ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಕು ಕೆಡುಕಿನಾಚೆ ಇನಿತು ಭರವಸೆ

Last Updated 18 ಮೇ 2017, 19:30 IST
ಅಕ್ಷರ ಗಾತ್ರ

ಒಂದು ವಾರದ ಅವಧಿಯಲ್ಲಿ ಎರಡು ಪ್ರಮುಖ ದೇಶಗಳ ಚುಕ್ಕಾಣಿ ಹಿಡಿದ ಇಬ್ಬರು ನಾಯಕರು ಇದೀಗ ಜಗತ್ತಿನ ಗಮನ ಸೆಳೆದಿದ್ದಾರೆ. ಎಮ್ಯಾನುಯಲ್ ಮ್ಯಾಕ್ರೊನ್ ಅಧ್ಯಕ್ಷರಾಗುವ ಮೂಲಕ ಫ್ರಾನ್ಸ್‌ನಲ್ಲಿ ಹೊಸ ರಾಜಕೀಯ ಅಧ್ಯಾಯವೊಂದು ಆರಂಭವಾಗಿದೆ. ಇತ್ತ ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ಕದನ ಕಾರ್ಮೋಡದ ನಡುವೆ ದಕ್ಷಿಣ ಕೊರಿಯಾದಲ್ಲಿ ಮೂನ್ ಜೆ-ಇನ್ ಉದಯಿಸಿದ್ದಾರೆ. ಈ ಇಬ್ಬರು ಉತ್ಸಾಹಿ ನಾಯಕರು ಜಾಗತಿಕ ರಾಜಕೀಯದ ಲೆಕ್ಕಾಚಾರಗಳನ್ನು ಬದಲಿಸಬಲ್ಲರೇ ಎಂಬುದು ಸದ್ಯದ ಕುತೂಹಲ.

ಮೊದಲಿಗೆ ಫ್ರಾನ್ಸ್ ಬೆಳವಣಿಗೆಗಳನ್ನು ಗಮನಿಸುವುದಾದರೆ, 39ರ ಮ್ಯಾಕ್ರೊನ್, ಅಧ್ಯಕ್ಷೀಯ ಚುನಾವಣೆ ಯಲ್ಲಿ ಗೆಲ್ಲುತ್ತಾರೆ ಎಂದು ಖಚಿತವಾಗಿ ಹೇಳುವುದು ತಿಂಗಳ ಕೆಳಗೆ ಸಾಧ್ಯವಿರಲಿಲ್ಲ, ಅದರಲ್ಲೂ ರಾಷ್ಟ್ರೀಯ ವಾದಕ್ಕೆ ಅಮೆರಿಕ, ಯುರೋಪ್‌ಗಳಲ್ಲಿ ಪುಷ್ಟಿ ದೊರೆತು, ಬ್ರಿಟನ್ ಐರೋಪ್ಯ ಒಕ್ಕೂಟ ತೊರೆಯುವ ನಿರ್ಧಾರ ಕೈಗೊಂಡ ಬಳಿಕ ಫ್ರಾನ್ಸ್ ಕೂಡ ಒಕ್ಕೂಟದ ವಿರುದ್ಧ ನಿಲುವು ತಳೆಯಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದರು. ಪರಿಸ್ಥಿತಿಯೂ ಹಾಗೆಯೇ ಇತ್ತು. ಒಂದೆಡೆ ಉಕ್ರೇನ್, ಸಿರಿಯಾದ ಅರಾಜಕತೆಯಿಂದಾಗಿ ವಲಸಿಗರು ಸಾಗರೋಪಾದಿಯಲ್ಲಿ ಐರೋಪ್ಯ ರಾಷ್ಟ್ರಗಳತ್ತ ಧಾವಿಸಿ ಬಂದರು. ಐರೋಪ್ಯ ರಾಷ್ಟ್ರಗಳಲ್ಲಿ ವಲಸೆ ವಿರೋಧಿ ಧ್ವನಿ ಎದ್ದಿತು. ಲಾಗಾಯ್ತಿನಿಂದಲೂ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಮಾನವ ಹಕ್ಕುಗಳಿಗೆ ಪ್ರಾಶಸ್ತ್ಯ ಕೊಟ್ಟ ಫ್ರಾನ್ಸ್ ದೇಶದಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ಎಂಬ ನವರಾಷ್ಟ್ರೀಯವಾದ ಜಾಗೃತವಾಯಿತು. ವರ್ಷ ಒಪ್ಪತ್ತಿನಲ್ಲಿ ನಡೆದ ನಾಲ್ಕಾರು ಭಯೋತ್ಪಾದಕ ದಾಳಿಗಳು ಇಸ್ಲಾಮಿಕ್ ಭಯೋತ್ಪಾದನೆಯನ್ನು ಚರ್ಚಾ ವಿಷಯವನ್ನಾಗಿಸಿದವು. ಇದರಿಂದ ಬಲಪಂಥೀಯ ಪಕ್ಷಗಳಿಗೆ ಪುಷ್ಟಿ ದೊರೆಯಿತು. ಹಾಗಾಗಿ ಒಕ್ಕೂಟ ವಿರೋಧಿ ನಿಲುವನ್ನು ಪ್ರತಿಪಾದಿಸುತ್ತಾ, ಇಸ್ಲಾಮಿಕ್ ಭಯೋತ್ಪಾದನೆಯನ್ನು ನೇರವಾಗಿ ಖಂಡಿಸುತ್ತಿದ್ದ ಮೆರಿನ್ ಲೆ ಪೆನ್ ಅಧ್ಯಕ್ಷ ಪದವಿಯ ಪ್ರಬಲ ಉಮೇದುವಾರರಾಗಿ ಕಾಣಿಸಿಕೊಂಡರು.

ಜೊತೆಗೆ ಆರ್ಥಿಕ ಅಧಃಪತನಕ್ಕೆ ಆಸ್ಪದ ಕೊಟ್ಟ, ನಿರುದ್ಯೋಗ ಸಮಸ್ಯೆಗೆ ಅಂಕುಶ ಹಾಕುವಲ್ಲಿ ಸೋತ ಎಡ ಪಕ್ಷಗಳು ಜನಪ್ರಿಯತೆ ಕಳೆದುಕೊಂಡವು. ಆ ಹೊತ್ತಿನಲ್ಲಿ ಬಲಕ್ಕೂ ಹೊರಳದೇ ಎಡಕ್ಕೂ ವಾಲದೇ ಮಧ್ಯಮ ಮಾರ್ಗ ಆಯ್ದುಕೊಂಡ, ಉದಾರವಾದಿ ಮ್ಯಾಕ್ರೊನ್, ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡ ಜನಾಂದೋಲನದ ನೇತಾರರಾದರು. ಇನ್ನು, ಮ್ಯಾಕ್ರೊನ್ ಅಪ್ರತಿಮ ಚಾಣಾಕ್ಷ ಎನ್ನುವುದಂತೂ ದಿಟ. ರಾಜಕೀಯದ ಹೊರತಾಗಿ ಮ್ಯಾಕ್ರೊನ್ ಮುಕುಟದಲ್ಲಿ ಹಲವು ಗರಿಗಳಿವೆ. ತತ್ವಶಾಸ್ತ್ರದಲ್ಲಿ ಉನ್ನತ ವ್ಯಾಸಂಗ, ಪಿಯಾನೊ ನುಡಿಸುವುದರಲ್ಲಿ ಪರಿಣತಿ, ಅರ್ಥಶಾಸ್ತ್ರ ಕೈಗಾರಿಕೋದ್ಯಮದಲ್ಲಿ ಪ್ರಾಜ್ಞತೆ ಹೀಗೆ ಮ್ಯಾಕ್ರೊನ್ ಆಸಕ್ತಿಯ ಹರವು ದೊಡ್ಡದು. ಮೊದಲಿಗೆ ನಾಗರಿಕ ಸೇವೆಯತ್ತ ಒಲವು ಹೊಂದಿದ್ದ ಮ್ಯಾಕ್ರೊನ್ ನಂತರ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ, ನೆಸ್ಲೆ ಮತ್ತು ಫೈಸರ್ ನಡುವೆ ದೊಡ್ಡ ಮೊತ್ತದ ವ್ಯವಹಾರ ಕುದುರಿಸುವುದರಲ್ಲಿ ಸಫಲರಾಗಿದ್ದರು. ಕೈಗಾರಿಕೆ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅವರು ತೋರಿದ ಚಾಣಾಕ್ಷತನ ಹಿಂದಿನ ಅಧ್ಯಕ್ಷ ಹೋಲಾಂಡ್ ಗಮನ ಸೆಳೆಯಿತು. ಹಾಗಾಗಿಯೇ ಆರ್ಥಿಕ ಸುಧಾರಣೆಗೆ ಹೋಲಾಂಡ್ ಮುಂದಾದಾಗ, ಮ್ಯಾಕ್ರೊನ್‌ ಅವರನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡರು. ನಂತರ ಹಣಕಾಸು ಮತ್ತು ಕೈಗಾರಿಕಾ ಸಚಿವರಾಗಿ ಕೆಲಸ ಮಾಡುವ ಅವಕಾಶ ಮ್ಯಾಕ್ರೊನ್ ಅವರದ್ದಾಯಿತು.

ಈ ಬಾರಿಯ ಫ್ರಾನ್ಸ್ ಚುನಾವಣೆಗೆ ಮಹತ್ವ ಬಂದದ್ದು, ಚುನಾವಣೆ ಐರೋಪ್ಯ ಒಕ್ಕೂಟದ ಅಸ್ತಿತ್ವಕ್ಕೆ ತಳಕು ಹಾಕಿಕೊಂಡಿತ್ತು ಎಂಬ ಕಾರಣದಿಂದ. ಮೊದಲು ರಾಜಕೀಯವಾಗಿ ಎಡ– ಬಲ ಎಂದು ಹೋಳಾಗುತ್ತಿದ್ದ ಫ್ರಾನ್ಸ್, ಈ ಬಾರಿ ಒಕ್ಕೂಟದ ಪರ ಮತ್ತು ವಿರುದ್ಧ ಎಂದು ವಿಭಜನೆಗೊಂಡಿತ್ತು. ಜೊತೆಗೆ ರಷ್ಯಾ ಕೂಡ ಫ್ರಾನ್ಸ್ ಚುನಾವಣೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿತು. ಉಕ್ರೇನ್ ಅತಿಕ್ರಮಣ ವಿಷಯದಲ್ಲಿ ಐರೋಪ್ಯ ಒಕ್ಕೂಟ ರಷ್ಯಾ ಕ್ರಮವನ್ನು ವಿರೋಧಿಸಿತ್ತು. ಹಾಗಾಗಿ ರಷ್ಯಾ ಹಿತಾಸಕ್ತಿಗೆ ಪೂರಕವಾಗಿ ಪುಟಿನ್, ಒಕ್ಕೂಟ ವಿರೋಧಿ ಧ್ವನಿಯನ್ನು ಪೋಷಿಸಿದರು. ಮ್ಯಾಕ್ರೊನ್ ವಿರುದ್ಧ ಜನಾಭಿಪ್ರಾಯ ರೂಪಿಸಲು, ಮೆರಿನ್ ಗೆಲುವಿಗೆ ಸಹಾಯ ಮಾಡಲು ರಷ್ಯಾ ಯತ್ನಿಸಿತು. ಮ್ಯಾಕ್ರೊನ್ ಅವರಿಗೆ ಸಂಬಂ ಧಿಸಿದ ಇ-ಮೇಲ್ ಮತ್ತು ಕಡತಗಳನ್ನು ಚುನಾವಣೆ ಸನಿಹ ವಿರುವಾಗ ಬಿಡುಗಡೆಗೊಳಿಸಿತು. ಈ ಬಗ್ಗೆ ಅಮೆರಿಕದ ರಾಷ್ಟ್ರಿಯ ಭದ್ರತಾ ಸಂಸ್ಥೆ (NSA) ನಿರ್ದೇಶಕ ಮೈಕ್ ರೋಗರ್ಸ್ ಅಮೆರಿಕದ ಸೆನೆಟ್‌ನಲ್ಲಿ ತಮ್ಮ ಬಳಿ ಈ ಕುರಿತ ನಿಖರ ಮಾಹಿತಿ ಇರುವುದಾಗಿ ಪ್ರಸ್ತಾಪಿಸಿದ್ದಾರೆ. ಆದರೆ ರಷ್ಯಾ ಮಾತ್ರ ತನ್ನ ಪಾತ್ರವನ್ನು ನಿರಾಕರಿಸುತ್ತಲೇ ಬಂದಿದೆ.

ಇನ್ನು, ಕುಂಠಿತ ಆರ್ಥಿಕ ಪ್ರಗತಿ, ಯುರೋ ವಲಯದ ಸಂಕಷ್ಟ, ಜಾಗತೀಕರಣ ವಿರೋಧಿ ಧ್ವನಿ, ವಲಸೆ ಸಮಸ್ಯೆ, ಭಯೋತ್ಪಾದನೆ ವಿಷಯಗಳು ಫ್ರಾನ್ಸ್ ಚುನಾವಣೆಯಲ್ಲಿ ಚರ್ಚೆಗೆ ಬಂದವು. ಮೇಲ್ನೋಟಕ್ಕೆ ಒಕ್ಕೂಟ ವಿರೋಧಿ ನಿಲುವು ಪ್ರಬಲವಾಗಿ ಕಂಡಿದ್ದರಿಂದ ಮ್ಯಾಕ್ರೊನ್ ಗೆಲುವು ಅನುಮಾನ ಎಂಬುದೇ ರಾಜಕೀಯ ತಜ್ಞರ ಅಭಿಪ್ರಾಯ ವಾಗಿತ್ತು. ಆದರೆ ಚುನಾವಣೆ ಸನಿಹವಾದಂತೆ ಸೋಷಿಯಲಿಸ್ಟ್ ಮತ್ತು ರಿಪಬ್ಲಿಕನ್ ಪಕ್ಷಗಳು ಮ್ಯಾಕ್ರೊನ್ ಅವರನ್ನು ಬೆಂಬಲಿಸಿದ್ದು, ಬಲಪಂಥೀಯ ಅಭ್ಯರ್ಥಿ ಮೆರಿನ್ ಲೆ ಪೆನ್ ವಿರುದ್ಧ ಧ್ರುವೀಕರಣಗೊಂಡ ಮತಗಳು ಮ್ಯಾಕ್ರೊನ್ ಗೆಲುವಿಗೆ ಪೂರಕವಾದವು.

ಹೀಗೆ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ದಕ್ಕಿಸಿಕೊಂಡ ಮ್ಯಾಕ್ರೊನ್ ಪಾಲಿಗೆ ಆಡಳಿತ ಅಷ್ಟು ಸುಲಭವಾಗಲಾರದು. ಮ್ಯಾಕ್ರೊನ್ ರಾಜಕೀಯವಾಗಿ ತೀರಾ ಅನುಭವಿಯಲ್ಲ, ಮೇಲಾಗಿ ಅವರಿಗೆ ರಾಜಕೀಯದ ಬಗ್ಗೆ ಪ್ರೀತಿಯೇನೂ ಇರಲಿಕ್ಕಿಲ್ಲ. ಆದರೆ ಬದಲಾವಣೆ ತರಬೇಕು ಎಂಬ ತುಡಿತ ಇದ್ದಂತಿದೆ. ಆಡಳಿತದ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವ, ಹೊಸ ನೇಮಕಾತಿಗಳಿಗೆ ತಡೆಯೊಡ್ಡುವ, ನಿವೃತ್ತಿ ವಯೋಮಾನ ಸಡಿಲಿಸುವ, ಉದ್ಯಮಗಳ ಮೇಲಿನ ತೆರಿಗೆ ಕಡಿತಗೊಳಿಸುವ, ಪದೇ ಪದೇ ವೃತ್ತಿಯನ್ನು ನಿರಾಕರಿಸುವ ಯುವಕರಿಗೆ ನಿರುದ್ಯೋಗ ಭತ್ಯೆ ನಿಲ್ಲಿಸುವ, ವಾರದ ಕೆಲಸದ ಅವಧಿಯನ್ನು 35 ಗಂಟೆಗೆ ನಿಗದಿಪಡಿಸುವ, ಸಚಿವರು ಮತ್ತು ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಕಾಲಕಾಲಕ್ಕೆ ಅಳೆಯುವ ಬಗ್ಗೆ ಚುನಾವಣೆಯ ಸಮಯದಲ್ಲಿ ಮ್ಯಾಕ್ರೊನ್ ಮಾತನಾಡಿದ್ದರು. ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದೇ? ನೋಡಬೇಕು.

ಜೊತೆಗೆ, ಕುಸಿಯುತ್ತಿರುವ ಐರೋಪ್ಯ ಒಕ್ಕೂಟಕ್ಕೆ ಇಂಬು ಕೊಡುವುದು, ಜರ್ಮನಿಯೊಂದಿಗೆ ಬಾಂಧವ್ಯ ಬಲಪಡಿಸಿಕೊಳ್ಳುವುದು, ಆರ್ಥಿಕ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು, ವಲಸೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಮ್ಯಾಕ್ರೊನ್ ಮುಂದಿರುವ ಸವಾಲು. ಮುಖ್ಯವಾಗಿ ಅರ್ಥ ವ್ಯವಸ್ಥೆ ಬಲಗೊಳ್ಳಬೇಕು ಎಂಬುದು ಫ್ರಾನ್ಸ್ ಜನರ ಅಪೇಕ್ಷೆ. ಹಾಗಾಗಿ ಉದ್ಯಮ ವಿಸ್ತರಣೆಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಿಸುವ, ಜಟಿಲ ಕಾರ್ಮಿಕ ಕಾಯಿದೆಗೆ ಬದಲಾವಣೆ ತರುವ ಜರೂರಿದೆ. ಆದರಿದು ಸಲೀಸಲ್ಲ. 

ಇದಿಷ್ಟು ಫ್ರಾನ್ಸ್ ಕತೆಯಾದರೆ, ಇತ್ತ ಆಡಳಿತ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದ ದಕ್ಷಿಣ ಕೊರಿಯಾ ಹೊಸ ಅಧ್ಯಕ್ಷರನ್ನು ಆರಿಸಿದೆ. ಈ ಹಿಂದಿನ ಅಧ್ಯಕ್ಷರನ್ನು ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಚುನಾವಣೆ ನಡೆಯುವಾಗ ಹಿಂದಿನ ಅಧ್ಯಕ್ಷರು ಜೈಲಿನಲ್ಲಿದ್ದರು. ಭ್ರಷ್ಟಾಚಾರ ಚುನಾವಣೆಯ ಪ್ರಮುಖ ವಿಷಯವಾಯಿತು. ಹಾಗಾಗಿ ‘ನಾನು ಬರಿಗೈಯಲ್ಲಿ ಬಂದಿದ್ದೇನೆ, ಹಾಗೆಯೇ ಖಾಲಿ ಕೈಗಳೊಂದಿಗೆ ಕಚೇರಿಯಿಂದ ಹೊರನಡೆಯುತ್ತೇನೆ’ ಎಂದು ಮೂನ್ ಜೆ-ಇನ್ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಮೊದಲ ಭಾಷಣದಲ್ಲಿ ಹೇಳಿದ್ದಾರೆ. ಭ್ರಷ್ಟಾಚಾರದ ಜೊತೆಗೆ ಕುಸಿಯುತ್ತಿರುವ ಆರ್ಥಿಕತೆ, ನಿರುದ್ಯೋಗ ಸಮಸ್ಯೆ ಚುನಾವಣಾ ವಿಷಯವಾಗಿದ್ದವು. ದಕ್ಷಿಣ ಕೊರಿಯಾ ಉದ್ಯಮಶೀಲತೆಯಿಂದ ಬಹುಬೇಗ ಅಭಿವೃದ್ಧಿ ಹೊಂದಿದ ರಾಷ್ಟ್ರ. ಒಂದು ಹಂತದಲ್ಲಿ ಜಪಾನಿಗೆ ಪೈಪೋಟಿ ಒಡ್ಡುವಷ್ಟು ದಕ್ಷಿಣ ಕೊರಿಯಾ ಬೆಳೆದು ನಿಂತಿತು. ಏಷ್ಯಾದ ನಾಲ್ಕನೇ ದೊಡ್ಡ ಆರ್ಥಿಕತೆಯಾಗಿ ರೂಪುಗೊಂಡಿತು. ಆದರೆ ಕೆಲವು ವರ್ಷಗಳಿಂದೀಚೆಗೆ ದಕ್ಷಿಣ ಕೊರಿಯಾದ ಆರ್ಥವ್ಯವಸ್ಥೆ ಕಳೆಗುಂದಿದೆ. ಅಗತ್ಯ ಕ್ರಮಗಳ ಮೂಲಕ ಮೂನ್, ಆರ್ಥಿಕ ವರ್ಚಸ್ಸನ್ನು ವೃದ್ಧಿಸಬೇಕಿದೆ.

ಇನ್ನು, ಅಮೆರಿಕ - ಉತ್ತರ ಕೊರಿಯಾ ಸಂಬಂಧ ಹಳಸಿರುವ ಈ ಹೊತ್ತಿನಲ್ಲಿ ಮೂನ್ ಜೆ-ಇನ್ ಉಭಯ ದೇಶಗಳ ನಡುವೆ ಶಾಂತಿ ಸೇತುವೆಯಾಗಲಿದ್ದಾರೆಯೇ? ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ‘ಚೀನಾ ಸಹಕಾರ ದೊಂದಿಗೆ ಕೊರಿಯಾ ಪರ್ಯಾಯ ದ್ವೀಪವನ್ನು ಅಣ್ವಸ್ತ್ರ ಮುಕ್ತವಾಗಿಸಲು ಪ್ರಯತ್ನಿಸಲಾಗುವುದು. ಈ ಕುರಿತು ವಾಷಿಂಗ್ಟನ್ ಮತ್ತು ಬೀಜಿಂಗ್ ಜೊತೆ ಮಾತುಕತೆ ನಡೆಸಲು ಸಿದ್ಧ. ಅಗತ್ಯವಾದಲ್ಲಿ ಉತ್ತರ ಕೊರಿಯಾಕ್ಕೂ ಹೋಗುತ್ತೇನೆ’ ಎಂದು ತಮ್ಮ ಮೊದಲ ಭಾಷಣದಲ್ಲಿ ಮೂನ್ ಹೇಳಿದ್ದಾರೆ.

ಆದರೆ ಮೂನ್ ಆಯ್ಕೆಯ ಬೆನ್ನ ಹಿಂದೆಯೇ, ಉತ್ತರ ಕೊರಿಯಾ ಆರನೆಯ ಬಾರಿಗೆ ಅಣ್ವಸ್ತ್ರ ಪರೀಕ್ಷೆಗೆ ಮುಂದಾಗಿದೆ. ಅಮೆರಿಕದ ಪ್ರಮುಖ ನಗರಗಳನ್ನು ತಲುಪಬಲ್ಲ ಅಣು ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದೆ. ಇದು ಟ್ರಂಪ್ ನಿದ್ದೆಗೆಡಿಸಿರುವ ಸಂಗತಿ. ಹಾಗಾಗಿ ಉತ್ತರ ಕೊರಿಯಾವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸುವ, ದಿಗ್ಬಂಧನದ ಮೂಲಕ ಒತ್ತಡ ಹೇರುವ ತಂತ್ರವನ್ನು ಅಮೆರಿಕ ಅನುಸರಿಸುತ್ತಿದೆ. ಒಂದೊಮ್ಮೆ ಮೂನ್ ಉತ್ತರ ಕೊರಿಯಾದ ಜೊತೆ ಮಾತುಕತೆಗೆ ಮುಂದಾದರೆ, ಅಮೆರಿಕದ ಈ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತದೆ.

ಹೀಗಿದ್ದೂ ಉತ್ತರ ಕೊರಿಯಾದೊಂದಿಗೆ ಸಖ್ಯ ಬೆಳೆಸಲು ಮೂನ್ ಒಂದು ವಾರದಲ್ಲೇ ಎರಡು ಹೆಜ್ಜೆ ಮುಂದಿಟ್ಟಿದ್ದಾರೆ. ದಕ್ಷಿಣ ಕೊರಿಯಾದ ಗೂಢಚರ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದ, ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವೆ ಈ ಹಿಂದೆ ಎರಡು ಶೃಂಗಸಭೆ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೂ ಹೂನ್ ಅವರನ್ನು ರಾಷ್ಟ್ರೀಯ ಗುಪ್ತದಳದ ಮುಖ್ಯಸ್ಥರನ್ನಾಗಿಸಿ ಆದೇಶ ಹೊರಡಿಸಲಾಗಿದೆ. 2000 ಮತ್ತು 2007ರಲ್ಲಿ ಉತ್ತರ ಕೊರಿಯಾ ಜೊತೆ ದ್ವಿಪಕ್ಷೀಯ ಮಾತುಕತೆಯಲ್ಲಿ ಮುಖ್ಯಪಾತ್ರ ವಹಿಸಿದ್ದ, ಲೀ ನಾಕ್-ಯಾನ್ ಅವರನ್ನು ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇದು ಮೂನ್ ಆದ್ಯತೆ ಏನು ಎಂಬುದನ್ನು ಹೇಳುತ್ತಿದೆ. ಆದರೆ ಕಾವು ಆರುವುದಕ್ಕೆ ಸಮಯ ಬೇಕು. ಉತ್ತರ ಕೊರಿಯಾದ ಬೆದರಿಕೆಯನ್ನು ಅಮೆರಿಕ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂದರೆ, ಸಂಭಾವ್ಯ ದಾಳಿಯನ್ನು ತಡೆಯಲು ಸಿಐಎ ಮೂಲಕ ‘ಕೊರಿಯಾ ಮಿಷನ್ ಸೆಂಟರ್’ ಆರಂಭಿಸಿದೆ. ಇದರ ಮೂಲಕ ಅಮೆರಿಕದ ಗುಪ್ತಚರ ಇಲಾಖೆಯ ನುರಿತ ಅಧಿಕಾರಿಗಳು ಉತ್ತರ ಕೊರಿಯಾ ತಂತ್ರಗಳಿಗೆ ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಏನೇ ಹೇಳಿ, ಈ ಅವಳಿ ಕೊರಿಯಾ ರಾಷ್ಟ್ರಗಳು ನೆಮ್ಮದಿಯಿಂದ ಬದುಕಬೇಕಾದರೆ ಅದಕ್ಕೆ ಅಮೆರಿಕ, ಚೀನಾ ಮತ್ತು ಜಪಾನ್ ಸಹಕಾರ ಬೇಕು. ಮೂನ್ ಈ ಮೂರು ದೇಶಗಳ ಜೊತೆ ಹೇಗೆ ವ್ಯವಹರಿಸುತ್ತಾರೆ ಎಂಬುದರ ಮೇಲೆ, ಅವರ ಶಾಂತಿ ಪ್ರಯತ್ನದ ಯಶಸ್ಸು ನಿಂತಿದೆ. ಜಪಾನ್‌ನೊಂದಿಗೆ ದಕ್ಷಿಣ ಕೊರಿಯಾ ಉತ್ತಮ ಸ್ನೇಹ ಹೊಂದಿದ್ದರೂ, ಚೀನಾ ಸಖ್ಯ ಅಷ್ಟಕಷ್ಟೇ. ಈ ಹಿಂದೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಒಂದಾಗಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ THAAD (Terminal High Altitude Area Defense) ರಚನೆಗೆ ಮುಂದಾದಾಗ ಚೀನಾ ಕೋಪಗೊಂಡಿತ್ತು. ಅದನ್ನು ತಡೆಯಲು ಒತ್ತಡದ ತಂತ್ರವಾಗಿ ದಕ್ಷಿಣ ಕೊರಿಯಾದ ಹಲವು ಕಂಪೆನಿಗಳನ್ನು ಚೀನಾದಿಂದ ಹೊರಹಾಕಿತ್ತು. ಪ್ರವಾಸೋದ್ಯಮಕ್ಕೆ ಪೆಟ್ಟುಕೊಡಲು ಚೀನಿಯರು ಅತ್ತ ಹೋಗದಂತೆ ತಡೆದಿತ್ತು. ಹಾಗಾಗಿ ರಕ್ಷಣಾ ವ್ಯವಸ್ಥೆಯ ವಿಷಯದಲ್ಲಿ ಮೂನ್ ಮತ್ತು ಟ್ರಂಪ್ ಎರಡನೆಯ ಹೆಜ್ಜೆ ಇಡುವರೇ? ಆರ್ಥಿಕತೆಯನ್ನು ಮೇಲೆತ್ತಲು ಚೀನಾದೊಂದಿಗೆ ಸ್ನೇಹ ಅಗತ್ಯವಾಗಿದ್ದು ಈ ಎರಡನ್ನೂ ಮೂನ್ ಹೇಗೆ ನಿರ್ವಹಿಸುತ್ತಾರೋ?

ಒಟ್ಟಿನಲ್ಲಿ ಐರೋಪ್ಯ ಒಕ್ಕೂಟದ ಒಡಕಿನ ದನಿಯ ನಡುವೆ ಮ್ಯಾಕ್ರೊನ್ ಮುಂದಿಡುವ ಹೆಜ್ಜೆಗಳು ಕೇವಲ ಅವರ ರಾಜಕೀಯ ಭವಿಷ್ಯವನ್ನಷ್ಟೇ ಅಲ್ಲ ಫ್ರಾನ್ಸ್ ಮತ್ತು ಐರೋಪ್ಯ ಒಕ್ಕೂಟದ ಭವಿಷ್ಯವನ್ನೂ ನಿರ್ಧರಿಸಲಿವೆ. ಅಮೆರಿಕದೊಂದಿಗೆ ಅದೇ ಸಖ್ಯ ಉಳಿಸಿಕೊಂಡು, ಜಪಾನ್, ಚೀನಾವನ್ನು ಸರಿದೂಗಿಸಿಕೊಂಡು, ಉತ್ತರ ಕೊರಿಯಾವನ್ನು ಸಂಭಾಳಿಸಿಕೊಂಡು ಹೋಗುವ ತಂತಿ ಮೇಲಿನ ನಡಿಗೆ ಮೂನ್ ಅವರಿಗೆ ಸಿದ್ಧಿಸಿದರೆ ಜಾಗತಿಕ ತಳಮಳ ಕೊಂಚ ತಹಬಂದಿಗೆ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT