ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡ–ಬಲದಲ್ಲೂ ಸಲ್ಲುವ ಉದಾರವಾದ

Last Updated 1 ಜುಲೈ 2017, 20:30 IST
ಅಕ್ಷರ ಗಾತ್ರ

‘ಉದಾರವಾದ ನೀತಿಯಿಂದ  ಸಂಬಂಧ ಬೆಳೆಸುವುದು’ ಎಂಬ ಹೊಸ ಚಿಂತನೆಯನ್ನು  ಜನಪ್ರಿಯಗೊಳಿಸಿದ ಶ್ರೇಯಸ್ಸು  ಕೆನಡಾದ  ಯುವ ಪ್ರಧಾನಿಯೂ ಆಗಿರುವ ಜಾಗತಿಕ ಉದಾರವಾದಿ ಚಿಂತಕ ಜಸ್ಟಿನ್‌ ಟ್ರುಡೀವ್‌  ಅವರಿಗೆ ಸಲ್ಲುತ್ತದೆ.  ವಿವಿಧ ಚಿಂತನೆಯ ಬಣಗಳ ಮಧ್ಯೆ ಹರಿದು ಹಂಚಿ ಹೋಗಿದ್ದ ಪಕ್ಷದ ಕಾರ್ಯಕರ್ತರನ್ನು ಒಂದುಗೂಡಿಸುವ ಸೀಮಿತ  ಉದ್ದೇಶದಿಂದ ಅವರು ಈ ಪದ ಪ್ರಯೋಗವನ್ನು ಬಳಕೆಗೆ ತಂದಿದ್ದರೂ, ಅದಕ್ಕೆ ಈಗ  ವಿಶ್ವದಾದ್ಯಂತ ಭಾರಿ ಜನಪ್ರಿಯತೆ ದೊರೆತಿದೆ. ಜೀನ್‌ ಕ್ರೇಟಿಯನ್‌ ಮತ್ತು ಪೌಲ್‌ ಮಾರ್ಟಿನ್‌ ಅವರು ಪ್ರತಿಪಾದಿಸುತ್ತಿದ್ದ ವಿಭಿನ್ನ ಚಿಂತನೆಯ  ಕಾರಣಕ್ಕೆ ಅನೇಕರು ಅವರ ಹಿಂಬಾಲಕರಾಗಿದ್ದರು. ಈ ಅನುಯಾಯಿಗಳಲ್ಲಿ ಸಹಮತ ಮೂಡಿಸುವಲ್ಲಿ ಈ ಹೊಸ ಚಿಂತನೆ ಯಶಸ್ವಿಯಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ ಉದಾರವಾದದ ಜತೆ ಸಂಬಂಧ ಕಡಿದುಕೊಳ್ಳುವ ಚಿಂತನೆಯನ್ನು ನಾನು ಇಲ್ಲಿ ವಿವರಿಸಲು ಯತ್ನಿಸಿರುವೆ.

ಉದಾರವಾದ ಎಂದರೆ, ಯಾವುದೇ ಚಿಂತನೆ, ವಿಷಯ ಮತ್ತು ಜನರನ್ನು ಮುಕ್ತ ಮನಸ್ಸಿನಿಂದ ಪರಿಗಣಿಸುವುದು ಎಂದರ್ಥ. ಈ ಆಲೋಚನೆಗೆ ಜೋತು ಬೀಳುವುದರಿಂದಷ್ಟೇ  ಉದಾರವಾದ ಚಿಂತನೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದೇ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಮಧ್ಯಮ ಮಾರ್ಗದ ಚಿಂತನೆಯು ನಿರ್ಧಾರಕ್ಕೆ ಬರಲಾಗದ ಆಲಸಿ ಪ್ರವೃತ್ತಿಯಾಗಿರುವಾಗ, ಎಡ ಅಥವಾ ಬಲಪಂಥದ ಚಿಂತನೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಭಾರತದಲ್ಲಿ  ಉದಾರವಾದ ಚಿಂತನೆಯು ನೆಹರೂ ಅವರ ಸೌಮ್ಯ ಸಮಾಜವಾದದಿಂದ ಸ್ಪೂರ್ತಿ ಪಡೆದಿತ್ತು. ನಂತರದ ದಿನಗಳಲ್ಲಿ ಇಂದಿರಾ ಗಾಂಧಿ ಅವರ ಅಧಿಕಾರಯುತ ಧೋರಣೆಯ ಪ್ರಭಾವ ಕಂಡು ಬಂದಿತ್ತು. ಈಗ ದೀನ್‌ ದಯಾಳ್ ಉಪಾಧ್ಯಾಯ ಅವರ ಕೇಸರಿ ಪ್ರಭುತ್ವದ ಚಿಂತನೆಯು  ಹೆಚ್ಚು ಚಲಾವಣೆಯಲ್ಲಿ ಇದೆ.

ನಿಮಗೆ ಇಂತಹ ಯಾವುದೇ ನಿರ್ದಿಷ್ಟ  ಚಿಂತನೆ ಬಗ್ಗೆ ಒಲವು ಇರದಿದ್ದರೆ, ನಿಮ್ಮೆದುರು ಇರುವ ನೂರಾರು ಆಲೋಚನೆಗಳ ಪೈಕಿ,   ಎಡಪಂಥದ ಚಿಂತನೆಯತ್ತ ಒಲವು ಬೆಳೆಸಿಕೊಳ್ಳಿ. ಸಮಾಜ ವಿಜ್ಞಾನಿ ಪಾರ್ಥ ಚಟರ್ಜಿ ಅವರು, ಜನರಲ್ ರಾವತ್ ಅವರಲ್ಲಿ ಜನರಲ್‌ ಡಾಯರ್‌ನನ್ನು ಕಂಡುಕೊಂಡಿರುವಂತೆ ಮತ್ತು ಈಶಾನ್ಯದ ಬುಡಕಟ್ಟು ರಾಜ್ಯಗಳು ಮತ್ತು ಕಾಶ್ಮೀರ ರಾಜ್ಯವು  ಭಾರತದ ವಸಾಹತಿಗೆ ಒಳಪಟ್ಟಿವೆ ಎಂಬ ನಿಲುವನ್ನು ಬೆಂಬಲಿಸಬೇಕಾಗುತ್ತದೆ. ಸಂವಿಧಾನವು ಗಣರಾಜ್ಯ ಎಂದರೆ ಏನು ಎಂದು ವ್ಯಾಖ್ಯಾನಿಸಿರುವುದನ್ನು ಗಣನೆಗೆ ತೆಗೆದುಕೊಳ್ಳದೆ, ಈಶಾನ್ಯ ರಾಜ್ಯಗಳು ಬ್ರಿಟಿಷರ ಕೊಡುಗೆಗಳಾಗಿದ್ದರೆ, ಕಾಶ್ಮೀರ ನಾವೇ ಗೆದ್ದ ರಾಜ್ಯವಾಗಿದೆ ಎಂದು ಪರಿಭಾವಿಸಬೇಕಾಗುತ್ತದೆ.

ನಿಮಗೆ ಎಡಪಂಥದ ವಿಚಾರಧಾರೆ ಇಷ್ಟವಾಗದಿದ್ದರೆ, ಸಂಪೂರ್ಣವಾಗಿ ಬಲಪಂಥದತ್ತ ಒಲವು ಬೆಳೆಸಿಕೊಳ್ಳಿ, ಅಂತಹ ಧೋರಣೆ ರೂಢಿಸಿಕೊಂಡರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್‌) ತರುಣ್‌ ವಿಜಯ್ ಅವರ ಜತೆ ಕೈಜೋಡಿಸಲು ಮುಂದಾಗಬೇಕಾಗುತ್ತದೆ. ಇವರು ದೇವಾಲಯಗಳಲ್ಲಿ ದಲಿತರ ಪ್ರವೇಶಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ.  ದೆಹಲಿಯ ಗಾಲ್ಫ್‌ ಕ್ಲಬ್‌ನ ಅನುಮತಿ ರದ್ದುಪಡಿಸಿ ಅದನ್ನು ಈಶಾನ್ಯ ಭಾರತದ ಸಾಂಸ್ಕೃತಿಕ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂದೂ ಅವರು ಒತ್ತಾಯಿಸುತ್ತಿದ್ದಾರೆ.  ಮೇಘಾಲಯದ ಆದಿವಾಸಿಯೊಬ್ಬನನ್ನು ಜನಾಂಗೀಯವಾಗಿ ನಿಂದಿಸಿದ ಕಾರಣಕ್ಕೆ ಅವರು ಈ ಹಕ್ಕೊತ್ತಾಯ ಮುಂದಿಟ್ಟಿದ್ದಾರೆ.

ಇವರದ್ದೇ ಚಿಂತನೆಯು, ಇನ್ನೊಂದೆಡೆ ಇದೇ ಈಶಾನ್ಯ ರಾಜ್ಯದವರು (ಆದಿವಾಸಿಗಳು) ತಮ್ಮ ಸಾಮಾನ್ಯ  ಆಹಾರ ಸೇವಿಸಬಾರದು  ಎನ್ನುವ   ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಚರ್ಮ ಮತ್ತು ಪಾದರಕ್ಷೆ ತಯಾರಿಕೆ ವೃತ್ತಿಯಲ್ಲಿ ತೊಡಗಿರುವ ದಲಿತರ ಬಗ್ಗೆಯೂ ಇವರದ್ದು ಇದೇ ಬಗೆಯ ಆಲೋಚನೆಯಾಗಿದೆ.  ಸಮಕಾಲೀನದ ಇನ್ನೂ ಒಂದು ಮಹತ್ವದ ಬೆಳವಣಿಗೆ ಏನೆಂದರೆ, ನೀವು ಜಂತರ್‌ ಮಂತರ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವಿರೊ,  ಇಲ್ಲವೋ ಎನ್ನುವುದು ಮತ್ತು  ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮನ್ನು ಗುರುತಿಸಿಕೊಳ್ಳುವ ಧೋರಣೆ ಆಧರಿಸಿ  ಉದಾಹರಣೆಗೆ – ಟ್ವೀಟರ್‌ನಲ್ಲಿ ನಡೆಯುವ ‘#ನಾಟ್‌ಇನ್‌ಮೈನೇಮ್‌’ ಆಂದೋಲನದಲ್ಲಿ ಕೈಜೋಡಿಸುವೀರಾ ಅಥವಾ ಇಲ್ಲವೆ ಎನ್ನುವುದನ್ನೂ  ಆಧರಿಸಿ ನಿಮ್ಮ ಚಿಂತನಾ ಧಾಟಿ ಯಾವುದು ಎಂಬ ತೀರ್ಮಾನಕ್ಕೆ ಬರಲಾಗುತ್ತಿದೆ.
ಎಡ ಅಥವಾ ಬಲಪಂಥದ ಗುರುತಿನ ಚೀಟಿಯನ್ನು (ಲೇಬಲ್‌) ಅನ್ನು  ನಾವು ನಮ್ಮ ಭುಜದ ಮೇಲೆ ಅಂಟಿಸಿಕೊಂಡಿದ್ದೇವೆ. ಇಂತಹ ಲೇಬಲ್‌ಗಳ ಭಾರ ಹೆಚ್ಚಾದಷ್ಟೂ ಹೊಣೆಗಾರಿಕೆಯೂ ಹೆಚ್ಚುತ್ತದೆ. ಇದರಿಂದ ಮುಕ್ತ ಮನಸ್ಸು ಹೊಂದುವುದೂ ಕಷ್ಟವಾಗುತ್ತದೆ.
ಒಂದು ವೇಳೆ ನೀವು ಉದಾರವಾದ ಧೋರಣೆಗೆ ಅಂಟಿಕೊಂಡರೆ, ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಲು ಸಿದ್ಧರಿರಬೇಕಾಗುತ್ತದೆ.  ಚಿಂತನಾ ಪಂಥಗಳನ್ನು ಬದಲಿಸಿದ್ದು ಏಕೆ. ಯಾವ ಬಣದಲ್ಲಿ ಇರಬೇಕು ಎಂದು ನಿರ್ಧರಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೆ. ಅತ್ತಿಂದಿತ್ತ ಧೋರಣೆಯನ್ನು ಏಕೆ ಬದಲಿಸುವೀರಿ  – ಎನ್ನುವ  ಪ್ರಶ್ನೆಗಳಿಗೆ ಉತ್ತರ ನೀಡಲು ನೀವು ತಿಪ್ಪರಲಾಗ ಹಾಕಬೇಕಾಗುತ್ತದೆ.  ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನಯಾನ ಸಂಸ್ಥೆ  ಏರ್‌ ಇಂಡಿಯಾವನ್ನು ಖಾಸಗೀಕರಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸುಧಾರಣಾವಾದಿ ನಿಲುವನ್ನು ನೀವು ಹೊಗಳಿದಾಗ,  ಹೀಗೆ ಮಾಡುವ ಅಗತ್ಯ ಏನಿತ್ತು ಎಂದು  ಎಡಪಂಥದವರು ನಿಮ್ಮನ್ನು ಪ್ರಶ್ನಿಸುತ್ತಾರೆ.  ಇಲ್ಲವೇ ದನದ ಮಾಂಸ ಹೊಂದಿದವರ ಮೇಲೆ ಹಲ್ಲೆ ನಡೆಸಿದ ಘಟನೆಗಳಿಗಾಗಿ ಪ್ರಧಾನಿ ತಳೆದಿರುವ ನಿಲುವನ್ನು ಟೀಕಿಸಿದಾಗಲೂ ಇಂತಹ ಪ್ರಶ್ನೆಗಳು ಎದುರಾಗುತ್ತವೆ.

ಸೇನಾಧಿಕಾರಿಯೊಬ್ಬರು ತಮ್ಮ ಸಿಬ್ಬಂದಿಯ ರಕ್ಷಣೆಗೆ ನಾಗರಿಕನೊಬ್ಬನನ್ನು ಮಾನವ ಗುರಾಣಿಯಾಗಿ ಬಳಸಿಕೊಂಡಿದ್ದನ್ನು ನೀವು ಖಂಡಿಸಿದಾಗಲೂ ಬಲಪಂಥಿಯರು ನಿಮ್ಮ ನಿಲುವನ್ನು ಪ್ರಶ್ನಿಸುತ್ತಾರೆ. ಭಾರತದ ಸೇನೆಯ ನಿಲುವನ್ನು ಬೆಂಬಲಿಸದವರು ಭಾರತದ ಪರವಾಗಿ ಹೇಗೆ ನಿಲ್ಲುವಿರಿ ಎಂದೂ ಕೇಳುತ್ತಾರೆ.

ಇಂತಹ ಎಲ್ಲ ಬಗೆಯ ಪ್ರಶ್ನೆಗಳಿಗೆ ಸರಳ ಉತ್ತರ ನೀಡಿ ಸುಮ್ಮನಾಗಬಹುದು. ಮೊದಲನೆಯದಾಗಿ ಎರಡು ತಪ್ಪುಗಳು ಸೇರಿಕೊಂಡಾಗ ಯಾವತ್ತೂ ಸರಿಯಾದ ಫಲಿತಾಂಶ ಬರಲಾರದು.  ಹಾಗೆಯೇ ಹತ್ತಾರು ತಪ್ಪುಗಳಿಂದ ಸರಿಯಾದುದನ್ನು ಅಳಿಸಿ ಹಾಕಲೂ ಸಾಧ್ಯವಾಗಲಾರದು.  ದೇಶ ಮತ್ತು ಅದರ ಸೇನೆಯನ್ನು ಬೆಂಬಲಿಸುವುದರಿಂದ, ಸಂವಿಧಾನಾತ್ಮಕವಾಗಿ ಕಾನೂನುಬಾಹಿರವಾದ ಮತ್ತು ಸೇನಾ ದೃಷ್ಟಿಯಿಂದ ನ್ಯಾಯಯುತವಲ್ಲದ ಕ್ರಮವನ್ನು ಸಮರ್ಥಿಸುವಿರಿ ಎಂದೂ ಅರ್ಥವಲ್ಲ. 

ಬುದ್ಧಿಜೀವಿಯೊಬ್ಬನ ಯಶಸ್ಸು ಇತರರ ದನಿ ಹತ್ತಿಕ್ಕುವುದರಿಂದ ಬರುವುದಾದರೆ ಅದು ಉದಾರವಾದ ಚಿಂತನಾಕ್ರಮ ಆಗಿರಲಾರದು. ಆಗಲೂ ನೀವು ನಿಮ್ಮ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡರೆ,   ನಿಮ್ಮ ವ್ಯಾಖ್ಯಾನಕ್ಕೆ ಹೊಸ ಸಂಪರ್ಕ ಕೊಂಡಿಯೊಂದನ್ನು ಒದಗಿಸಬೇಕಾಗುತ್ತದೆ. ಇಂತಹ ಗಂಭೀರ ಸ್ವರೂಪದ ವಿವಾದಾತ್ಮಕ ಚಿಂತನೆಗಳ ಬಗ್ಗೆ ಜಾಗತಿಕವಾಗಿ ಸಾಕಷ್ಟು ಚರ್ಚೆಗಳು ನಡೆದಿದ್ದು,   ಅನೇಕ ಲೇಖನಗಳನ್ನೂ ಬರೆಯಲಾಗಿದೆ.  ಡೊನಾಲ್ಡ್‌ ಟ್ರಂಪ್‌ ಅವರು ಪ್ರವರ್ಧಮಾನಕ್ಕೆ ಬರುತ್ತಿರುವುದು, ಬ್ರೆಕ್ಸಿಟ್‌ ವಿವಾದ, ಬೆರ್ನಿ ಸ್ಯಾಂಡರ್ಸ್‌ ಅವರ ಡೆಮಾಕ್ರಾಟ್ಸ್‌ ಮತ್ತು ಜೆರೆಮಿ ಕೊರ್ಬಿನ್ ಅವರ ಲೇಬರ್‌ ಪಕ್ಷಗಳು ಬಿಜೆಪಿಯ ಮೋದಿ ಮತ್ತು ಅಮಿತ್ ಷಾ ಅವರಲ್ಲಿ ಪರ್ಯಾಯ ರಾಜಕೀಯ ಶಕ್ತಿಗಳನ್ನು  ಕಾಣಬಹುದು. ಮೋದಿ – ಷಾ ಜೋಡಿಯು ಕೇಸರಿ ರಾಷ್ಟ್ರೀಯತೆಯತ್ತ ಹೆಚ್ಚಾಗಿ ವಾಲುತ್ತಿದ್ದರೆ, ಅವರ ಪ್ರತಿಸ್ಪರ್ಧಿ ಬಣವು ತೀವ್ರ ಸ್ವರೂಪದ ಉದಾರವಾದವನ್ನು ಬಲವಾಗಿ ಪ್ರತಿಪಾದಿಸುತ್ತಿದೆ.

ಒಂದೆಡೆ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್‌ಯು) ವಿದ್ಯಾರ್ಥಿಗಳು ಭಾರತ ವಿರೋಧಿ ಘೋಷಣೆ ಕೂಗಿದ್ದಕ್ಕೆ ಅವರ ವಿರುದ್ಧ ದೇಶದ್ರೋಹ ಆರೋಪ ಹೊರಿಸಲಾಗಿದ್ದರೆ, ಇನ್ನೊಂದೆಡೆ ಇನ್ನೊಂದು ಬಣವು ತನ್ನ ರಕ್ಷಣೆಗಾಗಿ ಕ್ಯಾಂಪಸ್‌ನಲ್ಲಿಯೇ ಬೀಡು ಬಿಟ್ಟಿರುತ್ತದೆ. ಅಖಂಡತೆ ಉಳಿಸಿಕೊಂಡಿರುವ    ಗಣರಾಜ್ಯ ಮತ್ತು  ಸಂವಿಧಾನದಿಂದ ಮಾತ್ರ   ಸ್ವಾತಂತ್ರ್ಯದ ರಕ್ಷಣೆ ಸಾಧ್ಯವಾಗಲಿದೆ.
ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಮತ್ತು ನೈತಿಕ ಹೊಣೆಗಾರಿಕೆ ರಕ್ಷಿಸಿಕೊಳ್ಳಲು ಭದ್ರತಾ ಪಡೆಗಳನ್ನು ಬಳಸಿಕೊಳ್ಳುವುದು ಸಂವಿಧಾನ ಬದ್ಧ ರಾಜ್ಯವೊಂದರ ಪ್ರಾಥಮಿಕ ಹೊಣೆಗಾರಿಕೆಯಾಗಿರುತ್ತದೆ. ಇದೇ ಕಾರಣಕ್ಕೆ ಮಾವೊವಾದಿಗಳ ಅಡಗುದಾಣವನ್ನು ಧ್ವಂಸ ಮಾಡುವುದು, ಉಗ್ರಗಾಮಿ ಮುಖಂಡ ಬುರ್ಹಾನ್‌ ವಾನಿನನ್ನು ಕೊಲ್ಲುವುದು  ಶ್ಲಾಘನೆಗೆ ಒಳಗಾಗುತ್ತದೆ. ಘೋಷಣೆ ಕೂಗಿದವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿರುವುದನ್ನು ಪ್ರಶ್ನಿಸುವಂತೆ, ಮಾನವ ಗುರಾಣಿಯನ್ನಾಗಿ ಬಳಸುವ ಪ್ರವೃತ್ತಿಯನ್ನೂ ಪ್ರಶ್ನಿಸಬೇಕಾಗುತ್ತದೆ.

ಉದಾರವಾದದ ಯುಗ ಕೊನೆಗೊಂಡಿತು ಎಂದು ಪ್ರಲಾಪಿಸಿದ ನಂತರ, ಅನೇಕ ಪ್ರಮುಖ ವಿದ್ಯಮಾನಗಳೂ ಘಟಿಸಿವೆ.  ಫರೀದ್‌ ಝಕಾರಿಯಾ (ದಿ ರೈಸ್‌ ಆಫ್‌ ಇಲ್‌ಲಿಬರಲ್ ಡೆಮಾಕ್ರಸಿ, ಫಾರೆನ್ಸ್‌ ಅಫೇರ್ಸ್‌) ಮತ್ತು  ನಮಗೆ ಹೆಚ್ಚು ಪರಿಚಿತ ಹೆಸರಾದ ‘ದಿ ಫೈನಾನ್ಶಿಯಲ್‌ ಟೈಮ್ಸ್‌’ನ ಭಾರತದ ಈ ಹಿಂದಿನ ಪ್ರತಿನಿಧಿ ಎಡ್ವರ್ಡ್‌ ಲೂಸ್‌ (ದಿ ರಿಟ್ರೀಟ್‌ ಆಫ್‌ ವೆಸ್ಟರ್ನ್‌ ಲಿಬರಲಿಸಂ)  ಅವರು, ಜನರ ಚಿಂತನಾ ಕ್ರಮ ಬದಲಾಗಿರುವುದನ್ನು ತಮ್ಮ ಈ  ಕೃತಿಗಳಲ್ಲಿ ವಿಶ್ಲೇಷಿಸಿದ್ದಾರೆ.

ಶೀತಲ ಸಮರ ಕೊನೆಗೊಂಡ ನಂತರ 24ಕ್ಕೂ ಹೆಚ್ಚು ಪ್ರಜಾಸತ್ತಾತ್ಮಕ ದೇಶಗಳಲ್ಲಿನ ವೈಫಲ್ಯವನ್ನು ಇವರಿಬ್ಬರೂ ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.

‘ಪ್ರಸೆಂಟ್‌ ಶಾಕ್‌: ವ್ಹೆನ್‌ ಎವ್ರಿಥಿಂಗ್‌ ಹ್ಯಾಪನ್ಸ್‌ ನೌ’ ಕೃತಿ ಬರೆದಿರುವ ಅಮೆರಿಕದ ಮಾಧ್ಯಮ ವಿಶ್ಲೇಷಕ ಡಗ್ಲಾಸ್‌ ರಷ್‌ಕಾಫ್‌, ‘ನಮ್ಮೆಲ್ಲರ ಚಿಂತನಾ ಕ್ರಮ ಸೀಮಿತ ವ್ಯಾಪ್ತಿ ಹೊಂದಿರುವುದೇ ನಮ್ಮ ಕಾಲದ  ಅಸಹನೆಗೆ  ಕಾರಣ ಎಂದು ನಾವು ಆರೋಪಿಸುತ್ತೇವೆ. ಇದೇ ಕಾರಣಕ್ಕೆ ನಾವು ಕುಸಿದು ಹೋಗುತ್ತೇವೆ.  ನಮ್ಮ ಧ್ಯಾನಾಸಕ್ತ ಗುರುಗಳು ಇಷ್ಟಪಟ್ಟಿರುವಂತೆ ನಾವು ಬದುಕುತ್ತಿಲ್ಲ’ ಎಂದು ಅವರು ವಿಶ್ಲೇಷಿಸಿದ್ದಾರೆ.
ನಿರಂತರವಾದ ಚಿಂತನ ಮಂಥನದಲ್ಲಿ ನಾವು ಸಿಲುಕಿಕೊಂಡಿದ್ದೇವೆ.  ಪ್ರಶ್ನಿಸುವ ಸಾಮರ್ಥ್ಯವನ್ನೇ  ನಾವು ಕಳೆದುಕೊಂಡಿದ್ದೇವೆ ಇಲ್ಲವೆ ನಮ್ಮಿಷ್ಟದ ಆಲೋಚನಾ ಕ್ರಮವನ್ನು  ಆಯ್ಕೆ ಮಾಡಿಕೊಳ್ಳಲೂ ವಿಫಲವಾಗಿದ್ದೇವೆ. ಇಂತಹ ಭಾವೋದ್ರೇಕದ ಸಂದರ್ಭಗಳಲ್ಲಿ, ನಮಗೆ  ಹೆಚ್ಚು ಅನುಕೂಲಕರವಾದ ಚಿಂತನೆಯನ್ನೇ ನಾವು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ.  ನಮ್ಮ ಎದುರಾಳಿ ಚಿಂತನಾ ಬಣದಲ್ಲಿ ಇರುವವರ ಜತೆ ಸದಾ ಸಂಘರ್ಷ ಹೊಂದಲೂ ನಾವು ಇಷ್ಟಪಡುತ್ತೇವೆ. ಇದರ ಫಲವಾಗಿ ಎರಡೂ ಬಣಗಳ ನಡುವೆ  ಭಿನ್ನಾಭಿಪ್ರಾಯದ ಕಂದಕ ದೊಡ್ಡದಾಗಿ ನಿರ್ಮಾಣ ಆಗುತ್ತಿದೆ.

ಫ್ರಾನ್ಸ್‌ನ ಅಧ್ಯಕ್ಷ ಚುನಾವಣೆಯಲ್ಲಿ  ಇಮ್ಮಾನ್ಯುಯೆಲ್‌ ಮ್ಯಾಕ್ರೊನ್‌ ಅವರ ಭರ್ಜರಿ ಗೆಲುವು,  ಮುಕ್ತ ಚಿಂತನಾ ವಾತಾವರಣವು ಎಷ್ಟು ಉಪಯುಕ್ತವಾಗಿರಲಿದೆ ಎನ್ನುವುದನ್ನು ತೋರಿಸುತ್ತದೆ. ನಮ್ಮ–ನಿಮ್ಮ ವಿಚಾರಧಾರೆಗೆ ಅನುಗುಣವಾಗಿ ದಿಟ್ಟತನದಿಂದ ಮುನ್ನಡೆದರೆ ಅದರಿಂದಾಗುವ ಒಳಿತನ್ನು ಮ್ಯಾಕ್ರೊನ್‌ ಅವರ ಯಶೋಗಾಥೆ ಸಾಬೀತುಪಡಿಸುತ್ತದೆ.

ಮ್ಯಾಕ್ರೊನ್‌ ಅವರ ಗೆಲುವು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜನಪ್ರಿಯತೆ ಕುಸಿಯುತ್ತಿರುವುದು, ಜರ್ಮನಿಯ ಛಾನ್ಸಲರ್‌ ಏಂಜೆಲಾ ಮರ್ಕೆಲ್ ಅವರು ಅಧಿಕಾರದಲ್ಲಿ  ಹಿಡಿತ ಸಾಧಿಸಿರುವುದು  ಮತ್ತು ಅನೇಕರು ಬ್ರೆಕ್ಸಿಟ್‌  ಬಗ್ಗೆ ವಿಷಾದ ಭಾವನೆ ಹೊಂದಿರುವುದನ್ನು  ನೋಡಿದರೆ, ಮಧ್ಯಮ ಮಾರ್ಗವನ್ನು ಅತಿಯಾಗಿ ನೆಚ್ಚಿಕೊಂಡಿರುವುದನ್ನು ಕೈಬಿಡುವ ಪ್ರವೃತ್ತಿ ವಿಶ್ವದಾದ್ಯಂತ ಕಂಡು ಬರುತ್ತಿರುವುದು ದೃಢಪಡುತ್ತದೆ.

ಮ್ಯಾಕ್ರೊನ್‌ ಅವರ ಗೆಲುವು, ನಮ್ಮ ಶಬ್ದ  ಭಂಡಾರವನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ. ಸುಧಾರಣಾವಾದಿ ಮಧ್ಯಮ ಮಾರ್ಗ ಮತ್ತು ಸದೃಢ ಮಧ್ಯಮ ಮಾರ್ಗ ಎನ್ನುವ ಹೊಸ ಶಬ್ದಗಳ ಸೇರ್ಪಡೆಗೆ ಅನುವು ಮಾಡಿಕೊಟ್ಟಿದೆ. ಭಾರತದ ಬುದ್ಧಿಜೀವಿಗಳು ಪಶ್ಚಿಮದ ದೇಶಗಳಿಂದ ಅದರಲ್ಲೂ ವಿಶೇಷವಾಗಿ ಯುರೋಪ್‌ನಿಂದ ಚಿಂತನೆಗಳನ್ನು  ಎರವಲು ಪಡೆಯುವುದನ್ನು ಮುಂದುವರೆಸಿಕೊಂಡು ಬಂದಿದ್ದಾರೆ.  ಈ ಹೊಸ ಚಿಂತನಾ ಕ್ರಮಗಳ ಕುರಿತು ಹೊಸ ಚರ್ಚೆ ನಡೆಸುವುದಕ್ಕೆ ಸೀಮಿತಗೊಳಿಸಲು ಉತ್ತೇಜನ ನೀಡಲಿವೆ.

ನಿರ್ಲಕ್ಷಿತ ಸ್ಥಳಗಳಲ್ಲಿಯೂ ಕೆಲವೊಮ್ಮೆ  ಬುದ್ಧಿವಂತಿಕೆಯು  ತನ್ನ ಅಸ್ತಿತ್ವ ಸಾಬೀತುಪಡಿಸುತ್ತದೆ. ಇ–ಕಾಮರ್ಸ್‌ ಮಾರುಕಟ್ಟೆ ತಾಣ ಸ್ನ್ಯಾಪ್‌ಡೀಲ್‌ನ ಘೋಷವಾಕ್ಯ ಬರೆಯುವಾಗ, ಹೊಸ ನುಡಿಗಟ್ಟು  ‘ಪೆಟ್ಟಿಗೆಯಿಂದ ಬದುಕಿನ ಹೊಸ ಉತ್ಪನ್ನ ಹೊರತೆಗೆಯಿರಿ’ (ಅನ್‌ಬಾಕ್ಸ್‌ ಜಿಂದಗಿ) ಬರೆದಿರುವುದು ಇಲ್ಲಿ ಉಲ್ಲೇಖನೀಯ.

ಅದೇ ಬಗೆಯಲ್ಲಿ,  ನಮ್ಮ ಸಮಾಜ ಮತ್ತು ಅರ್ಥ ವ್ಯವಸ್ಥೆಯನ್ನು ಉದಾರೀಕರಣಗೊಳಿಸುವ ಹೊಸ ಚಿಂತನೆಯನ್ನು ಭಾರತದಲ್ಲಿನ ಉದಾರವಾದಿಗಳು ಕಂಡು ಹಿಡಿಯಬೇಕಾಗಿದೆ.  ಸಂವಿಧಾನದ ಪಾವಿತ್ರ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗದ ರೀತಿಯಲ್ಲಿ  ಇಂತಹ  ಹೊಸ ಚಿಂತನಾ ಕ್ರಮವನ್ನು ರೂಪಿಸಬೇಕಾಗಿದೆ. ಭಯೋತ್ಪಾದನೆ ಅಥವಾ ಮಾವೊವಾದಿಗಳ ಹಿಂಸೆಯ ಮೂಲ ಕಾರಣಗಳನ್ನು ಕ್ಷಮಿಸದೆ ಹೊಸ ಆಲೋಚನೆಯ ಹೊಳವು ಹಾಕಬೇಕಾಗಿದೆ. ಇಂತಹ ಹೊಸ ಚಿಂತನಾ ಕ್ರಮ ಕಂಡುಕೊಂಡರೆ, ಯಾರೊಬ್ಬರೂ ಜಂತರ್ ಮಂತರ್‌ಗೆ ತೆರಳಿ ಪ್ರತಿಭಟನೆ ನಡೆಸುವ ಇಲ್ಲವೇ ಎರಡೂ ಕಡೆಯ ಹ್ಯಾಷ್‌ಟ್ಯಾಗ್‌ ಬೆಂಬಲಿಸುವ  ಅಗತ್ಯವೇ ಕಂಡು ಬರಲಾರದು. ಉದಾರವಾದ ಧೋರಣೆಯಿಂದ ದೂರ ಸರಿಯುವವರಿಗೆ ನನ್ನದೊಂದು ಸಲಹೆ ಇದೆ. ನಾನು ಬಲಪಂಥೀಯ ಎಂದು ಎಡ ಪಂಥೀಯರು ಮತ್ತು ನಾನು ಎಡಪಂಥೀಯ ಎಂದು ಬಲಪಂಥೀಯರು ಧೋರಣೆ ತಳೆಯಬೇಕು.  ಇದರಿಂದ ಎರಡೂ ಬಗೆಯ ವಿಚಾರಧಾರೆಯವರು ಎರಡೂ ಕಡೆ ಸಲ್ಲಬಹುದು.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT