ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲವೂ ಕಲ್ಪವೃಕ್ಷ, ಕಾಮಧೇನು

Last Updated 4 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದಟ್ಟಕಾಡಿನ ಅಂಚಲ್ಲಿ ಒಳಪ್ರವೇಶಕ್ಕಿದ್ದ ಕಾಲುದಾರಿಯ ತುದಿಯಲ್ಲಿ ಕ್ರಿಸ್ ಕಾಯುತ್ತಿದ್ದ. ಟೂರು ಏಜೆಂಟಳು ತನ್ನ ಕಾರಿನಲ್ಲಿ ಅಲ್ಲಿವರೆಗೆ ಡ್ರಾಪ್ ಕೊಟ್ಟು ಹೋದಳು. ಹಟಕ್ಕೆ ಬಿದ್ದಂತೆ ಜಿಟಿಜಿಟಿ ಮಳೆ ಏಕಶ್ರುತಿಯಲ್ಲಿ ಉದುರುತ್ತಿತ್ತು. ನೀಲಿ ಬಣ್ಣದ ತೆಳುವಾದ ಪ್ಲಾಸ್ಟಿಕ್ ಶೀಟನ್ನು, ಕಣ್ಣುಮೂಗುಗಳನ್ನು ಹೊರತುಪಡಿಸಿ, ಕವುಚಿಕೊಂಡಿದ್ದ ಕ್ರಿಸ್, ಅಂಥದ್ದನ್ನೇ ನನಗೊಂದು ಕೊಟ್ಟ. ಇಬ್ಬರೂ ‘ಅವತಾರ್’ ಸಿನಿಮಾದ ಪಾತ್ರಧಾರಿಗಳಂತೆ ಕಾಣತೊಡಗಿದೆವು. ಇನ್ನೂ ಯಾರಾದರೂ ಬರಲಿಕ್ಕಿದೆಯೆ ಎಂದೆ. ಇಲ್ಲ ; ಕಾಲ್ನಡಿಗೆಯಲ್ಲಿ ಕಾಡು ಸುತ್ತಲು ಬರುವವರು ಕಡಿಮೆ. ಕೆಟ್‌ಚಿಕಾನ್‌ನಲ್ಲಿ ಅನೇಕ ಆಕರ್ಷಣೆಗಳಿವೆ.

ಡಕ್‌ಬೋಟ್, ಸೀಪ್ಲೇನ್, ಟ್ರಾಲಿ ಮುಂತಾದವುಗಳಲ್ಲಿ ಜಲಮಾರ್ಗ ಮತ್ತು ಆಕಾಶಮಾರ್ಗಗಳ ಮೂಲಕ ಕೆಟ್‌ಚಿಕಾನ್‌ನ ಸುತ್ತಮುತ್ತಣ ಪರಿಸರವನ್ನು ಆಸ್ವಾದಿಸುವವರು ಹೆಚ್ಚು. ಆದರೆ ನಾನು ಕಾಲ್ನಡಿಗೆಯನ್ನೇ ಆರಿಸಿಕೊಂಡಿದ್ದೆ. ಕ್ರಿಸ್ ಅಲಾಸ್ಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ. ಪಾರ್ಟ್‌ಟೈಂ ಕೆಲಸ ಮಾಡಿಕೊಂಡು ಓದುವುದು ಅಲ್ಲಿ ಸಾಮಾನ್ಯ. ನನಗೆ ಕಾಡನ್ನು ವಿವರಿಸಲು ಗೈಡ್ ಆಗಿ ಬಂದಿದ್ದ. ಚುರುಕುಗಣ್ಣಿನ, ವಟವಟ ಮಾತಿನ, ಪ್ರತಿ ಮಾತಿನಂಚಿಗೂ ಆಶ್ಚರ್ಯಾರ್ಥಕ ಉದ್ಗಾರ ಹೊಮ್ಮಿಸುವ ಟಿಪಿಕಲ್ ಅಮೆರಿಕನ್ ಶೈಲಿಯ ಉತ್ಸಾಹಿ ತರುಣನಾಗಿದ್ದ.

ಅಲಾಸ್ಕ ಯೂನಿವರ್ಸಿಟಿಗೆ ಇತ್ತೀಚಿಗೆ ಏಳು ಮಿಲಿಯನ್ ಡಾಲರ್‌ಗಳನ್ನು ಫೆಡರಲ್ ಸರ್ಕಾರ ಅನುದಾನವಾಗಿ ನೀಡಿದ್ದು ಅವನ ಖುಷಿಗೆ ಕಾರಣವಾಗಿತ್ತಂತೆ. ಊರುತ್ತಾ ನಡೆಯಲು ನನಗೊಂದು ಕೋಲು ಕೊಟ್ಟು, ಅವನೊಂದನ್ನು ಊರುತ್ತಾ, ತುಂತುರು ಮಳೆಗೆ ಮುಖ ಒಡ್ಡಿ ಆಸ್ವಾದಿಸುತ್ತಾ, ಗಗನಚುಂಬಿ ವೃಕ್ಷಸಮೂಹಗಳನ್ನು ನೋಡುತ್ತಾ ಟೊಂಗಾಸ್ ಅರಣ್ಯವನ್ನು ಪ್ರವೇಶಿಸಿದೆವು. ನನ್ನ ನಡಿಗೆಗೊಂದು ಸಮತೋಲನ ಸಿಗಲಿಲ್ಲ. ಇನ್ನೂ ಹಡಗಿನಲ್ಲಿ ತೇಲುತ್ತಿರುವ ಅನುಭವದಂತೆ ಭಾಸವಾಗುತ್ತಿತ್ತು. ಒಂದು ಕೊಳ್ಳ ದಾಟಿ, ಹರಿಯುವ ನೀರಿನಲ್ಲಿ ಕಾಲಾಡಿಸಿ, ಫರ್ನ್ ಬೆಳೆದ ದೈತ್ಯ ಕಾಂಡಗಳನ್ನು ಮುಟ್ಟಿದ ಮೇಲೆ ಇದು ಹಡಗಲ್ಲ, ಅಡವಿ ಎಂಬ ವಾಸ್ತವಕ್ಕೆ ಬಂದೆ.

೧೮೬೭ರಲ್ಲಿ ಈ ಅಮೂಲ್ಯ ಭೂಭಾಗವನ್ನು ರಷ್ಯಾ ಅಗ್ಗದ ಬೆಲೆಗೆ ಅಮೆರಿಕಾಗೆ ಮಾರಿಬಿಟ್ಟ ಮೇಲೆ ಅಲಾಸ್ಕ ಅಮೆರಿಕಾದ 49ನೇ ರಾಜ್ಯವೆಂದು ಪರಿಗಣಿಸಲ್ಪಟ್ಟಿತು. 1902ರಲ್ಲಿ ರೂಸ್‌ವೆಲ್ಟ್ ಇದರ ಮಹತ್ವವನ್ನು ಗುರುತಿಸಿ ವ್ಯವಸ್ಥಿತವಾಗಿ ಇದನ್ನು ಕಾಪಾಡುವ ಕ್ರಮ ಕೈಗೊಂಡರು. ಇಲ್ಲಿನ ಟ್ಲಿಂಗಿಟ್ ಬುಡಕಟ್ಟು ಜನರ ಹೆಸರಿನಿಂದ ಟೊಂಗಾಸ್ ಹೆಸರು ಬಂದಿರುವ ಸಾಧ್ಯತೆ ಇದೆ. ಐವತ್ತೇಳು ಲಕ್ಷದ, ಐವತ್ತು ಸಾವಿರ ಎಕರೆಗಳಲ್ಲಿ ಟೊಂಗಾಸ್ ಅರಣ್ಯ ಪ್ರದೇಶ ಹಬ್ಬಿದೆ ಎಂದು ಕ್ರಿಸ್ ಹೇಳಿದ. ಇಡೀ ದಕ್ಷಿಣ ಅಲಾಸ್ಕವನ್ನು ಆವರಿಸಿಕೊಂಡಿರುವ ಟೊಂಗಾಸ್ ಕಾಡುಗಳಲ್ಲಿ ಕಪ್ಪು ಮತ್ತು ಕಂದು ಕರಡಿಗಳು, ವಲಸೆ ಹಕ್ಕಿಗಳು, ಉನ್ನತವಾದ ಶಿಖರಶ್ರೇಣಿಗಳು, ಬೆಳ್ಳನೆಯ ಗ್ಲೇಸಿಯರ್‌ಗಳು, ಲೈಮ್‌ಸ್ಟೋನ್ ಗುಹೆಗಳು, ಹಿಮದ ಬಯಲುಗಳು, ಕಡಲಂಚಿಗೆ ಸ್ವಚ್ಛ ಮರಳತೀರಗಳು... ಹೀಗೆ ಏನೆಲ್ಲಾ ಇವೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಇದು ಸಾಲ್‌ಮನ್ ಎಂಬ ಜಾತಿಯ ಮೀನುಗಳ ಸ್ವರ್ಗ. ಅವು ಇಲ್ಲಿ ಅಸಂಖ್ಯಾತ ಮೊಟ್ಟೆಗಳನ್ನಿಟ್ಟು ಸಂತಾನ ಅಭಿವೃದ್ಧಿ ಮಾಡುತ್ತವೆ. ಆದ್ದರಿಂದಲೇ ಈ ಪ್ರಾಂತ್ಯಕ್ಕೆ Salman capital of the world ಎಂಬ ಕೋಡು ಬಂದಿರುವುದು. ಸಾಲ್‌ಮನ್ ರುಚಿಯಾದ ಮೀನು. ಅಲಾಸ್ಕಗೆ ಹೋದ ಸಸ್ಯಾಹಾರಿಗಳಿಗೂ ಯಾಕೆ ಒಂದು ಕೈ ನೋಡಬಾರದು ಎಂದು ಆಸೆ ಹುಟ್ಟಿಸುವ ಬೆಣ್ಣೆಯಂಥ ಮೀನು. ಪರಿಸರದ ಸಮತೋಲನ ಕ್ರಿಯೆ ಅಚ್ಚರಿದಾಯಕ. ಇಲ್ಲಿ ಅಪೂರ್ವ ಮತ್ಸ್ಯರಾಶಿ ಇರುವಂತೆಯೇ ಅವನ್ನೇ ಆಹಾರವಾಗಿಸಿಕೊಂಡಿರುವ ಕರಡಿ ಸಮೂಹ ಮತ್ತು ಹದ್ದುಗಳು ಅಪಾರವಾಗಿವೆ. ಇದು ಜಿಂಕೆಗಳಿದ್ದೆಡೆ ಹುಲಿಗಳಿರುವಂತೆ, ಇಲಿಗಳಿದ್ದೆಡೆ ಹಾವುಗಳಿರುವಂತೆ. ಫಿಶಿಂಗ್‌ಗೆ ಕುಳಿತವನು ಕೆಲವೇ ನಿಮಿಷದಲ್ಲಿ ಸಾಲ್‌ಮನ್ ಹಿಡಿದು ಅದನ್ನು ಹೆಗಲ ಮೇಲೆ ತರಕಾರಿಯಂತೆ ಹೊತ್ತು ಹೋಗುತ್ತಿರುತ್ತಾನೆ. ಇದು ಕೇವಲ ಇಂದಿನ ಕಥೆಯಲ್ಲ ; ಹತ್ತು ಸಾವಿರ ವರ್ಷಗಳಿಂದ ಈ ಕಾಡಿನಲ್ಲಿ ವಾಸಿಸುತ್ತಿರುವ ಅಲಾಸ್ಕನ್ನರು ಮೀನಿನ ಬದುಕಿನ ಭಾಗವಾಗಿದ್ದಾರೆ. ಜನರ ಬದುಕಿನ ಭಾಗ ಮೀನು ಎಂದಲ್ಲ ; ಜನರೇ ಮೀನಿನ ಬದುಕಿನ ಭಾಗ. ಕಾರಣ ಇಲ್ಲಿ ಮೀನುಗಳು ಹೇರಳ. ಮನುಷ್ಯರು ವಿರಳ.

ಟಾಂಗೋಸ್ ಒಂದು ಅದ್ಭುತ ಮಳೆ ಕಾಡು. ಕೆಟ್‌ಚಿಕಾನ್‌ನಲ್ಲಿ ೧೬೨ ಇಂಚು ಸರಾಸರಿಯಾಗಿ ವರ್ಷಕ್ಕೆ ಮಳೆ ಬೀಳುತ್ತದೆ. ಅಂತೆಯೇ ಹಿಮಪಾತವೂ 32 ಇಂಚು. ಆರ್ಕ್‌ಟಿಕ್ ವೃತ್ತದ ಕೆಳಗಿರುವ ಇದು ಉದುರೆಲೆ ಕಾಡು (Deciduous forest). ಚಳಿಗಾಲದಲ್ಲಿ ಎಲೆ ಉದುರಿಸಿಕೊಂಡು ಮರಗಳೆಲ್ಲ ಹೊಸ ಚಿಗುರಿಗೆ ಕಾತರಿಸುತ್ತವೆ. ಆ ಕಾಡಿನಲ್ಲಿ ದೈತ್ಯವಾಗಿದ್ದ ಮತ್ತು ಹೇರಳವಾಗಿದ್ದ ಮರವನ್ನು ತೋರಿಸಿ ಇದರ ಹೆಸರೇನು ಎಂದೆ ಕ್ರಿಸ್‌ಗೆ. ಅದರ ಹೆಸರು ಸಿಟ್ಕಾ ಸ್ಪ್ರೂಸ್ (Sitka Spruce) ಎಂದ. ಒಂದಿಷ್ಟು ಹೊತ್ತು ಮರಗಳ ಬಗ್ಗೆಯೇ ಮಾತನಾಡಿದೆವು.

ಕುರುಚಲು ಸಸ್ಯಗಳನ್ನು ಎದೆಮಟ್ಟದವರೆಗೆ ಬೆಳೆಯಲು ಬಿಟ್ಟು, ಆ ದೈತ್ಯಮರಗಳೆಲ್ಲ ಆಕಾಶಮುಖಿಗಳಾಗಿದ್ದವು. ಅವೆಲ್ಲಾ ಟಿಂಬರ್ ಟ್ರೀಗಳು. ಸಿಟ್ಕಾ ಸ್ಪ್ರೂಸ್ ಮರವನ್ನು ಹಲಗೆಗಳು, ಪಿಯಾನೊ, ಗಿಟಾರ್ ಅಷ್ಟೇ ಅಲ್ಲ, ವಿಮಾನದ ಬಿಡಿಭಾಗಗಳ ತಯಾರಿಕೆಗೂ ಬಳಸುತ್ತಾರೆ.  ಓಕ್ ಮರವು ಅಧಿಕೃತ ರಾಷ್ಟ್ರೀಯ ಮರವಾದರೆ, ಸಿಟ್ಕಾ ಸ್ಪ್ರೂಸ್ ಅಧಿಕೃತ ಅಲಾಸ್ಕ ರಾಜ್ಯದ ಮರ. ಎಲ್ಲಕ್ಕೂ ಒಂದು ಹೆಸರಿಡಲು, ಅದರ ಮೇಲೊಂದು ಕಿರೀಟವಿಡಲು, ಅದನ್ನೊಂದು ದಿನವನ್ನಾಗಿ ಆಚರಿಸಿ ಸಂಭ್ರಮಿಸಲು ಅಮೆರಿಕನ್ನರು ಕಾತರಿಸುತ್ತಾರೆ. ಇದು ಕೇವಲ ನಗರಗಳಿಗೆ ಮೀಸಲಲ್ಲ. ಕಾಡು, ನದಿ, ಗ್ಲೇಸಿಯರ್‍್ಸ್, ಪರ್ವತಗಳಿಗೂ ಅನ್ವಯ.

ಅಮೇರಿಕಾ ಎಂದರೆ ಗಗನಚುಂಬಿ ಕಟ್ಟಡಗಳ ದೇಶ ಎಂದೇ ಹಲವರ ನಂಬುಗೆ. ಆದರೆ ಅದು ಗಗನಚುಂಬಿ ಮರಗಳನ್ನೂ ಹೊಂದಿದೆ. ಅವರು ನಿಸರ್ಗವನ್ನು ಜತನವಾಗಿ ಕಾಪಾಡಿಕೊಂಡಿದ್ದಾರೆ. ಏರುತ್ತಿರುವ ಜನಸಂಖ್ಯೆ, ನಗರೀಕರಣದ ಒತ್ತಡದ ನಡುವೆಯೂ ಕಾಡುಗಳ ಸಂರಕ್ಷಣೆ ವ್ಯವಸ್ಥಿತವಾಗಿದೆ. ಇದನ್ನು ನೋಡಲು ಜಗತ್ತಿನಾದ್ಯಂತ ಪ್ರವಾಸಿಗರು ಬರುತ್ತಾರೆ. ೧೭ ಮಿಲಿಯನ್ ಎಕರೆಗಳ ಈ ಕಾಡು ಪ್ಲಾಸ್ಟಿಕ್‌ನಿಂದ ಹೊರತು. ಕಾಡನ್ನು ಸವಿಯಲು ಕ್ಯಾಬಿನ್‌ಗಳು, ಹೈಕಿಂಗ್ ಟ್ರಯಲ್‌ಗಳು, ಕ್ಯಾಂಪ್ ಏರಿಯಾಗಳು ನಿರ್ದಿಷ್ಟ ಜಾಗದಲ್ಲಿವೆ. ಹದಿನಾಲ್ಕು ಸಾವಿರ ಮೈಲಿಗಳ ಕಡಲ ತೀರವಿದೆ. ಆದರೆ ಎಲ್ಲವೂ ನಿರ್ಮಲ, ಪ್ರಶಾಂತ. ಮರಗಳನ್ನು ಬೆಳೆಸಲು ಪ್ರೇರೇಪಿಸುವ ಹಲವು ಸಂಸ್ಥೆಗಳಿವೆ. ನೀವು ಒಂದು ಡಾಲರ್ ಕೊಟ್ಟರೆ ಅವರೊಂದು ಮರ ಬೆಳೆಸುತ್ತಾರೆ. ರೋಗ, ಬೆಂಕಿ, ಕೀಟಗಳಿಂದ ಕಾಡು ಅಪಾಯ ಎದುರಿಸುತ್ತಲೇ ಇರುತ್ತದೆ. ಇದರ ಪ್ರಮಾಣವನ್ನು ಸರಿದೂಗಿಸಲು ಮರಗಳನ್ನು ಸತತವಾಗಿ ಬೆಳೆಸಬೇಕಾಗುತ್ತದೆ. ಕಾಡು ಕಡಿಯುವುದು ಅನಿವಾರ್ಯ. ಅಷ್ಟೇ ಪ್ರಮಾಣದಲ್ಲಿ ಬೆಳೆಸುವುದು ಅಗತ್ಯ. ಟಾಂಗೋಸ್ ಕಾಡು ಇದಕ್ಕೆ ಉತ್ತಮ ಉದಾಹರಣೆ.

ಮರೆತಿದ್ದೆ. ಪಶ್ಚಿಮ ಆಫ್ರಿಕಾದಲ್ಲಿ ಔಬುಂಗಿ ಎಂಬ ಬುಡಕಟ್ಟು ಜನರಿದ್ದಾರೆ. ಅವರು ಒಂದು ಮಗು ಹುಟ್ಟಿದ ದಿನ ಒಂದು ಗಿಡ ನೆಡುತ್ತಾರೆ. ಮಗುವಿನಂತೆಯೇ ಮರವನ್ನು ಜೋಪಾನವಾಗಿ ಬೆಳೆಸುತ್ತಾರೆ. ಮರಕ್ಕೆ ರೋಗ ಬಂದರೆ ಮಗುವಿಗೂ ಬರುತ್ತದೆ ಎಂಬ ನಂಬಿಕೆ. ಮರವು ಹೂ ಬಿಟ್ಟ ವರ್ಷ ಮಗನಿಗೆ ಮದುವೆ ಮಾಡುತ್ತಾರೆ. ಮನುಷ್ಯ ತೀರಿಕೊಂಡಾಗ ಅವನ ಆತ್ಮ ಆ ಮರದಲ್ಲೇ ನೆಲೆಸಿರುತ್ತದೆ ಎಂದು ನಂಬುತ್ತಾರೆ. ನ್ಯೂಜಿಲ್ಯಾಂಡ್‌ನ ಮೌರಿಗಳೂ ಮರ ಕಡಿಯುವ ಮುನ್ನ ಕಾಡಿನ ದೇವತೆಯ ಅನುಮತಿ ಕೇಳುತ್ತಾರೆ. ಕಡಿಯುವ ಮುನ್ನ ಎಷ್ಟು ಸಸಿ ನೆಡಬೇಕು ಎಂದು ದೇವತೆ ಸೂಚಿಸುತ್ತಾಳೆ. ಇದನ್ನು ಅಲಾಸ್ಕನ್ನರಿಗೂ ವಿಸ್ತರಿಸಬಹುದು.

ಮರ, ಕಾಡು ಇವುಗಳೊಂದಿಗೆ ಐಕ್ಯವಾಗಿರುವ ಸಮುದಾಯಗಳು ಮರವನ್ನು ಮಾರಾಟದ ಸರಕು ಎಂದು ನೋಡುವುದಿಲ್ಲ. ಮರ ದೈತ್ಯವಾಗಿ ಬೆಳೆಯುತ್ತಿದ್ದಂತೆ ಗರಗಸ ಹೊಂಚುವುದಿಲ್ಲ. ಅಮೆರಿಕಾದ ದೈತ್ಯಮರ ಈ ಕಾಡಲ್ಲೇ ಇರಬೇಕಲ್ಲವೆ ? ಎಂದೆ ಕ್ರಿಸ್‌ಗೆ. ಅವನು ನಿರಾಸೆಯಿಂದ ಇರಬೇಕಿತ್ತು; ಆದರೆ ಇಲ್ಲ. ಜನರಲ್ ಶೆರ್ಮಾನ್ ಎಂಬ ದೊಡ್ಡಮರ ಕ್ಯಾಲಿಫೋರ್ನಿಯಾದ ಸಿಕ್ವೋಲಾ ನ್ಯಾಷನಲ್ ಪಾರ್ಕಿನಲ್ಲಿದೆ. ಅದರ ಎತ್ತರ ೮೪ ಮೀಟರು ಮತ್ತು ಕಾಂಡದ ದಪ್ಪ ೮ ಮೀಟರು. ಅದು ಸದ್ಯಕ್ಕೆ ಭೂಮಿಯ ಮೇಲಿರುವ ಅತ್ಯಂತ ದೊಡ್ಡ ಮರ ಎಂದ. ಭಾರತದ ಕಾಡುಗಳ ಕಾಲ್ನಡಿಗೆಯಲ್ಲೂ ಕೆಲವು ಹಳೆಯ ಮರಗಳನ್ನು ನೋಡಿದ್ದು ನೆನಪಾಯಿತು. ಬಿಳಿಗಿರಿರಂಗನ ಬೆಟ್ಟದ ಕಾಡುಗಳಲ್ಲಿ ಹಳೆಯ ಸಂಪಿಗೆ ಮರವಿದೆ. ಹುಲಿಕೆರೆ ಅರಣ್ಯದಲ್ಲೂ ಬೃಹತ್ ಗಾತ್ರದ ತೇಗದ ಮರಗಳಿವೆ. ಕೆಲವು ಅರಣ್ಯಾಧಿಕಾರಿ ಮಿತ್ರರ ನೆರವಿನಿಂದ ನಮ್ಮ ಕಾಡುಗಳನ್ನೆಲ್ಲ ನೋಡಲು ಸಾಧ್ಯವಾಗಿತ್ತು. ಅವುಗಳೆಲ್ಲ ಪ್ಲಾಸ್ಟಿಕ್‌ಮಯವಾಗಿವೆ ಎಂಬುದೇ ದುಃಖಕರ.

ಕ್ರಿಸ್ ಅಮೆರಿಕಾದ ನೆಲದಲ್ಲಿ ಬೆಳೆಯುವ ಅನೇಕ ಮರಗಳ ಹೆಸರನ್ನು ಹೇಳಿದ. ಓಕ್ ಮರ ಒಂದರಲ್ಲೇ ೩೦೦ ಉಪಜಾತಿಗಳಿವೆಯಂತೆ. ಅಲ್ಲದೆ ಆಶ್, ಆಸ್ಪೆನ್, ಬಿರ್ಚ್, ಚೆರ್ರಿ, ಮೇಪಲ್ಸ್, ಪೈನ್, ರೆಡ್ ಮುಂತಾದ ಐವತ್ತು ಜಾತಿಯ ಮರಗಳು ಬೆಳೆಯುತ್ತವಂತೆ. ನಾನೂ ತೇಗ, ಬೀಟೆ, ಹೊನ್ನೆ, ಗಂಧ, ಹಿಪ್ಪೆ, ಹಲಸು, ಮಾವು, ಹೊಂಗೆ, ಆಲ, ಅರಳಿ ಇತ್ಯಾದಿಗಳ ಹೆಸರು ಹೇಳಿದೆ. ಯಾವುದೋ ಒಂದು ಮರ ನಿಮ್ಮಲ್ಲಿ ಕೇಳಿದ್ದನ್ನೆಲ್ಲ ಕೊಡುವುದಂತಲ್ಲ ? ಎಂದು ಕ್ರಿಸ್ ಕುತೂಹಲದಿಂದ ಕೇಳಿದ. ಕಲ್ಪವೃಕ್ಷವನ್ನು ಕುರಿತಂತೆ ಅವನು ಎಲ್ಲೋ ಓದಿರಬೇಕು ಎಂದುಕೊಂಡೆ. ನಾನು ಇನ್ನೂರು ಕಲ್ಪವೃಕ್ಷಗಳ ಮಾಲೀಕ ಎಂದು ಹುಸಿಬಿಂಕದಿಂದ ಹೇಳಿದೆ. ಅವನು ಆಶ್ಚರ್ಯಕರವಾಗಿ ನೋಡಿದ. ಕೇಳಿದ್ದೆಲ್ಲವನ್ನೂ ಕೊಡುವ ಇನ್ನೂರು ಕಲ್ಪವೃಕ್ಷಗಳ ಮಾಲೀಕನೆಂದರೆ?

ಸಾವಕಾಶವಾಗಿ ವಿಸ್ತರಿಸಿ ಹೇಳಿದೆ. ಅದೊಂದು ನಂಬಿಕೆಯಷ್ಟೆ. ಕಲ್ಲು, ಮಣ್ಣು, ಮರ ಎಲ್ಲವನ್ನೂ ಪೂಜಿಸುವ, ಗೌರವಿಸುವ ಮನಸ್ಥಿತಿ. ಸಂಸ್ಕೃತದಲ್ಲಿ ಕಲ್ಪವೃಕ್ಷ. ನಮ್ಮ ಹಳ್ಳಿಗಳಲ್ಲಿ ತೆಂಗಿನ ಮರ. ಅದರ ಎಲ್ಲ ಭಾಗಗಳೂ ಬಹೂಪಯೋಗಿ. ಕಲ್ಪವೃಕ್ಷ ಮತ್ತು ಕಾಮಧೇನು ದೇವಲೋಕದಿಂದ ಭೂಲೋಕಕ್ಕೆ ಬಂದವುಗಳು ಎಂಬುದು ಪೌರಾಣಿಕ, ಧಾರ್ಮಿಕ ನಂಬಿಕೆ. ಕೇಳಿದ್ದನ್ನು ಕೊಡುತ್ತದೆ ಎಂಬುದನ್ನು ವಾಚ್ಯಾರ್ಥವಾಗಿ ಪರಿಗಣಿಸಬಾರದು. ಕಷ್ಟದಲ್ಲಿರುವವರನ್ನು ಪೊರೆಯುತ್ತದೆ ಎಂದು ಅದರ ಅರ್ಥ. ಒಮ್ಮೆ ಫಲ ಬಿಡಲು ತೊಡಗಿದರೆ ತೆಂಗಿನ ಮರ ತಲೆಮಾರುಗಳವರೆಗೂ ಕಾಯುತ್ತದೆ.

ಹಿತ್ತಿಲಲ್ಲಿ ಹತ್ತು ತೆಂಗಿನ ಮರ ಇದ್ದವನೂ ಜೀವನೋಪಾಯ ಮಾಡಬಹುದು. ನಾವು ತೆಂಗು ಬೆಳೆಯುತ್ತೇವೆ. ತೆಂಗು ಬೆಳೆಗಾರರಲ್ಲಿ ವಿಪರೀತ ಸಾಲ ಮಾಡುವವರೂ ಇದ್ದಾರೆ. ಉದಾಹರಣೆಗೆ ನನ್ನ ತಂದೆ ಹಾಗೇ ಇದ್ದರು. ತೆಂಗಿನ ಮರ ಕೇಳಿದ್ದೆಲ್ಲ ಕೊಡುವಂತಿದ್ದರೆ ಎಲ್ಲರೂ ಕೆಲಸ ಮಾಡುವುದನ್ನು ಬಿಟ್ಟು ಮರದ ಎದುರು ಕ್ಯೂ ನಿಲ್ಲುತ್ತಿದ್ದರು. ಅಪ್ಪಂದಿರು ಮಾಡಿದ್ದ ಸಾಲವೆಲ್ಲಾ ಒಂದೇ ಏಟಿಗೆ ತೀರಬೇಕಿತ್ತಲ್ಲವೆ ? ಕ್ರಿಸ್ ಜೋರಾಗಿ ನಕ್ಕ. ‘ವೆರಿ ಇಂಟರೆಸ್ಟಿಂಗ್’ ಎಂದ. ಸೂಚ್ಯಾರ್ಥವಾಗಿ ಪರಿಗಣಿಸಿದರೆ ಎಲ್ಲ ಮರಗಳೂ ಮನುಕುಲಕ್ಕೆ ಕೇಳಿದ್ದನ್ನೆಲ್ಲಾ ಕೊಡುತ್ತಾ ಬಂದಿವೆ. ನಾವು ಅವುಗಳನ್ನು ಕಾಪಾಡಿದರೆ ಅವು ನಮ್ಮನ್ನು ಕಾಪಾಡುತ್ತವೆ. ಆ ದೃಷ್ಟಿಯಲ್ಲಿ ಸೃಷ್ಟಿಯ ಎಲ್ಲ ಸಸ್ಯರಾಶಿಯೂ ಕಲ್ಪವೃಕ್ಷವೇ. ಎಲ್ಲ ಪ್ರಾಣಿಗಳೂ ಕಾಮಧೇನುವೇ.

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT