ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸತ್ಯದ ಹುಡುಕಾಟದ ಬಗೆ

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತೀಯ ಇತಿಹಾಸದ ಕುರಿತಾದ ಇಂದಿನ ಸಾರ್ವಜನಿಕ ಚರ್ಚೆಗಳನ್ನು ಗಮನಿಸುವಾಗ ಒಂದು ಅನುಮಾನ ನನ್ನನ್ನು ಕಾಡುತ್ತದೆ. ಅದೇನೆಂದರೆ ವ್ಯಕ್ತಿಗಳು, ಘಟನೆಗಳು ಅಥವಾ ವಿದ್ಯಮಾನಗಳನ್ನು ಕುರಿತಾದ ಈ ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸುವವರು ಐತಿಹಾಸಿಕ ಸತ್ಯದ ಸ್ವರೂಪದ ಬಗ್ಗೆ ಯಾವ ಬಗೆಯ ತಿಳಿವಳಿಕೆ ಹೊಂದಿದ್ದಾರೆ ಎನ್ನುವುದು.

ಇತ್ತೀಚಿನ ದಿನಗಳಲ್ಲಿ ಮತ್ತೆ ಪ್ರತಿ ವರ್ಷದಂತೆ ಚರ್ಚೆಗೆ ಬಂದಿರುವ ಟಿಪ್ಪು ಜನ್ಮದಿನಾಚರಣೆ ಕುರಿತಾದ ವಿವಾದವನ್ನು ಮತ್ತು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿ. ಟಿಪ್ಪು ಅಭಿಮಾನಗಳು ಮತ್ತು ಟೀಕಾಕಾರರಿಬ್ಬರೂ ಇತಿಹಾಸವನ್ನು ತಾವು ಅನಾವರಣಗೊಳಿಸುವುದಾಗಿ ವಾದಿಸುತ್ತಿದ್ದಾರೆ. ಅಂದರೆ, ಸರಿಯಾದ ಇತಿಹಾಸ ತಮಗೆ ಮಾತ್ರ ತಿಳಿದಿದೆ ಮತ್ತು ಅದನ್ನು ಮುಂದಿಡುವ ಸಾಮರ್ಥ್ಯ ತಾವು ಮಾತ್ರ ಪಡೆದಿದ್ದೇವೆ ಎನ್ನುವ ಮಾತನ್ನು ಅವರು ಆಡುತ್ತಾರೆ. ಇಂತಹ ಮಾತುಗಳನ್ನು ಟಿಪ್ಪು ಜನ್ಮದಿನಾಚರಣೆಯ ಸಂದರ್ಭದಲ್ಲಿ ಮಾತ್ರವಲ್ಲ, ಇತ್ತೀಚಿನ ತಾಜ್‌ಮಹಲ್ ಹಾಗೂ ಲಿಂಗಾಯತ - ವೀರಶೈವ ವಿವಾದಗಳ ಸನ್ನಿವೇಶದಲ್ಲಿ ಸಹ ಕೇಳಿದ್ದೇವೆ.
ಹಾಗಾದರೆ ಸ್ವಲ್ಪ ಸೂಕ್ಷ್ಮವಾಗಿ ಐತಿಹಾಸಿಕ ಸತ್ಯದ ಬಗ್ಗೆ ಆಲೋಚಿಸೋಣ. ಆ ಮೂಲಕ ಇಂತಹ ವಾದಗಳಲ್ಲಿರುವ ಸತ್ವ ಅಥವಾ ಟೊಳ್ಳುತನವನ್ನು ಅರಿಯಲು ಪ್ರಯತ್ನಿಸೋಣ. ಈ ವಿಶ್ಲೇಷಣೆಗೆ ಪೂರ್ವಭಾವಿಯಾಗಿ ಎರಡು ಬಗೆಯ ಅರಿವು ನಮಗಿರಬೇಕು. ಈ ಎರಡು ಬಗೆಯ ಅರಿವುಗಳನ್ನು ಐತಿಹಾಸಿಕ ಸತ್ಯವನ್ನು ಅರಿಯುವ ನೆಲೆಗಳು ಎಂದು ನಾವು ಭಾವಿಸಬಹುದು.

ಮೊದಲಿಗೆ, ಇತಿಹಾಸವನ್ನು ಪುನಾರಚನೆ ಮಾಡಲು ನಮಗೆ ಮೂಲಭೂತವಾಗಿ ಆಕರಗಳು ಬೇಕು. ಗತಕಾಲವೆನ್ನುವುದು ನಮ್ಮ ಅರಿವಿನ ಆಚೆಗೆ ಈಗಾಗಲೆ ಸಂಭವಿಸಿರುತ್ತದೆ. ಅದು ನಮ್ಮ ಪ್ರಜ್ಞೆಯೊಳಗೆ, ಅರಿವಿನೊಳಗೆ ಬರಬೇಕಾದರೆ ಆಕರಗಳು ಬೇಕು. ಇಂತಹ ಆಕರಗಳು ಭಾಷಾಕೇಂದ್ರಿತವಾಗಿದ್ದು, ಲಿಖಿತ ಅಥವಾ ಮೌಖಿಕ ರೂಪಗಳಲ್ಲಿ ಇರಬಹುದು. ಜೊತೆಗೆ ಭೌತಿಕ ವಸ್ತುಗಳು (ಮನುಷ್ಯ ನಿರ್ಮಿತ ಅಥವಾ ಪ್ರಾಕೃತಿಕಗಳೆರಡೂ ಸೇರಿದಂತೆ) ಸಹ ಆಕರಗಳಾಗಿ ನಮಗೆ ಲಭ್ಯವಿರುತ್ತವೆ. ಈ ಪ್ರಾಥಮಿಕ ಅಂಶವನ್ನು ಇಲ್ಲಿ ಪ್ರಸ್ತಾಪಿಸುತ್ತಿರುವುದಕ್ಕೆ ಕಾರಣ ತುಂಬ ಸರಳವಾದುದು. ಇಂದು ಹೊಸ ಆಕರಗಳು ಲಭ್ಯವಾದರೆ ಆಗ ಅವುಗಳನ್ನು ಬಳಸಿ ಹೊಸ ಒಳನೋಟಗಳನ್ನು ಪಡೆಯಬಹುದು. ಉದಾಹರಣೆಗೆ ಗಾಂಧೀಜಿ ಹತ್ಯೆಯ ಕುರಿತಂತೆ ಮರುವಿಚಾರಣೆ ನಡೆಸುವಂತೆ ಒತ್ತಡ ಪ್ರಾರಂಭವಾಗಿದೆ. ಗೋಡ್ಸೆಯಲ್ಲದೆ ನಾಲ್ಕನೆಯ ಗುಂಡನ್ನು ಹಾರಿಸಿದ ಮತ್ತೊಬ್ಬ ಹಂತಕನಿದ್ದರೆ, ಅವನ ಬಗ್ಗೆ ನಂಬಲರ್ಹ ದಾಖಲಾತಿಗಳು ದೊರಕಿದರೆ ಆಗ ಮಾತ್ರ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಹೊಸ ಇತಿಹಾಸದ ಕಥನ ಬರೆಯಲು ಸಾಧ್ಯ.

ಇದನ್ನೇ ಮೌರ್ಯ ಚಕ್ರವರ್ತಿ ಅಶೋಕನ ಉದಾಹರಣೆಯ ಮೂಲಕ ಸಹ ಹೇಳಬಹುದು. ಜೇಮ್ಸ್ ಪ್ರಿನ್ಸೆಪ್ ಎನ್ನುವ 19ನೆಯ ಶತಮಾನದ ಇತಿಹಾಸಕಾರ ದೇವಾನಾಂಪ್ರಿಯ ಪ್ರಿಯದರ್ಶಿಯ ಶಾಸನಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಕೊರಿಸಿದವನು ಬೌದ್ಧಕಥನಗಳಲ್ಲಿ ಉಲ್ಲೇಖಿತನಾಗುವ ಅಶೋಕನೇ ಎಂದು ಗುರುತಿಸಿದ. ಅಲ್ಲಿಯವರೆಗೆ ನಮ್ಮ ಐತಿಹಾಸಿಕ ಸ್ಮೃತಿಯಲ್ಲಿ ಮೌರ್ಯ ಚಕ್ರವರ್ತಿ ಅಶೋಕನಿಗೆ ಅಸ್ತಿತ್ವವಿರಲಿಲ್ಲ. ಹಾಗೆಂದ ಮಾತ್ರಕ್ಕೆ ಅಶೋಕ ಇರಲಿಲ್ಲ ಅಥವಾ ಯಾವ ಸಾಧನೆಗಳನ್ನೂ ಮಾಡಿರಲಿಲ್ಲವೆಂದಲ್ಲ. ಅವನ ಬಗೆಗಿನ ಆಕರಗಳು ಲಭ್ಯವಾಗಿ, ನಮ್ಮ ಐತಿಹಾಸಿಕ ಕಥನಗಳಲ್ಲಿ ಅಶೋಕ ಸ್ಥಳ ಪಡೆದದ್ದು 1830ರ ದಶಕದ ತರುವಾಯವೇ.

ಆಕರಗಳ ಲಭ್ಯತೆಯು ಐತಿಹಾಸಿಕ ಸತ್ಯದ ಸ್ವರೂಪವನ್ನು ನಿರ್ಧರಿಸುವ ಬಹುಮುಖ್ಯ ಅಂಶಗಳಲ್ಲೊಂದು. ಇದನ್ನು ಇಷ್ಟೆಲ್ಲ ವಿವರ
ಗಳೊಡನೆ ಸ್ಪಷ್ಟಪಡಿಸುತ್ತಿರುವುದಕ್ಕೆ ಕಾರಣವಿಷ್ಟೆ. ನಮಗೆ ಖಚಿತವಾಗಿ ತಿಳಿದಿರುವ ಐತಿಹಾಸಿಕ ಸತ್ಯವನ್ನು ಪ್ರತಿಪಾದಿಸುವ ಸಂದರ್ಭದಲ್ಲಿಯೂ ನಮಗೆ ತಿಳಿಯದಿರುವ ಸತ್ಯಗಳೂ ಇರಬಹುದು ಎನ್ನುವ ವಿನಯ ಇರುವುದು ಉಚಿತ ಎಂದು ನಾನು ನಂಬಿದ್ದೇನೆ. ಅದಕ್ಕಾಗಿಯೇ ಐತಿಹಾಸಿಕ ಸತ್ಯವನ್ನು ಅನಿಶ್ಚಿತ ಅಥವಾ ಸಂಭವನೀಯ ಸತ್ಯವೆನ್ನುವ ತಾತ್ವಿಕ ಎಚ್ಚರವನ್ನು ಒಳ್ಳೆಯ ಇತಿಹಾಸಕಾರರು ಹೊಂದಿರುತ್ತಾರೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಐತಿಹಾಸಿಕ ಸತ್ಯ ಗಡಸು ಸತ್ಯವಲ್ಲ, ಮೃದು ಸತ್ಯ.

ನಾನು ಚರ್ಚಿಸಬಯಸುವ ಎರಡನೆಯ ಅಂಶವು ಐತಿಹಾಸಿಕ ಸತ್ಯದ ಮತ್ತೊಂದು ವಾಸ್ತವವನ್ನು ತೆರೆದಿಡುತ್ತದೆ. ನಾವು ಐತಿಹಾಸಿಕ ಸತ್ಯವೆಂದು ಏನನ್ನು ಕರೆಯುತ್ತೇವೆಯೋ ಅವುಗಳು ವಿಭಿನ್ನ ರೂಪದ, ಬೇರೆಯವೇ ಆದ ವಿದ್ಯಮಾನಗಳನ್ನು ಹಿಡಿದಿರುತ್ತವೆ. ವಿಭಿನ್ನ ರೀತಿಯ ದತ್ತಾಂಶ (ಫ್ಯಾಕ್ಟ್)ಗಳನ್ನು ಹೊಂದಿರುತ್ತವೆ. ಒಂದು ಸರಳ ಉದಾಹರಣೆಯನ್ನು ಗಮನಿಸಿ. ಗಾಂಧೀಜಿ ಪೋರ್‌ಬಂದರಿನಲ್ಲಿ ಅಕ್ಟೋಬರ್ 2,1869ರಲ್ಲಿ ಜನಿಸಿದರು ಎನ್ನುವುದು ಒಂದು ಫ್ಯಾಕ್ಟ್. ಇದನ್ನು ಸ್ಥಾಪಿಸುವ ಆಕರಗಳಾಗಿ ಆಸ್ಪತ್ರೆಯ ದಾಖಲಾತಿಗಳನ್ನು (ಅವುಗಳು ಇದ್ದ ಪಕ್ಷದಲ್ಲಿ), ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು, ಶಾಲಾ ದಾಖಲಾತಿಯ ಪ್ರಮಾಣಪತ್ರಗಳನ್ನು ನೀಡಬಹುದು. ಕೆಲವೊಮ್ಮೆ ಇಂತಹ ದಾಖಲಾತಿಗಳು ಇಲ್ಲದಿರಬಹುದು, ನಕಲಿಯಾಗಿರಬಹುದು. ಮತ್ತೆ ಕೆಲವು ಸಂದರ್ಭಗಳಲ್ಲಿ ಪ್ರಾಕೃತಿಕ ದುರಂತ ಅಥವಾ ನೆನಪಿನಲ್ಲಿ ಉಳಿಯುವ ಆಕಸ್ಮಿಕ ಕಾರಣವೊಂದರಿಂದ ಜನ್ಮದಿನ ಖಚಿತವಾಗಿ ದೊರಕಬಹುದು. ಅವರ ಜನ್ಮದಿನದ ದಾಖಲಾತಿಗಳಿಂದ ಆ ದಿನಾಂಕದ ಬಗ್ಗೆ ಖಚಿತತೆ ದೊರಕುತ್ತದೆ. ಇದು ಎಲ್ಲ ಜೀವಿಗಳ ಸಂದರ್ಭದಲ್ಲಿ ಲಭ್ಯವಿರುವ ಐತಿಹಾಸಿಕ ಸತ್ಯ.

ಮತ್ತೊಂದು ರೀತಿಯ ಹುಟ್ಟನ್ನು, ಪ್ರಾರಂಭವನ್ನು ಈಗ ಗಮನಿಸೋಣ. ಆಗಸ್ಟ್ 15, 1947ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು ಎಂದು ನಾವು ಹೇಳುತ್ತೇವೆ. ಸ್ವಾತಂತ್ರ್ಯ ದಿನವನ್ನು ದೇಶದ ಹುಟ್ಟುಹಬ್ಬವೆಂದು ಆಚರಿಸುತ್ತೇವೆ. 1947ರಲ್ಲಿ ಭಾರತಕ್ಕೆ, ಭಾರತೀಯರೆಲ್ಲರಿಗೆ ಸ್ವಾತಂತ್ರ್ಯ ದೊರಕಿತೆ? ಸಿದ್ಧಲಿಂಗಯ್ಯನವರ ಸುಪ್ರಸಿದ್ಧ ಕವನ ಈ ಪ್ರಶ್ನೆಯನ್ನು ತುಂಬ ಗಟ್ಟಿಯಾಗಿ ‘ಎಲ್ಲಿಗೆ ಬಂತು, ಯಾರಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ’ ಎಂದು ಕೇಳುತ್ತದೆ. 1947ರ ಆಗಸ್ಟ್‌ 15ರಂದು ಬ್ರಿಟಿಷರ ವಸಾಹತುಶಾಹಿ ಆಳ್ವಿಕೆ ಮುಗಿಯಿತು ಎನ್ನುವುದು, ಅದರ ನಂತರ ಭಾರತೀಯ ನಾಗರಿಕರೇ ಇದ್ದ ಪ್ರಾತಿನಿಧ್ಯ ಆಧಾರಿತ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದಿತು ಎನ್ನುವುದು ಫ್ಯಾಕ್ಟ್. ಆದರೆ ಈ ಹೊಸ ಸರ್ಕಾರದ ಸ್ಥಾಪನೆಯಿಂದ ಭಾರತೀಯರಿಗೆ ಸ್ವಾತಂತ್ರ್ಯ ದೊರೆತುದು ಹೇಗೆ ಎಂದರೆ ಆಗ ಮತ್ತಷ್ಟು ಪ್ರಶ್ನೆಗಳನ್ನು ಕೇಳಿಕೊಳ್ಳಲಾರಂಭಿಸುತ್ತೇವೆ. ನಮ್ಮ ಸ್ವಾತಂತ್ರ್ಯದ ಪರಿಕಲ್ಪನೆಯೇನು? ಇದು ನಮ್ಮ ಪ್ರತಿನಿಧಿಗಳನ್ನು ನಾವು ಆರಿಸಬಹುದು ಎನ್ನುವ ಅವಕಾಶದ ಮೇಲೆ ನಿರ್ಭರವಾಗಿತ್ತೇ? ಪ್ರತಿನಿಧಿಗಳ ಆಯ್ಕೆ ಪಾರದರ್ಶಕವಾಗಿ, ಭಾರತದ ಬಹುಸಂಖ್ಯಾತರ ಪಾಲ್ಗೊಳ್ಳುವಿಕೆಯಿಂದ ನಡೆಯಿತೆ?

ಇಂತಹುದೇ ಮತ್ತೊಂದು ಉದಾಹರಣೆ ಭಾರತ ಗಣರಾಜ್ಯ ದಿನಾಚರಣೆಗೆ ಸಂಬಂಧಿಸಿದುದು. 1950ರ ಜನವರಿ 26ರಂದು ಭಾರತ ಗಣರಾಜ್ಯವಾಯಿತು ಎಂದಾಗ ನಾವೇ ರಚಿಸಿಕೊಂಡ ಸಂವಿಧಾನವು ಅಂದಿನಿಂದ ಅನುಷ್ಠಾನಗೊಂಡಿತು ಎಂದು ಭಾವಿಸುತ್ತೇವೆ. ಆದರೆ ಸಂವಿಧಾನದ ಆಶಯಗಳು ಹೇಗೆ ಅನುಷ್ಠಾನಗೊಂಡವು ಎನ್ನುವ ಪ್ರಶ್ನೆಯನ್ನು ಕೇಳಿಕೊಂಡಾಗ ನಮಗೆ ಬೇರೆಯ ಉತ್ತರಗಳು ದೊರಕುತ್ತವೆ.

ಈ ಪ್ರಶ್ನೆಗಳನ್ನು ಕೇಳುವ ಉದ್ದೇಶ ನಿಮಗೆ ಸ್ಪಷ್ಟವಾಗಿರಬಹುದು. ಐತಿಹಾಸಿಕ ಸತ್ಯಗಳ ಬಗ್ಗೆ ಮಾತನಾಡುವಾಗ, ವಿಭಿನ್ನ ಬಗೆಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ವಿಭಿನ್ನ ರೀತಿಯ ಆಧಾರಗಳು, ಸಾಕ್ಷ್ಯಗಳು ಮತ್ತು ಪರಿಕಲ್ಪನೆಗಳನ್ನು ಬಳಸಿಕೊಂಡು, ಬೇರೆ ಬೇರೆ ಬಗೆಯ ನಿರ್ಣಯಗಳಿಗೆ ತಲುಪುತ್ತೇವೆ. ಮನುಷ್ಯರ ಹುಟ್ಟು ಎನ್ನುವುದು ಒಂದು ಜೈವಿಕ ವಿದ್ಯಮಾನ. ಅದರ ಹುಟ್ಟಿನ ಬಗ್ಗೆ ಮಾತನಾಡುವಾಗಲೂ ಆಧಾರಗಳನ್ನು ನಾವು ನಿರೀಕ್ಷಿಸಿದರೂ ಸಹ, ಗಾಂಧಿಯವರ ಹುಟ್ಟು ಅಥವಾ ನಮ್ಮ ಹುಟ್ಟು ಎನ್ನುವುದರ ಬಗ್ಗೆ ನಮಗೆ ಖಚಿತತೆಯಿದೆ. ಆದರೆ ದೇಶದ ಹುಟ್ಟು ಎನ್ನುವುದನ್ನು ಬೇರೆಯ ರೀತಿಯಲ್ಲಿ ಗುರುತಿಸಬೇಕಾಗುತ್ತದೆ.

ಇಲ್ಲಿ ನಾವು ಗಮನಿಸಬೇಕಾಗಿರುವ ಅಂಶವಿದು; ಐತಿಹಾಸಿಕ ಸತ್ಯ ಎನ್ನುವುದು ಕೆಲವೊಮ್ಮೆ ಸರಳವಾದ, ನೇರವಾದ ಫ್ಯಾಕ್ಟ್‌ನ ರೂಪದಲ್ಲಿ ಕಂಡುಬಂದರೆ ಮತ್ತಷ್ಟು ಬಾರಿ ಹೆಚ್ಚು ಸಂಕೀರ್ಣವಾದ, ಕಥನದೊಳಗೆ ಹುದುಗಿರುವ, ವಿಶ್ಲೇಷಣೆಯನ್ನು ನಿರೀಕ್ಷಿಸುವ ವಿದ್ಯಮಾನವಾಗಿ ಕಾಣುತ್ತದೆ. ಇಲ್ಲಿ ಅಕರಗಳ ಪರಿಶೀಲನೆಯೆನ್ನುವುದು ಹಲವಾರು ಇತರೆ ಆಯಾಮಗಳನ್ನು, ಪರಿಕಲ್ಪನೆಗಳನ್ನು ಒಳಗೊಳ್ಳುತ್ತದೆ. ಇದಕ್ಕೆ ಉದಾಹರಣೆಯಾಗಿ ಟಿಪ್ಪು ಕುರಿತಾದ ಚರ್ಚೆಯನ್ನು ಗಮನಿಸಿ. ಟಿಪ್ಪು ಕೊಡಗು ಮತ್ತು ಮಲಬಾರ್‌ಗಳಲ್ಲಿ ಕ್ರೂರವಾಗಿ ವರ್ತಿಸಿದ, ಅಲ್ಲಿನ ಸ್ಥಳೀಯರನ್ನು ಇಸ್ಲಾಮಿಗೆ ಪರಿವರ್ತಿಸಲು ಪ್ರಯತ್ನಿಸಿದ ಎನ್ನುವುದು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲದ ಫ್ಯಾಕ್ಟ್. ಹಾಗೆಯೇ ತನ್ನ ರಾಜ್ಯದ ಕೇಂದ್ರಗಳಲ್ಲಿದ್ದ ಪ್ರದೇಶಗಳಲ್ಲಿ ಪ್ರಜೆಗಳ ವಿಷಯದಲ್ಲಿ ಅವನ ನಡವಳಿಕೆ ಹೀಗೆ ಕಠೋರವಾಗಿರಲಿಲ್ಲ ಎನ್ನುವುದು ಸಹ ವಾಸ್ತವವೇ. ಹಾಗಾದರೆ ಆಧುನಿಕಪೂರ್ವ ಯುಗದ ರಾಜನೊಬ್ಬನ ಕ್ರೌರ್ಯವನ್ನು ನಾವು ಹೇಗೆ ಅರ್ಥೈಸಬಹುದು? ಟಿಪ್ಪುವಿನ ನಡವಳಿಕೆ ಕಂಚಿಯ ಮೇಲೆ ದಾಳಿ ಮಾಡಿದ ಎರಡನೆಯ ಪುಲಕೇಶಿಗಿಂತ ಅಥವಾ ತನ್ನ ಸೇನಾಪತಿಗಳ ಕುಟುಂಬದವರನ್ನು ಒತ್ತೆಯಾಗಿರಿಸಿಕೊಳ್ಳುತ್ತಿದ್ದ ಕೃಷ್ಣದೇವರಾಯನಿಗಿಂತ ಹೇಗೆ ಭಿನ್ನವಾದುದು? ಒಡೆಯರ್ ದೊರೆಗಳಿಂದ ಅಧಿಕಾರ ಕಿತ್ತುಕೊಂಡಿದ್ದರಿಂದ ಹೈದರ್ ಅಥವಾ ಟಿಪ್ಪು ಆಳ್ವಿಕೆಯೇ ನ್ಯಾಯಸಮ್ಮತವಲ್ಲ ಎನ್ನುವ ಮಾತು ಆಧುನಿಕಪೂರ್ವ ಯುಗದಲ್ಲಿ ಪ್ರಭುತ್ವಗಳ ಸ್ಥಾಪನೆ ಹೇಗಾಗುತ್ತಿತ್ತು ಎನ್ನುವ ಪ್ರಾಥಮಿಕ ಅರಿವನ್ನು ಹೊಂದದೆ ಮಾಡುವ ವಿಶ್ಲೇಷಣೆಯಾಗುತ್ತದೆ. ಹಾಗೆಯೇ ಗಾಂಧೀಜಿ ಹತ್ಯೆಯ ಬಗೆಗಿನ ಚರ್ಚೆಯಲ್ಲಿ ಇತರರ ಹೊಣೆಗಾರಿಕೆಯನ್ನು ಚರ್ಚಿಸುವಾಗ, ಹತ್ಯೆಯ ಮೂಲಪಿತೂರಿಕೋರರನ್ನು ಮರೆಯುವಂತೆ ಮಾಡುವುದು ಸಹ ಅನುಚಿತವಾಗುತ್ತದೆ.

ಇತಿಹಾಸದ ಪುನಾರಚನೆ, ಐತಿಹಾಸಿಕ ಸತ್ಯದ ಹುಡುಕಾಟ ಸೂಕ್ಷ್ಮತೆಯನ್ನು ಬಯಸುತ್ತದೆ. ಇದಕ್ಕೆಅವಶ್ಯಕತೆಯಿರುವುದು ಶಿಲ್ಪಿಯ ಉಳಿ, ಕಲ್ಲೊಡೆಯುವವನ ಭಾರಿ ಸುತ್ತಿಗೆಯಲ್ಲ. ನಮ್ಮ ನಂಬಿಕೆಗಳು ಮತ್ತು ಪರಿಕಲ್ಪನೆಗಳು ನಮ್ಮ ಐತಿಹಾಸಿಕ ಸತ್ಯದ ಹುಡುಕಾಟವನ್ನು ಪ್ರಭಾವಿಸುತ್ತವೆ. ಅವುಗಳಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲೂ ನಮಗೆ ಆಗದಿರಬಹುದು. ಆದರೆ ಅವುಗಳು ಹುಡುಕಾಟದ ದಾರಿಯನ್ನೇ ಮುಚ್ಚುವ ಬಂಡೆಗಳಾಗಬಾರದು. ಆ ಎಚ್ಚರವಿದ್ದರೆ ನಾವು ಪ್ರತಿಪಾದಿಸುವ ಸತ್ಯಗಳ ಬಗ್ಗೆ ಸಹ ಒಂದಿಷ್ಟು ಆರೋಗ್ಯಪೂರ್ಣವಾದ ಅಳುಕಿನಿಂದಲೇ ಮಾತನಾಡುವುದನ್ನು ಕಲಿಯುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT