ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳುಮಲೆ ಅಲೆದಾಟಗಳ ಕಥನ...

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ
ಹಿಂದೆಲ್ಲ ಯಾತ್ರೆ ಅನ್ನುತ್ತಿದ್ದೆವು, ಈಗ ಪ್ರವಾಸ ಅನ್ನುತ್ತೇವೆ. ಎರಡೂ ಒಂದೇ ಎಂದು ತಿಳಿಯುತ್ತೇವೆ. ಎರಡರಲ್ಲೂ ಅಲೆದಾಟ ಒಳಗೊಂಡಿದೆ ಎಂಬ ಸೀಮಿತ ಅರ್ಥದಲ್ಲಿ ಇವೆರಡೂ ಒಂದೇ ಹೌದು. ಆದರೆ ಒಂದರಲ್ಲಿ ಶ್ರಮವಿದೆ. ಇನ್ನೊಂದರಲ್ಲಿ ಯಂತ್ರವಿದೆ. ನಾವು ಯಂತ್ರದೊಳಗೆ ಕುಳಿತಿರುತ್ತೇವೆ; ಆಕಳಿಸುತ್ತ ಅಥವಾ ಕಾರ್ಡ್ಸ್ ಆಡುತ್ತಾ ಅಥವಾ ಅಂತ್ಯಾಕ್ಷರಿ ಆಡುತ್ತ. ಯಂತ್ರ ಪಯಣಿಸುತ್ತಿರುತ್ತದೆ. 
 
ಇಲ್ಲಿ ನಾವೇ ಪಯಣಿಸಬೇಕು. ನಮ್ಮ ಶ್ರಮ ನಮ್ಮ ಆಯಾಸ ಅಪಾಯಗಳೇ ಯಾತ್ರೆಗೆ ಮನರಂಜನೆ ಇದ್ದಂತೆ. ಪ್ರವಾಸೋದ್ಯಮದಲ್ಲಿಯೂ ಸಾಹಸಮಯತೆ ಇದೆ ಎಂದು ನೀವು ವಾದಿಸಬಹುದು. ಇದೆ, ಆದರೆ ಅದು ಪೂರ್ವ ಯೋಜಿತವಾಗಿದೆ. ನಮ್ಮತ್ತ ಹಾರಿ ಬಂದು ನಮ್ಮ ಕೈಗಳನ್ನು ಚುಂಬಿಸುವ ಡಾಲ್ಫಿನ್ ಮೀನು ಅಥವಾ ನಮ್ಮ ಕ್ಯಾಮೆರಾಗೆ ಪೋಸ್ ನೀಡುವ ಹುಲಿಸಫಾರಿಯ ಹುಲಿರಾಯ... ಎರಡೂ ಪೂರ್ವಯೋಜಿತವಾದದ್ದು. ಸರ್ಕಸ್ಸಿನಷ್ಟೇ ಪೂರ್ವ ನಿಯೋಜಿತ ಪ್ರವಾಸೋದ್ಯಮ.
 
ಯಾತ್ರೆಯಲ್ಲಿಯೂ ಒಂದು ಪೂರ್ವ ನಿರ್ಧರಿತ ಅಂಶವಿರುತ್ತಿತ್ತು ಎಂದು ನೀವನ್ನಬಹುದು. ಹೌದು, ಅದು ದರ್ಶನ. ಪ್ರವಾಸೋದ್ಯಮದಲ್ಲಿ ದರ್ಶನವೆಂದರೆ ಕೇವಲ ನೋಡುವುದು. ಯಾತ್ರೆಯಲ್ಲಿ ಅದು, ಅನುಭವಿಸಿ ನೋಡುವುದು. ಅರ್ಥಾತ್ ಸಾಕ್ಷಾತ್ಕರಿಸಿಕೊಳ್ಳುವುದು; ಅನುಭವವನ್ನೇ ದೈವತ್ವಕ್ಕೇರಿಸಿಕೊಂಡು ದೇವರನ್ನು ಕಾಣುವುದು. ಚೀನದ ಯಾತ್ರಿ ಹ್ಯೂಯೆನ್ ತ್ಸಾಂಗ್ (ಅವನ ಹೆಸರು ಈಗ ಬದಲಾಗಿದೆ, ಕ್ಷಮೆಯಿರಲಿ), ದುರ್ಗಮ ಹಿಮಾಲಯ ಪರ್ವತ ದಾಟಿ, ಸಾವಿರಾರು ಮೈಲಿ ನಡೆದು, ಭಾರತದ ಬಯಲಿಗೆ ಬಂದಾಗ ಅವನ ಯಾತ್ರೆಗೆ ಬುದ್ಧ ದರ್ಶನದ ಗುರಿಯಿತ್ತು. 
 
ದರ್ಶನದ ಗುರಿಯೇ, ಕ್ರಮೇಣವಾಗಿ ಯಾತ್ರೆಗಳಿಗೆ ಒಂದು ವ್ಯವಸ್ಥಿತ ಮಾರ್ಗವನ್ನೂ ಹಾಕಿಕೊಡುತ್ತದೆ. ಮಾರ್ಗ ವ್ಯವಸ್ಥಿತವಾದಷ್ಟೂ, ಅಪಾಯ ಆಯಾಸ ಹಾಗೂ ಸಾಹಸಮಯತೆಗಳು ಕಡಿಮೆಯಾಗುತ್ತವೆ. ಆದರೆ ಅಂದಿನ ಮಾರ್ಗಗಳು ದೈಹಿಕ ಶ್ರಮದ ಮಿತಿಯೊಳಗೆ ಇರುತ್ತಿದ್ದವು ಎಂಬುದನ್ನು ನಾವು ಮರೆಯಬಾರದು. ಹೆಚ್ಚೆಂದರೆ ಕುದುರೆಯನ್ನೋ ಬಂಡಿಗಾಡಿಯನ್ನೋ ಏರಿ ಪಯಣಿಸಬಹುದಿತ್ತು. ಅಥವಾ ಯಾತ್ರಾರ್ಥಿಗಳ ಸಲುವಾಗಿ ಹೆಚ್ಚೆಂದರೆ ಅಲ್ಲಲ್ಲಿ ಧರ್ಮಶಾಲೆಗಳನ್ನೋ ಮಠಗಳನ್ನೋ ಕಟ್ಟಿಸಿ ನೀರು ನೆರಳಿನ ವ್ಯವಸ್ಥೆ ಮಾಡಿರುತ್ತಿದ್ದರು.
 
ಯಾತ್ರೆಗೂ ಪ್ರವಾಸೋದ್ಯಮಕ್ಕೂ ನಡುವಿನ ವ್ಯತ್ಯಾಸ ಶ್ರಮ ಮಾತ್ರವಲ್ಲ. ವ್ಯತ್ಯಾಸ ಗೌಣವಾದದ್ದೂ ಅಲ್ಲ. ಮಾರ್ಗ ಮತ್ತು ಗುರಿಗಳ ನಡುವಿನ ತಾತ್ವಿಕ ಸಂಬಂಧವನ್ನು ಸೂಚಿಸುತ್ತದೆ ಯಾತ್ರೆ. ಯಾತ್ರೆ ಒಂದು ರೂಪಕ. ಇದಕ್ಕೆ ತದ್ವಿರುದ್ಧವಾಗಿ, ಮಾರ್ಗವೇ ಗುರಿಯೆಂದು ತಿಳಿಯುವ ರೂಪಕ. ಗುರಿಯೇ ಸರ್ವಸ್ವ ಎಂದು ತಿಳಿಯುತ್ತದೆ ಪ್ರವಾಸೋದ್ಯಮ ಹಾಗೂ ಎಲ್ಲಾ ಯಂತ್ರೋದ್ಯಮ.
 
ಹೇಗಾದರೂ ಸರಿ, ಗುರಿ ಮುಟ್ಟಿದರೆ ಸಾಕು, ಹೇಗೂ ದರ್ಶನವಾಗುತ್ತದೆ ಎಂದು ತಿಳಿಯುತ್ತವೆ ಎಲ್ಲ ಆಧುನಿಕ ವ್ಯವಸ್ಥೆಗಳು. ಆಧುನಿಕ ವ್ಯವಸ್ಥೆಗಳ ಸೋಲಿರುವುದೇ ಇಲ್ಲಿ, ಹೇಗೋ ದರ್ಶನ ಮಾಡಿಸಿಬಿಡುವಲ್ಲಿ; ಕಂಪ್ಯೂಟರುಗಳಲ್ಲಿ  ಜ್ಞಾನ, ದೇವಸ್ಥಾನಗಳಲ್ಲಿ ದೇವರು, ಭವ್ಯ ಕಟ್ಟಡಗಳಲ್ಲಿ ಮಾನವ ಚರಿತ್ರೆ ಅಡಗಿದೆ. ಹಾಗೂ ದುಡ್ಡು ತೆತ್ತರೆ ಸುಲಭದಲ್ಲಿ ದಕ್ಕಿಬಿಡುತ್ತದೆ ಎಂದು ತಿಳಿಯುವಲ್ಲಿ. ಪ್ರವಾಸೋದ್ಯಮದ ಮೂಲಕ ಸಿಕ್ಕುವುದು ಆಡಂಬರದ ಮೂರ್ತಿಗಳು ಮಾತ್ರ. 
 
ಹಾಗಂತ ಪ್ರವಾಸೋದ್ಯಮಕ್ಕೂ ಒಂದು ಮಾರ್ಗವಿದೆ: ಅದು ವ್ಯಾಪಾರೀಮಾರ್ಗ! ಹಣ. ಹಾಗಾಗಿ ಗುರಿ ಸಾಂಕೇತಿಕ. ದೇವರಿರಲಿ, ಪ್ಯಾರಿಸ್ಸಿನ ಐಫೆಲ್ ಟವರ್ ಇರಲಿ, ಲಾಸ್‌ವೇಗಾಸ್ಸಿನ ಕ್ಯಾಸಿನೋಗಳಿರಲಿ, ಎಲ್ಲವೂ ಸಾಂಕೇತಿಕ. ಪ್ರವಾಸದ ಉದ್ದಕ್ಕೂ ಸಾಂಕೇತಿಕ ಸುಖಗಳನ್ನು ಒದಗಿಸಲಾಗುತ್ತದೆ. ಇಲ್ಲಿ ಬಿಯರು, ಅಲ್ಲಿ ತಿಂಡಿ, ಇಲ್ಲಿ ಪಂಚತಾರಾ ಹೋಟೆಲು, ಅಲ್ಲಿ ಕುದುರೆಸವಾರಿ ಇತ್ಯಾದಿ. ಕಡೆಗೊಮ್ಮೆ ನೀವು ಬಯಸಿದ ಸಂಕೇತವನ್ನು ನಿಮಗೆ ತೋರಿಸಲಾಗುತ್ತದೆ. ಪ್ರವಾಸ ಸಾಂಕೇತಿಕವೆಂದೇ, ಉದ್ದಕ್ಕೂ ಅಷ್ಟೆಲ್ಲ ಸೆಲ್ಫಿ ಕ್ಲಿಕ್ಕಿಸುವುದು ನಾವು. ಯಾವ ಯಾವ ಸಾಂಕೇತಿಕ ಗುರಿಗಳನ್ನು ಯಾವಾಗ ಮುಟ್ಟಿದೆವು ಎಂಬ ದಾಖಲೆ ಬೇಕಲ್ಲ, ಖರ್ಚಾಗಿರುವ ದುಡ್ಡಿಗೆ! 
 
ಇತ್ತೀಚೆಗೆ ನಾನು ಕೆಲಸದ ಸಲುವಾಗಿ ತಮಿಳುನಾಡಿಗೆ ಹೋಗಿದ್ದೆ. ನನ್ನ ಪಯಣದ ನಡುವೆ, ಆ ರಾಜ್ಯದ ಮುಖ್ಯಮಂತ್ರಿ ಜಯಲಲಿತಾ ಸಾವಿಗೀಡಾದರೆಂಬ ಸುದ್ದಿ ಬಂತು. ಇಡೀ ರಾಜ್ಯ ಸ್ತಬ್ಧವಾಗಿ ಹೋಯಿತು. ಊರಿಗೆ ಹಿಂದಿರುಗುವ ಧಾವಂತದಲ್ಲಿ ಹೇಗೋ ಪಯಣಿಸಿ, ಅಂದಿನ ರಾತ್ರಿ ಊಟಿಯೆಂಬ ಹೆಸರಾಂತ ಪ್ರವಾಸೋದ್ಯಮ ಕೇಂದ್ರ ತಲುಪಿದೆ ಹಾಗೂ ಅಲ್ಲಿಯೇ ಸಿಕ್ಕಿಹಾಕಿಕೊಂಡೆ. ನೂರಾರು ದಂಪತಿಗಳು ಹನಿಮೂನಿಗೆಂದು ಭಾರತದ ಮೂಲೆಮೂಲೆಗಳಿಂದ ಬಂದಿದ್ದವರು, ನನ್ನಂತೆಯೇ ಅಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇರಲಿ. ನನಗೆ ಅನಾಯಾಸವಾಗಿ ಊಟಿಯ ಪರಿಚಯವಾಯಿತು. ಊಟಿಯ ಮತ್ತೊಂದು ಮುಖದ ಪರಿಚಯವಾಯಿತು, ಮೇಕಪ್ ಕಳಚಿದ ಖಾಲಿ ಮುಖವದು.
 
ಹೇಗೋ ಮಾಡಿ, ಆ ರಾತ್ರೆ ಒಂದು ರೂಮು ಹಿಡಿದೆ. ಬೆಳಗಾಯಿತು. ಚಳಿ. ಹೊರಬಂದೆ. ಹನಿಮೂನಿಗರು ಪರದಾಡುತ್ತಿದ್ದರು, ಅನ್ನದ ಬಿಸಿಗಾಗಿ ಎಡತಾಕುತ್ತಿದ್ದರು. ಪಾಪ, ಪರಸ್ಪರರ ಅಪ್ಪುಗೆಯ ಬಿಸಿ ಎಷ್ಟು ಕಾಲ ತಾನೆ ತಾಳಿಕೆ ಬಂದೀತು. ಅವರ  ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡುಗಳೆರಡೂ ಕೆಲಸಕ್ಕೆ ಬಾರದೆ ವ್ಯರ್ಥವಾಗಿದ್ದವು. ಕಾರು ಬಸ್ಸುಗಳು ಓಡದೆ ಕುಳಿತಿದ್ದವು. ಶೋಕತಪ್ತವಾಗಿ ಬಾಗಿಲು ಮುಚ್ಚಿಕೊಂಡು ಮಲಗಿತ್ತು  ಊಟಿ. 
 
ನಾನು ಯಾತ್ರಿ ಮನಸ್ಥಿತಿಯವನು. ಆದದ್ದೆಲ್ಲ ಒಳಿತೇ ಆಯಿತು ಎಂದುಕೊಂಡೆ. ನ್ಯಾಯಬೆಲೆ ಅಂಗಡಿಯಲ್ಲಿ, ಸ್ಥಳೀಕರಿಗೆಂದು ಪೊಟ್ಟಣದ ಹಾಲು ಮಾರಾಟವಾಗುತ್ತಿತ್ತು. ಅದನ್ನೇ ಖರೀದಿಸಿ ಕುಡಿದು ಹೊಟ್ಟೆ ತಣ್ಣಗಾಗಿಸಿಕೊಂಡೆ. ಒಂದೆರಡು ಪೊಟ್ಟಣ ಬಿಸ್ಕತ್ತು ಜೇಬಿಗೆ ತುರುಕಿಕೊಂಡೆ. ಊಟಿಯ ತುಂಬ ಕಾಲ್ನಡಿಗೆಯಲ್ಲಿ ಅಲೆದಾಡಿದೆ.
 
ಅಸಂಖ್ಯವಾಗಿ ಆವರಿಸಿಕೊಂಡಿದ್ದ ಹೋಟೆಲು ಕಟ್ಟಡಗಳ ಸಂದುಗೊಂದುಗಳಲ್ಲಿ ಊಟಿಯ ಸಹಜ ಸೌಂದರ್ಯಕ್ಕಾಗಿ ಹುಡುಕಿದೆ. ಅಲ್ಲಲ್ಲಿ ಅಪರೂಪಕ್ಕೊಮ್ಮೆ ಅದು ಕಂಡುಬರುತ್ತಿತ್ತು. ಉದಾಹರಣೆಗೆ, ತೋಟಗಾರಿಕೆ ಇಲಾಖೆಯ ಸರ್ಕಾರಿ ತೋಟದಲ್ಲಿ ಟೀ ಗಿಡಗಳು ಸೊಂಪಾಗಿ ಬೆಳೆದು, ಹಸಿರು ಸೂಸುತ್ತ ನಗುತ್ತಿದ್ದವು. ಖಾಸಗಿ ಮನೆಯೊಂದರ ಕಿಟಕಿ ಗೂಡಿನಲ್ಲಿ ಕುಂಡವೊಂದರೊಳಗೆ ಚಳಿ ಪ್ರದೇಶದ ಹೂಗಳು ಅರಳಿದ್ದವು. ಅಂಕುಡೊಂಕು ರಸ್ತೆಗಳು, ಕರ್ಕಶ ಸದ್ದು ಮಾಡದೆ, ಶಾಂತವಾಗಿ ಗುಡ್ಡಹತ್ತಿ ಕೆಳಗಿಳಿಯುತ್ತಿದ್ದವು. ಖಾಲಿರಸ್ತೆಗಳಲ್ಲಿ ಪೊಲೀಸರು ಮಾನವರಂತೆ ನಿಂತು ಹರಟುತ್ತಿದ್ದರು. ನಾನೂ ಹರಟಿದೆ.
 
ವಿಚಿತ್ರ ಉದ್ದಿಮೆಯಿದು, ಪ್ರವಾಸ. ಹೋಟೆಲು, ವಾಹನ, ವಿಮಾನಗಳಿಂದ ಹಿಡಿದು ಜೂಜಿನಕಟ್ಟೆ, ವೇಶ್ಯಾವಾಟಿಕೆಗಳವರೆಗೆ, ದೇವರು ದಿಂಡರು ಸಾಧುಸಂತರಿಂದ ಹಿಡಿದು ಸಾಹಿತ್ಯ ಸಂಗೀತಗಳವರೆಗೆ ಎಲ್ಲವನ್ನೂ ತಾಕುತ್ತದೆ ಇದು. ತಾಕಿ, ಕಲುಷಿತಗೊಳಿಸುತ್ತದೆ. ಉದ್ದಿಮೆಯ ಏಕಮೇವ ಹೆಗ್ಗಳಿಕೆ ಪ್ರವಾಸವನ್ನು ಸುಲಭವಾಗಿಸುವುದು. 
 
ಉತ್ಪಾದಕ ಕ್ಷೇತ್ರಗಳಾದ ಕೃಷಿ, ಪಶುಸಂಗೋಪನೆ, ಕುಶಲಕರ್ಮ ಕೈಗಾರಿಕೆ ಇತ್ಯಾದಿಗಳನ್ನು ಹಿಂದಿಕ್ಕಿ ಮುಂದೋಡುತ್ತಿದೆ, ಅನುತ್ಪಾದಕವಾದ ಪ್ರವಾಸೋದ್ಯಮ. ಪ್ರಾಕೃತಿಕವಾದದ್ದು ಪೂಜ್ಯವಾದದ್ದು ಪಾರಂಪರಿಕವಾದದ್ದು, ಒಟ್ಟಾರೆಯಾಗಿ ಮುಗ್ಧತೆ ಉಳಿಸಿಕೊಂಡಿರುವುದು, ಎಲ್ಲೆಲ್ಲಿ ಏನೇನು ಉಳಿದಿದೆ ಎಂದು ಮೂರು ಹೊತ್ತೂ ಹುಡುಕುತ್ತಿರುತ್ತದೆ, ಮುಗ್ಧತೆ ಹರಿದು ಪ್ಲಾಸ್ಟಿಕ್ಕಿನ ಕಸವಾಗಿಸಲಿಕ್ಕೆಂದು. ಇದರ ಅವಾಂತರಗಳಾದ ಮದ್ಯವ್ಯಸನ, ಮಾದಕವ್ಯಸನ, ವೇಶ್ಯಾವೃತ್ತಿ, ಸಾಮಾಜಿಕ ವಿಘಟನೆ, ಸಾಂಸ್ಕೃತಿಕ ವಿಘಟನೆ, ಪರಿಸರನಾಶ... ಎಲ್ಲವನ್ನೂ ಆಧುನಿಕ ಸಮಾಜ ತುಟಿಪಿಟಿಕ್ ಎನ್ನದೆ ಸಹಿಸಿಕೊಂಡಿದೆ. ದುಡ್ಡಿಗಾಗಿ ಸಹಿಸಿಕೊಂಡಿದೆ. ಇರಲಿ.
 
ಯಾತ್ರಾಸ್ಥಳಗಳು ಯಾವತ್ತೂ ದುರ್ಗಮ ಸ್ಥಳಗಳೇ ಏಕೆ ಎಂದು ನೀವು ಯೋಚಿಸಿದ್ದೀರಾ? ಊರ ನಡುವೆ ಅಥವಾ ಮನೆಯ ಬದಿಗೆ ಅವು ಇರುವುದಿಲ್ಲವೇಕೆ ಎಂದು ಯೋಚಿಸಿದ್ದೀರಾ? ಏಕೆ ಎಲ್ಲ ದೇವರುಗಳನ್ನೂ ಪ್ರಕೃತಿಯ ಆಳ ಗರ್ಭದಲ್ಲಿ ಅಡಗಿಸಿಡಲಾಗಿರುತ್ತದೆ ಎಂದು ಯೋಚಿಸಿದ್ದೀರಾ? ಏಕೆ, ಹಿಮಾಲಯದ ದುರ್ಗಮ ಕಣಿವೆಗಳಾಚೆ ಕೇದಾರವಿದೆ, ಭೋರ್ಗರೆವ ಗಂಗೆಯ ತಟದಲ್ಲಿ ಕಾಶಿಯಿದೆ, ದಟ್ಟ ಕಾನನದ ಮಲೆಯಲ್ಲಿ ಮಹದೇಶ್ವರನಿದ್ದಾನೆ, ಕಡಲಿನ ಅಂಚಲ್ಲಿ ಉಡುಪಿಯ ಕೃಷ್ಣ ಹಾಗೂ ಗೋಕರ್ಣದ ಶಿವ ಬಚ್ಚಿಟ್ಟುಕೊಂಡಿದ್ದಾರೆ ಎಂದು ಯೋಚಿಸಿದ್ದೀರಾ? ಏಕೆಂದರೆ ಪ್ರಕೃತಿಯೇ ದೇವರು, ಶ್ರಮವೇ ದರ್ಶನ, ನಿಗ್ರಹವೇ ಆರಾಧನೆ.
 
ದರ್ಶನದ ಹಾದಿಯಲ್ಲಿ ಅಪಾಯ ಎದುರಾಗುತ್ತಿತ್ತು. ದರೋಡೆಕೋರರು, ಕಳ್ಳಕಾಕರು, ಅಪರಿಚಿತರು ಎದುರಾಗುತ್ತಿದ್ದರು. ಮಳೆ ಗಾಳಿ ಬಿಸಿಲು ಎದುರಾಗುತ್ತಿದ್ದವು. ಬದರಿ ಕೇದಾರಗಳ ಯಾತ್ರಿಗಳಿಗೆದುರಾಗುತ್ತಿದ್ದ ನರಭಕ್ಷಕ ಹುಲಿ ಕರಡಿಗಳ ಬಗ್ಗೆ ಜಿಮ್ ಕಾರ್ಬೆಟ್ಟನ ಕಥನವನ್ನು ನೀವೂ ಓದಿಯೇ ಇರುತ್ತೀರಿ. 
 
ಅವುಗಳನ್ನೆಲ್ಲ ಮಣಿಸಿ, ಮಣಿಸುವ ಹಾದಿಯಲ್ಲಿ ನಮ್ಮದೇ ಅಹಂಕಾರವನ್ನು ಮಣಿಸಿ ತಲುಪಬೇಕಿತ್ತು ದರ್ಶನದ ತುದಿಗೆ. ಯಾತ್ರೆಯ ಸಂದರ್ಭದಲ್ಲಿ ದಾನಧರ್ಮ ಮಾಡುತ್ತಿದ್ದರು. ಅದು ಕೇವಲ ದುಡ್ಡು ಬಿಸಾಕುವುದಷ್ಟೇ ಆಗಿರಲಿಲ್ಲ, ದುಡ್ಡಿನ ಪ್ರಜ್ಞೆಯನ್ನೇ ಬಿಸುಡುವುದಾಗಿತ್ತು. ಯಾತ್ರೆ ಹೇಳುತ್ತದೆ ದೇವರು ಮೆಕ್ಕಾದಲ್ಲಿಲ್ಲ ಮೆಕ್ಕಾದ ದುರ್ಗಮ ಹಾದಿಯಲ್ಲಿದ್ದಾನೆ, ಬದರಿಯಲ್ಲಿಲ್ಲ ಬೆಟ್ಟದ ಹಾದಿಯಲ್ಲಿದ್ದಾನೆ, ಬೌದ್ಧಗಯೆಯಲ್ಲಿಲ್ಲ ಬಯಲಿನಲ್ಲಿದ್ದಾನೆ ಎಂದು.
 
ವಾರಕರಿ ಪಂಥದ ಶೂದ್ರಭಕ್ತರು, ಪ್ರತಿವರ್ಷ ನೂರಾರು ಮೈಲು ಕಾಲ್ನಡಿಗೆಯಲ್ಲಿ ನಡೆದು, ವಿಠ್ಠಲನ ಗುಣಗಾನ ಮಾಡುತ್ತ ಪಂಢರಾಪುರ ತಲುಪುತ್ತಾರೆ. ಅತ್ತ ಕಾಡಿನ ಅಂಚು ಇತ್ತ ನಾಡಿನ ಅಂಚು, ನಡುವಿನದು ಕಾಲುದಾರಿ. ಕಾಲುದಾರಿ ನಡೆಯುವ ಮೂಲಕ, ವಿಪರೀತ ಕಟ್ಟಿದ ನಾಗರಿಕತೆಯನ್ನು ಅವರು ತಿರಸ್ಕರಿಸುತ್ತಾರೆ. ವಿಪರೀತ ನಾಗರಿಕರಲ್ಲದ ಹಳ್ಳಿಯ ಬಡವರು ವಾರಕರಿ ಸಂಪ್ರದಾಯಸ್ಥರು! ವಿಪರೀತ ಕಟ್ಟಲ್ಪಟ್ಟವರು ನಾವು, ಆಸ್ತಿ ಅಧಿಕಾರ ಅಹಂಕಾರ ಎಲ್ಲವನ್ನೂ ವಿಪರೀತವಾಗಿ ಶೇಖರಿಸಿಕೊಂಡವರು. ನಾವು ಹಾರಿ ನಮ್ಮ ಕಾರುಗಳಲ್ಲಿ ಎಲ್ಲ ಬಗೆಯ ಪಂಢರಾಪುರಗಳನ್ನೂ ಆಕ್ರಮಿಸಿಕೊಂಡಿದ್ದೇವೆ.
 
ಸರಳ ಬದುಕಿಗೆ ರೋಪ್‌ವೇ ಹಾಕಿಸಿದ್ದೇವೆ. ಸುತ್ತ ಪಂಚತಾರಾ ಹೋಟೆಲು ಕಟ್ಟಿಸಿದ್ದೇವೆ. ಯಾತ್ರೆಯ ಇಕ್ಕೆಲಗಳಲ್ಲಿ ಬಾರುಗಳು ಹಾಗೂ ಕ್ಯಾಸಿನೋಗಳನ್ನು ಸ್ಥಾಪಿಸಿದ್ದೇವೆ. ಪೂಜ್ಯತೆಯ ಸಂಕೇತಗಳನ್ನು ನಿರ್ವಹಿಸುವ ಸನ್ಯಾಸಿಗಳ ಬಡತನ ಕಳೆದು ಅವರನ್ನು ಭ್ರಷ್ಟರನ್ನಾಗಿಸಿದ್ದೇವೆ. ಅವರ ಬಳಿಗೆ ರಾಜಕಾರಣ ಒಯ್ದಿದ್ದೇವೆ, ಅವರನ್ನೇ ರಾಜಕಾರಣದ ಬಳಿಗೆ ಎಳೆದು ತಂದಿದ್ದೇವೆ. ಯಂತ್ರನಾಗರಿಕತೆಯ ದುಷ್ಪರಿಣಾಮ ಅರಿಯಲಿಕ್ಕೆ ಪ್ರವಾಸೋದ್ಯಮಕ್ಕಿಂತ ಮಿಗಿಲಾದ ಉದಾಹರಣೆ ಮತ್ತೊಂದಿಲ್ಲ. ಇರಲಿ.
 
ಊಟಿಯಿಂದ ಅಂತೂ ಇಂತೂ ಬಿಡುಗಡೆ ಪಡೆದೆ. ಟ್ಯಾಕ್ಸಿಯವನೊಬ್ಬ, ತಮಿಳುನಾಡಿನ ಗಡಿಯವರೆಗೆ ತಲುಪಿಸಿದ. ಮದುಮಲೈ ಅರಣ್ಯ ಹಾದು ಬಂದಿತು ನಾನು ಕುಳಿತಿದ್ದ ಟ್ಯಾಕ್ಸಿ. ಅರಣ್ಯ ಹಾದು ಬರುವಾಗ ಹಾದಿಯ ಮೇಲೆ ಕಾಡಾನೆಯ ಲದ್ದಿ ಬಿದ್ದಿರುವುದು ಕಣ್ಣಿಗೆ ಬಿತ್ತು.  ಒಂದೆರಡು ಜಿಂಕೆಗಳು ಮೇಯುವುದನ್ನು ಮರೆತು, ಕತ್ತೆತ್ತಿ ನನ್ನತ್ತ ನೋಡಿದವು. 
 
ಕರ್ನಾಟಕದ ಗಡಿ ತಲುಪಿದವನು ಊಟ ಮಾಡಲೆಂದು, ಗುಂಡ್ಲುಪೇಟೆಯ ಊಟದ ಹೋಟೆಲೊಂದನ್ನು ಹೊಕ್ಕೆ. ಹೋಟೆಲಿನ ಕ್ಯಾಸೆಟ್ಟಿನಲ್ಲಿ ಮಾದೇಶ್ವರನ ಏಳುಮಲೆ ಅಲೆದಾಟವು ಭಜನೆಯ ರೂಪ ತಾಳಿ ಕೇಳಿಬರುತ್ತಿತ್ತು. ಆಹಾ! ಅಲೆದಾಟವೆಂದರೆ ಮಾದೇಶ್ವರನ ಅಲೆದಾಟ! ಹುಲಿಯನೇರಿಕೊಂಡು, ಕಾಡಿನ ತರುಲತೆಗಳ ಹೂವನುದುರಿಸಿಕೊಂಡು, ಜಲವನುಕ್ಕಿಸಿಕೊಂಡು, ನಡುನಡುವೆ ಸುತ್ತೂರು ಮಠ ಹೊಕ್ಕು ರಾಗಿ ಬೀಸಿ, ಏಳುಮಲೆ ಅಲೆಯುವ ಮಾದೇಶ್ವರನ ಬಗ್ಗೆ ಅಸೂಯೆಯಾಯಿತು. ಒಂದು ಕ್ಷಣ ಅನ್ನಿಸಿತು;  ಹೆಲಿಕಾಪ್ಟರ್ ಒಂದನ್ನು ಬುಕ್ ಮಾಡಿಕೊಂಡು ಇಡೀ ಏಳುಮಲೆಗಳನ್ನೂ ಜಾಲಾಡಿ ಮಾದೇಶ್ವರನ ಗುಟ್ಟು ಬಿಡಿಸಲೆ ಎಂದು. ಪ್ರವಾಸೋದ್ಯಮದ ಜಾಡ್ಯ ಇದು. ಅಥವಾ ಗುಟ್ಟು ಬಿಡಿಸುವ ಆಧುನಿಕ ಜಾಡ್ಯ. ತಲೆಕೊಡವಿಕೊಂಡು ಊಟ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT