ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿಳಿತಕ್ಕೆ ಸ್ಪಂದಿಸಿದರೆ ಮಾತ್ರ ಗಳಿಕೆ

Last Updated 15 ಜನವರಿ 2017, 19:30 IST
ಅಕ್ಷರ ಗಾತ್ರ

ಇನ್ಫೊಸಿಸ್ ಕಂಪೆನಿ ಇದುವರೆಗೂ ಡಾಲರ್ ಗಳಿಕೆಯತ್ತಲೇ ಗಮನ ಕೇಂದ್ರೀಕರಿಸುತ್ತಿತ್ತು,  ಈಗ ಬದಲಾದ ಪರಿಸ್ಥಿತಿ ಮತ್ತು ಗಳಿಕೆಯ ಹೆಚ್ಚಿನ ಒತ್ತಡವಿರುವ ಕಾರಣ ತನ್ನ ವ್ಯಾವಹಾರಿಕ ಶೈಲಿ ಬದಲಿಸಿ ಸ್ಥಳೀಯವಾಗಿ ಸಣ್ಣ ಉದ್ಯಮಗಳ, ಜನಸಾಮಾನ್ಯರ ಅಗತ್ಯಗಳಿಗೆ ಬೇಕಾದ ಸಾಫ್ಟ್‌ವೇರ್ ಒದಗಿಸಿ ದೇಶದ ಆಂತರಿಕ ಶಕ್ತಿಯನ್ನು ಬಳಸಿಕೊಳ್ಳುವತ್ತ ಒಲವು ತೋರುತ್ತಿದೆ.   ಈ ನಿರ್ಧಾರವು ಸ್ಥಳೀಯ ವ್ಯಾಪಾರ  ನಂಬಿಕೊಂಡಿರುವ  ಸಣ್ಣ ಸಣ್ಣ ಸಾಫ್ಟ್‌ವೇರ್ ಕಂಪೆನಿಗಳಿಗೆ ಕುತ್ತು ತರಲಿದೆ.

ಪೇಟೆಯಲ್ಲಿ ವಹಿವಾಟಿನ  ಏರಿಳಿತಗಳಿಗೆ ಸಣ್ಣ ಸಣ್ಣ   ಕಾರಣಗಳೇ ಸಾಕಾಗಿವೆ.  ಕಂಪೆನಿಗಳು ಸಾಲ ಮಾಡುತ್ತವೆಂದರೆ ಷೇರಿನ ಬೆಲೆಗಳು ಗಗನಕ್ಕೆ ಚಿಮ್ಮುವುದಾಗಲಿ,  ಸರ್ಕಾರ ಷೇರು ವಿಕ್ರಯ ಮಾಡಲಿದೆ ಎಂಬ ಸುದ್ದಿಯು ಸಹ ಷೇರಿನ ಬೆಲೆಯಲ್ಲಿ ಮಿಂಚು ಸಂಚರಿಸುವಂತೆ  ಮಾಡುವುದು ಕಲ್ಪನೆ ಮೀರಿದ ನಡುವಳಿಕೆಯಾಗಿದೆ. 

ಕಂಪೆನಿಗಳಿಗೆ ಸಾರ್ವಜನಿಕವಾಗಿ ಸಂಪನ್ಮೂಲವು ಸುಲಭ ಬಡ್ಡಿದರದಲ್ಲಿ ದೊರೆಯುವುದರಿಂದ, ಹೆಚ್ಚು ಹೆಚ್ಚು ಕಂಪೆನಿಗಳು ಡಿಬೆಂಚರ್ ಮೂಲಕ ಸಂಗ್ರಹಣೆಗೆ ಪ್ರಯತ್ನಿಸುತ್ತಿವೆ. ಭಾರತ್ ಅರ್ಥ್ ಮೂವರ್ಸ್  ಲಿಮಿಟೆಡ್‌ನಲ್ಲಿ ಸರ್ಕಾರದ ಭಾಗಿತ್ವವನ್ನು ‘ಸ್ಟ್ರಾಟೆಜಿಕ್ ಆಫರ್ ಫಾರ್  ಸೇಲ್’ ಮೂಲಕ ಷೇರು ವಿಕ್ರಿಯ ಸುದ್ದಿಯು ಷೇರಿನ ಬೆಲೆಯನ್ನು ₹977 ರಿಂದ ₹1245 ರವರೆಗೂ ದೂಡಿತು.   ರಕ್ಷಣಾ ವಲಯದ  ಭಾರತ್ ಎಲೆಕ್ಟ್ರಾನಿಕ್ಸ್ ಕಂಪೆನಿಯ ಷೇರಿನ ಮುಖಬೆಲೆ ಸೀಳಿಕೆ ವಿಚಾರ  ಷೇರಿನ ಬೆಲೆಯಲ್ಲಿ ಹೆಚ್ಚು ಚೇತರಿಕೆ ಕಾಣುವಂತೆ ಮಾಡಿತು. 

ಮುಂದಿನ ದಿನಗಳಲ್ಲಿ ಕಂಪೆನಿಗಳು ತಮ್ಮ ತ್ರೈಮಾಸಿಕ ಸಾಧನೆಯನ್ನು ಪ್ರಕಟಿಸಲಿರುವುದು,  ಕೇಂದ್ರ ಸರ್ಕಾರ ತನ್ನ ಮುಂಗಡ ಪತ್ರ ಮಂಡನೆಗೆ ನಡೆಸುತ್ತಿರುವ ತಯಾರಿ,  ಹಲವು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆ ಮತ್ತು ಅಮೆರಿಕದ ಹೊಸ ಅಧ್ಯಕ್ಷರ ನಿಲುವು ಮುಂತಾದವುಗಳು ಪೇಟೆಯಲ್ಲಿ ಮತ್ತಷ್ಟು ಅಸ್ಥಿರತೆ ಉಂಟು ಮಾಡಬಹುದಾಗಿದೆ. ಅಂದರೆ, ಸೀಮಿತ ಲಾಭದ, ಸುರಕ್ಷಿತ ಚಟುವಟಿಕೆಯಿಂದ ವಹಿವಾಟು ನಡೆಸುವುದು ಅಗತ್ಯ.   ಹಣ ಕೈಯ್ಯಲ್ಲಿದೆ ಎಂದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ.

ಷೇರುಪೇಟೆಯ ವ್ಯವಹಾರವು ಡೋಲಾಯಮಾನ ಸ್ಥಿತಿಯಲ್ಲಿ  ನಿಶ್ಚಿತವಾಗಿ ಹೀಗೆ ಸಾಗಿದೆ ಎಂದು ವಿಮರ್ಶಿಸುವುದು ಸಾಧ್ಯವಾಗದ ರೀತಿಯಲ್ಲಿ ಇದೆ.  ಇಲ್ಲಿ ನಡೆಯುತ್ತಿರುವ ವ್ಯವಹಾರದ ಗಾತ್ರವು ಸಹ ಷೇರುಗಳ ಏರುಪೇರಿನಂತೆ ಅಸ್ಥಿರತೆ ಪ್ರದರ್ಶಿಸುತ್ತಿದೆ. 

ಸೋಮವಾರ ವಹಿವಾಟಿನ ಗಾತ್ರ ₹2.06 ಲಕ್ಷ ಕೋಟಿಯಾದರೆ, ಮಂಗಳವಾರ  ₹2.50 ಲಕ್ಷ ಕೋಟಿಯಾಗಿತ್ತು. ಬುಧವಾರ ವಹಿವಾಟು ₹5.57 ಲಕ್ಷ ಕೋಟಿಗೆ ಜಿಗಿತ ಕಂಡು ಗುರುವಾರ  ₹6.11 ಲಕ್ಷ ಕೋಟಿಗೆ ಏರಿತು.  ಆದರೆ  ಶುಕ್ರವಾರ ₹3.02 ಲಕ್ಷ ಕೋಟಿಗೆ ಕುಸಿಯಿತು. 

ಈ ರೀತಿಯ ಅಸ್ಥಿರತೆಗೆ ಮುಖ್ಯ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿ ಹಿಡಿದಿರುವುದಾಗಿದೆ.  ಹಿಂದಿನ ವಾರ ಒಟ್ಟು ₹1,104 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ ಇದಕ್ಕೆ ವಿರುದ್ಧವಾಗಿ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹883 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ.  ಪೇಟೆಯ ಬಂಡವಾಳ ಮೌಲ್ಯವು ₹108 ಲಕ್ಷ ಕೋಟಿಯಿಂದ ₹110 ಲಕ್ಷ ಕೋಟಿಗೆ ಏರಿಕೆ ಕಂಡಿದೆ. 

ಬಾಲ್ಮರ್ ಲೌರಿ & ಕಂಪೆನಿಯ ಬೋನಸ್ ಷೇರುಗಳು ವಹಿವಾಟಿಗೆ ಬಿಡುಗಡೆಯಾಗುವ ಮುಂಚಿನ  ದಿನಗಳಲ್ಲಿ ಷೇರುಗಳು ಚುರುಕಾದ ಏರಿಕೆ ಪ್ರದರ್ಶಿಸಿ ₹246ರವರೆಗೂ ತಲುಪಿ  ಮತ್ತೆ ₹230ರ ಸಮೀಪಕ್ಕೆ ಇಳಿದು ವಾರಾಂತ್ಯ ಕಂಡಿದೆ.

ಕೈಟೆಕ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪೆನಿಯು ಟೆಕ್ಸ್‌ಟೈಲ್ಸ್ ಅಪ್‌ಗ್ರೇಡೆಷನ್ ಫಂಡ್ ಯೋಜನೆಯಡಿ  ₹17 ಕೋಟಿ ಹಣವನ್ನು ಐದು ವರ್ಷದ ಅವಧಿಗೆ ಪಡೆಯಲು ನಿರ್ಧರಿಸಿರುವುದು ಮತ್ತು ಈ ವರ್ಷದ ಅಂತ್ಯದ ತ್ರೈಮಾಸಿಕದಲ್ಲಿ ತನ್ನ ಅಮೆರಿಕದ ಘಟಕದಲ್ಲಿ ಹತ್ತು ಲಕ್ಷ ಡಾಲರ್ ಹೂಡಿಕೆಗೆ ಸಮ್ಮತಿ ಪಡೆದ ಕಾರಣ ಷೇರಿನ ಬೆಲೆಯೂ ₹415 ರ ಸಮೀಪದಿಂದ ₹439 ರವರೆಗೂ ಜಿಗಿತ ಕಂಡು ₹426 ರ ಸಮೀಪ ವಾರಾಂತ್ಯ ಕಂಡಿತು.

ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪೆನಿಯು ಜನವರಿ 20ರಂದು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿರುವುದರ ಜೊತೆಗೆ ಮಧ್ಯಂತರ ಲಾಭಾಂಶ ಪ್ರಕಟಿಸುವ ಸುದ್ದಿಯು ಕಂಪೆನಿಯ ಷೇರಿನ ಬೆಲೆಯನ್ನು ₹659 ರಿಂದ ₹750 ರವರೆಗೂ ಒಂದೇ ವಾರದಲ್ಲಿ ಜಿಗಿತ ಕಾಣುವಂತೆ ಮಾಡಿತು. ₹2 ರ ಮುಖಬೆಲೆ ಈ ಷೇರಿಗೆ ಕಂಪೆನಿಯು ಈಗಾಗಲೇ ₹9 ರಂತೆ ಎರಡುಬಾರಿ ಮಧ್ಯಂತರ ಲಾಭಾಂಶ ನೀಡಿದೆ.

ಲಾಭಾಂಶ: ಬ್ಯಾಂಕೊ ಪ್ರಾಡಕ್ಟ್ಸ್ ಪ್ರತಿ ಷೇರಿಗೆ ₹5 (ಮು ಬೆ. ₹2,  ನಿ ದಿ: ಜ 23), ಬಜಾಜ್ ಕಾರ್ಪ್ ₹11.50 (ಮು ಬೆ ₹1), ಗೋವಾ ಕಾರ್ಬನ್ ₹1.50, ಎನ್‌ಎಚ್‌ಪಿಸಿ ₹1.70,  ಟಿಸಿಎಸ್ ₹6.50 ( ಮು ಬೆ  ₹1,ನಿ ದಿ: ಜ 24).

ಹೊಸ ಷೇರು
* ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿ ಕೊಂಡಿರುವ ಶ್ರೀನಿಧಿ ಟ್ರೇಡಿಂಗ್ ಕಂಪೆನಿ ಲಿಮಿಟೆಡ್, ಜನವರಿ 16 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್‌ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

*  ಅಹಮದಾಬಾದ್, ದೆಹಲಿ ಮತ್ತು ವಡೋದರಾ  ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಮಾರ್ಗ್ ಟೆಕ್ನೊ ಪ್ರಾಜೆಕ್ಟ್ಸ್ ಲಿ., ಕಂಪೆನಿಯು ಜನವರಿ 16 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್‌ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಬೋನಸ್ ಷೇರು
*  ಕೆಳಮಧ್ಯಮ ಶ್ರೇಣಿ ಕಂಪೆನಿ ನ್ಯುಟ್ರಾ ಪ್ಲಸ್ ಲಿ. ನೀಡಲಿರುವ 1:10 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 10 ನಿಗದಿತ ದಿನವಾಗಿದೆ.

* ಕೆಳಮಧ್ಯಮ ಶ್ರೇಣಿಯ ಕುಶಾಲ್ ಟ್ರೇಡ್ ಲಿಂಕ್ಸ್ ಕಂಪೆನಿಯು ಈ ತಿಂಗಳ 20 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.  ಷೇರಿನ ಮುಖಬೆಲೆ ₹2 ಆಗಿದ್ದು, ಈ ವರ್ಷ ₹87 ರ ಸಮೀಪದಿಂದ ₹595 ರವರೆಗೂ ಏರಿಕೆ ಕಂಡು ₹582 ರ ಸಮೀಪ ವಾರಾಂತ್ಯ ಕಂಡಿದೆ. 

ಮುಖಬೆಲೆ ಸೀಳಿಕೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿ. ಕಂಪೆನಿ  27 ರಂದು ಷೇರಿನ ಮುಖಬೆಲೆ ಸೀಳುವ ನಿರ್ಧಾರ ಕೈಗೊಳ್ಳಲಿದೆ.

ಹಕ್ಕಿನ ಷೇರು: ಐ ಪಿ ರಿಂಗ್ಸ್ ಕಂಪೆನಿ ಪ್ರತಿ ಷೇರಿಗೆ ₹88.75 ರಂತೆ 4:5 ರ ಅನುಪಾತದಲ್ಲಿ ವಿತರಿಸಲಿರುವ ಹಕ್ಕಿನ ಷೇರಿಗೆ ಜ. 17 ನಿಗದಿತ ದಿನವಾಗಿದ್ದು, ವಿತರಣೆಯು  ಜನವರಿ 3 ಫೆಬ್ರವರಿ 6 ರವರೆಗೂ ತೆರೆದಿರುತ್ತದೆ.

ಅಮಾನತು ತೆರವು: 2002 ಜನವರಿ ಯಲ್ಲಿ ಅಮಾನತುಗೊಂಡಿದ್ದ ಇಂಡೋಗಲ್ಫ್ ಇಂಡಸ್ಟ್ರೀಸ್ ಕಂಪೆನಿ  ಈ ತಿಂಗಳ 20 ರಿಂದ ‘ಪಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಹೆಸರು ಬದಲಾವಣೆ
*  ಫೈನಾನ್ಶಿಯಲ್ ಟೆಕ್ನಾಲಜಿಸ್ ಕಂಪೆನಿ ಹೆಸರು ‘63 ಮೂನ್ಸ್ ಟೆಕ್ನಾಲಜಿಸ್ ಲಿ.,’ಎಂದು ಬದಲಾಗಿದೆ.
*  ಅಡಿ ಫಿನ್ ಕೆಂ ಲಿಮಿಟೆಡ್ ಕಂಪೆನಿಯ ಹೆಸರನ್ನು ‘ಫೇರ್ ಕೆಮ್ ಸ್ಪೆಷಾಲಿಟಿಸ್ ಲಿ.,’ ಎಂದು ಬದಲಾಗಿದೆ.
* ಗೋಲ್ಡನ್ ಪ್ರಾಪರ್ಟಿಸ್ ಅಂಡ್ ಟ್ರೇಡರ್ಸ್ ಕಂಪೆನಿಯ ಹೆಸರನ್ನು ‘ಗಾರ್ಬಿ ಫಿನ್ವೆಸ್ಟ್ ಲಿ., ಎಂದು ಬದಲಾಗಿದೆ.

ವಾರದ ವಿಶೇಷ
ಷೇರುಪೇಟೆಯ ರಭಸದ  ಏರಿಳಿತಗಳಿಂದ ಬೇಸರಗೊಳ್ಳದೆ ಅದಕ್ಕೆ ಹೊಂದಿಕೊಂಡು ಚಟುವಟಿಕೆ ನಡೆಸಿದಲ್ಲಿ ಮಾತ್ರ ಸ್ವಲ್ಪಮಟ್ಟಿನ ಸಂಪಾದನೆ ಸಾಧ್ಯ. ಮುಂದಿನ ದಿನಗಳಲ್ಲಿ ಈ ರೀತಿಯ ಏರಿಳಿತಗಳ ವೇಗವು ಹೆಚ್ಚಾಗುವ ಸಾಧ್ಯತೆಯಿದೆ. 2016ರಲ್ಲಿ ದೇಶದ ಮ್ಯೂಚುವಲ್  ಫಂಡ್ ಸಂಗ್ರಹಣೆಯು ₹2.86 ಲಕ್ಷ ಕೋಟಿಯಾಗಿದೆ.

ಇದು ಕಳೆದ ವರ್ಷ ₹1.77 ಲಕ್ಷ ಕೋಟಿ ಇತ್ತು  ಎಂಬುದು ಸಕಾರಾತ್ಮಕವಾಗಿದ್ದರೂ ಪೇಟೆಯ ದೃಷ್ಟಿಯಿಂದ ನೋಡಿದರೆ  ಈ ಬೆಳವಣಿಗೆಯು ಪೇಟೆಯಲ್ಲಿ ಅಸ್ಥಿರತೆ  ಹೆಚ್ಚಿಸುತ್ತದೆ ಎನ್ನಬಹುದು. ಈಗಿನ ದಿನಗಳಲ್ಲಿ ಕಂಪೆನಿಯ ಪ್ರವರ್ತಕರಾಗಲಿ, ಪ್ರಾಯೋಜಕರಾಗಲಿ, ಹೂಡಿಕೆದಾರರಾಗಲಿ ಎಲ್ಲರೂ ವ್ಯಾವಹಾರಿಕ ದೃಷ್ಟಿಯಿಂದ ಹಣಗಳಿಸುವತ್ತಲೇ ತಮ್ಮ ಚಟುವಟಿಕೆಯನ್ನು ಕೇಂದ್ರೀಕರಿಸಿರುತ್ತಾರೆ.  ಭಾರಿ ಹಣವನ್ನು ಸಂಗ್ರಹಿಸಿರುವ ಮ್ಯೂಚುವಲ್ ಫಂಡ್‌ಗಳು ಮುಂಬರುವ ಆರಂಭಿಕ ಷೇರು ವಿತರಣೆಗಳತ್ತ ಗಮನ ಕೇಂದ್ರೀಕರಿಸಿ ಹೆಚ್ಚಿನ ಹೂಡಿಕೆ ಮಾಡಿ ಆ ಷೇರುಗಳು ಲಿಸ್ಟಿಂಗ್ ಆದಾಗ ಅದರ ಲಾಭ ಪಡೆಯಬಹುದು. 

ಷೇರು ವಿನಿಮಯ ಕೇಂದ್ರಗಳಲ್ಲಿನ ವಹಿವಾಟಿನಲ್ಲಿ ಕೊಳ್ಳುವ ಅಥವಾ ಮಾರಾಟ ಮಾಡುವ ಷೇರುಗಳ  ಗಾತ್ರವು ಹೆಚ್ಚಾಗಿರುವುದರಿಂದ ಏರಿಕೆ  ಅಥವಾ ಇಳಿಕೆ ತೀಕ್ಷ್ಣವಾಗುತ್ತದೆ. ಮ್ಯೂಚುವಲ್ ಫಂಡ್ ಸಂಗ್ರಹಣೆಯು ಹೆಚ್ಚಾಗಿ ತ್ವರಿತ ನಗದೀಕರಿಸಬಹುದಾದ  ಮತ್ತು ಸೀಮಿತ ಆದಾಯ ಯೋಜನೆಗಳಿಂದ ಸಂಗ್ರಹಿಸಿರುವ ಹಣವು ಹೆಚ್ಚಾಗಿರುವುದರಿಂದ ಅಲ್ಪಕಾಲೀನ ಏರಿಳಿತಗಳು ಹೆಚ್ಚಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT