ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಣಿಕೆಗೆ ನಿಲುಕದ ಪೇಟೆಯ ಚಲನೆ

Last Updated 25 ಫೆಬ್ರುವರಿ 2018, 20:08 IST
ಅಕ್ಷರ ಗಾತ್ರ

ಷೇರುಪೇಟೆ ಮತ್ತು ಸೂಚ್ಯಂಕಗಳು ಕುಸಿತದಲ್ಲಿವೆ. ಮತ್ತಷ್ಟು ಕುಸಿಯಲಿವೆ ಎಂಬ ವಿಶ್ಲೇಷಣೆಗಳ ನಡುವೆಯೂ ದೊರೆಯಬಹುದಾದ ಅವಕಾಶಗಳ ಬಗ್ಗೆ ಗಮನಹರಿಸಿದರೆ ಮಾತ್ರ ಹೂಡಿಕೆಯ ಪ್ರಕ್ರಿಯೆಯು ಯಶಸ್ಸು ಕಾಣಲು ಸಾಧ್ಯ.

ಕಳೆದ ಒಂದು ತಿಂಗಳಲ್ಲಿ ಪ್ರಮುಖ ಕಂಪನಿಗಳಾದ ಅರವಿಂದೊ ಫಾರ್ಮಾ, ಗ್ಲೆನ್ ಮಾರ್ಕ್ ಫಾರ್ಮಾ,  ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್, ರಿಲಯನ್ಸ್ ಕ್ಯಾಪಿಟಲ್,  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಮುಂತಾದವುಗಳು ವಾರದ ಮಧ್ಯಂತರದಲ್ಲಿ ಭಾರಿ ಕುಸಿತ ಪ್ರದರ್ಶಿಸಿ ಪುಟಿದೆದ್ದಿವೆ.  ಈ ರೀತಿಯ ಅಪರೂಪದ ಅವಕಾಶಗಳನ್ನು, ಹಗರಣಗಳಿಂದ ಹೊರಗಿರುವಂತಹ ಕಂಪನಿಗಳು ಒದಗಿಸುವ ಅವಕಾಶವನ್ನು ಉಪಯೋಗಿಸಿಕೊಳ್ಳುವುದೇ ಇಂದಿನ ಅವಶ್ಯಕವಾಗಿದೆ.  ಕೆಲವು ಬ್ಯಾಂಕ್ ಷೇರುಗಳು ವಿಶೇಷವಾಗಿ ಸರ್ಕಾರಿ ವಲಯದ ಬ್ಯಾಂಕ್‌ಗಳು ಕುಸಿತದಲ್ಲಿರುವಾಗ ದೀರ್ಘಕಾಲೀನ  'ಎಸ್ಐಪಿ' ಮಾದರಿಯ ಹೂಡಿಕೆಗೆ ಅಪರೂಪದ ಅವಕಾಶವಾಗಿದೆ.

ಸೋಮವಾರ ಪೇಟೆಯ ವಾತಾವರಣವು ನಿರಾಶೆದಾಯಕವಾಗಿದ್ದರೂ ಅಂದು ಬಾಂಬೆ ಡೈಯಿಂಗ್ ಕಂಪನಿ ಷೇರಿನ ಬೆಲೆ ₹ 271 ರ ಸಮೀಪದಿಂದ ₹ 287 ರವರೆಗೂ ಏರಿಕೆ ಕಂಡು ನಂತರ ₹ 282 ರಲ್ಲಿ ಕೊನೆಗೊಂಡಿತು.  ಮುಂದಿನ 28 ರಂದು ಕಂಪನಿ ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ ಎಂಬ ಕಾರಣ ರೇನ್ ಇಂಡಸ್ಟ್ರೀಸ್ ಷೇರಿನ ಬೆಲೆಯೂ ₹355 ರ ಸಮೀಪದಿಂದ ₹396 ರವರೆಗೂ ಏರಿಕೆ ಕಂಡಿದೆ. ಪೇಟೆಯಲ್ಲಿ ಇನ್ನೂ ಸತ್ವವು ತುಂಬಿಕೊಂಡಿದೆ ಎಂಬುದು ಇದರಿಂದ ಬಿಂಬಿತವಾಗುತ್ತದೆ.

ಮಂಗಳವಾರ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ರೇಟಿಂಗ್‌  ಇಳಿಕೆಯಾಗಲಿದೆ ಎನ್ನುವ ಸುದ್ದಿಯು ಹೊರಬರುತ್ತಿದ್ದಂತೆ ಷೇರಿನ ಬೆಲೆ ಚೇತರಿಕೆ ಕಂಡಿದ್ದು ವಿಸ್ಮಯಕಾರಿ ಅಂಶವಾಗಿದೆ.  ಈ ಸುದ್ದಿಯು ಬ್ಯಾಂಕಿಂಗ್ ವಲಯದ ಷೇರುಗಳ ಮೇಲಿನ ಒತ್ತಡಕ್ಕೂ ಕಾರಣವಾಯಿತು.

ಬುಧವಾರ  ಚಟುವಟಿಕೆ ಆರಂಭಿಕ ಕ್ಷಣಗಳ ನಂತರ  ಬಯೋಕಾನ್ ಷೇರಿನ ಬೆಲೆ ₹553ರ ಸಮೀಪಕ್ಕೆ ಕುಸಿಯಿತು.  ಈ ಸಮಯದಲ್ಲಿ ಹೊರಬಂದ ಸುದ್ದಿ ಎಂದರೆ ಅಮೆರಿಕದ ಎಫ್‌ಡಿಎ ತನಿಖೆಯಲ್ಲಿ ಕಂಪನಿಗೆ ಆರು ನ್ಯೂನ್ಯತೆಗಳನ್ನು ಗುರುತಿಸಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿತು.  ನಂತರ ಸ್ವಲ್ಪ ಚೇತರಿಕೆ ಕಂಡ ಷೇರಿನ ಬೆಲೆ ವಿಭಿನ್ನತೆಯನ್ನು ಪ್ರದರ್ಶಿಸಿ ಏರಿಕೆ ಕಂಡು ₹592 ರವರೆಗೂ ಏರಿಕೆ ಪ್ರದರ್ಶಿಸಿ ₹581 ರ ಸಮೀಪ ಕೊನೆಗೊಂಡಿತು. ಒಂದು ನಕಾರಾತ್ಮಕ ಅಂಶವನ್ನು ಪೇಟೆ ಕಡೆಗಣಿಸಿ ಏರಿಕೆ ಪ್ರದರ್ಶಿಸಿದೆ. ಇದಕ್ಕೆ ಕಾರಣ ಕಂಪನಿ ಷೇರಿನ ಬೆಲೆ  ಒಂದು ತಿಂಗಳಲ್ಲಿ ₹100 ರಷ್ಟು ಇಳಿಕೆ ಕಂಡಿರುವುದಲ್ಲದೆ, ಮೂಲಾಧಾರಿತ ಪೇಟೆಯ ಚುಕ್ತಾದಿನ ಸಮೀಪವಿರುವುದು ಪ್ರಭಾವಿ ಅಂಶವಾಗಿರಬಹುದು.

ಈ ಏರಿಕೆ ಮುಂದುವರೆದು ಗುರುವಾರ ಷೇರಿನ ಬೆಲೆ ₹624 ರವರೆಗೂ ಏರಿಕೆ ಕಂಡಿದೆ.  ಕೇವಲ ಎರಡೇ ದಿನಗಳಲ್ಲಿ ಎಪ್ಪತ್ತು ರೂಪಾಯಿಗಳಷ್ಟು ಏರಿಕೆ ಪ್ರದರ್ಶಿಸಿರುವುದು ವಿಸ್ಮಯಕಾರಿಯಾಗಿದೆ.

ಪೇಟೆಯ ನಡೆ ವಿಚಿತ್ರವಾಗಿರುತ್ತದೆ ಎಂಬುದಕ್ಕೆ ಶುಕ್ರವಾರ ಸನ್ ಫಾರ್ಮ ಕಂಪನಿ ಷೇರಿನ ಬೆಲೆ ಪ್ರದರ್ಶಿಸಿದ ಚಲನೆಯು ಉತ್ತಮ ನಿದರ್ಶನವಾಗಿದೆ.  ಅಂದು ಅಮೆರಿಕದ ಎಫ್‌ಡಿಎ ತನ್ನ ತನಿಖೆ ಮುಗಿಸಿ ಮೂರು ನ್ಯೂನ್ಯತೆಗಳ ಬಗ್ಗೆ ಫಾರಂ 483 ಮೂಲಕ ನೀಡಿದೆ ಎಂದರೂ ಷೇರಿನ ಬೆಲೆ ಚುರುಕಾದ ಏರಿಕೆಗೊಳಪಟ್ಟಿತು.  ಈ ರೀತಿಯ ಬೆಲೆ ಏರಿಕೆಗೆ ಕಂಪನಿ ತನ್ನ ಪ್ರತಿಕ್ರಿಯೆಯಲ್ಲಿ 15 ದಿನಗಳಲ್ಲಿ ಈ ನ್ಯೂನ್ಯತೆಗಳಿಗೆ  ಸ್ಪಂದಿಸುವ  ಭರವಸೆ ನೀಡಿದೆ ಎಂಬುದಾಗಿದೆ. ಷೇರಿನ ಬೆಲೆಯೂ ಗುರುವಾರದಿಂದಲೇ  ₹520 ರ ಸಮೀಪದಿಂದ ಶುಕ್ರವಾರ ₹575 ರವರೆಗೂ ಜಿಗಿತ ಕಂಡಿರುವುದು ಕೇವಲ ವ್ಯಾವಹಾರಿಕ ದೃಷ್ಟಿ ಮಾತ್ರವೆನಿಸುತ್ತದೆ.

ಬ್ಯಾಂಕಿಂಗ್ ವಲಯದ ಕೆಲವು ಹಗರಣಗಳು ಮುಂಚೂಣಿಗೆ ಬಂದಿದ್ದು,  ಲೇಖನಿಗಳ ತಯಾರಿಕಾ ಕಂಪನಿಯ ಪ್ರವರ್ತಕರನ್ನು ಬಂಧಿಸಲಾಗಿದೆ.  ದೆಹಲಿಯ ವಜ್ರಾಭರಣ ವಲಯದ ಕಂಪನಿಯ ಮೇಲೆ, ಓರಿಯಂಟಲ್ ಬ್ಯಾಂಕ್ ನ ದೂರಿನ ಮೇಲೆ ಕೇಸು ದಾಖಲಿಸಲಾಗಿದೆ.  ಈ ಬೆಳವಣಿಗೆಗಳ ಮಧ್ಯೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಷೇರಿನ ಬೆಲೆ ಈ ವಾರ ₹ 111 ರವರೆಗೂ ಕುಸಿದಿದೆ.  ಒಂದು ತಿಂಗಳಲ್ಲಿ ₹197 ರ ಸಮೀಪದಿಂದ ಹಗರಣದ ಕಾರಣ  ಇಳಿಕೆಗೊಳಗಾಗಿದೆ.  ಗೀತಾಂಜಲಿ ಜೆಮ್ಸ್ ಷೇರಿನ ಬೆಲೆ ₹24.80 ರ ಕನಿಷ್ಠ ಬೆಲೆಗೆ ಕೊಳ್ಳುವವರಿಲ್ಲದೆ ಕುಸಿದಿದೆ. ಈ ಷೇರಿನ ಬೆಲೆ ಒಂದು ತಿಂಗಳಲ್ಲಿ ₹69 ರ ಸಮೀಪದಿಂದ ₹24 ರ ಸಮೀಪಕ್ಕೆ ಕುಸಿದಿರುವುದು, ಪೇಟೆಯಲ್ಲಿ ಈ ಕಂಪನಿಗಳ ಬಗ್ಗೆ ಮೂಡಿರುವ ಅಸ್ಪೃಶ್ಯತಾ ಭಾವನೆ ಬಿಂಬಿತವಾಗುತ್ತದೆ.

ಇದೇ ರೀತಿಯ ಬೆಳವಣಿಗೆಯನ್ನು ಅರವಿಂದೋ ಫಾರ್ಮ ಷೇರು ಸಹ ಪ್ರದರ್ಶಿಸಿದೆ.  ವಾರದ ಆರಂಭದಲ್ಲಿ ₹600 ರಿಂದ ₹560 ರವರೆಗೂ ಕುಸಿದು ನಂತರ ಪುಟಿದೆದ್ದು ವಾರಾಂತ್ಯದಲ್ಲಿ ₹611 ರವರೆಗೂ ಜಿಗಿತ ಕಂಡಿದೆ.

ಅಪೆಕ್ಸ್ ಫ್ರೋಜನ್ ಫುಡ್ ಷೇರಿನ ಬೆಲೆಯು ಕಳೆದ ಒಂದು ತಿಂಗಳಲ್ಲಿ ₹810 ರ ಸಮೀಪದಿಂದ ಕುಸಿದಿದೆ.  ವ್ಯಾಲ್ಯೂ ಪಿಕ್ ಚಟುವಟಿಕೆಗೆ ಶುಕ್ರವಾರ ಷೇರಿನ ಬೆಲೆ  ₹638 ರ ಸಮೀಪಕ್ಕೆ ಕುಸಿದಿದ್ದಾಗ ಆರಂಭವಾಗಿ ಷೇರಿನ ಬೆಲೆ ₹727 ರವರೆಗೂ ಪುಟಿದೇಳುವಂತಾಗಿ, ₹708 ರ ಸಮೀಪ ವಾರಾಂತ್ಯ ಕಂಡಿದೆ.

ಷೇರುಪೇಟೆಯ ಚಲನೆಯು ನಿಖರವಾಗಿ ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಈ ವಾರ ಸಾಬೀತಾಗಿದೆ.  ವಾರದುದ್ದಕ್ಕೂ ನಿರಾಶೆದಾಯಕವಾಗಿದ್ದ ಷೇರುಪೇಟೆಯು ಕೊನೆಯಲ್ಲಿ ದಿಢೀರ್ ದಿಸೆ ಬದಲಿಸಿತು.  ಸಂವೇದಿ ಸೂಚ್ಯಂಕ 322 ಪಾಯಿಂಟುಗಳ ಏರಿಕೆ ಕಂಡುಕೊಂಡಿತು. ಮಧ್ಯಮ ಶ್ರೇಣಿ ಸೂಚ್ಯಂಕ 239 ಪಾಯಿಂಟು,  ಕೆಳಮಧ್ಯಮ ಶ್ರೇಣಿ ಸೂಚ್ಯಂಕ 272 ಪಾಯಿಂಟು  ಏರಿಕೆ ಪಡೆದುಕೊಂಡರೂ ವಾರಾಂತ್ಯವನ್ನು ಕ್ರಮವಾಗಿ 40 ಮತ್ತು 39 ಪಾಯಿಂಟುಗಳ ಇಳಿಕೆ ಪಡೆದುಕೊಂಡಿದೆ.  ಸಂವೇದಿ ಸೂಚ್ಯಂಕ 131 ಪಾಯಿಂಟುಗಳ ಏರಿಕೆ ಪಡೆದುಕೊಂಡಿತು.  ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ₹5,781 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹5,972 ಕೋಟಿ ಮೌಲ್ಯದ ಷೇರು ಖರೀದಿಸಿವೆ.  ಪೇಟೆಯ ಬಂಡವಾಳೀಕರಣ ಮೌಲ್ಯವು ₹147.21 ಲಕ್ಷ ಕೋಟಿಗಳಲ್ಲಿ ಸ್ವಲ್ಪ ಏರಿಕೆ ಪಡೆದುಕೊಂಡಿದೆ.

ಹೊಸ ಷೇರಿನ ವಿಚಾರ

* ಹೆಚ್ ಜಿ ಇನ್ಫ್ರಾ ಎಂಜಿನಿಯರಿಂಗ್ ಲಿಮಿಟೆಡ್ ಕಂಪನಿಯು ಫೆಬ್ರವರಿ 26 ರಿಂದ 28 ರವರೆಗೂ,  ಪ್ರತಿ ಷೇರಿಗೆ ₹263 ರಿಂದ ₹270 ರ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದೆ.  ಅರ್ಜಿಯನ್ನು 55 ಷೇರುಗಳು ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

* ಇತ್ತೀಚಿಗೆ ಪ್ರತಿ ಷೇರಿಗೆ ₹190 ರಂತೆ ಆರಂಭಿಕ ಷೇರು ವಿತರಿಸಿದ ಆಸ್ಟರ್ ಡಿ ಎಂ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿಯ ಷೇರುಗಳು 26 ರಿಂದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಲಾಭಾಂಶ ವಿಚಾರ

* ಅಂಬುಜಾ ಸಿಮೆಂಟ್ ಪ್ರತಿ ಷೇರಿಗೆ ₹2,  ಕೆ ಎಸ್ ಬಿ ಪಂಪ್ಸ್ ಪ್ರತಿ ಷೇರಿಗೆ ₹6, ಮರ್ಕ್ ಪ್ರತಿ ಷೇರಿಗೆ ₹15,  ಸನೋಫಿ ಪ್ರತಿ ಷೇರಿಗೆ ₹53, ಡಿ ಸಿ ಎಂ ಶ್ರೀರಾಮ್ ಪ್ರತಿ ಷೇರಿಗೆ ₹3.40.

‘ನಿಫ್ಟಿ'ಯಲ್ಲಿ ಬದಲಾವಣೆ

* ಏಪ್ರಿಲ್ 2 ರಿಂದ ಎನ್ ಎಸ್ ಇ ಸೂಚ್ಯಂಕ ನಿಫ್ಟಿಯಲ್ಲಿರುವ  ಅರವಿಂದೊ ಫಾರ್ಮಾ,  ಅಂಬುಜಾ ಸಿಮೆಂಟ್, ಬಾಷ್‌ಗಳ ಬದಲಾಗಿ ಗ್ರಾಸಿಮ್, ಟೈಟಾನ್ ಮತ್ತು ಬಜಾಜ್ ಫಿನ್ ಸರ್ವ್ ಕಂಪನಿಗಳನ್ನು ಸೇರಿಸಲಾಗಿದೆ.

ವಾರದ ಮುನ್ನ

ರೂಪಾಯಿಯ ಬೆಲೆಯ ಇಳಿಕೆಯ ಕಾರಣ ರಫ್ತು ಆಧಾರಿತ ತಾಂತ್ರಿಕ ವಲಯದ ಷೇರುಗಳಲ್ಲಿ ಹೆಚ್ಚು ಚಟುವಟಿಕೆ ಮೂಡಿದ್ದು ಈ ವಾರವೂ ಏರಿಳಿತಗಳು ಉಂಟಾಗುವ ಸಾಧ್ಯತೆಯಿದೆ.  ಕೇವಲ ವಿದೇಶಿ ಸೂಚ್ಯಂಕಗಳಿಗೆ ಸ್ಪಂದಿಸುತ್ತಿದ್ದ ಪೇಟೆ ಈಗ ಕರೆನ್ಸಿ ಒತ್ತಡಕ್ಕೂ ಸ್ಪಂದಿಸಬೇಕಾಗಿದೆ.  ಪ್ರಮುಖ ಕಂಪನಿಗಳಾದ ಪವರ್ ಫೈನಾನ್ಸ್ ಕಾರ್ಪೊರೇಷನ್ ಎರಡನೇ ಮಧ್ಯಂತರ ಲಾಭಾಂಶವನ್ನು ಸೋಮವಾರ,  ಒಎನ್‌ಜಿಸಿ ಮಂಗಳವಾರ ಲಾಭಾಂಶ ಪ್ರಕಟಿಸಲಿವೆ.   ಗೃಹ ವಲಯದ ಹೌಸಿಂಗ್ ಅಂಡ್ ಅರ್ಬನ್ ಡೆವೆಲಪ್‌ಮೆಂಟ್ ಕಾರ್ಪೊರೇಷನ್ (ಹುಡ್ಕೊ) ಸಹ 28 ರಂದು ಲಾಭಾಂಶ ವಿತರಣೆಯನ್ನು ಪರಿಶೀಲಿಸಲಿದೆ.

ಜಾಗತಿಕ ಪೇಟೆಗಳ ನಡೆಗೆ ಸ್ಪಂದಿಸುವುದರ ಜೊತೆಗೆ, ಸ್ಥಳೀಯ ತನಿಖೆಗಳ ಸುದ್ದಿಯು ಮುಂದಿನ ದಿನಗಳಲ್ಲಿನ ಚಟುವಟಿಕೆಗೆ ದಾರಿದೀಪವಾಗಲಿದೆ.  ವಿನಾ ಕಾರಣ ಕೆಲವು ಕಳಪೆ ಕಂಪನಿಗಳು, ವಿರಳ ಚಟುವಟಿಕೆ ಕಂಪನಿಗಳು ಚುರುಕಾದ ಚಟುವಟಿಕೆ ಪ್ರದರ್ಶಿಸಿದಲ್ಲಿ ಅಂತಹವುಗಳಿಂದ ದೂರವಿರುವುದು ಉತ್ತಮ.  ವರ್ಷಾಂತ್ಯದಲ್ಲಿ ವ್ಯಾಲ್ಯೂಯೇಷನ್ ಗಾಗಿ ಕೆಲವು ಚಟುವಟಿಕೆಗೆ ಬರುವುದು ಸಾಧ್ಯವಿದೆ. ಹೆಚ್ಚಿನ ಎಚ್ಚರ ಅಗತ್ಯ. ವರ್ಷಾಂತ್ಯದ ಚಟುವಟಿಕೆಯಲ್ಲಿ ಉಂಟಾಗಬಹುದಾದ ಏರಿಕೆ ಅಥವಾ ಇಳಿಕೆಗಳು ತಾತ್ಕಾಲಿಕವಾಗಿದ್ದು, ಅವಕಾಶಗಳನ್ನು ನಗದೀಕರಣಕ್ಕೆ ಉಪಯೋಗಿಸಿಕೊಳ್ಳುವುದು ಉತ್ತಮ.

(ಮೊ:9886313380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT