ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಅವಮಾನದ ಪ್ರಸಂಗ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಾಲೇಜಿಗೆ ಹೊಸದಾಗಿ ಬರುವ ಮೇಷ್ಟ್ರುಗಳಿಗೆ ಒಂದಿಷ್ಟು ಆಟವಾಡಿಸಬೇಕೆಂಬ ಆಸೆ ಕೆಲ ತರಲೆ ವಿದ್ಯಾರ್ಥಿಗಳಿಗೆ ಇದ್ದೇ ಇರುತ್ತದೆ. ಅದವರ ಜನ್ಮಸಿದ್ಧ ಹಕ್ಕು ಕೂಡ. ಮೊದಲ ಸಲ ತರಗತಿಗೆ ಬರುವ ಮೇಷ್ಟ್ರಿಗೆ ಕೈಲಾದಷ್ಟು ಕಿರಿಕಿರಿ ಮಾಡಲೇಬೇಕೆಂದು ಅವರು ಕಾಯುತ್ತಾರೆ. ಇದು  ತಲತಲಾಂತರದಿಂದ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಹೀಗಾಗಿ, ಇದನ್ನು ಬಿಡಿ ಎಂದು ಹೇಳಿದರೂ ಕೆಲ ಹುಡುಗರು ಇದನ್ನಿನ್ನೂ ಬಿಡದೆ ಚಾಲ್ತಿಯಲ್ಲಿಟ್ಟುಕೊಂಡಿದ್ದಾರೆ. ಲೈಟಾಗಿ ಹೊಸ ಮೇಷ್ಟ್ರಿಗೆ ರ್‍ಯಾಗಿಂಗ್ ಮಾಡಬೇಕು ಅನ್ನೋ ಆಸೆ ಅವರಲ್ಲಿ ಇದ್ದೇ ಇರುತ್ತದೆ. ಇದನ್ನು ವಿದ್ಯಾರ್ಥಿಗಳು ಆಟ ಆಡಿಸೋದು ಎನ್ನುತ್ತಾರೆ. ತಮ್ಮ ಗುರುವನ್ನು ವಿದ್ಯಾರ್ಥಿಗಳು ಪರೀಕ್ಷಿಸಿಕೊಳ್ಳುವ ರೀತಿಯೂ ಇದ್ದೀತು. ಈ ಕಾರಣಕ್ಕೆ ಮೊದಲ ಸಲ ತರಗತಿ ಪ್ರವೇಶಿಸುವ ಉಪನ್ಯಾಸಕ ಎಷ್ಟೇ ಅನುಭವಸ್ಥನಾದರೂ ಅವನೊಳಗೊಂದು ಅಳುಕು, ಆತಂಕ ಇದ್ದೇ ಇರುತ್ತದೆ.

ಹೊಸ ಕಾಲೇಜಿಗೆ ಬರುವ ಉಪನ್ಯಾಸಕರು ತಾವು ಹೋಗುತ್ತಿರುವ ಕಾಲೇಜು ಹೇಗಿದೆ, ಅಲ್ಲಿನ ವಿದ್ಯಾರ್ಥಿಗಳ ವರ್ತನೆ ಎಂಥದ್ದು, ಅಲ್ಲಿರುವ ಪ್ರಿನ್ಸಿಪಾಲರ ಸ್ವಭಾವಗಳೇನು, ಅವರ ಗುಣ ಅವಗುಣಗಳೇನು, ಜೊತೆಯಾಗುವ ಸಹೋದ್ಯೋಗಿಗಳ ಚರಿತ್ರೆ ಹೇಗಿದೆ ಎಂಬ ಪೂರ್ವ ಮಾಹಿತಿಗಳನ್ನು ತಿಳಿದುಕೊಂಡೇ ಹೋಗಲು ತವಕಿಸುತ್ತಾರೆ. ಅತ್ತೆ ಮನೆಗೆ ಹೋಗುವ ನವ ವಧು, ಗುಟ್ಟಾಗಿ ಗಂಡನ ಮನೆಯ ಮಾಹಿತಿಯನ್ನು ಮೊದಲೇ ಕಲೆಹಾಕಿಕೊಳ್ಳುವ ರೀತಿಯಂತೆ ಈ ಕಾರ್ಯಾಚರಣೆಯೂ ನಡೆಯುತ್ತದೆ. ಈ ಸಂಗತಿಗಳು ನಾನಲ್ಲಿಗೆ ಹೋದಾಗ ಹೇಗಿರಬೇಕು, ಹೇಗಿರಬಾರದು, ಯಾರನ್ನು ಬುಟ್ಟಿಗೆ ಹಾಕಿಕೊಳ್ಳಬೇಕು, ಯಾರ ತಂಟೆಗೆ ಹೋಗಬಾರದು, ಎಂಬ ಮಾನಸಿಕ ಸಿದ್ಧತೆಗೆ ಅನುಕೂಲ ಮಾಡಿಕೊಡುತ್ತದೆ. ಎಷ್ಟೋ ಸಲ ಈ ಮಾಹಿತಿಗಳನ್ನು ಕೊಡುವ ವ್ಯಕ್ತಿಯೂ, ದಿಕ್ಕು ತಪ್ಪಿಸುವ ಸಾಧ್ಯತೆ ಇರುತ್ತದೆ. ಅವನ ಮೂಗಿನ ನೇರಕ್ಕೆ ಹೇಳಿದ ವಿಷಯಗಳನ್ನೇ ನಂಬಿ ಹೋಗಿ ಬುದ್ಧಿ ಕಲಿತ ಪ್ರಸಂಗಗಳೂ ಆಗಿ ಹೋಗಿವೆ. ಹೀರೊ ಎಂದು ಆತ ಬಿಂಬಿಸಿದ ಉಪನ್ಯಾಸಕ ಹತ್ತಿರ ಹೋದಾಗ ಜೀರೊ ಆಗಿ ಕಂಡಿದ್ದಾನೆ. ವಿಲನ್ ಎಂದು ಚಿತ್ರಿಸಿದ ವ್ಯಕ್ತಿ ಹೃದಯವಂತನಾಗಿ  ಗೋಚರನಾಗಿದ್ದಾನೆ. ಇನ್ನು ವಿದ್ಯಾರ್ಥಿಗಳ ಬಗ್ಗೆ, ಓಹೋ ಆ ಕಾಲೇಜೇನ್ರಿ. ಅಲ್ಲಿನವು ಪಕ್ಕಾ ಪೋಲಿ ಮುಂಡೇವು ಕಣ್ರಿ. ಯಾವುದಕ್ಕೂ ನೀವು ಮಾತ್ರ ಹುಶಾರಾಗಿರ್ರಿ. ಈ ಹಿಂದೆ ಪಾಠ ಮಾಡೋ ಮೇಷ್ಟ್ರಿಗೆ ಚಾಕು ಹಾಕಿ ಕೋರ್ಟಿಗೆ ಇವತ್ತಿಗೂ ಅಲೆದಾಡುವ ಪರೋಡಿ ಹುಡುಗರಿದ್ದಾರೆ ಅಲ್ಲಿ ಎಂದು ಎಚ್ಚರಿಸಿದ ಕಾಲೇಜಿನಲ್ಲಿ ಅತ್ಯಂತ ಸೌಜನ್ಯದ ಮಕ್ಕಳನ್ನು ನಾನು ನೋಡಿದ್ದೇನೆ. ಲೋಕ ಯಾವತ್ತೂ ಹಾಗೇನೆ. ನಾವು ನೋಡುವ ರೀತಿಯಲ್ಲಿರುತ್ತದೆ. ನಾವು ನಡೆದುಕೊಂಡ ಹಾಗೆ ಪರಿವರ್ತನೆಯಾಗುತ್ತದೆ.

ಎಲ್ಲರೂ ಹೀಗೆ ಅವರಿವರ ಹೇಳಿಕೆಗಳನ್ನೇ ನಂಬಿಕೊಂಡು ಹೊಸ ಕಾಲೇಜುಗಳಿಗೆ ಹೋಗುತ್ತಾರೆ ಎಂದು ಕರಾರುವಕ್ಕಾಗಿ ಹೇಳಲಿಕ್ಕಾಗುವುದಿಲ್ಲ. ತಕ್ಕಮಟ್ಟಿಗೆ ಅಷ್ಟಿಷ್ಟು ವಿಚಾರಿಸಿಕೊಳ್ಳುವುದು ಮನುಷ್ಯ ಸಹಜ ಗುಣ. ಆದರೆ, ಒಂದಂತೂ ನಿಜ. ವಿದ್ಯಾರ್ಥಿಗಳ ಬಗ್ಗೆ ಅವರ ನಡವಳಿಕೆ ಹಾಗೂ ಶೈಕ್ಷಣಿಕ ಗಟ್ಟಿತನದ ಬಗ್ಗೆ ಜರೂರಾಗಿ ವಿಚಾರಿಸಿಕೊಂಡೇ ಹೋಗುತ್ತಾರೆ. ಅದರಲ್ಲೂ, ಯಜಮಾನ ಪ್ರಿನ್ಸಿಪಾಲನ ಬಗ್ಗೆಯಂತೂ ಇಂಚಿಂಚು ಮಾಹಿತಿಯನ್ನೂ ಹುಡುಕಿ ನೆಕ್ಕಿಕೊಂಡೇ ಹೋಗುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಇಲಾಖೆಗಳಲ್ಲಿ, ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಹೀಗೆ ಮೊದಲೇ ಮಾಹಿತಿ ಕಲೆಹಾಕಿಕೊಳ್ಳುವ ರೂಢಿ ಇರಬಹುದೇನೋ? ಇದ್ದರೂ ಆಶ್ಚರ್ಯವಲ್ಲ. ಇನ್ನು ಗಂಡು ಹೆಣ್ಣುಗಳ ಸಂಬಂಧ ಕುದುರಿಸಿಕೊಳ್ಳುವ ಜನರಂತೂ ಈ ತಿಳಿದುಕೊಳ್ಳುವ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಾರೆ. ಅಂದರೆ, ಈ ಲೋಕದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಗೂಢಚರ್ಯೆ ಕೆಲಸವನ್ನು ಮಾಡುತ್ತಲೇ ಇರುತ್ತಾರೆ ಅಂದಂತಾಯಿತಲ್ಲ. ಈ ವಿಷಯದಲ್ಲಿ ಹೆಚ್ಚು ಪಳಗಿದವರು ಹೆಂಡತಿಯರೇ ಇರಬೇಕು. ಅವರು ಪಕ್ಕಾ ಸಿ.ಐ.ಡಿ. ತರಬೇತಿ ಪಡೆದವರು. ಅವರು ಅಷ್ಟು ಕುಖ್ಯಾತರಾಗಲು ಕೆಲವೆಡೆ ಗಂಡಂದಿರೇ ಸ್ವಯಂ ಕಾರಣರಾದರೆ, ಬಹಳಷ್ಟು ಕಡೆ ಈಗಿನ ಟಿ.ವಿ. ಧಾರಾವಾಹಿಗಳ ಚಿತ್ರಕಥೆಗಳೂ ಒಂದು ಕಾರಣವಿದ್ದೀತು.

ಬೇರೆಯವರಿಗಿದ್ದಂತೆ; ತಮ್ಮ ಹೊಸ ಗುರುವಿನ ಮಾಹಿತಿ ಮೊದಲೇ ಪಡೆಯುವ ಸೌಲಭ್ಯವನ್ನು ನಮ್ಮ ವಿದ್ಯಾರ್ಥಿಗಳಿಗೆ ನಾವು ಕಲ್ಪಿಸಿಲ್ಲ. ಹೀಗಾಗಿ ಅವರು ಹೊಸ ಮೇಷ್ಟ್ರಿಗೆ ಸಣ್ಣಗೆ ಸತಾಯಿಸುವುದರ ಮೂಲಕ, ತಲೆಹರಟೆ, ಕಿತಾಪತಿ ಮಾಡುವ ಮೂಲಕ ಮಾಡಿಕೊಳ್ಳ ಬಯಸುತ್ತಾರೆ. ನಾವೆಲ್ಲಾ ಪಿ.ಯು.ಸಿ ಓದುತ್ತಿದ್ದಾಗ ಇಂಗ್ಲಿಷಿಗೊಬ್ಬರು ಹೊಸ ಉಪನ್ಯಾಸಕರು ಬಂದರು. ಅವರ ಕೆಲಸ ಕಾಯಂ ಆಗಿರಲಿಲ್ಲ. ಅದು ಖಾಸಗಿ ಅನುದಾನಿತ ಕಾಲೇಜು. ಆಡಳಿತ ಮಂಡಳಿಯವರು ನೀವು ಒಂದಷ್ಟು ದಿನ ನಮ್ಮಲ್ಲಿ ಪಾಠ ಮಾಡಿ. ನಮ್ಮ ಮಕ್ಕಳಿಗೆ ನೀವು, ನಿಮ್ಮ ಪಾಠ ಹಿಡಿಸಿದರೆ ಆಮೇಲೆ ನಿಮ್ಮನ್ನು ಪರ್ಮನೆಂಟಾಗಿ ತೆಗೆದುಕೊಳ್ಳುತ್ತೀವಿ. ಅಲ್ಲೀ ತನಕ ನೀವು ಹಂಗಾಮಿಯಾಗಿ ದುಡಿಯಬೇಕಾಗುತ್ತದೆ ಎಂಬ ಶರತ್ತನ್ನು ಹೇರಿ ನಮ್ಮ ತರಗತಿಗೆ ಕಳಿಸಿದ್ದರು. ಆ ಹೊಸ ಉಪನ್ಯಾಸಕರ ಹಣೆಬರಹ ನಿರ್ಧರಿಸುವವರು ನಾವೇ ಎಂಬುದು  ನಮಗೂ ಗೊತ್ತಿರಲಿಲ್ಲ. ಗಲಾಟೆ ಸೆಕ್ಷನ್ ಅಂದ್ರೆ, ಆ ಕನ್ನಡ ಮೀಡಿಯಂ ಆರ್ಟ್ಸ್. ಅಲ್ಲಿಗೆ ಅವರನ್ನು ಕಳಿಸಿ ನೋಡಿ. ಅವರ ನಿಜವಾದ ಕೆಪಾಸಿಟಿ ಗೊತ್ತಾಗುತ್ತೆ ಎಂದು ಆಡಳಿತ ಮಂಡಳಿವರು ನಮ್ಮ ಗುಣಗಾನ ಮಾಡಿಯೇ ಕಳಿಸಿದ್ದರು.

ನಮ್ಮ ತರಗತಿಗೆ ಬಂದ ಪ್ರಿನ್ಸಿಪಾಲರು ಅವರನ್ನು ನಮಗೆಲ್ಲಾ ಪರಿಚಯ ಮಾಡಿಸಿ ಇವರಿಗೆ ಸಂಪೂರ್ಣ ಸಹಕಾರ ಕೊಡಬೇಕು. ಹೊಸಬರೆಂದು ಗಲಾಟೆ, ತಂಟೆ, ತಕರಾರು ಮಾಡಬಾರದು ಎಂದು ಖಡಕ್ಕಾಗಿ ತಾಕೀತು ಮಾಡಿದರು. ಪ್ರಿನ್ಸಿಪಾಲರು ಅಷ್ಟೇ ಹೇಳಿ ಸುಮ್ಮನೆ ಹೋಗಿದ್ದರೆ ಎಲ್ಲಾ ನೆಟ್ಟಗಾಗುತ್ತಿತ್ತೇನೋ. ಇನ್ನೂ ಮುಂದುವರೆದು ಹೊಸಬರೆಂದು ಗಲಾಟೆ ಮಾಡಬೇಡಿ. ನೀವು ಮೊದಲೇ ತರಲೆಗಳೆಂದು ಹೆಸರುವಾಸಿ. ಕೋತಿಗಳ ಥರ ಆಡಿ ಕ್ಯಾತೆ ತೆಗೆದರೆ ಒಬ್ಬೊಬ್ಬನ ಚರ್ಮ ಸುಲೀತೀನಿ ಹುಶಾರ್ ಎಂದು ಹೇಳಿ ನಾವು ಮರೆತಿದ್ದ ನಮ್ಮ ಸುಗುಣಗಳನ್ನು ಜ್ಞಾಪಿಸಿಬಿಟ್ಟರು. ಮೇಲಾಗಿ ಕೀಟಲೆ ಮಾಡಬೇಡಿ ಅನ್ನುವ ಮಾತನ್ನೇ ಮತ್ತೆ ಮತ್ತೆ ಐದಾರು ಸಲ ಒತ್ತೊತ್ತಿ ಹೇಳಿದರು. ಅದು ನಮಗೆಲ್ಲಾ ಕೀಟಲೆ, ಕಿತಾಪತಿ ಮಾಡಿ ಮಾಡಿ ಎನ್ನುವಂತೆ ಕೇಳಿಸಿತು. ಮರೆತಿದ್ದ ಸದ್ಗುಣಿಗಳಿಗೆ ಲೈಟ್ ರ್‍್ಯಾಗಿಂಗ್‌ನ ನೆನಪನ್ನ ಅವರೇ ತಿವಿದುಕೊಟ್ಟಂತಾಯಿತು.

ಆ ಸುಡುಗಾಡು ಪಿ.ಯು.ಸಿ. ವಯಸ್ಸೇ ಅಂಥದ್ದು. ಗುರುಗಳು, ಮನೆಯವರು, ಹಿರಿಯರು ಹೇಳಿದ್ದೆಲ್ಲಾ ತಿರುವು ಮುರುವಾಗಿ ಗೋಚರಿಸುತ್ತದೆ. ಮಾಡಬೇಡಿ ಅಂದದ್ದು ಮಾಡಿ ಎಂಬಂತೆ ಕೇಳಿಸುತ್ತದೆ. ಮಾಡಬೇಡಿ, ಹೋಗಬೇಡಿ, ನೋಡಬೇಡಿ ಎಂಬ ಈ ಬೇಡಿಯ ಮಾತುಗಳು ಸ್ಪಷ್ಟ ಉಲ್ಲಂಘನೆಗೆ ಪ್ರಚೋದಿಸುತ್ತವೆ. ಹೆಚ್ಚು ಅಂಡರ್ ಲೈನ್ ಮಾಡಿ ಒಂದೇ ಮಾತನ್ನು ಒತ್ತಿ ಹೇಳಿದರೆ ಯಾಕೆ ಮಾಡಬಾರದೆಂಬ ಹಟ ಹುಟ್ಟುತ್ತದೆ. ಏತಿ ಎಂದರೆ ಪ್ರೇತಿ ಎನ್ನುವ ವಯಸ್ಸದು. ಹೀಗಾಗಿ, ನಮ್ಮ ಪ್ರಿನ್ಸಿಪಾಲರು ಕೊಟ್ಟ ಸೂಚನೆಗಳನ್ನು ನಾವು ಮಗುಚಿ ಸ್ವೀಕರಿಸಿದೆವು.

ಹೊಸ ಗುರುಗಳಿಗೆ ಹುಡುಗರ ಮುಖ ನೋಡಲು ಭಯ. ಹೀಗಾಗಿ ಮೊದಲು ಪುಸ್ತಕದಲ್ಲಿ ಮುಳುಗಿದರು. ಅವರ ಮೌನಕ್ಕೆ ನಮ್ಮ ಗುಜುಗುಜು ಶುರುವಾಯಿತು. ಸಣ್ಣಗೆ ಗಲಾಟೆ, ಕೀಟಲೆಯ ಮಾತುಗಳು ಮೂಡತೊಡಗಿದವು. ನಮ್ಮನ್ನು ತೆಪ್ಪಗಾಗಿಸಲು ಅವರು ಡೆಸ್ಟರನ್ನು ಡಯಾಸಿಗೆ ನಾಲ್ಕೈದು ಸಲ ಬಡಿದು ಸೈಲೆಂಟ್ ಎಂದರು. ಅದಕ್ಕುತ್ತರವಾಗಿ ಹುಡುಗರೆಲ್ಲ ಒಮ್ಮೆ ಹೋ... ಎಂದರು. ಸುಮ್ಮನೆ ಕೂತ್ಕೋಬೇಕು ಎಂದು ಎಚ್ಚರಿಸಿದರು. ಅದಕ್ಕೂ ಯಾರೂ ಕೇರ್ ಮಾಡಲಿಲ್ಲ. ಕ್ಲಾಸು ತನ್ನ ಹಿಡಿತದಿಂದ ಜಾರುತ್ತಿದೆ ಎಂದರಿತ ಅವರು ನೇರಾ ನೇರಾ ಇಂಗ್ಲಿಷಿನಲ್ಲಿ ಮಾತಾಡತೊಡಗಿದರು. ಆಗ ಸದ್ದು ಒಂದಿಷ್ಟು ಅಡಗಿತು.

ಕನ್ನಡ ಮೀಡಿಯಂ ಹುಡುಗರಿಗೆ ಹೆದರಿಕೆ ಮೂಡಿಸಲು ಇಂಗ್ಲಿಷ್ ಉಪನ್ಯಾಸಕರು ಸಾಮಾನ್ಯವಾಗಿ ಬಳಸುವ ಸರಳ ಉಪಾಯವಿದು. ಇಂಗ್ಲಿಷ್‌ನಲ್ಲಿ ಪಾಠ ಶುರುವಾದರೆ ಕನ್ನಡದ ಹುಡುಗರು ಗರಬಡಿದಂತೆ ತಣ್ಣಗಾಗುತ್ತಾರೆ. ಮೇಷ್ಟ್ರು ಬಲು ಸ್ಟ್ಯಾಂಡರ್ಡ್‌ ಇದಾರೆ ಕಣೋ ಅಂದುಕೊಳ್ಳುತ್ತ್ತಾರೆ. ಅರ್ಧಗಂಟೆ ಏನೇನೋ ಹೇಳಿದರು. ಕೊನೆಗೆ ಅರ್ಥವಾಯಿತಾ? ಎಂದರು. ತರಲೆ ಗಂಗರಾಜು ಎದ್ದು ನಿಂತು ನಾವು ಕನ್ನಡ ಮೀಡಿಯಂನೋರು ಸಾರ್. ನಮಗೆ ನಿಮ್ ಇಂಗ್ಲಿಷ್ ಗೊತ್ತಾಗಲ್ಲ. ಕನ್ನಡದಲ್ಲಿ ಹೇಳಿ ಎಂದ. ಅದಕ್ಕವರು ಓನ್ಲೀ ಇಂಗ್ಲಿಷ್ ಎಂದರು. ಮತ್ತದಕ್ಕೆ ಹುಡುಗರ ಒಂದೇ ಕೋರಸ್ ಹೋ... ಎಂಬ ಅಬ್ಬರ. ನಮ್ಮ ಕಿರಿಚಾಟಕ್ಕೆ ಹೆದರಿ ಸುಮ್ಮನೆ ದಂಗು ಬಡಿದು ಅವರು ಥರಥರ ನಡುಗುತ್ತಾ ನಿಂತು ಬಿಟ್ಟರು.

ಅದೇನೋ ಕನ್ನಡ ಮಾಧ್ಯಮದ ನಮ್ಮ ಹುಡುಗರಿಗೆ ಇವತ್ತಿಗೂ ಇಂಗ್ಲಿಷಿನಲ್ಲಿ ಒಳ್ಳೆ ಲೆಕ್ಚರರ್ ಯಾರ್ರಯ್ಯ ಎಂದು ಕೇಳಿದರೆ ಇಂಗ್ಲಿಷ್ ಪಾಠವನ್ನು ಪೂರಾ ಕನ್ನಡದಲ್ಲಿ ಹೇಳೋರು ಸಾರ್ ಅಂತಾನೆ ಹೇಳ್ತಾರೆ. ನಮ್ಮ ಪರಿಸ್ಥಿತಿಯೂ ಆಗ ಹೀಗೆ ಇತ್ತು.

ನಮ್ಮ ಗಲಾಟೆಯನ್ನು ಕಂಟ್ರೋಲ್ ಮಾಡುವುದು ಹೇಗೆಂದು ತೋಚದ ಹೊಸ ಉಪನ್ಯಾಸಕರು ಪಾಠ ಓದುತ್ತಾ, ತರಗತಿ ನಡುವೆ ಓಡಾಡತೊಡಗಿದರು. ಆಗ ಕೆಲ ಹುಡುಗರು ತಮ್ಮ ತಮ್ಮ ಇಂಕು ಪೆನ್ನುಗಳ ತೆಗೆದು ಅವರ ಬೆನ್ನಿನ ಅಂಗಿ ಮೇಲೆ ಸಿಡಿಯುವಂತೆ ಇಂಕನ್ನು ಕೊಡವತೊಡಗಿದರು. ಇದ್ಯಾವುದರ ಪರಿವೇ ಇಲ್ಲದೆ ಅವರು ತಮ್ಮ ಪಾಡಿಗೆ ತಾವು ಪಾಠ ಓದುತ್ತಾ ಶತಪಥ ತಿರುಗುತ್ತಿದ್ದರು. ಸಿಕ್ಕಿದ್ದೇ ಛಾನ್ಸೆಂದು ಹುಡುಗರು ನೀಲಿ, ಕೆಂಪು, ಶಾಹಿಗಳ ಚಿತ್ತಾರವನ್ನು ಅವರ ಬೆನ್ನಿನ ಮೇಲೆ ಮೂಡಿಸಿ ಬಿಟ್ಟರು. ಆಶ್ಚರ್ಯವೆಂದರೆ; ಈ ಪುಣ್ಯದ ಕೆಲಸವನ್ನು ಮೊದಲು ಉದ್ಘಾಟಿಸಿದ್ದೇ ಹುಡುಗಿಯರು. ಹೀಗಾಗಿ ಹುಡುಗರು ಫುಲ್ ಜೋಷ್‌ಗೆ ಇಳಿದು ತಮ್ಮ ಪೆನ್ನುಗಳ ಮಸಿ ಖಾಲಿಯಾಗುವ ತನಕ ಝಾಡಿಸಿಬಿಟ್ಟರು. ಸಾರ್‌ಗೆ ಈ ಸಂಗತಿ ನಿಧಾನವಾಗಿ ತಿಳಿಯಿತು. ಒಮ್ಮೆ  ತಿರುಗಿ ತಮ್ಮ ಬೆನ್ನು ನೋಡಿಕೊಂಡರು. ಸಿಟ್ಟಿನಿಂದ ಅವಡು ಗಚ್ಚಿದರು. ಅವಮಾನಗೊಂಡ ಅವರ ಕಣ್ಣುಗಳಿಂದ ನೀರು ಫಳ್ ಎಂದು ಚಿಮ್ಮಿ ಬಂತು. ಪಾಠ ನಿಲ್ಲಿಸಿ ಒಮ್ಮೆ ನಮಗೆ ಕೈ ಮುಗಿದರು. ಅವರ ಮುಖದಲ್ಲಿ ನೋವು, ಹತಾಷೆ ಎದ್ದು ಕಾಣುತ್ತಿತ್ತು. ಏನೋ ಮಾತಾಡಲು ಬಾಯಿ ತೆರೆದು ಅದನ್ನೂ ಹೇಳಲಾಗದೆ ಪುಸ್ತಕ ಮುಚ್ಚಿ ಹೋರಟೇ ಹೋದರು. ಆಮೇಲವರು ಮತ್ತೆಂದೂ ನಮ್ಮ ತರಗತಿಗೆ ಬರಲೇ ಇಲ್ಲ.

ಒಂದೆರಡು ದಿನಗಳ ನಂತರ ಗೊತ್ತಾಗಿದ್ದೇನೆಂದರೆ ಆಡಳಿತ ಮಂಡಳಿಯವರು, ಪ್ರಿನ್ಸಿಪಾಲರು ಸೇರಿ ಅವರನ್ನು ಅನರ್ಹರೆಂದು ಭಾವಿಸಿ ಕೆಲಸದಿಂದ ತೆಗೆದು ಹಾಕಿದರಂತೆ. ಆ ಮಾತು ಕೇಳಿದ ಮೇಲೆ ನಮಗವರ ಮೇಲೆ ಮಮತೆ, ಕರುಣೆಗಳು ಉಕ್ಕಿ ಬಂದವು. ನಾವು ಅವರನ್ನು ಅರ್ಥ ಮಾಡಿಕೊಳ್ಳಲಿಲ್ಲ. ಪಾಠ ಮಾಡಲೂ ಅವಕಾಶ ಕೊಡಲಿಲ್ಲ. ವಿನಾಕಾರಣ ಗೋಳಾಡಿಸಿದೆವು. ನಮ್ಮ ಅವಿವೇಕಿ ಕೀಟಲೆಯಿಂದ ಅವರಿಗೆ ಸಿಗುತ್ತಿದ್ದ ಒಂದು ಕೆಲಸಕ್ಕೂ ಕಲ್ಲು ಹಾಕಿದೆವು. ತುಂಬು ಬಡತನದಲ್ಲಿ ಹಳ್ಳಿಯ ಪರಿಸರದಲ್ಲಿ ಓದಿದ ಅವರಿಗೆ ಈ ಕೆಲಸದ ಅಗತ್ಯ ತುಂಬಾ ಇತ್ತೆಂದು ನಮ್ಮ ಹುಡುಗು ಬುದ್ಧಿಗೆ ನಂತರ ತಿಳಿಯಿತು.

ಜೀವನದಲ್ಲಿ ಮತ್ತೊಬ್ಬರ ಪರಿಸ್ಥಿತಿ ತಿಳಿಯದೆ, ಅವರ ಸಂಕಷ್ಟ ಅರಿಯದೆ, ನಾವು ಹುಡುಗಾಟದಿಂದ ನಡೆದುಕೊಳ್ಳುತ್ತೇವೆ. ಎಷ್ಟೋ ಸಲ ನಮ್ಮ ಸಣ್ಣ ಅವಿವೇಕತನ, ಕೆಟ್ಟ ಉಡಾಫೆ ಇನ್ನೊಬ್ಬರಿಗೆ ತಂದೊಡ್ಡುವ ಅನಾಹುತ ಎಂಥದ್ದು ಎಂಬ ಸಣ್ಣ ಪರಿವೂ ನಮಗಿರುವುದಿಲ್ಲ. ಅವರನ್ನು ನೋಯಿಸಿದ, ಅವಮಾನಿಸಿದ ಪ್ರಸಂಗ ಇಂದಿಗೂ ನನ್ನ ಕಣ್ಣಲ್ಲಿ ಪಶ್ಚಾತ್ತಾಪದ ಕಣ್ಣೀರು ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT