ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ, ಏಡ್ಸ್ ಸೋಂಕು: ಚಿಕಿತ್ಸೆಯೊಂದೇ ಸಾಕೇ?

Last Updated 28 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷದ ಡಿಸೆಂಬರ್ ಒಂದರಂದು ವಿಶ್ವ ಏಡ್ಸ್ ದಿನಾಚರಣೆ ಇರುತ್ತದೆ. ಎಚ್‌ಐವಿ ವಿರುದ್ಧ ಹೋರಾಡುವ ಸಲುವಾಗಿ ಜಗತ್ತಿನ ಜನರೆಲ್ಲ ಒಗ್ಗೂಡಲು, ಎಚ್‌ಐವಿ ಬಾಧಿತರಿಗೆ ಬೆಂಬಲ ಸೂಚಿಸಲು ಮತ್ತು ಈ ಕಾಯಿಲೆಗೆ ಬಲಿಯಾದವರನ್ನು ನೆನೆಯಲು ಇದೊಂದು ಅವಕಾಶ ಒದಗಿಸುತ್ತದೆ.

ವಿಶ್ವ ಏಡ್ಸ್ ದಿನಾಚರಣೆಯು ಜಾಗತಿಕ ಮಟ್ಟದ ಪ್ರಥಮ ಆರೋಗ್ಯ ದಿನಾಚರಣೆಯಾಗಿದ್ದು, 1988ರಲ್ಲಿ ಮೊದಲ ಬಾರಿಗೆ ಇದು ಜಾರಿಗೆ ಬಂತು.ಸಾಮಾನ್ಯವಾಗಿ ಈ ದಿನಾಚರಣೆಯ ಪ್ರಯುಕ್ತ ಜಾಥಾಗಳು, ಸಾರ್ವಜನಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಮತ್ತು ಚರ್ಚೆಗಳನ್ನು ಏರ್ಪಡಿಸಲಾಗುತ್ತದೆ.

ಇಷ್ಟೆಲ್ಲ ನಡೆಯುತ್ತಿದ್ದರೂ ಕಳೆದ ಒಂದು ದಶಕದಲ್ಲಿ ಈ ರೋಗ ನಿಯಂತ್ರಣಕ್ಕಾಗಿ ಏನೆಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಚಿಂತಿಸುತ್ತ್ದ್ದಿದ ನನಗೆ, ಜೈಪುರದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿದ ಪತ್ರಿಕಾ ಲೇಖನವೊಂದು ನೆನಪಿಗೆ ಬಂತು.

ಅಲ್ಲಿ ದಯಾಳು ಒಬ್ಬರು ಎಚ್‌ಐವಿ ಬಾಧಿತ ಮಕ್ಕಳಿಗಾಗಿ ಪಾಲನಾ ಕೇಂದ್ರವೊಂದನ್ನು ನಡೆಸುತ್ತಿದ್ದರು. ಆದರೆ ಈ ಸ್ಥಳವನ್ನು ಬಾಡಿಗೆಗೆ ಕೊಟ್ಟಿದ್ದ ವ್ಯಕ್ತಿ ಸ್ಥಳೀಯರ ಒತ್ತಡಕ್ಕೆ ಒಳಗಾಗಿ ಜಾಗ ಖಾಲಿ ಮಾಡುವಂತೆ ಅವರಿಗೆ ಸೂಚಿಸಿದ್ದ. ಇದರಿಂದ 19 ಮಕ್ಕಳನ್ನು ಒಳಗೊಂಡ ಈ ತಂಡ ಈಗ ಬೀದಿಗೆ ಬಿದ್ದಿದೆ. ಇವರಲ್ಲಿ ಬಹುತೇಕರು ದಿಕ್ಕುದೆಸೆ ಇಲ್ಲದ ಅನಾಥರಾಗಿದ್ದಾರೆ.

ಈ ರೋಗದ ಪರಿಣಾಮಗಳ ಬಗ್ಗೆ ನಮಗೆ ಸಾಕಷ್ಟು ತಿಳಿದಿದ್ದರೂ ನಾವು ಆ ಬಗ್ಗೆ ಸ್ವಲ್ಪವೇ ಕಾಳಜಿ ತೋರುತ್ತಿರುವುದು ಮಾತ್ರ ವಿರೋಧಾಭಾಸದಂತೆ ಕಾಣುತ್ತದೆ. ರೋಗದ ಚಿಕಿತ್ಸೆಗಾಗಿ ಅತ್ಯಾಧುನಿಕ ಔಷಧಗಳನ್ನು ನಾವು ಕಂಡುಹಿಡಿದಿದ್ದೇವೆ.

ರೋಗ ನಿಯಂತ್ರಣಕ್ಕಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಆದರೆ ಇವರೂ ನಮ್ಮಂತೆಯೇ ಮನುಷ್ಯರು, ತಮ್ಮದಲ್ಲದ ತಪ್ಪಿಗಾಗಿ ಕಾಯಿಲೆಯಿಂದ ನರಳುತ್ತಿರುವ ನತದೃಷ್ಟರು ಎಂಬುದನ್ನು ಮಾತ್ರ ಮರೆತೇಬಿಡುತ್ತೇವೆ.

ಮೈಸೂರಿನ ಸಮೀಪದ ಹಳ್ಳಿಯೊಂದರ ಇಬ್ಬರು ಮಕ್ಕಳಿಗೆ ಬಂದೊದಗಿರುವ ದುಃಸ್ಥಿತಿಯೂ ಈ ಸಂದರ್ಭದಲ್ಲಿ ನನ್ನ ನೆನಪಿಗೆ ಬರುತ್ತದೆ. ಈ ಮಕ್ಕಳ ತಂದೆ ತಾಯಿ ಇಬ್ಬರೂ ತೀರಿಕೊಂಡಿದ್ದು, ಅವರು ತಮ್ಮ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಚಾಲಕನಾಗಿದ್ದ ಅವರ ಅಪ್ಪ ಎಚ್‌ಐವಿಯಿಂದಾಗಿ 6 ವರ್ಷದ ಹಿಂದೆ ಸಾವಿಗೀಡಾದ. ಆಗ ತಾಯಿ ಮತ್ತು ಇಬ್ಬರು ಮಕ್ಕಳು ರೋಗದ ಪರೀಕ್ಷೆಗೆ ಒಳಗಾಗುವಂತೆ ಸ್ಥಳೀಯ ವೈದ್ಯರು ಸಲಹೆ ನೀಡಿದರು. ಆಗ ತಾಯಿಗೂ ಎಚ್‌ಐವಿ ಸೋಂಕು ತಗುಲಿದ್ದು ಬಹಿರಂಗವಾಯಿತು. ಅದೃಷ್ಟವಶಾತ್ ಮಕ್ಕಳು ಮಾತ್ರ ಪಾರಾಗಿದ್ದರು.

ಕೆಲ ತಿಂಗಳ ಬಳಿಕ, ರೋಗ ನಿರೋಧಕ ಶಕ್ತಿ ಕುಂದಿದ್ದ ತಾಯಿ ಕ್ಷಯರೋಗಕ್ಕೆ ಬಲಿಯಾದಳು. ಹೀಗೆ ಅನಾಥರಾದ ಮಕ್ಕಳಿಂದ ತಮಗೂ ತಮ್ಮ ಮಕ್ಕಳಿಗೂ ಎಚ್‌ಐವಿ ಸೋಂಕು ತಗುಲಿಬಿಡಬಹುದು ಎಂದು ಆತಂಕಗೊಂಡ ಹಳ್ಳಿಗರು ಅವರನ್ನು ದೂರ ಇಟ್ಟರು.

ಅವರಿದ್ದ ಮನೆಗೆ ಸ್ವಲ್ಪ ದೂರದಲ್ಲಿ ವಾಸಿಸುತ್ತಿದ್ದ ಮಕ್ಕಳ ಅಜ್ಜಿ ಅವರನ್ನು ಕರೆತಂದು ತನ್ನ ಬಳಿ ಇಟ್ಟುಕೊಂಡಳು.ಆದರೆ ಅವರನ್ನು ಸಲಹಲು ಆಕೆಯ ನೆರವಿಗೆ ಯಾರೂ ಇಲ್ಲದಿದ್ದರಿಂದ ಆಕೆ ಅನಿವಾರ್ಯವಾಗಿ ಕೂಲಿ ಕೆಲಸಕ್ಕೆ ಹೋಗಬೇಕಾಯಿತು.

ಹೀಗೆ ದಿನವಿಡೀ ದುಡಿಯುವ ಅಜ್ಜಿಗೆ ಮೊಮ್ಮಕ್ಕಳ ಸಂಗಡ ಹೆಚ್ಚು ಹೊತ್ತು ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ಅವರ ಹೊಟ್ಟೆಗೆ ನಾಲ್ಕು ತುತ್ತು ಅನ್ನ ಕಾಣಿಸಲಾದರೂ ಆಕೆಗೆ ಸಾಧ್ಯವಾಗುತ್ತಿದೆ.
 
ಸುಮಾರು 65 ವರ್ಷದ ಈ ಅಜ್ಜಿಗೆ ಅಕಸ್ಮಾತ್ ಏನಾದರೂ ಹೆಚ್ಚು ಕಡಿಮೆಯಾದರೆ ಈ ಮಕ್ಕಳ ಗತಿಯೇನು ಎಂದು ಯೋಚಿಸಿದರೆ ನನ್ನ ಮೈ ಜುಂ ಎನ್ನುತ್ತದೆ.

ಎಂಟು ವರ್ಷದ ಬಾಲಕ ಶಿವನದು (ಹೆಸರು ಬದಲಿಸಲಾಗಿದೆ) ಇದಕ್ಕಿಂತ ಭಿನ್ನವಾದ ಕಥೆ. ಮೈಸೂರಿನ ಪಾನಿ ಪೂರಿ ಅಂಗಡಿಯೊಂದರಲ್ಲಿ ದುಡಿಯುವ ಅವನು ಪ್ರತಿ ದಿನ 15 ರೂಪಾಯಿ ಸಂಪಾದಿಸುತ್ತಾನೆ. ನಾನು ಒಮ್ಮೆ ಅವನನ್ನು ಮಾತಿಗೆಳೆಯಲು ಮುಂದಾದೆ.

`ಈ ವಯಸ್ಸಿನಲ್ಲಿ ನೀನು ಶಾಲೆಯಲ್ಲಿರಬೇಕು, ದುಡಿಯಲು ಬರಬಾರದು~ ಎಂದು ತಿಳಿ ಹೇಳಲು ಯತ್ನಿಸಿದೆ. ಆಗ ಅವನು ಒಮ್ಮೆ ಮುಗ್ಧವಾಗಿ ನಕ್ಕನಷ್ಟೇ, ಬೇರೇನೂ ಮಾತನಾಡಲಿಲ್ಲ.

ಅವನ ಬಗ್ಗೆ ಹೆಚ್ಚು ಮಾಹಿತಿ ತಿಳಿಯಬಯಸಿದ ನಾನು ಶಾಲೆಗೆ ಹೋಗುವಂತೆ ಅವನ ಮೇಲೆ ಒತ್ತಡ ಹೇರಲು ಆರಂಭಿಸಿದೆ. ಆಗ ಶಿವ ತನ್ನ ಕರುಣಾಜನಕ ಕಥೆಯನ್ನು ನನ್ನ ಮುಂದೆ ಬಿಚ್ಚಿಟ್ಟ.

ಏಡ್ಸ್ ಪೀಡಿತರಾಗಿದ್ದ ಅವನ ಇಬ್ಬರೂ ಪೋಷಕರು ಬದುಕಿದ್ದೂ ಸತ್ತಂತಾಗಿದ್ದರು. ಹಳ್ಳಿಯಲ್ಲಿ ಅವರ ಕುಟುಂಬವನ್ನು ಬಹಿಷ್ಕರಿಸಿದ ನಂತರ ಅವರು ಮೈಸೂರಿಗೆ ವಲಸೆ ಬಂದಿದ್ದರು.

ಅತ್ಯಂತ ನಿಶ್ಶಕ್ತರಾಗಿದ್ದ ತಂದೆ ತಾಯಿ ಯಾವೊಂದು ದೈಹಿಕ ಶ್ರಮದ ಕೆಲಸವನ್ನೂ ಮಾಡಲು ಅಶಕ್ತರಾಗಿದ್ದರು. ಯಾರೋ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ವಿಚಾರವನ್ನು ತಿಳಿಸಿ, ಆಗಷ್ಟೇ ಅವರು ಚಿಕಿತ್ಸೆ ಪಡೆಯಲು ಆರಂಭಿಸಿದ್ದರು.

ಇದರಿಂದ ಆ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ ಶಿವ ಮಾತ್ರ ಆಗಿದ್ದ. ಅವನು ದುಡಿದು ತಂದ ಹಣದಲ್ಲಿ ಎಲ್ಲರೂ ಹೊಟ್ಟೆ ಹೊರೆಯಬೇಕಿತ್ತು. ಪೋಷಕರಿಗೆ ಬಂದ ಕಾಯಿಲೆಯು ಶಿವನ ಬಾಲ್ಯವನ್ನೇ ಕಸಿದುಕೊಂಡಿತ್ತು.

ಶಿವನಿಗೆ ಸೋಂಕು ತಗುಲಿರದಿದ್ದುದೇ ಆ ಕುಟುಂಬಕ್ಕಿದ್ದ ಒಂದೇ ಸಮಾಧಾನದ ಸಂಗತಿ. ಶಾಲೆಯಲ್ಲಿ ಮಕ್ಕಳೊಂದಿಗೆ ನಕ್ಕು ನಲಿಯಬೇಕಾದ ವಯಸ್ಸಿನಲ್ಲಿ, ಹೀಗೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಶಿವ ದೊಡ್ಡವರಂತೆ ದುಡಿಮೆಗೆ ಕೈ ಹಚ್ಚಿದ್ದಾನೆ.

ಇವೆಲ್ಲವೂ ದೂರದಲ್ಲೆಲ್ಲೋ ನಡೆಯುವ ಅಲ್ಲೊಂದು ಇಲ್ಲೊಂದು ಘಟನೆಗಳಂತೆಯೇ ಹಲವರಿಗೆ ಭಾಸವಾಗಬಹುದು. ರೋಗ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ನಾವು ಎಷ್ಟೇ ಸಮರ್ಥಿಸಿಕೊಂಡರೂ ಜಗತ್ತಿನಾದ್ಯಂತ ಒಬ್ಬರು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡ ಸುಮಾರು 17 ದಶಲಕ್ಷ ಮಕ್ಕಳು ಇದ್ದಾರೆ ಎಂಬುದಂತೂ ಸತ್ಯ.

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘಟನೆ  (ಎನ್‌ಎಸಿಒ) ಮತ್ತು ಯುಎನ್‌ಏಡ್ಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ 2.5ರಿಂದ 3.1 ದಶಲಕ್ಷದಷ್ಟು ಜನರಿಗೆ ಎಚ್‌ಐವಿ ಸೋಂಕು ತಗುಲಿದೆ.

ಇವರಲ್ಲಿ 15 ವರ್ಷದೊಳಗಿನ ಮಕ್ಕಳು, 50 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳೂ ಸೇರಿದ್ದಾರೆ. 15 ವರ್ಷದೊಳಗಿನ ಸುಮಾರು 70 ಸಾವಿರ ಮಕ್ಕಳು ಸೋಂಕು ಪೀಡಿತರಾಗಿದ್ದಾರೆ. ಪ್ರತಿ ವರ್ಷ 21 ಸಾವಿರ ಮಕ್ಕಳಿಗೆ ತಾಯಿಯ ಮೂಲಕ ಸೋಂಕು ರವಾನೆಯಾಗುತ್ತಿದೆ.

ಹೀಗೆ ದೇಶದಲ್ಲಿ ಎಚ್‌ಐವಿ ಸೋಂಕು ಬಾಧಿತ ಮಕ್ಕಳು ಅಥವಾ ಈ ರೋಗಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥರಾಗುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಅಧಿಕ ಸಂಖ್ಯೆಯ   ಎಚ್‌ಐವಿ ಪೀಡಿತರನ್ನು ಹೊಂದಿರುವ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಮಣಿಪುರ ಮತ್ತು ನಾಗಾಲ್ಯಾಂಡ್‌ನಂತಹ ರಾಜ್ಯಗಳಲ್ಲಿ ಸಾಕಷ್ಟು ಕಂದಮ್ಮಗಳ ಬದುಕು ಎಚ್‌ಐವಿ ಸೋಂಕು ಮತ್ತು ಏಡ್ಸ್‌ನಿಂದ ಜರ್ಜರಿತವಾಗುತ್ತಿದೆ.

ರೋಗಪೀಡಿತ ಪೋಷಕರು ಹಾಗೂ ಒಡ    ಹುಟ್ಟಿದವರನ್ನು ಸಲಹುವ ಹೊಣೆ ಹೊತ್ತು  ಕೊಳ್ಳುವ ಮಕ್ಕಳ ಸಂಖ್ಯೆ ಅಧಿಕವಾಗುತ್ತಿರುವುದರಿಂದ ಮಕ್ಕಳೇ ಮನೆ ನಡೆಸುವ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ.

ಕಳೆದ ಒಂದು ದಶಕದಲ್ಲಿ ಬೀದಿ ಮಕ್ಕಳು ಮತ್ತು ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಿರುವುದೂ ಈ ರೋಗದ ಫಲಶ್ರುತಿಯೇ ಆಗಿದೆ.ಕರ್ನಾಟಕವೊಂದರಲ್ಲೇ ಪ್ರಸ್ತುತ ಸುಮಾರು 11 ಸಾವಿರ ಮಕ್ಕಳಿಗೆ ಎಚ್‌ಐವಿ/ಏಡ್ಸ್ ತಗುಲಿದೆ.
 

2007- 10ರ ಅವಧಿಯಲ್ಲಿ ಸುಮಾರು 300 ಮಕ್ಕಳು ಇದೇ ಕಾರಣದಿಂದ ಸಾವಿಗೀಡಾಗಿದ್ದಾರೆ. ಹೀಗೆ ಅನಾಥರಾಗುವ ಮತ್ತು ನಿಂದನೆಗೆ ಗುರಿಯಾಗುವ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಯೇ ಅಧಿಕವಾಗಿರುತ್ತದೆ.

ಅಲ್ಲದೆ ಇಂತಹವರು ಸೂಕ್ತ ಆಹಾರ ಭದ್ರತೆ ಇಲ್ಲದೆ ಯಾರ‌್ಯಾರದೋ ಮನೆಗಳಲ್ಲಿ ದುಡಿಯುತ್ತಾ ತೀವ್ರ ಒತ್ತಡ ಮತ್ತು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಜೊತೆಗೆ ಅವರು ಎಚ್‌ಐವಿ ಸೋಂಕಿಗೆ ಒಳಗಾಗುವ ಅಪಾಯವಂತೂ ಇದ್ದೇ ಇರುತ್ತದೆ.

ಕುಟುಂಬ, ಸಮುದಾಯ ಮತ್ತು ರಾಜ್ಯಗಳಿಗೆ ತಕ್ಕಂತೆ ಈ ಮಕ್ಕಳಿಗೆ ವಿಭಿನ್ನ ಅನುಭವಗಳಾಗುತ್ತವೆ. ತಮ್ಮನ್ನು ಸಲಹುವವರ ಜೊತೆಗಿನ ಅವರ ಸಂಬಂಧ, ಕುಟುಂಬ ಮತ್ತು ಸಮುದಾಯದ ಆರ್ಥಿಕ ಸ್ಥಿತಿ ಮುಂತಾದ ಕಾರಣಗಳು ಮಕ್ಕಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತವೆ.
 
ಇಂತಹ ಅನಾಥ ಮತ್ತು ಶೋಷಿತ ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸುವುದೆಂದರೆ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಮತ್ತು ರಕ್ಷಣೆಯಂತಹ ಕನಿಷ್ಠ ಮೂಲ ಸೌಲಭ್ಯಗಳನ್ನು ಅವರಿಗೆ ಒದಗಿಸುವುದೇ ಆಗಿದೆ. ಅವರನ್ನು ಪೋಷಿಸುವ ಕುಟುಂಬಗಳು ಮತ್ತು ಸಮುದಾಯಗಳಿಗೆ ಕಾನೂನು, ನೀತಿ ಮತ್ತು ಸೇವೆಯ ಬೆಂಬಲ ಇರಲೇಬೇಕು.

ಇಲ್ಲದಿದ್ದರೆ ಇಂತಹ ಸ್ಥಿತಿ ತಲುಪಿದ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಗಗನಕುಸುಮವೇ ಆಗಿ ಅವರು ಎಲ್ಲ ಬಗೆಯ ನೆರವಿನಿಂದ ವಂಚಿತರಾಗುತ್ತಾರೆ.

ಅನಾಥ, ಶೋಷಿತ ಮಕ್ಕಳಿಗಾಗಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳ ಮೂಲಕ ಸ್ವಲ್ಪಮಟ್ಟಿಗೆ ನೆರವಾಗುತ್ತಿವೆಯಾದರೂ ಈ ವಿಷಯದಲ್ಲಿ ನಾವು ಇನ್ನೂ ಹೊರಬೇಕಾಗಿರುವ ವಿಶಾಲವಾದ ಸಾಮಾಜಿಕ ಹೊಣೆಗಾರಿಕೆಯ ಅರಿವು ನಮಗಾಗಬೇಕಿದೆ.
 
ಇಂತಹ ಕಾರ್ಯಕ್ರಮಗಳಿಗೆ ದಾನಿಗಳ ನೆರವಿನ ಪ್ರಮಾಣ ಕಡಿಮೆಯಾಗುತ್ತಿರುವುದನ್ನೂ ನಾವು ಗಮನಿಸಬೇಕಾಗಿದೆ. ನಾಗರಿಕರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸುವುದೊಂದೇ ಈ ಮಕ್ಕಳ ಸೂಕ್ತ ರಕ್ಷಣೆಗೆ ಇರುವ ಏಕೈಕ ಮಾರ್ಗ.

ಅಲ್ಲದೆ ಬರೀ ದಾನಿಗಳ ನೆರವನ್ನೇ ಕಾಯುತ್ತಾ ಕುಳಿತುಕೊಳ್ಳುವ ಬದಲು ಸಮುದಾಯಗಳೇ ಸ್ವತಃ ನಡೆಸಿ, ನಿರ್ವಹಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕಾಗಿದೆ.
 
ಶಿಕ್ಷಣ ಮತ್ತು ಆಹಾರ ಭದ್ರತೆಯಂತಹ ಕನಿಷ್ಠ ಮಟ್ಟದ ನೆರವು ನೀಡಲು ಪ್ರತಿ ಮಗುವಿಗೆ ವರ್ಷಕ್ಕೆ ಸುಮಾರು 2500 ರೂಪಾಯಿ ವೆಚ್ಚ ತಗುಲುತ್ತದೆಂಬ ಅಂದಾಜಿದೆ.

ನಮ್ಮ ಆರ್ಥಿಕ ವೃದ್ಧಿ ದರ ಶೇ 8ರಲ್ಲಿರುವಾಗ ಇಷ್ಟು ಪ್ರಮಾಣದ ಹಣ ಹೊಂದಿಸುವುದು ನಮ್ಮ ಜನರಿಗೆ ಕಷ್ಟವಾಗಲಾರದು. ಆದರೆ ಇಲ್ಲಿ ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಇನ್ನೂ ಒಂದು ವಿಷಯವೆಂದರೆ, ಈ ಹಣ ಏನಿದ್ದರೂ ಮಕ್ಕಳ ಮೂಲ ಅಗತ್ಯಕ್ಕೆ ಬಳಕೆಯಾಗುತ್ತದಷ್ಟೇ.

ಈ ಮಕ್ಕಳಿಗೆ ನಿಜವಾಗಿ ಬೇಕಿರುವುದು ಪ್ರೀತಿ, ವಾತ್ಸಲ್ಯ, ಕಳೆದುಕೊಂಡ ಬಾಲ್ಯವನ್ನು ಮರಳಿ ಪಡೆಯುವ ಅವಕಾಶ.

ಅಲ್ಲದೆ ಇದೆಲ್ಲಕ್ಕಿಂತಲೂ ಮಿಗಿಲಾಗಿ, ತಾವು ನೆಲೆಸಿರುವ ಸಮಾಜದಲ್ಲಿ ಕರುಣೆ ಇದೆ, ಯಾವುದೇ ತಾರತಮ್ಯ ಇಲ್ಲದೆ ಕಳಂಕ ರಹಿತವಾಗಿ ಅದು ನಮ್ಮನ್ನು ಸಲಹುತ್ತದೆ ಎಂಬ ಭಾವನೆ ಅವರಲ್ಲಿ ಮೂಡುವಂತೆ ನೋಡಿಕೊಳ್ಳಬೇಕಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT