ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರು ಲೂಟಿಯಾದ ಮೇಲೆ ಕೋಟೆ ಬಾಗಿಲು ಹಾಕಬಾರದು

Last Updated 12 ಮೇ 2012, 19:30 IST
ಅಕ್ಷರ ಗಾತ್ರ

`ಇನ್ನು ಏಳೆಂಟು ವರ್ಷ ಅಷ್ಟೆ. ಬೆಂಗಳೂರಿನಲ್ಲಿ ಜಲಕ್ಷಾಮ ಬರಲಿದೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಬೆಂಗಳೂರಿನ ಜನ ಕುಡಿಯುವ ನೀರಿಗಾಗಿ ಹಾಹಾಕಾರ ಮಾಡುತ್ತಾರೆ. ಕುಡಿಯುವ ನೀರಿನ ಅಭಾವದಿಂದ ಸಾಮ್ರಾಜ್ಯಗಳೇ ಪತನಗೊಂಡಿವೆ, ಯುದ್ಧಗಳೇ ಆಗಿವೆ, ಆಗುತ್ತವೆ~ ಎಂದು ಸರ್ಕಾರಿ ಜಮೀನಿನ ಭೂಕಬಳಿಕೆ ಕುರಿತು `ದುರಾಸೆ ಮತ್ತು ಷಾಮೀಲು~ ಎಂಬ ವರದಿ ಕೊಟ್ಟಿದ್ದ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಬಾಲಸುಬ್ರಮಣಿಯನ್ ಹೇಳಿ ಬಹಳ ದಿನಗಳೇನೂ ಆಗಿಲ್ಲ. ಕಳೆದ ವರ್ಷದ ಜೂನ್‌ನಲ್ಲಿ ಅವರು ವರದಿ ಕೊಟ್ಟಿದ್ದರು. ಈ ವರ್ಷ ಇನ್ನೂ ಜೂನ್ ಬಂದಿಲ್ಲ.
ಆಗಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆಗಿದೆ. ಯಾವ ಬಡಾವಣೆಯಲ್ಲಿಯೂ ಈ ಸಾರಿ ಸಮರ್ಪಕವಾಗಿ ನೀರು ಪೂರೈಕೆ ಆಗಿಲ್ಲ. ಕಾವೇರಿ ನೀರು ಬಿಟ್ಟರೆ ಕೊಳವೆ ಬಾವಿ ನೀರೇ ಉತ್ತರ ಎನ್ನುವಂತೆ ಆಗಿದೆ. ಆದರೆ, ಕೊಳವೆ ಬಾವಿಯ ಮಟ್ಟ ಪಾತಾಳಕ್ಕೆ ಇಳಿದಿದೆ. ನೀರು ಆಳಕ್ಕೆ ಇಳಿದಷ್ಟೂ ಅದರ ಗುಣಮಟ್ಟ ಕಡಿಮೆ ಆಗುತ್ತದೆ.

ಬಾಲಸುಬ್ರಮಣಿಯನ್ ಅವರ ವರದಿಯನ್ನು ಸರ್ಕಾರದಲ್ಲಿ ಇದ್ದವರು ಓದಿದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಅವರು ವರದಿ ಕೊಡುವುದೇ ಸರ್ಕಾರಕ್ಕೆ ಬೇಡವಾಗಿತ್ತು. ಅವರೇ ವರದಿಯನ್ನು ಮುದ್ರಿಸಿ ಹಂಚದೇ ಇದ್ದರೆ ಅನೇಕ ವಿಚಾರಣಾ ವರದಿಗಳ ಹಾಗೆ ಅದು ಕೂಡ ವಿಧಾನಸೌಧದ ಮೂರನೇ ಮಹಡಿಯ ಯಾವುದೋ ಒಂದು ಕೊಠಡಿಯಲ್ಲಿ ಕೊಳೆಯುತ್ತ ಬಿದ್ದಿರುತ್ತಿತ್ತು. 199 ಪುಟಗಳ ತಮ್ಮ ವರದಿಯಲ್ಲಿ 20 ಪುಟಗಳಷ್ಟು ಜಾಗವನ್ನು ಬೆಂಗಳೂರಿನ ಕೆರೆ ಮತ್ತು ಜಲಾಶಯಗಳ ಒತ್ತುವರಿ, ಅತಿಕ್ರಮಣ ಕುರಿತ ಮಾಹಿತಿಗೇ ಬಾಲಸುಬ್ರಮಣಿಯನ್ ಮೀಸಲು ಇಟ್ಟಿದ್ದಾರೆ. ಸರ್ಕಾರಕ್ಕೆ ದೂರದೃಷ್ಟಿ ಎಂಬುದು ಇರುವುದಿಲ್ಲ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೋಗುವವರಂತೆಯೇ ಅದರ ವರ್ತನೆ ಇರುತ್ತದೆ. ಈ ಸಾರಿ ಕೂಡ ಕುಡಿಯುವ ನೀರಿನ ಕೊರತೆ ಇರುವ ಪ್ರದೇಶಗಳಿಗೆಲ್ಲ ಭೇಟಿ ನೀಡಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೊಟ್ಟ ಆದೇಶ, `ಕೊಳವೆ ಬಾವಿ ತೋಡಿ~ ಎಂದು. ಕೊಳವೆ ಬಾವಿಯಲ್ಲಿ ನೀರು ಬರುತ್ತದೆಯೇ, ಬೇಕಾಬಿಟ್ಟಿ ಕೊಳವೆ ಬಾವಿ ತೋಡಿದರೆ ಏನಾಗುತ್ತದೆ ಎಂಬುದರ ಪರಿವೆಯೇ ಅವರಿಗೆ ಇರಲಿಲ್ಲ.

ಬೆಂಗಳೂರು ನಗರ ಜಿಲ್ಲೆಯಲ್ಲಿ 937 ಕೆರೆಗಳು ಇವೆ. ಅಂತಲೇ ಸಾವಿರ ಕೆರೆಗಳ ನಾಡು ಎಂದು ಇದಕ್ಕೆ ಹೆಸರಿತ್ತು. ಕೆಂಪೇಗೌಡರು 1535ರಲ್ಲಿ ಬೆಂಗಳೂರನ್ನು ನಿರ್ಮಿಸುವಾಗ ಈ ಕೆರೆಗಳೇ ಆ ನಾಡಪ್ರಭುವಿನ ದೃಷ್ಟಿಯಲ್ಲಿ ಇದ್ದುವು. ನೂರ್ಕಾಲ ಈ ಊರನ್ನು ಸಾಕುವ ಸಾಮರ್ಥ್ಯ ಈ ಕೆರೆಗಳಿಗೆ ಇದೆ ಎಂದೂ ಅವರು ಕಂಡುಕೊಂಡಿದ್ದರು. ಅಷ್ಟು ಕೆರೆಗಳ ಊರು ಎಷ್ಟು ಬೆಳೆದರೆ ಸಾಕು ಎಂದು ನಾಲ್ಕೂ ಕಡೆ ಅವರು ಗಡಿಗೋಪುರಗಳನ್ನೂ ನಿರ್ಮಿಸಿದ್ದರು. ಆದರೆ, ಈಗ ಆ 937 ಕೆರೆಗಳು ಎಲ್ಲಿವೆ ಎಂದು ಹಗಲಿನಲ್ಲಿಯೂ ದೀಪ ಹಚ್ಚಿಕೊಂಡು ಹುಡುಕಲು ಹೋಗಬೇಕು. ಕಾವೇರಿ ನೀರು ಬರುವವರೆಗೆ ಬೆಂಗಳೂರಿನ ಜನರಿಗೆ ಈ ಕೆರೆಗಳೇ ಕುಡಿಯುವ ನೀರಿನ ಮೂಲಗಳಾಗಿದ್ದುವು. ಬೆಂಗಳೂರು ಸಮುದ್ರ ಮಟ್ಟದಿಂದ 3,000 ಅಡಿಗಳಷ್ಟು ಎತ್ತರ ಇರುವುದರಿಂದ ಮತ್ತು ಊರಿನ ಸುತ್ತಲಿನ ಭಾಗ ಇಳಿಜಾರು ಆಗಿರುವುದರಿಂದ ನಗರದಲ್ಲಿ ಬಿದ್ದ ನೀರು ಹರಿದು ಹೋಗುತ್ತದೆ. ಹಾಗಾಗಿ ಬೆಂಗಳೂರಿನ ಅಂತರ್ಜಲ ಮಟ್ಟ ಮೊದಲಿನಿಂದಲೂ ಸಮರ್ಪಕವಾದುದೇನೂ ಅಲ್ಲ.

 ಮಳೆ ಕೊಟ್ಟ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು, ಕಾವೇರಿಯಿಂದ ಪೂರೈಕೆ ಆಗುವ ನೀರನ್ನು ಮತ್ತು ಕೆರೆಗಳ ನೀರನ್ನು ಬಳಸಿಕೊಂಡಿದ್ದರೆ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಆಗಬೇಕಾಗಿಯೇ ಇರಲಿಲ್ಲ. ಆದರೆ, ಒಂದು ನಗರದ ದಾಹ ರಕ್ಕಸ ಸ್ವರೂಪದ್ದಾಗಿರುತ್ತದೆ. ನಾನು ಬರೀ ಕುಡಿಯುವ ನೀರಿನ ಬಗ್ಗೆ ಮಾತನಾಡುತ್ತಿಲ್ಲ. ಕಳೆದ ಎರಡು ಮೂರು ದಶಕಗಳಲ್ಲಿ ಈ ನಗರ ಬೆಳೆದ ರೀತಿ ಗರಬಡಿಸುವಂತೆ ಇದೆ. ನಿಮಗೆ ಗೊತ್ತಿರುವ ರಸ್ತೆಯಲ್ಲಿ ಒಂದೆರಡು ತಿಂಗಳು ಬಿಟ್ಟು ಹೋದರೆ ಅದು ಗುರುತು ಹಿಡಿಯದಷ್ಟು ಬದಲಾಗಿರುತ್ತದೆ. ಮಡಿವಾಳದಿಂದ ಅಗರ ಮೂಲಕ ವೈಟ್‌ಫೀಲ್ಡಿಗೆ ಹೋಗುವ ರಸ್ತೆಯ ಆಜುಬಾಜು ಪ್ರದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಬದಲಾವಣೆ, ಎದ್ದು ನಿಂತಿರುವ ಬಹುಮಹಡಿ ಕಟ್ಟಡಗಳನ್ನು ನೋಡಿದರೆ ಭಯವಾಗುತ್ತದೆ. ಇದು ಒಂದು ಉದಾಹರಣೆ ಮಾತ್ರ. ನೀವು ನಗರದ ಯಾವ ದಿಕ್ಕಿಗೆ ಹೋದರೂ ಇದೇ ರಕ್ಕಸ ಬೆಳವಣಿಗೆ ದಂಗುಬಡಿಸುತ್ತದೆ. ಇಡೀ ಕಾವೇರಿ ನದಿ ನೀರನ್ನು ಕೇವಲ ಬೆಂಗಳೂರಿಗೆ ಪೂರೈಸಿದರೂ ಸಾಕಾಗುವುದಿಲ್ಲ ಎನ್ನುವಂಥ ವೇಗದಲ್ಲಿ ಬೆಂಗಳೂರು ಬೆಳೆಯುತ್ತಿದೆ. ಆದರೆ, ನದಿಯಲ್ಲಿ ಅದಕ್ಕಾಗಿ ಇರುವ ಪಾಲು ಕೇವಲ 19 ಟಿಎಂಸಿ ಅಡಿ ಮಾತ್ರ ಎಂಬುದು ನಮಗೆ ನೆನಪು ಇರಬೇಕು.

ಅದು ನಮಗೆ ನೆನಪು ಇಲ್ಲ ಎಂದು ಅನಿಸುತ್ತದೆ. ಇದ್ದರೆ ಊರಿನ ಎಲ್ಲ ದಿಕ್ಕಿನಲ್ಲಿ ಇದ್ದ ಕೆರೆಗಳಲ್ಲಿ ಹೂಳು ತುಂಬಲು, ಕೊಳೆ ಬೆಳೆಯಲು ನಾವು ಬಿಡುತ್ತಿರಲಿಲ್ಲ. ಕಟ್ಟಡಗಳ ಮಾಲೀಕರು, ಗುತ್ತಿಗೆದಾರರು ತಮ್ಮ ನಿರ್ಮಾಣ ಕಾಮಗಾರಿಯ ಅವಶೇಷಗಳನ್ನೆಲ್ಲ ಕೆರೆಗಳಲ್ಲಿ ರಾಶಿ ಹಾಕುವಂಥ ಕ್ರಿಮಿನಲ್ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೆರೆ ಅಂಗಳಗಳನ್ನು ಸರ್ಕಾರವು ಬಾಹ್ಯಾಕಾಶ ಇಲಾಖೆ, ಫುಟ್‌ಬಾಲ್ ಕ್ರೀಡಾಂಗಣ, ವೈದ್ಯಕೀಯ ಕಾಲೇಜು, ಬಸ್ ನಿಲ್ದಾಣ ಎಂದೆಲ್ಲ ಹಂಚಲು ಆಗುತ್ತಿರಲಿಲ್ಲ. ಪೊಲೀಸರಿಗೆ ಮನೆ ಕಟ್ಟಲು ಕೊಟ್ಟ ಜಾಗ ಕೂಡ ಕೆರೆಯಂಗಳ ಎಂದ ಮೇಲೆ ಜೀವಜಲಮೂಲಗಳನ್ನು ನಾವು ಎಷ್ಟು ನಿಷ್ಕಾಳಜಿಯಿಂದ ನೋಡಿಕೊಂಡಿದ್ದೇವೆ ಎಂದು ಗೊತ್ತಾಗುತ್ತದೆ. ಹೀಗೆ ಕೆರೆಯಂಗಳ ಕಬಳಿಸುವುದಕ್ಕೆ ನಿರ್ಬಂಧಗಳು ಇರಲಿಲ್ಲ ಎಂದು ಅಲ್ಲ. ಹೈಕೋರ್ಟ್ ಆದೇಶಗಳು ಇದ್ದುವು, ಎನ್.ಲಕ್ಷ್ಮಣರಾಯರಂಥ ಆಡಳಿತಗಾರರು ಕೆರೆಯಂಗಳಗಳನ್ನು ಉಳಿಸಿಕೊಳ್ಳುವ ಪ್ರಾಮುಖ್ಯದ ಬಗ್ಗೆ 1988ರಷ್ಟು ಹಿಂದೆಯೇ ಕೊಟ್ಟ ವರದಿಗಳೂ ನಮ್ಮ ಆಡಳಿತಗಾರರ ಮೇಜಿನ ಮೇಲೆಯೇ ಇದ್ದುವು.

ಲಕ್ಷ್ಮಣರಾಯರು ವರದಿ ಕೊಟ್ಟ ಹತ್ತು ವರ್ಷಗಳ ನಂತರ 1998ರಲ್ಲಿ ಕೆರೆಗಳ ರಕ್ಷಣೆಯ ಹೊಣೆಯನ್ನು ಅರಣ್ಯ ಇಲಾಖೆ ಹೆಗಲಿಗೆ ಹೊರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಕೆರೆಗಳ ಒತ್ತುವರಿ ಮಾಡುವವರನ್ನು ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಮೂರು ವರ್ಷ ಜೈಲಿಗೆ ಕಳುಹಿಸಲೂ ಈ ಆದೇಶದಲ್ಲಿ ಅಧಿಕಾರ ಕೊಡಲಾಗಿತ್ತು. ಅದಾಗಿ ಈಗ 14 ವರ್ಷಗಳು ಕಳೆದು ಹೋಗಿವೆ. ಬೆಂಗಳೂರಿನ ಕೆರೆಗಳು ನಮ್ಮ ಕಣ್ಣ ಮುಂದೆಯೇ ಮರೆಯಾದುವು, ಅಲ್ಲಿ ಬಹುಮಹಡಿ ಕಟ್ಟಡಗಳು ಮೇಲೆ ಎದ್ದುವು. ಆದರೆ, ಯಾರೂ ಜೈಲು ಸೇರಲಿಲ್ಲ! ಬಾಲಸುಬ್ರಮಣಿಯನ್ ಅವರು `ದುರಾಸೆ ಮತ್ತು ಷಾಮೀಲು~ ಎಂದು ಸುಮ್ಮನೆ ಹೇಳಲಿಲ್ಲ. ಲಕ್ಷ್ಮಣರಾಯರು ಆಗ ಬರೀ ಬೆಂಗಳೂರು ನಗರ ವ್ಯಾಪ್ತಿಯ 114 ಕೆರೆಗಳ ರಕ್ಷಣೆಯ ಹೊಣೆಯನ್ನು ಅರಣ್ಯ ಇಲಾಖೆಗೆ ವಹಿಸಬೇಕು ಎಂದಿದ್ದರು. ಆದರೆ, ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 937 ಕೆರೆಗಳು ಇವೆ. ಅವೆಲ್ಲ ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೇ ಬಂದಿವೆ. ಬಹುತೇಕ ಎಲ್ಲ ಕೆರೆಗಳ 1,848 ಎಕರೆ ಕೆರೆ ಅಂಗಳ ಒತ್ತುವರಿ ಆಗಿದೆ. ಹೀಗೆ ಒತ್ತುವರಿ ಮಾಡಿದವರು 2,848 ಮಂದಿ. ಅವರೆಲ್ಲ ಪ್ರಭಾವಿಗಳು, ರಾಜಕಾರಣಿಗಳು ಎಂದು ಪ್ರತ್ಯೇಕಿಸಿ ಹೇಳಬೇಕಿಲ್ಲ.

ಇಡೀ ದೇಶದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಇರುವ ಏಕೈಕ ರಾಜ್ಯ ಕರ್ನಾಟಕ. ಈ ಪ್ರಾಧಿಕಾರದ ಅಧ್ಯಕ್ಷರಾಗಿರುವವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ. ಪ್ರಾಧಿಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಸದಸ್ಯರಾಗಿದ್ದಾರೆ. ಆದರೂ ಕೆರೆಗಳ ಕಬಳಿಕೆಯನ್ನು ಅವರೆಲ್ಲ ಮೂಕ ಪ್ರೇಕ್ಷಕರ ಹಾಗೆ ನೋಡುತ್ತ ಸುಮ್ಮನೆ ಕುಳಿತುಬಿಟ್ಟಿದ್ದಾರೆ. 1995ರಷ್ಟು ಹಿಂದೆಯೇ ರಾಜ್ಯ ಹೈಕೋರ್ಟ್‌ನ ಆಗಿನ ನ್ಯಾಯಮೂರ್ತಿ ಈಶ್ವರ್ ಪ್ರಸಾದ್ ಅವರು ಕೆರೆ ಅಂಗಳವನ್ನು ಯಾರಿಗೂ ಹಂಚಿಕೆ ಮಾಡಬಾರದು ಎಂದು ನೀಡಿದ ಆದೇಶ ಈಗಲೂ ಊರ್ಜಿತವಾಗಿದೆ. ಆದರೆ, ಈ ಆದೇಶ ಬಂದ ಕಳೆದ 17 ವರ್ಷಗಳ ಅವಧಿಯಲ್ಲಿ ಎಷ್ಟು ಕೆರೆಗಳು ಮಾಯವಾಗಿವೆ ಎಂಬ ಲೆಕ್ಕ ಸರ್ಕಾರದ ಬಳಿ ಇಲ್ಲವೆಂದಲ್ಲ; ಹಾಗಾದರೆ ಅದಕ್ಕೆ ಯಾರು ಹೊಣೆ?

ಒಂದು ನಗರದ ಬೆಳವಣಿಗೆಯ ಬಕಾಸುರ ಹಸಿವಿಗೆ ಕಡಿವಾಣ ಹಾಕದೇ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಈಗ ಬೆಂಗಳೂರು ನಗರ ಬೆಳೆಯುತ್ತಿರುವ ರೀತಿಯೇ ಉದಾಹರಣೆ. ಪ್ರತಿವರ್ಷ ಶೇ 4.21ರ ಪ್ರಮಾಣದಲ್ಲಿ ಬೆಳೆಯುತ್ತಿರುವ ಈ ನಗರದ ಜನಸಂಖ್ಯೆ 2010ರಲ್ಲಿ 87 ಲಕ್ಷ ಇತ್ತು. ಇನ್ನು ಮೂರು ವರ್ಷಗಳಲ್ಲಿ ಅದು ಒಂದು ಕೋಟಿ ಮೀರುತ್ತದೆ. 2020ರಲ್ಲಿ ಅದು 1.31 ಕೋಟಿಗೆ ಏರುತ್ತದೆ ಎಂಬ ಅಂದಾಜು ಇದೆ.

ಪ್ರತಿಯೊಬ್ಬ ವ್ಯಕ್ತಿಗೆ ದಿನವೊಂದಕ್ಕೆ 150 ಲೀಟರ್ ನೀರು ಸಿಗಬೇಕು ಎಂಬುದು ಕೇಂದ್ರ ಸರ್ಕಾರದ ಮಾನದಂಡ. ಆದರೆ, ಈಗ ಬೆಂಗಳೂರಿನಲ್ಲಿ ಸಿಗುತ್ತಿರುವುದು 78 ಲೀಟರ್ ಮಾತ್ರ. 2020ರ ವೇಳೆಗೆ ಅದು 60 ಲೀಟರ್ ಆಗಬಹುದು ಎಂಬುದು ತಜ್ಞರ ನಿರೀಕ್ಷೆ.

ಬೆಂಗಳೂರು ಇರುವುದು ಬಕಾಸುರ ಹಸಿವಿನ ಗುತ್ತಿಗೆದಾರರಿಗೆ ಅಲ್ಲ. ಅವರಿಗೆ ರಕ್ಷಣೆ ಕೊಡುವ ರಾಜಕಾರಣಿಗಳಿಗೂ ಅಲ್ಲ. ಇದು ಇರುವುದು ಇಲ್ಲಿನ ಜನರಿಗೆ. ಅವರಿಗೆ ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರು ಪೂರೈಸುವುದು ಸರ್ಕಾರದ ಕನಿಷ್ಠ ಕರ್ತವ್ಯ. 2030ರ ವೇಳೆಗೆ ಬೆಂಗಳೂರು ನಗರ ಕೊಳೆಯತೊಡಗುತ್ತದೆ ಎಂಬ ಕೆಟ್ಟ ನಿರೀಕ್ಷೆ ಇದೆ. ಊರು ಲೂಟಿಯಾದ ಮೇಲೆ ಕೋಟೆ ಬಾಗಿಲು ಹಾಕಬಾರದು ಅಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT