ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಭಾಷೆ ಸಾಲದೇ?

Last Updated 9 ಜೂನ್ 2012, 19:30 IST
ಅಕ್ಷರ ಗಾತ್ರ

ಲೋಕದಲ್ಲಿರುವ ಮನುಷ್ಯರ ದೇಹ ರಚನೆಯೆಲ್ಲಾ ಒಂದೇ ಥರ, ಮಿದುಳೂ ಒಂದೇ ಥರ ಆದರೆ ಇಷ್ಟೊಂದು, ಸಾವಿರಾರು, ಸುಮಾರು ಏಳು ಸಾವಿರ ಬೇರೆ ಬೇರೆ ಭಾಷೆಗಳು ಯಾಕೆ ಇವೆ? ಜಗತ್ತಿನ ಜನರಿಗೆಲ್ಲ ಒಂದೇ ಭಾಷೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತಿತ್ತು!

ಪರಸ್ಪರ ಮಾತು ಅರ್ಥವಾಗುತಿತ್ತು, ವಿದೇಶೀ ಭಾಷೆಗಳನ್ನು ಕಲಿಯುವ ತೊಡಕು ಇರುತ್ತಿರಲಿಲ್ಲ, ಆಡಳಿತ ಸುಲಭವಾಗುತಿತ್ತು, ವ್ಯಾಪಾರ ವಾಣಿಜ್ಯ ಸಲೀಸಾಗುತಿತ್ತು. ಭಾಷೆಗಳು ಸಾಯುತ್ತಿವೆ ಎಂದು ಗೋಳಾಡುತ್ತಾರಲ್ಲ, ಹಾಗೆ ಭಾಷೆಗಳು ಕಡಮೆಯಾಗಿ ಒಂದೇ ಭಾಷೆ ಉಳಿದರೆ ಒಳ್ಳೆಯದೇ ಅಲ್ಲವೇ? ಹೀಗೆ ಯೋಚನೆ ಮಾಡುವ ಜನ ಸಾಕಷ್ಟು ಇದ್ದಾರೆ.

ಅಥವಾ ತೀರ ಇಷ್ಟು ಅತಿರೇಕದ ನಿಲುವು ಅಲ್ಲದಿದ್ದರೂ `ನಮ್ಮ~ ಭಾಷೆಗೆ ಸದ್ಯಕ್ಕೆ ಅಪಾಯವಿಲ್ಲ, ಜಗತ್ತಿನ ಯಾವುದೋ ಮೂಲೆಯಲ್ಲಿ ಯಾವುದೋ ಭಾಷೆ ಮರಣಿಸಿದರೆ ಅದನ್ನು ಕಟ್ಟಿಕೊಂಡು ನಮಗೇನು ಅನ್ನುವ ಉದಾಸೀನ ತೋರುವ ಜನರಂತೂ ತೀರ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ವಿರುದ್ಧವಾಗಿ ಮಾತೃಭಾಷೆ ಅನ್ನುವ ಮಾತು ಕಿವಿಗೆ ಬೀಳುತ್ತಿದ್ದಂತೆ ಭಾವುಕವಾಗಿ ಮೈಮರೆಯುವ, `ನಮ್ಮ~ ಭಾಷೆಗೆ ಅಪಾಯವಿದೆ ಎಂದು ಒಂದಿಷ್ಟು ಅನಿಸಿದರೂ ಉದ್ವಿಗ್ನವಾಗಿ ಮೇಲೆರಗುವ ಜನರೂ ಇದ್ದಾರೆ. 

ಇವೆರಡೂ ತಪ್ಪು ನಿಲುವುಗಳು. ಭಾಷೆಗಳ ವೈವಿಧ್ಯದ ಮಹತ್ವ ಏನು ಅನ್ನುವುದು ಸ್ಥೂಲವಾಗಿಯಾದರೂ ನಮ್ಮ ಮನಸ್ಸಿಗೆ ಇಳಿಯಬೇಕಾದದ್ದು ಅಗತ್ಯ.

ಭಾಷೆಯೊಂದರ ಶಬ್ದ ಸಂಪತ್ತು ಬಹಳ ಸ್ಪಷ್ಟವಾಗಿ ಆಯಾ ಭಾಷಿಕರ ಭೌತಿಕ ಮತ್ತು ಸಾಮಾಜಿಕ ಪರಿಸರವನ್ನು ಪ್ರತಿಫಲಿಸುತ್ತದೆ. ಭಾಷೆಯೊಂದರ ಸಮಗ್ರ ಶಬ್ದಕೋಶವನ್ನು ಆ ಸಮುದಾಯದ ಗಮನವನ್ನು ಸೆಳೆದ ಎಲ್ಲ ವಿಚಾರ, ಆಸಕ್ತಿ ಮತ್ತು ವ್ಯವಹಾರಗಳ ಸಂಕೀರ್ಣವಾದ ಇನ್‌ವೆಂಟರಿ ಎಂದು ಪರಿಗಣಿಸಬಹುದು.
 
ಯಾವುದೇ ಸಮುದಾಯದ ಇಂಥ ಶಬ್ದಕೋಶ ನಮಗೆ ದೊರೆತರೆ ಆ ಸಮುದಾಯದ ಭೌತಿಕ ಪರಿಸರ, ಭಾಷಿಕರ ಸಂಸ್ಕೃತಿಯ ಲಕ್ಷಣಗಳನ್ನೆಲ್ಲ ಅರಿಯಬಹುದು. ಇದನ್ನು 1912ರಲ್ಲಿ ಹೇಳಿದವನು ಎಡ್ವರ್ಡ್ ಸಪಿರ್.

ಅದಕ್ಕೂ ನೂರು ವರ್ಷ ಮೊದಲು ವಿಲ್‌ಹೆಲ್ಮ್ ವಾನ್ ಹಮ್‌ಬೋಲ್ಟ್ ಮನುಷ್ಯ ಭಾಷೆಯ ವೈವಿಧ್ಯದ ಬಗ್ಗೆ ಹೇಳುತ್ತ ಈ ವೈವಿಧ್ಯದಲ್ಲಿ ಮನುಷ್ಯನ ವಿಚಾರಗಳ ಬೆಳವಣಿಗೆಯ ಸಾಧ್ಯತೆ ಇದೆ, ಪ್ರತಿಯೊಂದು ಭಾಷೆಗೂ ಅದರದ್ದೇ ಆದ `ಅಂತರಂಗದ ರೂಪ~ವಿದೆ, ಲೋಕವನ್ನು ವ್ಯಾಖ್ಯಾನಿಸುವ ಅದರದ್ದೇ ತಾಖತ್ತು ಇದೆ ಅಂದಿದ್ದ.

ಭಾಷೆಯ ಅಧ್ಯಯನ ಅನ್ನುವುದು ಕೇವಲ ಧ್ವನಿವ್ಯವಸ್ಥೆ, ಪದಗಳ ರೂಪ, ವಾಕ್ಯರಚನೆ, ವ್ಯಾಕರಣ ಇಷ್ಟು ಮಾತ್ರವಲ್ಲ, ಭಾಷೆಗೂ ಅದನ್ನಾಡುವ ಜನ ಬದುಕುವ ಪರಿಸರಕ್ಕೂ ಇರುವ ಸಂಬಂಧ ಗುರುತಿಸಬೇಕು ಅನ್ನುವ ಆಲೋಚನೆಯ ಬೀಜ ಇಲ್ಲಿದೆ.
 
ಅದು ಖಚಿತ ರೂಪ ಪಡೆದದ್ದು 1970ರಲ್ಲಿ ಐನಾರ್ ಹಾಗೆನ್ ಇಕಾಲಜಿ, ಪರಿಸರ ಅಧ್ಯಯನ, ಎಂಬ ಪರಿಕಲ್ಪನೆಯನ್ನು ಸೃಷ್ಟಿಸಿದಾಗ. ಭಾಷಾ ವೈವಿಧ್ಯ, ಭಾಷೆಗೂ ಅದನ್ನಾಡುವ ಜನ ಬದುಕುವ ಪರಿಸರಕ್ಕೂ ಇರುವ ಸಂಬಂಧ, ಪರಿಸರದ ಜೀವವೈವಿಧ್ಯಕ್ಕೆ ಆಗುವ ಊನ, ಮಾಲಿನ್ಯ, ಹಾನಿ ಇವೆಲ್ಲ ಭಾಷೆಯ ಮೇಲೆ ಮಾಡುವ ಪರಿಣಾಮಗಳನ್ನು ಕುರಿತ ತಿಳಿವಳಿಕೆ ಬೆಳೆಯಿತು.

ಭಾಷೆಗಳ ಸಂಖ್ಯೆ ಕಡಮೆಯಾದರೆ ಒಳ್ಳೆಯದು, ದುರಂತವಲ್ಲ ಅನ್ನುವುದು ಜನಪ್ರಿಯವಾದ ನಂಬಿಕೆ, ಆದರೂ ತಪ್ಪು ನಂಬಿಕೆ. ಅದನ್ನು ಪೋಷಿಸುವ ಹಲವು ಸಂಗತಿಗಳಿವೆ. ಟವರ್ ಆಫ್ ಬಾಬೆಲ್ ಎಂದೇ ಪ್ರಸಿದ್ಧವಾಗಿರುವ ಪುರಾಣ ಕತೆ ಇದು: ಜಗತ್ತಿನ ಜನರೆಲ್ಲ ಒಂದೇ ಭಾಷೆ ಆಡುತಿದ್ದರು; ಜನ ಸ್ವರ್ಗವನ್ನು ಮುಟ್ಟುವಂಥ ಗೋಪುರ ಕಟ್ಟುವುದಕ್ಕೆ ತೊಡಗಿದರು. ಅವರ ಭಾಷೆಗಳು ಪರಸ್ಪರ ಅರ್ಥವಾಗದಂತೆ ಮಾಡಿದ ದೇವರು; ಕೆಲಸ ಅರ್ಧಕ್ಕೇ ನಿಂತುಹೋಯಿತು.
 
ಜಗತ್ತಿನ ಭಾಷಾ ಬಹುಳತೆ ಮನುಷ್ಯ ಕುಲಕ್ಕೆ ಎರಗಿದ ಶಾಪ; ಭಾಷೆ ಒಂದೇ ಇದ್ದರೆ ಮೂಲದಲ್ಲಿದ್ದ ಪರಿಪೂರ್ಣತೆ ಒಂದಿಷ್ಟಾದರೂ ಮರಳೀತು; ಮನುಷ್ಯರ ಪರಸ್ಪರ ತಿಳಿವಳಿಕೆ ವೃದ್ಧಿಸಿ ಶಾಂತಿ ಮೂಡೀತು; ಜಾಗತಿಕ ಮಿತ್ರತ್ವ, ಸ್ಥಿರತೆ ಸಾಧ್ಯವಾದೀತು; ಭಾಷೆಗಳು ಸತ್ತು ಸಂಖ್ಯೆ ಕಡಮೆಯಾದರೆ ಆ ದಿಕ್ಕಿನಲ್ಲಿ ಒಂದು ಹೆಜ್ಜೆ ಇಟ್ಟಂತೆ ಅನ್ನುವ ಧೋರಣೆ ಇದೆ.
ಇದು ಮುಗ್ಧ-ಮೂಢ ನಂಬಿಕೆ. ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ಆದ ಅಂತರ್ಯುದ್ಧಗಳೆಲ್ಲ ಹೆಚ್ಚಾಗಿ ನಡೆದಿರುವುದು ಪ್ರಮುಖ ಏಕಭಾಷಿಕ ದೇಶಗಳಲ್ಲೇ- ವಿಯೆಟ್ನಾಂ, ಕಾಂಬೋಡಿಯ, ರ‌್ವಾಂಡ, ಬುರುಂಡಿ ಹೀಗೆ. ಭಾಷೆಗಳ ಬಗ್ಗೆ ಇರುವ ಕುರುಡು ಅಭಿಮಾನ ನೀಗಿಸಿ ಆ ಮೂಲಕ ಮಹತ್ವಾಕಾಂಕ್ಷೆ, ಸಂಘರ್ಷಗಳನ್ನು ಕಡಮೆ ಮಾಡಬಹುದು ಅನ್ನುವ ಮಹತ್ವಾಕಾಂಕ್ಷೆಯಿಂದ ರೂಪುಗೊಂಡದ್ದು ಎಸ್ಪರಾಂತೊ (`ಆಶಾವಾದಿ~) ಅನ್ನುವ ಭಾಷೆ. (ಅದು 1887ರಲ್ಲಿ ಝಾಮೆನ್‌ಹಾಫ್ ರೂಪಿಸಿದ, ಸುಲಭವಾಗಿ ಕಲಿಯಬಲ್ಲ, ರಾಜಕೀಯವಾಗಿ ನಿರ್ಲಿಪ್ತವಾದ ಭಾಷೆ. ಸುಮಾರು ಎರಡು ಲಕ್ಷ ಜನ ಅದನ್ನು ಬಳಸುತಿದ್ದಾರೆ).

ಜಗತ್ತಿನಲ್ಲ್ಲ್ಲೆಲ ಒಂದೇ ಭಾಷೆ ಇರಬೇಕು ಅನ್ನುವವರು ಪ್ರಮುಖ ಏಕಭಾಷಿಕ ರಾಷ್ಟ್ರಗಳಿಂದ ಬಂದವರು. ಒಂದೇ ಭಾಷೆ ಇರುವಂಥ ದಿನ ಬಂದರೆ ಜಗತ್ತೆಲ್ಲ ತಮ್ಮ ಭಾಷೆಯನ್ನೆ ಆಡುತ್ತಾರೆ ಅನ್ನುವ ನಂಬಿಕೆ ಅವರದು. ಆದ್ದರಿಂದಲೇ ಆಯ್ಕೆಯ ತೊಡಕೂ ತಲೆ ಎತ್ತುತ್ತದೆ. ಯಾವುದೇ ಆಯ್ಕೆಗೆ ಧಾರ್ಮಿಕ, ರಾಷ್ಟ್ರೀಯ ಕಾರಣಗಳಿಂದ ವಿರೋಧ ಹುಟ್ಟುತ್ತದೆ.

ಆದಿ ಮನುಷ್ಯ ಆಡಿದ ಭಾಷೆ ಯಾವುದು ಅನ್ನುವುದು ಹಳೆಯ ವಾಗ್‌ವಾದ- ಹೀಬ್ರೂ ಆದಿ ಮನುಷ್ಯನ ಭಾಷೆ ಅಂದವನು ಡಾಂಟೆ; ಫ್ರೆಂಚ್ ಅಂದವನು ವೋಲ್ಟೇರ್; ಚೀನೀ, ಈಜಿಪ್ತಿಯನ್, ಜರ್ಮನ್, ಸಂಸ್ಕೃತ ಒಂದೊಂದಕ್ಕೂ `ಇದೇ ಆದಿಭಾಷೆ~ ಅನ್ನುವ ಸಮರ್ಥಕರಿದ್ದಾರೆ.

ಇನ್ನು ಕೆಲವರು ಭವಿಷ್ಯದತ್ತ ನೋಡುತ್ತ ಯಾವುದಾದರೂ ಅಂತಾರಾಷ್ಟ್ರೀಯ ಸಂಸ್ಥೆ ಒಂದು ಭಾಷೆ ಎತ್ತಿ ಹಿಡಿದೀತು ಅನ್ನುತ್ತಾರೆ. ಕ್ವಿಬೆಕ್, ಬೆಲ್ಜಿಯಂ, ಇಂಡಿಯ ಇಂಥ ದೇಶಗಳಲ್ಲಿ ತಮ್ಮ ಭಾಷೆ ನಿರ್ಲಕ್ಷಿತ ಅನ್ನುವ ಕಾರಣಕ್ಕೆ ಸಂಘರ್ಷಗಳು ನಡೆಯುತ್ತಿರುವಾಗ ಯಾವುದೇ ಒಂದು ಸಂಸ್ಥೆ ಜನರೆಲ್ಲ ತಮ್ಮ ಭಾಷೆ ಬಿಟ್ಟುಕೊಟ್ಟು ಮತ್ತೊಂದನ್ನು ಜಾಗತಿಕ ಏಕ ಭಾಷೆಯಾಗಿ ಒಪ್ಪುವಂತೆ ಮಾಡಲು ಸಾಧ್ಯವೇ!

ಒಂದೇ ಭಾಷೆ ಇದ್ದರೆ ಸಂವಹನ, ವ್ಯಾಪಾರ, ವಾಣಿಜ್ಯಕ್ಕೆ ಅನುಕೂಲ. ಇಂಗ್ಲಿಷು ಆ ಕೆಲಸ ಮಾಡಬಲ್ಲದು. ಹಾಗಂದುಕೊಂಡರೂ ಮಿಕ್ಕ ಭಾಷೆಗಳನ್ನು ಇಲ್ಲವಾಗಿಸಿ ನಡೆಯಬೇಕೇ? ಎರಡು ಭಾಷೆಗಳಿದ್ದಾಗ ಎರಡಕ್ಕೂ ಬೇರೆ ಕಾರ್ಯವಿದ್ದರೂ ಬಹುಭಾಷಿಕತೆಯನ್ನು ಪೊರೆಯುವಂತೆ ಸರ್ಕಾರಗಳ ಮನ ಒಲಿಸುವುದು ಕಷ್ಟ. ಈ ಕೆಲಸಕ್ಕೆ ಅಗಾಧ ಹಣ ಬೇಕಾದೀತು. ಒಂದೊಂದು ಭಾಷೆಯ ಸಂದರ್ಭದಲ್ಲೂ ವಸಾಹತು ಶೋಷಣೆಯ ನೆನಪುಗಳಿರುವಾಗ, ಭಾವನಾತ್ಮಕತೆಯದೇ ಮೇಲುಗೈಯಾಗಿರುವಾಗ `ನಮ್ಮ~ದಲ್ಲದ ಇತರ ಭಾಷೆಯನ್ನು ಸಲಹುವುದು ತೊಡಕಿನ ಕೆಲಸ.

ಜಗತ್ತಿನ ಮಟ್ಟಿಗೆ ಭಾಷಾ ನಾಶ ಕೆಟ್ಟದ್ದು ಅನ್ನುವವರು ಕೂಡ ಸ್ಥಳೀಯವಾಗಿ ಎದುರಾಗುವ ತಮ್ಮದೇ ಸಂಸ್ಕೃತಿಯ ಇನ್ನೊಂದು ಭಾಷೆಯ ಬಗ್ಗೆ ಅಸಹನೆ ತೋರುತ್ತಾರೆ. ಅನ್ಯರ ಭಾಷೆ ಕೆಟ್ಟದು, ಅಸಂಸ್ಕೃತ, ಓಬೀರಾಯನ ಕಾಲದ್ದು, ಬರೀ ಲೊಳಲೊಳ ಸದ್ದು, ಅದು ಇಲ್ಲದಿದ್ದರೆ ಏನು ಕೊಳ್ಳೆಹೋಗುತಿತ್ತೋ ಅನ್ನುವ ಧೋರಣೆ ತೋರುತ್ತಾರೆ. ಯಾವ ಭಾಷೆಯೂ ಅಸಂಸ್ಕೃತವಲ್ಲ, ಎಲ್ಲದರಲ್ಲೂ ಚೆಲುವು ಇದೆ, ಅಭಿವ್ಯಕ್ತಿ ನಡದೇ ಇದೆ. ಆದರೆ ಭಯ ದ್ವೇಷಗಳು ವಿಚಾರಕ್ಕೆ ಸದಾ ಕುರುಡು.

ಸಕಾರಣ ಅನ್ನುವಂತೆ ತೋರುವ ವಾದ: ಇಷ್ಟೊಂದು ಭಾಷೆಗಳಿರುವುದರಿಂದ ದುಡ್ಡು ದಂಡ. ವ್ಯಕ್ತಿಗಳು, ಸಂಸ್ಥೆಗಳು, ಟೈಮು, ದುಡ್ಡು, ಶಕ್ತಿ ಎಲ್ಲವನ್ನೂ ಅನುವಾದಕ್ಕೆ ಖರ್ಚು ಮಾಡಬೇಕು, ಮಾರಾಟಕ್ಕೆ, ಕೊಳ್ಳುವುದಕ್ಕೆ ಒಂದೇ ಭಾಷೆ ಇದ್ದಿದ್ದರೆ ಭಾಷೆಯ ಗೋಡೆ ಅಡ್ಡಬರುತಿರಲಿಲ್ಲ ಅನ್ನುತ್ತಾರೆ. ದುಡ್ಡು ಬೇಕು ನಿಜ, ಆದರೆ ಬಹುಭಾಷಿಕ ಸಂಸ್ಥೆಗಳಿಗೆ ಲಾಭ ಹೆಚ್ಚು ಅನ್ನುವುದು ಸಾಬೀತು ಆಗಿದೆ. ವ್ಯಾಪಾರ ಚಕ್ರ ಉರುಳಲು ಭಾಷೆ ಆಯಿಲ್ ಇದ್ದ ಹಾಗೆ! ಭಾಷೆಯು `ಮಾನವ ಬಂಡವಾಳ~. ಆರ್ಥಿಕತೆ ಭಾಷೆಯನ್ನು ಪ್ರಭಾವಿಸುವ ಹಾಗೆ ಭಾಷೆಯೂ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ.

ಆರ್ಥಿಕ ಯಶಸ್ಸಿಗೆ ಕಾಣಿಕೆ ನೀಡುವ ಭಾಷಾ ವಲಯಗಳಿವೆ. ಪ್ರವಾಸೋದ್ಯಮ, ಕಲೆಗಳು, ಸ್ಥಳೀಯ ಉತ್ಪಾದನಾ ಸಂಸ್ಥೆಗಳು ಇವೆಲ್ಲ ಸಮುದಾಯದ ಕೊಹೆಶನ್ ವೈಟಾಲಿಟಿ, ಸಾಂಸ್ಕೃತಿಕ ಹೆಮ್ಮೆ, ಆತ್ಮವಿಶ್ವಾಸ ನೀಡುತ್ತವೆ. ಈ ಅಂಶಗಳನ್ನು ಭಾಷಾ ಮೇಂಟೇನೆನ್ಸ್‌ಗೆ ಬಳಸಬಹುದು.ವ್ಯಕ್ತಿ, ಸಂಸ್ಥೆ, ಸರ್ಕಾರ ಬಹುಭಾಷಿಕವಾಗಿದ್ದರೆ ಲಾಭ.

ಭಾಷೆಗಳನ್ನುಳಿಸಿಕೊಳ್ಳುವುದರ ಲಾಭಗಳೇನು? ಅದನ್ನು ಅರಿವಿಗೆ ತಂದುಕೊಳ್ಳುವುದು ಕಷ್ಟ. ಯಾಕೆಂದರೆ ಕ್ಷಾಮ, ಬರಗಾಲ, ಅತ್ಯಾಚಾರ, ರಾಜಕಾರಣಿಗಳ ಕಸರತ್ತು, ಧರ್ಮಪ್ರದರ್ಶನವೈಭವ ಇವೆಲ್ಲ ನಮ್ಮ ಪ್ರಜ್ಞೆಯನ್ನು ಘಾತಿಸುವ ಹಾಗೆ ಭಾಷೆಯ ಸಮಸ್ಯೆಗಳು ತತ್‌ಕ್ಷಣದಲ್ಲಿ ಮನಸ್ಸಿನಲ್ಲಿ ಮೂಡಿಕೊಳ್ಳುವುದಿಲ್ಲ.

ಜೀವಕ್ಕೆ ಅಪಾಯ ಅನ್ನುವುದು ಎಷ್ಟು ಸ್ವಯಂ ಸ್ಪಷ್ಟವೋ ಭಾಷೆಯ ನಷ್ಟ ಅಷ್ಟು ಸ್ವಯಂ ಸ್ಪಷ್ಟವಲ್ಲ. ಪರಿಸರದ ಪ್ರಶ್ನೆ ಜನರ ಮನಸ್ಸನ್ನು ಕಳೆದ ಕೆಲವು ದಶಕಗಳಲ್ಲಿ ಸೆಳೆದ ಹಾಗೆ ಭಾಷೆಯ ಪ್ರಶ್ನೆ ಸೆಳೆದಿಲ್ಲ. ಜಗತ್ತಿನ ಮಳೆಕಾಡುಗಳನ್ನು, ಪರಿಸರ ವೈವಿಧ್ಯವನ್ನು ರಕ್ಷಿಸುವುದು ಅಗತ್ಯ ಅನ್ನುವುದು ದೊಡ್ಡವರಿಗೆ ಅಸ್ಪಷ್ಟವಾಗಿಯಾದರೂ ಗೊತ್ತು; ಆ ವಿಚಾರ ಮಕ್ಕಳ ಪಾಠದಲ್ಲೂ ಇದೆ.
 
ಜೀವ ವೈವಿಧ್ಯದ ನಾಶದ ಬಗ್ಗೆ ಏನಾದರೂ ಮಾಡಬೇಕು ಅನ್ನುವ ತುರ್ತು ತಿಳಿದವರ ಮನಸ್ಸಿನಲ್ಲಿ ಹುಟ್ಟಿದರೂ ಹುಟ್ಟಬಹುದು. ಆದರೆ ಜಗತ್ತಿನ ಭಾಷಾ ವೈವಿಧ್ಯ ಉಳಿಸಿಕೊಳ್ಳುವ ಸಂಗತಿ ಅಷ್ಟು ತೀವ್ರವಾಗಿ ಮನಸ್ಸು ತಟ್ಟುವುದಿಲ್ಲ.

ಈಗ ಜಗತ್ತಿನಲ್ಲಿ ಇರುವ ಏಳು ಸಾವಿರ ಭಾಷೆಗಳಲ್ಲಿ ಒಂದೇ ಒಂದು ಸತ್ತರೆ ಕೂಡ ನಾವು ಯಾಕೆ ಕೇರ್ ಮಾಡಬೇಕು ಅನ್ನುವುದಕ್ಕೆ ಐದು ಮುಖ್ಯ ಕಾರಣಗಳಿವೆ.

1. ಜೀವ ವೈವಿಧ್ಯ ಎಷ್ಟು ಮುಖ್ಯವೋ ಭಾಷಾವೈವಿಧ್ಯ ಕೂಡ ಅಷ್ಟೇ ಮುಖ್ಯ; ವೈವಿಧ್ಯ ವಿಕಾಸಕ್ಕೆ ಕಾರಣ, ಏಕರೂಪತೆ ವಿನಾಶಕ್ಕೆ ಕಾರಣ.

2. ಒಂದೊಂದು ಭಾಷೆಯೂ ಅದನ್ನು ಬಳಸುವ ಸಮುದಾಯದ ಅಸ್ಮಿತೆಯನ್ನು ವ್ಯಕ್ತಪಡಿಸುತ್ತದೆ; ಭಾಷೆಯೊಂದರ ಸಾವು ಎಂದರೆ ಅದನ್ನು ಬಳಸುವ ಸಮುದಾಯದ ಅಸ್ಮಿತೆಯ ನಾಶ.

3. ಒಂದೊಂದು ಭಾಷೆಯೂ ಹಲವು ಚರಿತ್ರೆಗಳ ಉಗ್ರಾಣ; ಭಾಷೆಯನ್ನಾಡುವ ಜನ ಸಮುದಾಯದ ವಿವಿಧ ವರ್ಗಗಳ ವಿಭಿನ್ನ ಚರಿತ್ರೆಗಳೆಲ್ಲ ಭಾಷೆಯಲ್ಲಿ ಉಳಿದಿರುತ್ತವೆ, ಉಳಿಯಲು ಹೆಣಗುತ್ತಿರುತ್ತವೆ.

5. ಭಾಷೆಗಳು ತಮ್ಮಷ್ಟಕ್ಕೇ ಮುಖ್ಯ, ಆಸಕ್ತಿಕರ; ಈ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಮಾನಸಿಕ ಸಾಮರ್ಥ್ಯದಲ್ಲಿ, ದೈಹಿಕ ಸಾಮರ್ಥ್ಯದಲ್ಲಿ ಭಿನ್ನವಾಗಿರುವಂತೆಯೇ ಒಂದೊಂದು ಭಾಷೆಯೂ ಅನನ್ಯ ಮತ್ತು ವಿಶಿಷ್ಟ.

ಈ ಅಂಶಗಳನ್ನು ಪ್ರಧಾನವಾಗಿ ಪರಿಗಣಿಸುವ ಪರಿಸರ ಭಾಷಾಶಾಸ್ತ್ರ ಕಳೆದ ನಾಲ್ಕು ದಶಕಗಳಲ್ಲಿ ಅಗಾಧವಾಗಿ ಬೆಳೆದಿದೆ. ಭಾಷೆಯ ಬಳಕೆಯ ಅಧ್ಯಯನ, ಸಂಕಥನ ವಿಶ್ಲೇಷಣೆ, ತಾತ್ವಿಕ ಭಾಷಾಶಾಸ್ತ್ರ, ಭಾಷಾಬೋಧನೆ ಇವೆಲ್ಲ ಶಾಖೆಗಳೂ ಪರಿಸರ ಅಧ್ಯಯನದ ದೃಷ್ಟಿಕೋನಗಳನ್ನು ಅಳವಡಿಸಿಕೊಂಡಿವೆ.
 

ಪರಿಸರವನ್ನು ಭಾಷೆಯ ರೂಪಕವಾಗಿ ಬಳಸಿಕೊಂಡು ಪರಿಸರಕ್ಕೂ ಭಾಷೆಯ ಬೆಳವಣಿಗೆ ಮತ್ತು ಮರಣಕ್ಕೆ ಇರುವ ಸಂಬಂಧಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಕೆಲಸ ಆರಂಭವಾಗಿದೆ. ಈ ವಿವರಗಳನ್ನು ಮುಂದಿನ ವಾರಗಳಲ್ಲಿ ಇನ್ನಷ್ಟು ಪರಿಶೀಲಿಸೋಣ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT