ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಬಂಗಾಳಗಳು: ವೈರುಧ್ಯಗಳ ಬೀಡು

Last Updated 28 ಜೂನ್ 2012, 19:30 IST
ಅಕ್ಷರ ಗಾತ್ರ

ಭಾರತಕ್ಕೆ ಹತ್ತಿರವಾಗಿರುವ ಅಥವಾ ಭಾರತದ ಗಡಿಗೆ ಹೊಂದಿಕೊಂಡಿರುವ ರಾಷ್ಟ್ರಗಳ ಪೈಕಿ ಚೀನಾ ಹಾಗೂ ಆಫ್ಘಾನಿಸ್ತಾನಗಳಿಗೆ ಒಮ್ಮೆ ಹೋಗಿದ್ದೇನೆ. ಶ್ರೀಲಂಕಾ, ನೇಪಾಳಗಳಿಗೆ ಎರಡು ಬಾರಿ ಹಾಗೂ ಪಾಕಿಸ್ತಾನಕ್ಕೆ ಮೂರು ಬಾರಿ ಹೋಗಿದ್ದೇನೆ.

ಭೂತಾನ್‌ಗೆ ಭೇಟಿ ನೀಡುವ ಹಲವು ಆಹ್ವಾನಗಳನ್ನು ನಿರಾಕರಿಸಿದ್ದೇನೆ. ಆದರೆ ಬಾಂಗ್ಲಾದೇಶ ಅಥವಾ ಬರ್ಮಾಗೆ ಯಾರಾದರೂ ಆಹ್ವಾನ ನೀಡಿದಲ್ಲಿ ನಾನು ಯಾವುದೇ ಹಿಂಜರಿಕೆ ಇಲ್ಲದೆ ಒಪ್ಪಿಕೊಳ್ಳುತ್ತೇನೆ.  ಭೂತಾನ್ ತುಂಬಾ ಸುಂದರವಾಗಿದೆ ಎಂದು ನಾನು ಕೇಳಿದ್ದೇನೆ.
 
ನಾನು ಸಸ್ಯವಿಜ್ಞಾನಿಯೊ, ಬೌದ್ಧ ಮತಾನುಯಾಯಿಯೊ ಅಥವಾ ಪಕ್ಷಿವೀಕ್ಷಕನೋ ಆಗಿದ್ದರೆ,  ಖಂಡಿತಾ ಅಲ್ಲಿಗೆ ಹೋಗಲು ನಾನು ಇಚ್ಛಿಸಿರುತ್ತಿದ್ದೆ. ಆದರೆ ನನ್ನ ಆಸಕ್ತಿಗಳ ಕುರಿತು ಹೇಳುವುದಾದರೆ, ನಾನು ಬರ್ಮಾ ಹಾಗೂ ಬಾಂಗ್ಲಾದೇಶಗಳ ಬಗ್ಗೆ ಹೆಚ್ಚು ಆಕರ್ಷಿತನಾದವನು. ಹೋಲಿಕೆಯಲ್ಲಿ ಇವು  ಹೆಚ್ಚು ದೊಡ್ಡದಾದ ರಾಷ್ಟ್ರಗಳು. ಜೊತೆಗೆ ಸಮಾಜಶಾಸ್ತ್ರೀಯ ದೃಷ್ಟಿ ಹಾಗೂ ಇತ್ತೀಚಿನ ಪ್ರಕ್ಷುಬ್ಧ ಇತಿಹಾಸಗಳಿಂದಾಗಿ ಹೆಚ್ಚು ಸಂಕೀರ್ಣವಾದಂತಹವು.

ನಲವತ್ತು ವರ್ಷಗಳ ಹಿಂದೆ ಸ್ವತಂತ್ರ ಬಾಂಗ್ಲಾ ದೇಶದ ಉದಯವನ್ನು ಪಾಶ್ಚಿಮಾತ್ಯ ರಾಜಕೀಯ ವೀಕ್ಷಕರು ಸಂಶಯದಿಂದ ಕಂಡಿದ್ದರು. ತನ್ನನ್ನು ತಾನು ನೋಡಿಕೊಳ್ಳಲಾಗದ ಅಪ್ರಯೋಜಕ ರಾಷ್ಟ್ರವಾಗುತ್ತದೆ ಅದು ಎಂದು ಭಾವಿಸಲಾಗಿತ್ತು.
ಉಪವಾಸ ಸಾಯುವ ಬಡ ಬಂಗಾಳಿಗಳಿಗಾಗಿ ಧನಿಕ ದೇಶಬಾಂಧವರು ಹಣ ಹಾಗೂ ವಸ್ತು ರೂಪದ ಉಡುಗೊರೆಗಳನ್ನು ನೀಡಬೇಕೆಂದು ಜೋನ್ ಬೀಜ್‌ನಂತಹ ಎಲ್ಲರಿಗೂ ಒಳ್ಳೆಯದು ಮಾಡಬಯಸುವ ಸಹಾನುಭೂತಿಪರರು ಹಾಡುಗಳನ್ನೂ ಹಾಡ್ದ್ದಿದರು. ಇನ್ನು ಕೆಲವರು ಉದ್ಧಟತನ ತೋರಿದ್ದೂ ಉಂಟು.  `ಹುಟ್ಟಿಸುವುದು ಬಿಟ್ಟು ಬೇರೇನೂ ಸಾಧ್ಯವಿಲ್ಲದ ವ್ಯಕ್ತಿಗಳಿಗೆ ಅಕ್ಕಿ ಕಳಿಸುವುದು ವ್ಯರ್ಥ~ ಎಂದು ಖ್ಯಾತ ಅಮೆರಿಕನ್ ಜೀವಶಾಸ್ತ್ರಜ್ಞ ಗ್ಯಾರೆಟ್ ಹಾರ್ಡಿನ್ ಬರೆದಿದ್ದರು. ಆತನ ಪ್ರಕಾರ, ಬಾಂಗ್ಲಾ ದೇಶೀಯರನ್ನು ಉಪವಾಸ ಸಾಯಲಿಕ್ಕೆ ಬಿಟ್ಟು ಬಿಡಬೇಕಿತ್ತು.

ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದ ಮೊದಲ ದಶಕದಲ್ಲಿ ಈ ಮಾತು ರೂಢಿಯಲ್ಲಿತ್ತು. `ಸಾಮಾಜಿಕ ಸಂಘಟನೆ ಹಾಗೂ ತಂತ್ರಜ್ಞಾನದ ಆವಿಷ್ಕಾರಗಳಿಲ್ಲದಿದ್ದಲ್ಲಿ, ಭಾರಿ ಜನಸಂಖ್ಯೆಯ ರಾಷ್ಟ್ರಕ್ಕೆ ಆಹಾರ ಪೂರೈಸಿ ಸಾಕಾಗಿ ಸಾಮೂಹಿಕ ಕ್ಷಾಮಕ್ಕೆ ದಾರಿಯಾಗುತ್ತದೆ~ ಎಂಬಂತಹ ಮಾಲ್ತೂಸ್‌ನ ಮಾತುಗಳಿಗೆ ಬಾಂಗ್ಲಾ ಸಾಕ್ಷಿಯಾಗುತ್ತದೆ ಎಂದು ಆಗ ಹೇಳಲಾಗುತ್ತಿತ್ತು.

ಬಾಂಗ್ಲಾದೇಶದಲ್ಲಿನ ಜನನ ಪ್ರಮಾಣ ಕುರಿತಂತೆ  ವಿಶ್ವಸಂಸ್ಥೆಯ್ಲ್ಲಲೂ ಬೋಧನೆ ನೀಡಲಾಗಿತ್ತು. `ಢಾಕಾ ಅಥವಾ ಖುಲ್ನಾದಲ್ಲಿ ಜನಿಸಿದ ಮಗುವಿಗಿಂತ ಎಪ್ಪತ್ತು ಪಟ್ಟು ಹೆಚ್ಚು ಅಮೆರಿಕನ್ ಮಗು ಆಹಾರ ಸೇವಿಸುತ್ತದೆ~ ಎಂದು ಆಗ ಬಾಂಗ್ಲಾದೇಶಿ ರಾಜತಾಂತ್ರಿಕರು ಉತ್ತರಿಸಿದ್ದರು.

ಸಾಕುಪ್ರಾಣಿಗಳ ಆಹಾರವನ್ನು ಸಾಲುಸಾಲಾಗಿ ಜೋಡಿಸಿಟ್ಟ ನ್ಯೂಯಾರ್ಕ್ ಸೂಪರ್ ಮಾರ್ಕೆಟ್‌ಗೆ ಒಂದು ಭೇಟಿ ನೀಡಿದರೆ ಸಾಕು, ಒಂದು ಅಮೆರಿಕನ್ ನಾಯಿ ಅಥವಾ ಬೆಕ್ಕಿನ ಜನನ, ಒಂದು ಬಾಂಗ್ಲಾದೇಶಿ ಮಗುವಿನ ಜನನಕ್ಕಿಂತ ಹೆಚ್ಚಿನ ಮಟ್ಟಿಗೆ ಜಾಗತಿಕ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂದೂ ಒಬ್ಬರು ರಾಜತಾಂತ್ರಿಕರು  ದಿಟ್ಟ ನುಡಿಯಾಡಿದ್ದರು.

ಆ ನಂತರ ಬಾಂಗ್ಲಾದೇಶಿ ರಾಜತಾಂತ್ರಿಕರಿಗೆ ಉತ್ತರಿಸಲು ಇತರ ಇನ್ನೂ ಕ್ಲಿಷ್ಟಕರ ಪ್ರಶ್ನೆಗಳು ಎದುರಾಗಿದ್ದವು. ಸರಣಿ ಮಿಲಿಟರಿ ಕ್ಷಿಪ್ರಕ್ರಾಂತಿಗಳಾದವು. ಇಸ್ಲಾಮಿಕ್ ಮೂಲಭೂತವಾದ ತಲೆ ಎತ್ತಿತು. ಜನಸಂಖ್ಯೆಯ ಭಾರದಲ್ಲಿ ತುಂಬಿತುಳುಕುತ್ತಿರುವ ಈ ರಾಷ್ಟ್ರದ ಆಡಳಿತವನ್ನು, ಮುಲ್ಲಾಗಳ ಜೊತೆ ಕೈಜೋಡಿಸಿದ ಮಿಲಿಟರಿ ಜನರಲ್‌ಗಳು ನಡೆಸುತ್ತಿದ್ದಾರೆ ಎಂಬಂತಹ ವಿಚಾರವೇ ಈ ರಾಷ್ಟ್ರದ ಕುರಿತಾಗಿ ಹೆಚ್ಚು ಪ್ರಚಾರ ಪಡೆಯಿತು.

ನಿಧಾನಕ್ಕೆ ಈ ರಾಷ್ಟ್ರ ಕುರಿತಾಗಿ ಇರುವ ದೃಷ್ಟಿಕೋನ ಬದಲಾಗತೊಡಗಿತು. ರಾಷ್ಟ್ರದಲ್ಲಿ ಕ್ಷಾಮ ಇರಲಿಲ್ಲ. ವಾಸ್ತವವಾಗಿ ಬತ್ತದ  ಉತ್ಪಾದನೆ ರಾಷ್ಟ್ರದಲ್ಲಿ ನಿಧಾನಕ್ಕೆ ಹೆಚ್ಚಾಗತೊಡಗಿತು. ಕೈಗಾರಿಕಾ ವಲಯವೂ ಪ್ರಗತಿ ಸಾಧಿಸಿತು. ಜವಳಿಯ ಪ್ರಮುಖ ರಫ್ತುದಾರ ರಾಷ್ಟ್ರವಾಗಿ ಬಾಂಗ್ಲಾದೇಶ ಉದಯವಾಯಿತು.

ಸೇನಾ ಜನರಲ್‌ಗಳು ತಮ್ಮ ಬ್ಯಾರಕ್‌ಗಳಿಗೆ ಹಿಂದಿರುಗಿದರು. ನಾಗರಿಕ ಸರ್ಕಾರ ತನ್ನ ನೆಲೆ ಕಂಡುಕೊಂಡಿತು. ಬಂಗಾಳಿ ಇಸ್ಲಾಂ ನ  ಸಾಮಾನ್ಯ ತಿಳಿವಳಿಕೆ ಪುನರ್ ಪ್ರತಿಪಾದಿತಗೊಂಡಂತೆ ಜೆಹಾದಿಗಳೂ  ಹಿನ್ನೆಲೆಗೆ ಸರಿದರು.

ಬಾಂಗ್ಲಾದೇಶಿ ಸಮಾಜದ ಚೈತನ್ಯ ಹಾಗೂ ಸ್ಥಿತಿಸ್ಥಾಪಕತ್ವದ ಗುಣವನ್ನು ಕೀಳಾಗಿ ಆಗಿನ ಆರಂಭದ ಮಂಕಾದ ಮುನ್ನೋಟಗಳು ಅಂದಾಜು ಮಾಡಿದ್ದವು ಎಂದು ತಮ್ಮ ಇತ್ತೀಚಿನ ಚೆಂದದ ಪುಸ್ತಕದಲ್ಲಿ ಬ್ರಿಟಿಷ್ ಮಾನವಶಾಸ್ತ್ರಜ್ಞ ಡೇವಿಡ್ ಲ್ಯೂಯಿಸ್ ತೋರಿಸಿಕೊಟ್ಟಿದ್ದಾರೆ. ಇಂತಹ ಧೋರಣೆಗಳು ಹಾಗೂ ಸಿನಿಕತನವನ್ನು ಧಿಕ್ಕರಿಸಿ ರಾಷ್ಟ್ರದ ರೈತರು, ಕಾರ್ಮಿಕರು, ಉದ್ಯಮಿಗಳು ಹಾಗೂ ವೃತ್ತಿಪರರು ತಮ್ಮ ದೇಶವನ್ನಂತೂ ಯಶಸ್ಸಿನ ಹಾದಿಗೆ ಕೊಂಡೊಯ್ದಿದ್ದಾರೆ.

ಹಿಂದೊಮ್ಮೆ  ಪೂರ್ಣ ಕಡೆಗಣನೆಗೆ ಒಳಗಾಗಿದ್ದ ಬಾಂಗ್ಲಾದೇಶವನ್ನು, ಈಗ ಇತರ ಕೆಲವು ಆವಿಷ್ಕಾರಗಳ ಜೊತೆಗೆ ಕಿರುಸಾಲ ಕುರಿತಂತೆ ಪ್ರಯೋಗದ ಹರಿಕಾರ ಎಂದೇ  ಕರೆಯಲಾಗುತ್ತಿದೆ.

ಡೇವಿಡ್ ಲ್ಯೂಯಿಸ್ ಅವರು ತೋರಿಸಿಕೊಟ್ಟಿರುವಂತೆ, ಬಾಂಗ್ಲಾದೇಶದ ಶುಭಸೂಚಕವಲ್ಲದ ಆರಂಭಗಳು ಹಾಗೂ ಹಿಂಸಾತ್ಮಕ ಅಡ್ಡಿಗಳನ್ನು (ಹತ್ಯೆಗಳು ಹಾಗೂ ಕ್ಷಿಪ್ರಕ್ರಾಂತಿಗಳಲ್ಲಿರುವಂತೆ)ಗಮನಿಸಿದಲ್ಲಿ,  ನಲವತ್ತು ವರ್ಷಗಳ ಪರೀಕ್ಷಾಕಾಲವನ್ನು ಎದುರಿಸಿ. ಎಂತಹದೋ ಒಂದು ದೃಢವಾದ ಪ್ರಜಾಪ್ರಭುತ್ವವಾಗಿ ಉಳಿದಿರುವುದು ನಿಜಕ್ಕೂ ಬಾಂಗ್ಲಾದೇಶದ ಗಣನೀಯ ಸಾಧನೆ.

ಬಹುತೇಕ ಆರ್ಥಿಕ ಹಾಗೂ ಸಾಮಾಜಿಕ ಸೂಚ್ಯಂಕಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪಾಕಿಸ್ತಾನಕ್ಕಿಂತ ಚೆನ್ನಾಗಿಯೇ ಪ್ರಗತಿ ಸಾಧಿಸುತ್ತಿದೆ. ಒಂದಾನೊಂದು ಕಾಲದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದ ಪೂರ್ವ ಭಾಗವಾಗಿತ್ತು ಎಂಬುದನ್ನೂ ಲ್ಯೂಯಿಸ್ ಹೇಳುತ್ತಾರೆ. ದುರ್ಬಲರು ಹಾಗೂ ಸೋಮಾರಿಗಳೆಂದು ಬಂಗಾಳಿಗಳನ್ನು ಪಶ್ಚಿಮ ಪಾಕಿಸ್ತಾನಿಗಳು  ಕೀಳಾಗಿ ಕಾಣುತ್ತಿದ್ದರು. ಆದರೆ ಈಗಿನ ಅನುಕೂಲಕರ ದೃಷ್ಟಿಯಲ್ಲಿ, ಆಗಿನ ಪೂರ್ವ ಪಾಕಿಸ್ತಾನೀಯರೇ ಹೆಚ್ಚು ಉತ್ತಮರಾಗಿ ಹೊರಹೊಮ್ಮಿದ್ದಾರೆ.
 
ನಾಗರಿಕ ಸಂಘರ್ಷ, ಧಾರ್ಮಿಕ ಹಿಂಸಾಚಾರ, ಆರ್ಥಿಕ ಸ್ಥಗಿತತೆ ಹಾಗೂ ಮಹಿಳೆಯ ದಮನ ಇತ್ಯಾದಿ ಪಿಡುಗುಗಳಲ್ಲಿ ಪಾಕಿಸ್ತಾನ ನಲುಗಿದೆ. ಆದರೆ ಬಾಂಗ್ಲಾದೇಶ ಸ್ಥಿರವಾದ ಆರ್ಥಿಕ ಬೆಳವಣಿಗೆ ಹಾಗೂ ಮತಾಂಧತೆಯ ಅತಿರೇಕಗಳ ಸೋಲಿಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ ಸಾರ್ವಜನಿಕ ವಲಯ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿಯೇ ಇದೆ.

ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಕೊರತೆಗಳು ಇವೆ. ಅದರ ರಾಜಕೀಯಕ್ಕೆ ಈಗಲೂ ಅತಿರೇಕದ ಇಸ್ಲಾಮಿಕ್ ಸ್ಪರ್ಶ ಇದೆ. ಹಿಂದೂಗಳು ಹಾಗೂ ಬೌದ್ಧರಿಗೆ ಅವರ ಹಕ್ಕುಗಳ ಭದ್ರತೆ ಇಲ್ಲ. ಸೇನೆ ತನ್ನ ಬ್ಯಾರಕ್‌ಗಳಿಂದ ಹೊರಬರಬಹುದು. ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಕರಾವಳಿ ಜಿಲ್ಲೆಗಳು ಹವಾಮಾನ ಬದಲಾವಣೆಗಳಿಗೆ ಪಕ್ಕಾಗುತ್ತಿವೆ. 

     ಈ  ಅಡೆತಡೆಗಳಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶಿ ಸಮಾಜ ಮಾಡಿದ ಸ್ಥಿರ ಪ್ರಗತಿಯ ಬಗ್ಗೆ ಗಮನ ಹರಿಸದೆ ಇರುವುದು ಸಾಧ್ಯವೇ ಇಲ್ಲ. ಡೇವಿಡ್ ಲ್ಯೂಯಿಸ್ ಅವರು ಈ ರಾಷ್ಟ್ರವನ್ನು ಪಾಕಿಸ್ತಾನದ ಜೊತೆಗೆ  ಹೋಲಿಕೆ ಮಾಡುತ್ತಾರೆ. ಅವರ ಪುಸ್ತಕದಲ್ಲಿರುವ ಸಾಕ್ಷ್ಯದ ಆಧಾರದ ಮೇಲೆ ಮತ್ತೂ ಒಂದು, ಬಹುಶಃ ಬಹುಮುಖ್ಯವಾದ ಹೋಲಿಕೆಯೊಂದನ್ನು ಮಾಡಲು ನನಗೆ ಆಸೆಯಾಗುತ್ತಿದೆ.

ಇದು ಭಾರತದ ರಾಜ್ಯ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ್ದು. ಪಶ್ಚಿಮ ಬಂಗಾಳ ಹಾಗೂ ಪೂರ್ವ ಬಂಗಾಳ ಸಾಮಾನ್ಯ ಪರಿಸರ, ಸಾಮಾನ್ಯ ಭಾಷೆ ಹಾಗೂ ಸಾಮಾನ್ಯ ಸಾಂಸ್ಕತಿಕ - ಐತಿಹಾಸಿಕ ಪರಂಪರೆಯನ್ನು ಹೊಂದಿವೆ. ಅವು 1947ರಲ್ಲಿ ಪ್ರತ್ಯೇಕಗೊಂಡವು. ಪಶ್ಚಿಮ ಬಂಗಾಳ ಭಾರತದ ಭಾಗವಾಯಿತು. ಪೂರ್ವ ಬಂಗಾಳ ಪಾಕಿಸ್ತಾನದ ಭಾಗವಾಯಿತು.

ಕನಿಷ್ಠ ನಾಲ್ಕು ವಿಚಾರಗಳಲ್ಲಿ, ಪಶ್ಚಿಮ ಬಂಗಾಳಕ್ಕಿಂತ ಬಾಂಗ್ಲಾದೇಶ  ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೊದಲಿಗೆ, ಕ್ಷೇಮಾಭಿವೃದ್ಧಿ ಕಾರ್ಯಗಳನ್ನು ಮಾಡುವಂತಹ ನಾಗರಿಕ ಸಂಘಟನೆಗಳಿಗೆ ಬಾಂಗ್ಲಾದೇಶದಲ್ಲಿನ ವಾತಾವರಣ ಹೆಚ್ಚು ಅನುಕೂಲಕರವಾಗಿದೆ. 

ಬಿಆರ್‌ಎಸಿ, ಗ್ರಾಮೀಣ ಬ್ಯಾಂಕ್ ಹಾಗೂ ಗೊನೊಶಾಸ್ತ್ಯ ಕೇಂದ್ರಗಳಂತಹ ಸಂಘಟನೆಗಳು ಬಡ ರೈತರು ಹಾಗೂ ಕೊಳಚೆವಾಸಿಗಳಿಗೆ ಸಾಲ, ಆರೋಗ್ಯ ಸೇವೆ ಹಾಗೂ ಶಿಕ್ಷಣವನ್ನು ನೀಡುವಲ್ಲಿ ಶ್ರೇಷ್ಠ ಕೆಲಸಗಳನ್ನು ಮಾಡಿವೆ. ಈ ಸಂಘಟನೆಗಳನ್ನು ಹೋಲುವಂತಹ ಯಾವ ಗುಂಪುಗಳೂ ಪಶ್ಚಿಮ ಬಂಗಾಳದಲ್ಲಿ ನಿಜಕ್ಕೂ ಇಲ್ಲ. ಇಲ್ಲಿನ ನಾಗರಿಕ ಸಮಾಜ ಗುಂಪುಗಳು ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಂದ ಭಾರಿ ಹಗೆತನವನ್ನು ಎದುರಿಸುತ್ತಿವೆ.

ಎರಡನೆಯದಾಗಿ, ಬಾಂಗ್ಲಾದೇಶದಲ್ಲಿ ಹೆಚ್ಚು ವಿಸ್ತೃತವಾದ, ಅವಲಂಬಿಸಬಹುದಾದಂತಹ  ರಸ್ತೆಗಳು, ಜಲ ಮಾರ್ಗಗಳು ಇವೆ. ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯಲು, ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹಾಗೂ ಕಾಯಿಲೆಯವರು ಮತ್ತು ಹಿರಿಯರ ಚಿಕಿತ್ಸೆಗಾಗಿ  ಔಷಧಿಗಳನ್ನು ತರಲು ರಸ್ತೆಗಳು ಹಾಗೂ ಸೇತುವೆಗಳು ಅವಕಾಶ ಮಾಡಿಕೊಡುತ್ತವೆ. ಇದನ್ನು ಬಿಹಾರದ ನಿತಿಶ್ ಕುಮಾರ್ ಹಾಗೂ ಬಾಂಗ್ಲಾದೇಶದ ನಂತರದ ಹಲವು ಸರ್ಕಾರಗಳು ಗುರುತಿಸಿದ್ದವು. ಆದರೆ ಪಶ್ಚಿಮ ಬಂಗಾಳದ ರಸ್ತೆಗಳು ಕರುಣಾಜನಕ ಸ್ಥಿತಿಯಲ್ಲಿರುವುದು ಮುಂದುವರಿದಿದೆ.

ಮೂರನೇ ಹಾಗೂ ನಾಲ್ಕನೇ ವೈರುಧ್ಯಗಳು ಪರಸ್ಪರ ಸಂಬಂಧ ಹೊಂದಿವೆ. ಬಾಂಗ್ಲಾದೇಶದ ಆಧುನಿಕ ತಯಾರಿಕಾ ವಲಯದಲ್ಲಿ ಬಹಳಷ್ಟು ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಆರ್ಥಿಕ ನೀತಿಯು ಮುಕ್ತವಾಗಿದ್ದು ರಫ್ತು ಆಧರಿತವಾಗಿದೆ ಎಂಬ ಅಂಶಕ್ಕೆ ಇದು ಸಂಬಂಧಿಸಿದೆ. ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ದೃಷ್ಟಿಕೋನ ಅದರದೇ ಸಂಕುಚಿತ  ದೃಷ್ಟಿಯದಾಗಿದೆ. ಅದು ಉದ್ಯಮಿ ಹಾಗೂ ಉದ್ಯಮಶೀಲತೆ ಸ್ನೇಹಿಯಾಗಿಲ್ಲ.

ಪೂರ್ವದಲ್ಲಿರುವ ತಮ್ಮ ದೇಶಬಾಂಧವರ ಕುರಿತಂತೆ ಕೋಲ್ಕತ್ತದ ಮೇಲ್ಮಧ್ಯಮ ವರ್ಗದ ಜನರಲ್ಲಿ (`ಭದ್ರಾಲೋಕ್~) ತಿರಸ್ಕಾರವಲ್ಲದಿದ್ದರೂ ಒಂದು ಬಗೆಯ ದೊಡ್ಡಸ್ತಿಕೆಯ ಧೋರಣೆ ಇರುವುದಂತೂ ಕೋಲ್ಕತ್ತಾದಲ್ಲಿ ನಾನಿದ್ದ ದಿನಗಳ ಕಾಲದಿಂದಲೂ ನನ್ನ ಅನುಭವಕ್ಕೆ ಬಂದಿದೆ. ಜಾತಿ ಹಾಗೂ ಧರ್ಮದ ಪೂರ್ವಗ್ರಹಗಳು ಇದಕ್ಕೆ ನೀರೆರೆಯುತ್ತವೆ.

ಕೆಳ ಜಾತಿ ಮುಸ್ಲಿಂ ಮತಾಂತರಿಗಿಂತ ತಮ್ಮನ್ನ ಶ್ರೇಷ್ಠರೆಂದು ಮೇಲ್ಜಾತಿ ಬಂಗಾಳಿ ಹಿಂದೂಗಳು ತಮ್ಮ ಬಗ್ಗೆ ಭಾವಿಸಿಕೊಳ್ಳುತ್ತಾರೆ. ಕೋಲ್ಕತ್ತ ಎಂಬುದು ದೊಡ್ಡ ಅಂತರರಾಷ್ಟ್ರೀಯ ನಗರ, ವೈಜ್ಞಾನಿಕ ಹಾಗೂ ಕಲಾತ್ಮಕ ಸೃಜನಶೀಲತೆಯ ಕೇಂದ್ರ; ರೇ, ಟ್ಯಾಗೋರ್, ಅಮರ್ತ್ಯ ಸೆನ್, ಜಗದೀಶ್ ಬೋಸ್‌ರಂತಹ ಇನ್ನೂ ಅನೇಕ ದೊಡ್ಡವ್ಯಕ್ತಿಗಳಿಗೆ ಸ್ಫೂರ್ತಿ ನೀಡಿದ ಅಥವಾ ಪೋಷಿಸಿದ ಸ್ಥಳ  ಎಂಬುದರಿಂದ  ಸಾಂಸ್ಕತಿಕ ಮೇಲರಿಮೆಯ ಭಾವನೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾರೆ.
 
ಇದಕ್ಕೆ ತದ್ವಿರುದ್ಧವಾಗಿ ಢಾಕಾ ಎಂಬುದು ಪ್ರಾದೇಶಿಕ ಕೂಪ ಎಂದು ಹೀಗಳೆಯಲಾಗುತ್ತದೆ.ಕೋಲ್ಕತ್ತದ ಮೇಲ್ಮಧ್ಯಮ ವರ್ಗದ ಜನರು, ಬಾಂಗ್ಲಾ ಬಗ್ಗೆ ಹೊಂದಿರುವ ಈ ತಿರಸ್ಕಾರ ಬಿಹಾರಿಗಳ ಕುರಿತಂತೆ ಅವರಿಗಿರುವ ತಿರಸ್ಕಾರಕ್ಕೆ ಸರಿಸಮವಾದದ್ದು. ರಿಕ್ಷಾ ಎಳೆಯಲಿಕ್ಕೆ ಬಿಟ್ಟರೆ ಮತ್ತೇನಕ್ಕೂ ಅವರು ಲಾಯಕ್ಕಲ್ಲವೆಂದು ಅನೇಕ ಬಾರಿ ಭಾವಿಸಲಾಗುತ್ತದೆ.

ಆದರೆ ಈಗ ಈ ಬಗೆಯ ಅನುಗ್ರಹಭಾವ ತೋರುವವರು ಅನಗ್ರಹೀತರಿಂದ ಕಲಿಯಬೇಕಾದುದೂ ಇದೆ.  ತಾವೇ ಹೆಚ್ಚೆಂದು ಮೆರೆಯುವ  ಹಾಗೂ ಹಳೆಯ ನೆನಪುಗಳಲ್ಲಿ ತಳಮಳಿಸುವ ಪಶ್ಚಿಮ ಬಂಗಾಳದ ಗಣ್ಯರಿಗಿಂತ  ಆರ್ಥಿಕ ಬೆಳವಣಿಗೆ ಹಾಗೂ ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಬಿಹಾರ ಹಾಗೂ ಬಾಂಗ್ಲಾ ದೇಶದ ರಾಜಕೀಯ ಗಣ್ಯರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ.

ಪಶ್ಚಿಮ ಬಂಗಾಳದ ಸಮಸ್ಯೆಗಳು ಹೆಚ್ಚು ಗೊತ್ತಿರುವಂತಹದ್ದು. ಕೆಲಸ ಮಾಡದ ಆರೋಗ್ಯ ವ್ಯವಸ್ಥೆ, ಸರಿಯಾಗಿ ಕಾರ್ಯ ನಿರ್ವಹಿಸದ (ಹಾಗೂ ಅತಿಯಾಗಿ ರಾಜಕೀಯಕರಣಗೊಂಡ) ಶಾಲೆಗಳು ಹಾಗೂ ಕಾಲೇಜುಗಳು, ಸಮರ್ಪಕ ರಸ್ತೆಗಳ ಕೊರತೆ (ಬಹಳ ಸಂದರ್ಭಗಳಲ್ಲಿ ರಸ್ತೆಗಳೇ ಇಲ್ಲ), ಹಣಹೂಡಿಕೆ ಆಕರ್ಷಿಸಲು ಅಸಾಮರ್ಥ್ಯ,  ಕಚೇರಿಗೆ ಹೋಗುವವರು ಹಾಗೂ ಕಾರ್ಖಾನೆ ನೌಕರರಲ್ಲಿ ಕೆಲಸದ ನೀತಿಯ ಗೈರುಹಾಜರಿ. 

ಈ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬಹುದೆಂಬುದನ್ನು ಕಲಿಯಲು ಪಶ್ಚಿಮ ಬಂಗಾಳ ಸರ್ಕಾರದ ಸಚಿವರು ಬಿಹಾರದಾದ್ಯಂತ ಪ್ರವಾಸ ಕೈಗೊಳ್ಳುವುದು ಒಳಿತು. ಅಥವಾ ಬಾಂಗ್ಲಾದೇಶ ಕುರಿತ ಡೇವಿಡ್ ಲ್ಯೂಯಿಸ್ ಪುಸ್ತಕ ಓದುವುದು ಒಳಿತು. ಅಥವಾ ಎರಡನ್ನೂ ಮಾಡುವುದು ಇನ್ನೂ ಒಳ್ಳೆಯದು. ಆಗ ಬಹುಶಃ ಢಾಕಾ ಹಾಗೂ ಪಟ್ನಾಗಳು ಇಂದು ಏನು ಮಾಡುತ್ತಿವೆ ಹಾಗೂ ಕೋಲ್ಕತ್ತ ನಾಳೆ ಇನ್ನೂ ಮಾಡಬೇಕಾದುದೇನಿದೆ ಎಂಬುದು ಅರಿವಾಗುತ್ತದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT