ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಒಳ್ಳೆಯ ಆರಂಭ ಕೊನೆಗೊಳ್ಳಬಾರದು...

Last Updated 29 ಏಪ್ರಿಲ್ 2017, 20:20 IST
ಅಕ್ಷರ ಗಾತ್ರ

ನಮ್ಮ ಜನರೇ ಹಾಗೆ. ಅವರು ಯಾವಾಗ ಹೇಗೆ  ತಿರುಗಿ ಬೀಳುತ್ತಾರೆ ಎಂದು ಹೇಳುವುದು ಕಷ್ಟ. ಅವರು ಏನೂ ಗೊತ್ತಿಲ್ಲದ ಮಳ್ಳರ ಹಾಗೆ  ಇರುತ್ತಾರೆ. ಕೊಡುವಾಗ ಕೈ ತುಂಬ ಕೊಡುತ್ತಾರೆ. ಅದನ್ನು ತೆಗೆದುಕೊಳ್ಳುವವರಿಗೆ ಅರ್ಹತೆ ಇಲ್ಲದೇ ಇದ್ದರೂ ಒಂದು ಅವಕಾಶ ಎಂದು ಕೊಡುತ್ತಾರೆ.

ಒಂದು ಸಾರಿ ಬೇಡ ಎಂದು ಅನಿಸಿದರೆ ನೇರವಾಗಿ ಕಸದ ಬುಟ್ಟಿಗೇ ಬಿಸಾಕಿ ಬಿಡುತ್ತಾರೆ. ಮತ ಹಾಕುವ ವಿಚಾರದಲ್ಲಿ ಭಾರತೀಯರ ವಿವೇಕಕ್ಕೆ ಸಾಟಿ ಸಿಗುವುದು ಅಪರೂಪ.

ಇದೆಲ್ಲ ಆಗಿ ಬಹಳ ದಿನಗಳೇನೂ ಆಗಿಲ್ಲ. ದೆಹಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಸಿಕ್ಕ, ನಿಜವಾದ ಅರ್ಥದ, ದಿಗ್ವಿಜಯ ನಮ್ಮ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಜನರು ಎರಡೂ ಕೈಗಳಿಂದ ಆ ಪಾರ್ಟಿಯನ್ನು ಹರಸಿದ್ದರು. 70 ಸ್ಥಾನಗಳ ಪೈಕಿ 67ರಲ್ಲಿ ಎಎಪಿ ಗೆದ್ದಿತ್ತು.  ಗೆಲುವು ಅಂದರೆ ಅದು. ಅದು ಎದುರಾಳಿಗಳನ್ನು ನುಚ್ಚು ನೂರು ಮಾಡಿತ್ತು.

ಅದಕ್ಕಿಂತ ಕೆಲವೇ ತಿಂಗಳ ಹಿಂದೆ ಇಡೀ ದೇಶವನ್ನೇ ಗೆದ್ದಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಅರವಿಂದ ಕೇಜ್ರಿವಾಲ್‌ ಎಂಬ ಹೊಸ ‘ರಾಜಕೀಯ ಅವತಾರ’ದ ಎದುರು, ದೂಳಿಪಟವಾಗಿತ್ತು. ‘ದೇಶವನ್ನು ಮೋದಿಯವರು ಆಳಲಿ, ನಮ್ಮ ದೆಹಲಿಗೆ ನಮ್ಮ ಹಾಗೆ ಇರುವ ಕೇಜ್ರಿವಾಲ್‌ ಅವರೇ ಇರಲಿ’ ಎಂದು ಜನರು ಬಯಸಿದ್ದರು.

ಅವರಿಗೆ ತಮ್ಮ ನೆರೆಹೊರೆಯ ಸಮಸ್ಯೆಗಳನ್ನು ಬಗೆಹರಿಸಲು ಕೇಜ್ರಿವಾಲ್‌ ಅವರಂಥ ಸರಳ ಮನುಷ್ಯ ಬೇಕಾಗಿತ್ತು. ಜನರ ನಿರೀಕ್ಷೆಯ ಹಾಗೆಯೇ ಕೇಜ್ರಿವಾಲ್‌ ಅವರ ಆರಂಭ ಚೆನ್ನಾಗಿತ್ತು. ಜನರಿಗೆ ಏನು ಬೇಕೋ ಅದನ್ನೆಲ್ಲ ಅವರು ಮಾಡಲು ಆರಂಭಿಸಿದರು.

ಆದರೆ, ಬಹುಬೇಗ ನಿರಾಸೆಯ ಕಾರ್ಮೋಡಗಳೂ ದೆಹಲಿ ಮೇಲೆ ಕವಿಯತೊಡಗಿದುವು. ಅದು ಕೇಜ್ರಿವಾಲ್‌ ಅವರ ಸ್ವಭಾವದ ಸಮಸ್ಯೆಯೋ, ಅಥವಾ ಅವರ ಸುತ್ತಲಿರುವವರ ಸಮಸ್ಯೆಯೋ ಅಥವಾ ಭಾರತೀಯ ರಾಜಕಾರಣದಲ್ಲಿನ ಪರ್ಯಾಯದ ಸಮಸ್ಯೆಯೋ ಅರ್ಥವಾಗುವುದಿಲ್ಲ; ದೆಹಲಿ ಸರ್ಕಾರ ರಚನೆಯಾದ ಆರಂಭದಲ್ಲಿಯೇ ಅಪಸ್ವರಗಳು ಶುರುವಾದುವು.

ಕೇಜ್ರಿವಾಲ್‌ ಅವರ ಅಕ್ಕಪಕ್ಕ ಇದ್ದ ಯೋಗೇಂದ್ರ ಯಾದವ್‌ ಮತ್ತು ಪ್ರಶಾಂತ್‌ ಭೂಷಣ್‌ ಅವರು ಲೆಕ್ಕ ಕೇಳಲು ಶುರು ಮಾಡಿದರು. ಅದರಲ್ಲೇನೂ ತಪ್ಪು ಇರಲಿಲ್ಲ. ಲೆಕ್ಕ ಕೊಡುವುದು ಎಂದರೆ ಉತ್ತರದಾಯಿ ಆಗಿರುವುದು ಎಂದು ಅರ್ಥ. ಅದು ಹೊರಗಿನವರು ಕೇಳಿದ ಲೆಕ್ಕ ಆಗಿರಲಿಲ್ಲ, ಒಳಗಿನವರೇ ಕೇಳಿದ ಲೆಕ್ಕವಾಗಿತ್ತು. ಆದರೆ, ಅದು ಕೇಜ್ರಿವಾಲ್‌ ಅವರಿಗೆ ಇಷ್ಟವಾಗಲಿಲ್ಲ.

ಯಾದವ್‌ ಮತ್ತು ಭೂಷಣ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿದರು. ಅವರ ಉಚ್ಚಾಟನೆ ಹೇಗಿತ್ತು ಎಂದರೆ ಅಷ್ಟು ಸುಲಭವಾಗಿ ಈಶ್ವರಪ್ಪ ಅವರನ್ನು ಪಕ್ಷದಿಂದ ಹೊರಗೆ ಹಾಕಿದರೆ ಎಷ್ಟು ಚೆನ್ನ ಎಂದು ಯಡಿಯೂರಪ್ಪನವರು ಆಶಿಸುವ ಹಾಗೆ ಇತ್ತು!

ಪ್ರಶಾಂತ್‌ ಭೂಷಣ್‌ ಮತ್ತು ಯೋಗೇಂದ್ರ ಯಾದವ್‌ ಅವರು ಪಕ್ಷದ ಆತ್ಮದಂತೆ  ಇದ್ದರು, ಆತ್ಮಸಾಕ್ಷಿಯಂತೆ ಇದ್ದರು. ಅವರನ್ನು ಹೊರಗೆ ಹಾಕುವ ಮೂಲಕ ತಮ್ಮ ಆತ್ಮಸಾಕ್ಷಿಯನ್ನೇ ಕೇಜ್ರಿವಾಲ್‌ ಸಾಯಿಸಿಬಿಟ್ಟರು. ನಂತರ ಅವರ ಸುತ್ತ ಸುಳ್ಳು ಪದವಿ ಪ್ರಮಾಣ ಪತ್ರ ಹೊಂದಿದವರು, ಹೆಂಡತಿಯನ್ನು ಹೊಡೆಯುವವರು ಮತ್ತು ಏಕಕಾಲದಲ್ಲಿ ಹಲವು ಹೆಣ್ಣುಮಕ್ಕಳ ಜೊತೆಗೆ ಅಶ್ಲೀಲ ಭಂಗಿಯಲ್ಲಿ ಇರುವವರು (ಅವರೆಲ್ಲರೂ ಕೇಜ್ರಿವಾಲ್‌ ಸಂಪುಟದಲ್ಲಿ ಇದ್ದರು) ಉಳಿದರು.

ಕೇಜ್ರಿವಾಲ್‌ ಮತ್ತು ಅವರ ಜೊತೆಗೆ ಇದ್ದವರು ಉಳಿದ ಎಲ್ಲ ರಾಜಕೀಯ ಪಕ್ಷಗಳಲ್ಲಿ ಇದ್ದವರ  ಹಾಗೆ ಕಾಲಿಗೆ ಮಣ್ಣು ಹತ್ತಿದವರೇ ಆಗಿದ್ದರು ಎಂದು ತಿಳಿಯಲು ಬಹಳ ದಿನಗಳೇನೂ ಕಳೆಯಬೇಕಾಗಲಿಲ್ಲ. ಪ್ರಶಾಂತ್‌ ಭೂಷಣ್‌ ಅವರು ವಿಧಾನಸಭೆ ಚುನಾವಣೆಗಿಂತ ಮುಂಚೆ ಇದನ್ನೇ ಹೇಳಿದ್ದರು : ‘ಸಿಕ್ಕ ಸಿಕ್ಕವರಿಗೆ ಟಿಕೆಟ್‌ ಕೊಡುವುದು ಬೇಡ, ಅವರ ಹಿನ್ನೆಲೆ ನೋಡಿ ಕೊಡೋಣ’ ಎಂದು.

ಚುನಾವಣೆ ಆದ ಮೇಲೆ ಮತ್ತೆ ಪ್ರಶಾಂತ್‌ ಹೇಳಿದರು : ‘ಚುನಾವಣೆಗಾಗಿ ಬಂದ ದೇಣಿಗೆ ಎಷ್ಟು ಖರ್ಚಾಯಿತು, ಎಷ್ಟು ಉಳಿಯಿತು ಎಂದು ಜನರಿಗೆ ಲೆಕ್ಕ ಕೊಡೋಣ. ಎರಡು ಕೋಟಿ ರೂಪಾಯಿ ದೇಣಿಗೆಯ ಮೂಲ ಸಂಶಯಾಸ್ಪದವಾಗಿದೆ. ಆ ಮೂಲ ಯಾವುದು ಎಂದು ಬಹಿರಂಗ ಮಾಡಬೇಕು’ ಎಂದು.

ಯೋಗೇಂದ್ರ ಯಾದವ್ ಒಬ್ಬ ಸಿದ್ಧಾಂತಿ. ಆಳವಾದ ರಾಜಕೀಯ ತಿಳಿವಳಿಕೆಯುಳ್ಳವರು. ಚುನಾವಣೆ ವಿಶ್ಲೇಷಣೆಯಲ್ಲಿ ಎತ್ತಿದ ಕೈ. ಎಎಪಿ ಕಟ್ಟುವಾಗ ಅದು ಬರೀ ಬಿಜೆಪಿ ಅಥವಾ ಕಾಂಗ್ರೆಸ್‌ ವಿರೋಧಿ ಪಕ್ಷವಾಗಿ ಬೆಳೆಯಬೇಕು ಎಂದು ಅವರು ಅಂದುಕೊಂಡವರಾಗಿರಲಿಲ್ಲ. ಅದು ‘ವ್ಯವಸ್ಥೆ’ಯ ವಿರೋಧಿ ರಾಜಕಾರಣ ಮಾಡಬೇಕು ಎಂದು ಅವರು ಬಯಸಿದ್ದರು.

‘ಚುನಾವಣೆಯಲ್ಲಿ ಸಿಗುವ ಯಶಸ್ಸಿಗಿಂತ ಹಾಲಿ ಆಡಳಿತ ವಿಧಾನದಲ್ಲಿ ಮಾಡುವ ಬದಲಾವಣೆ ದೊಡ್ಡದು, ಏಕೆಂದರೆ ಆ ಮೂಲಕ ಜನರ ಜೀವನ ಮಟ್ಟದಲ್ಲಿ ಸುಧಾರಣೆ ಆಗುತ್ತದೆ’ ಎಂದು ಅವರು ನಂಬಿದ್ದರು. ಯಾದವ್‌ ಅವರಿಗೆ ಎಎಪಿಗೆ ಇರುವ ಸೀಮಿತ ಶಕ್ತಿಯ ಅರಿವು ಇತ್ತು. ಮತ್ತು ಆ ಸೀಮಿತ ಶಕ್ತಿಯನ್ನು ವ್ಯರ್ಥ ವಿವಾದಗಳಲ್ಲಿ ವ್ಯಯ ಮಾಡಬಾರದು ಎಂದೂ ಅವರಿಗೆ ಗೊತ್ತಿತ್ತು.

ಆದರೆ, ಕೇಜ್ರಿವಾಲ್‌ ಬೇರೆ ರೀತಿಯಲ್ಲಿಯೇ ವಿಚಾರ ಮಾಡುತ್ತಿದ್ದರು.  ತಾವು ಪ್ರಧಾನಿ ಮೋದಿ ಅವರಿಗೆ ಪ್ರತಿ ನಾಯಕ ಎಂದು ಅವರು ಭ್ರಮಿಸಲು ಆರಂಭಿಸಿದರು.  ಮೋದಿ ಅವರನ್ನು ಕೆಣಕುವ, ಹಂಗಿಸುವ ಅಥವಾ ಅಣಕಿಸುವ ಟ್ವೀಟುಗಳಲ್ಲಿ ಸುಖ ಕಾಣತೊಡಗಿದರು.

ಕೇಜ್ರಿವಾಲ್‌ ಅವರು ಒಂದು ವಿಷಯ ತಿಳಿದುಕೊಳ್ಳಬೇಕಿತ್ತು. ಅವರು ದೆಹಲಿ ಗದ್ದುಗೆಗೆ ಬರುವಾಗ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿದ್ದರು ಮತ್ತು ಗದ್ದುಗೆ ಹಿಡಿಯುವ ಬಿಜೆಪಿ ಕನಸನ್ನು ಛಿದ್ರ ಗೊಳಿಸಿದ್ದರು. ಅಂದರೆ ಎರಡೂ ಸ್ಥಾಪಿತ ಪಕ್ಷಗಳು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಎಎಪಿಯನ್ನು ಮುಗಿಸಬೇಕು ಎಂದು ಸದಾ ಹೊಂಚು ಹಾಕುತ್ತ ಇರುತ್ತವೆ ಎಂಬುದು ಅವರಿಗೆ ತಿಳಿದಿರಬೇಕಿತ್ತು.

ಅವರು ದೆಹಲಿಯಲ್ಲಿ ತಮ್ಮ ಅಧಿಕಾರವನ್ನು ಭದ್ರ ಮಾಡಲು ಏನು ಮಾಡಬೇಕೋ ಅದನ್ನು ಮಾಡಬೇಕಿತ್ತು. ಅದಕ್ಕಿಂತ ಮುಖ್ಯವಾಗಿ ತಾವು ಅಧಿಕಾರಕ್ಕೆ ಬರಲು ಕಾರಣವಾದ, ತಾವಾಗಿಯೇ ತಮ್ಮ ಆಟೊಗಳ ಹಿಂಬದಿಯಲ್ಲಿ ಪ್ರಚಾರ ಸಾಮಗ್ರಿ ಅಂಟಿಸಿಕೊಂಡು ಕುಣಿದಾಡಿದ ಸಾವಿರಾರು ಆಟೊವಾಲಾಗಳಂಥ ಬಡಬಗ್ಗರ ಒಳಿತಿಗೆ ಏನು ಮಾಡಬೇಕು ಎಂದು ಯೋಚಿಸಬೇಕಿತ್ತು.

ಆದರೆ, ಕೇಜ್ರಿವಾಲ್‌ ಅವರಿಗೆ ಪಕ್ಕದ  ಪಂಜಾಬ್‌ ರಾಜ್ಯದ ಗದ್ದುಗೆಯ ಕನಸು ಬಿತ್ತು. ದೂರದ ಗೋವಾ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಹೇಗೆ ಎಂದು ಅವರು ಲೆಕ್ಕ ಶುರು ಮಾಡಿದರು. ಪಂಜಾಬ್‌ ಮತ್ತು ಗೋವಾದಲ್ಲಿ ಗೆದ್ದಿದ್ದರೆ ಅವರು ಅಲ್ಲಿಂದ ನೇರವಾಗಿ ಗುಜರಾತ್‌ ರಾಜ್ಯಕ್ಕೆ ದಂಡಯಾತ್ರೆ ಹೊರಡುವವರು ಇದ್ದರು. ಹಾಗೆ ನೋಡಿದರೆ ಅವರ ಮೊದಲ ಲಕ್ಷ್ಯ ಗುಜರಾತ್‌ ರಾಜ್ಯವೇ ಆಗಿತ್ತು.

ಗುಜರಾತಿನಲ್ಲಿ ಅಧಿಕಾರ ಹಿಡಿಯುವ ಮೂಲಕವೇ ನರೇಂದ್ರ ಮೋದಿ ಅವರ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಬೇಕು ಎಂದೂ ಅವರು ಕನಸಿದ್ದರು. ಕೇಜ್ರಿವಾಲ್‌ ಅವರೇನು ತಮ್ಮ ಕನಸುಗಳನ್ನು ಕದ್ದು ಮುಚ್ಚಿ ಇಟ್ಟುಕೊಂಡಿರಲಿಲ್ಲ. ಇವರು ಹೀಗೆ ತಂತ್ರ ರೂಪಿಸುತ್ತ ಇದ್ದರೆ ವಿರೋಧಿಗಳೇನು ಬೆಣ್ಣೆ ತಿನ್ನುತ್ತ ಸುಮ್ಮನೆ ಇರುತ್ತಾರೆಯೇ? ದೆಹಲಿಯ ಕೆಂಪು ಕೋಟೆಯ ಎದುರೇ ಕೇಜ್ರಿವಾಲ್‌ ಅವರನ್ನು ಚಿತ್‌  ಬೀಳಿಸಿದರೆ ಆಯಿತು ಎಂದು ನಿರ್ಧರಿಸಿದರು. ಅದನ್ನೇ ಮಾಡಿಬಿಟ್ಟರು.

ಪಂಜಾಬ್‌ ಮತ್ತು ಗೋವಾ ರಾಜ್ಯಗಳಲ್ಲಿ ಎಎಪಿ ಕನಸು ಭಗ್ನವಾಯಿತು ಮಾತ್ರವಲ್ಲ ದೆಹಲಿಯ ಒಂದು ಉಪಚುನಾವಣೆಯಲ್ಲಿ ಅದರ ಅಭ್ಯರ್ಥಿ ಠೇವಣಿ ಕಳೆದುಕೊಂಡರು. ಬಿಜೆಪಿಯವರಿಗೆ ಉತ್ತರ ಪ್ರದೇಶದ ಗೆಲುವಿನಷ್ಟೇ ದೆಹಲಿಯ ರಾಜೌರಿ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಠೇವಣಿ ಕಳೆದುಕೊಂಡುದೂ ಸಂಭ್ರಮ ತಂದಿತ್ತು. ಅದಾಗಿ ಬಹಳ ದಿನಗಳೇನೂ ಆಗಿಲ್ಲ.

ಈಗ ದೆಹಲಿಯ ಎಲ್ಲ ಮೂರೂ ಮಹಾನಗರಪಾಲಿಕೆಗಳಲ್ಲಿ ಅಧಿಕಾರ ಹಿಡಿಯುವ ಎಎಪಿ ಕನಸು ಧ್ವಂಸವಾಗಿದೆ. ಅಲ್ಲಿ ಮೂರೂ ಕಡೆ ಅಧಿಕಾರದಲ್ಲಿ ಇದ್ದ ಬಿಜೆಪಿ ಬಹಳ ಒಳ್ಳೆಯ ಆಡಳಿತವನ್ನೇನೂ ಕೊಟ್ಟಿರಲಿಲ್ಲ. ಭ್ರಷ್ಟಾಚಾರ ಮೇರೆ ಮೀರಿತ್ತು. ಆದರೆ, ಬಿಜೆಪಿಯವರು ಜಾಣತನ ಮಾಡಿ ಭ್ರಷ್ಟರಿಗೆ ಟಿಕೆಟ್‌ ತಪ್ಪಿಸಿ ಹೊಸ ಮುಖಗಳನ್ನು ಕಣಕ್ಕೆ ಇಳಿಸಿದರು. ಜನರು ಎಎಪಿಗಿಂತ ಬಿಜೆಪಿಯೇ ವಾಸಿ ಎಂದು ಭಾವಿಸಿದರು. ಅವರಿಗೇ ಅಧಿಕಾರ ಕೊಟ್ಟರು.

ಉತ್ತಮ ಆಡಳಿತಕ್ಕೆ ಬೇಕಾದ ವ್ಯವಧಾನ, ಏಕಾಗ್ರತೆ ಮತ್ತು ಬದ್ಧತೆ ಕೇಜ್ರಿವಾಲ್‌ ಅವರಿಗೆ ಇಲ್ಲ ಎಂದು ಜನರಿಗೆ ಅನಿಸುತ್ತ ಇರಬಹುದು. ಜನರು ಬಹುಬೇಗ ಒಬ್ಬರ ಸುತ್ತ ಕನಸು ಕಟ್ಟಿಕೊಳ್ಳುತ್ತಾರೆ. ಮತ್ತು ಅಷ್ಟೇ ಬೇಗ ಅವರಿಗೆ ಭ್ರಮ ನಿರಸನವೂ ಆಗಿಬಿಡುತ್ತದೆ. ರೂಢಿಗತ ರಾಜಕಾರಣಕ್ಕೆ ತಾವು ಒಂದು ಸಣ್ಣ ಪರ್ಯಾಯ ಎಂದು ಜನರಿಗೆ ಅನಿಸದ ಹಾಗೆ ಸ್ವತಃ ಕೇಜ್ರಿವಾಲ್‌ ಅವರು ನಡೆದುಕೊಂಡರು.

ಅವರು ತಮ್ಮ ಸರ್ಕಾರಕ್ಕೆ ಒಂದು ವರ್ಷ ತುಂಬಿದಾಗ ತಮ್ಮ ಸಾಧನೆಗಳನ್ನು ಬಣ್ಣಿಸಲು ತಮಿಳುನಾಡು, ಪುದಚೇರಿಯಂಥ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪತ್ರಿಕೆಗಳಿಗೆ ತಮಿಳು ಭಾಷೆಯಲ್ಲಿ ಜಾಹೀರಾತು ಕೊಟ್ಟರು. ಅಲ್ಲಿ ಎಎಪಿಗೆ ಯಾವ ನೆಲೆಯೂ ಇಲ್ಲ. ಇಂಥ ಜಾಹೀರಾತಿಗಾಗಿ ಅವರು ಒಟ್ಟು ₹114 ಕೋಟಿ ಖರ್ಚು ಮಾಡಿದರು.

ಕಾಂಗ್ರೆಸ್ಸಿಗರು ಕೆಟ್ಟವರು ಎಂದು ನಾವು ಎಷ್ಟು ಅಂದುಕೊಂಡರೂ ಅವರು ಕೇಜ್ರಿವಾಲ್‌ ಅವರಷ್ಟು ಸಂಕೋಚ ಕಳೆದುಕೊಂಡವರು ಆಗಿರಲಿಲ್ಲ. ಏಕೆಂದರೆ ಅವರು ದೆಹಲಿಯಲ್ಲಿ ಆಡಳಿತ ಮಾಡುತ್ತಿದ್ದಾಗ ಇಂಥ ವಾರ್ಷಿಕ ಜಾಹೀರಾತಿಗಾಗಿ ಕೇವಲ ₹25 ಕೋಟಿ ಖರ್ಚು ಮಾಡಿದ್ದರು. ಸರ್ಕಾರದ ಸಾಧನೆಗಳ ಜಾಹೀರಾತು ಕೊಡಲು ಯಾರೂ ತಮ್ಮ ಮನೆಯ ಹಣ ಖರ್ಚು ಮಾಡಲು ಆಗುವುದಿಲ್ಲ. ಆದರೆ, ವೈಯಕ್ತಿಕವಾಗಿ ತಮ್ಮ ವಿರುದ್ಧ ಹಾಕಿದ ಮಾನಹಾನಿ ಪ್ರಕರಣದ ಕಾನೂನು ಖರ್ಚುಗಳನ್ನು ಕೇಜ್ರಿವಾಲ್‌ ಅವರು ಸರ್ಕಾರದ ಮೇಲೆಯೇ ಹಾಕಿದರು.

ಆ ಮೊತ್ತ ಕಡಿಮೆಯೇನೂ ಆಗಿರಲಿಲ್ಲ. ಕೋಟಿಗಟ್ಟಲೆ ಇತ್ತು. ಇದು ಯಾವ ನ್ಯಾಯ? ಅವರ ವಿರುದ್ಧದ ದಾವೆಯ ವೆಚ್ಚವನ್ನು ಜನರ ತೆರಿಗೆ ಹಣವೇಕೆ ಭರಿಸಬೇಕು ಎಂಬುದು ಅತ್ಯಂತ ಸಹಜ ಪ್ರಶ್ನೆಯಾಗಿತ್ತು. ಕೇಜ್ರಿವಾಲ್ ರಾಜಕೀಯಕ್ಕೆ ಬಂದು ಎರಡು ಮೂರು ವರ್ಷಗಳಷ್ಟೇ ಆಗಿವೆ. ಆದರೆ, ರಾಜಕೀಯದಲ್ಲಿ ಅನೇಕ ವರ್ಷ ಮಣ್ಣು ಹೊತ್ತಿರುವ ಎದುರಾಳಿ ನಾಯಕರ ವಿರುದ್ಧ ಅವರು ಆರೋಪಗಳನ್ನು ಮಾಡುವಾಗ ಅದನ್ನು ಸಾಬೀತು ಮಾಡಲು ತಮಗೆ ಸಾಧ್ಯವೇ ಹಾಗೂ ಅದಕ್ಕೆ ಸಂಬಂಧಪಟ್ಟ ದಾಖಲೆಗಳು ತಮ್ಮ ಬಳಿ ಇವೆಯೇ ಎಂದು ಯೋಚಿಸಬೇಕಿತ್ತು. 

ಈಗ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿಯವರು ಬಹಳ ಯೋಚನೆ ಮಾಡಿಯೇ ಕೇಜ್ರಿವಾಲ್‌ ವಿರುದ್ದ ಮಾನಹಾನಿ ದಾವೆ ಹೂಡಿದಂತೆ ಕಾಣುತ್ತದೆ. ಸೋತರೆ ಕೇಜ್ರಿವಾಲ್‌ ಅವರಿಗೆ ಭಾರಿ ಮುಖಭಂಗವಾಗುತ್ತದೆ. ಜೇಟ್ಲಿ ಕೇಳಿರುವ ಹತ್ತು ಕೋಟಿ ರೂಪಾಯಿ ಪರಿಹಾರವನ್ನು ಅವರು ಎಲ್ಲಿಂದ ಕೊಡುತ್ತಾರೆ?

ಅಂದರೆ ಕೇಜ್ರಿವಾಲ್‌ ಅವರು ಮತ್ತೆ ಮತ್ತೆ ಮುಖಭಂಗವಾಗುವ ಸಂಗತಿಗಳಿಗೆ ತೆಕ್ಕೆ ಬೀಳುತ್ತಿದ್ದಾರೆ ಎಂದು ಅನಿಸುತ್ತದೆ. ಈಗ ಅವರು ಮತದಾನಕ್ಕೆ ಬಳಸುವ ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಸಾಚಾತನದ ಬಗೆಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅವರ  ಈ ಹೊಸ ವರಸೆ ನೋಡಿದರೆ ಎಎಪಿಯ ಸೋಲು ಅವರ ಜಂಘಾಬಲವನ್ನು ಉಡುಗಿಸಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. 

2015ರಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳು ತಮ್ಮ ಪಕ್ಷಕ್ಕೆ ಬಂದಾಗಲೂ ಇದೇ ಇವಿಎಂಗಳು ಇದ್ದುವು; ಆಗಲೂ ಇದೇ ಚುನಾವಣೆ ಆಯೋಗ ಇತ್ತು ಎಂಬುದನ್ನು ಕೇಜ್ರಿವಾಲ್‌ ಮರೆಯಬಾರದಿತ್ತು. ಬಿಜೆಪಿಯವರು ಎವಿಎಂಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದಾಗಿದ್ದರೆ ಪಂಜಾಬಿನಲ್ಲಿ ಏಕೆ ಸೋಲಬೇಕಿತ್ತು? ನಂಜನಗೂಡು, ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ ಏಕೆ ಗೆಲ್ಲುತ್ತಿತ್ತು?

ನಮ್ಮ ಚುನಾವಣೆ ಆಯೋಗ ಈಗಿನ ವಿಶ್ವಾಸಾರ್ಹತೆ ಗಳಿಸಲು ಬಹಳ ದೂರ ನಡೆದುಕೊಂಡು ಬಂದಿದೆ. ಮತ್ತು ರಾಜಕೀಯ ಅಧಿಕಾರದ ಜೊತೆಗೆ ಸಾಕಷ್ಟು ಸೆಣಸಿದೆ. ಕೆಲವೇ ವರ್ಷಗಳ ಹಿಂದೆ ಬಿಹಾರದಂಥ ರಾಜ್ಯಗಳಲ್ಲಿ ಚುನಾವಣೆ ಬಂತು ಎಂದರೆ ಗೂಂಡಾಗಳು ಮುಂಚೂಣಿಗೆ ಬಂದು ಬಿಡುತ್ತಿದ್ದರು.

ಮತಗಟ್ಟೆಗಳ ಮುಂದೆ ಬಂದೂಕು, ಭರ್ಚಿ ಇಟ್ಟುಕೊಂಡು ನಿಂತು ಯಾರಿಗೂ ಮತ ಹಾಕಲು ಅವಕಾಶ ಕೊಡುತ್ತಿರಲಿಲ್ಲ. ಈಗ ಅವರು ನವರಂಧ್ರಗಳನ್ನು ಮುಚ್ಚಿಕೊಂಡು ತಲೆತಗ್ಗಿಸಿ ನಿಲ್ಲುವಂಥ ‘ಪ್ರಭುತ್ವ’ವನ್ನು ಆಯೋಗ ನೆಲೆಗೊಳಿಸಿ ಬಹಳ ವರ್ಷಗಳೇ ಆಯಿತು. ನಮ್ಮ ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಚುನಾವಣೆ ಆಯೋಗದ ಪಾತ್ರ ಬಹಳ ದೊಡ್ಡದು ಎಂಬುದನ್ನು ನಾವು ಮರೆಯಬಾರದು.

ಕೇಜ್ರಿವಾಲ್‌ ಅವರು ಬಹಳಷ್ಟು ಯೋಚನೆ ಮಾಡಿ ಇವಿಎಂಗಳ ದುರ್ಬಳಕೆ ಸಾಧ್ಯತೆ ಕುರಿತು ಮಾತನಾಡಬೇಕಿತ್ತು. ಮತ್ತು ಅವರು ತಮ್ಮ ಪಕ್ಷದ ದಯನೀಯ ಸೋಲಿಗೆ ತಮ್ಮೊಳಗೇ ಕಾರಣಗಳನ್ನು ಹುಡುಕಬೇಕಿತ್ತು. ಅವರಿಗೆ ಸಹಸ್ರಾರು ಕಾರಣಗಳು ಸಿಗುತ್ತಿದ್ದುವೋ ಏನೋ!

‘ಈಗಿನ ಜನಾದೇಶಕ್ಕೆ ಮಣಿಯುತ್ತೇವೆ ಮತ್ತು ಮತ್ತೆ ಅವಕಾಶ ಕೇಳಿ ನಿಮ್ಮ ಮುಂದೆ ಬರುತ್ತೇವೆ’ ಎಂದು ಅವರು ನಮ್ರವಾಗಿ ಹೇಳಬೇಕಿತ್ತು. ವೃತ್ತಿಪರ ರಾಜಕಾರಣಿಗಳಿಂದ ಕೇಜ್ರಿವಾಲ್‌ ಕಲಿಯುವುದು ಬಹಳ ಇದೆ. ವೃತ್ತಿ ರಾಜಕಾರಣಿಗಳು ಸೋಲನ್ನು ಬಹುಬೇಗ ಪ್ರಾಂಜಲವಾಗಿ ಒಪ್ಪಿಕೊಳ್ಳುತ್ತಾರೆ ಮತ್ತು ಇನ್ನೊಂದು ಚುನಾವಣೆಗೆ ಸಿದ್ಧವಾಗುತ್ತಾರೆ.

ಕೇಜ್ರಿವಾಲ್‌ ಅವರು ಈಗ ಸೋತಿರಬಹುದು. ಆದರೆ, ಅವರು ಅಪ್ರಸ್ತುತ ಆಗಬಾರದು. ಏಕೆಂದರೆ ಅವರು, ಎರಡು ಬಲಿಷ್ಠ ರಾಜಕೀಯ ಪಕ್ಷಗಳ ‘ಶಕ್ತಿ ರಾಜಕಾರಣ’ದ ವಿರುದ್ಧ ಸೆಡ್ಡು ಹೊಡೆದು ಅಧಿಕಾರಕ್ಕೆ ಬಂದವರು. ಅಂದರೆ ಹಣ ಬಲದ, ತೋಳ್ಬಲದ ರಾಜಕೀಯದ ಎದುರು ನಮ್ಮಂತೆಯೇ ಇರುವ ಒಬ್ಬ ಸಾಮಾನ್ಯ ಮನುಷ್ಯ ಅಧಿಕಾರ ಹಿಡಿಯಬಹುದು ಎಂದು ತೋರಿಸಿಕೊಟ್ಟವರು. ಅವರ ಗೆಲುವಿನಲ್ಲಿ ಶ್ರೀಸಾಮಾನ್ಯನ ಸಣ್ಣಪುಟ್ಟ ಆಸೆಗಳ ಗೆಲುವು ಇತ್ತು. ಈಗ ಎಎಪಿ ಸೋಲಿನಿಂದ ಅಂಥ ಆಸೆಗಳಿಗೂ ಸೋಲಾಗಿದೆ.

ಅದರ ಹೊಣೆ ಕೇಜ್ರಿವಾಲ್‌ ಅವರೇ ಹೊತ್ತು ಕೊಳ್ಳಬೇಕು. ಅವರು ಏನು ತಿದ್ದುಪಡಿ ಮಾಡಿಕೊಳ್ಳಬೇಕೋ ಅದನ್ನು ಮಾಡಿಕೊಳ್ಳಬೇಕು. ಪ್ರಧಾನವಾಗಿ, ಎರಡು ದೊಡ್ಡ ಪಕ್ಷಗಳ  (ರಣ)ರಂಗದಂತೆ ಅನಿಸುತ್ತಿರುವ ಭಾರತದ ರಾಜಕಾರಣದಲ್ಲಿ ಕೇಜ್ರಿವಾಲ್‌ ಅವರು ತೃತೀಯ ಶಕ್ತಿಯ ಒಬ್ಬ ಪ್ರತಿನಿಧಿಯೇನೂ ಅಲ್ಲ. ಅವರು ಪರ್ಯಾಯ ರಾಜಕಾರಣದ ಒಬ್ಬ ಪ್ರತಿನಿಧಿ; ಮತ್ತು ಅದಕ್ಕೆ ಒಂದು ಅದ್ಭುತ ಆರಂಭವನ್ನು ಕೊಟ್ಟವರು. ಅದಕ್ಕಾಗಿಯೇ ಅವರು, ‘ಹೀಗೆ ಬಂದು ಹಾಗೆ ಹೋದರು’ ಎಂದು ಅನಿಸಬಾರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT