ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಟೂರ್ನಿಯ ಖುಷಿಯ ವಿಚಾರಗಳು...

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇಂಡಿಯನ್‌  ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಮತ್ತೆ ಆರಂಭವಾಗಿದೆ, 10ನೆಯ ಆವೃತ್ತಿಯೊಂದಿಗೆ. ಅದು ಈ ಬಾರಿ ಹಿಂದಿಗಿಂತ ಹೆಚ್ಚಿನ ವೀಕ್ಷಕರನ್ನು ಪಡೆದುಕೊಂಡಿರುವಂತಿದೆ. ಐಪಿಎಲ್‌ ಬಗ್ಗೆ ನನ್ನಲ್ಲಿ ಯಾವತ್ತೂ ಸಮ್ಮಿಶ್ರ ಭಾವಗಳಿವೆ. ಐಪಿಎಲ್‌ ಟೂರ್ನಿಯನ್ನು ಜಾಣತನದಿಂದ ಆಯೋಜಿಸಲಾಗುತ್ತದೆ. ಆದರೆ ಈ ಪಂದ್ಯಾಟ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಾಗ ಬಿಸಿಸಿಐ ಈ ವಿಚಾರದಲ್ಲಿ  ರಾಜಿ ಮಾಡಿಕೊಂಡಿತು.

ಅತ್ಯಂತ ಭ್ರಷ್ಟ ಹಾಗೂ ಸ್ವಜನಪಕ್ಷಪಾತದ ವ್ಯವಸ್ಥೆಯ ಶುದ್ಧೀಕರಣಕ್ಕೆ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡಿವೆ. ನ್ಯಾಯಾಲಯಗಳು ಮಧ್ಯಪ್ರವೇಶ ಮಾಡುವುದು ಭಾರತದಲ್ಲಿ ಅತಿಯಾಗಿದೆ ಎಂದು ಕೆಲವರು ವಾದಿಸಬಹುದು. ಅದು ನಿಜವೂ ಹೌದು. ಆದರೆ, ಈ ಮಧ್ಯಪ್ರವೇಶವು ಐಪಿಎಲ್‌ಗೆ ವಿಶ್ವಾಸಾರ್ಹತೆಯನ್ನು ಮತ್ತೆ ಗಳಿಸಿಕೊಟ್ಟಿರಬಹುದು.

ಇದು ಮಹತ್ವದ ವಿಚಾರ. ಏಕೆಂದರೆ ಹಲವು ಯುವ ಆಟಗಾರರಿಗೆ ಹಣ ಸಂಪಾದಿಸಲು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಐಪಿಎಲ್‌ ಅವಕಾಶ ಕಲ್ಪಿಸುತ್ತದೆ. ಐಪಿಎಲ್‌ ಇಲ್ಲದ ಒಂದು ದಶಕದ ಹಿಂದೆ ಇಂಥ ಅವಕಾಶಗಳು ಇರಲಿಲ್ಲ.

ಐಪಿಎಲ್‌ನಲ್ಲಿರುವ ಎಂಟು ತಂಡಗಳಲ್ಲಿ ಪ್ರತಿ ತಂಡ (ಪಂದ್ಯದಲ್ಲಿ ಕಣಕ್ಕಿಳಿಯುವ ಅಂತಿಮ 11 ಆಟಗಾರರ ತಂಡ)  ಗರಿಷ್ಠ ನಾಲ್ಕು ಜನ ವಿದೇಶಿ ಆಟಗಾರರನ್ನು ಹೊಂದಬಹುದು. ಅಂದರೆ, ಒಟ್ಟು 56 ಜನ ಭಾರತೀಯ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗುತ್ತದೆ. ಭಾರತದ ಯುವ ಕ್ರಿಕೆಟಿಗರಿಗೆ ಈ ಹಿಂದೆ ಇಂತಹ ಅವಕಾಶ ಸಿಗುತ್ತಿರಲಿಲ್ಲ. ರಣಜಿ ಟ್ರೋಫಿಯಂತಹ ಪಂದ್ಯಗಳಲ್ಲಿ ಪಾಲ್ಗೊಳ್ಳುವ ಸ್ಥಳೀಯ ತಂಡಗಳು ಮೊದಲು ಇದ್ದವು, ಈಗಲೂ ಇವೆ. ಆದರೆ, ಈ ತಂಡಗಳ ಪರ ಆಡಿದ ಮಾತ್ರಕ್ಕೆ ಆಟಗಾರ ಪ್ರಸಿದ್ಧನಾಗುತ್ತಿರಲಿಲ್ಲ. ಆತ ಮುಂದೊಂದು ದಿನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರೆ ಮಾತ್ರ ಪ್ರಸಿದ್ಧನಾಗುತ್ತಿದ್ದ. ಜಾಗತಿಕ ಕ್ರಿಕೆಟ್‌ನ ಆರ್ಥಿಕ ಕೇಂದ್ರವಾಗಿ ಭಾರತ ಬೆಳೆದಿರುವ ಕಾರಣ, ಸ್ಥಳೀಯ ಪಂದ್ಯಾಟಗಳಲ್ಲಿ ಆಟಗಾರರಿಗೆ ನೀಡುವ ಸಂಭಾವನೆ ಕೂಡ ಹೆಚ್ಚಾಗಿದೆ ಎಂಬುದು ನಿಜ.

ಆದರೆ ಇಂಗ್ಲೆಂಡಿನ ಕೌಂಟಿಗಳ ಪರ ಆಡುವ ಆಟಗಾರರಿಗೆ ಹೋಲಿಸಿದರೆ ಇವರಿಗೆ ನೀಡುವ ಹಣ ಬಹುಕಾಲ ಕಡಿಮೆಯೇ ಆಗಿತ್ತು. ಆ ವರ್ಷಗಳಲ್ಲಿ ಇಂಗ್ಲೆಂಡಿನಲ್ಲಿ ಕೊಡುತ್ತಿದ್ದ ಹಣದ ಮೊತ್ತ ಭಾರತದಲ್ಲಿ ಕೊಡುತ್ತಿದ್ದಕ್ಕಿಂತ ಬಹಳಷ್ಟು ಹೆಚ್ಚಿರುತ್ತಿತ್ತು. ಕಳೆದ ತಲೆಮಾರಿನ ಭಾರತದ ಕ್ರಿಕೆಟಿಗರು (ರಾಹುಲ್ ದ್ರಾವಿಡ್ ಕೆಂಟ್‌ ಕೌಂಟಿ ಪರವಾಗಿ, ಸೌರವ್ ಗಂಗೂಲಿ ಗ್ಲಾಮರ್ಗನ್ ಪರ, ಸಚಿನ್ ತೆಂಡೂಲ್ಕರ್ ಯಾರ್ಕ್‌ಶೈರ್‌ ಪರ) ಕೌಂಟಿ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದ ಕಾರಣ ನಮಗೆ ಇದು ಗೊತ್ತಿದೆ.

ಆದರೆ ಈಗ ಇಲ್ಲಿನ ಆಟಗಾರರು ಕೌಂಟಿ ಪರ ಆಡುತ್ತಿಲ್ಲ. ಏಕೆಂದರೆ ಭಾರತವು ತನ್ನ ಆಟಗಾರರಿಗೆ ವಿಶ್ವದ ಯಾವುದೇ ತಂಡದ ಆಟಗಾರರಿಗೆ ಸಿಗುವುದಕ್ಕಿಂತ ಹೆಚ್ಚಿನ ಸಂಭಾವನೆ ನೀಡುತ್ತಿದೆ. ಉದಾಹರಣೆಗೆ, ವಿರಾಟ್ ಕೊಹ್ಲಿ ಯಾವುದೇ ಕೌಂಟಿ ಪರ ಇದುವರೆಗೆ ಆಟವಾಡಿಲ್ಲ. ಅಲ್ಲಿಂದ ಆಹ್ವಾನ ಬಂದರೆ ಅವರು ಅದನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚು. ಏಕೆಂದರೆ ಅಲ್ಲಿಗಿಂತ ಹೆಚ್ಚಿನ ಹಣ ಸಂಪಾದಿಸಲು ಇಲ್ಲಿ ಸಾಧ್ಯವಿದೆ.

ಬೇರೆ ದೇಶಗಳ ಆಟಗಾರರಿಗೂ ಐಪಿಎಲ್‌ ಎಂಬುದು ಹಣ ಸಂಪಾದಿಸುವ ವೇದಿಕೆಯಾಗಿದೆ. ಮಹಾನ್ ಆಟಗಾರ ಸನತ್ ಜಯಸೂರ್ಯ ಅವರ ಕತೆ ನನಗೆ ನೆನಪಾಗುತ್ತಿದೆ. ಎರಡು ದಶಕಗಳ ಹಿಂದೆ, ಆರಂಭಿಕ ಬ್ಯಾಟ್ಸ್‌ಮನ್‌ ರೊಮೇಶ್ ಕಲುವಿತರಣ ಜೊತೆ ಸೇರಿ ಅವರು ಏಕದಿನದ ಪಂದ್ಯಗಳನ್ನು ಆಡುವ ರೀತಿಯನ್ನೇ ಬದಲಾಯಿಸಿದರು. ಕ್ಷೇತ್ರ ರಕ್ಷಣೆಯಲ್ಲಿನ ನಿರ್ಬಂಧಗಳನ್ನು ಅವಕಾಶವಾಗಿ ಬಳಸಿಕೊಂಡು ಶ್ರೀಲಂಕನ್ನರು ಸ್ಫೋಟಕ ಆಟ ರೂಪಿಸಿದರು. 1996ರ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಂಡರು. ಶ್ರೀಲಂಕಾ ಕ್ರಿಕೆಟ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದಂತೆಲ್ಲ, ಅಲ್ಲಿನ ಸರ್ಕಾರ ಆಟಗಾರರಿಗೆ ಹೆಚ್ಚಿನ ಹಣ ನೀಡುವ ಭರವಸೆ ನೀಡುತ್ತಿತ್ತು.

ನಿರ್ಮಾಣ ಹಂತದಲ್ಲಿರುವ ತಮ್ಮ ಮನೆಯನ್ನು ಪೂರ್ಣಗೊಳಿಸಲು ಇನ್ನೂ ₹ 1.75 ಲಕ್ಷ ಬೇಕು ಎಂದು ಜಯಸೂರ್ಯ ಒಮ್ಮೆ ಹೇಳಿಕೊಂಡಿದ್ದರು. ‘ಪ್ರಥಮ ದರ್ಜೆ ಕ್ರಿಕಟ್‌ನಲ್ಲಿ ಶತಕ ಬಾರಿಸಿದಾಗ ಅಪ್ಪ ₹ 10 ಕೊಡುತ್ತಿದ್ದರು. ಒಂದು ತಿಂಗಳು ನಾನು ಅದೆಷ್ಟು ಶತಕ ಬಾರಿಸಿದ್ದೆ ಅಂದರೆ, ನನಗೆ ಕೊಡಬೇಕಿದ್ದ ಹಣ ಮನೆಯ ತಿಂಗಳ ಬಜೆಟ್‌ಗಿಂತ ಹೆಚ್ಚಾಗಿತ್ತು’ ಎಂದು ಕ್ರಿಕೆಟಿಗ ಸುನಿಲ್ ಗಾವಸ್ಕರ್ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ.

ಇಂದಿನ ಕ್ರಿಕೆಟಿಗರಿಗೆ ಕೆಲವು ವಾರ ಆಟವಾಡಿದ್ದಕ್ಕೆ ಕೋಟಿಗಳ ಮೊತ್ತದಲ್ಲಿ ಹಣ ಸಿಗುತ್ತಿರುವಾಗ, ಕೆಲವು ಭಾರತೀಯರು ವರ್ಷಕ್ಕೆ ₹100 ಕೋಟಿಗಿಂತ ಹೆಚ್ಚು ಹಣ ಸಂಪಾದಿಸುತ್ತಿರುವಾಗ ಹಿಂದಿನ ಕಾಲದಲ್ಲಿ ಸಿಗುತ್ತಿದ್ದ ಸಣ್ಣ ಮೊತ್ತದ ಬಗ್ಗೆ ನೆನಪಿಸಿಕೊಳ್ಳುವುದು ಉಲ್ಲೇಖಿಸಲು ಅರ್ಹ. ಇಷ್ಟು ಹಣ ಸಂಪಾದಿಸುತ್ತಿರುವವರ ಬಗ್ಗೆ ನನಗೆ ಅಸೂಯೆ ಇಲ್ಲ. ಆದರೆ ಇಲ್ಲಿರುವ ಒಂದು ವಿಚಾರ ನನ್ನಲ್ಲಿ ಸಂತೋಷ ಮೂಡಿಸುತ್ತದೆ.

ಐಪಿಎಲ್‌ ಟೂರ್ನಿಯಲ್ಲಿ ಅವಕಾಶ ಪಡೆದಿರುವ ಹಲವು ಆಟಗಾರರು ಆಟೊ ರಿಕ್ಷಾ ಚಾಲಕರಂತಹ ತೀರಾ ಸಾಮಾನ್ಯ ಪಾಲಕರ ಮಕ್ಕಳು. ಇಂತಹ ಕುಟುಂಬಗಳಲ್ಲಿ ಸಮಾಜದ ಮೇಲಿನ ಸ್ತರಕ್ಕೆ ಜಿಗಿದ ಮೊದಲ ತಲೆಮಾರಿನವರು ಇವರು.

ಇಂತಹ ಹಿನ್ನೆಲೆ ಉಳ್ಳ ಯುವಕರು ಕೀರ್ತಿ ಹಾಗೂ ಹಣ ಸಂಪಾದಿಸುವುದು ಒಳ್ಳೆಯ ವಿದ್ಯಮಾನ. ಅವರು ದೇಶ ಹಾಗೂ ವಿದೇಶಗಳಲ್ಲಿ ಕ್ರಿಕೆಟ್ ದೈತ್ಯರ ಜೊತೆ ಆಟವಾಡುವ ಅವಕಾಶ ಪಡೆದಿದ್ದಾರೆ. ಇವರ ಬಗ್ಗೆ ತಿಳಿದುಕೊಳ್ಳುವ ಇತರರಲ್ಲಿ ಇದು ಆತ್ಮವಿಶ್ವಾಸ ಮೂಡಿಸುತ್ತದೆ. ಬಡ ಕುಟುಂಬದಲ್ಲಿ ಜನಿಸುವುದರಲ್ಲಿ ನಾಚಿಕೆ ಪಡುವಂಥದ್ದೇನೂ ಇಲ್ಲ.

ಶ್ರೀಮಂತ ಕುಟುಂಬಗಳಲ್ಲಿ ಜನಿಸಿದ ಕ್ರಿಕೆಟ್ ಆಟಗಾರರು ಬಡ ಕುಟುಂಬಗಳಿಂದ ಬಂದ ಆಟಗಾರರ ಜೊತೆ ಬೆರೆಯುವುದು ಕೂಡ ಉತ್ತಮ ಬೆಳವಣಿಗೆ. ಇದು ಅವರು ಜಗತ್ತಿನ ಬಗ್ಗೆ ಹೊಂದಿರುವ ಧೋರಣೆಯನ್ನು ಬದಲಿಸುತ್ತದೆ. ಭಾರತದ ಮಧ್ಯಮ ವರ್ಗದ ನಾವು ದ್ವೀಪಗಳಲ್ಲಿ ಬದುಕುತ್ತೇವೆ. ನಾವು ಶಾಲೆಗೆ ಹೋಗುವ ದಿನಗಳಿಂದ ಆರಂಭಿಸಿ, ನಮಗೆ ಸಮಾನವಾದ ಸಾಮಾಜಿಕ ಸ್ಥಾನಮಾನ ಇರುವವರ ಜೊತೆಯಲ್ಲೇ ಬೆರೆತಿರುತ್ತೇವೆ.
ಟ್ರಾಫಿಕ್‌ ದೀಪಗಳ ಬಳಿ ನಾವು ನಮ್ಮ ಕಾರಿನ ಗಾಜು ಏರಿಸಿ ಭಿಕ್ಷುಕಿಯನ್ನು ದೂರ ಕಳುಹಿಸಬಹುದು. ಬಾಲ ಕಾರ್ಮಿಕರಿಂದ ನಮ್ಮ ದೃಷ್ಟಿಯನ್ನು ಇನ್ನೊಂದೆಡೆ ಹರಿಸಬಹುದು. ಇಂಥದ್ದಕ್ಕೆಲ್ಲ ಮನಸ್ಸನ್ನು ಪೂರ್ತಿಯಾಗಿ ಒಡ್ಡಿಕೊಂಡಿರದ ವಿದೇಶಿಯರು ಇಲ್ಲಿಗೆ ಬಂದಾಗ ಆಘಾತಕ್ಕೆ ಒಳಗಾಗುತ್ತಾರೆ. ಆದರೆ ಇವು ನಮ್ಮನ್ನು ಅಷ್ಟಾಗಿ ಕಾಡುವುದಿಲ್ಲ.

ಖಾಸಗಿ ಶಾಲೆಗಳು ತಮ್ಮಲ್ಲಿ ದೊರೆಯುವ ಸೀಟುಗಳ ಪೈಕಿ ಶೇಕಡ 25ರಷ್ಟನ್ನು ದುರ್ಬಲ ವರ್ಗಗಳ ಮಕ್ಕಳಿಗೆ ಮೀಸಲಿಡಬೇಕಾಗುತ್ತದೆ ಎಂಬ ಕಾರಣಕ್ಕೆ ನಾನು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಚೆನ್ನಾಗಿದೆ ಎಂದು ಹೇಳಿದ್ದೆ. ಆದರೆ ದುರದೃಷ್ಟದ ಸಂಗತಿಯೆಂದರೆ ಈ ಸುಂದರ ಸುಧಾರಣೆ ಹಿಂದೆ ಸರಿಯುತ್ತಿರುವಂತಿದೆ. ಇದರಿಂದಾಗಿ ಬಡ ವರ್ಗಗಳ ಮಕ್ಕಳಿಗೆ ಶ್ರೀಮಂತ ವಿದ್ಯಾರ್ಥಿಗಳ ಜೊತೆಗಿನ ಒಡನಾಟ ಸಿಗದಂತಾಗುತ್ತದೆ. ಹಾಗೆಯೇ, ಶ್ರೀಮಂತ ವರ್ಗಗಳ ಮಕ್ಕಳಿಗೆ ದೇಶದ ವಾಸ್ತವಗಳ ಬಗ್ಗೆ ಅರಿವು ಮೂಡಿಸುವ ಬಡ ವರ್ಗಗಳ ಮಕ್ಕಳ ಸಂಗ ದೊರೆಯದಂತಾಗುತ್ತದೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT