ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗಟಾಗಿ ಕಾಡುವ ಬಂಗಾರದ ಬೆಲೆ

Last Updated 18 ಜೂನ್ 2013, 19:59 IST
ಅಕ್ಷರ ಗಾತ್ರ

ಚಿನ್ನ ಖರೀದಿಯಿಂದ ದೂರ ಇರಿ ಎಂದು ಕೇಂದ್ರ ಹಣಕಾಸು ಸಚಿವ  ಪಿ. ಚಿದಂಬರಂ ಅವರು ದೇಶದ ಜನತೆಗೆ ಮನವಿ ಮಾಡಿಕೊಂಡಿರುವ ಸುದ್ದಿ ಓದಿದಾಗ ನನಗೆ ಆಶ್ಚರ್ಯವಾಯಿತು. ಹಣಕಾಸು ಸಚಿವರೊಬ್ಬರು ಈ  ರೀತಿ ಮನವಿ ಮಾಡಿಕೊಂಡಿರುವುದು ದೇಶದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇರಬೇಕು.
ಭಾರತೀಯರ ಮನದಲ್ಲಿ ಸಾವಿರಾರು ವರ್ಷಗಳಿಂದ ಚಿರಸ್ಥಾಯಿಯಾಗಿರುವ ಚಿನ್ನದ ವ್ಯಾಮೋಹ ಬದಲಾಯಿಸುವ ಹತಾಶ ಪ್ರಯತ್ನ ಇದಾಗಿದೆ ಎಂದೂ ನನಗೆ ಅನಿಸುತ್ತದೆ.

ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆಯು ಅಸಾಮಾನ್ಯ ಬಗೆಯಲ್ಲಿ ದುರ್ಬಲಗೊಂಡು ಪ್ರತಿ ಡಾಲರ್‌ಗೆ 60 ರೂಪಾಯಿಗಳಷ್ಟು ಅಪಾಯಕಾರಿ ಮಟ್ಟದಲ್ಲಿ ಅಪಮೌಲ್ಯಗೊಂಡಿರುವುದೇ ಸಚಿವರು ಇಂತಹ ಮನವಿ ಮಾಡಿಕೊಳ್ಳಲು ಪ್ರಮುಖ ಕಾರಣವಾಗಿದೆ. ದುರ್ಬಲ ಕರೆನ್ಸಿಯು, ದೇಶದ ಆರ್ಥಿಕ ಪರಿಸ್ಥಿತಿಯು ಸಂಕಷ್ಟದಲ್ಲಿ ಇರುವುದರ ಸಂಕೇತವಾಗಿದ್ದು, ಇದರ ಪರಿಣಾಮಗಳು ವ್ಯಾಪಕವಾಗಿವೆ.

ಯಾವುದೇ ಹಣಕಾಸು ಸಚಿವ ಇಂತಹ ಪರಿಸ್ಥಿತಿಯನ್ನು ಕಾಣಲು ಬಯಸಲಾರ. ಈ ಕಾರಣಕ್ಕಾಗಿಯೇ ಚಿದಂಬರಂ ಅವರು, ಜನರು ಚಿನ್ನದಆಕರ್ಷಣೆಯಿಂದ ದೂರ ಇರಬೇಕೆಂದು ಬಯಸಿದ್ದಾರೆ.ಅಮೆರಿಕದ ಕರೆನ್ಸಿಯಾಗಿರುವ ಡಾಲರ್‌ನ ವಿನಿಮಯ ದರವು ಇತರ ಕರೆನ್ಸಿಗಳ ಎದುರು ಹೆಚ್ಚಳಗೊಂಡಿರುವುದು ಪೂರೈಕೆ ಮತ್ತು ಬೇಡಿಕೆಯ ಸರಳ ಆರ್ಥಿಕ ವಿದ್ಯಮಾನವಾಗಿದೆ. ದೇಶಿ ಅರ್ಥ ವ್ಯವಸ್ಥೆಯು ತನ್ನ ಅಗತ್ಯಕ್ಕಿಂತ ಹೆಚ್ಚಿನ ಡಾಲರ್‌ಗಳನ್ನು ಗಳಿಸಿದಾಗ ರೂಪಾಯಿ ಮೌಲ್ಯ ವೃದ್ಧಿಸುತ್ತದೆ. ಅಗತ್ಯ ಇರುವಷ್ಟು ಡಾಲರ್‌ಗಳನ್ನು ಗಳಿಸಲು ಸಾಧ್ಯವಾಗದೇ ಹೋದಾಗ, ರೂಪಾಯಿ ಮೌಲ್ಯ (ಡಾಲರ್ ಎದುರು ಅಪಮೌಲ್ಯಗೊಳ್ಳುತ್ತದೆ) ಕುಸಿಯುತ್ತದೆ.

ಇತ್ತೀಚಿನ ದಿನಗಳಲ್ಲಿ ದೇಶದ ವಿದೇಶ ವಿನಿಮಯದ ಒಳ ಹರಿವು ಕಡಿಮೆಯಾಗಿ, ಡಾಲರ್‌ಗಳ ಲಭ್ಯತೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಡಾಲರ್ ಮೌಲ್ಯ ಹೆಚ್ಚಳಗೊಂಡು ರೂಪಾಯಿ ಮೌಲ್ಯ ಕುಸಿದಿದೆ. ಡಾಲರ್ ಮತ್ತು ರೂಪಾಯಿ ವಿನಿಮಯ ದರದ ಏರಿಳಿತದ ಬಗ್ಗೆ ಈ ವಿವರಣೆಯು ತುಂಬ ಸರಳೀಕೃತವಾಗಿದೆ ಎಂದೂ ಕೆಲವರು ವಾದಿಸಬಹುದು. ಅದು ನಿಜವೂ ಹೌದು.

ಕರೆನ್ಸಿಯೊಂದರ ವಿನಿಮಯ ದರದ ಮೇಲೆ ಇನ್ನೂ ಹಲವಾರು ಸಂಗತಿಗಳು ಪ್ರಭಾವ ಬೀರುತ್ತವೆ ಎಂದರೂ, ಎಲ್ಲಕ್ಕಿಂತ ಮುಖ್ಯವಾಗಿ ಪೂರೈಕೆ ಮತ್ತು ಬೇಡಿಕೆಯೇ ಪ್ರಮುಖ ಕಾರಣವಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ದೇಶಿ ಅರ್ಥ ವ್ಯವಸ್ಥೆಯು ತನ್ನಲ್ಲಿ ಗಳಿಕೆಯಾಗುವ ಡಾಲರ್‌ಗಳಿಗಿಂತ ಹೆಚ್ಚು ಡಾಲರ್‌ಗಳನ್ನು ಬಳಸುತ್ತಿದೆ ಎಂದೂ ಈ ವಿದ್ಯಮಾನವನ್ನು ಬಣ್ಣಿಸಬಹುದು.

ಭಾರತವು ಹಲವು ಬಗೆಯ ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಳ್ಳಲು ಡಾಲರ್ ಬಳಸುತ್ತಿದೆ. ಆಮದು ಮಾಡಿಕೊಳ್ಳುವ ಸರಕುಗಳ ಪೈಕಿ ಚಿನ್ನದ ಆಮದಿಗೆ ಗಮನಾರ್ಹ ಪ್ರಮಾಣದಲ್ಲಿ ಡಾಲರ್‌ಗಳು ಬಳಕೆಯಾಗುತ್ತದೆ. ಇದರಿಂದಾಗಿ ಡಾಲರ್‌ಗಳ ಕೊರತೆ ಉದ್ಭವವಾಗುತ್ತದೆ.ದೇಶದಲ್ಲಿ ಪ್ರತಿ ವರ್ಷ 1000 ಟನ್‌ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗುತ್ತದೆ. ಪ್ರಮಾಣದಲ್ಲಿ ಇದು ತೈಲೋತ್ಪನ್ನಗಳ ನಂತರದ ಎರಡನೆ ಅತಿದೊಡ್ಡ ಆಮದು ಮಾಡಿಕೊಳ್ಳುವ ಸರಕಾಗಿದೆ.

ಭಾರತೀಯರು ನಿರಂತರವಾಗಿ ರೂಪಾಯಿಗಳಲ್ಲಿಯೇ ಚಿನ್ನ ಖರೀದಿಸುತ್ತಿರುವುದರಿಂದ ದೇಶಿ ಅರ್ಥ ವ್ಯವಸ್ಥೆಗೆ ತುಂಬ ಮಹತ್ವದ್ದಾಗಿರುವ ವಿದೇಶಿ ವಿನಿಮಯ ಕಡಿಮೆಯಾಗುತ್ತ ಹೋಗುತ್ತದೆ.ಕಡಿಮೆ ಪ್ರಮಾಣದಲ್ಲಿ ಚಿನ್ನ ಆಮದು ಮಾಡಿಕೊಳ್ಳುವುದರಿಂದ ದೇಶವು ಕೋಟ್ಯಂತರ ರೂಪಾಯಿಗಳ ವಿದೇಶಿ ವಿನಿಮಯ ಉಳಿಸಲು ಸಾಧ್ಯವಾಗುತ್ತದೆ. ಇದರಿಂದ ದೇಶಿ ಅರ್ಥ ವ್ಯವಸ್ಥೆಗೂ ಯಾವುದೇ ದುಷ್ಪರಿಣಾಮ ಉಂಟಾಗಲಾರದು. ಇದೇ ಕಾರಣಕ್ಕೆ ಹಣಕಾಸು ಸಚಿವರು ಚಿನ್ನ ಖರೀದಿ ಹಪಹಪಿಗೆ ಕೊಂಚ ಕಡಿವಾಣ ವಿಧಿಸಿ ಎಂದು ಜನರಲ್ಲಿ ಅಲವತ್ತುಕೊಂಡಿದ್ದಾರೆ.

ದೇಶದಲ್ಲಿ ಆಮದು ಮಾಡಿಕೊಳ್ಳುವ ಚಿನ್ನದ ಶೇ 55ರಿಂದ ಶೇ 60ರಷ್ಟು ಭಾಗವನ್ನು ಜನರು ಬಳಸುತ್ತಿದ್ದು, ಉಳಿದ ಪ್ರಮಾಣ ಹೂಡಿಕೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಏಷ್ಯಾದ ಇತರ ದೇಶಗಳಲ್ಲಿ ಈ ಅನುಪಾತವು ಶೇ 80ರಷ್ಟಿದೆ.ಹಿಂದಿನ ಆರು ವರ್ಷಗಳಲ್ಲಿ ಚಿನ್ನದ ಮೇಲಿನ ಬಂಡವಾಳ ಹೂಡಿಕೆಯು ಶೇ 15ರಷ್ಟು ಲಾಭ ತಂದುಕೊಟ್ಟಿರುವುದರಿಂದ ಹೂಡಿಕೆದಾರರಿಗೆ ತಮ್ಮ ಬಳಿ ಇರುವ ಹೆಚ್ಚುವರಿ ಉಳಿತಾಯ ಹಣವನ್ನು ಚಿನ್ನದಲ್ಲಿ ಹೂಡಿಕೆ ಮಾಡುವುದು ಹೆಚ್ಚು ಆಕರ್ಷಕವಾಗಿ ಕಂಡಿದೆ.

ಅನೇಕ ಹಣಕಾಸು ವಹಿವಾಟುದಾರರೂ ತಮ್ಮ ಹೂಡಿಕೆಯ ಶೇ 20ರಷ್ಟನ್ನು ಚಿನ್ನದಲ್ಲಿಯೇ ತೊಡಗಿಸುತ್ತಿದ್ದಾರೆ.ಹೂಡಿಕೆದಾರರ ಪಾಲಿಗೆ ಇತರ ವರಮಾನ ಮೂಲಗಳು ಹೆಚ್ಚಿನ ವರಮಾನ ತಂದುಕೊಡುವಲ್ಲಿ ವಿಫಲವಾಗಿವೆ.  ಸಣ್ಣ - ಪುಟ್ಟ ಹೂಡಿಕೆದಾರರೂ ಚಿನ್ನದಲ್ಲಿ ಹಣ ತೊಡಗಿಸಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ. ಚಿನ್ನದಲ್ಲಿ ಹಣ ತೊಡಗಿಸುವುದು ಎಂದರೆ, ಅದೊಂದು `ಸುರಕ್ಷಿತ ಸ್ವರ್ಗ' ಎಂದೂ ಪರಿಗಣಿತವಾಗಿದೆ.

  ಚಿನ್ನ ಖರೀದಿ ಮತ್ತು  ಅದನ್ನು ಮಾರಿ ಸುಲಭವಾಗಿ ನಗದು ಮಾಡಿಕೊಳ್ಳುವುದು ಹೂಡಿಕೆದಾರರ ಪಾಲಿಗೆ ಹೆಚ್ಚು ಅನುಕೂಲಕರವಾಗಿದೆ. ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಚಿನ್ನವು ವಿಶಿಷ್ಟ ಸ್ಥಾನ ಪಡೆದಿರುವುದೂ ಅದರ ಬೇಡಿಕೆ ಹೆಚ್ಚುವಂತೆ ಮಾಡಿದೆ.ಚಿನ್ನದ ಗಣಿಗಾರಿಕೆಯು ಕೆಲವೇ ಕೆಲ ದೇಶಗಳಲ್ಲಿ ನಡೆಯುತ್ತಿದೆ. ದಕ್ಷಿಣ ಆಫ್ರಿಕಾ , ಕೆನಡಾ, ರಷ್ಯಾ, ಚಿಲಿ ಮತ್ತಿತರ ಬೆರಳೆಣಿಕೆಯಷ್ಟು ದೇಶಗಳಲ್ಲಿ ಮಾತ್ರ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ. ಕಳಪೆ ಗುಣಮಟ್ಟದ ಅದಿರು ಮತ್ತು  ಪರಿಸರ ನಿರ್ಬಂಧದ  ಕಾರಣದಿಂದ ಗಣಿಗಾರಿಕೆಯೂ ದುಬಾರಿಯಾಗಿ ಪರಿಣಮಿಸಿದೆ.

ವಿಶ್ವದ ಪ್ರಮುಖ ಚಿನ್ನದ ಗಣಿಗಳು ಹಲವಾರು ಕಾರಣಗಳಿಗೆ ಸವಾಲುಗಳನ್ನು ಎದುರಿಸುತ್ತಿವೆ. ಹೀಗಾಗಿ ಅಲ್ಪಾವಧಿಯಲ್ಲಿ ಚಿನ್ನದ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ಸದ್ಯಕ್ಕೆ ಚಿನ್ನದ ಗಣಿಗಾರಿಕೆಯಲ್ಲಿ ಪ್ರತಿ ಔನ್ಸ್‌ಗೆ 1150 ಡಾಲರ್ (ರೂ 63,250) ವೆಚ್ಚ ಬರುತ್ತಿದ್ದು, ಇನ್ನಷ್ಟು ದುಬಾರಿಯಾಗುವ ಸಾಧ್ಯತೆಗಳೂ ಇವೆ. ಈ ಎಲ್ಲ ಕಾರಣಗಳಿಗೆ ಚಿನ್ನದ ಬೆಲೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಗಳು ತುಂಬ ವಿರಳ. ಈಗ ಇರುವ ಮಟ್ಟದಲ್ಲಿಯೇ ಸ್ಥಿರವಾಗುವ ಇಲ್ಲವೇ ಏರುವ ಸಾಧ್ಯತೆಗಳೇ ಹೆಚ್ಚು.

ದೇಶದಲ್ಲಿನ ಚಿನ್ನದ ಬೆಲೆಯು, ಅಮೆರಿಕದ ಡಾಲರ್‌ನ ವಿನಿಮಯ ದರ ಮತ್ತು ಅಂತರರಾಷ್ಟ್ರೀಯ ಬೆಲೆ ಮಟ್ಟ ಆಧರಿಸಿ ನಿರ್ಧಾರವಾಗುತ್ತದೆ. ಈ ಎರಡೂ ಕಾರಣಗಳಿಗೆ ದೇಶಿ ಗ್ರಾಹಕರು ಒಂದರ್ಥದಲ್ಲಿ ಸುರಕ್ಷಿತವಾಗಿದ್ದು, ಚಿನ್ನದ ಆಕರ್ಷಣೆಯಿಂದ ವಿಮುಖರಾಗುತ್ತಿಲ್ಲ. ಹೀಗಾಗಿ ಭಾರತೀಯರನ್ನು ಚಿನ್ನದ ವ್ಯಾಮೋಹದಿಂದ ದೂರ ಮಾಡುವುದು ಅಷ್ಟು ಸುಲಭವಲ್ಲ ಎಂಬುದು ಹಣಕಾಸು ಸಚಿವರಿಗೆ ಮನದಟ್ಟಾಗಿದೆ. ಚಿನ್ನಕ್ಕೆ ಶೇ 40ರಷ್ಟು ಬೇಡಿಕೆಯು ಹೂಡಿಕೆದಾರರಿಂದ ಮತ್ತು ಕೆಲ ನಿಯಂತ್ರಣಗಳಿಗೆ ಒಳಪಟ್ಟಿರುವ  ಇತರ ಹಣಕಾಸು ಯೋಜನೆಗಳ ನಿರ್ವಾಹಕರಿಂದ ಬರುತ್ತಿದೆ.

ರೂಪಾಯಿ ಮೌಲ್ಯ ಕುಸಿತ, ಸೀಮಾಸುಂಕವು (ಕಸ್ಟಮ್ಸ) ಶೇ 8ಕ್ಕೆ ಏರಿಕೆ, ಆಮದು ನಿರ್ಬಂಧಿಸುವ ಕಠಿಣ ಹಣಕಾಸು ಕ್ರಮಗಳು, ಚಿನ್ನದ ಮಾರಾಟದ ಮೇಲೆ ಬ್ಯಾಂಕ್‌ಗಳಿಗೆ ನಿರ್ಬಂಧ ವಿಧಿಸುವ ಸರ್ಕಾರದ ಕ್ರಮಗಳು ಕೆಲ ಮಟ್ಟಿಗೆ ಫಲ ನೀಡಿವೆ. ಅಲ್ಪಾವಧಿಯಲ್ಲಿ ಚಿನ್ನದ ಆಮದು ಪ್ರಮಾಣವು ಇತ್ತೀಚಿನ ಕೆಲ ವಾರಗಳಲ್ಲಿ ಕಡಿಮೆಯಾಗಿದೆ. ಈ ಕ್ರಮಗಳು ದೀರ್ಘಾವಧಿಯಲ್ಲಿ ಫಲ ನೀಡುವ ಬಗ್ಗೆ ನನಗಂತೂ ಅನುಮಾನಗಳಿವೆ. ಚಿನ್ನದ ಆಮದು ನಿರ್ಬಂಧಿಸುವ ಇನ್ನಷ್ಟು ಕಠಿಣ ಕ್ರಮಗಳು ಚಿನ್ನದ  ಕಳ್ಳಸಾಗಣೆ, ಕಾನೂನುಬಾಹಿರ ಆಮದು ಹೆಚ್ಚು ಆಕರ್ಷಕವಾಗಿ ಕಾಣಬಹುದು.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ತಪ್ಪು ಎಂದೂ ನನಗೆ ಅನಿಸುತ್ತದೆ. ದೇಶಿ ಅರ್ಥ ವ್ಯವಸ್ಥೆಯಲ್ಲಿ ಡಾಲರ್‌ಗಳ ಪೂರೈಕೆ ಹೆಚ್ಚಿಸಲು ಸರಕು ಮತ್ತು ಸೇವೆಗಳ ರಫ್ತು ಪ್ರಮಾಣ ಹೆಚ್ಚಿಸುವ ಮೂಲಕ ಸದ್ಯಕ್ಕೆ ಉದ್ಭವಿಸಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು. ಸರಕುಗಳ ರಫ್ತು ಶೇ 20 ರಿಂದ ಶೇ 25ರ ಪ್ರಮಾಣದಲ್ಲಿ ಮಾತ್ರ ಹೆಚ್ಚುತ್ತಿದೆ. ಇನ್ನೊಂದೆಡೆ ಆಮದು ಪ್ರಮಾಣವು ನಿಯಂತ್ರಣ ಮೀರಿ ಹೆಚ್ಚುತ್ತಿರುವುದರಿಂದ ವಿದೇಶಿ ವಿನಿಮಯ ಕೊರತೆ ಹೆಚ್ಚಳಗೊಂಡು ರೂಪಾಯಿ ಮೇಲೆ ಒತ್ತಡ ಹೆಚ್ಚುತ್ತಲೇ ಸಾಗಿದೆ.

ಈ ಬಿಕ್ಕಟ್ಟು ದೂರ ಮಾಡಲು ಕೇಂದ್ರ ಸರ್ಕಾರವು ತನ್ನೆಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ರಫ್ತು ಪ್ರಮಾಣ ಹೆಚ್ಚಿಸಬೇಕಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರವು ವಿಶ್ವದ ಎಲ್ಲ ದೇಶಗಳಲ್ಲಿ ತನ್ನ ಕಚೇರಿಗಳನ್ನು ತೆರೆಯಬೇಕು. ದೇಶದ ಸರಕು ಮತ್ತು ಸೇವೆಗಳ ರಫ್ತು ಹೆಚ್ಚಿಸುವ ಹೊಣೆಗಾರಿಕೆಯನ್ನು ಅವುಗಳಿಗೆ ವಹಿಸಬೇಕು. ಕೆಲ ದೇಶಗಳನ್ನು ಹೊರತುಪಡಿಸಿದರೆ ಬಹತೇಕ ದೇಶಗಳಲ್ಲಿ ಭಾರತದ ರಫ್ತು ವಹಿವಾಟಿಗೆ ಸದ್ಯಕ್ಕೆ ಉತ್ತೇಜಕರ ಪರಿಸ್ಥಿತಿ ಇಲ್ಲ.

ನಮ್ಮ ನೆರೆಹೊರೆಯ ದೇಶಗಳೂ ಸೇರಿದಂತೆ ಇನ್ನೂ ಅನೇಕ ಏಷ್ಯಾದ ದೇಶಗಳು ಹೊರ ದೇಶಗಳಲ್ಲಿನ ತಮ್ಮ ಕಚೇರಿಗಳಿಂದ ಸಾಕಷ್ಟು ಪ್ರಯೋಜನ ಪಡೆದಿವೆ. ಈ ದೇಶಗಳ ಅಧಿಕಾರಿಗಳು ನಿಯಮಗಳ ಆಚೆಯೂ ಕಾರ್ಯಪ್ರವೃತ್ತರಾಗಿ ಹಲವಾರು ಆರ್ಥಿಕ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಂಡು ರಫ್ತು ಹೆಚ್ಚಿಸಲು ಮುಂದಾದ ಹಲವಾರು ನಿದರ್ಶನಗಳಿವೆ.ಚಿನ್ನದ ಬೆಲೆಗೆ ಸಂಬಂಧಿಸಿದಂತೆ ಇತರ ಯಾವುದೇ ದೇಶ ನಾವೀಗ ಎದುರಿಸುತ್ತಿರುವಂತಹ ಬಿಕ್ಕಟ್ಟು ಎದುರಿಸಿಲ್ಲ. ಒಗಟಾಗಿ ಕಾಡುವ ಚಿನ್ನದ ಈ ವಿದ್ಯಮಾನಕ್ಕೆ ಸರಳ ಪರಿಹಾರವೂ ಕಾಣುತ್ತಿಲ್ಲ.
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT