ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತುಪರ್ಣೊ, ಲೈಂಗಿಕತೆ, ಭಾರತೀಯ ಸಿನಿಮಾ

Last Updated 10 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಇದೇ ವರ್ಷದ ಮೊದಲ ಭಾಗದಲ್ಲಿ ೪೯ರ ಕಿರುಪ್ರಾಯದಲ್ಲಿ ಬಂಗಾಳದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಋತುಪರ್ಣೊ ಘೋಷ್ ಕಾಲವಾದರು. ಋತುಪರ್ಣೊ ಘೋಷರ ಪ್ರತಿಭೆ ಅನನ್ಯ. ಇದಕ್ಕೆ ಸಾಕ್ಷಿಯೆಂದರೆ  ಅವರು ನಿರ್ದೇಶಿಸಿದ ಚಿತ್ರಗಳಲ್ಲಿ ಅಭಿನಯಿಸಲು ಬಾಲಿವುಡ್‌ನ ಸೂಪರ್‌ಸ್ಟಾರ್‌­ಗಳಾದ ಅಮಿ­ತಾಭ್ ಬಚ್ಚನ್, ಐಶ್ವರ್ಯ ರೈ, ಜಾಕಿ ಶ್ರಾಫ್‌, ಅಜಯ್ ದೇವಗನ್, ಬಿಪಾಷಾ ಬಸು ಮುಂತಾದವರೂ ಹಪಹಪಿಸುತ್ತಿದ್ದರು.

 ಋತುಪರ್ಣೊ ಅವರು ಬಾಲಿವುಡ್‌ನ ವಸ್ತು-ವಿನ್ಯಾಸಗಳಿಗಿಂಥ ತೀರಾ ಬೇರೆಯೇ ಥರದ ತಮ್ಮ ಛಾಪಿರುವ ಅರ್ಥಪೂರ್ಣ ಸಿನಿಮಾಗಳನ್ನು ಮಾಡಿ ಸೂಪರ್ ಸ್ಟಾರ್‌ಗಳನ್ನು  ಕ್ಯಾರೆಕ್ಟರ್ ಆಕ್ಟರ್‌ಗಳನ್ನಾಗಿ ಮಾರ್ಪಡಿಸುತ್ತಿದ್ದರು . ‘ಲಾಸ್ಟ್ ಲಿಯರ್’ ನಲ್ಲಿ ಅಮಿತಾಭ್ ಮತ್ತು  ‘ಶೊಬ್ ಚೊರಿತ್ರೋ ಕಾಲ್ಪನಿಕ್’ ನಲ್ಲಿ  ಬಿಪಾಷಾ ಬಸು ಅವರ ಸೂಕ್ಷ್ಮ ಅಭಿನಯ ಈ ಮಾತಿಗೆ ನಿದರ್ಶನ. ಅಂದಮಾತ್ರಕ್ಕೆ ಋತುಪರ್ಣೊ ಅವರು ಬಾಲಿವುಡ್ ಸೂಪರ್‌ಹಿಟ್‌ಗಳನ್ನು ಮೀರಿ ಬೆಳೆದರು ಎಂದು ಹೇಳಲಾಗದು. ಆದರೆ ಮೂಲಭೂತವಾಗಿ ಲಾಭಕೋರ ಸಿನಿಮಾ­ಗಳನ್ನು ಮಾಡಲು ಹೋಗದೆ ತಮ್ಮ ಸಾಮಾಜಿಕ ಮತ್ತು ದಾರ್ಶನಿಕ ಅನ್ವೇಷಣೆಗಳನ್ನು ಬಲಿಗೊಡದೆ ಕೋಲ್ಕತ್ತಾದ ಈ ನಿರ್ದೇಶಕ ತಮ್ಮ ಪ್ರಭಾವದಿಂದ ಬಾಲಿವುಡ್ಡನ್ನೂ  ಒಲಿಸಿ­ಕೊಂಡರು, ಮಣಿಸಿಕೊಂಡರು.

ಈ ಹಿಂದೆ ಋತುಪರ್ಣೊ ಅವರಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ­ಗಳನ್ನು ಪಡೆದುಕೊಂಡ   ಸತ್ಯಜಿತ್ ರೇ  ಅಥವಾ ಋತ್ವಿಕ್ ಘಟಕ್ ಅವರು ಈ ಮಟ್ಟಿಗಿನ ಪ್ರಭಾವವನ್ನು ಭಾರತೀಯ ಮುಖ್ಯಧಾರೆಯ ಮೇಲೆ ಬೀರ­ಲಾಗ­ಲಿಲ್ಲ. ಘಟಕ್ ಅವರು ಬಿಮಲ್ ರಾಯ್‌ರಂಥ ವೃತ್ತಿಸಿನಿಮಾದವರಿಗೆ ಕಥಾನಕ­ಗಳನ್ನು ಬರೆದು­ಕೊಟ್ಟರೂ ತಮ್ಮ ವೈಚಾರಿಕ ಮತ್ತು ಕಲಾತ್ಮಕ ಸ್ವಾತಂತ್ರ್ಯವನ್ನು ಬಚಾಯಿಸಿಕೊಳ್ಳಲು ‘ಆರ್ಟ್ ಸಿನಿಮಾ’ದ ಚೌಕಟ್ಟಿನಲ್ಲೇ ಅನನ್ಯವಾದುದನ್ನು ಸಾಧಿಸಿದರು.

ಅತ್ಯಧಿಕ ಅಂತರ ರಾಷ್ಟ್ರೀಯ ಪ್ರಶಸ್ತಿ­ಗಳನ್ನು ಗಳಿಸಿದ ರೇ ಅವರು ಮುಂಬೈ ಸಿನಿಮಾದ ಆ ಕಾಲದ ದೊಡ್ಡ ಸ್ಟಾರ್ ಗಳಾದ ಶಬಾನಾ ಮತ್ತು ಸಂಜೀವ್ ಕುಮಾರ್‌ರ ಅಭಿನಯ­ದಲ್ಲಿ  ‘ಶತರಂಜ್ ಕೆ ಕಿಲಾಡಿ’ ಸಿನಿಮಾ ನಿರ್ಮಿಸಿ ಅದು ಬಿಡುಗಡೆಯೂ ಆಯಿತು. ಆದರೆ ಮುಂಬೈ ಮಾಫಿಯಾ ಆ ಸಿನಿಮಾ ಓಡಲು ಬಿಡದಂತೆ ಷಡ್ಯಂತ್ರ ಮಾಡಿತು. ಆದ್ದರಿಂದ ರೇ ಮತ್ತು ಘಟಕ್ ಒಂದರ್ಥದಲ್ಲಿ ಮುಖ್ಯಧಾರೆಯ ಹೊರಗೇ ನಿಂತು ಮಹತ್ವದ್ದನ್ನು ಸಾಧಿಸಿದರು.

ಅವರಿಂದ ಪ್ರೇರಿತರಾದ ಆರ್ಟ್ ಸಿನಿಮಾದ ಪ್ರತಿಭಾವಂತರು ಅದೇ ದಿಶೆಯಲ್ಲಿ ನಡೆದಿದ್ದಾರೆ. ಮಲಯಾಳಂನ ಅಡೂರ್ ಗೋಪಾಲ­ಕೃಷ್ಣನ್, ನಮ್ಮ ಗಿರೀಶ ಕಾಸರವಳ್ಳಿ ನನ್ನ ದೃಷ್ಟಿಯಲ್ಲಿ ಅತ್ಯಂತ ಪ್ರತಿಭಾವಂತ ನಿರ್ದೇಶಕರು. ಆದರೆ ಮುಖ್ಯಧಾರೆಯ ಸಿನಿಮಾದ ಕಮಾಯಿಯ ಪ್ರಪಂಚ ಮತ್ತು ಈ ಪ್ರಜ್ಞಾವಂತ ನಿರ್ದೇಶಕರ ಕಲಾತ್ಮಕ ಪ್ರಪಂಚ ಒಂದೇ ಅಲ್ಲ.

ಬಾಲಿವುಡ್‌ನ ಮುಖ್ಯಧಾರೆಯಲ್ಲಿರುವ ಅಮೀರ್ ಖಾನ್ ಅವರು ‘ತಾರೆ ಜ಼ಮೀನ್ ಪರ್’, ‘ದೋಭಿ ಘಾಟ್’ ಮುಂತಾದ ಬಾಲಿ­ವುಡ್ ವ್ಯಾಕರಣಕ್ಕೆ ಹೊರತಾದ ಮಾನ­ವೀಯ ಸೂಕ್ಷ್ಮ­ಗಳಿರುವ ಚಿತ್ರಗಳನ್ನು ತಯಾರಿಸಿ ಪ್ರಶಂಸೆ­ಗೊಳಗಾಗಿದ್ದಾರೆ. ಇನ್ನೊಂದು ಕಡೆ, ಮೊದಲು ಕಲಾತ್ಮಕ ಚಿತ್ರಗಳ ನಿರ್ದೇಶಕರಾಗಿದ್ದು ಬಳಿಕ ಮುಖ್ಯಧಾರೆಯ ಚಿತ್ರಗಳನ್ನು ನೀಡುತ್ತಿ­ರುವ ಪ್ರಕಾಶ್ ಝಾ ಅಂಥವರು ‘ಚಕ್ರವ್ಯೂಹ್’ ನಂಥ ಸಿನಿಮಾಗಳನ್ನು ನಿರ್ಮಿಸಿ ಬಾಲಿವುಡ್‌ನಲ್ಲಿ ಮಸಾಲೆಗಳಿಗೆ ಹೊರತಾದ ಪರ್ಯಾಯ ಚಿತ್ರಗಳನ್ನು ನಿರ್ಮಿಸಿ ಬಾಕ್ಸ್‌ ಆಫೀಸ್‌ನಲ್ಲೂ ಯಶಸ್ವಿ­ಯಾಗಿಸಬಹುದೆಂದು ತೋರಿಸಿಕೊಟ್ಟಿ­ದ್ದಾರೆ.

ಅನುರಾಗ ಕಶ್ಯಪ್ ಅವರನ್ನೂ ಈ ಸಾಲಿಗೆ ಸೇರಿಸಬಹುದೇನೊ. ಇದರ ಆಧಾರದ ಮೇಲೆ ಇಂದು ಕಲಾತ್ಮಕ ಚಿತ್ರಗಳ ಯುಗ ಖತಮ್ಮಾಗಿದೆಯೆಂದು ಕೆಲವು ಬಾಲಿವುಡ್ ಪೂಜಾರಿಗಳು, ಪುರೋಹಿತರು ವಾದಿಸುತ್ತಾರೆ. ಆದರೆ ಬಾಲಿವುಡ್‌ನಲ್ಲಿ ಬಾಲಿವುಡ್ಡೇತರ ಚಿತ್ರ ನಿರ್ಮಿಸುತ್ತಿರುವ ಈ ಯಾವ ಮಹನೀಯರೂ ರೇ ಅಥವಾ ಘಟಕ್ ಅವರ ವಾರಸುದಾರರಲ್ಲ. ಆ ಮಹಾನ್ ಪ್ರತಿಭಾವಂತರ ಕಲಾತ್ಮಕ ಮತ್ತು ದಾರ್ಶನಿಕ ಸೂಕ್ಷ್ಮಗಳು ಅಮೀರ್ ಖಾನ್ ಅವರಿಗಾಗಲೀ ಪ್ರಕಾಶ್ ಝಾ ಅವರಿಗಾಗಲೀ ಈ ವರೆಗೆ ಸಾಧ್ಯವಾಗಿಲ್ಲ.

ಇತ್ತ ಕಲಾತ್ಮಕ ಚಿತ್ರ ನಿರ್ಮಾಪಕರು ಕೈಸುಟ್ಟು­ಕೊಂಡು ಚಿತ್ರನಿರ್ಮಾಣ ಮಾಡಬೇಕಾಗಿ ಬಂದಿದೆ. ಹೂಡಿದ ಅಸಲನ್ನು ವಾಪಸ್ ಪಡೆದು­ಕೊಳ್ಳುವುದೇ ಅವರಿಗೆ ಕಷ್ಟಸಾಧ್ಯವಾಗಿ­ಬಿಟ್ಟಿದೆ. ಸೀಮಿತ ಪ್ರೇಕ್ಷಕರ ಮೆಚ್ಚುಗೆ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಪ್ರಶಸ್ತಿ ಈ ಮಟ್ಟಿಗೆ ಅವರು ಸಮಾಧಾನ ಪಟ್ಟುಕೊಳ್ಳ­ಬೇಕಾಗಿದೆ.


ನವ್ಯಯುಗದಲ್ಲಿ ಭಾರತೀಯ ಕಲಾಕಾರರು ಸೃಜನಶೀಲ ಮತ್ತು ಮಾರ್ಕೆಟ್ಟು ಕಲೆಗಳ ತೀವ್ರ ತಿಕ್ಕಾಟವನ್ನು ಅನುಭವಿಸಬೇಕಾಗಿ ಬಂತು. ತಮ್ಮ ಅಭಿವ್ಯಕ್ತಿಯ ಪ್ರಾಮಾಣಿಕತೆ ಮತ್ತು ನಿಷ್ಠುರತೆ­ಗಳನ್ನುಳಿಸಿಕೊಳ್ಳಲು ಅವರು ಮಾರ್ಕೆಟ್ಟು ಕಲೆಗಳನ್ನು ತಿರಸ್ಕರಿಸಿದರು. ಆದರೆ ಇಂದು ಪರಿಸ್ಥಿತಿ ಉಲ್ಬಣಿಸಿದೆ. ಕಲಾತ್ಮಕ ಅಭಿವ್ಯಕ್ತಿಗಳ ಕ್ಷೇತ್ರ ದಿನೇದಿನೇ ಕುಗ್ಗುತ್ತಿದ್ದು ಗೋಳೀಕರಣದ ಕುಮ್ಮಕ್ಕಿ­ನಿಂದ ಮಾರ್ಕೆಟ್ಟು ಹಿಂದೆಂದಿಗಿಂತಲೂ ಸರ್ವ­ವ್ಯಾಪಿಯಾಗುತ್ತಿದೆ. ನಮ್ಮ ಪ್ರಗತಿಶೀಲ ಕಲಾಪ್ರವಾಹವಂತೂ ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ ಉಭಯಭ್ರಷ್ಟವಾಯಿತು.

ಸ್ವೋಪಜ್ಞತೆ ಮತ್ತು ಜನಪ್ರಿಯತೆಗಳ ವಿರುದ್ಧ ಸೆಳೆತಗಳು ಕಲಾಕಾರರನ್ನು ಕಾಡುತ್ತಿ­ರುವ ಸಮ­ಕಾಲೀನ ಜಗತ್ತಿನಲ್ಲಿ ಸ್ವೋಪಜ್ಞತೆ­ಯನ್ನು ಬಿಟ್ಟು­ಕೊಡದೆ ಜನಪ್ರಿಯತೆಯನ್ನೂ ಗಳಿಸ­­ಬಹು­ದೆಂದು ತೋರಿಸಿ­ಕೊಟ್ಟು ಯಶಸ್ವಿ­ಯಾದ ಕೆಲವೇ ಕಲಾ­ಕಾರ­ರಲ್ಲಿ ಋತುಪರ್ಣೊ  ಅಗ್ರಗಣ್ಯರು.  ಅವರು ತಮ್ಮ ಎರಡು ದಶಕಗಳ ಚಿತ್ರಯಾತ್ರೆಯಲ್ಲಿ ತುಳಿದ ಹಾದಿ ಅಧ್ಯಯನಯೋಗ್ಯ­ವಾಗಿದೆ. ಇನ್ನೊಂದು ಅಂಶವೆಂದರೆ ಮೊದಲು ಸಾಮಾ­ಜಿಕ ತೀವ್ರತೆಯ ಸಿನಿಮಾ­ಮಾಡಿದ ಋತು­ಪರ್ಣೊ, ಕೊನೆಗಾಲ­ದಲ್ಲಿ ತಮ್ಮ ಕೃತಿಗಳ ಮೂಲಕ ಲೈಂಗಿಕತೆಯ ನಿಷ್ಠುರ ಅನ್ವೇಷಣೆ­ಯಲ್ಲಿ ತೊಡಗಿ ‘ಮೆಮೊರೀಸ್ ಆಫ್ ಮಾರ್ಚ್’, ‘ಚಿತ್ರಾಂಗದಾ’ದಂಥ ಗಾಢಚಿತ್ರ­­ಗಳನ್ನು ನಿರ್ಮಿಸಿ  ಯಶಸ್ಸನ್ನು ಪಡೆದರು.

ಹಿಂದೆ ಜಾಹೀರಾತು ವೃತ್ತಿಯಲ್ಲಿ ದೊಡ್ಡ ಯಶ ಸಾಧಿಸಿದ್ದ ಋತುಪರ್ಣೊ, ತಮ್ಮ ತೆರೆಯ ಬದುಕನ್ನು ಆರಂಭಿಸಿದ್ದು ‘ಹೀರೇರ್ ಅಂಗ್ಟಿ’ ಚಿತ್ರದ ಮೂಲಕ. ಬಂಗಾಳಿ ಪರಂಪರೆಯ  ಅಂಶಗಳಿರುವ ಈ ಚಿತ್ರ ಋತುಪರ್ಣೊ ಅವರ ಮೊದಲ ಘಟ್ಟದ ಸಾಮಾಜಿಕ ವಸ್ತು ಅನ್ವೇಷಣಾ ಚಿತ್ರಗಳ ಮುನ್ನುಡಿಯ ಹಾಗಿದೆ. ಇಲ್ಲಿ ರೇ ಅವರ ಕಲಾತ್ಮಕತೆ ಮತ್ತು ಘಟಕ್ ಅವರ ಸಂಸ್ಕೃತಿಪರತೆ ಮೇಳವಿಸಿವೆಯಲ್ಲದೆ ಮಧ್ಯಮವರ್ಗವನ್ನು ಸೆಳೆಯುವ ಜನಪ್ರಿಯತೆಯ ಹೊಸ ಅಂಶವೂ ಸೇರಿಕೊಂಡಿದೆ. ಮಕ್ಕಳ ಮತ್ತು ಸ್ತ್ರೀ ಪಾತ್ರಗಳನ್ನು ತಳಮಟ್ಟ ಚಿತ್ರಿಸಬಲ್ಲ ಅವರ ಕೌಶಲವೂ ಈ ಚಿತ್ರದಲ್ಲಿ ಸ್ಪಷ್ಟವಾಗಿದೆ. 

ಮುಂದೆ ಹೆಚ್ಚು ಪ್ರಬುದ್ಧರಾದ ಮೇಲೆ ಋತುಪರ್ಣೊ ಅವರು ಗ್ರಾಮೀಣ ಬಂಗಾಳದ ವಸ್ತುವನ್ನೂ ಇನ್ನೂ ಆಳವಾಗಿ ರೂಪಿಸಿದ್ದು ‘ಅಂತರ್‌ಮಹಲ್’ ಚಿತ್ರದಲ್ಲಿ. ಮೊದಲ ಮಡದಿಗೆ ಮಗು ಹುಟ್ಟಿಸಲಾಗದ ಜಮೀನು­ದಾರ ಪುತ್ರೋತ್ಪತ್ತಿಗಾಗಿ ಕಿರಿವಯಸ್ಸಿನ ಎರಡನೇ ಹೆಂಡತಿಯನ್ನು ಕಟ್ಟಿಕೊಂಡ ಮೇಲೂ ಷಂಡನಾಗಿಯೇ ಉಳಿಯುತ್ತಾನೆ.

ಪುತ್ರವಂತ­ನಾಗುವ ಇಚ್ಛೆಯಿಂದ ಪುರೋಹಿತರು ಹೇಳಿದ ಅತ್ಯಂತ ಹೇಯವಾದ, ಹೆಂಗಸರಿಗೆ ಅಪಮಾನ­ಕಾರಿ­ಯಾದ ಆಚರಣೆಗಳಲ್ಲಿ ತೊಡಗುವ ದುರಂತ ಇಲ್ಲಿನ ವಸ್ತು. ಜೊತೆಗೆ ಈ ಚಿತ್ರ ವಸಾಹತುಶಾಹಿ ಪ್ರಭಾವಗಳ ದುರಂತವನ್ನೂ ಮನಕಲಕುವಂತೆ ತೋರಿಸುತ್ತದೆ. ವಸಾಹತು­ಶಾಹಿ ಪ್ರಭಾವದ ಅಂತರ್ವಿರೋಧ­ಗಳನ್ನು  ಗಂಡಾಳಿಕೆಯನ್ನು ಇಷ್ಟು ಶಕ್ತಿಯುತ­ವಾಗಿ ಚಿತ್ರಿಸುವ ಸಿನಿಮಾಗಳು ಅಪರೂಪ.

ಋತುಪರ್ಣೊ ಅವರ ಮೊದಲ ಘಟ್ಟದ ಮಿಕ್ಕ ಚಿತ್ರಗಳೆಲ್ಲವೂ ನಗರ ಕೇಂದ್ರಿತವಾಗಿದ್ದು ಬದಲಾಗುತ್ತಿರುವ ಜಗತ್ತಿನಲ್ಲಿ ಜಟಿಲಗೊಳ್ಳುತ್ತಿ­ರುವ ಮಧ್ಯಮವರ್ಗೀಯ ಮಾನವತಾ ಸಂಬಂಧ­ಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತವೆ. ಇವತ್ತು ಬಾಲಿವುಡ್‌ನಲ್ಲಿ ಜನಪ್ರಿಯ­ವಾಗಿರುವ ವಿವಾಹಬಾಹಿರ ಪ್ರೇಮಸಂಬಂಧ­ವನ್ನು ಆಧರಿಸಿದ ಚಿತ್ರ ‘ದೋಸರ್’. ಆದರೆ ಅದನ್ನು ಋತುಪರ್ಣೊ ನಿರ್ವಹಿಸುವ ಬಗೆ ಅತ್ಯಂತ ಮಾನವೀಯವೂ ಹೃದಯಸ್ಪರ್ಶಿಯೂ ಆಗಿದೆ. ಇಂಥ ಸಂಬಂಧಗಳಿಂದಾದ ದುರಂತ­ಗಳನ್ನೂ ದಾಟಿ ಗಂಡಹೆಂಡಿರ ಪ್ರೇಮ ಉಳಿದು ಬೆಳೆಯುವ ವಿನೂತನ ಅನುಭವವನ್ನು ಈ ಚಿತ್ರ ಹಿಡಿದಿಟ್ಟಿದೆ. 

ಋತುಪರ್ಣೊ ಅವರ‘ಶುಭ­ಮುಹೂರ್ತೊ’, ‘ಅಬೋಹೊಮಾನ್’, ‘ಖೇಲಾ’, ‘ಲಾಸ್ಟ್ ಲಿಯರ್’ ಮುಂತಾದ ಚಿತ್ರಗಳು ಸಿನಿಮಾ ಜಗತ್ತಿನ ದ್ವಂದ್ವಗಳನ್ನು ಸೆರೆಹಿಡಿದರೆ ‘ಶೊಬ್ ಚೊರಿತ್ರೋ ಕಾಲ್ಪನಿಕ್’ ಕವಿಯ ಮತ್ತು ಅವನ ಹೆಂಡತಿಯ ಬದುಕಿನ ತುಮುಲಗಳನ್ನು ಧ್ಯಾನಿಸು­ತ್ತದೆ. ಹೆಂಡತಿಯನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಅತ್ಯಂತ ಯಶಸ್ವಿ ಕವಿಯಾದ ಗಂಡನಿಗೆ ಹೇಸಿ ಇನ್ನೊಬ್ಬನ ಜೊತೆಗೆ ಹೋಗಲು ಹೆಂಡತಿ ತೀರ್ಮಾನಿಸುತ್ತಾಳೆ. ಆದರೆ ಇಷ್ಟರಲ್ಲಿ ಗಂಡ ಅಕಾಲಮರಣಕ್ಕೊಳಗಾಗಿ ಆ ನಂತರ ಹೆಂಡತಿಯನ್ನು ಅವನ ಕಲ್ಪನೆಯ ಜಗತ್ತು ಆವರಿಸಿ­ಕೊಳ್ಳುತ್ತದೆ. ಅವನ ಸೆಳೆತದಿಂದ ಬಿಡಿಸಿ­ಕೊಳ್ಳ­ಲಾರದ ಹೆಂಡತಿ ತನ್ನ ಪ್ರಿಯಕರನಿಂದಲೇ ದೂರವಾಗುತ್ತಾಳೆ. ತಾನು ಪ್ರೀತಿಸಿದ ಗಂಡನ ಕಾವ್ಯವ್ಯಕ್ತಿತ್ವಕ್ಕೇ ಬದ್ಧಳಾಗಿ ಉಳಿಯುತ್ತಾಳೆ.

ವ್ಯಕ್ತಿಸಂಬಂಧಗಳ ಈ ಪಲ್ಲಟಗಳನ್ನು ತಳ­ಮುಟ್ಟಿ­ನೋಡುವ ಋತುಪರ್ಣೊ ಅವರ ಚಿತ್ರ­ಗಳು ಫಾರ್ಮುಲಾಗಳಿಗೆ ಹೊರತಾಗಿಯೂ ಗಣನೀಯ ಜನಪ್ರಿಯತೆ ಗಳಿಸಿದವು. ತಮ್ಮ ಕಲಾತ್ಮಕ ಎಚ್ಚರವನ್ನೂ  ಕಾದುಕೊಂಡವು. ಆಧುನಿಕರಂತೆ ಋತುಪರ್ಣೊ ಅವರು ಸಂಪ್ರ­ದಾಯ­ಗಳನ್ನು ಸಿನಿಕತನದಿಂದ ಗೇಲಿ ಮಾಡಲಿಲ್ಲ. ಅಥವಾ ವ್ಯಾಪಾರಿ ಸಿನಿಮಾಗಳಂತೆ ಅವನ್ನು ಸಂಭ್ರಮಿಸಲೂ ಇಲ್ಲ. ಆದರೆ ಪರಂಪರೆಗಳು ಅರ್ಥಹೀನವಾಗುತ್ತಿರುವ ಪ್ರಕ್ರಿಯೆಯನ್ನು ಮತ್ತು ಹೊಸತರ ಬರ್ಬರತೆಯನ್ನು ಒಟ್ಟೊಟ್ಟಿಗೆ ಹಿಡಿದಿಟ್ಟವು.

ಹೀಗೆ ಮಾಡುವಲ್ಲಿ ಋತುಪರ್ಣೊ ಅವರು ಬಂಗಾಳಿ ಸಂಸ್ಕೃತಿಯ ಎಲ್ಲ ಗಾಢ ಅಂಶಗಳನ್ನೂ ತಮ್ಮ ಚಿತ್ರಗಳಲ್ಲಿ ತೋರಿಕೆಯ ಸಾಮಗ್ರಿಗಳನ್ನಾಗಿಸದೆ ಅಭಿವ್ಯಕ್ತಾತ್ಮಕವಾಗಿ ಬಳಸಿ­ಕೊಂಡರು, ಘಟಕ್ ಅವರ ಹಾಗೆ. ಆದ್ದರಿಂದ ದೃಶ್ಯ ಕೌಶಲದಷ್ಟೇ ಪರಿಣಾಮಕಾರಿ­ಯಾಗಿ ಕಾವ್ಯ ಮತ್ತು ಸಂಗೀತವನ್ನು ವಿಶೇಷವಾಗಿ ಜನಪದ ಮತ್ತು ಜನಪ್ರಿಯ ರವೀಂದ್ರ ಸಂಗೀತ­ವನ್ನು, ವೈಷ್ಣವ ಪರಂಪರೆಯ ಅಂಶಗಳನ್ನು   ಅವರು ಬಳಸಿಕೊಂಡರು.

ಆಧುನಿಕ ಬಂಗಾಳಿ ಸಂಸ್ಕೃತಿಯ ನಿರ್ಮಾತೃ­ವಾದ ರವೀಂದ್ರನಾಥ ಟ್ಯಾಗೋರರ ಪ್ರಭಾವ ಬಂಗಾಳಿ ಸಿನಿಮಾದ ಮೇಲೆ ಗಾಢವಾಗಿಯೇ ಇದೆ. ರವೀಂದ್ರರ ಪ್ರಕೃತಿಪ್ರೇಮ ಮತ್ತು ನಾದ­ಮಯತೆ  ಘಟಕ್ ಅವರ ಚಿತ್ರಗಳಲ್ಲಿ ಹಾಸು­ಹೊಕ್ಕಾ­ಗಿದೆ. ರೇ ಅವರು ರವೀಂದ್ರರ ಕತೆ-ಕಾದಂಬರಿ­ಗಳನ್ನು ಆಧರಿಸಿ ಚಿತ್ರನಿರ್ಮಾಣ ಮಾಡಿ­ದರು. ಅಷ್ಟೇ ಯಶಸ್ವಿಯಾಗಿ ಋತು­ಪರ್ಣೊ ಅವರು ರವೀಂದ್ರರ ‘ಚೊಖೆರ್ ಬಾಲಿ’ ಮತ್ತು  ‘ನೌಕಾಡೂಬಿ’ಗಳನ್ನು ಚಿತ್ರೀಕರಿಸಿದ್ದಾರೆ. ಅವರ ಕೊನೆಯ ಚಿತ್ರ ‘ಜೀಬೊನ್ ಸ್ಮೃತಿ’ ರವೀಂದ್ರರ ಆತ್ಮಚರಿತ್ರೆಯನ್ನಾಧರಿಸಿದ ಸಾಕ್ಷ್ಯ­ಚಿತ್ರ­ವಾಗಿದ್ದು ಈ ಕುರಿತ ರೇ ಅವರ ಚಿತ್ರದಷ್ಟೇ ಶ್ರೇಷ್ಠವೂ, ಆದರೆ ಅದಕ್ಕಿಂತಾ ತುಂಬಾ ಭಿನ್ನವೂ ಆಗಿದೆ. ರವೀಂದ್ರರ ಬದುಕಿನ ಅತೀವ ಒಂಟಿತನ ಮತ್ತು ದುರಂತಗಳ ಸರಮಾಲೆಯನ್ನು ಈ ಚಿತ್ರ ದರ್ಶಿಸುತ್ತದೆ.

ಬಂಗಾಳಿ ಸಂಸ್ಕೃತಿಯ ಹಲಮಜಲುಗಳನ್ನು ಅರ್ಥಪೂರ್ಣವಾಗಿ ಅಳವಡಿಸಿಕೊಳ್ಳುವುದು ಋತುಪರ್ಣೊ ಅವರ ವಿಶೇಷ. ಆದರೆ ಬಾಕ್ಸ್ ಆಫೀಸ್ ಹಿಟ್‌ಗಳಾದ ಮುಖ್ಯಧಾರೆಯ ಚಿತ್ರ­ಗಳಲ್ಲಿ  ಸಾಂಸ್ಕೃತಿಕ ದಾರಿದ್ರ್ಯ ಮತ್ತು ಅಜ್ಞಾನ ತಾಂಡವಾಡುತ್ತಿರುತ್ತವೆ.

ಋತುಪರ್ಣೊ ಅವರ ರವೀಂದ್ರ ಕೇಂದ್ರೀಯತೆ, ಕೊನೆಗಾಲದಲ್ಲಿ ಅವರನ್ನು ಗಾಢವಾಗಿ ಕಾಡಿದ ಲೈಂಗಿಕತೆಯ ಸಮಸ್ಯೆಗಳು ಮತ್ತು ಕಲೆಯ ನೆಲೆಯನ್ನು ಕುರಿತ ಅವರ ದೀರ್ಘ ಕಾಳಜಿಗಳು ಮುಪ್ಪುರಿಗೊಂಡದ್ದು ಅವರ ‘ಚಿತ್ರಾಂಗದಾ’ದಲ್ಲಿ. ಇಲ್ಲಿ ಕಥಾನಾಯಕ ಒಬ್ಬ ನಾಟಕ ನಿರ್ದೇಶಕ. ಈ ಭೂಮಿಕೆಯನ್ನು ಋತುಪರ್ಣೊ ಅವರೇ ನಿರ್ವಹಿಸಿದ್ದಾರೆ. ಈತ ಟ್ಯಾಗೋರರ ‘ಚಿತ್ರಾಂಗದಾ’ ನಾಟಕವನ್ನು ರಂಗಮಂಚಕ್ಕೆ ತರುವ ಪ್ರಯತ್ನದಲ್ಲಿ ತೊಡಗಿ­ದ್ದಾಗ ತನ್ನ ತಂಡಕ್ಕೆ ಡ್ರಂ ಬಾರಿಸಲು ಬರುವ ಒಬ್ಬ ವಿಲಕ್ಷಣ ವ್ಯಕ್ತಿಯ ಸಲಿಂಗಪ್ರೇಮದ ಅದಮ್ಯ ಸೆಳೆತಕ್ಕೆ ಸಿಗುತ್ತಾನೆ.

ಅವರಿಬ್ಬರ ಪ್ರೇಮ ಪರಾ­ಕಾಷ್ಠತೆ ತಲುಪುವುದರೊಳಗೆ ‘ಚಿತ್ರಾಂಗದಾ’ ಯಶಸ್ವಿಯಾಗಿ ಪ್ರಯೋಗವಾಗು­ತ್ತದೆ. ಆದರೂ ಕಥಾನಾಯಕನಿಗೆ ಸಮಾಧಾನ­ವಿಲ್ಲ. ಗಂಡಿನಂತೆ ಬೆಳೆದು ಅರ್ಜುನನನ್ನು ಕಂಡೊಡನೆ ಹೆಣ್ಣಾಗಿ ತಿರುಗುವ ಚಿತ್ರಾಂಗದಾಳ ಪರಿವರ್ತನೆಯ ಸಂಕೀರ್ಣತೆಯನ್ನು ತಾನು ಪ್ರಾಮಾಣಿಕವಾಗಿ ಹಿಡಿಯಲಿಲ್ಲವೆಂಬ ಅಳುಕು ಅವನಿಗೆ. ತನ್ನ ಸಲಿಂಗ ಪ್ರೇಮದ ಇನ್ನೊಂದು ಆಯಾಮವನ್ನರಿಯಲು ಅವನು ಶಸ್ತ್ರಚಿಕಿತ್ಸೆಯ ದ್ವಾರಾ ಹೆಣ್ಣಾಗಲೆಂದು ಮೊಲೆಗಳ ಕಸಿ ಮಾಡಿಸಿ­ಕೊಳ್ಳುತ್ತಾನೆ. ಮಗು ಹಡೆಯಲು ತಯಾರಾಗುತ್ತಾನೆ.

ಅದರೆ ಅದೇ ಸಮಯದಲ್ಲಿ  ತಂಡದ ನಟಿಯೊಬ್ಬಳಲ್ಲಿ ಅನುರಕ್ತನಾದ ಅವನ ಪ್ರೇಮಿ ತನಗೆ ಕೈಕೊಡುತ್ತಾನೆ. ಭ್ರಮನಿರಸನ ಹೊಂದಿ ಕಥಾನಾಯಕ ತನ್ನ ಶಸ್ತ್ರಚಿಕಿತ್ಸೆಯನ್ನು ಕೈಬಿಟ್ಟು ಮತ್ತೆ ಗಂಡಾಗುವ ತೀರ್ಮಾನ ಕೈಗೊಳ್ಳು­ತ್ತಾನೆ. ಇಲ್ಲಿಗೆ ಮುಗಿದಂತೆ ಕಾಣುವ ಈ ಕತೆಯ ವಸ್ತು-ವಿನ್ಯಾಸದ ಅನುರಣನಗಳು ಅನೇಕ.  ಬಂಗಾಳದ ಶ್ರೇಷ್ಠ ನಿರ್ದೇಶಕರ ವಾಸ್ತವತಾ­ಪ್ರಧಾನ ಶೈಲಿ ಇಲ್ಲಿ ಸಾಂಕೇತಿಕತೆಯ ಕಡೆಗೆ ತಿರುಗಿ, ವಾಸ್ತವಿಕ ದೃಷ್ಟಿ ಮತ್ತು ಕಲ್ಪನೆಗಳ ನಡುಗೆರೆ ಅಳಿಸಿಹೋಗುತ್ತದೆ.

ಲೈಂಗಿಕತೆಯ ಅನಿರ್ದಿಷ್ಟತೆ ದಾರ್ಶನಿಕ ಎತ್ತರಗಳನ್ನು ಪಡೆದು ಬೌದ್ಧರ ಅನಿತ್ಯವಾದದ ರೀತಿಯ ಅನುಭವದ ಕಡೆಗೆ ಹೋಗುತ್ತದೆ. ಸದಾ ಪರಿವರ್ತನಶೀಲ ಜಗತ್ತಿನಲ್ಲಿ ತನ್ನ ಅಪೂರ್ಣ ಪ್ರೇಮ ಮತ್ತು ಲಿಂಗ­ಪರಿವರ್ತನೆಗಳೂ ಅನಿತ್ಯ ತಾಣಗಳೆಂದು ಕಥಾ­ನಾಯಕ  ಅರಿತುಕೊಳ್ಳುತ್ತಾನೆ. ಕಾವ್ಯ, ಸಂಗೀತ, ನೃತ್ಯ, ನಾಟಕಗಳನ್ನು  ಸಿನಿಮಾ ಕಲೆ­ಯಲ್ಲಿ ಅಪೂರ್ವವಾಗಿ ಹೆಣೆದಿರುವ ಈ ಚಿತ್ರ ಸಮ­ಕಾಲೀನ ಭಾರತೀಯ ಕಲೆಯ ಸೋಜಿಗವಾಗಿದೆ.

ಲೈಂಗಿಕತೆಯನ್ನು ರೋಚಕವಾಗಿ ತೋರಿಸಿ ಗಿರಾಕಿಗಳನ್ನು ಹೆಚ್ಚಿಸಿಕೊಳ್ಳುವ ಮುಖ್ಯಧಾರೆಯ ಸಿನಿಮಾಗಳಿಗೆ ವಿರುದ್ಧ ದೆಸೆಯಲ್ಲಿ ಹೋಗುವ ಈ ಸಿನಿಮಾ ತನ್ನ ದಾರ್ಶನಿಕತೆ ಮತ್ತು ಕಲಾತ್ಮಕತೆ­ಯಿಂದ ಅನನ್ಯವಾಗಿದೆ.
ಕಲಾತ್ಮಕ ಸಿನಿಮಾದವರಂತೆ ಋತುಪರ್ಣೊ ದಂತಗೋಪುರ ವಾಸಿಯಾಗಲಿಲ್ಲ. ಅಥವಾ ವ್ಯಾಪಾರಿ ಸಿನಿಮಾದವರಂತೆ ಮಾರುಕಟ್ಟೆಯ ಅಪರಾಧಗಳ ಜೊತೆಗಾರನೂ ಆಗಲಿಲ್ಲ. ತನ್ನನ್ನು ಬಿಟ್ಟುಕೊಡದೆ ಪರವನ್ನು ಗೆಲ್ಲುವ ತನ್ನ ಅಪೂರ್ವ ಕಲೆಗಾರಿಕೆಯಿಂದ ತನ್ನ ಇಡೀ ತಲೆಮಾರಿನ ಮನಗೆದ್ದ ಋತುಪರ್ಣೊ ಸಮಕಾಲೀನ ಭಾರತೀಯ  ಕಲೆಯ ಅತುಲ ಪ್ರತಿಭೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT