ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಹುಟ್ಟಿದವರು

Last Updated 13 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನಮ್ಮ ದೀರ್ಘಕಾಲದ ಸುತ್ತಾಟದಲ್ಲಿ ತೋಳಗಳು ತಮ್ಮ ಗುಟ್ಟನ್ನು ಬಿಟ್ಟುಕೊಡದಿದ್ದರೂ ನಿಜವಾದ ಭಾರತದ ಒಂದು ಒಳನೋಟವನ್ನು ತೆರೆದಿಟ್ಟವು.
ನಾವು ದಕ್ಷಿಣ ಪ್ರಸ್ಥಭೂಮಿಯ ನಡುಭಾಗದೆಲ್ಲೆಲ್ಲೋ ಸಾಗುತ್ತಿರುವಾಗ ವಿಸ್ತಾರವಾಗಿ ಹರಡಿದ್ದ ಬಯಲಿನ ಬಳಿ ಬಂದೆವು.

ಮೇಜಿನಂತೆ ಸಮತಟ್ಟಾಗಿದ್ದ ಆ ಬಯಲು, ಸಮುದ್ರದಂತೆ ದಿಗಂತದತ್ತ ಬಾಗಿತ್ತು. ಆ ಬರಡು ಭೂಮಿಯಲ್ಲಿ ಅಲ್ಲೊಂದು ಇಲ್ಲೊಂದು ಚಿಕ್ಕಪುಟ್ಟ ಪೊದರುಗಳಿದ್ದವು. ಆ ಪೊದೆಗಳ ನೆರಳಿನಲ್ಲಿ ತೋಳಗಳು ಅಡಗಿ ಕುಳಿತಿರಬಹುದೆಂದು ಎಚ್ಚರಿಕೆಯಿಂದ ಕಣ್ಣಾಯಿಸುತ್ತಿದ್ದೆವು.

ಉಸಿರಾಟವನ್ನು ನಿಲ್ಲಿಸಿದಂತೆ ಬಯಲು ನಿಸ್ತೇಜವಾಗಿ ಮಲಗಿತ್ತು. ಆಗಿನ್ನೂ ಮುಂಜಾನೆ ಹತ್ತು ಗಂಟೆಯ ಸಮಯ. ಆಗಲೇ ತಾಪಮಾನ ನಲವತ್ತು ಡಿಗ್ರಿ ಸೆಂಟಿಗ್ರೇಡ್‌ಗೆ ಏರಿತ್ತು. ಬೆಂದ ಭೂಮಿ ಸುಡುವ ಹಬೆಯನ್ನು ಉಸಿರಾಡುತ್ತಾ, ಮರೀಚಿಕೆ ಚಿತ್ರಗಳನ್ನು ಬಿಡಿಸುತ್ತಿತ್ತು. ದನಕರುಗಳ ಗೆಜ್ಜೆಯ ನಾದವಿಲ್ಲದೆ, ಹಕ್ಕಿಗಳ ಕಲರವವಿಲ್ಲದೆ ಬಯಲು ಮೌನವಾಗಿತ್ತು.

ಆಗ, ಇದ್ದಕ್ಕಿದ್ದಂತೆ ಎಲ್ಲಿಂದಲೋ ರೈತನೊಬ್ಬ ತನ್ನ ಬಡಕಲು ಎತ್ತುಗಳೊಡನೆ ಪ್ರತ್ಯಕ್ಷನಾದ. ಹರಿದಿದ್ದ ಅವನ ಅಂಗಿಯನ್ನು ಹಲವು ನೂಲುದಾರಗಳು ಹೇಗೋ ಬಂದಿಸಿ ಹಿಡಿದಿದ್ದವು. ನೆತ್ತಿ ಸುಡುತ್ತಿದ್ದ ಆ ಬಿರುಬಿಸಿಲಿಗಾಗಲೀ ಅಥವ ಆ ಬರಡು ಬಯಲಿನ ವಿಸ್ತೀರ್ಣಕ್ಕಾಗಲೀ ನಿಸ್ತೇಜತೆಗಾಗಲೀ ಜಗ್ಗದೆ ಬದಿಗೆ ಸರಿದು, ಯಾವುದೋ ಮೂಲೆಯಲ್ಲಿ ನೇಗಿಲನ್ನು ಇಳಿಬಿಟ್ಟು ಉಳುಮೆ ಆರಂಭಿಸಿದ. ಆತ, ಆತನ ಹತಾರಗಳು, ಆತನ ಭರವಸೆ, ನಿರೀಕ್ಷೆಗಳು... ಇನ್ನೊಂದೆಡೆ ಹತಾಶೆ, ನಿರಾಶೆಗಳೆಲ್ಲ ಮೈದಳೆದಂತಿದ್ದ ಆ ಅಗಾಧವಾದ ಬಯಲು. ಆ ಕ್ಷಣ ನಮ್ಮನ್ನು ದಿಗ್ಭ್ರಮೆಗೊಳಿಸಿತ್ತು.

ಭರವಸೆಯ ಕಣಗಳೇ ಇಲ್ಲದ ಆ ಸನ್ನಿವೇಶದಲ್ಲಿ ಅವನ ಪ್ರಯತ್ನ ಕ್ರೂರ ವ್ಯಂಗ್ಯವಾಗಿ ನಮ್ಮನ್ನು ಕಾಡಿತ್ತು. ಆತನ ಹುಮ್ಮಸ್ಸನ್ನು ಮೆಚ್ಚಲಾಗಲಿ, ಪ್ರೋತ್ಸಾಹಿಸಲಾಗಲಿ ನಮ್ಮಲ್ಲಿ ಕಿಂಚಿತ್ತೂ ಧೈರ್ಯವಿರಲಿಲ್ಲ. ನಮ್ಮೊಂದಿಗಿದ್ದ ಸ್ಥಳೀಯ ಮಿತ್ರನೊಬ್ಬ ಸಹ ಸನ್ನಿವೇಶವನ್ನು ಕಂಡು ವಿಚಿಲಿತನಾದಂತೆ ಕಂಡ.

ತುಸುಹೊತ್ತಿನ ಬಳಿಕ ನಗೆ ಬೀರುತ್ತ ಇಲ್ಲಿಯ ಸುಡುವ ಬಿಸಿಲು ಮತ್ತು ಬಡತನದಿಂದಾಗಿ ಈ ಭಾಗದ ಪ್ರತಿಮನೆಯಲ್ಲೂ ಇಂತಹವರೊಬ್ಬರು ಇರುತ್ತಾರೆ, ಖಂಡಿತ ಆತನಿಗೆ ಹುಚ್ಚು ಹಿಡಿದಿದೆ ಎಂದು ಸನ್ನೆ ಮಾಡಿ ತಿಳಿಸಿದ. ಅದು ಸೂಕ್ಷ್ಮತೆಯಿಲ್ಲದ ಒರಟು ಪ್ರತಿಕ್ರಿಯೆಯಂತೆ ಕಂಡಿತು. ಆದರೆ, ನಮಗೂ ಸಹ ಆ ಕ್ಷಣದಲ್ಲಿ ಆತ ಹೇಳಿದ್ದು ಸರಿ ಇರಬಹುದೆನಿಸಿತು.

ಬಹುಶಃ ಇದು ಗ್ರಾಮೀಣ ಭಾರತದ ಅತಿ ಸಾಮಾನ್ಯ ದೃಶ್ಯವಾಗಿದ್ದರೂ ಆ ಸನ್ನಿವೇಶದಲ್ಲಿ ಅದು ಹುಚ್ಚುಮನುಷ್ಯನ ಪ್ರಯತ್ನದಂತೆ ಕಂಡಿತು. ನಮ್ಮ ಕಣ್ಣುಗಳಿಗೂ ಆ ದೃಶ್ಯವನ್ನು ನಂಬಲಾಗಲಿಲ್ಲ. ಯಾವ ಭರವಸೆಗಳಿಲ್ಲದೆ, ಓಡುವ ಮೋಡಗಳನ್ನು ನಂಬಿ, ಪ್ರಾಮಾಣಿಕವಾಗಿ ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದನ್ನು ಕಂಡು ಮನ ಕರಗಿತು. ಆದರೂ ಆತ ಭಾರತದ ರೈತರನ್ನು ಪ್ರತಿನಿಧಿಸುವ ಭರವಸೆ ಮತ್ತು ಸ್ವಾಭಿಮಾನದ ಸಂಕೇತವಾಗಿ ಕಂಡ.

ಈ ಭೀಕರ ಚಿತ್ರಣದಿಂದ ಹೊರಬಂದಾಗ, ದಿಗಂತದಂಚಿನಲ್ಲಿ ಮರೀಚಿಕೆಯೊಳಗೊಂದು ಚಿತ್ರ ಮೂಡಿ, ಹಳದಿ ಪೇಟಧಾರಿಯೊಬ್ಬ ಶೂನ್ಯದಿಂದ ಪ್ರತ್ಯಕ್ಷಗೊಂಡು ನಮ್ಮೆಡೆಗೆ ಬರುತ್ತಿರುವಂತೆ ಕಂಡಿತು. ಆ ಹಳದಿ ಪೇಟದ ಯಜಮಾನನ ನಡಿಗೆಗೆ ಒಂದು ಉದ್ದನೆಯ ಕೋಲು ಆಸರೆಯಾಗಿತ್ತು. ಅವನ ಹಿಂದೆ ಏಳುತ್ತಿದ್ದ ತೆಳ್ಳನೆಯ ದೂಳಿನ ಮೋಡ ಅವನನ್ನು ಹಿಂಬಾಲಿಸಿದ್ದ ಉಳಿದೆಲ್ಲ ದೃಶ್ಯವನ್ನು ಮಂಕಾಗಿಸಿತ್ತು. ಬಹುಶಃ ಯಾವುದೋ ಅಲೆಮಾರಿಗಳ ಗುಂಪಿರಬಹುದೆಂದು ತಿಳಿದೆವು.

ಇಲ್ಲಿನ ಬಯಲುಗಳೇ ಹಾಗೆ... ತೆರೆದಮನಸ್ಸಿನ ಪ್ರವಾಸಿಗನಾಗಿದ್ದರೆ ಸಾಕು.  ಇಲ್ಲಿ ಅಲೆಮಾರಿತನ ಒಂದು ಜೀವನಶೈಲಿ. ಎಲ್ಲಿ ಬೇಕಾದರೆ ಅಲ್ಲಿ ನಿಮಗೆ ಅಲೆಮಾರಿಗಳ ತಂಡವೊಂದು ಎದುರಾಗಬಹುದು. ನಮ್ಮ ಅಲೆದಾಟದಲ್ಲಿ ಒಮ್ಮೆ ಕಡುಬಣ್ಣಗಳಿಂದ ಅಲಂಕೃತಗೊಂಡ ಐದಾರು ಒಂಟೆತ್ತಿನ ಗಾಡಿಗಳು ಬಿಡಾರ ಹೂಡಿರುವುದು ಕಂಡಬಂತು. ಕೆಲವು ಗಾಡಿಗಳ ಮೇಲೆ ಗೋಪುರಗಳಂತಿದ್ದರೆ, ಇನ್ನೊಂದರ ಮೇಲೆ ಹಾರಾಡುವ ಬಾವುಟ.

ರಾಮಾಯಣದ ಕಾಲ್ಪನಿಕ ಚಿತ್ರಣಗಳನ್ನು ನೆನಪಿಗೆ ತಂದು ಕಾಲಕೋಶದಲ್ಲಿ ಕರೆದೊಯ್ದ ಅನುಭವ. ಆದರೆ ಅವರು ನಮ್ಮನ್ನು ನಿಜವಾಗಲೂ ರಾಮಾಯಣದ ದಿನಗಳಿಗೆ ಕರೆದೊಯ್ಯಬಲ್ಲರು. ಏಕೆಂದರೆ ಅದೇ ಅವರ ಕಸುಬು. ಹಳ್ಳಿಹಳ್ಳಿಗಳಲ್ಲಿ ನಿಂತು, ರಾಮಾಯಣದ ಕತೆಗಳನ್ನು ಬಿಡಿಸುತ್ತಾ ಪಾತ್ರಗಳನ್ನು ಅಭಿನಯಿಸುತ್ತಾ ಸಾಗಬೇಕು.

ಅವರು ಯಾವ ಊರಿನವರು ಎಂದು ಕೇಳಿದರೆನ್ನಿ. ನೀವು ಎಂದೂ ನೋಡಿರದ, ಕೇಳಿರದ, ಮುಂದೆಯೂ ನೋಡದ ಯಾವುದೋ ಊರಿನ ಹೆಸರನ್ನು ಹೇಳುತ್ತಾ ಹೋಗುತ್ತಾರೆ.

ಬಂದು ಎಷ್ಟು ದಿನಗಳಾಯ್ತೆಂದು ಕೇಳಿದರೆ... ‘ನಿನ್ನೆಯಷ್ಟೆ, ಇಂದು ಹೊರಡಬೇಕಿತ್ತು. ರಾತ್ರಿ ನಮ್ಮ ಹೆಂಗಸರಿಗೆ ಮಗು ಹುಟ್ಟಿದೆ. ಹಾಗಾಗಿ ನಾಳೆ ಹೊರಡುತ್ತೇವೆ’ ಎನ್ನುವ ಉತ್ತರ. ಆಸ್ಪತ್ರೆಯ ಅಥವ ವೈದ್ಯರ ನೆರವಿಲ್ಲದೆ ಹುಟ್ಟಿದ ಮಗು ನಲ್ವತೆಂಟು ತಾಸುಗಳಲ್ಲಿ ಚಲಿಸುವ ಗಾಡಿಗಳನ್ನೇರಬೇಕು.

ಅಲೆಮಾರಿಯಾಗಿ ಹುಟ್ಟಿ ಅಲೆಮಾರಿಯಾಗಿಯೇ ಬೆಳೆಯಬೇಕು. ಹನುಮನ ಉಲ್ಲಂಘನೆಯನ್ನು ಅಥವ ರಾಕ್ಷಸರೊಡನೆ ನಡೆದ ಯುದ್ಧವನ್ನು ಅಭಿನಯಿಸುತ್ತಾ ಸುಗ್ಗಿಯ ಗಾಳಿಯೊಡನೆ ಚಲಿಸುವಾಗ ಬದುಕು ಮುಂದುವರಿಯುತ್ತದೆ. ಇದು ಕೊನೆಯಿಲ್ಲದ ಪಯಣ.

ಈ ನಡುವೆ ನಾವಿದ್ದ ಬಯಲಿನ ದಿಗಂತದಲ್ಲಿ ಮಸುಕಾಗಿದ್ದ ಚಿತ್ರಣ ಬಿಡಿಸಿಕೊಳ್ಳತೊಡಗಿತು. ಆ ಹಳದಿ ಪೇಟಧಾರಿಯನ್ನು ದೊಡ್ಡ ಅಲೆಮಾರಿ ತಂಡವೊಂದು ಹಿಂಬಾಲಿಸಿತ್ತು. ಇದರಲ್ಲಿ ಕುದುರೆಗಳಿದ್ದವು, ಆದರೆ ಗಾಡಿಗಳಿರಲಿಲ್ಲ. ಕುದುರೆಗಳ ಬೆನ್ನಮೇಲೆ ಕೋಳಿ, ನಾಯಿಮರಿ, ಕುರಿಮರಿ, ಪುಟಾಣಿ ಮಕ್ಕಳು, ಪಾತ್ರೆ ಪಗಡೆಗಳೆಲ್ಲ ಮೆರವಣಿಗೆ ಹೊರಟಿದ್ದವು. ಜೊತೆಯಲ್ಲಿ ಸಾವಿರಾರು ಕುರಿಗಳು, ನಾಯಿಗಳು. ಅವೆಲ್ಲವುಗಳ ಹಿಂದೆ ಹೆಂಗಸರು ಮತ್ತು ಅವರ ಟೆಂಟ್ ಮತ್ತಿತ್ತರ ಸಾಮಾನುಗಳನ್ನು ಹೊತ್ತ ಇನ್ನಷ್ಟು ಕುದುರೆಗಳು.

ಪ್ರಾಚೀನ ಶೈಲಿಯ ಬದುಕಿಗೆ ಅಂಟಿಕೊಂಡಿರುವ ಈ ಕುರಿಗಾಹಿಗಳದ್ದು ಅತ್ಯಂತ ಸರಳ ಬದುಕು. ಸಾವಿರಾರು ವರ್ಷಗಳಿಂದ ದಕ್ಷಿಣ ಪ್ರಸ್ಥಭೂಮಿಯ ಬಯಲುಗಳಲ್ಲಿ ಅಲೆಯುತ್ತಲೇ ಇವರ ಸಂಸ್ಕೃತಿ ಅರಳಿದೆ. ಆದರೆ ಈ ಪ್ರಸ್ಥಭೂಮಿಯ ಅಕ್ಷಾಂಶ ರೇಖಾಂಶಗಳನ್ನೆಲ್ಲಾ ಬಲ್ಲ ಇವರ ಬದುಕಿಗೆ, ಇಂದು ಭರವಸೆಯೇ ಇಲ್ಲ.

ಗಣಿಗಳನ್ನು ಕೊರೆದು, ಕೈಗಾರಿಕೆಗಳನ್ನು ಬಿತ್ತಿ, ‘ಜಿ.ಡಿ.ಪಿ.’ ವೃದ್ಧಿಸುವ ಭರಾಟೆಯಲ್ಲಿ ತಲೆಮಾರುಗಳಿಂದ ಸವೆಸಿದ ಅವರ ಹಾದಿಗಳೆಲ್ಲಾ ಅಳಿಸಿಹೋಗಿವೆ. ಅಭಿವೃದ್ಧಿಗೆ ಪೂರಕವೆನ್ನುವ ವಿಸ್ತಾರವಾದ ರಸ್ತೆಗಳಿಗೆ ಹೆಣೆದ ಕಬ್ಬಿಣದ ಬೇಲಿಗಳು ಇವರ ಮುಕ್ತ ಅಲೆದಾಟವನ್ನು ನಿರ್ಬಂಧಿಸಿವೆ. ಸರ್ಕಾರದ ಯಾವ ಸೌಲಭ್ಯಗಳನ್ನೂ ನಿರೀಕ್ಷಿಸದೆ ತಮ್ಮಷ್ಟಕ್ಕೆ ಅಲೆದಾಡುವ ಈ ಮಂದಿಗೆ ಒಂದಿಷ್ಟು ಬಯಲನ್ನು ಮೀಸಲಿಡುವ ಸೌಜನ್ಯತೆ ನಮಗಿಲ್ಲ.

ನಾಲ್ಕೈದು ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಉತ್ಸಾಹದಲ್ಲಿ ಲಕ್ಷಾಂತರ ಮಂದಿಯ ಕಸುಬನ್ನು ಕಸಿದುಕೊಳ್ಳುವ ಹುನ್ನಾರ ದುರದೃಷ್ಟಕರ. ಇದನ್ನೆಲ್ಲಾ ಕಂಡಾಗ ಕಾಲಾಂತರದಲ್ಲಿ ಅರಳಿದ ಜನಪದವೊಂದು ಕಣ್ಮರೆಯಾಗಲು ಸಿದ್ಧತೆ ನಡೆಸಿರುವಂತೆ ಕಂಡಿತು.

ಜಗತ್ತಿನಾದ್ಯಂತ ಸಂಭವಿಸಿದ ಇಂತಹ ದುರಂತ ಘಟನೆಗಳ ಸರಣಿಗಳೇ ನಮ್ಮ ಮುಂದಿವೆ. ಮರಿಷಿಯಾನ ದೇಶದ ಪಶ್ಚಿಮ ಕರಾವಳಿಯಲ್ಲಿ ನೆಲೆಸಿದ್ದ ಸಾಂಪ್ರದಾಯಿಕ ಮೀನುಗಾರರನ್ನು ನಿರ್ಲಕ್ಷಿಸಿದ ಸರ್ಕಾರ ವಿದೇಶಿ ಕಂಪೆನಿಗಳಿಗೆ ಮೀನು ಹಿಡಿಯುವ ಗುತ್ತಿಗೆ ನೀಡಿತು.

ಸ್ವಲ್ಪ ಸಮಯದಲ್ಲೇ ಸ್ಥಳೀಯ ಮೀನುಗಾರರಿಗೆ ಮೀನುಗಳು ಅಲಭ್ಯವಾದಾಗ ಸಹಾರ ಮರುಭೂಮಿ ಪಕ್ಕದ ಸಹೇಲ್ ಪ್ರದೇಶಕ್ಕೆ ಅವರನ್ನು ಸ್ಥಳಾಂತರಿಸಿ ಪುನರ್ವಸತಿ ಮಾಡಲಾಯಿತು. ಕೆಲವು ಕಾಲ ಅಲ್ಲಿ ವ್ಯವಸಾಯ ಅತ್ಯಂತ ಲಾಭದಾಯಕವಾಗಿ ಕಂಡಿತು. ಜನ ಸಂತೃಪ್ತಿಯನ್ನು ಕಂಡರು.

ಆದರೆ ಕೆಲವೇ ವರ್ಷಗಳಲ್ಲಿ ಆ ಬದಲಾವಣೆಗಳೆಲ್ಲ ದುಃಸ್ವಪ್ನವಾಗಿ ಕಾಡಿತು. ಮರುಭೂಮಿಯ ಅಂಚಿನಲ್ಲಿ ಫಲವತ್ತಾಗಿದ್ದ ಭೂಮಿ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಅವರಿಗೆ ತಿಳಿದಿರಲಿಲ್ಲ. ಒತ್ತಡಕ್ಕೆ ಬಳಲಿದ ಭೂಮಿಯನ್ನು ಸಹಾರ ಮರುಭೂಮಿ ಆವರಿಸಿತು. ನಿರುದ್ಯೋಗಿಗಳಾದ ಸಮುದಾಯ ಭಿಕ್ಷುಕರಾಗಿ ಪರಿವರ್ತನೆಗೊಂಡರು. ದುಖಃವನ್ನು ಮರೆಯಲು ಮಾದಕ ವಸ್ತುಗಳಿಗೆ ಶರಣಾದರು. ದೂರ ದೃಷ್ಟಿಯಿಲ್ಲದ ಕ್ಷಣಿಕ ಲಾಭಕ್ಕಾಗಿ ವಿಶಿಷ್ಟ ಸಂಸ್ಕೃತಿಯೊಂದನ್ನು ಸರ್ಕಾರ ನಾಶಮಾಡಿತ್ತು.

ಇದಲ್ಲದೆ ಜಗತ್ತಿನ ಬಹುಪಾಲು ಸಮಾಜಗಳಲ್ಲಿ ಅಲೆಮಾರಿಗಳನ್ನು ಸಂದೇಹದಿಂದ ನೋಡುವ ಪ್ರವೃತ್ತಿ ಸಾಮಾನ್ಯ. ಖಾಯಂ ವಿಳಾಸವಿಲ್ಲದೆ ಚಲಿಸುತ್ತಲೇ ಇರುವ ಈ ಮಂದಿ ಮೋಸಗಾರರೆಂಬ ಅಥವ ಕೆಡುಕು ಬಗೆಯುವವರೆಂಬ ಸಂಶಯ, ನೆಲೆನಿಂತ ನಾಗರೀಕ ಸಮಾಜದ ಸುಪ್ತಮನಸ್ಸಿನಲ್ಲಿ ಗಾಢವಾಗಿ ಬೇರೂರಿದೆ.

ಹೀಗೆ ಈ ಅಲೆಮಾರಿಗಳ ಬದುಕು–ಭವಿಷ್ಯವನ್ನು ಯೋಚಿಸುತ್ತಿದ್ದಾಗ ಹಳ್ಳಿಗಳಲ್ಲಿ ಹಾಸುಹೊಕ್ಕಾಗಿರುವ ದಂತಕತೆಗಳ ನೆನಪಾಯಿತು. ಹಳ್ಳಿಗರ ಕಣ್ಣಿನಲ್ಲಿ ಈ ಕುರಿಗಾಹಿ ಅಲೆಮಾರಿಗಳು, ತೋಳ, ಮಿಥ್ಯೆ ಮತ್ತು ದಂತಕತೆಗಳು ಬಿಡಿಸಲಾಗದ ಒಗಟುಗಳಂತೆ. ಇವರನ್ನು ಹಿಂಬಾಲಿಸಿ ತೋಳಗಳು ಸದಾ ತಿರುಗುತ್ತವೆಂದು ಹಳ್ಳಿಗರ ನಂಬಿಕೆ. ಇದೇನೇ ಇರಲಿ, ಈ ಅಲೆಮಾರಿಗಳಿಗೂ ತೋಳಗಳಿಗೂ ಏನೋ ಸಂಬಂಧವಿರಲೇ ಬೇಕು. ನಮಗೆ ಇವರ ಸಹಾಯದಿಂದ ತೋಳಗಳನ್ನು ಹುಡುಕಬಹುದೇನೋ ಎಂಬ ಒಂದು ಸಣ್ಣ ಆಸೆ.

ಇದೇನು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಈ ಅಲೆಮಾರಿಗಳು ಹೊಸಬರೊಡನೆ ಬೆರೆಯಲು, ಮಾತನಾಡಲು ಹಿಂಜರಿಯುತ್ತಾರೆ. ಹಾಗಾಗಿ ಏನೋ ಸುತ್ತಿ ಬಳಸಿ ಮಾತು ಆರಂಭಿಸಲು ಬಹಳ ಹೊತ್ತೇ ಹಿಡಿಯಿತು.

‘ಎತ್ತ ಸಾಗಿದ್ದೀರಿ...?’
‘ಆಂಧ್ರಪ್ರದೇಶ...’
‘ಮತ್ತೆ ಮರಳುವುದು...?’
‘ದೀಪಾವಳಿಗೆ...?’
ಇದ್ದಕ್ಕಿದ್ದಂತೆ ಒಂದು ಮರು ಪ್ರಶ್ನೆ... ‘ನೀವೆಲ್ಲಿಯವರ್ರೀ...?’
‘ಮೈಸೂರು...’
‘ಓ ಮೈಸೂರ್ ಏನ್ರಿ... ನಿಮಗೆ ಸಿದ್ದರಾಮಯ್ಯನವರು ಗೊತ್ತೇನ್ರಿ... ಮುಖ್ಯಮಂತ್ರಿಗಳು...’
ಕುತೂಹಲ ಮೂಡಿ ಏಕೆಂದು ಕೇಳಿದೆವು.

‘ನಿಮಗೆ ಅವರ ಪರಿಚಯವಿದ್ದರೆ ನಮಗೂ ಒಂದು ರುಪಾಯಿ ಅಕ್ಕಿ ಕೊಡಕ್ಕೇಳ್ರಿ...’ ಎಂದು ವಿನಂತಿಸಿದಾಗ, ಅದು ಹಾಸ್ಯದ ಮಾತೋ ಗಂಭೀರದ ಮಾತೋ ಒಂದೂ ಅರ್ಥವಾಗಲಿಲ್ಲ.

ಈ ದೇಶದಲ್ಲಿ ಶಾಶ್ವತ ವಿಳಾಸಗಳನ್ನು ತಲುಪುವುದೇ ಕಷ್ಟ. ಇನ್ನು ಚಲಿಸುವ ವಿಳಾಸಗಳಿಗೆ ಸರ್ಕಾರದ ಅಕ್ಕಿ... ಇದೊಂದು ಸಾಧ್ಯವಾಗದ ಕೆಲಸ. ಆದರೆ, ಅಕ್ಕಿಗಾಗಿ ಅವರನ್ನು ಒಂದೆಡೆ ಶಾಶ್ವತವಾಗಿ ನೆಲೆಸುವಂತೆ ಹೇಳುವುದಾಗಲೀ ಪ್ರೇರೇಪಿಸುವುದಾಗಲೀ ತಪ್ಪಾಗಬಹುದು.

ಮಳೆ, ಗಾಳಿ, ಬಿಸಿಲುಗಳನ್ನು ಲೆಕ್ಕಿಸದೆ ಚಲಿಸುವ ಮೋಡಗಳೊಂದಿಗೆ ಅವರು ನಿತ್ಯ ಸಾಗುತ್ತಲೇ ಇರಬೇಕು. ಕಾಲಾಂತರದಿಂದ ಪ್ರಕೃತಿಯೊಂದಿಗೆ ಬೆಸೆದು ವಿಕಸಿಸಿದ ಸಂಸ್ಕೃತಿಯೊಂದು ಕೇವಲ ಅಕ್ಕಿಗಾಗಿ ಒಂದೆಡೆ ನೆಲೆ ನಿಂತರೆ ಅದು ಬರಡಾಗಿ ಹೋಗುತ್ತದೆ. ಎಂದು ಯೋಚಿಸುತ್ತಾ ಅವರೊಂದಿಗೆ ಸ್ವಲ್ಪ ಸಮಯ ಹರಟುತ್ತಾ ತೋಳಗಳ ಬಗ್ಗೆ ನಮಗಿರುವ ಆಸಕ್ತಿಯನ್ನು ತಿಳಿಸಿದೆವು.

ತೋಳಗಳ ವಿಷಯ ಪ್ರಸ್ತಾಪವಾದ ಕೂಡಲೆ ಒಮ್ಮೆಗೆ ಅವರು ಮೌನವಾದರು. ಆ ಕುರಿಗಾಹಿಗಳಲ್ಲಿದ್ದ ಹಿರಿಯರನೇಕರು ನಮ್ಮತ್ತ ತೀಕ್ಷ್ಣ ದೃಷ್ಟಿ ಹರಿಸಿದರು. ಅವರ ಕಣ್ಣುಗಳಲ್ಲಿ ಅಸಹನೆ, ಸಂಶಯಗಳು ವ್ಯಕ್ತವಾಗತೊಡಗಿದವು. ತೋಳಗಳ ಬಗೆಗೆ ಮಾತನಾಡಲು ಅವರಾರೂ ಸಿದ್ಧರಿಲ್ಲವೆಂಬುದು ಮನವರಿಕೆಯಾಯಿತು. ಆದರೆ ಅವರ ಆತಂಕಕ್ಕೆ ಕಾರಣವೇನೆಂದು ನಮಗೆ ಅರ್ಥವಾಗಲಿಲ್ಲ.

ಸ್ವಲ್ಪ ಸಮಯದ ನಂತರ ನಮ್ಮೆಡೆಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಬರಲಾರಂಭಿಸಿದವು. ‘ತೋಳ ಯಾಕ್ರಿ ಬೇಕು ನಿಮಗೆ? ಅದನ್ನ ಕೊಲ್ಲ್‌ಬಡೀಬೇಕಿತ್ತೇನ್ರೀ ನೀವು? ನೀವು ತೋಳ ಹೊಡೆಯೊರಾದ್ರೆ ನಾವು ನಿಮ್ಮಕೂಡ ಮಾತಾಡಂಗಿಲ್ರೀ’.

ಅವರಿಗೆ ತೋಳಗಳ ಬಗ್ಗೆ ವಿಶೇಷ ಕಾಳಜಿ ಇದ್ದಂತೆ ಕಂಡುಬಂತು. ಅರೆ... ಇದೇನು, ತಮ್ಮ ಕುರಿಗಳನ್ನು ಕದ್ದೊಯ್ಯುವ ತೋಳಗಳ ಬಗ್ಗೆ ಇವರಿಗೇಕೆ ಇಷ್ಟೊಂದು ಕಾಳಜಿ ಎಂದು ಗೊಂದಲ ಮೂಡಿತು. ಅಷ್ಟೇ ಅಲ್ಲ ಪ್ರಪಂಚದಾದ್ಯಂತ ಹೆಚ್ಚಿನ ಕುರಿಗಾಹಿಗಳು, ಸರ್ಕಾರಗಳು ತೋಳಗಳನ್ನು ನಿರ್ವಂಶಗೊಳಿಸಬೇಕೆಂದು ಪಣತೊಟ್ಟಿರುವಾಗ ಇವರ ನಿಲುವು ಅಚ್ಚರಿ ಮೂಡಿಸಿತು.

ಮನುಷ್ಯ ಮತ್ತು ತೋಳಗಳ ಸಂಘರ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ತೋಳವನ್ನು ಸಮಾಜದ ಶತ್ರುವೆಂದೇ ಪರಿಗಣಿಸಿದ ಇಂಗ್ಲೆಂಡ್, ಹದಿನಾರನೇ ಶತಮಾನದಲ್ಲೆ ಅವುಗಳನ್ನು ನಿರ್ನಾಮ ಮಾಡಿತ್ತು. ನಂತರ ಅಮೆರಿಕ ಖಂಡಕ್ಕೆ ಬಂದ ಯುರೋಪಿಯನ್ನರು ತಮ್ಮ ತೋಳದೊಡಗಿನ ವೈರತ್ವವನ್ನು ಅಲ್ಲಿಗೂ ಕೊಂಡೊಯ್ದರು.

ಆದಿವಾಸಿಗಳ ಮತ್ತು ತೋಳಗಳ ನಡುವೆ ಬೆಸೆದಿದ್ದ ಸಾವಿರಾರು ವರ್ಷಗಳ ನಂಬಿಕೆಗಳಿಗೆ ಕಿಂಚಿತ್ ಗೌರವ ತೋರದೆ, ತೋಳಗಳ ನಿರ್ಮೂಲನೆಗೆ ಪಣತೊಟ್ಟರು. ಇಪ್ಪತ್ತನೇ ಶತಮಾನದ ಮೊದಲ ಭಾಗದಷ್ಟೊತ್ತಿಗೆ ಅಮೆರಿಕಾದ ತೋಳಗಳನ್ನು ವಿನಾಶದಂಚಿಗೆ ನೂಕುವಲ್ಲಿ ಯಶಸ್ವಿಯಾದರು.

ಆ ನಂತರದ ಅರವತ್ತು ವರ್ಷಗಳ ಕಾಲ ಅಮೆರಿಕಾದ ಅಭಯಾರಣ್ಯಗಳಲ್ಲಿ ತೋಳಗಳ ಹೆಜ್ಜೆಗಳು ಕಾಣಲೇ ಇಲ್ಲ. ಪರಿಸರ ಜಾಗೃತಿ ಮೂಡಿದ ಬಳಿಕ ಆ ಅಭಯಾರಣ್ಯಗಳ ಪುನರುಜ್ಜೀವನಕ್ಕೆ ನಮ್ಮ ತಿಳಿವಳಿಕೆಗೆ ನಿಲುಕದಷ್ಟು ಹಣವನ್ನು ವ್ಯಯಿಸಲಾಯಿತು.

ಆದರೆ ಸಮಯ ಮೀರಿತ್ತು. ಆ ಕಾಡುಗಳು ಕೇವಲ ರಕ್ಷಿತ ಪ್ರದೇಶಗಳಾಗಿದ್ದವೇ ಹೊರತು ಸಹಜ ಜೀವ ಪರಿಸರವಾಗಿ ಉಳಿದಿರಲಿಲ್ಲ. ಬಳಿಕ ನೂರಾರು ವಿಜ್ಞಾನಿಗಳು ಹತ್ತಾರು ವರ್ಷಗಳ ಕಾಲ ನಡೆಸಿದ ಅಧ್ಯಯನ, ದುರಂತದ ವಿಷಯವನ್ನು ಬಹಿರಂಗಪಡಿಸಿತು. ಅಲ್ಲಿನ ಜೀವ ಪರಿಸರದ ಅವಿಭಾಜ್ಯ ಅಂಗವಾಗಿದ್ದ ತೋಳಗಳನ್ನು ನಾಶಮಾಡಿದ್ದರಿಂದ ಸರಣಿ ಸ್ಫೋಟದಂತೆ ಹಲವಾರು ಜೈವಿಕಕೊಂಡಿಗಳು ಕಳಚಿ ಬಿದ್ದಿದ್ದವು. ಹಾಗೂ ಅವುಗಳನ್ನು ಮತ್ತೆ ಸರಿಪಡಿಸಲಾಗದ ಹಂತ ತಲುಪಿದ್ದವು.

ಈ ಎಲ್ಲ ತಿಳಿವಳಿಕೆಗಳ ಹಿನ್ನೆಲೆಯಲ್ಲಿ ದಕ್ಷಿಣ ಪ್ರಸ್ಥಭೂಮಿಯ ಅಲೆಮಾರಿ ಕುರಿಗಾಹಿಗಳು ತಮ್ಮ ಮಂದೆಗಳಿಂದ ಕುರಿಗಳನ್ನು ಕದ್ದೊಯ್ಯುವ ತೋಳಗಳ ಪರವಾಗಿರುವುದು ನಮ್ಮಲ್ಲಿ ಅಚ್ಚರಿ ಮೂಡಿಸಿತ್ತು. ಈ ಕುರಿಗಾಹಿಗಳು ಮತ್ತು ತೋಳಗಳ ಸಂಬಂಧ ಇನ್ನಷ್ಟು ವಿಶೇಷವಾಗಿ ಕಂಡಿತು. ಅಲ್ಲದೆ ವಿಚಿತ್ರ ನಂಬಿಕೆ ಮತ್ತು ಸಂಬಂಧಗಳ ಕುತೂಹಲಕರ ಕತೆಯೊಂದು ತೆರೆದುಕೊಳ್ಳುವ ಸೂಚನೆಗಳು ಕಾಣತೊಡಗಿತು.

ನಾವು ತೋಳಗಳನ್ನು ಕೊಲ್ಲಲು ಬಂದವರಲ್ಲ. ಅವುಗಳನ್ನು ಅಧ್ಯಯಿಸಬೇಕೆಂದು, ನಂತರ ಅವುಗಳ ಜೀವನ ಶೈಲಿಯ ಮೇಲೆ ಒಂದು ಸಾಕ್ಷ್ಯಚಿತ್ರ ಮಾಡಬೇಕೆಂದು ಬಂದಿದ್ದೇವೆಂದು ಮನವರಿಕೆ ಮಾಡಲು ಯತ್ನಿಸಿದೆವು. ಕ್ರಮೇಣ ಅವರ ಆತಂಕ ತಿಳಿಯಾಯಿತು. ಆಗ ಅನಿರೀಕ್ಷಿತವಾಗಿ ಧ್ವನಿಯೊಂದು ಗುಂಪಿನಿಂದ ತೂರಿಬಂತು.

‘ತೋಳ... ತೋಳ ಪೋಟೊ ಹಿಡಯಕ್ಕೆ ಬರಂಗಿಲ್ರೀ...’
‘ಹೌದಾ...’
‘ಅದ್ ಕಾಣಂಗಿಲ್ರೀ...’
‘ಯಾಕೆ...’
‘ಅದು ಮಣ್ಣುರೀ...’
‘ಅದು ಕಾಣಂಗಿಲ್ರೀ... ಸಿಗಂಗಿಲ್ರೀ...’

ಆತ ಹೇಳಿದ ರೀತಿ ಅಮೂರ್ತವಾಗಿತ್ತು. ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳದೆ ಮುಂದುವರೆದೆವು. ಮುಂದಿನ ವರ್ಷಗಳಲ್ಲಿ ತೋಳಗಳ ಹಿಂದೆ ಅಲೆಯುತ್ತ ನಮ್ಮ ಚಿತ್ರ ಮುಗಿಯುವ ವೇಳೆಗೆ, ಆ ಕುರಿಗಾಹಿ ಅಂದು ಹೇಳಿದ್ದು, ಬಹುಪಾಲು ಸತ್ಯ ಎಂದು ಅರಿವಾಯಿತು.
ಆದರೆ ಅವರು ತೋಳಗಳ ಬಗೆಗೆ ಮೃದುಧೋರಣೆ ಹೊಂದಿರಲು ಕಾರಣವೇನೆಂಬ ಒಗಟು ಹಾಗೆಯೇ ಉಳಿಯಿತು.

ಹಳದಿ ಪೇಟೆದ ಕುರಿಗಾಹಿ ರಾಮಪ್ಪ ‘ಅವು ನಮ್ಮ ಒಡಹುಟ್ಟಿದವರ್ರೀ...’ ಎಂದು ಮೆಲ್ಲನೆ ಉಸುರಿದಾಗ ಕುತೂಹಲ ಇಮ್ಮಡಿಸಿತು. ಮುಂದುವರೆದ ಆತ ‘ಬಹಳ ಹಿಂದೆರೀ... ಮೂವರು ಅಣ್ಣ ತಮ್ಮಂದಿರಿದ್ದರು. ಕುರಿಗಳನ್ನು ಪಾಲು ಮಾಡಿಕೊಳ್ಳುವಾಗ ಅಣ್ಣಂದಿರಿಬ್ಬರು ಮೂರನೆಯ ತಮ್ಮನಿಗೆ ಮೋಸ ಮಾಡಿದರಂತೆ.

ನೊಂದ ಆತ ನಿಮಗೆ ನೆಲೆಸಿಗದೆ ಜೀವನದುದ್ದಕ್ಕೂ ಎಲ್ಲಿಯೂ ನಿಲ್ಲದೆ ಅಲೆಯುತ್ತಿರುವಂತಾಗಲಿ ಎಂದು ಶಾಪ ಹಾಕಿ ಕಾಡಿನಲ್ಲಿ ಕಣ್ಮರೆಯಾದನಂತೆ. ನಾವೇ ಆ ಶಾಪಗ್ರಸ್ತಮಂದಿ... ಹಾಗಾಗಿ ನಮ್ಮ ಕುರಿಗಳೊಂದಿಗೆ ನಾವು ಈ ಬಯಲುಗಳಲ್ಲಿ ಅಲೆಯುತ್ತಲೇ ಇದ್ದೇವೆ.

ತೋಳದ ವೇಷದಲ್ಲಿ ಆತ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತಾನೆ. ಆಗೊಮ್ಮೆ ಈಗೊಮ್ಮೆ ತನ್ನ ಪಾಲನ್ನು ಕೊಂಡೊಯ್ಯಲು ಬರುತ್ತಿರುತ್ತಾನೆ. ಮೂರನೇ ಒಂದು ಭಾಗ ಅವನಿಗೆ ಸಲ್ಲಬೇಕಾದದ್ದೇ, ಅವನು ನಮ್ಮ ಸ್ವಂತ ತಮ್ಮ. ಅವನಿಗೇನಾದರೂ ತೊಂದರೆ ಮಾಡಿದರೆ ನಮ್ಮಗೆ ಒಳ್ಳೆಯದಾಗುವುದಿಲ್ಲ’ ಎಂದು ಮಾತು ಮುಗಿಸಿದ.

ಅವರ ಈ ನಂಬಿಕೆಯನ್ನು ಪ್ರಶ್ನಿಸುವ ಅಥವ ತರ್ಕಿಸುವ ಪ್ರಯತ್ನಕ್ಕೆ ನಾವು ಕೈ ಹಾಕಲಿಲ್ಲ. ಆ ಕ್ಷಣ ಅತೀವ ಸಂತೋಷವಾಯಿತು. ಆ ನಂಬಿಕೆ ಎಂದಿಗೂ ಸಾಯಬಾರದೆಂದು ಆಶಿಸಿದೆವು. ಭೂಪಟದಿಂದ ಕಳಚಿ ಹೋಗುತ್ತಿರುವ ಒಂದು ಸಂಸ್ಕೃತಿ ಮತ್ತು ಕಣ್ಮರೆಯಾಗಲು ಸಿದ್ಧತೆ ನಡೆಸಿರುವ ಜೀವಿಯೊಂದು ನಂಬಿಕೆಯೆಂಬ ಈ ಸಣ್ಣ ಕೊಂಡಿಯನ್ನವಲಂಭಿಸಿ ಬದುಕುಳಿದಿರುವುದು ಅದ್ಭುತವೆನಿಸಿತು.

ಜೀವಿಗಳ ಸಂರಕ್ಷಣೆಗೆ ಚೆಲ್ಲುತ್ತಿರುವ ಕೋಟ್ಯಂತರ ಡಾಲರ್‌ಗಳು ಮಾಡಲಾಗದ ಕೆಲಸಗಳನ್ನು ಯಾವ ತಾತ್ವಿಕ ನೆಲೆಗಟ್ಟಿಲ್ಲದ ನಂಬಿಕೆಯೊಂದು ನಿರ್ವಹಿಸುವುದಾರೆ ಇಂತಹ ಇನ್ನಷ್ಟು ನಂಬಿಕೆಗಳು ಅರಳಿದರೆ ಒಳ್ಳೆಯದೆನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT