ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಾ ಲವ್ಲೇಸ್: ಪ್ರೊಗ್ರಾಮಿಂಗ್ ಮಾತೆ

Last Updated 29 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಅಮೆರಿಕದಲ್ಲಿರುವ ಕಂಪ್ಯೂಟರ್ ಸಂಬಂಧಿ ಉದ್ಯೋಗಗಳಲ್ಲಿರುವ ಮಹಿಳೆಯರ ಸಂಖ್ಯೆ ಶೇಕಡಾ 25ರಷ್ಟು. ಇದರಲ್ಲಿ ಬಿಳಿಯರಲ್ಲದವರ ಸಂಖ್ಯೆ ಶೇಕಡಾ 10ಕ್ಕಿಂತಲೂ ಕಡಿಮೆ. ಏಷ್ಯಾದ ಮಟ್ಟಿಗೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ದೇಶವಾಗಿರುವ ಭಾರತದಲ್ಲಿನ  ಪರಿಸ್ಥಿತಿ ಬಹಳ ವ್ಯತ್ಯಾಸವೇನೂ ಇಲ್ಲ.

ಆರು ವರ್ಷಗಳ ಹಿಂದೆ ಮಾಹಿತಿ ತಂತ್ರಜ್ಞಾನ ಉದ್ದಿಮೆಯಲ್ಲಿದ್ದ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇಕಡಾ 26. ಇದು 2012ರ ಹೊತ್ತಿಗೆ ಶೇಕಡಾ 22ಕ್ಕೆ ಕುಸಿದಿತ್ತು. ಇನ್ನು ಇಂಟರ್ನೆಟ್ ಬಳಕೆದಾರರ ಸಂಖ್ಯೆಯನ್ನು ನೋಡಿದರೂ ಈ ಸ್ಥಿತಿಯಲ್ಲಿ ಬಹಳ ದೊಡ್ಡ ವ್ಯತ್ಯಾಸವೇನೂ ಕಾಣಿಸದು. ನಮ್ಮ ಒಟ್ಟು ಇಂಟರ್ನೆಟ್ ಬಳಕೆದಾರರ ಪೈಕಿ ಮಹಿಳೆಯರ ಪ್ರಮಾಣಶೇಕಡಾ 30.

ಸದ್ಯದ ಮಟ್ಟಿಗೆ ಅತಿ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಮಾಹಿತಿ ತಂತ್ರಜ್ಞಾನ ಕಂಪೆನಿ ಎಂಬ ಹೆಗ್ಗಳಿಕೆ ಇರುವುದು ಗೂಗಲ್‌ಗೆ. ಇಲ್ಲಿ ಶೇಕಡಾ 17ರಷ್ಟು ಮಹಿಳೆಯರಿದ್ದಾರೆ. ಒಟ್ಟು ಉದ್ಯೋಗಿಗಳ ಐದನೇ ಒಂದು ಭಾಗಕ್ಕಿಂತ ಕಡಿಮೆ ಮಹಿಳೆಯರಿರುವುದೇ ‘ದಾಖಲೆ’ ಎನ್ನುವ ಪರಿಸ್ಥಿತಿ ಸದ್ಯದ್ದು. ಈ ಸ್ಥಿತಿ ಏಕೆ ಉದ್ಭವಿಸುತ್ತದೆ ಎಂಬುದರ ಕುರಿತಂತೆ ಅನೇಕ ಮಾನವಶಾಸ್ತ್ರೀಯ ಅಧ್ಯಯನಗಳೂ ನಡೆದಿವೆ.

ಕಂಪ್ಯೂಟರ್ ಎಂಬ ಯಂತ್ರವನ್ನು ಗ್ರಹಿಸುವುದರಲ್ಲಿಯೇ ಪುರುಷ ಮತ್ತು ಮಹಿಳೆಯರ ಮಧ್ಯೆ ಅನೇಕ ವ್ಯತ್ಯಾಸಗಳಿವೆ. ಗಂಡಸರ ಮಟ್ಟಿಗೆ ಕಂಪ್ಯೂಟರ್ ಎಂಬುದು ಅವರ ವಿಸ್ತರಣೆಯಾಗಿದ್ದರೆ ಮಹಿಳೆಯ ಮಟ್ಟಿಗೆ ಇದೊಂದು ಉಪಕರಣ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವುದಕ್ಕೆ ಗ್ರಹಿಕೆಯ ಭಿನ್ನತೆಯಷ್ಟೇ ಕಾರಣವಲ್ಲ. ತಂತ್ರಜ್ಞಾನವೆಂಬ ಪರಿಕಲ್ಪನೆಯ ಸುತ್ತಲೂ ಹರಡಿಕೊಂಡಿರುವ ಪುರುಷ ಪ್ರಧಾನವಾದ ಸಿದ್ಧ ಮಾದರಿಗಳೂ ಕೆಲಮಟ್ಟಿಗೆ ಮಹಿಳೆಯನ್ನು ದೂರವಿಟ್ಟಿವೆ.

ಇಂಗ್ಲಿಷ್‌ನ ‘ಕಂಪ್ಯೂಟರ್ ಪ್ರೊಗ್ರಾಮರ್’ ಎಂಬ ಪದಪುಂಜ ಅಥವಾ ಕನ್ನಡದ್ದೇ ಆದ ‘ತಂತ್ರಜ್ಞ’ ಎಂಬ ಪದಗಳ ಸುಪ್ತವಾಗಿ ‘ಗಂಡಸುತನ’ವನ್ನು ಧ್ವನಿಸುತ್ತವೆ. ಒಬ್ಬ ಕಂಪ್ಯೂಟರ್ ತಂತ್ರಜ್ಞ ಅಥವಾ ಇಂಗ್ಲೀಷ್‌ನ geek ಪದ ನಮ್ಮ ಮನಸ್ಸಿನೊಳಗೆ ಚಿತ್ರಿಸುವುದು ಗಂಡಿನ ಚಿತ್ರವನ್ನೇ. ಇದನ್ನು ತಪ್ಪು–ಸರಿಗಳ ದ್ವಿಮಾನದಲ್ಲಿ ನೋಡಬೇಕಾಗಿಲ್ಲ. ನಾವು ಸಾಂಸ್ಕೃತಿಕವಾಗಿಯೇ ಅಂಥದ್ದೊಂದು ಸಿದ್ಧ ಮಾದರಿಯನ್ನು ರೂಪಿಸಿಕೊಂಡಿದ್ದೇವೆ. ಅದರಿಂದ ಕಳಚಿಕೊಳ್ಳುವುದು ಅಷ್ಟು ಸುಲಭದ ಸಂಗತಿಯೇನೂ ಅಲ್ಲ.

ಆದರೆ ಕಂಪ್ಯೂಟರ್ ಎಂಬ ಪರಿಕಲ್ಪನೆಯ ಇತಿಹಾಸವನ್ನು ನೋಡಲು ಹೊರಟರೆ ಕಾಣುವ ಚಿತ್ರಣ ಬೇರೆಯೇ. ಕಂಪ್ಯೂಟರ್ ಪ್ರೋಗ್ರಾಮಿಂಗ್ ಪಿತಾಮಹ ಪ್ರಣೀತವಾದುದಲ್ಲ. ಇದು ಮಾತೆಯಿಂದ ರೂಪುಗೊಂಡದ್ದು. ಮೊದಲ ಕಂಪ್ಯೂಟರ್ ಪ್ರೋಗ್ರಾಮ್ ಅನ್ನು ರಚಿಸಿದ್ದು ಎಡಾ ಬೈರನ್ ಅಥವಾ ಎಡಾ ಲವ್ಲೇಸ್ ಬೈರನ್ ಎಂಬ ಯುವತಿ. ಕಂಪ್ಯೂಟರ್ ಎಂಬ ಪರಿಕಲ್ಪನೆ ನಿಜವಾಗುವುದಕ್ಕೆ ಒಂದು ಶತಮಾನಕ್ಕೆ ಮುನ್ನವೇ ಆಕೆ ಬರ್ನೌಲಿ ಸಂಖ್ಯೆಗಳನ್ನು ಯಂತ್ರವೊಂದರಲ್ಲಿ ಲೆಕ್ಕ ಹಾಕುವುದಕ್ಕೆ ಬೇಕಿರುವ ಗಣನವಿಧಾನ (Algorithm) ಎಂದು ಕರೆಯುವ ಕ್ರಮವಿಧಿಯನ್ನು  ಒದಗಿಸಿದಳು. ಈ ಹೊತ್ತಿಗಾಗಲೇ ಚಾರ್ಲ್ಸ್ ಬ್ಯಾಬೇಜ್ ರೂಪಿಸಿದ್ದ ‘ಅನಲಿಟಿಕಲ್ ಎಂಜಿನ್’ ಎಂದ ಗಣಕ ಯಂತ್ರದ ಕುರಿತಂತೆ  ಬರೆದ ಟಿಪ್ಪಣಿಯ ಭಾಗವಾಗಿ ಈ ಗಣನ ವಿಧಾನವನ್ನು ಆಕೆ ರಚಿಸಿದ್ದಳು.

ಇದು ನಡೆದದ್ದು 1943ರಲ್ಲಿ. ಆಗ ಬ್ಯಾಬೇಜ್‌ನ ಗಣಕಯಂತ್ರ ಒಂದು ಪರಿಕಲ್ಪನೆಯಷ್ಟೇ ಆಗಿತ್ತು. ಆ ವರ್ಷ ನಿಜಕ್ಕೂ ಹೆಸರು ಮಾಡಿದ ಸಂಶೋಧನೆಯೆಂದರೆ ರಿಚರ್ಡ್ ಮಾರ್ಚ್ ಹೋ ಕಂಡುಹಿಡಿದ ರೋಟರಿ ಮುದ್ರಣ ಯಂತ್ರ. 1847ರಲ್ಲಿ ಅಮೆರಿಕನ್ ಪೇಟೆಂಟ್ ಪಡೆದ ಈ ಯಂತ್ರ ದಿನಪತ್ರಿಕೆಗಳ ಇತಿಹಾಸದಲ್ಲಿ ಒಂದು ಪ್ರಮುಖ ಬೆಳವಣಿಗೆ.

ಅಲ್ಲಿಯ ತನಕ ಇದ್ದ ಮುದ್ರಣ ಯಂತ್ರಗಳಿಗಿಂತ ವೇಗವಾಗಿ ಮುದ್ರಿಸಬಲ್ಲ ಈ ಯಂತ್ರ ಪತ್ರಿಕೋದ್ಯಮಕ್ಕೆ ಹೊಸ ತಿರುವನ್ನೇ ನೀಡಿತು. ಈಗ ಪತ್ರಿಕೆಗಳನ್ನು ಮುದ್ರಿಸುವ ವೆಬ್ ಆಫ್‌ಸೆಟ್ ಯಂತ್ರದ ತಂತ್ರಜ್ಞಾನ ಇದರ ಕೆಲವಂಶವನ್ನು ಬಳಸಿಕೊಂಡಿದೆ. ಈ ಮುದ್ರಣ ಯಂತ್ರವನ್ನು ಆಗ ‘ಹೋ ವೆಬ್ ಪರ್ಫೆಕ್ಟಿಂಗ್ ಮೆಷಿನ್’ ಎಂದು ಕರೆಯಲಾಗುತ್ತಿತ್ತು.


ಎಡಾ ಲವ್ಲೇಸ್ ಬೈರನ್ ಎಂಬ ಹೆಸರೇ ಆಕೆಯ ಹಿನ್ನೆಲೆಯನ್ನು ಹೇಳುತ್ತದೆ. ತಂದೆ ಬೈರನ್ ಖ್ಯಾತ ಕವಿ.  ಇಂಗ್ಲಿಷ್ ಕಾವ್ಯವಾದ ರಮ್ಯ ಪಂಥದ ಪ್ರಮುಖ ಕವಿಗಳಲ್ಲಿ ಒಬ್ಬ. ಮಗಳು ಹುಟ್ಟಿದ ಐದೇ ವಾರಕ್ಕೆ ಬೈರನ್ ತನ್ನ ಪತ್ನಿ  ಅನೆಬೆಲ್ಲಾ ಎಂದೇ ಹೆಸರಾಗಿರುವ ಆನಿ ಇಸಬೆಲ್ಲಾ ಮಿಲ್‌ಬೇಂಕ್‌ಗೆ ವಿಚ್ಛೇದನ ನೀಡಿದ. ಎಡಾಳನ್ನು ಸಾಕಿದ್ದು ತಾಯಿಯೇ.

ಅನೆಬೆಲ್ಲಾಳಿಗೆ ಬೈರನ್‌ನ ಮೇಲೆ ಎಷ್ಟು ಕೋಪವಿತ್ತೆಂದರೆ ಮಗಳು ಯಾವುದೇ ಕಾರಣಕ್ಕೂ ತಂದೆಯಂತೆ ಕವಿತೆಯ ಹಾದಿಯಲ್ಲಿ ಸಾಗಬಾರದೆಂದು ಎಚ್ಚರ ವಹಿಸಿದಳು. ಆ ಕಾಲದಲ್ಲಿ ವಿಚ್ಛೇದನವಾದರೆ ಮಕ್ಕಳ ಹಕ್ಕು ಗಂಡಿಗೇ ಇರುತ್ತಿತ್ತು. ಬೈರನ್ ಮಗಳನ್ನು ತನ್ನ ಜೊತೆಗೆ ಇಟ್ಟುಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಅನೆಬೆಲ್ಲಾ ಮಗಳನ್ನು ತನ್ನಿಷ್ಟದಂತೆಯೇ ಬೆಳೆಸಿದಳು. ಮಾಜಿ ಗಂಡನ ಕಾವ್ಯ ಮತ್ತು ‘ರಸಿಕತೆ’ಗಳ ಮೇಲಿನ ಸಿಟ್ಟಿನಿಂದ ಮಗಳಿಗೆ ಗಣಿತ ಕಲಿಸಿದಳು.

ಇಷ್ಟಾಗಿಯೂ ಎಡಾ ಕಾವ್ಯದಿಂದ ದೂರ ಉಳಿಯಲಿಲ್ಲ. ಆಕೆ ತನ್ನ ಮೂವತ್ತನೇ ವಯಸ್ಸಿನಲ್ಲಿ ತಾಯಿಗೆ ಬರೆದ ಪತ್ರವೊಂದರ ಸಾಲು ಹೀಗಿದೆ ‘ನಿನಗೆ ಕಾವ್ಯವನ್ನು ಕೊಡಲು ಸಾಧ್ಯವಿಲ್ಲವಾದರೆ ‘ಕಾವ್ಯ ವಿಜ್ಞಾನ’ವನ್ನಾದರೂ ಕೊಡಬಹುದಲ್ಲವೇ?’. ಎಡಾ ಲವ್ಲೇಸ್ ಬದುಕು ಈ ಸಾಲಿನಂತೆಯೇ ಇತ್ತು. ಆಕೆ ತನ್ನನ್ನು ವಿಶ್ಲೇಷಕಿ ಮತ್ತು ತತ್ವ ಜಿಜ್ಞಾಸು ಎಂದು ಕರೆದುಕೊಳ್ಳಲು ಇಚ್ಛಿಸುತ್ತಿದ್ದಳೇ ಹೊರತು ಗಣಿತಜ್ಞೆ ಎಂದಲ್ಲ.

ಗಣಕಯಂತ್ರಕ್ಕೆ ಬೇಕಾದ ಕ್ರಮವಿಧಿ ಅಥವಾ ಪ್ರೋಗ್ರಾಮಿಂಗ್ ಅನ್ನು ಬರೆದದ್ದು ಒಂದು ವಿಶಿಷ್ಟ ಸಂದರ್ಭದಲ್ಲಿ. 1840ರಲ್ಲಿ ತತ್ವಜ್ಞಾನಿ ಮತ್ತು ಮೆಕಾನಿಕಲ್ ಎಂಜಿನಿಯರ್ ಚಾರ್ಲ್ಸ್ ಬ್ಯಾಬೇಜ್ ಟ್ಯುರಿನ್ ವಿಶ್ವವಿದ್ಯಾಲಯದಲ್ಲಿ ‘ವಿಶ್ಲೇಷಣಾ ಯಂತ್ರ’ ಎಂದು ಆತ ಹೆಸರಿಟ್ಟಿದ್ದ ಗಣಕಯಂತ್ರದ ಬಗ್ಗೆ ಒಂದು ಉಪನ್ಯಾಸ ನೀಡಿದ.  ಮುಂದೆ ಇಟಲಿಯ ಪ್ರಧಾನಿಯಾದ ಲ್ಯೂಗಿ ಮೆನಾಬ್ರಿಯಾ ಆಗಿನ್ನು ಯುವ ಎಂಜಿನಿಯರ್‌.

ಆತ ಈ ಉಪನ್ಯಾಸವನ್ನು ಫ್ರೆಂಚ್‌ನಲ್ಲಿ ಬರೆದುಕೊಂಡ. ಇದು 1843ರಲ್ಲಿ  ‘ಬಿಬ್ಲಿಯೋಥೆಕ್ ಯೂನಿವರ್ಸೆಲ್ ಡಿ ಜಿನೆವಾ’ ಎಂಬ ವಿದ್ವತ್ಪತ್ರಿಕೆಯಲ್ಲಿ ಪ್ರಕಟವೂ ಆಯಿತು. ಬ್ಯಾಬೇಜ್‌ನ ಗೆಳೆಯ ಚಾರ್ಲ್ಸ್ ವ್ಹೀಟ್‌ಸ್ಟೋನ್ ಎಂಬಾತ ಇದನ್ನು ಇಂಗ್ಲಿಷ್‌ಗೆ ಅನುವಾದಿಸುವುದಕ್ಕಾಗಿ ಎಡಾ ಲವ್ಲೇಸ್‌ಗೆ ನೀಡಿದ.

ಎಡಾ ಲವ್ಲೇಸ್ ಇದನ್ನು ಅನುವಾದಿಸಿ ಕೊಡುವ ಬದಲಿಗೆ ಅಲ್ಲಿದ ಪರಿಕಲ್ಪನಾತ್ಮಕ ಟಿಪ್ಪಣಿಗಳಿಗೆ ತನ್ನ ಆಲೋಚನೆಗಳ ಟಿಪ್ಪಣಿಯನ್ನೂ ಸೇರಿಸುತ್ತಾ ಹೋದಳು. ಇಡೀ ಒಂದು ವರ್ಷ ಈ ಕೆಲಸದಲ್ಲಿಯೇ ಮುಳುಗಿದ ಈಕೆ  ಬ್ಯಾಬೇಜ್‌ನ ಜೊತೆ ಸಂಪರ್ಕ ಬೆಳೆಸಿ ಚರ್ಚಿಸಿ ಮೆನಾಬ್ರಿಯಾ ಬರೆದುಕೊಂಡಿದ್ದ ಟಿಪ್ಪಣಿಯನ್ನು ವಿಸ್ತಾರಗೊಳಿಸಿದಳು. ಇದು ‘ಟೇಲರ್ಸ್‌ ಸೈಂಟಿಫಿಕ್ ಜರ್ನಲ್‌’ನಲ್ಲಿ ಪ್ರಕಟವೂ ಆಯಿತು.

ಬ್ಯಾಬೇಜ್ ಕಂಪ್ಯೂಟರ್‌ನ ಆದಿಮ ರೂಪವನ್ನು ಕಲ್ಪಿಸಿದ್ದ. ಹಾಗೆಯೇ ಅದಕ್ಕೆ ಬೇಕಿರುವ ಪ್ರೋಗ್ರಾಮ್ ಅನ್ನು ಎಡಾ ಲವ್ಲೇಸ್ ರಚಿಸಿದ್ದಳು ಎಂಬುದು ಹೊರಜಗತ್ತಿಗೆ ತಿಳಿಯುವುದಕ್ಕೆ ಇನ್ನೂ 110 ವರ್ಷಗಳ ಕಾಲ ಬೇಕಾಯಿತು. 1953ರಲ್ಲಿ ಈ ಬರಹ ಪುನರ್ ಮುದ್ರಣಗೊಂಡ ಮೇಲೆ ಬ್ಯಾಬೇಜ್ ಮುಂದಿಟ್ಟ ಪರಿಕಲ್ಪನೆಗೆ ಮೊದಲ ಕಂಪ್ಯೂಟರ್ ಮತ್ತು ಎಡಾ ರಚಿಸಿದ ಗಣನವಿಧಾನಕ್ಕೆ ಮೊದಲ ಪ್ರೊಗ್ರಾಮ್ ಎಂಬ ಮಾನ್ಯತೆ ದೊರೆಯಿತು. ಇಷ್ಟರ ಮೇಲೂ ಇದನ್ನು ಅಲ್ಲಗಳೆಯುವರು ಅನೇಕರಿದ್ದಾರೆ.

ಬ್ಯಾಬೇಜ್‌ನ ‘ವಿಶ್ಲೇಷಣಾ ಯಂತ್ರ’ಕ್ಕೆ ಸಂಬಂಧಿಸಿದಂತೆ ಎಡಾ ಮಾಡಿದ ಟಿಪ್ಪಣಿಗಳನ್ನು ಏಳು ಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಕೊನೆಯ ಭಾಗದಲ್ಲಿ ಬೆರ್ನೌಲಿ ಸಂಖ್ಯೆಗಳನ್ನು ಲೆಕ್ಕ ಹಾಕುವುದಕ್ಕೆ ಬೇಕಿರುವ ಗಣನವಿಧಾನ ಅಥವಾ ಮೊದಲ ಕಂಪ್ಯೂಟರ್ ಪ್ರೊಗ್ರಾಮ್ ಇದೆ. ಎಡಾ ಲವ್ಲೇಸ್‌ ಹೆಗ್ಗಳಿಕೆ ಇರುವುದು ಕೇವಲ ಈ ಗಣನವಿಧಾನವನ್ನು ರೂಪಿಸಿದ್ದರಲ್ಲಷ್ಟೇ ಅಲ್ಲ. ‘ವಿಶ್ಲೇಷಣಾ ಯಂತ್ರಗಳ’ ಸಾಮರ್ಥ್ಯವನ್ನು ಆಕೆ ಗುರುತಿಸಿದ್ದರಲ್ಲಿ. ಕೇವಲ ಸಂಖ್ಯೆಗಳನ್ನು ಲೆಕ್ಕ ಹಾಕುವುದಷ್ಟೇ ಅಲ್ಲದೆ ಈ ಯಂತ್ರಗಳು ಸಂಗೀತವನ್ನೂ ಸೃಷ್ಟಿಸಬಲ್ಲವು ಎಂಬ ಭವಿಷ್ಯವನ್ನು ಆಕೆ ಅಂದೇ ನುಡಿದಿದ್ದಳು.

ತಂದೆಯಂತೆಯೇ ಎಡಾ ಕೂಡಾ ಅಲ್ಪಾಯುಷಿ. ತಂದೆಯಂತೆಯೇ 36ನೇ ವಯಸ್ಸಿಗೆ  ಕಾಲವಾದಳು. ಗರ್ಭಕೋಶ ಕ್ಯಾನ್ಸರ್ ಬಾಧೆಗೆ ಒಳಗಾಗಿದ್ದ ಈಕೆ ಸಾವಿಗೆ ಕಾರಣವಾದದ್ದು ಆ ಕಾಲದ ಚಿಕಿತ್ಸೆ. ಕಾಯಿಲೆಗಳನ್ನು ಗುಣಪಡಿಸುವುದಕ್ಕೆ ದೇಹದಿಂದ ಕೆಟ್ಟ ರಕ್ತವನ್ನು ತೆಗೆಯಬೇಕೆಂಬ ನಂಬಿಕೆ ಆ ಕಾಲದ ವೈದ್ಯರದ್ದಾಗಿತ್ತು. ಈ ಚಿಕಿತ್ಸೆ ಆಕೆಯನ್ನು 1852ರ ನವೆಂಬರ್ 27ರಂದು ಇಹಲೋಕದಿಂದ ದೂರವಾಗಿಸಿತು.

ಇಹದ ಬದುಕಿನಿಂದ ದೂರವಾದ ನೂರು ವರ್ಷಗಳ ನಂತರ ಕಂಪ್ಯೂಟರ್ ಕ್ಷೇತ್ರದ ಬೆಳಣಿಗೆಗೆ ಆಕೆಯ ಕೊಡುಗೆ ಏನೆಂದು ಜಗತ್ತು ತಿಳಿಯಿತು. 1979ರಲ್ಲಿ ಅಮೆರಿಕದ ರಕ್ಷಣಾ ಇಲಾಖೆ ಅಭಿವೃದ್ಧಿ ಪಡಿಸಿದ ಸಾಫ್ಟ್‌ವೇರ್ ಭಾಷೆಯೊಂದಕ್ಕೆ ‘ಎಡಾ’ ಎಂಬ ಹೆಸರಿಟ್ಟಿತು. ಇಷ್ಟಾಗಿಯೂ ಕಂಪ್ಯೂಟರ್‌ಗಳ ಇತಿಹಾಸಕ್ಕೆ ಬಂದರೆ ಅಲೆನ್ ಟ್ಯುರಿಂಗ್‌ ಮತ್ತಿತರರು ಸಾಮಾನ್ಯ ಜ್ಞಾನದ ಭಾಗವಾಗಿರುವಂತೆ ಎಡಾ ಲವ್ಲೇಸ್ ಆಗಿಲ್ಲ.

ಅಂದ ಹಾಗೆ ಇದನ್ನೆಲ್ಲಾ ಈಗ ಬರೆಯುವುದಕ್ಕೆ ಒಂದು ಕಾರಣವಿದೆ. ಇನ್ನೊಂದು ದಿನ ಕಳೆದರೆ ಮಾರ್ಚ್ ತಿಂಗಳು ಮುಗಿಯುತ್ತದೆ. ಇದು ಮಹಿಳಾ ಚರಿತ್ರೆಯ ತಿಂಗಳು. ಈ ಹೊತ್ತಿನಲ್ಲಿ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ನ ಮಾತೆಯನ್ನು ನೆನಪಿಸಿಕೊಳ್ಳುವುದು ಅಗತ್ಯ ಅನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT