ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಟಿ.ವಿ. ಖರೀದಿ ಕಥನವು!

Last Updated 20 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಟಿ.ವಿ. ಕೊಂಡುಕೊಳ್ಳುವ ಬಗ್ಗೆ ನಮ್ಮ ಮನೆಯ ಪಾರ್ಲಿಮೆಂಟಿನಲ್ಲಿ (ಹೊಡೆದಾಟ, ಕುರ್ಚಿ ಎಸೆತ ಇತ್ಯಾದಿ ಇಲ್ಲದೆ) ವಾರಗಳ ಕಾಲ ಚರ್ಚೆ ನಡೆದು ಕೊನೆಗೂ ಒಂದು ಟಿ.ವಿ. ಕೊಳ್ಳುವುದು ಜೊತೆಗೆ ಡಿಟಿಎಚ್ ಕೂಡ ಕೊಳ್ಳುವುದು ಎಂಬ ತೀರ್ಮಾನಕ್ಕೆ ಬಂದಾಯಿತು.

ಯಾವ ಟಿ.ವಿ. ಕೊಳ್ಳುವುದು -ಪ್ಲಾಸ್ಮ, ಎಲ್‌ಸಿಡಿ, ಎಲ್‌ಇಡಿ? ಈ ಮೂರು ನಮೂನೆಯ ಟಿ.ವಿ.ಗಳ ಬಗ್ಗೆ ಇದೇ ಅಂಕಣದಲ್ಲಿ ಹಲವು ಸಂಚಿಕೆಗಳಲ್ಲಿ ಬರೆದಾಗಿದೆ. ಈ ಲೇಖನ ಓದುವ ಮೊದಲು ಅವನ್ನೆಲ್ಲ ಇನ್ನೊಮ್ಮೆ ಓದಿಕೊಳ್ಳಬೇಕಾಗಿ ವಿನಂತಿ. ಎಲ್‌ಇಡಿ ಟಿ.ವಿ. ಕೊಳ್ಳುವುದು ಎಂಬ ತೀರ್ಮಾನ ಮಾಡಿ ಆಯಿತು.

ಎಲ್‌ಇಡಿ ಟಿ.ವಿ.ಯನ್ನು ಅದಕ್ಕೆಂದೇ ಮಾರುಕಟ್ಟೆಯಲ್ಲಿ ದೊರೆಯುವ ಸ್ಟ್ಯಾಂಡ್ ಮೇಲೆ ಇಡಬಹುದು ಅಥವಾ ಗೋಡೆಗೆ ನೇತು ಹಾಕಬಹುದು. ಗೋಡೆಗೆ ನೇತುಹಾಕುವುದರಿಂದ ತುಂಬ ಸ್ಥಳದ ಉಳಿತಾಯವಾಗುತ್ತದೆ. ಆದರೆ ಅದರ ಸ್ಥಳವನ್ನು ಬದಲಾಯಿಸಲಾಗುವುದಿಲ್ಲ. ಗೋಡೆಗೆ ನೇತುಹಾಕುವುದೆಂದು ತೀರ್ಮಾನವಾಯಿತು. ಗೋಡೆಯಲ್ಲಿ ಲಭ್ಯವಿರುವ ಸ್ಥಳವನ್ನು ಪರಿಗಣಿಸಿ 32 ಇಂಚಿನ ಟಿ.ವಿ. ತರುವುದೆಂಬ ತೀರ್ಮಾನ ಆಯಿತು. ಮುಂದಿನ ಹೆಜ್ಜೆ ಎಂದರೆ ಯಾವ ಟಿ.ವಿ. ಕೊಳ್ಳುವುದು ಎಂಬುದು. ಇದು ಮಾತ್ರ ಬಹಳ ಕಷ್ಟದ ಕೆಲಸ ಎಂದು ಬೇಗನೆ ಅರಿವಾಯಿತು. ಮಾರುಕಟ್ಟೆಯಲ್ಲಿರುವ ಪ್ರತಿ ಕಂಪೆನಿಯ ಪ್ರತಿ ಮಾದರಿಯ ಟಿ.ವಿ.ಯಲ್ಲೂ ಒಂದಲ್ಲ ಒಂದು ಸಾಧಕ ಇದ್ದರೆ ಇನ್ನೊಂದು ಬಾಧಕ ಇದೆ ಎಂಬ ಅರಿವೂ ಬೇಗನೆ ಆಯಿತು. ಕೊನೆಗೆ ಅಳೆದು ಸುರಿದು, ಹಲವು ಗುಣವೈಶಿಷ್ಟ್ಯಗಳನ್ನು ಮಾನದಂಡವಾಗಿಟ್ಟುಕೊಂಡು, ಕೊಡುವ ಹಣಕ್ಕೆ ಅತ್ಯಧಿಕ ಸೌಲಭ್ಯ ಜೊತೆಗೆ ಉತ್ತಮ ಗುಣಮಟ್ಟವೂ ಇರುವ ಟಿ.ವಿ. ಎಂದಾಗ, ಪ್ಯಾನಾಸೋನಿಕ್ TH-L32E5D  ಎಂಬ ತೀರ್ಮಾನಕ್ಕೆ ಬರಲಾಯಿತು. ಇದೇ ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
32 ಇಂಚಿನ ಎಲ್‌ಇಡಿ ಸ್ಮಾರ್ಟ್‌ಟಿ.ವಿ., ಐಪಿಎಸ್ ಎಲ್‌ಇಡಿ ಪರದೆ, 50Hz,, ಪೂರ್ತಿ ಹೈಡೆಫಿನಿಶನ್ (1080), 1,920(W) x 1,080 (H)ರೆಸೊಲೂಶನ್, 178 ಡಿಗ್ರಿ ವ್ಯೆವಿಂಗ್ ಆ್ಯಂಗಲ್, ಹಲವು ನಮೂನೆಯ ಚಿತ್ರಗಳ ಬೆಂಬಲ, ಎಚ್‌ಡಿಎಂಐ ಕಿಂಡಿಗಳು, ಯುಎಸ್‌ಬಿ ಡ್ರೈವ್ ಹಾಕಲು ಕಿಂಡಿ, ವಿಜಿಎ ಇನ್‌ಪುಟ್, ಆರ್‌ಸಿಎ ಪೋರ್ಟ್, 3.5 ಮಿಮೀ ಹೆಡ್‌ಫೋನ್ ಕಿಂಡಿ, ಡೋಲ್ಬಿ ಆಡಿಯೊ, 10 ವಾಟ್ ಶಕ್ತಿಯ ಎರಡು ಸ್ಪೀಕರ್‌ಗಳು, ವೈಫೈ ಸಿದ್ಧ (WiFi ready), ಡಿಎಲ್‌ಎನ್‌ಎ (ಸ್ಮಾರ್ಟ್ ಟಿ.ವಿ.), ಪ್ಯಾನಾಸೋನಿಕ್‌ನವರದೇ ವಿಶೇಷ ವಿಯೆರ ಕನೆಕ್ಟ್ (VIERA Connect) ಸೌಲಭ್ಯ, ಹಲವು ನಮೂನೆಯ ಫೈಲ್‌ಗಳನ್ನು ಪ್ಲೇ ಮಾಡಬಲ್ಲುದು, 764 x 473  x 52 ಮಿ.ಮೀ ಗಾತ್ರ, ಇತ್ಯಾದಿ.   

ಈ ಟಿ.ವಿ.ಯನ್ನೇ ಯಾಕೆ ಕೊಳ್ಳಲಾಯಿತು? ಉತ್ತರವನ್ನು ಸಂಕ್ಷಿಪ್ತವಾಗಿ ಈಗಾಗಲೇ ಹೇಳಿ ಆಗಿದೆ. ಆದರೂ ಕೆಲವು ಮುಖ್ಯ ವಿಷಯಗಳನ್ನು ಈಗ ನೋಡೋಣ. ಹಲವು ಟಿ.ವಿ.ಗಳನ್ನು ನೋಡಿ, ಅವುಗಳ ಗುಣವೈಶಿಷ್ಟ್ಯಗಳನ್ನು ವಿಶದವಾಗಿ ಪರಿಶೀಲಿಸಿ ಅಂತಿಮ ಸುತ್ತಿಗೆ ಈ ಮೂರು ಟಿ.ವಿ.ಗಳನ್ನು ಆಯ್ಕೆ ಮಾಡಲಾಯಿತು - ಪ್ಯಾನಾಸೋನಿಕ್ ಟಿಎಚ್-ಎಲ್32ಇ5ಡಿ, ಎಲ್‌ಜಿ 32ಎಲ್‌ಎಸ್5700 ಮತ್ತು ಸ್ಯಾಮ್‌ಸಂಗ್ 32ಇಎಸ್5600. ಈ ಮೂರೂ ಎಲ್‌ಇಡಿ ಸ್ಮಾರ್ಟ್ ಟಿ.ವಿ.ಗಳು. ಸೋನಿ ಟಿ.ವಿ.ಯ ಚಿತ್ರದ ಗುಣಮಟ್ಟ ತುಂಬ ಉತ್ತಮವಾಗಿದ್ದರೂ ಅದನ್ನು ಕೆಲವು ಕಾರಣಗಳಿಗಾಗಿ ಕೈಬಿಡಲಾಯಿತು. ಅವೆಂದರೆ -ಅತಿ ದುಬಾರಿ, ಎಲ್ಲ ನಮೂನೆಯ, ಅದರಲ್ಲೂ ಮುಖ್ಯವಾಗಿ MKV ಫೈಲ್‌ಗಳನ್ನು ಪ್ಲೇ ಮಾಡುವುದಿಲ್ಲ, NTFS ವಿಧಾನದಲ್ಲಿ ಫಾರ್ಮ್ಯಾಟ್ ಮಾಡಿದ ಯುಎಸ್‌ಬಿ ಡ್ರೈವ್‌ಗಳನ್ನು ಗುರುತಿಸುವುದಿಲ್ಲ, ಇತ್ಯಾದಿ. ಪ್ಯಾನಾಸೋನಿಕ್ ಮತ್ತು ಎಲ್‌ಜಿ ಟಿ.ವಿ.ಗಳ ಬೆಲೆಯಲ್ಲಿ ತುಂಬ ವ್ಯತ್ಯಾಸವಿಲ್ಲ.

ಸ್ಯಾಮ್‌ಸಂಗ್ ವೈಫೈ ಸಿದ್ಧ ಅಲ್ಲ ಮಾತ್ರವಲ್ಲ ಅದಕ್ಕೆ ಗಣಕ ಇನ್‌ಪುಟ್ ಪೋರ್ಟ್ ಇಲ್ಲ. ಅದಲ್ಲದೆ ಉಳಿದವುಗಳಿಗಿಂತ ಸುಮಾರು 17% ಹೆಚ್ಚು ಬೆಲೆಯದು. ಆದರೆ ನೀಡಿದ ಹೆಚ್ಚಿನ ಹಣಕ್ಕೆ ನಮಗೆ ದೊರೆಯುವ ಹೆಚ್ಚಿನ ಸವಲತ್ತು ಅಥವಾ ಗುಣಮಟ್ಟ ಅದೇ ಅನುಪಾತದಲ್ಲಿಲ್ಲ. ಆದುದರಿಂದ ಅದನ್ನು ಸ್ಪರ್ಧೆಯಿಂದ ಕೈಬಿಡಲಾಯಿತು. ಇನ್ನುಳಿದವು ಪ್ಯಾನಾಸೋನಿಕ್ ಮತ್ತು ಎಲ್‌ಜಿ. ನಾವು ಅಂಗಡಿಗೆ ಹೋಗುವಾಗ ಎರಡು ಯುಎಸ್‌ಬಿ ಡ್ರೈವ್‌ಗಳನ್ನು ತೆಗೆದುಕೊಂಡು ಹೋಗಿದ್ದೆವು. ಒಂದನ್ನು FAT32  ವಿಧಾನದಲ್ಲಿ, ಮತ್ತೊಂದನ್ನು NTFS ವಿಧಾನದಲ್ಲಿ ಫಾರ್ಮ್ಯಾಟ್ ಮಾಡಿ ಪ್ರತಿಯೊಂದರಲ್ಲೂ MKV, DIVX, AVI, MP4, ಇತ್ಯಾದಿ ಹಲವು ನಮೂನೆಯ ಫೈಲ್‌ಗಳನ್ನು ಮತ್ತು ಹೈಡೆಫಿನಿಶನ್ ಸಿನಿಮಾವನ್ನೂ ಹಾಕಿಕೊಂಡು ಹೋಗಿ ಪರಿಶೀಲಿಸಿದ್ದೆವು. ಅತ್ಯಂತ ಹೆಚ್ಚು ನಮೂನೆಯ ಫೈಲ್‌ಗಳನ್ನು ಪ್ಲೇ ಮಾಡಬಲ್ಲುದು ಪ್ಯಾನಾಸೋನಿಕ್. ಇದರಲ್ಲಿ ಇನ್ನೂ ಒಂದು ಸೌಲಭ್ಯ ಇದೆ. ಅದುವೇ 3.5 ಮಿಮೀ ಹೆಡ್‌ಫೋನ್ ಔಟ್‌ಪುಟ್. ನಾನು ಗಮನಿಸಿದ ಹಲವು ಕಂಪೆನಿಗಳ ಟಿ.ವಿ.ಗಳಲ್ಲಿ ಅತ್ಯಂತ ಅಧಿಕವಾದ ವ್ಯೆವಿಂಗ್ ಆ್ಯಂಗಲ್ ಅಂದರೆ 178 ಡಿಗ್ರಿಯಷ್ಟು ಇದ್ದುದ್ದು ಪ್ಯಾನಾಸೋನಿಕ್ ಟಿ.ವಿ.ಗೆ. ಅಂತಿಮವಾಗಿ ಅದನ್ನೇ ಆಯ್ಕೆ ಮಾಡಲಾಯಿತು. ಇನ್ನೂ ಒಂದು ವಿಷಯವೆಂದರೆ ಈ ಮೂರು ಟಿ.ವಿ.ಗಳಲ್ಲಿ ಪ್ಯಾನಾಸೋನಿಕ್ ಟಿ.ವಿ.ಯ ಚಿತ್ರದ ಗುಣಮಟ್ಟ ಉಳಿದೆರಡಕ್ಕಿಂತ ಉತ್ತಮವಾಗಿದೆ.

ಮೊದಲೇ ತಿಳಿಸಿದಂತೆ ಇದು ಸ್ಮಾರ್ಟ್‌ಟಿ.ವಿ. ಅಂದರೆ ಅಂತರಜಾಲಕ್ಕೆ ಗಣಕ ಜಾಲದ ಮೂಲಕ ಜೋಡಿಸಬಹುದು. ನಮ್ಮ ಮನೆಯ ಗಣಕ ಜಾಲಕ್ಕೆ ಸೇರಿಸಿ ಐಪಿ ವಿಳಾಸವನ್ನು ಹಾಕಿದೊಡನೆ ಅದು ತನ್ನೊಳಗಿನ ತಂತ್ರಾಂಶವನ್ನು ನವೀಕರಿಸಿಕೊಂಡಿತು. ಇದನ್ನು ಗಣಕ ಜಾಲಕ್ಕೂ ಜೋಡಿಸಬಹುದು. ಮನೆಯ ಗಣಕದಲ್ಲಿ ವಿಂಡೋಸ್ ಮೀಡಿಯಾ ಪ್ಲೇಯರ್‌ನಲ್ಲಿ ಎಲ್ಲ ಸಂಗೀತ, ವಿಡಿಯೋಗಳನ್ನು ಮನೆಯೊಳಗಿನ ಎಲ್ಲ ಗಣಕಗಳೊಳಗೆ ಹಂಚು ಎಂದು ಆಯ್ಕೆ ಮಾಡಿಕೊಂಡರೆ ಅವನ್ನು ಈ ಟಿ.ವಿ.ಯಲ್ಲೇ ನೇರವಾಗಿ ಪ್ಲೇ ಮಾಡಬಹುದು. ಗಣಕದಿಂದ ವಿಡಿಯೋ, ಸಂಗೀತ, ಫೋಟೊ, ಇತ್ಯಾದಿಗಳನ್ನು ಯುಎಸ್‌ಬಿ ಡ್ರೈವ್‌ನಲ್ಲಿ ಪ್ರತಿಮಾಡಿಕೊಂಡು ಅದಕ್ಕೆಂದೇ ಇರುವ ಕಿಂಡಿಗೆ ಜೋಡಿಸಿಯೂ ನೋಡಬಹುದು. ಈ ಟಿ.ವಿ.ಯನ್ನು ಗಣಕಕ್ಕೆ ಪರದೆ (ಮಾನಿಟರ್) ಆಗಿಯೂ ಬಳಸಬಹುದು.

ಚಿತ್ರದ ಗುಣಮಟ್ಟ ಅತ್ಯುತ್ತಮವಾಗಿದೆ. ವ್ಯೆವಿಂಗ್ ಆ್ಯಂಗಲ್ ಜಾಸ್ತಿ ಇರುವುದರಿಂದ ಪರದೆಯ ಪ್ರತಿಫಲನ ಸ್ವಲ್ಪ ಜಾಸ್ತಿ ಇದೆ. ಪರದೆಯ ಬೆಳಕು ಅಧಿಕವಾಗಿಯೇ ಇದೆ. ಪರದೆಯನ್ನು ತುಂಬ ಕಡುಕಪ್ಪು ಮಾಡಿದಾಗ ಪ್ರತಿಫಲನ ಗಣನೀಯವಾಗಿ ಕಂಡುಬರುತ್ತದೆ. ಕಿಟಿಕಿಗೆ ಪರದೆ ಹಾಕಿ, ಟ್ಯೂಬ್‌ಲೈಟ್ ಹಾಕಿಕೊಂಡು ನೋಡಿದರೆ ಅನುಭವ ಉತ್ತಮವಾಗಿರುತ್ತದೆ. ಧ್ವನಿಯ ಗುಣಮಟ್ಟ ಉತ್ತಮವಾಗಿದೆ. ಆದರೆ ಟಿ.ವಿ.ಯಲ್ಲಿ ಅಡಕವಾಗಿರುವ ಸ್ಪೀಕರ್‌ಗಳ ಗುಣಮಟ್ಟ ಅಷ್ಟಕ್ಕಷ್ಟೆ. ಉತ್ತಮ ಧ್ವನಿ ಬೇಕಿದ್ದರೆ ಆಡಿಯೋ ಔಟ್‌ಪುಟ್ ಅನ್ನು ನಿಮ್ಮ ಮನೆಯ ಆಡಿಯೋ ಸಿಸ್ಟಮ್‌ನ ಆಂಪ್ಲಿಫೈಯರ್‌ಗೆ ನೀಡಿ ಆಲಿಸತಕ್ಕದ್ದು. ಸಾಮಾನ್ಯವಾಗಿ ನಾವು ಡಿಟಿಎಚ್ ಬಳಸುವುದರಿಂದ ಅದರ ಪೆಟ್ಟಿಗೆಯಲ್ಲಿರುವ ಆಡಿಯೊ ಔಟ್‌ಪುಟ್ ಅನ್ನು ಆಂಪ್ಲಿಫೈಯರ್‌ಗೆ ಊಡಿಸಬಹುದು. ಬೆಲೆ ಸುಮಾರು 35,000 ರೂ. ಒಟ್ಟಿನಲ್ಲಿ ಕೊಡುವ ಹಣಕ್ಕೆ ಮೋಸವಿಲ್ಲ.  

ಗ್ಯಾಜೆಟ್ ಸಲಹೆ
ಬೆಂಗಳೂರಿನ ವೆಂಕಟೇಶರ ಪ್ರಶ್ನೆ: ಐಓಎಸ್‌ನ (iOS) ಸೌಲಭ್ಯಗಳಿರುವ ಬ್ಲಾಕ್‌ಬೆರ್ರಿ ಫೋನ್ ಯಾವುದು?

ಉತ್ತರ: ಬ್ಲಾಕ್‌ಬೆರ್ರಿ ತನ್ನದೇ ಕಾರ್ಯಾಚರಣ ವ್ಯವಸ್ಥೆ(OS -operating system) ಬಳಸುತ್ತದೆ. ಐಓಎಸ್ ಐಫೋನ್‌ನಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆ. ಆದುದರಿಂದ ಐಓಎಸ್ ಬಳಸುವ ಬ್ಲಾಕ್‌ಬೆರ್ರಿ ಫೋನ್ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT