾರೆ. ಎಲ್ಲ ಸಮುದಾಯಗಳಿಗೆ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಜಾತಿ ಎನ್ನುವುದು ಸದ್ಯದ ರಾಜಕೀಯದಲ್ಲಿ ಒಂದು ವಾಸ್ತವ ಎಂದು ಅವರು ಮತ್ತೆ ಸಾಬೀತು ಮಾಡಿದ್ದಾರೆ.

ವೇಣುಗೋಪಾಲ್‌ ಅವರು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಎಂಬುದು ಕಾಕತಾಳೀಯ ಇರಲಾರದು. ಸದ್ಯದ ಮಟ್ಟಿಗೆ, ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣು ಇಟ್ಟಿದ್ದ ಶಿವಕುಮಾರ್‌ ಒಬ್ಬರನ್ನು ಹೊರತುಪಡಿಸಿ ಎಲ್ಲರನ್ನು ಒಳಗೊಳ್ಳುವ ಕೆಲಸವನ್ನು ಪಕ್ಷ ಮಾಡಿದೆ.

ಪಕ್ಷದ ಅಧ್ಯಕ್ಷರಾಗಿ ಮತ್ತೆ ಮುಂದುವರಿದಿರುವ ಜಿ.ಪರಮೇಶ್ವರ್‌ ಅವರು ತಕ್ಷಣವೇ ಗೃಹ ಸಚಿವ ಹುದ್ದೆಗೆ ರಾಜೀನಾಮೆ ಕೊಡುವಂತೆ ಮಾಡಿರುವುದೂ ಒಂದು ಒಳ್ಳೆಯ ಬೆಳವಣಿಗೆ. ಗೃಹ ಸಚಿವ ಹುದ್ದೆ ಸಾಮಾನ್ಯವಾದುದು ಅಲ್ಲ. ಹಾದಿ ಬೀದಿಯಲ್ಲಿ ಸಲಾಮು ಹೊಡೆಯುವವರು ಇರುವ ಇಂಥ ಖಾತೆಯನ್ನು ಹೊಂದಿದ್ದರೆ ಪಕ್ಷದ ಕೆಲಸದ ಕಡೆಗೆ ಗಮನ ಕೊಡಲು ಯಾರಿಗೆ ಆಸಕ್ತಿ ಇರುತ್ತದೆ?

ಇನ್ನುಳಿದಿರುವ ಹತ್ತು ಹನ್ನೊಂದು ತಿಂಗಳ ಅವಧಿಯಲ್ಲಿ ಪಕ್ಷದ ಕೆಲಸದ ಕಡೆಗೇ ಪರಮೇಶ್ವರ್‌ ಗಮನ ಹೆಚ್ಚು ಇರಲಿ ಎಂದೇ ಅವರಿಗೆ ತಕ್ಷಣ ಸಚಿವ ಹುದ್ದೆಗೆ ರಾಜೀನಾಮೆ ನೀಡಲು ಹೈಕಮಾಂಡ್‌ ಸೂಚಿಸಿತು. ಪರಮೇಶ್ವರ್‌ ಅವರೂ ತಕ್ಷಣ ರಾಜೀನಾಮೆ ನೀಡಿ ತಾವು ಅಧಿಕಾರಕ್ಕೆ ಅಂಟಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಕೊಟ್ಟಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದಿಂದ ಆರು ಸಾರಿ ಗೆದ್ದಿರುವ, ಅವಕಾಶ ಸಿಕ್ಕಾಗಲೆಲ್ಲ ತಾವೂ ಪಕ್ಷದ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಎನ್ನುತ್ತಿದ್ದ ಕೆ.ಎಚ್.ಮುನಿಯಪ್ಪ ಅವರಿಗೆ ಕಾಂಗ್ರೆಸ್‌ ಕಾರ್ಯಕಾರಿಣಿಯ ಕಾಯಂ ಆಹ್ವಾನಿತರಾಗುವಂಥ ಆಲಂಕಾರಿಕ ಹುದ್ದೆ ಕೊಟ್ಟುದು, ನಾಯಕ ಸಮುದಾಯದ ಮೇಲೆ ಭಾರಿ ಹಿಡಿತ ಹೊಂದಿರುವ ಸತೀಶ್‌ ಜಾರಕಿಹೊಳಿ ಅವರಿಗೆ ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ಏರಿಸಿರುವುದು ವೇಣುಗೋಪಾಲ್‌ ಅವರು ಎಷ್ಟು ಆಳವಾಗಿ ಕರ್ನಾಟಕದ ಜಾತಿ ರಾಜಕೀಯವನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಕೆಲವು ನಿದರ್ಶನಗಳು.

‘ಈಗ ಎಲ್ಲರೂ ಕಷ್ಟಪಟ್ಟು ದುಡಿಯಿರಿ, ಪಕ್ಷವನ್ನು ಮರಳಿ ಅಧಿಕಾರಕ್ಕೆ ತನ್ನಿರಿ. ನಂತರ ನಿಮಗೆ ಸಿಗಬೇಕಾದ ಅಧಿಕಾರಕ್ಕಾಗಿ ಹಕ್ಕು ಸ್ಥಾಪಿಸಿರಿ’ ಎಂದು ವೇಣುಗೋಪಾಲ್‌ ಎಲ್ಲರಿಗೂ ಬುದ್ಧಿ ಹೇಳಿದ್ದಾರೆ. ವೇಣುಗೋಪಾಲ್‌ ಒಬ್ಬ ವಾಲಿಬಾಲ್‌ ಆಟಗಾರ. ಕಲ್ಲಿಕೋಟೆ ವಿಶ್ವವಿದ್ಯಾಲಯಕ್ಕೆ ಪಯ್ಯನ್ನೂರು ಕಾಲೇಜಿನ ಪ್ರತಿನಿಧಿಯಾಗಿ ಆಡಿದವರು. ವಾಲಿಬಾಲ್‌ ಆಟದಲ್ಲಿ ಎದುರಾಳಿಯ ಅಂಗಣದಲ್ಲಿಯೇ ಚೆಂಡು ಬೀಳುವಂತೆ ನೋಡಿಕೊಳ್ಳುವ ಚಾಕಚಕ್ಯತೆ ಬೇಕು. ಅದೇ ಚಾಕಚಕ್ಯತೆಯನ್ನು ಅವರು ಈಗ ತೋರಿಸಿದ್ದಾರೆ.

ಯುಪಿಎ–2 ಸರ್ಕಾರದಲ್ಲಿ ವೇಣುಗೋಪಾಲ್‌ ಅವರು ವಾಯುಯಾನ ಖಾತೆ ರಾಜ್ಯ ಸಚಿವರಾಗಿದ್ದರು. ಒಂದು ದಿನ ಅವರು ದೆಹಲಿಯಿಂದ ಕೊಚ್ಚಿಗೆ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರ ಜೊತೆಗೆ ಪ್ರಯಣಿಸಬೇಕಿದ್ದ ಕೇರಳದ ಸಚಿವರೊಬ್ಬರಿಗೆ, ‘ವಿಮಾನದಲ್ಲಿ ಖಾಲಿ ಸೀಟು ಇಲ್ಲ’ ಎಂದು ಟಿಕೆಟ್‌  ನಿರಾಕರಿಸಲಾಯಿತು. ವಿಮಾನದಲ್ಲಿ ಬಂದು ವೇಣುಗೋಪಾಲ್‌ ಕುಳಿತಾಗ ಹಿಂದೆ ಅನೇಕ ಸೀಟುಗಳು ಖಾಲಿ ಇದ್ದುವು. ಖಾಲಿ ಇರುವ ಸೀಟುಗಳನ್ನು ಎಣಿಸಿದರು.

ಒಂದಲ್ಲ ಎರಡಲ್ಲ 23 ಸೀಟುಗಳು ಖಾಲಿ ಇದ್ದುವು! ವಿಮಾನದ ಸಿಬ್ಬಂದಿಯನ್ನು ಕರೆದು ಪ್ರಯಾಣಿಕರ ಪಟ್ಟಿ ಕೊಡಲು ಕೇಳಿದರು. ಪಟ್ಟಿ ಇರಲಿಲ್ಲ. ‘ಏನೋ ಗೋಲ್‌ಮಾಲ್‌ ನಡೆದಿದೆ’ ಎಂದು ಅವರಿಗೆ ಅನುಮಾನ ಬಂತು. ಕೊಚ್ಚಿಯಲ್ಲಿ ಇಳಿದು ಏರ್‌ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ (ಸಿಎಂಡಿ) ಕರೆ ಮಾಡಿ ವಿಚಾರಣೆಗೆ ಆದೇಶಿಸಿದರು. ಇಬ್ಬರು ಹಿರಿಯ ಸಿಬ್ಬಂದಿ ಅಮಾನತು ಆಗುವ ವರೆಗೆ ಅವರು ಸುಮ್ಮನಾಗಲಿಲ್ಲ. ತಮಗೆ ಮೋಸ ಮಾಡುವವರನ್ನು ಅವರು ಸುಮ್ಮನೆ ಬಿಡುವವರು ಅಲ್ಲ.

ಕೇರಳದ ಹಿರಿಯ ನಾಯಕರಾಗಿದ್ದ, ರಾಜಕೀಯ ತಂತ್ರಗಾರಿಕೆಯಲ್ಲಿ ನಿಸ್ಸೀಮರಾಗಿದ್ದ ದಿ.ಕೆ.ಕರುಣಾಕರನ್‌ ಗರಡಿಯಲ್ಲಿ ಬೆಳೆದ ವೇಣುಗೋಪಾಲ್‌ಗೆ ಈಗಿನ್ನೂ 54 ವಯಸ್ಸು. ಕಾಂಗ್ರೆಸ್‌ನಂಥ ಹಳೆಯ ಪಕ್ಷದಲ್ಲಿ ಇದು ದೊಡ್ಡ  ವಯಸ್ಸೇನೂ ಅಲ್ಲ. ಆ ಅರ್ಥದಲ್ಲಿ ಇನ್ನೂ ಚಿಕ್ಕ ವಯಸ್ಸಿನವರಾದ ವೇಣುಗೋಪಾಲ್‌, ರಾಜ್ಯದ ಕಾಂಗ್ರೆಸ್‌ ಪಕ್ಷಕ್ಕೆ ಯೌವನ ತುಂಬುವ ಕೆಲಸ ಮಾಡಿದ್ದಾರೆ.

ಮುಖ ತಿರುಗಿಸಿಕೊಂಡಿದ್ದ ನಾಯಕರ ನಡುವೆ ಸೌಹಾರ್ದ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅವರ ಕಾರ್ಯತಂತ್ರ ಫಲಿಸಿ 2018ರ ಮೇ ವೇಳೆಗೆ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಅವರಿಗೆ ಅದಕ್ಕಿಂತ ಸಾರ್ಥಕ ಕ್ಷಣ ಬೇರೆ ಏನಿದೆ?125 ವರ್ಷ ಮೀರಿರುವ ಕಾಂಗ್ರೆಸ್‌ ಪಕ್ಷ ಒಮ್ಮೊಮ್ಮೆ ಆಶ್ಚರ್ಯ ಎನಿಸುವಂತೆ ನಡೆದುಕೊಳ್ಳುತ್ತದೆ ಎನ್ನುವುದರಲ್ಲಿ ಅನುಮಾನವೇನೂ ಇಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT