ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಅಪೂರ್ವ ಆತ್ಮಕತೆ

Last Updated 6 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಪ್ರತಿ ಓದಿನಲ್ಲೂ ನನಗೆ ಹೊಸಹೊಸ ಅರ್ಥವನ್ನು ಕೊಡುವ ಕೆಲವು ಕೃತಿಗಳಿವೆ. ಅವು ಬಾಳಿನ ಬಗ್ಗೆ ಕಟ್ಟಿಕೊಡುವ ಮೀಮಾಂಸೆಯ ಹೊಳಹುಗಳು ನನ್ನಾಳಕ್ಕೆ ಇಳಿದು, ಸಂವೇದನೆಯನ್ನು ರೂಪಿಸುತ್ತಾ ಬಂದಿವೆ. ತಕ್ಷಣಕ್ಕೆ ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು~, ಟಾಲ್‌ಸ್ಟಾಯ್‌ನ `ಅನ್ನಾಕರೆನೀನಾ~, ವೈಕಂ ಬಶೀರರ `ಬಾಲ್ಯಕಾಲ ಸಖಿ~, ಲಂಕೇಶರ `ಟೀಕೆಟಿಪ್ಪಣಿ~ಗಳು, ತೇಜಸ್ವಿಯವರ `ಅಬಚೂರಿನ ಪೋಸ್ಟಾಫೀಸು~, ಶಂಬಾ ಅವರ ಕೆಲವು ಸಂಶೋಧನ ಬರಹಗಳು, ಬೇಂದ್ರೆಯವರ `ವಿನಯ ಸಂಕಲನ~, ಬಸವಣ್ಣನ `ವಚನಗಳು~- ಎಂದು ಹೊಳೆಯುತ್ತಿವೆ. ಈ ಪಟ್ಟಿಯಲ್ಲಿ ನವರತ್ನ ರಾಮರಾಯರ `ಕೆಲವು ನೆನಪುಗಳು~ ಕೂಡ ಒಂದು. ಈಚೆಗೆ ಈ ಕೃತಿಯನ್ನು- ಅದೆಷ್ಟನೆಯ ಸಲವೊ- ಓದಿದೆ. ಹುಸಿಗೊಳಿಸದೆ ಹೊಸ ಅನುಭವವನ್ನೇ ಕೊಟ್ಟಿತು.

ಇದರ ಕರ್ತೃ ನವರತ್ನ ರಾಮರಾಯರು (1870-1960) ಮೂಲತಃ ದೇವನಹಳ್ಳಿಯವರು; ಸಿವಿಲ್ ಸರ್ವೀಸ್ ಅಧಿಕಾರಿಯಾಗಿದ್ದ ಇವರು, ನಾಲ್ವಡಿಯವರ ಕಾಲದಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಅಮಲ್ದಾರರಾಗಿ ಕಮಿಷನರರಾಗಿ ಸೇವೆ ಸಲ್ಲಿಸಿದವರು; `ಬೆಂಕಿನವಾಬ~ನೆಂದು ತಮ್ಮ ಕೋಪಕ್ಕೂ ನಿಷ್ಠುರತೆಗೂ ಪ್ರಾಮಾಣಿಕತೆಗೂ ಸ್ವಪ್ರತಿಷ್ಠೆಗೂ ಸಾಹಸಶೀಲತೆಗೂ ಹೆಸರಾಗಿದ್ದ ಇವರಿಗೆ, ಕುಸ್ತಿ-  ಕುದುರೆ ಸವಾರಿ ಹಾಗೂ ಶೂಟಿಂಗ್‌ಗಳಲ್ಲಿ ಪರಿಶ್ರಮವಿತ್ತು; ಸಂಗೀತ ಸಾಹಿತ್ಯದಲ್ಲಿ ಅಭಿರುಚಿಯಿತ್ತು. ರಾಜಾಜಿಯವರ ಖಾಸಾ ಗೆಳೆಯರಾಗಿದ್ದ ರಾಯರು, ಲಂಡನ್ನಿನ (1931) ದುಂಡುಮೇಜಿನ ಪರಿಷತ್ತಿನಲ್ಲಿ, ದಿವಾನ್ ಮಿರ್ಜಾ ಇಸ್ಮಾಯಿಲ್‌ರೊಡನೆ ಮೈಸೂರು ರಾಜ್ಯವನ್ನು ಪ್ರತಿನಿಧಿಸಿದವರು; ಮಾಸ್ತಿಯವರ ಒತ್ತಾಸೆಯ ಮೇರೆಗೆ ಇವರು ತಮ್ಮ ವೃತ್ತಿಜೀವನದ ಅನುಭವಗಳನ್ನು `ಜೀವನ~ ಪತ್ರಿಕೆಗೆ ಬರೆದರು. ಅವೇ ಮುಂದೆ `ಕೆಲವು ನೆನಪುಗಳು~ (1953) ಪುಸ್ತಕವಾಗಿ ಪ್ರಕಟವಾದವು.  

ಈ ಕೃತಿ, 20ನೇ ಶತಮಾನದ ಮೊದಲ ಭಾಗದ ಹಳೇ ಮೈಸೂರಿನ ರಾಜಕೀಯ ಚರಿತ್ರೆಯನ್ನು ಅರಿಯಲು ಯತ್ನಿಸುವವರಿಗೆ ಉಪಯುಕ್ತವಾದ ಆಕರ. ಈ ಕಾರಣದಿಂದ ಇದರೊಂದಿಗೆ ಹೋಲಿಸಬಹುದಾದ ಇನ್ನೊಂದು ಕೃತಿಯೆಂದರೆ, ಕಂಬಿ ಚನ್ನಬಸಯ್ಯನವರು ರಚಿಸಿದ `ಅರಟಾಳ ರುದ್ರಗೌಡರ ಚರಿತ್ರೆ~ (1907).

ರಾಮರಾಯರಿಗಿಂತ ಕೊಂಚ ಹಿರೀಕರಾದ ಅರಟಾಳರು, ಮುಂಬೈ ಕರ್ನಾಟಕದಲ್ಲಿ ಕಲೆಕ್ಟರ್ ಆಗಿದ್ದವರು. ಇವರ ಜೀವನ ಚರಿತ್ರೆಯು 19ನೇ ಶತಮಾನದ ಕಡೇ ಭಾಗದ ಮುಂಬೈ ಕರ್ನಾಟಕದ ಆಡಳಿತ ವ್ಯವಸ್ಥೆಯ ಚಿತ್ರವನ್ನು ಕಟ್ಟಿಕೊಡುತ್ತದೆ. ಎರಡೂ ಕೃತಿಗಳು, ಬ್ರಿಟೀಷರ ಆಳ್ವಿಕೆಯಲ್ಲಿ ಆಧುನಿಕ ಶಿಕ್ಷಣ ಪಡೆದ ಕರ್ನಾಟಕದ ಬಲಿಷ್ಠ ಸಮುದಾಯಗಳು, ಅಧಿಕಾರ ಮತ್ತು ಸಾಮಾಜಿಕ ಸ್ಥಾನಮಾನಕ್ಕಾಗಿ ಮಾಡಿದ ಸಂಘರ್ಷವನ್ನು ದಾಖಲಿಸುತ್ತವೆ. ರಾಮರಾಯರ ಆತ್ಮಕತೆಯಲ್ಲಿ ಈ ಸಂಘರ್ಷ, ತಮಿಳುನಾಡಿನ ಹಾಗೂ ಕರ್ನಾಟಕದ ಬ್ರಾಹ್ಮಣರ ನಡುವಿನದಾದರೆ, ಅರಟಾಳರಲ್ಲಿದು ಲಿಂಗಾಯತ ಮತ್ತು ಬ್ರಾಹ್ಮಣರ ನಡುವಣದ್ದಾಗಿದೆ. ಈ ಸಂಘರ್ಷಗಳು ಐತಿಹಾಸಿಕವಾಗಿದ್ದು, ವಿಜಯನಗರ ಕಾಲದಲ್ಲಿ ಶೈವ-ವೈಷ್ಣವರ, ಮೈಸೂರೊಡೆಯರ ಕಾಲದಲ್ಲಿ ಜೈನ-ವೈಷ್ಣವರ, ಬಹಮನಿ ಮತ್ತು ಆದಿಲಶಾಹಿ ಕಾಲದಲ್ಲಿ ಸ್ಥಳೀಯರ-ಹೊರಗಿನವರ ನಡುವೆ ನಡೆದ ಸಂಘರ್ಷಗಳ ಮುಂದುವರಿಕೆಯಂತೆ ಕೂಡ ತೋರುತ್ತವೆ. ರಾಮರಾಯರು ತಮ್ಮ ಕಾಲದ ಸಂಘರ್ಷಗಳ ಬಗ್ಗೆ ಮಾಡುವ ಟಿಪ್ಪಣಿಯೊಂದು ಹೀಗಿದೆ:

`(ಶೇಷಾದ್ರಿ ಅಯ್ಯರ್ ಕಾಲದಲ್ಲಿ) ಮದರಾಸು ಪ್ರಾಂತ್ಯದ ಎಲ್ಲಾ ಕಡೆಯಿಂದಲೂ ತಮಿಳು ಮಾತನಾಡುವ ಜನಗಳು, ಜಯಿಸಿದ ರಾಜ್ಯಗಳನ್ನು ಪರದಂಡು ನುಗ್ಗುವಂತೆ ಹೊಕ್ಕು, ದೊಡ್ಡವರ ಪೋಷ್ಯವರ್ಗಕ್ಕೆ ದಾಖಲಾಗಿ, ಅವರ ದಯೆಯಿಂದ ನೌಕರಿಯ ಎಲ್ಲಾ ಅಂತಸ್ತುಗಳಲ್ಲೂ ವ್ಯಾಪಿಸಿ ಬೇರೂರಿದರು... ಅವರುಗಳಿಗೆ ವಿದೇಶಿ ಅಧಿಕಾರಿಗಳ ಆಡಳಿತಕ್ಕೆ ಸಿಕ್ಕುಬಿದ್ದು, ಸ್ಥಳೀಯರನ್ನು ಎಷ್ಟು ಹೀನಾಯವಾಗಿ ಕಾಣುತ್ತಿದ್ದರೆಂದು ಚೆನ್ನಾಗಿ ಅನುಭವವಿತ್ತು. ಮದರಾಸಿನವರಿಗೆ ಮೈಸೂರಿನಲ್ಲಿ ಅಧಿಕಾರ ಸ್ಥಾನಗಳು ಸಿಕ್ಕಿದವೋ ಇಲ್ಲವೋ, ಫರಂಗಿ ಕಲೆಕ್ಟರುಗಳಲ್ಲಿ ತಾವು ನೋಡಿದ ದರ್ಪವನ್ನು ವಿಡಂಬಿಸಿ, ಅವರಿಂದ ತಾವು ಅನುಭವಿಸಿದ ತಿರಸ್ಕಾರವನ್ನು ಮೈಸೂರಿನವರಿಗೆ ತೋರಿಸಲು ಯತ್ನ ಮಾಡಿದರು~.

ಮೈಸೂರು ರಾಜಕೀಯ ಚರಿತ್ರೆಯ ದೃಷ್ಟಿಯಿಂದ ಇಲ್ಲಿ ಬರುವ - ದಿವಾನರಾದ ಶೇಷಾದ್ರಿ ಅಯ್ಯರ್, ಪಿ.ವಿ.ಮಾಧವರಾವ್, ಕೃಷ್ಣಮೂರ್ತಿ, ಕಾಂತರಾಜೇ ಅರಸು ಅವರ, ಬ್ರಿಟೀಷ್ ಅಧಿಕಾರಿಗಳ, ಸಂಗೀತಗಾರರ ವ್ಯಕ್ತಿಚಿತ್ರಗಳು- ಮುಖ್ಯವಾಗಿವೆ. ಇವು ಡಿವಿಜಿಯವರ `ಜ್ಞಾಪಕ ಚಿತ್ರಶಾಲೆ~ಯ ಸಂಪುಟಗಳನ್ನು ಸಹ ನೆನಪಿಸುತ್ತವೆ.

ಆದರೆ ಈ ಕೃತಿಯ ಮಹತ್ವ ಇರುವುದು ಈ ಬಗೆಯ ಚಾರಿತ್ರಿಕ ಚಿತ್ರಗಳನ್ನು ಕೊಡುವ ಕಾರಣಕ್ಕಾಗಿ ಮಾತ್ರವಲ್ಲ. ತನ್ನ ಅಪರೂಪದ ಕನ್ನಡ ಗದ್ಯಕ್ಕೆ; ತಾನು ಒಳಗೊಂಡಿರುವ ಜೀವನ ಪ್ರೀತಿ ಮತ್ತು ಸಾಮಾನ್ಯರ ಬಾಳಿನ ಕಥನಕ್ಕೆ. ಇಲ್ಲಿ ಗಣ್ಯರಿಗಿಂತಲೂ ಜೀವಂತವಾಗಿರುವ ಚಿತ್ರಗಳು- ತಂದ್ರೆಲಿಂಗನೆಂಬ ಕಳ್ಳ, ಕೊಲೆಕೇಸಿನ ದೊಡ್ಡಹೈದ, ಅವನ ಧೀರಮಡದಿ, ಪಟೇಲ ದೇವರಸೇಗೌಡ, ತೊರೆಯವರು, ಕಹಳೆಯವರು ಮುಂತಾದ- ಸಾಮಾನ್ಯರವೇ. ವೈಯಕ್ತಿಕ ವಿವರಗಳಿಗಿಂತ, ತನ್ನ ಕಾಲದ ಸಾರ್ವಜನಿಕ ಬದುಕಿನ ಬಗ್ಗೆ ಹೇಳಲು ಲೇಖಕ ಉದ್ಯುಕ್ತನಾಗಿರುವುರಿಂದ, ಸದರಿ ಆತ್ಮಕತೆ ನಾಡಿನ ಕತೆಯೂ ಆಗಿದೆ ಮತ್ತು ಕೃತಿಯ ಈ ಉದ್ದೇಶವು ಅದರ ಭಾಷೆ, ಕಥನಕ್ರಮ ಮತ್ತು ಜೀವನ ದರ್ಶನವನ್ನೂ ರೂಪಿಸಿಬಿಟ್ಟಿದೆ.

ಈ ಕೃತಿಯಲ್ಲಿ ಸ್ಪಾರ್ಕಸ್ ಎಂಬ ಬ್ರಿಟೀಷ್ ಅಧಿಕಾರಿ, ಅವನ ಗ್ರಾಮ ಸರ್ಕೀಟು, ಬೇರೆಬೇರೆ ದಿವಾನರನ್ನು ಲೇಖಕರು ಭೇಟಿ ಮಾಡುವುದು, ಕಳ್ಳರನ್ನು ಹಿಡಿಯುವುದು, ತೊರೆಯರ ಮದುವೆ ಮೆರವಣಿಗೆ-ಹೀಗೆ ಸ್ವಾರಸ್ಯಕರವಾದ ನೂರಾರು ಪ್ರಸಂಗಗಳಿವೆ.
ಲೇಖಕರು ಪೋಲಿಸ್ ಮುಖ್ಯಾಧಿಕಾರಿಯೂ ಆಗಿದ್ದರಿಂದ, ಕಳ್ಳರನ್ನು ಮತ್ತು ಕೊಲೆಗಾರರನ್ನು ತಲಾಶು ಮಾಡುವ ನೆನಪುಗಳಿಗೆ ಪತ್ತೇದಾರಿತನವೂ ಸೇರಿಕೊಂಡಿದೆ. ತಂದ್ರೇಲಿಂಗನ ಪ್ರಕರಣವಂತೂ ಅತ್ಯಂತ ರೋಚಕವಾದ ಪ್ರಸಂಗವಾಗಿದೆ.

ಇಡೀ ಕೃತಿಯ ನಿರೂಪಣೆಯು ವಿನೋದದ ದೃಷ್ಟಿಯಿಂದ ಹುಟ್ಟಿರುವ ಕಾರಣ, ಇಲ್ಲಿನ ಬಹುತೇಕ ಪ್ರಸಂಗಗಳು ರಸಪ್ರಸಂಗಗಳೇ ಆಗಿವೆ. ಉದಾಹರಣೆಗೆ- ಬ್ರಿಟೀಷ್ ಅಧಿಕಾರಿ ಸ್ಥಳೀಯ ಅಮಲ್ದಾರರಿಗೆ ಹರಳೆಣ್ಣೆ ಕುಡಿಸಿದ್ದು, ರಾಣಿವಾಸದವರು ಬಯಲಾಟ ನೋಡುವ ಪ್ರಸಂಗ, ಕಹಳೆಯವನಿಂದ ಅಮಲ್ದಾರರಿಗೆ ಕಾಟ, ನೀರಲ್ಲಿ ಮುಳುಗುತ್ತಿದ್ದ ತನ್ನನ್ನು ಉಳಿಸಿದವನಿಗೆ ಭಕ್ಷೀಸು ಕೊಡಲು ಒದ್ದಾಡುವ ಜಿಪುಣನ ಪ್ರಸಂಗ, ಪೋಲಿಸರಿಂದ ಕೈದಿಗಳು ತಪ್ಪಿಸಿಕೊಳ್ಳುವ ಪ್ರಸಂಗ- ಮುಂತಾದವು. ಇವು ಗೊರೂರರ ಹಳ್ಳಿಯ ಚಿತ್ರಗಳನ್ನು ನೆನಪಿಸುತ್ತವೆ. ಆದರೆ ಇವುಗಳ ಮುಂದೆ ಗೊರೂರರ ಚಿತ್ರಗಳು ನೀರುಮಜ್ಜಿಗೆ. ಜಮಾಬಂದಿ ಕೆಲಸಕ್ಕೆಂದು ಹಳ್ಳಿಗೆ ಬಂದಿದ್ದ ರೆವಿನ್ಯೂ ನೌಕರನೊಬ್ಬ ಹಳ್ಳಿಯ ಹೆಂಗಸೊಬ್ಬಳ ಜತೆ ಸದರಕ್ಕೆ ಯತ್ನಿಸಿದಾಗ, ಆಕೆ ಅವನ ಜುಟ್ಟು ಹಿಡಿದು ಬೀದಿಗೆಳೆದು ತಂದು ಚಚ್ಚುತ್ತ, ಆಡುವ ಮಾತನ್ನು ಗಮನಿಸಬೇಕು: `ಅಯ್ಯೋ ನನ್ನ ಹಳಮಗನೆ? ಇಷ್ಟಕ್ಕೆ ಬಂದ್ಯಾ? ಅಯ್ಯೋ ಕಾಮಾಲೆ ಕೂಸೆ! ನನ್ನ ಒಂದು ಮೊಲೆ ಆಲು ಉಂಡ್ರೆ ಕಟ್ರಿಯಾಗಿ ಸಾಯ್ತಿ- ಅಂತವನು ಕೆಣಕೋಕೆ ಬಂದ್ಯಾ?~.  

ನೆನಪುಗಳ ನಿರೂಪಣೆಗೆ ಇಲ್ಲಿ ಬಳಕೆಯಾಗಿರುವ ಲಘುಧಾಟಿಯು ಬರಹಕ್ಕೆ ಲವಲವಿಕೆಯನ್ನಷ್ಟೇ ಒದಗಿಸಿಲ್ಲ, ಅದು ಇಲ್ಲಿನ ಜೀವನ ಚಿತ್ರಗಳಿಗೆ ಮಾನವೀಯ ಆಯಾಮವನ್ನೂ, ಘಟನೆಗಳಿಗೆ ವಿಮರ್ಶಾತ್ಮಕ ವ್ಯಂಗ್ಯದ ನೋಟವನ್ನೂ ನೀಡಿದೆ.

`ದಿವಾನರು ಕೃಪೆಯಿಟ್ಟು ಯಾವುದಾದರೂ ತಾಲ್ಲೂಕಿನಲ್ಲಿ ಒಂದೆರಡು ದಿನ ತಂಗಿದರೆ, ಆ ತಾಲ್ಲೂಕು ಸುಧಾರಿಸಿಕೊಳ್ಳುವುದಕ್ಕೆ ಒಂದು ತಿಂಗಳು ಬೇಕಾಗುತ್ತಿತ್ತು~ ಎಂಬ ಸಾಲನ್ನು ಗಮನಿಸಬೇಕು. ಕೃತಿಯ ಜೀವಂತಿಕೆಗೆ ಇನ್ನೊಂದು ಕಾರಣ, ಇಲ್ಲಿನ ನಾಟಕೀಯ ಸಂಭಾಷಣೆಗಳು. ಈ ದೃಷ್ಟಿಯಿಂದ ಇಡೀ ಕೃತಿಯನ್ನು ಒಂದು ನಾಟಕ ಅಥವಾ ಕಾದಂಬರಿಯಂತೆ ಸಹ ಓದಬಹುದು. ಹೊಳೆ ದಾಟುವಾಗ ನೀರಿನಲ್ಲಿ ಬಿಮ್ಮನೆ ನಿಂತಿದ್ದ ಒಬ್ಬನ ಜತೆ ಜರುಗುವ ಲೇಖಕರ ಮಾತುಕತೆಯ ಪ್ರಸಂಗವಿದು:
`ಎಲಾ ಅಪ್ಪಾ-ಬಾರೋ, ಅಥವಾ ಹಿಂದಾದರೂ ಹೋಗೋ~ ಅಂತ ಕೂಗಿದೆ.

`ಆಗೋಕಿಲ್ಲ ಬುದ್ಧಿ, ನನಗೆ ಕಣ್ಣೇ ಕಾಣೋಕ್ಕಿಲ್ಲ~ ಅಂದ. `ಯಾಕೋ ಕುರುಡನೇನೊ? ಯಾರನ್ನಾದರೂ ಕರೆದುಕೊಂಡು ಬರಬೇಕಾಗಿತ್ತೋ ಇಲ್ಲವೋ? ಸತ್ತರೆ ಗಿತ್ತರೆ ಏನು ಗತಿ?~ ಅಂದೆ. `ಕುರುಡನಲ್ಲ ಬುದ್ಧಿ, ನಿಮ್ಮ ಪಾದ, ಕುಡಿದು ಬಿಟ್ಟಿವನಿ, ಕಣ್ಣು ಕತ್ಲೆ ಮುಚ್ಚೈತೆ~ ಅಂದ. ನಾನು `ಅಯ್ಯ್ ಬಡ್ಡಿಮಗನೆ. ಅಲ್ಲೇ ಇರು, ಯಾರನ್ನಾದರೂ ಕಳಸ್ತೀನಿ ನಿನ್ನ ಕರಕೊಂಡು ಬರೋಕೆ~ ಅಂತ ನಾನು ಕೊಂಬಿನವನನ್ನು ಕಳಿಸಿ, ಅವನನ್ನು ಹೊಳೆ ಹಾಯಿಸಿ ಮನೆಗೆ ತಲುಪಿಸಿದೆ. 

ಜನರು ತಂತಮ್ಮ ಸಹಜ ಗ್ರಾಮೀಣ ನುಡಿಕಟ್ಟಿನಲ್ಲೇ ಮಾತನಾಡುವ ವಿನ್ಯಾಸದಲ್ಲಿರುವ ಇಲ್ಲಿನ ಸಂಭಾಷಣೆಗಳನ್ನು ನೋಡುವಾಗ, ಜನರ ಮಾತನ್ನು ಸೂಕ್ಷ್ಮವಾಗಿ ಪ್ರೀತಿಯಿಂದ ಆಲಿಸಿದ ಲೇಖಕನಿಗೆ ಮಾತ್ರ ಈ ಜೀವಂತಿಕೆ ಮತ್ತು ನೈಜತೆ ತರಲು ಸಾಧ್ಯವೇನೊ ಅನಿಸುತ್ತದೆ. ತಂಟಲುಮಾರಿ, ಗವುಟು, ಸಿಗುಡು, ಎಣ್ಣ- ಮುಂತಾದ ಈಗ ಬಳಕೆದಪ್ಪಿರುವ ಸಾವಿರಾರು ಶಬ್ದಗಳು ಇಲ್ಲಿ ಬಳಕೆಯಾಗಿವೆ.

ಲೇಖಕರು ರೆವಿನ್ಯೂ ಅಧಿಕಾರಿಯಾಗಿದ್ದ ಕಾರಣದಿಂದಲೋ, ಹೆಚ್ಚಿನ ನೆನಪುಗಳು ಆಡಳಿತ ಜಗತ್ತಿಗೆ ಲಗತ್ತಾದವಾದ್ದರಿಂದಲೋ, ಇಲ್ಲಿನದು ಒಂದು ಬಗೆಯ `ಫಾರಸಿಗನ್ನಡ~. ಆದರೆ ಈ ಫಾರಸಿಗನ್ನಡವು ಅನುಭವಗಳ ನಿರೂಪಣೆಗೆ ಬಳಕೆಯಾಗಿರುವ ಪರಿಯಿಂದ, ಸೃಜನಶೀಲ ರೂಪಾಂತರವನ್ನೇ ಪಡೆದುಕೊಂಡಿದೆ.

ಕನ್ನಡ, ಫಾರಸಿ, ಇಂಗ್ಲಿಷ್ ಬೆರೆತ ಇಲ್ಲಿನ ಭಾಷೆಯು, ಸ್ಥಳೀಯ, ಮೈಸೂರು ಸೀಮೆಯಲ್ಲಿದ್ದ ಫಾರಸಿ ಮತ್ತು ಬ್ರಿಟೀಷ್ ಆಡಳಿತ ಮಾದರಿಗಳ ಕೂಡುಪ್ರಯೋಗದ ಕನ್ನಡಿಯಂತಿದೆ ಕೂಡ. ಇಲ್ಲಿನ ಕನ್ನಡವನ್ನು ಓದುವಾಗ ಅದನ್ನು ಬಳಸಿರುವ ಲೇಖಕನ ಪ್ರತಿಭೆ ಮಾತ್ರವಲ್ಲ, ಕನ್ನಡ ಭಾಷೆಗೇ ಎಂತಹ ಕೆಚ್ಚು ಕೆಸುವು ಇದೆಯಲ್ಲಾ ಎಂದು ಸಂತೋಷವಾಗುವುದು.

`ಬ್ರಿಟೀಷ್ ಸಾರ್ವಭೌಮತ್ವದ ಕಾಲದಲ್ಲೂ ಭಾರತೀಯನ ಸ್ವಾಭಿಮಾನವನ್ನುಳಿಸಿಕೊಂಡು, ನಿರ್ಭಯವಾಗಿ ಅಧಿಕಾರವನ್ನು ನಡೆಸಿದ ಮೈಸೂರಿನ ದಕ್ಷ ಅಧಿಕಾರಿ~ ಎಂಬ ಹೆಸರು ಪಡೆದಿದ್ದ ರಾಮರಾಯರು, ಬ್ರಿಟೀಷರ ಕೈಕೆಳಗೆ ಕೆಲಸ ಮಾಡುತ್ತ ಅನುಭವಿಸಿದ ಮುಜುಗರದ ಮತ್ತು ತೋರಿದ ಪ್ರತಿರೋಧದ ಗಳಿಗೆಗಳನ್ನು ದಾಖಲಿಸುತ್ತಾರೆ. ಅಧಿಕಾರಸ್ಥ ಬ್ರಿಟಿಷರ ಬಗೆಗಿನ ಲೇಖಕರ ಆಗ್ರಹವು, ಬ್ರಿಟಿಷರ ವಿರುದ್ಧ ಹೋರಾಡಿದವರ ಮೆಚ್ಚುಗೆಯಾಗಿ ಕೂಡ ಮಾರ್ಪಡುವುದುಂಟು. ತಮ್ಮೂರಿನವನಾದ ಟಿಪ್ಪುವನ್ನು ಕುರಿತ ರಾಮರಾಯರ ಟಿಪ್ಪಣಿಯಿದು;

`ಶ್ರೀರಂಗಪಟ್ಣದ ಕೋಟೆಯನ್ನೂ ಹಲ್ಲೆಮಾಡಿದ ಫರಂಗಿಗಳ ಕ್ರೋಧೋನ್ಮತ್ತ ಧಾಳಿಯನ್ನೂ, ದ್ರೋಹಿಗಳಿಂದ ವಂಚಿತನಾದ ಟಿಪ್ಪು ಮತ್ತು ಅವನ ವಿರಳ ಪಡೆಯ ನಿರಾಶೆಯಾದ ನಿರರ್ಥಕವಾದ ಧೀರ ಕದನದ ಮರಣಯಾತನೆಯನ್ನೂ ಕಣ್ಣಾರೆ ಕಂಡಂತೆ ಸ್ಪಷ್ಟವಾಗಿ ಭಾವನೆಯನ್ನೂ ನೋಡಿದೆ. ಅವನು ಹುಟ್ಟಿದ ಮನೆಯಿದ್ದ ವಠಾರವನ್ನೂ ಸುದ ನೋಡಿದೆ. ಟಿಪ್ಪುವು ನನ್ನ ಹುಟ್ಟು ಹಗೆಗಳಾದ ಫರಂಗಿಯವರ ಫಿತೂರಿಯಿಂದ ನಾಶವಾದ ಸಾಧು ತುರುಕ... ಈಗಲೂ ಟಿಪ್ಪು ನನ್ನ ಮೆಚ್ಚಿಗೆಯ ಧೀರನೆ, ಫರಂಗಿಯವರು- ಒಬ್ಬಿಬ್ಬರ ಹೊರತು- ರಾಕ್ಷಸರೇ~.

ಇಲ್ಲಿನ `ಒಬ್ಬಿಬ್ಬರು ಸಜ್ಜನ ಫರಂಗಿ~ಯವರಲ್ಲಿ ರಾಮರಾಯರ ಗುರುಗಳಾಗಿದ್ದ ಟೇಕ್‌ಸಾಹೇಬರೂ ಒಬ್ಬರು. ಅವರನ್ನು ಲೇಖಕರು ಬಹಳ ಆದರದಿಂದ ಮತ್ತೆಮತ್ತೆ ನೆನೆಯುತ್ತಾರೆ. ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯದ ಮೇಲೆ ತಮಗಿದ್ದ ಅಸಾಧಾರಣ ಹಿಡಿತದಿಂದ ಖ್ಯಾತರಾಗಿದ್ದ ರಾಯರು, ಬ್ರಿಟೀಷರನ್ನು `ನನ್ನ ಹುಟ್ಟುಹಗೆಗಳು~ ಎಂದು ಕರೆಯುವುದು ಮತ್ತು ವಿದ್ಯೆ ಕಲಿಸಿದ ಬಿಳಿಯರನ್ನು ಗೌರವಿಸುವುದು; `ಆಳುವ ಮಹಾಸ್ವಾಮಿ~ಗಳೆಂದು ಕರೆಯುತ್ತ ಮಹಾರಾಜರ ಮೇಲೆ ಅಸೀಮ ನಿಷ್ಠೆ ತೋರುವುದು, ಅದೇ ಹೊತ್ತಿಗೆ `ನಮ್ಮ ಸರಳ ಹೃದಯದ ದಿಟನಂಬಿಕೆಯ ಜನರ ಭಕ್ತಿಯನ್ನು ಕಂಡರೆ ನನಗೆ ಬಹಳ ಗೌರವ ಮತ್ತು ಪ್ರೇಮ~ ಎಂದು ಹೇಳುವುದು- ವೈರುಧ್ಯವೆಂದು ಮೇಲ್ನೋಟಕ್ಕೆ ತೋರಬಹುದು. ಆದರೆ `ವಿರುದ್ಧ ನಿಲುವುಗಳು ದ್ವಂದ್ವವಿಲ್ಲದೆ ಒಂದೇ ವ್ಯಕ್ತಿತ್ವವಿಲ್ಲದೆ ಸಹಬಾಳುವೆ ಸಹ ಮಾಡಬಲ್ಲವು. ಇಂತಹ ವಿಶಿಷ್ಟ ಮತ್ತು ಸಂಕೀರ್ಣ ವ್ಯಕ್ತಿತ್ವದ ಪ್ರತಿಫಲನವಾಗಿ~ ಇಲ್ಲಿನ ಬರಹ ಮೂಡಿದೆ.

ಆಧ್ಯಾತ್ಮಿಕ ಪ್ರವೃತ್ತಿ ಇರುವ ಕಾರಣದಿಂದಲೋ, ಬಾಳಿನ ಕೊನೇ ಭಾಗದಲ್ಲಿ ನಿಂತು ನೆನಪುಗಳನ್ನು ನಿರೂಪಿಸಿರುವ ಕಾರಣದಿಂದಲೋ, ಬರಹಕ್ಕೆ ಒಂದು ಬಗೆಯ ದಾರ್ಶನಿಕ ಆಯಾಮ ಬಂದೊದಗಿದೆ; ಜತೆಗೆ ಘಟನೆಗಳನ್ನು ದಾಖಲಿಸುವಲ್ಲಿ ತಣ್ಣನೆಯ ನಿರ್ಭಾವುಕತೆಯೂ ನಿರ್ಭಿಡೆಯ ಪ್ರಾಮಾಣಿಕತೆಯೂ ಒದಗಿದೆ. ಆತ್ಮವಿಶ್ವಾಸವುಳ್ಳ ವ್ಯಕ್ತಿಯೊಬ್ಬ ಅಹಂಕಾರದ ಅತಿಗೆ ಹೋಗದಂತೆ ತನ್ನ ಕ್ರಿಯಾಶೀಲತೆಯನ್ನು ಬಣ್ಣಿಸುವಾಗ ಹುಟ್ಟುವ ವಿಚಿತ್ರ ಪ್ರಾಮಾಣಿಕತೆಯಿದು.

ಎಂತಲೇ, ಧಾರ್ಮಿಕ ಮನಸ್ಸಿನ ರಾಮರಾಯರು ಲೇಖಕರು, ಮಾಧ್ವ ಸಿದ್ಧಾಂತದಲ್ಲಿ ಜೀವರುಗಳನ್ನು ತಮೋಯೋಗ್ಯರು ಎಂದು ವಿಂಗಡಿಸಿರುವುದರ ಪ್ರಸ್ತಾಪ ಬಂದಾಗ `(ಅದನ್ನು) ನಾನು ನಂಬಬೇಕೆಂದು ಯತ್ನಪಟ್ಟರೂ ನನ್ನ ಹೃದಯ ನಿರಾಕರಿಸುತ್ತದೆ~ ಎಂದು ಸಹ ಹೇಳಬಲ್ಲರು; ಅಧಿಕಾರ ಬಲದಿಂದ ಕೆಲವರಿಗೆ ಕಾನೂನು ಮೀರಿ ಒಳಿತೆಸಗಿದ್ದನ್ನೂ, ಆಡಳಿತದ ಬಿಗಿ ಸಾಬೀತು ಪಡಿಸಲು ಅಧಿಕಾರವನ್ನು ಎಲ್ಲೆ ಮೀರಿ ಬಳಸಿದ್ದನ್ನೂ ತಪ್ಪೊಪ್ಪಿಗೆ ದನಿಯಲ್ಲಿ ಹೇಳಿಕೊಳ್ಳಬಲ್ಲರು. 

ಆದರೆ ಇಂತಹ `ಪ್ರಾಮಾಣಿಕ~ ನಿರೂಪಣೆಯ ಒಳಗೂ ಇಣುಕುವ ಆ ಕಾಲದ ಸಾಮಾಜಿಕ ವಾಸ್ತವತೆಯ ಚಿತ್ರಗಳು ಹಾಗೂ ಅವನ್ನು ಕುರಿತ ಲೇಖಕರ ನಿಲುವುಗಳು ದಂಗುಬಡಿಸುತ್ತವೆ. ಪರಸ್ತ್ರೀ ಸಂಪರ್ಕ ಇಟ್ಟುಕೊಂಡಿದ್ದ ಒಬ್ಬ ಅಧಿಕಾರಿ, ತನ್ನ ಕಡೆಗಾಲದಲ್ಲಿ ಮಡದಿಯ ಮುಂದೆ ತಪ್ಪೊಪ್ಪಿಕೊಳ್ಳುವಾಗ, ಆಕೆ ಅದನ್ನು ಉದಾರವಾಗಿ ಕ್ಷಮಿಸುವ ಪ್ರಸಂಗವೊಂದು ತಮಾಷೆಯಾಗಿ ಇಲ್ಲಿ ಬರುತ್ತದೆ. ಇದರ ನಿರೂಪಣೆಯ ಬಳಿಕ ಲೇಖಕರು `ಇದು ನಮ್ಮ ತಾಯಿಯವರ, ನಮ್ಮ ಮಹಿಳೆಯರ ಔದಾರ್ಯ ಸದ್ಗುಣ. ಭೂದೇವಿ ಸದೃಶವಾದ ಕ್ಷೇಮಗಳ ದೃಷ್ಟಾಂತರವಾಗಿ ತಿಳಿದ ಇಂಥವರು ಭಾರತಮಾತೆಯ ಯೋಗ್ಯ ಮಕ್ಕಳು, ಇವರುಗಳಿಂದಲೇ ನಮ್ಮ ಸಂಸ್ಕೃತಿ ಧರ್ಮ ಉಳಿದಿರುವುದು~ ಎಂದು ಶರಾ ಬರೆಯುತ್ತಾರೆ! ಅಧಿಕಾರ ನಡೆಸಲು ಆಗ ಅರ್ಹತೆಯೆಂದು ಭಾವಿಸಲಾಗಿದ್ದ ಪುರುಷ ಸಾಹಸೀಗುಣದ ಇನ್ನೊಂದು ಮುಖದಂತೆ ಈ ಶರಾ ಕಾಣುತ್ತದೆ. ಮದರಾಸಿನವರು ಮೈಸೂರಿನವರ ಮೇಲೆ ತೋರುತ್ತಿದ್ದ ದರ್ಪವು ತಪ್ಪೆಂದು ಭಾವಿಸುವ ಲೇಖಕರಿಗೆ, `ತಾಲೂಕು ಕಛೇರಿಯ ಸಿಬ್ಬಂದಿ ಸಾಮಾನ್ಯವಾಗಿ ಬ್ರಾಹ್ಮಣರೇ ಆಗಿರುತ್ತಿದ್ದ~ ವಾಸ್ತವದ ಹಿನ್ನೆಲೆಯಲ್ಲಿ, ಸಮಾಜದ ಬಹುಸಂಖ್ಯಾತ ಸಮುದಾಯಗಳು ಶಿಕ್ಷಣ ಮತ್ತು ಅಧಿಕಾರಗಳಿಂದ ಯಾಕೆ ವಂಚಿತವಾಗಿವೆ ಎಂಬ ಕಳವಳ ಎಲ್ಲೂ ಬಾಧಿಸಿದಂತೆ ತೋರುವುದಿಲ್ಲ; ಆ ಕಾಲದಲ್ಲಿ ನಡೆದ ಶೂದ್ರ ಚಳವಳಿ, ಮಿಲ್ಲರ್ ಆಯೋಗ, ವಿಶ್ವೇಶ್ವರಯ್ಯನವರ ರಾಜೀನಾಮೆ ಪ್ರಕರಣಗಳಂತಹ ಚಾರಿತ್ರಿಕ ಮಹತ್ವದ ವಿದ್ಯಮಾನಗಳ ಬಗ್ಗೆ, ರಾಮರಾಯರಲ್ಲಿ ಗಾಢ ಮೌನವಿದೆ ಎನ್ನುವುದು ಗಮನಾರ್ಹ. ಸನ್ನಿವೇಶದ ಹೊಡೆತಕ್ಕೆ ಸಿಕ್ಕ ಅಸಹಾಯಕರ ಬಡವರ ನೋವಿಗೆ ಮರುಗುವ ತಾಯ್ತನದ ಅನುಕಂಪವೇನೋ ಲೇಖಕರಲ್ಲಿದೆ. ಆದರೆ ಸಾಮಾಜಿಕ ತಾರತಮ್ಯಗಳ ವಿಷಯ ಬಂದಾಗ, ಅವು ನಿಸರ್ಗಸಹಜ ಎಂಬ ಧೋರಣೆಯೂ ಇದ್ದಂತಿದೆ. ಸಾಮಾಜಿಕ ನ್ಯಾಯಪ್ರಜ್ಞೆಯಿಲ್ಲದ ಮಾನವಾನುಕಂಪೆಯ ಪರಿಮಿತಿಯಿದು. ಈ ಹಿನ್ನೆಲೆಯಲ್ಲಿ ಗುಡಿ ಪ್ರವೇಶಿಸುವ ದಲಿತರ ಹಕ್ಕಿಗಾಗಿ ಗಾಂಧಿ, ದಲಿತರ ಸ್ವಾಭಿಮಾನದ ಬದುಕಿಗಾಗಿ ಅಂಬೇಡ್ಕರ್, ಹಿಂದುಳಿದ ಜಾತಿಯವರಿಗೆ ಶಿಕ್ಷಣ-ಅಧಿಕಾರಗಳಲ್ಲಿ ಪಾಲು ಸಿಗವಂತೆ ನಾಲ್ವಡಿಯವರು ಮಾಡಿದ ನಿಷ್ಠುರ ಪ್ರಯತ್ನಗಳು ಚಾರಿತ್ರಿಕವಾಗಿ ಎಷ್ಟು ಕ್ರಾಂತಿಕಾರಕವಾಗಿದ್ದವು ಎಂದು ಹೊಳೆಯುತ್ತದೆ.

ಸಾಮಾಜಿಕ ದೃಷ್ಟಿಕೋನದ ಈ ಪರಿಮಿತಿಗಳಾಚೆ ಈ ಕೃತಿ ಮಹತ್ವದ್ದು ಅನಿಸುವುದು ಇದರೊಳಗಿನ ಜೀವನ ಚಿತ್ರಗಳ ಕಠೋರ ನೈಜತೆಗೆ; ಅವನ್ನು ಉತ್ಪ್ರೇಕ್ಷೆಯಿಲ್ಲದೆ ಚಿತ್ರಿಸುವ ವಾಸ್ತವವಾದಿ ನಿರೂಪಣಾ ಕ್ರಮಕ್ಕೆ. ರಾಮರಾಯರ ಬರಹದ ಪ್ರಖರತೆ ಮತ್ತು ಕಲಾತ್ಮಕತೆಯ ಮುಂದೆ, ಅವರ ಕಿರಿಯ ಸಮಕಾಲೀನ ಅಧಿಕಾರಿಯಾಗಿದ್ದ ಮಾಸ್ತಿಯವರ ಆತ್ಮಕತೆ, ಮಂಕಾಗಿಯೂ ಕೃತಕವಾಗಿಯೂ ಕಾಣುತ್ತದೆ. ಬಹುಶಃ ತಮ್ಮದೊಂದೇ ಕೃತಿಯಿಂದ ಸಾಹಿತ್ಯಚರಿತ್ರೆಯಲ್ಲಿ ಉಳಿದುಹೋಗುವ ಕುವ್ವತ್ತನ್ನು ಸಾಬೀತುಗೊಳಿಸಿದ ಆಧುನಿಕ ಲೇಖಕರಲ್ಲಿ ರಾಮರಾಯರು ಒಬ್ಬರು. ಈಗಲೂ ನನಗೆ ನರಸೀಪುರ, ಚುಂಚನಕಟ್ಟೆ, ಎಡತೊರೆ, ಕಪ್ಪಡಿ ಸೀಮೆಯಲ್ಲಿ ತಿರುಗುವಾಗ, ಇದು ಟಿಪ್ಪುವೋ ಒಡೆಯರೋ ಆಳಿದ ಪ್ರದೇಶವೆಂದು ಅನಿಸುವುದಿಲ್ಲ; `ಕೆಲವು ನೆನಪುಗಳು~ ಕೃತಿಯನ್ನು ಸೃಷ್ಟಿಸಿದ ಪ್ರದೇಶವಲ್ಲವೇ ಎಂದು ಹೊಳೆಯುತ್ತಿರುತ್ತದೆ.

`50 ವರ್ಷಗಳ ಹಿಂದಿನ ನನ್ನ ಜೀವನದ ಒಂದು ಅಂಶವನ್ನೂ ನನ್ನ ಯಾತ್ರೆಯ ಕೆಲವು ಸಹಚರರನ್ನೂ ದೃಶ್ಯಗಳನ್ನೂ ಲಘುವಾಗಿ ಚಿತ್ರಿಸಬೇಕೆಂಬುದು ನನ್ನ ಆಶೆ. ನನಗೆ ಕನ್ನಡದಲ್ಲಿ ಪಾಂಡಿತ್ಯವಿಲ್ಲದಿದ್ದರೂ, ಅದು ನನ್ನ ಮಾತೃಭಾಷೆ. ಅದನ್ನು ಮುಕ್ಕಾಲು ಶತಮಾನ ನನ್ನ ಮನೆಯಲ್ಲಿ, ನನ್ನ ಲೋಕವ್ಯವಹಾರದಲ್ಲಿ, ಶಂಕೆಯಿಲ್ಲದೆ ಉಪಯೋಗಿಸಿ ಗೌರವದಿಂದ ಗೃಹಸ್ಥನಾಗಿ ಬಾಳಿದ್ದೇನೆ. ನಾನು ಆಡುವ ಮಾತನ್ನೇ ಬರೆದರೆ ಸಾಕು; ನಾನು ಹೇಳುವ ಕಥೆಯಲ್ಲಿ ಸ್ವಾರಸ್ಯವಿದ್ದರೆ, ಜನಗಳು ಪದಗಳ ರಿಕ್ತತೆಯನ್ನು ಕ್ಷಮಿಸುವರು~ ಎಂದು ಮುನ್ನುಡಿಯಲ್ಲಿ ಲೇಖಕರು ನಿವೇದಿಸಿಕೊಳ್ಳುವುದುಂಟು. ಆದರೆ ಈ ಸಂಕೋಚಕ್ಕೂ ವಿನಯಕ್ಕೂ ಕಾರಣವೇ ಇಲ್ಲ. ಕನ್ನಡದ ಕಸುವು ಬಿಂಕ ಸೊಗಡುಗಳನ್ನು ಯಾವುದೇ ಶ್ರೇಷ್ಠ ಬರಹಗಾರನಿಗೆ ಕಮ್ಮಿಯಿಲ್ಲದಂತೆ ರಾಮರಾಯರು ಸೂರೆಹೊಡೆದಿರುವರು. ಹೀಗಾಗಿಯೇ ಈ ಆತ್ಮಕತೆ ಕನ್ನಡದ ಶ್ರೇಷ್ಠ ಗದ್ಯಕೃತಿಗಳಲ್ಲಿ ಒಂದಾಗಿದೆ.

`ಈಗಿನ ಹೊಸ ಹೆಪ್ಪಿನ ಗಲಬಿಲಿ ಶಮನವಾದ ಮೇಲೆ ಎಲ್ಲರ ಕ್ಷೇಮಕ್ಕೂ ಸಾಧನವಾದ ಒಂದು ಶಾಂತವಾದ ರಚನೆ ನಿಲ್ಲುತ್ತೆಂದು ನನ್ನ ಆಶಯ, ನಂಬಿಕೆ~ - ಇದು ಕೃತಿಯ ಕೊನೆಯ ವಾಕ್ಯ. ಇಡೀ ಬದುಕನ್ನು ಪರಕೀಯ ಆಳ್ವಿಕೆಯಲ್ಲಿ ಮಹಾರಾಜರಿಗೆ ನಿಷ್ಠವಾಗಿ ಕಳೆದ ಅಧಿಕಾರಿಯೊಬ್ಬರು, ನಾಡಿಗೆ ರಾಜಕೀಯ ಸ್ವಾತಂತ್ರ್ಯವೂ ಪ್ರಜಾಪ್ರಭುತ್ವವೂ ಬಂದ ಹೊಸತರಲ್ಲಿ ಆಡಿದ ಮಾತಿದು. ಕಳೆದೆರಡು ವರ್ಷದಲ್ಲಿ ಕರ್ನಾಟಕದಲ್ಲಿ ನಡೆದ ರಾಜಕೀಯ ವಿದ್ಯಮಾನಗಳನ್ನು ಕಂಡವರು, ಈ ಮಾತಿಗೆ ಏನು ತಾನೇ ಶರಾ ಬರೆಯಬಹುದು?   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT