ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕತಾಳದಲ್ಲಿ ಶಾಲೆಯ ಗಂಟೆಯೂ ಚೆಂಡೆಯ ನುಡಿತವೂ

Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ರಾತ್ರಿ ಮನೆ ಬಿಟ್ಟಿರಲಾರೆವು, ನಿದ್ದೆಯನ್ನು ಜೈಸಲಾರೆವು ಎನ್ನುವವರು ಯಕ್ಷಗಾನ ಕಲಾವಿದರಾಗಲಾರರು. ಒಳ್ಳೆಯ ಯಕ್ಷಗಾನ ಪ್ರೇಕ್ಷಕನಾಗುವವನೂ ನಿದ್ದೆಯನ್ನು ತೊರೆಯಬೇಕಾಗುತ್ತದೆ. ಈಗ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಲ್ಲ ಸಮಯಗಳಲ್ಲಿ ಕಾಲಮಿತಿಯ ಯಕ್ಷಗಾನ ಪ್ರದರ್ಶನಗಳು ಆಯೋಜನೆಗೊಳ್ಳಲಾರಂಭಿಸಿದ ಮೇಲೆ ನಿದ್ದೆ ಬಿಡಲೇಬೇಕೆಂಬ ಕಡ್ಡಾಯ ತಪ್ಪಿದೆ.

ಆದರೆ, ಯಕ್ಷಗಾನದ ನಿಜವಾದ ಸೊಗಸು ಇರುವುದು ತೆರೆದ ಬಯಲಲ್ಲಿ ಮತ್ತು ಇರುಳಿಡೀ ನಡೆಯುವ ಪ್ರದರ್ಶನದಲ್ಲಿ. ‘ಎಲ್ಲರೂ ಮಲಗಿರುವಾಗ ತಾನೊಬ್ಬ ಎಚ್ಚರವಿರುವ’ ಯಕ್ಷಗಾನದ ವ್ಯವಹಾರದಲ್ಲಿ ನನಗೂ ಚಿತ್ರವಿಚಿತ್ರ ಅನುಭವಗಳಾಗಿವೆ. ಆವಾಗಲೆಲ್ಲ ಹವ್ಯಾಸಿಗಳು ಕೂಡ ತಡರಾತ್ರಿಯವರೆಗೂ ದೇವಸ್ಥಾನ, ದೈವಸ್ಥಾನಗಳ ಅಂಗಣಗಳಲ್ಲಿ ಯಕ್ಷಗಾನದ ರಿಹರ್ಸಲ್ ಮಾಡಿಕೊಂಡು ಮರಳುವುದೊಂದು ರೋಚಕ ಅನುಭವವಾಗಿತ್ತು.

ಹೆಚ್ಚಿನ ಸಲ ಯಾರಾದರೂ ಒಡನಾಡಿಗಳಿರುತ್ತಿದ್ದರು, ಕೆಲವೊಮ್ಮೆ ಒಂಟಿಯೇ. ಯುದ್ಧ ಮುಗಿದ ಕುರುಕ್ಷೇತ್ರದ ನಿರ್ಜನ ದಾರಿಯಂಥ ದಾರಿಯಲ್ಲಿ ನಡುರಾತ್ರಿ ನಡೆಯುತ್ತಿರುವಾಗ ಮರದ ಎಲೆಗಳ ನೆರಳುಗಳು ಚಲಿಸಿದರೂ ನಡುಕ ಹುಟ್ಟಿಸುವ ಒಂಟಿತನವದು. ದೂರದಲ್ಲೊಂದು ಬಿಳಿಯ ಕಂಬ ಕಂಡರೂ ನಿಂತು, ಅದು ಭೂತವಾಗಿರಬಹುದೇ ಎಂದು ಸಂಶಯಿಸುವ ಏಕಾಕಿತನವದು. ಆದರೆ, ಜೊತೆಗಾರರಿದ್ದರೆ ರಾತ್ರಿ ಅಲೆದಾಡುವುದರಲ್ಲಿಯೂ ಒಂದು ರೀತಿಯ ಆಹ್ಲಾದವಿರುತ್ತಿತ್ತು.

ಒಮ್ಮೆ ಗುರುಗಳಾದ ಗುಂಡಿಬೈಲು ನಾರಾಯಣ ಶೆಟ್ಟರು ಮತ್ತು ಸಕ್ಕಟ್ಟು ಸೀತಾರಾಮಯ್ಯರವರೊಂದಿಗೆ ಕೊಂಚ ದೂರವಿರುವ ದೈವಸ್ಥಾನವೊಂದರಲ್ಲಿ ‘ಟ್ರಯಲ್’ಗೆ ಹೋಗಿದ್ದೆವು. ೬೦ರ ದಶಕದ ಕೊನೆಯೆಂದರೆ ನಾನಾಗ ಮೀಸೆ ಮೂಡದ ಹುಡುಗ. ಹಿರಿಯರ ಸಂಭಾಷಣೆಗಳನ್ನು ಆಲಿಸುತ್ತ ಮೈಲುದೂರ ನಡೆಯುವುದೇ ಒಂದು ವಿಶೇಷ ಅನುಭವವಾಗಿದ್ದುದರಿಂದ ಒಂದಿಷ್ಟೂ ಔದಾಸೀನ್ಯ ತೋರಿಸದೆ ಅವರ ಜೊತೆಯಾಗುತ್ತಿದ್ದೆ. ಆಗೊಮ್ಮೆ ಅಭ್ಯಾಸ ಮುಗಿಸಿ ತಡರಾತ್ರಿ ಮರಳಬೇಕೆನ್ನುವಷ್ಟರಲ್ಲಿ ದೂರದಲ್ಲೆಲ್ಲೂ ಗಲಭೆ ಕೇಳಿಸಿದಂತಾಯಿತು. ಜೊತೆಗೆ ಆರ್ತಧ್ವನಿ.

ಗುಂಡಿಬೈಲು ನಾರಾಯಣ ಶೆಟ್ಟರು ಗಂಭೀರಧ್ವನಿಯಲ್ಲಿ, ‘ಈಗ ಮರಳುವುದೇಕೋ ಬೇಡ ಅಂತನ್ನಿಸುತ್ತಿದೆ. ಅಪಾಯವಿದೆಯೆಂದು ನನ್ನ ಮನಸ್ಸು ಹೇಳುತ್ತಿದೆ’ ಎಂದರು. ಆ ಮಾತನ್ನು ಸಕ್ಕಟ್ಟು ಸೀತಾರಾಮಯ್ಯರವರು ಅನುಮೋದಿಸಿದರು. ಆದರೆ, ಅಭ್ಯಾಸ ಮುಗಿಸಿ ಬಳಿಕ ಆಸುಪಾಸಿನ ಮನೆಯವರು ಆಗಲೇ ತೆರಳಿಬಿಟ್ಟಿದ್ದರಿಂದ ನಮಗೂ ಅಲ್ಲಿರುವುದು ಬೇಡವೆನ್ನಿಸಿ, ಗದ್ದೆ ಬದುವಿನಲ್ಲಿ ಒಂದಿಷ್ಟು ದಾರಿ ಸಾಗಿ ಪರಿಚಯದವರೊಬ್ಬರ ಮನೆಗೆ ತೆರಳಿದೆವು. ಆ ಮನೆಯಲ್ಲಿ ಯಾರೂ ಇರಲಿಲ್ಲ.

ಆದರೆ, ಅವರ ಮನೆಯಂಗಳವನ್ನು ತೊರೆಯುವುದು ಬೇಡವೆನ್ನಿಸಿ ಜಗಲಿಯಲ್ಲಿಯೇ ಕುಳಿತೆವು. ಸೂರ್ಯ ಮೂಡುವವರೆಗೂ ಹಾಗೆ ಕುಳಿತದ್ದೇ. ಸರೀ ಬೆಳಗಾದ ಮೇಲೆ ಎದ್ದು ಹೊರಟಾಗ ದಾರಿ ಮಧ್ಯೆ ಘಟನೆಗಳ ವಿವರ ಸಿಕ್ಕಿತು. ಹೊಯ್‌ ಕೈ ಮೇರೆ ಮೀರಿ ಕೊಲೆಯಲ್ಲಿ ಪರ್ಯಾವಸಾನಗೊಂಡ ಪ್ರಕರಣವೊಂದು ಅಲ್ಲಿ ನಡೆದಿತ್ತು. ಅಷ್ಟರಲ್ಲಾಗಲೇ ಪೊಲೀಸರು ಬಂದು ತನಿಖೆ ಆರಂಭಿಸಿ, ಊರಲ್ಲೆಲ್ಲ ಸುದ್ದಿ ಹಬ್ಬಿತ್ತು. ಆ ಘಟನೆಯ ಹಿನ್ನೆಲೆಯೇನು, ಕೊಲೆಯಾದವರಾರು ಒಂದೂ ಈಗ ನನಗೆ ನೆನಪಿಲ್ಲ. ಗುಂಡಿಬೈಲು ನಾರಾಯಣ ಶೆಟ್ಟರಿಗೆ ಸಾಂದ್ರ ಜೀವನಾನುಭವವಿದ್ದುದರಿಂದ ಗಲಭೆಯ ಅಪಾಯವನ್ನು ಮೊದಲೇ ಅರಿತವರಾಗಿ, ಅಯಾಚಿತವಾಗಿ ಇದರಲ್ಲಿ ಪಾಲ್ಗೊಳ್ಳುವ ಕಿರಿಕಿರಿಯ ಅವಕಾಶವನ್ನು ಅವರು ತಪ್ಪಿಸಿದ್ದರು.

ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಳ್ಳದಿರುತ್ತಿದ್ದರೆ ಕತ್ತಲೆಯ ಕಂಪನಗಳು ತಟ್ಟುತ್ತಲೇ ಇರುತ್ತಿರಲಿಲ್ಲ. ಸತತವಾಗಿ ನಿದ್ದೆ ಬಿಟ್ಟಾಗ ಕಣ್ಣಾಲಿಗಳನ್ನು ತೆರೆಯಲಾರದೆ, ಇದ್ದ ಸ್ಥಿತಿಯಲ್ಲಿಯೇ ಪವಡಿಸಿದ್ದಿದೆ. ಸಾಲಿಗ್ರಾಮ ಮೇಳದಲ್ಲಿ ಅರೆತಿರುಗಾಟ ಮುಗಿಸಿ ಹಿರಿಯಡಕ ಮೇಳಕ್ಕೆ ಸೇರಿ ಒಂದೂವರೆ ತಿಂಗಳು ಕುಣಿದು, ಅದನ್ನೂ ಬಿಟ್ಟು ಬೇರೇನಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆನ್ನಿಸಿ, ದೀಪಾವಳಿ ಮುಗಿದಾಗ ಮತ್ತೊಂದು ಮೇಳದಲ್ಲಿ ತಿರುಗಾಟ ಮಾಡುವ ಆಸೆಯಾಗಿತ್ತು. ೭೦ರ ದಶಕದ ಕೊನೆಯ ಯಾವುದೋ ಒಂದು ವರ್ಷವಿರಬೇಕು, ಗೋಳಿಗರಡಿ ಮೇಳಕ್ಕೆ ಸೇರಿದೆ.

ನಾನು ಪ್ರತಿರಾತ್ರಿ ಪೂರ್ವರಂಗದಲ್ಲಿ ಬಾಲಗೋಪಾಲ (ಬಲ-ಗೋಪಾಲ)ರಲ್ಲೊಬ್ಬನಾಗಿ ಕುಣಿದು ಚೌಕಿಗೆ ಮರಳುತ್ತಿದ್ದೆ. ಮಾತುಗಾರಿಕೆಯಲ್ಲಿ ನಿಪುಣನಲ್ಲವಾದರೂ ಕುಣಿತ ಚೆನ್ನಾಗಿದ್ದುದರಿಂದ ಮತ್ತು ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕರಲ್ಲಿ ನಾಟ್ಯ ಕಲಿತು ಬಂದುದರಿಂದ ಪಾತ್ರಪಟ್ಟಿಯಲ್ಲಿ ನನಗೆ ಕೇದಿಗೆಮುಂದಲೆ (ಪುಂಡು) ವೇಷಗಳನ್ನು ಬರೆಯುತ್ತಿದ್ದರು. ಹಾಗೊಮ್ಮೆ ‘ರತಿ ಕಲ್ಯಾಣ’ ಪ್ರಸಂಗದಲ್ಲಿ ನನ್ನದು ಮನ್ಮಥನ ಪಾತ್ರ. ನಾನು ಬಾಲಗೋಪಾಲನ ಹೊಣೆಗಾರಿಕೆ ಮುಗಿಸಿ ಚೌಕಿಯ ಮೂಲೆಯಲ್ಲಿ ಮಲಗಿಬಿಟ್ಟಿದ್ದೆ.

ಬೆಳಗಿನ ಜಾವದಲ್ಲಿ ನನ್ನ ಪಾತ್ರಪ್ರವೇಶವಿದ್ದುದರಿಂದ ನಿಶ್ಚಿಂತೆಯಿಂದ ನಿದ್ದೆ ಹೋಗಿದ್ದೆ. ನನ್ನ ಪ್ರವೇಶಕ್ಕೆ ಇನ್ನೇನು ಐದು ನಿಮಿಷವಿರುವಾಗ ಹಾಸ್ಯಗಾರರು ಎಬ್ಬಿಸಿದರು. ಹೊರಳಾಡಿ ಮಲಗಿದ್ದುದರಿಂದ ನನ್ನ ಕೇದಿಗೆಮುಂದಲೆ ಜಾರಿ ಎದೆಗೆ ಬಂದಿತ್ತು, ಮುಖವರ್ಣಿಕೆ ಅರ್ಧ ಮಾಸಿಹೋಗಿತ್ತು, ಆಭರಣಗಳು ಬಿಚ್ಚಿಹೋಗಿದ್ದವು. ಇಂಥ ಸ್ಥಿತಿಯಲ್ಲಿ ಪ್ರವೇಶ ಮಾಡುವುದಾದರೂ ಹೇಗೆ? ಹಾಸ್ಯಗಾರರಿಂದ ಬೈಗುಳದ ಸುರಿಮಳೆ ಆರಂಭವಾಯಿತು. ಕೊನೆಗೆ ಮೀನಾಕ್ಷಿ ಪಾತ್ರದ ತುರಾಯಿಯನ್ನು ತಲೆಗೆ ಬಿಗಿದು ಹೇಗೋ ರಂಗಪ್ರವೇಶವಾಯಿತು. ವೇಷ ಮುಗಿದು ಚೌಕಿಗೆ ಬಂದಾಗ ಭಾಗವತರಾದಿಯಾಗಿ ಎಲ್ಲರೂ ಬೈಯುವವರೇ.

ಈ ಘಟನೆಯಿಂದ ನಾನು ನೊಂದುಕೊಂಡಿದ್ದೆ. ಆಟದ ಸಾಮಾನುಗಳನ್ನು ಎತ್ತಿನಗಾಡಿಗೆ ಹೇರಿಕೊಂಡು ಇನ್ನೊಂದೂರಿಗೆ ಪ್ರಯಾಣ ಹೊರಟಿತು. ದಾರಿ ಮಧ್ಯೆ ನಾನು ನಡಿಗೆಯನ್ನು ನಿಧಾನಗೊಳಿಸಿ ಹಿಂದುಳಿಯಲು ಪ್ರಯತ್ನಿಸುತ್ತಿರುವುದನ್ನು ನೋಡಿದ ಚೌಕಿ ಸಹಾಯಕರಾಗಿದ್ದ ಶೇಷಪ್ಪ ಎಂಬವರು ನನ್ನ ಅಂತರಂಗವನ್ನು ಖಚಿತವಾಗಿ ತಿಳಿದವರಂತೆ, “ಏನು ಮೇಳ ಬಿಟ್ಟು ಓಡಿ ಹೋಗುವ ಯೋಚನೆ ಮಾಡುತ್ತಿದ್ದೀಯಾ?” ಎಂದರು. ನಾನು, “ಹೌದು” ಎಂದೆ. ಆಗ ಅವರು, “ಅರ್ಧದಲ್ಲಿ ಮೇಳ ಬಿಡುವುದು ಸರಿಯಲ್ಲ, ಒಂದು ವರ್ಷ ಹೇಗಾದರೂ ಮುಗಿಸು” ಎಂದು ಬುದ್ಧಿವಾದ ಹೇಳಿದರು. ನಾನು ಮತ್ತೆ ಕಾಲೆಳೆದುಕೊಂಡು ಎತ್ತಿನ ಬಂಡಿಯನ್ನು ಅನುಸರಿಸಿದೆ.

ಮತ್ತೊಂದು ಸಲ ‘ಕುಶ- ಲವರ ಕಾಳಗ’ದಲ್ಲಿ ನನ್ನದು ಲವನ ಪಾತ್ರ. ಹಿರಿಯ ಕಲಾವಿದರು ನನಗೆ ‘ನಡೆ’ಯನ್ನು ಹೇಳಿಕೊಟ್ಟಿದ್ದರು. ಆದರೆ, ನನಗೆ ಕಥೆಯೇ ಸರಿಯಾಗಿ ತಿಳಿದಿರಲಿಲ್ಲ. ಪುಸ್ತಕ ಎತ್ತಿಕೊಳ್ಳೋಣವೆಂದರೆ ಓದಲೂ ಬಾರದು. ಕಲಾವಿದನಿಗೆ ಓದು-ಬರಹದ ಅರಿವಿರದಿದ್ದರೆ ಎಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂಬುದು ನನ್ನ ಸ್ಪಷ್ಟ ಅನುಭವಕ್ಕೆ ಬಂದಿತ್ತು. ಕಲಾವಿದರಿಗೆ ಅಕ್ಷರ ಜ್ಞಾನ ಅನಿವಾರ್ಯ ಅಗತ್ಯ ಎಂಬ ನಿರ್ಧಾರಕ್ಕೆ ಬಂದಿದ್ದೆ.ಹೆಜ್ಜೆ ಕಲಿಸಿದರೆ ಸಾಲದು, ಅಕ್ಷರವನ್ನೂ ಕಲಿಸಬೇಕು ಎಂಬುದು ಒಂದು ಕನಸಿನಂತೆ ನನ್ನನ್ನು ಕಾಡಲಾರಂಭಿಸಿತ್ತು.

                                                       ***

“ಇವರೆಲ್ಲ ಕಲೆಯನ್ನು ಕಲಿಯುವ ಜೊತೆಗೆಯೇ ಶಾಲೆಯೋದನ್ನೂ ಮುಂದುವರಿಸುತ್ತಾರೆ” ಎಂದು ಕೇಳಿದ ಕ್ಷಣದಲ್ಲಿ ಚೆನ್ನೈನ ತೆರುಕೂತ್ತು ತರಬೇತಿ ಶಾಲೆಯಲ್ಲಿ ನನ್ನ ಕನಸು ಮತ್ತೆ ಚಿಗುರತೊಡಗಿತ್ತು.

ಚೆನ್ನೈ ಸಮೀಪ ನಡೆಯಲಿರುವ ಕಲೋತ್ಸವದಲ್ಲಿ ಭಾಗವಹಿಸಲು ಯಕ್ಷಗಾನ ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ಹೆರಂಜೆ ಕೃಷ್ಣ ಭಟ್ಟರೊಂದಿಗೆ ತೆರಳಿದ್ದೆವು. ೨೦೦೦ ಇಸವಿಯಿರಬೇಕು. ಕಲಾಶಾಲೆಯೊಂದರಲ್ಲಿ ಉಳಿದುಕೊಳ್ಳಲು ನಮಗೆ ವ್ಯವಸ್ಥೆಯಾಗಿತ್ತು. ಅದು ತಮಿಳುನಾಡಿನ ರಂಗಕಲೆಯಾದ ತೆರುಕೂತ್ತನ್ನು ಕಲಿಸುವ ಶಾಲೆಯೆಂದು ನನಗೆ ಮೊದಲು ಗೊತ್ತಾಗಿರಲಿಲ್ಲ. ನಾವೆಲ್ಲ ನಮ್ಮ ಸಾಮಾನು ಸರಂಜಾಮುಗಳನ್ನು ಇಳಿಸಿ ಹೊರಬಂದಾಗ ಮಕ್ಕಳೆಲ್ಲ ಪುಸ್ತಕ ಹಿಡಿದು ಓಡಾಡುತ್ತಿರುವುದನ್ನು ನೋಡಿ ಅವರು ಶಾಲೆಯಿಂದ ಮರಳುತ್ತಿದ್ದಾರೆಂದು ಊಹಿಸಿದೆ. ಮೆಲ್ನೋಟಕ್ಕೆ ಬಡ ಹಿನ್ನೆಲೆಯ ಮಕ್ಕಳಂತೆ ಕಾಣಿಸುತ್ತಿದ್ದರು. ಸಂಜೆಯ ಬಳಿಕ ಅವರಿಗೆ ತೆರುಕೂತ್ತು ತರಬೇತಿ ಕೊಡಲಾಗುತ್ತಿತ್ತು.

ಈ ಹಿಂದೆಲ್ಲ ಕೇವಲ ಪಾರಂಪರಿಕ ಕಲೆಯನ್ನು ಮಾತ್ರ ಕಲಿಯುತ್ತಿದ್ದ ಪದ್ಧತಿಯನ್ನು ವಿಸ್ತರಿಸಿ, ಆಧುನಿಕ ಅಗತ್ಯಕ್ಕನುಸಾರವಾಗಿ ಅಕ್ಷರವಿದ್ಯೆಯನ್ನು ಒಂದೇ ಛಾವಣಿಯಡಿ ದೊರಕಿಸುವ ಪ್ರಯತ್ನವನ್ನು ಹತ್ತಿರದಿಂದ ಕಾಣುತ್ತಿದ್ದಾಗ ನನ್ನ ಮುಂದೆ ಹೊಸ ಬೆಳಕೊಂದು ಹೊಳೆದ ಹಾಗಾಯಿತು. ಒಂದೆಡೆ ಅ ಆ ಇ ಈ ಕಲಿಕೆಯಾದರೆ ಮತ್ತೊಂದೆಡೆ ತರಿಕಿಟ ಧಿಮಿಕಿಟ!

ಕಲೋತ್ಸವದಲ್ಲಿ ಭಾಗವಹಿಸಲು ಬಹುಸಂಖ್ಯೆಯ ಕಲಾವಿದರು ಆಗಮಿಸಿದ್ದರಿಂದ ಶೌಚಾಲಯ ಅಸ್ತವ್ಯಸ್ತವಾಗಿತ್ತು. ನಾವು ಅಲ್ಲಿಯೇ ಸ್ನಾನಕರ್ಮಾದಿಗಳನ್ನು ಪೂರೈಸಬೇಕಾದುದರಿಂದ ಅದರ ‘ಅಶೌಚ’ದ ಬಗ್ಗೆ ಅಲ್ಲಿನವರ ಗಮನಸೆಳೆದೆವು. ಆ ತರಬೇತಿ ಶಾಲೆಯ ಮುಖ್ಯಸ್ಥರಂತೆ ಕಾಣಿಸುತ್ತಿದ್ದ ವಿದೇಶಿ ಮಹಿಳೆಯೊಬ್ಬರು ಬಂದಾಗ ಅವರಲ್ಲಿಯೂ ಈ ಬಗ್ಗೆ ದೂರಿಕೊಂಡೆವು. ಕೆಲಸದವರು ಬೇರೆ ಬೇರೆ ಕರ್ತವ್ಯಗಳಲ್ಲಿ ತೊಡಗಿಕೊಂಡಿದುದರಿಂದ ಶೌಚಾಲಯ ತೊಳೆಯಲು ಯಾರೂ ಬಾರದೆ ಆ ಕೆಲಸ ಹಾಗೆಯೇ ಉಳಿದಿತ್ತು. ಮತ್ತೊಂದು ಕ್ಷಣದಲ್ಲಿ ನೋಡುತ್ತೇನೆ, ಆ ವಿದೇಶಿ ಮಹಿಳೆಯೇ ಪೊರಕೆ ಹಿಡಿದು ಗುಡಿಸಿ ಫಿನೈಲ್ ಹಾಕಿ ತೊಳೆದು ನಿರ್ಮಲಗೊಳಿಸಿ ವಿಳಂಬವಾದುದಕ್ಕೆ ‘ಸ್ಸಾರಿ’ ಹೇಳಿ ಹೋದುದನ್ನು ಕಂಡಾಗ ನಾನು ನಿಬ್ಬೆರಗಾಗಿ ಹೋದೆ!

ಈ ಮಹಿಳೆಯನ್ನು ಎಲ್ಲೋ ನೋಡಿದ ಹಾಗಿದೆಯಲ್ಲ ಅಂತನ್ನಿಸಿತು. ಹೌದಲ್ಲ... ಶಿವರಾಮ ಕಾರಂತರೊಂದಿಗೆ ಇಟಲಿಗೆ ಹೋಗಿದ್ದಾಗ ನೋಡಿದ್ದೆ! ತೆರುಕೂತ್ತು ಕಲಾವಿದರ ತಂಡದಲ್ಲಿ ನಿಕಟರಾಗಿ ಓಡಾಡುತ್ತಿದ್ದವರನ್ನು ಈಗ ಮತ್ತೊಮ್ಮೆ ನೆನಪಿಸಿಕೊಂಡೆ.

ಇವರು ಹೆನ್ನಾ! (Hannae de Bruin)
ತೆರುಕೂತ್ತು ಕಲಾವಿದ ಪಿ. ರಾಜಗೋಪಾಲ್ ಅವರನ್ನು ಮೆಚ್ಚಿ ಅವರ ಜೀವನ ಸಂಗಾತಿಯಾದ ಹಾಲೆಂಡಿನ ಮಹಿಳೆ! ಆಕೆ ಭರತನಾಟ್ಯದಂಥ ಶಾಸ್ತ್ರೀಯ ಪಂಕ್ತಿಯ ಕಲೆಯ ತವರೂರಿನಲ್ಲಿ ಜಾನಪದ ಬೇರಿನ ಕಲೆಗೂ ಘನತೆಯನ್ನು ಕೊಡಲು ದೂರದೇಶದಿಂದ ಬಂದಂತಿತ್ತು.

ತೆರುಕೂತ್ತುವಿಗೆ ಕಟ್ಟೈಕೂತ್ತು ಎಂಬ ಸಾಂಪ್ರದಾಯಿಕ ಹೆಸರು ಕೊಟ್ಟು, ‘ಕಟ್ಟೈಕೂತ್ತು ಕಲೈ ವಲರ್ಚಿ ಮುನ್ನೇಷ್ಟ್ರ ಸಂಘಮ್’ ಎಂಬ ಶೀರ್ಷಿಕೆಯಲ್ಲಿ ಸಾಂಸ್ಥಿಕವಾಗಿ ಕೂತ್ತು ಕಲೆಯ ಬಗ್ಗೆ ಕೆಲಸ ಮಾಡಲು ಟೊಂಕಕಟ್ಟಿದ್ದರು. ‘ಕರ್ಣ ಮೋಕ್ಷಮ್’ ಕೂತ್ತು ಪಠ್ಯವನ್ನು ಡಚ್ ಭಾಷೆಗೆ ಅನುವಾದಿಸಿದ್ದರು. ಅವರನ್ನು ನೋಡಿ ನನಗೆ ಅಭಿಮಾನವೆನಿಸಿತು.

ಜೊತೆಗೆ, ಕೇವಲ ಪ್ರದರ್ಶನಗಳನ್ನು ನೀಡುವ ಕಲಾವಿದರನ್ನು ತಯಾರಿಸುವ ಬದಲು ಬದುಕುವ ಕಲೆಯನ್ನೂ ಹೇಳಿಕೊಡುವ ಒಂದು ತರಬೇತಿ ಶಾಲೆ ಯಕ್ಷಗಾನ ಕ್ಷೇತ್ರದಲ್ಲಿಯೂ ಯಾಕೆ ಸಾಧ್ಯವಿಲ್ಲ ಎಂಬುದು ಮನಸ್ಸಿಗೆ ಬರಲಾರಂಭಿಸಿತ್ತು. ಪ್ರೊಫೆಸರ್ ಹೆರಂಜೆ ಕೃಷ್ಣ ಭಟ್ಟರಲ್ಲಿಯೂ ಈ ವಿಷಯವನ್ನು ಹೇಳಿಕೊಂಡಾಗ ಅವರೂ ಇದನ್ನೇ ಯೋಚಿಸುತ್ತಿರುವವರಂತೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದರು. ಭಾರತದಾದ್ಯಂತ ಪ್ರವಾಸದಲ್ಲಿ ನೋಡಿರಬಹುದಾದ ಇಂಥ ತರಬೇತಿಶಾಲೆಗಳನ್ನು ಮತ್ತೆ ಮತ್ತೆ ಸ್ಮೃತಿಗೆ ತಂದುಕೊಂಡೆ.

ಅಷ್ಟರಲ್ಲಿಯೇ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಪ್ರತಿವರ್ಷ ಒಬ್ಬಿಬ್ಬರು ವಿದ್ಯಾರ್ಥಿಗಳು ಯಕ್ಷಗಾನ ಕಲಿತು, ಶಾಲೆಯೋದನ್ನೂ ಮುಂದುವರಿಸಿ ಮುಂದೆ ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡಿದ್ದಿದೆ. ವೃತ್ತಿಪರ ಕಲಾಜೀವನದಲ್ಲಿ ಮುಂದುವರಿಯಲಾಗದಿದ್ದರೂ ಉತ್ಕೃಷ್ಟಮಟ್ಟದ ಪ್ರೇಕ್ಷಕರಾಗಿಯಂತೂ ಅವರು ಸಿದ್ಧಗೊಂಡಿದ್ದರು. ನಾವು ಇವತ್ತು ಕಲಾವಿದರನ್ನು ತರಬೇತಿಗೊಳಿಸುವಂತೆಯೇ ಪ್ರೇಕ್ಷಕರನ್ನೂ ತಯಾರುಮಾಡಬೇಕಿದೆ. ಕಲೆಯ ಗುಣಮಟ್ಟ ಕುಸಿದಿದೆ ಎಂದು ದೂರಿಕೊಳ್ಳುವುದಾದರೆ ಅದಕ್ಕೆ ಕಲಾವಿದರಷ್ಟೇ ಅಲ್ಲ, ಸರಿಯಾದ ರಸಗ್ರಹೀತವಿಲ್ಲದ ಪ್ರೇಕ್ಷಕರೂ ಮುಖ್ಯ ಕಾರಣರಾಗುತ್ತಾರೆ.

ಸಾವಿರ ಮಂದಿಯಲ್ಲಿ ಒಬ್ಬ ಒಳ್ಳೆಯ ಪ್ರೇಕ್ಷಕನಿದ್ದರೂ ಆತನಲ್ಲಿ ‘ಸದಭಿರುಚಿ’ ಜಾಗೃತವಾಗಿದ್ದು ಮುಂದಿನ ತಲೆಮಾರಿಗೆ ದಾಟಿಹೋಗುತ್ತದೆ. ಯಕ್ಷಗಾನ ಕೇಂದ್ರದಲ್ಲಿ ನನ್ನಿಂದ ಹೆಜ್ಜೆಗಳನ್ನು ಕಲಿತು ಮೇಳ ಸೇರಿದ ಕಲಾವಿದರು, ಮೂಲಹೆಜ್ಜೆಗಳ ಸೊಗಸನ್ನು ಮರೆತು ಕಮರ್ಷಿಯಲ್ ಮನೋಧರ್ಮವನ್ನು ರೂಢಿಸಿಕೊಳ್ಳುತ್ತಿದ್ದರು. ಅದರ ನೇರ ಅನುಭವ ನನಗಾದುದು ೨೦೦೮ರ ಜೂನ್‌ನಲ್ಲಿ, ಉಜಿರೆಯಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಆಯೋಜಿಸಿದ್ದ ‘ವೃತ್ತಿಪರ ಯಕ್ಷಗಾನ ಕಲಾವಿದರ ಪುನಶ್ಚೇತನ ಶಿಬಿರ’ದಲ್ಲಿ. ಹಾಗೆಂದು, ಅದಕ್ಕೆ ಕಲಾವಿದರನ್ನು ದೂರಿ ಪ್ರಯೋಜನವಿಲ್ಲ. ಕಲೆಯೇ ಜೀವನೋಪಾಯವಾದಾಗ ಕಾಲಧರ್ಮಕ್ಕೆ ಬದ್ಧವಾಗುವ ಅನಿವಾರ್ಯತೆ ಅವರಿಗೆ ಎದುರಾಗುತ್ತದೆ.

ಯಕ್ಷಗಾನ ಕಲೆ ಉಳಿಯಬೇಕಾದರೆ ವೃತ್ತಿಪರ ಮೇಳಗಳು ಉಳಿಯಬೇಕು ಎಂಬುದರಲ್ಲಿ ನನಗೆ ಒಪ್ಪಿಗೆಯಿದೆ. ಆದರೆ, ಯಕ್ಷಗಾನ ಕೇಂದ್ರವೆಂಬುದು ವೃತ್ತಿಪರ ಮೇಳಗಳಿಗೆ ಕಲಾವಿದರನ್ನು ತಯಾರಿಸಿಕೊಡುವ ‘ಸೇವಾರ್ಥ’ ಸಂಸ್ಥೆಯಾಗಿ ಸೀಮಿತಗೊಳ್ಳುವುದು ನನಗೇಕೋ ಸರಿ ಕಾಣುತ್ತಿರಲಿಲ್ಲ. ಪ್ರೇಕ್ಷಕರನ್ನು ಮೆಚ್ಚಿಸಬೇಕಾದ ಯಕ್ಷಗಾನ ಮೇಳದ ಕಲಾವಿದರಲ್ಲಿ ಕಲಾತ್ಮಕವಾಗಿ ತೃಪ್ತಿಕರ ಗುಣಮಟ್ಟವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಹಾಗಿದ್ದರೆ, ಕಲೆಯನ್ನು ಜೀವನೋಪಾಯವಾಗಿ ಸ್ವೀಕರಿಸದೆ, ಹವ್ಯಾಸವಾಗಿಟ್ಟುಕೊಳ್ಳುವ ಶಿಕ್ಷಿತ ಮಂದಿಯಿಂದ ಕಲಾತ್ಮಕತೆ ಉಳಿಯಬಹುದೆ, ಎಂದು ಯೋಚಿಸಿ ಆಡಳಿತ ಮಂಡಳಿಯ ಅನುಮತಿಯೊಂದಿಗೆ ಮತ್ತು ನಿರ್ದೇಶಕರಾದ ಪ್ರೊಫೆಸರ್ ಹೆರಂಜೆ ಕೃಷ್ಣ ಭಟ್ಟರ ಬೆಂಬಲದೊಂದಿಗೆ ಒಂಬತ್ತು ವಿದ್ಯಾರ್ಥಿಗಳನ್ನು ಕೇಂದ್ರಕ್ಕೆ ಸೇರಿಸಿಕೊಂಡೆವು.

ಹಗಲು ಶಾಲೆಗೆ ಹೋಗಿಬಂದರೆ ಸಂಜೆಯ ಬಳಿಕ ಅವರಿಗೆ ಯಕ್ಷಗಾನ ತರಬೇತಿ ನಡೆಯುವಂತೆ ವ್ಯವಸ್ಥೆಯಾಯಿತು. ಊಟ, ವಸತಿ ಉಚಿತ. ಓದು-ಬರಹವಿಲ್ಲದೆ ನಾನೇನು ಬವಣೆ ಪಟ್ಟಿದ್ದೇನೊ ಅದನ್ನು ಭವಿಷ್ಯದ ಯಕ್ಷಗಾನ ಕಲಾವಿದರು ಅನುಭವಿಸಬಾರದೆಂದು ನನ್ನ ಅಂಬೋಣ. ಇಂದಿಗೂ ಈ ವ್ಯವಸ್ಥೆ ಮುಂದುವರಿದುಕೊಂಡು ಬಂದಿದೆ. ಈ ವರ್ಷ ನಲ್ವತ್ತಮೂರು ಹುಡುಗರು ಯಕ್ಷಗಾನ ಕೇಂದ್ರದಲ್ಲಿ ಕಲೆಯನ್ನೂ ಶಾಲೆಯನ್ನೂ ಒಟ್ಟಿಗೆ ಕಲಿಯುತ್ತಿದ್ದಾರೆ.

ರಜಾದಿನಗಳಲ್ಲಿ ಮತ್ತು ಮುಂಜಾನೆ, ಸಂಜೆಯ ಬಿಡುವಿನ ವೇಳೆಯಲ್ಲಿ ಯಕ್ಷಗಾನ ಕೇಂದ್ರಕ್ಕೆ ಕಲಿಯಲು ಬರುವ ಆಸಕ್ತ ಹವ್ಯಾಸಿಗಳಲ್ಲಿ ವೈದ್ಯರಿದ್ದಾರೆ, ಎಂಜಿನಿಯರ್‌ಗಳಿದ್ದಾರೆ, ಪ್ರಾಧ್ಯಾಪಕರಿದ್ದಾರೆ, ಉದ್ಯಮಿಗಳಿದ್ದಾರೆ, ನಾನಾ ವೃತ್ತಿಗಳಲ್ಲಿ ತೊಡಗಿಸಿಕೊಂಡವರಿದ್ದಾರೆ. ಅವರೆಲ್ಲ ಮಕ್ಕಳ ಪೋಷಣೆಯ ಖರ್ಚನ್ನು ನೋಡಿಕೊಳ್ಳುವಲ್ಲಿ ಗರಿಷ್ಠ ಮಟ್ಟದಲ್ಲಿ ನೆರವಾಗುತ್ತಿದ್ದಾರೆ. ಸಮಾಜ ಸೇವಾ ಸಂಸ್ಥೆಗಳು ಹೆಗಲೆಣೆಯಾಗಿವೆ. ಶಾಲಾಕಾಲೇಜುಗಳ ಮುಖ್ಯಸ್ಥರು ಯಕ್ಷಗಾನ ಕಲಿಯುವ ವಿದ್ಯಾರ್ಥಿಗಳಿಗೆ ಶುಲ್ಕರಿಯಾಯಿತಿ ನೀಡಿ ಸಹಕರಿಸಿದ್ದಾರೆ.

ಒಳ್ಳೆಯ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಎಲ್ಲೆಲ್ಲೂ ಅವಕಾಶಗಳಿವೆ. ಆದರೆ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಏನು ಮಾಡುವುದು? ಪ್ರತಿಬಾರಿ ಫಲಿತಾಂಶ ಬರುವಾಗಲೂ ರಾ್ಯಂಕ್ ಪಡೆದವರ ಬಗ್ಗೆ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತೇವೆ. ಆದರೆ, ಫೇಲ್ ಆದ ವಿದ್ಯಾರ್ಥಿಗಳನ್ನು ಕೇಳುವವರೇ ಇಲ್ಲ. ಬುದ್ಧಿವಂತರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸುವಂತೆಯೇ ಬುದ್ಧಿವಂತರಲ್ಲವೆಂದು ಭಾವಿಸಲ್ಪಟ್ಟ ವಿದ್ಯಾರ್ಥಿಗಳನ್ನು ಕೂಡ ಆದರಿಸಿ, ಅವರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಬೇಕೆಂಬುದು ನನ್ನ ಒಳತುಡಿತ.

ಯಕ್ಷಗಾನದ ತಾಳಲಯಗಳಲ್ಲಿ ತನ್ಮಯನಾಗಿದ್ದ ನನಗೆ ಈ ‘ಪ್ರಯೋಗ’ದ ಮೂಲಕ ಹೊಸದೊಂದು ಮಾನಯ ಆಯಾಮಕ್ಕೆ ತೆರೆದುಕೊಳ್ಳುವಂತಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಮತ್ತು ಇಂಥ ಕಾರಣಗಳಿಂದಾಗಿ ಕೀಳರಿಮೆಯೊಂದಿಗೆ ಬಳಲುವ ಮಕ್ಕಳಲ್ಲಿ ‘ಸ್ವಾಭಿಮಾನ’ವನ್ನು ಜಾಗೃತವಾಗಿಸುವ ಅಗತ್ಯವೊಂದು ನನ್ನೊಳಗಿನ ಅಂತಃಪ್ರಜ್ಞೆಯಾಗಿ ಶಾಲೆಯ ಗಂಟೆಯೂ ಚೆಂಡೆಯ ನುಡಿತವೂ ‘ಏಕ’ ತಾಳವಾಗುತ್ತಿದೆ!

(ಮುಂದಿನ ವಾರ ‘ಸಂಜೀವನ’ ಮಾಲಿಕೆಯ ಕೊನೆಯಬರಹ)
ನಿರೂಪಣೆ : ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT