ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕಾಲಕ್ಕೂ ಯುದ್ಧೋನ್ಮಾದ ಸರಿಯೇ?

Last Updated 8 ಜುಲೈ 2017, 19:54 IST
ಅಕ್ಷರ ಗಾತ್ರ

‘ಪಾಕಿಸ್ತಾನ, ಚೀನಾ ಗಡಿ ಸೇರಿದಂತೆ ಕೆಲ ಆಂತರಿಕ ಸಂಘರ್ಷಗಳನ್ನೂ ಎದುರಿಸಲು ಭಾರತದ ಸೇನೆಯು ಸನ್ನದ್ಧ ಸ್ಥಿತಿಯಲ್ಲಿ ಇದೆ’ ಎಂದು ಸೇನಾ ಮುಖ್ಯಸ್ಥ ಬಿಪಿನ್‌ ಚಂದ್ರ ರಾವತ್‌ ಅವರು ಹೇಳಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಹೇಳಿಕೆಯು ನಮ್ಮ ಸೇನೆಯ ಆತ್ಮವಿಶ್ವಾಸದ ಪ್ರತೀಕ ಎಂದು ಭಾರತೀಯರು ಸಮರ್ಥಿಸಿಕೊಂಡಿದ್ದರೆ, ಚೀನಾದ ಮಾಧ್ಯಮಗಳು ಕಟುವಾಗಿ ಟೀಕಿಸಿವೆ. 

1959ರಿಂದೀಚೆಗೆ ಭಾರತವು ನಿರಂತರವಾಗಿ ಬಹು ಬಗೆಯ ಮತ್ತು ಬಹು ಹಂತದ ಸೇನಾ ಬೆದರಿಕೆಗಳಿಗೆ ಮುಖಾಮುಖಿಯಾಗುತ್ತಲೇ ಬಂದಿದೆ. ಇಂತಹ ಬೆದರಿಕೆಗಳನ್ನು ಎದುರಿಸಲು ಸೇನೆಯು ರಾಜಕಾರಣಿಗಳ ದಾಳವಾಗಿಯೂ  ಬಳಕೆಯಾಗಿದೆ.  1962ರ ಯುದ್ಧ ಇದಕ್ಕೆ ಅಪವಾದ. ಅದನ್ನು ಹೊರತುಪಡಿಸಿದರೆ ಪ್ರತಿ ಬಾರಿಯೂ ಭಾರತದ ಸೇನೆ ಗೆಲುವು ಕಾಣುತ್ತಲೇ ಬಂದಿದೆ.

ಭಾರತದ ಸೇನೆಯು ಪಾಕಿಸ್ತಾನ, ಚೀನಾ ದಾಳಿ ಎದುರಿಸುವುದೂ ಒಳಗೊಂಡಂತೆ ಆಂತರಿಕ ಅಶಾಂತಿ ಬಗ್ಗುಬಡಿಯಲು ಸನ್ನದ್ಧವಾಗಿದೆ  ಎಂದು 60 ವರ್ಷಗಳ ನಂತರ ಹೇಳುತ್ತಿರುವುದು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಮೂರು ಪೂರ್ಣ ಪ್ರಮಾಣದ ಯುದ್ಧಗಳು ನಡೆಸಿದ, ಪಾಕಿಸ್ತಾನ ವಿಭಜಿಸಿದ, ಈಶಾನ್ಯ ಭಾರತದಲ್ಲಿ ಹಲವಾರು ಶಾಂತಿ ಒಪ್ಪಂದಗಳಿಗೆ ಕಾರಣವಾದ, ಶೀತಲ ಸಮರ ಅಂತ್ಯಗೊಳಿಸಿದ  ಮತ್ತು ಅಣ್ವಸ್ತ್ರ ಸಜ್ಜಿತವಾಗಿರುವ ಭಾರತವು ಇದುವರೆಗೂ ಈ ಪರಿಸ್ಥಿತಿಯನ್ನೇಕೆ ಬದಲಿಸಲು ಸಾಧ್ಯವಾಗಿಲ್ಲ ಎನ್ನುವುದು ಮೊದಲ ಪ್ರಶ್ನೆಯಾಗಿದೆ.

ವಿಶ್ವದಲ್ಲಿನ ಯಾವ ಪ್ರಮುಖ ಅಥವಾ ಬಲಿಷ್ಠ ಸೇನಾ ಸಾಮರ್ಥ್ಯದ ದೇಶವು ಆರು ದಶಕಗಳಿಂದಲೂ ಇದೇ ಬಗೆಯ ಸಮಸ್ಯೆ ಎದುರಿಸುತ್ತಿದೆ ಎನ್ನುವ ಸಂದೇಹವೂ ಇಲ್ಲಿ ಎದುರಾಗುತ್ತದೆ. ಶತ್ರು ಸೇನೆಯ  ನಿರಂತರ ಬೆದರಿಕೆಯು  ಭಾರತದ ರಾಜತಾಂತ್ರಿಕ ಪ್ರಯತ್ನಗಳ  ವೈಫಲ್ಯವೇ ಅಥವಾ ಈ ಪ್ರಯತ್ನಗಳ ಹೊರತಾಗಿಯೂ ಈ ಬೆಳವಣಿಗೆ ನಡೆದಿದೆಯೇ.  ಸೇನಾ ಸಾಮರ್ಥ್ಯವೇ ಭಾರತದ ರಾಜತಾಂತ್ರಿಕ  ನಿರ್ಧಾರಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದೆಯೇ ಅಥವಾ ಅದೊಂದು ಬೇರೆಯೇ ಆದ ವಿದ್ಯಮಾನವಾಗಿದೆಯೇ ಎನ್ನುವ ಪ್ರಶ್ನೆಗಳೂ ಎದುರಾಗುತ್ತವೆ.

ಶೀತಲ ಸಮರಕ್ಕೆ ಸಂಬಂಧಿಸಿದ ಸೈದ್ಧಾಂತಿಕ ಬೌದ್ಧಿಕ ಸಮರವು ವಾರ್ಸಾ ಒಪ್ಪಂದ ಕುಸಿದು ಬಿದ್ದ ಕಾರಣಕ್ಕೆ ವಿಫಲಗೊಂಡಿತ್ತು.  ಸೇನಾ ಪ್ರಭುತ್ವದ ಚಿಂತನೆ ಮತ್ತು ಸೇನೆಗಳ ಪ್ರಭಾವದ ಒತ್ತಡವೇ ಅದಕ್ಕೆ ಕಾರಣವಾಗಿತ್ತು. ‘ಅಮೆರಿಕ ಅಧ್ಯಕ್ಷ ರೋನಾಲ್ಡ್‌ ರೇಗನ್‌ ಅವರ ರಾಜತಾಂತ್ರಿಕ ಯಶಸ್ಸಿಗಿಂತ, ಸೋವಿಯತ್‌  ಒಕ್ಕೂಟ ಬಣವು ತನ್ನ ದುಸ್ಸಾಹಸಗಳಿಗೆ ಭಾರಿ ಬೆಲೆ ತೆತ್ತ ಕಾರಣಕ್ಕೆ ಶೀತಲ ಸಮರ ಕೊನೆಗೊಂಡಿತು’ ಎಂದು ಖ್ಯಾತ ಇತಿಹಾಸಕಾರ ನಿಯಾಲ್‌ ಫರ್ಗುಸನ್‌ ವಿಶ್ಲೇಷಿಸಿದ್ದಾರೆ.

ಕಳೆದ ದಶಕಗಳಲ್ಲಿ  ವಿಶ್ವವೇ ಬದಲಾಗಿದೆ. 60 ವರ್ಷಗಳ ನಂತರವೂ ನಮ್ಮ ವೈರಿಗಳು ಮತ್ತು ಭಾರತದ ಬಗೆಗಿನ  ಶತ್ರುತ್ವ ಹಾಗೆಯೇ ಇದೆ.  ರಾಜತಾಂತ್ರಿಕವೂ ಸೇರಿದಂತೆ ಎಲ್ಲ ಪ್ರಯತ್ನಗಳು ವಿಫಲಗೊಂಡ ನಂತರವೂ ನಮ್ಮ ಹಿತಾಸಕ್ತಿ ರಕ್ಷಿಸಲು ನಾವು ಸೇನೆಯ ಮೊರೆ ಹೋಗುತ್ತಿದ್ದೇವೆ. ಇದಕ್ಕೆ ನಮ್ಮ ರಾಜಕೀಯ ಮತ್ತು ರಾಜತಾಂತ್ರಿಕ ನಾಯಕತ್ವದ ವೈಫಲ್ಯವೇ ಕಾರಣವಾಗಿರಬಹುದು.

ರಾಜಕಾರಣಿಗಳು ಅಸಂಬದ್ಧವಾಗಿ ಮಾತನಾಡುತ್ತಾ, ನಿರಂತರವಾಗಿ ತಪ್ಪುಗಳನ್ನು ಎಸಗುತ್ತಾ,  ಪರಿಸ್ಥಿತಿ ಕೈಮೀರಿದಾಗ ಸೇನೆಯ ಮೊರೆ ಹೋಗುತ್ತಾರೆ. 1962ರಲ್ಲಿ ಜವಾಹರಲಾಲ್‌ ನೆಹರೂ ಕೂಡ ಹೀಗೆಯೇ ಮಾಡಿದ್ದರು. ವಾಸ್ತವ ಅರಿಯದೆ ಚೀನಿಯರನ್ನು ಹೊರಹಾಕಲು ಅವರು ಸೇನೆಗೆ ಆದೇಶಿಸಿದ್ದರು.
ಯಾವುದೇ ದೇಶವು  ರಾಜತಾಂತ್ರಿಕ ನೈಪುಣ್ಯವನ್ನು ತುಂಬ ಜಾಣತನದಿಂದ ಬಳಸಬೇಕು.

ಯುದ್ಧ ತಪ್ಪಿಸಲು ಪ್ರಯತ್ನಿಸುವುದು ಮೊದಲ ಆದ್ಯತೆಯಾಗಿರಬೇಕು. ತನ್ನ ಸೇನಾ ಸಾಮರ್ಥ್ಯವನ್ನು ಬೆನ್ನಿಗೆ ಇಟ್ಟುಕೊಂಡೇ, ಅದನ್ನು ಬಳಸಿಕೊಳ್ಳದೆ ಉದ್ದೇಶ ಸಾಧಿಸಲು ಯತ್ನಿಸಬೇಕು. ಮೂರನೇಯದಾಗಿ ಮೊದಲ ಎರಡು ಪ್ರಯತ್ನಗಳು ವಿಫಲಗೊಂಡ ಸಂದರ್ಭಗಳಲ್ಲಿ ಮಾತ್ರ ಅನಿವಾರ್ಯವಾಗಿ ಯುದ್ಧಕ್ಕೆ ಸನ್ನದ್ಧವಾಗಿರಲು ಸೇನೆಗೆ ಸೂಚಿಸಬೇಕಾಗುತ್ತದೆ. 1962 ಮತ್ತು  1971ರಲ್ಲಿ ಹೀಗೆ ಸೇನಾ ಕಾರ್ಯಾಚರಣೆಗೆ ಇಳಿಯುವುದು ಅನಿವಾರ್ಯವಾಗಿತ್ತು.

ಭಾರತ ನಡೆಸಿದ ಪ್ರತಿಯೊಂದು ಯುದ್ಧದ ಸಂದರ್ಭದಲ್ಲಿ ಹೊಸ ಗಡಿ ಸಮಸ್ಯೆ ಉದ್ಭವವಾಗುತ್ತಲೇ ಬಂದಿದೆ. ಇಂತಹ ಸಮಸ್ಯೆ ಬಗೆಹರಿಸಲು ಭಾರತ ಸರ್ಕಾರ ದಶಕಗಳಿಂದ ಹೊಸ, ಹೊಸ ಮಾರ್ಗೋಪಾಯಗಳನ್ನು ಕಂಡು ಹಿಡಿಯುತ್ತಲೇ ಬಂದಿದೆ.

1962ರಲ್ಲಿ ಚೀನಾ ಜತೆಗೆ ಯುದ್ಧ ಅನಿವಾರ್ಯವಾದ ಸಂದರ್ಭದಲ್ಲಿ   ಆಗಿನ ಪ್ರಧಾನಿ ನೆಹರೂ ಅವರು, ದೇಶಕ್ಕೆ ಎದುರಾಗಿದ್ದ ಸಂಕಷ್ಟದ ಪರಿಸ್ಥಿತಿಯನ್ನು ಪಾಕಿಸ್ತಾನವು ದುರ್ಬಳಕೆ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು  ಪಾಶ್ಚಿಮಾತ್ಯ ದೇಶಗಳನ್ನು ಅದರಲ್ಲೂ ವಿಶೇಷವಾಗಿ ಅಮೆರಿಕ ಮತ್ತು ಬ್ರಿಟನ್ನಿನ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಯಾಗಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಜತೆ ಭಾರತವು ಉನ್ನತ ಮಟ್ಟದ ಮಾತುಕತೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದರಲ್ಲಿ ಮೂರನೇಯವರು  ಹಸ್ತಕ್ಷೇಪ ಮಾಡಲು ಅವಕಾಶ ಮಾಡಿಕೊಡಲಾಗಿತ್ತು.

ಈ ಸಂಧಾನ ಮಾತುಕತೆಯಿಂದ ಹೊರ ಬರಲು ನೆಹರೂ ಮತ್ತು ನಂತರ ಲಾಲ್‌ ಬಹಾದ್ದೂರ್ ಶಾಸ್ತ್ರಿ ಅವರು ವಿಳಂಬ ನೀತಿ ಅನುಸರಿಸಲು ಮುಂದಾಗಿದ್ದರು. ಪಾಕಿಸ್ತಾನವೂ ತನ್ನ ಧೋರಣೆ ಬದಲಿಸಿ, 1965ರಲ್ಲಿ ಕಾಶ್ಮೀರ ಆಕ್ರಮಿಸಿಕೊಳ್ಳಲು ಹವಣಿಸಿತ್ತು. 

1962ರಲ್ಲಿ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಜತೆ ನಾಗಾಲ್ಯಾಂಡ್‌ನಲ್ಲಿಯೂ ಬಂಡಾಯ ಭುಗಿಲೆದ್ದಿತ್ತು. ಅರುಣಾಚಲ ಪ್ರದೇಶದಿಂದ ಹಿಮ್ಮೆಟ್ಟಿದ್ದ ಭಾರತೀಯ ಸೇನೆ ಆ ಸಂದರ್ಭದಲ್ಲಿ ನಾಗಾಲ್ಯಾಂಡ್‌ನಲ್ಲಿನ ಬಂಡಾಯ ನಿರ್ಲಕ್ಷಿಸಿತ್ತು. 1965ರಲ್ಲಿ ಪಾಕಿಸ್ತಾನವು ಭಾರತದ ಜತೆ ಯುದ್ಧಕ್ಕೆ ಇಳಿದಾಗ 22 ದಿನಗಳ ಸಮರ ಮುಂದುವರೆಸಲು ಸಾಧ್ಯವಾಗದೆ ಕದನ ವಿರಾಮಕ್ಕೆ ಮುಂದಾಯಿತು.

ಭಾರತದ ಸೇನೆಯು ಟಿಬೆಟ್‌ನ ನಾಲ್ಕು ಮಂದಿ ಕುರಿ ಸಾಕುವವರನ್ನು ಭಾರತೀಯ ಸೇನೆ ಅಪಹರಿಸಿದ್ದು, ನಮ್ಮ  900 ಕುರಿಗಳನ್ನು ಕದ್ದುಕೊಂಡು ಹೋಗಿದೆ. ಇವುಗಳನ್ನು ಮರಳಿಸದಿದ್ದರೆ ಅದಕ್ಕೆ ಭಾರಿ ಬೆಲೆ ತೆರಬೇಕಾದೀತು ಎಂದು ಚೀನಾ ಅಂತಿಮ ಗಡುವು ವಿಧಿಸಿತ್ತು.   ಇದಕ್ಕೆ ಭಾರತ ಲಘು ಧಾಟಿಯಲ್ಲಿ ಪ್ರತಿಕ್ರಿಯಿಸಿತ್ತು.  ಕೆಲ ಯುವ ಕಾಂಗ್ರೆಸ್ ಕಾರ್ಯಕರ್ತರು ನವದೆಹಲಿಯಲ್ಲಿನ ಚೀನಾದ ರಾಯಭಾರಿ ಕಚೇರಿಗೆ ಶಾಂತಿ ಮೆರವಣಿಗೆಯಲ್ಲಿ ಹೋಗಿ ಪ್ರತಿಭಟನೆ ದಾಖಲಿಸಿದ್ದರು. ಮೆರವಣಿಗೆಯಲ್ಲಿ  800 ಕುರಿಗಳೂ ಇದ್ದವು. ‘ನನ್ನನ್ನು ಕೊಂದು ತಿನ್ನಿ, ಆದರೆ ಯುದ್ಧ ನಡೆಸಿ ಜಗತ್ತು ಹಾಳು ಮಾಡಬೇಡಿ’ ಎನ್ನುವ ಫಲಕವನ್ನು ಅವುಗಳ ಕೊರಳಿಗೆ ತೂಗು ಹಾಕಲಾಗಿತ್ತು.

ಚೀನಾ ಬಯಸಿದ್ದ ಎರಡು ಸೂಕ್ಷ್ಮ ಭೂ ಪ್ರದೇಶವನ್ನು ಭಾರತಕ್ಕೆ ಮರಳಿಸಿತ್ತು. ಈ ಭೂಭಾಗಗಳ ಮೇಲಿನ ನಿಯಂತ್ರಣ ಬಿಟ್ಟುಕೊಡಲು ಯಾರು ಮತ್ತು ಯಾಕೆ ನಿರ್ಧರಿಸಿದರು ಎನ್ನುವುದು ಯಾರಿಗೂ ಗೊತ್ತಿಲ್ಲ.  ಆ ಸಂದರ್ಭದಲ್ಲಿ ಸೇನೆಯಲ್ಲಿ ಯುವ ಅಧಿಕಾರಿಯಾಗಿದ್ದ ಮೇಜರ್‌ ಜನರಲ್‌ ಶೇರು ಥಪ್ಲಿಯಾರ್‌ ಅವರು ಈ ಸಂಗತಿಯನ್ನು ಖಚಿತಪಡಿಸಿದ್ದಾರೆ.

1971ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಮಾತ್ರ ಭಾರತದ ಸೇನೆ ಮುಂಚಿತವಾಗಿಯೇ ಸಿದ್ಧಪಡಿಸಿದ ಯೋಜಿತ ರೀತಿಯಲ್ಲಿ ಸೇನಾ ದಾಳಿ ಸಂಘಟಿಸಿ ಯಶಸ್ವಿಯಾಗಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು, ಚೀನಾ ಈ ಹಿಂದೆ ಸವಾಲು ಒಡ್ಡಿದ್ದನ್ನು ವಿಫಲಗೊಳಿಸಲು, ಸೋವಿಯತ್‌ ಒಕ್ಕೂಟದ ಜತೆ ಶಾಂತಿ, ಸ್ನೇಹ ಮತ್ತು ಸಹಕಾರದ ಒಪ್ಪಂದ ಮಾಡಿಕೊಂಡಿದ್ದರು. ಇದರಿಂದಾಗಿ ಮಾಣೇಕ್‌ ಷಾ ನೇತೃತ್ವದಲ್ಲಿನ ಭಾರತೀಯ ಸೇನೆ 13 ದಿನಗಳಲ್ಲಿ ತನ್ನ ಸೇನಾ ಕಾರ್ಯಾಚರಣೆಯ ಉದ್ದೇಶ ಸಾಧಿಸುವಲ್ಲಿ ಸಫಲವಾಗಿತ್ತು.

ಮಿಜೋರಾಂ ಮತ್ತು ನಾಗಾಲ್ಯಾಂಡ್‌ನಲ್ಲಿನ ಆಂತರಿಕ ಕ್ಷೋಭೆಯನ್ನು ಸುಲಭವಾಗಿ ಹತ್ತಿಕ್ಕಲಾಗಿತ್ತು. ಪೂರ್ವ ಪಾಕಿಸ್ತಾನದಲ್ಲಿನ ಬೆಂಬಲ ನಾಶವಾಗಿದ್ದರಿಂದ ಬಂಡುಕೋರರ ಶಕ್ತಿ ಉಡುಗಿತ್ತು. ಒಂದೆಡೆ ಶೀತಲ ಸಮರ ಕೊನೆಗೊಂಡರೆ, ಇನ್ನೊಂದೆಡೆ  ಇಸ್ಲಾಂ ಭಯೋತ್ಪಾದನೆ ವಿರುದ್ಧ ಜಾಗತಿಕ ಆಕ್ರೋಶ ಹೆಚ್ಚುತ್ತಲೇ ಹೋಯಿತು. ಇದು ಭಾರತದ ಬಾಹ್ಯ ಮತ್ತು ಆಂತರಿಕ ಬೆದರಿಕೆಯ ಚಿತ್ರಣವನ್ನೇನೂ ಬದಲಿಸಲಿಲ್ಲ. ಈ ಬದಲಾವಣೆಯ ಹೊರತಾಗಿಯೂ ಚೀನಾ ಮತ್ತು ಪಾಕಿಸ್ತಾನ ಬಾಂಧವ್ಯ ದೃಢವಾಗಿ ಉಳಿದುಕೊಂಡು ಬಂದಿದೆ.

ಹೊಸ ಜಾಗತಿಕ ವ್ಯವಸ್ಥೆಗೆ ಸವಾಲೊಡ್ಡುವ ಬಗ್ಗೆ ಚೀನಾ ಆತ್ಮವಿಶ್ವಾಸ ಹೊಂದಿದೆ. ಸದ್ಯಕ್ಕೆ  ಚೀನಾದ ಪಾಲಿಗೆ ಪಾಕಿಸ್ತಾನವು ಹೆಚ್ಚು ಪ್ರಯೋಜನಕಾರಿಯಾದ ದೇಶವಾಗಿ ಪರಿಣಮಿಸಿದೆ. ಚೀನಾ – ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಲ್ಲಿ ಪಾಕಿಸ್ತಾನಕ್ಕೆ ಹೆಚ್ಚಿನ ಮಹತ್ವವೂ ಸಿಕ್ಕಿದೆ. ಭಾರತ ತನ್ನದು ಎಂದು ಭಾವಿಸಿರುವ ಭೂಪ್ರದೇಶದಿಂದ ಈ ಕಾರಿಡಾರ್‌ ಹಾದು ಹೋಗುತ್ತಿದೆ. ಇದು ಆರ್ಥಿಕ ಮತ್ತು ಸೇನಾ ದೃಷ್ಟಿಯಿಂದಲೂ ಅವೆರಡು ದೇಶಗಳಿಗೆ ತುಂಬ ಮಹತ್ವದ್ದಾಗಿದೆ.

ಭಾರತವು ಅಣ್ವಸ್ತ್ರ ಸಜ್ಜಿತ ದೇಶವಾಗಿದ್ದರೂ, ಅಣ್ವಸ್ತ್ರ ಹೊಂದಿದ ಮತ್ತು ಅಕ್ಕಪಕ್ಕದಲ್ಲಿಯೇ ಇರುವ ಎರಡು ದೇಶಗಳ ನೇರ ಬೆದರಿಕೆಗೆ ಒಳಪಟ್ಟಿದೆ. ಇದು ಸದ್ಯದ ಕೇಂದ್ರ ಸರ್ಕಾರ ಸೃಷ್ಟಿಸಿದ ಸಮಸ್ಯೆ ಅಲ್ಲ. ಭಾರತದ ಪ್ರತಿಯೊಬ್ಬ ರಾಜಕೀಯ ಮುಖಂಡ ಈ ಸಮಸ್ಯೆಯನ್ನು ಬಳುವಳಿಯಾಗಿ ಪಡೆದುಕೊಂಡು ಬಂದಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಅದನ್ನು ಪರಿಹರಿಸಲು  ಸಾಧ್ಯವಿರುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ.

ರಾಜೀವ್‌ ಗಾಂಧಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರು ಚೀನಾದತ್ತ ಸ್ನೇಹಹಸ್ತ ಚಾಚಲು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಭಾರತದಲ್ಲಿ ಸಿಕ್ಕಿಂ ಸೇರ್ಪಡೆಯನ್ನು ಚೀನಾ ಒಪ್ಪಿಕೊಳ್ಳುವಂತೆ ಮತ್ತು ಭಾರತದ ಬಗ್ಗೆ ಸ್ನೇಹಪರ ಧೋರಣೆ ತಳೆಯುವಂತೆ ಮಾಡುವಲ್ಲಿ ಇವರಿಬ್ಬರು ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ, ನಂತರದ ದಿನಗಳಲ್ಲಿ ಈ ಬಾಂಧವ್ಯ ಬೆಸುಗೆಯ ಪ್ರಯತ್ನ ಮುಂದುವರೆಯಲಿಲ್ಲ.

ಡಾ. ಮನಮೋಹನ್‌ ಸಿಂಗ್‌ ಅವರ ಅಧಿಕಾರಾವಧಿಯಲ್ಲಿ ಕೆಲಮಟ್ಟಿಗೆ  ಪ್ರಯತ್ನಗಳು ನಡೆದಿದ್ದರೂ ಅವು ನಿರೀಕ್ಷಿತ  ಯಶಸ್ಸು ನೀಡಲಿಲ್ಲ.  ಭಾರತದ ಜತೆಗಿನ ತಂಟೆ ತಕರಾರುಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ತನಗೆ ಹೆಚ್ಚಿನ ಪ್ರಯೋಜನ ಇಲ್ಲ, ಪಾಕಿಸ್ತಾನವನ್ನು ಸುಲಭವಾಗಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿ ಬೇಳೆ ಬೇಯಿಸಿಕೊಳ್ಳುವುದೇ ಹೆಚ್ಚು ಪ್ರಯೋಜನ ಎನ್ನುವ ತೀರ್ಮಾನಕ್ಕೆ ಚೀನಾ ಬಂದಿದೆ.

ಭಾರತ – ಚೀನಾ ಮತ್ತು ಪಾಕಿಸ್ತಾನದ ಮಧ್ಯೆ ನಂಟು ಬೆಸೆಯುವ ಮನಮೋಹನ್ ಸಿಂಗ್‌ ಅವರ ಧೋರಣೆಯೂ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಪಾಕಿಸ್ತಾನದ ಜತೆ ಶಾಂತಿ ಸ್ಥಾಪಿಸಲು  ಹೆಚ್ಚು ಸಾಧ್ಯತೆ ಇದೆ ಎಂದೇ ಅವರು ನಂಬಿದ್ದರು.  ಪಾಕಿಸ್ತಾನದ ರಾಜಕೀಯ ಧೋರಣೆ ಬದಲಿಸುವ ಬಗ್ಗೆ ಅಮೆರಿಕ ಹೆಚ್ಚು ಆಸಕ್ತಿ ವಹಿಸಲಿದೆ ಎನ್ನುವುದೂ ಅವರ ನಂಬಿಕೆಯಾಗಿತ್ತು. 

ಇದೇ ಕಾರಣಕ್ಕೆ ಮುಂಬೈ ಮೇಲಿನ 26/11ರ ದಾಳಿ ಹೊರತಾಗಿಯೂ ಅವರು ಪಾಕಿಸ್ತಾನದ ಜತೆಗಿನ ಸಂಬಂಧ ಸುಧಾರಿಸಲು ಉದ್ದೇಶಿಸಿದ್ದರು. ಅವರ ಈ ಪ್ರಯತ್ನಕ್ಕೆ ಅವರ ಪಕ್ಷವೇ ಅಡ್ಡಗಾಲು ಹಾಕಿತು. ಚೀನಾ ಮತ್ತು ಪಾಕಿಸ್ತಾನದ ಜತೆ ಸಂಬಂಧ ಸುಧಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರೂ ಸಾಕಷ್ಟು ಉತ್ಸಾಹ ತೋರಿಸಿದ್ದರು.  ಆರಂಭದಲ್ಲಿ ಎರಡೂ ದೇಶಗಳಿಂದ ಆಶಾದಾಯಕ ಪ್ರತಿಕ್ರಿಯೆ ಬಂದಿತಾದರೂ ಆನಂತರ ಅದು ಮಸುಕಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿನ ಮೈತ್ರಿಕೂಟ ಸರ್ಕಾರದ ಅದಕ್ಷತೆಯ  ಫಲವಾಗಿ ಪಾಕಿಸ್ತಾನ ಜತೆಗಿನ ಬಾಂಧವ್ಯ ಗೋಜಲು
ಗೊಂಡಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ.  ಪರಸ್ಪರ ವಿರೋಧಾಭಾಸದ ಸೈದ್ಧಾಂತಿಕ ಮೈತ್ರಿಕೂಟದಲ್ಲಿ ಬಿಜೆಪಿಯು ಖಚಿತ ನಿರ್ಧಾರಕ್ಕೆ ಬರದಿರುವುದು  ಮತ್ತು  ಪಕ್ಷದ ರಾಷ್ಟ್ರೀಯ ರಾಜಕೀಯದಲ್ಲಿ  ಪಾಕಿಸ್ತಾನ ವಿಷಯವನ್ನು ಬೆರೆಸುವ ಪರಸ್ಪರ ವಿರೋಧಾಭಾಸದ ಧೋರಣೆ ತಳೆದಿದೆ.
ಭಾರತ ಸರ್ಕಾರದ ಇತ್ತೀಚಿನ ಹೇಳಿಕೆ ಮತ್ತು ನಡವಳಿಕೆಗಳು ಚೀನಾದ ಪಾಲಿಗೆ  ಪ್ರಚೋದನಕಾರಿ ಕ್ರಮಗಳಾಗಿ ಕಂಡುಬಂದಿವೆ.

ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ಸೇರಿದಂತೆ, ಟಿಬೆಟ್‌ನ ದೇಶಾಂತರ ಸರ್ಕಾರದ ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ನಿದರ್ಶನಗಳು ಹೆಚ್ಚುತ್ತಿವೆ.  ದಲೈ ಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾಗ   ಸಚಿವರೊಬ್ಬರು ಅವರ ಜತೆಗೆ ಇದ್ದರು. ‘ನನ್ನ ರಾಜ್ಯದ ಗಡಿಯು ಚೀನಾ ಜತೆ ಅಂಟಿಕೊಂಡಿರದೆ ಟಿಬೆಟ್‌ ಜತೆಗೆ ನಂಟು ಹೊಂದಿದೆ’ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ  ಹೇಳಿಕೆ ನೀಡಿರುವುದು ಕಹಿ ಭಾವನೆ ಹೆಚ್ಚಿಸಲು ಕಾರಣವಾಗುತ್ತಿದೆ.

ಈ ಎಲ್ಲ ಬೆಳವಣಿಗೆಗಳು ಮತ್ತು ಹೇಳಿಕೆಗಳು ಉದ್ದೇಶಪೂರ್ವಕವೇ ಎನ್ನುವುದು ನಮಗೆ ಗೊತ್ತಿಲ್ಲ. ಎರಡೂ ದೇಶಗಳ ಜತೆಗಿನ ಗಡಿ ವಿವಾದಗಳು ಯಾವುದೇ ಕಾರಣಕ್ಕೂ ಉಲ್ಬಣಗೊಳ್ಳದಂತೆ ಭಾರತ ವಿವೇಕದಿಂದ ವರ್ತಿಸಬೇಕಾಗಿದೆ. ಅದೇ ವೇಳೆಗೆ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿನ ಸಮಸ್ಯೆಯು ಹುಣ್ಣಾಗುವುದನ್ನು ತಡೆಯಲೂ ಮನಸ್ಸು ಮಾಡಬೇಕಾಗಿದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT