ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪಿಕೋ ಹಸ್ತಲಾಘವಕ್ಕೆ ಅಪ್ಪಿಕೋ ಅನುಮೋದನೆ

Last Updated 29 ಜೂನ್ 2017, 20:26 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಭೇಟಿಯ ಬಗ್ಗೆ ಹಲವು ಜೋಕುಗಳಿವೆ. ‘ಹಿಂದಿನ ಪ್ರಧಾನಿ ಸೈಲೆಂಟ್ ಮೋಡ್, ಈಗಿನ ಪ್ರಧಾನಿ ಫ್ಲೈಟ್ ಮೋಡ್’. ‘ಜಗತ್ತಿನ ಅಷ್ಟೂ ರಾಷ್ಟ್ರಗಳನ್ನು ಎರಡು ಭಾಗ ಮಾಡಬಹುದು. ಒಂದು, ಪ್ರಧಾನಿ ಮೋದಿ ಭೇಟಿ ಕೊಟ್ಟ ರಾಷ್ಟ್ರಗಳು. ಎರಡು, ಪ್ರಧಾನಿ ಭೇಟಿ ಕೊಡಬೇಕಾದ ರಾಷ್ಟ್ರಗಳು’. ‘ಥ್ಯಾಂಕ್ ಗಾಡ್, ನಮ್ಮ ಪ್ರಧಾನಿ ಭಾರತಕ್ಕೂ ಆಗೀಗ ಭೇಟಿ ಕೊಡುತ್ತಾರೆ’. ಇಂತಹ ಹಾಸ್ಯೋಕ್ತಿ, ಹಗುರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ, ಟಿ.ವಿ. ಚರ್ಚೆಗಳಲ್ಲಿ, ಕೆಲವೊಮ್ಮೆ ಸಂಸತ್ತಿನಲ್ಲಿ ಪ್ರಧಾನಿಯನ್ನು ಟೀಕಿಸುವಾಗ ಬಳಕೆಯಾಗಿವೆ. ಈ ಟೀಕೆಗಳ ಮಧ್ಯೆಯೇ ಪ್ರಧಾನಿ ಎಡೆಬಿಡದೆ ವಿದೇಶಗಳಿಗೆ ಭೇಟಿ ಕೊಡುತ್ತಿದ್ದಾರೆ.

2014ರಿಂದ ಇದುವರೆಗೆ ಸುಮಾರು 47 ರಾಷ್ಟ್ರಗಳಿಗೆ ಪ್ರಧಾನಿ ಭೇಟಿ ಇತ್ತಿದ್ದಾರೆ. ಅದರಲ್ಲಿ 9 ರಾಷ್ಟ್ರಗಳಿಗೆ ಎರಡು ಬಾರಿ, ಫ್ರಾನ್ಸ್ ಮತ್ತು ರಷ್ಯಾಗಳಿಗೆ ಮೂರು ಬಾರಿ ಮತ್ತು ಇದೀಗ ಅಮೆರಿಕಕ್ಕೆ ಐದನೇ ಬಾರಿ ಹೋಗಿ ಬಂದಂತಾಗಿದೆ. ಇದೇ ವರ್ಷದ ಮೇ ಮತ್ತು ಜೂನ್ ತಿಂಗಳ ಪ್ರವಾಸವನ್ನೇ ತೆಗೆದುಕೊಂಡರೆ ನಮ್ಮ ‘ಏರ್ ಇಂಡಿಯಾ ಒನ್’ ಶ್ರೀಲಂಕಾ, ಜರ್ಮನಿ, ಸ್ಪೇನ್, ರಷ್ಯಾ, ಫ್ರಾನ್ಸ್, ಪೋರ್ಚುಗಲ್, ಅಮೆರಿಕ ಮತ್ತು ನೆದರ್ಲೆಂಡ್ ಸುತ್ತಿ ಬಂದಿದೆ. ಕೊಂಚ ದಣಿವಾರಿಸಿಕೊಂಡು ಮುಂದೆ ಇಸ್ರೇಲ್, ಜರ್ಮನಿ, ಚೀನಾ, ಫಿಲಿಪ್ಪೀನ್ಸ್‌ಗಳಿಗೂ ಹೋಗಿಬರಬೇಕಿದೆ.

ಇದೇನೂ ಹೊಸದಲ್ಲ. ಈ ಹಿಂದಿನ ಪ್ರಧಾನಿಗಳು ಹೀಗೆ ಪ್ರತೀ ವರ್ಷ ನಾಲ್ಕಾರು ದೇಶಗಳನ್ನು ರಾಜತಾಂತ್ರಿಕ ಭೇಟಿಗೆಂದೋ ಅಥವಾ ಯಾವುದೋ ಶೃಂಗಸಭೆಗೆ ಹಾಜರಾತಿ ಹಾಕಲು ಹೋಗಿಬಂದಿದ್ದಿದೆ. ಆದರೆ ಆ ಭೇಟಿಗಳೆಲ್ಲವೂ ಪತ್ರಿಕೆಯ ಹತ್ತನೇ ಪುಟಕ್ಕೆ ಹೂರಣವಾಗಿ, ಮುಖ್ಯವಾರ್ತೆಯ ಅರೆನಿಮಿಷದ ಸುದ್ದಿಯಾಗಿ ಸರಿದು ಹೋಗುತ್ತಿದ್ದವು.

ಆದರೆ ಪ್ರಧಾನಿ ಮೋದಿ ಯಾವುದೇ ದೇಶಕ್ಕೆ ಭೇಟಿ ಇತ್ತರೂ, ನಾಲ್ಕಾರು ಹ್ಯಾಷ್ ಟ್ಯಾಗ್‌ಗಳೊಂದಿಗೆ ಟ್ವಿಟರ್ ಹಕ್ಕಿ ಪ್ರತಿಕ್ಷಣ ಸುದ್ದಿ ಹೊತ್ತು ತರುತ್ತದೆ, ಭಾರತದ ಇಂಗ್ಲಿಷ್‌ ಮಾಧ್ಯಮಗಳು ತಾಸುಗಟ್ಟಲೆ ಕಾರ್ಯಕ್ರಮ ಮಾಡುತ್ತವೆ, ವಿದೇಶಿ ಪತ್ರಿಕೆಗಳೂ ಲೇಖನ, ವಿಶ್ಲೇಷಣೆ ಪ್ರಕಟಿಸುತ್ತವೆ. ಈ ಸುದ್ದಿ ಪುಷ್ಕಳತೆಗೆ ನವಮಾಧ್ಯಮಗಳು ಕಾರಣವಿರಬಹುದು. ಅಂತೆಯೇ ಪ್ರಧಾನಿ ಮೋದಿ ತಾವು ಸದಾ ಸುದ್ದಿಯಲ್ಲಿರಬೇಕು ಎಂದು ಬಯಸುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಕಾರ್ಯಕ್ರಮ ಆಯೋಜಿಸಿಕೊಳ್ಳುತ್ತಾರೆ.

ಹಾಗಂತ ಪ್ರಚಾರಕ್ಕೆ ಮೀರಿದ ಉದ್ದೇಶ ಈ ಭೇಟಿಗಳ ಹಿಂದಿಲ್ಲ ಎನ್ನುವುದು ಆತ್ಮವಂಚನೆಯ ಮಾತಾಗುತ್ತದೆ. ಸಾಮಾನ್ಯವಾಗಿ, ಪ್ರಧಾನಿ ಮೋದಿ ಭೇಟಿ ಆಯಾ ದೇಶದ ಮುಖ್ಯಸ್ಥರೊಂದಿಗೆ, ದ್ವಿಪಕ್ಷೀಯ ಚರ್ಚೆಗಳಲ್ಲಿ ಭಾಗಿಯಾಗುವುದಕ್ಕೆ ಸೀಮಿತವಾಗಿರುವುದಿಲ್ಲ. ಪ್ರತೀ ಭೇಟಿಯ ಸಂದರ್ಭದಲ್ಲಿ ಆ ದೇಶದ ಉದ್ಯಮಿಗಳೊಂದಿಗೆ ಸಭೆ ನಿಗದಿಯಾಗಿರುತ್ತದೆ.

ಅಲ್ಲಿನ ಅನಿವಾಸಿ ಭಾರತೀಯ ಸಮೂಹದೊಂದಿಗೆ ಅನೌಪಚಾರಿಕ ಸಮಾರಂಭ ಆಯೋಜನೆಗೊಂಡಿರುತ್ತದೆ. ಉದ್ಯಮ ವಿಸ್ತರಣೆಗೆ ಬೇಕಾದ ಸೌಲಭ್ಯ ಒದಗಿಸುವ ಬಗ್ಗೆ, ಅನಿವಾಸಿ ಭಾರತೀಯರ ನೋವು ನಲಿವುಗಳಿಗೆ ಸ್ಪಂದಿಸುವ ರೀತಿಯಲ್ಲಿ ಮೋದಿ ಯೋಜನೆಗಳನ್ನು ಘೋಷಿಸುತ್ತಾರೆ ಇಲ್ಲವೇ ತಾವು ಕೈಗೊಂಡಿರುವ ಕ್ರಮಗಳನ್ನು ವಿವರಿಸುತ್ತಾರೆ. ಈ ಮೂಲಕ ಆಪ್ತ ವಾತಾವರಣ ನಿರ್ಮಿಸಿಕೊಳ್ಳುತ್ತಾರೆ ಮತ್ತು ಪತ್ರಿಕೆಯ ಮುಖಪುಟದಲ್ಲಿ ಉಳಿಯುತ್ತಾರೆ.

ಇದೀಗ ನೋಡಿ, ಎರಡು ವಾರಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ಪುಟಿನ್ ಕೈ ಕುಲುಕಿ ಬಂದಿದ್ದ ಮೋದಿ, ಈ ವಾರ ಟ್ರಂಪ್ ಜೊತೆ ಐದು ತಾಸು ಕಳೆದರು. ಶ್ವೇತಭವನದಲ್ಲಿ ಭೋಜನ ಸವಿದರು. ಇದು ಪ್ರಧಾನಿಯಾಗಿ ಅಮೆರಿಕಕ್ಕೆ ಮೋದಿ ಅವರ ಐದನೇ ಭೇಟಿ. ಈ ಭೇಟಿ ಕುತೂಹಲ ಮೂಡಿಸಿದ್ದು, ಶ್ವೇತಭವನದಲ್ಲಿ ಇದೀಗ ಒಬಾಮ ಬದಲಿಗೆ ಟ್ರಂಪ್ ಇದ್ದಾರೆ ಎನ್ನುವ ಕಾರಣದಿಂದ.

ನಿಜ, ಒಂದು ಹಂತದಲ್ಲಿ ಈ ಇಬ್ಬರು ನಾಯಕರನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗುತ್ತಿತ್ತು. ರಾಷ್ಟ್ರೀಯವಾದ, ದೇಶ ಮೊದಲು ಎಂಬ ಘೋಷಣೆ, ಉದ್ಯಮಸ್ನೇಹಿ ನಿಲುವು, ಸಂಪ್ರದಾಯವಾದಿ ಪಕ್ಷದ ಈ ಉಭಯ ನಾಯಕರ ತುಲನೆಗೆ ಕಾರಣವಾಗಿತ್ತು. ಆದರೆ ಮೋದಿಯವರ ‘ನ್ಯೂ ಇಂಡಿಯಾ’, ‘ಮೇಕ್ ಇನ್ ಇಂಡಿಯಾ’ ಮತ್ತು ಟ್ರಂಪ್ ನೆಚ್ಚಿಕೊಂಡಿರುವ ‘ಮೇಕ್ ಅಮೆರಿಕ ಗ್ರೇಟ್ ಎಗೈನ್’ ಪ್ರತಿಪಾದಿಸುವುದು ಆಯಾ ದೇಶದ ಹಿತಾಸಕ್ತಿಯನ್ನು. ಹಾಗಾಗಿ ಒಂದೇ ನಿಲುವಿನ ಈ ನಾಯಕರ ದ್ವಿಪಕ್ಷೀಯ ಮಾತುಕತೆ ಯಶಗೊಳ್ಳುವುದೇ ಎಂಬ ಅನುಮಾನ ಇತ್ತು. ಆದರೆ ಇದೀಗ ನೋಡಿದರೆ, ಮೋದಿ ಅಮೆರಿಕ ಭೇಟಿ ಯಶಸ್ವಿಯಾದಂತೆ ಕಾಣುತ್ತಿದೆ.

ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ಸಂಬಂಧವನ್ನು ವಿಶ್ಲೇಷಿಸುವಾಗ ಚೀನಾ ಮತ್ತು ಪಾಕಿಸ್ತಾನಗಳನ್ನು ಗಮನದಲ್ಲಿಟ್ಟುಕೊಂಡೇ ಮುಂದುವರೆಯಬೇಕು. ಮುಖ್ಯವಾಗಿ ಏಷ್ಯಾದ ಮಟ್ಟಿಗೆ ಚೀನಾ ಬಲಗೊಂಡಾಗಲೆಲ್ಲಾ ಅಮೆರಿಕ, ಭಾರತದ ಕೈ ಕುಲುಕಿದೆ. ಹಾಗಾಗಿಯೇ ಕ್ಲಿಂಟನ್, ಜಾರ್ಜ್ ಬುಷ್ ಮತ್ತು ಒಬಾಮ ಅವರು ಭಾರತದೊಂದಿಗಿನ ಸಖ್ಯವನ್ನು ಬಲಪಡಿಸಿಕೊಳ್ಳಲು ಮುಂದಾಗಿದ್ದು.

ಆಗ ಅಮೆರಿಕದ ಉದ್ದೇಶ ಚೀನಾವನ್ನು ಕಟ್ಟಿಹಾಕಲು ಭಾರತವನ್ನು ಬೆಂಬಲಿಸಬೇಕು ಎಂಬಷ್ಟಕ್ಕೇ ಸೀಮಿತವಾಗಿತ್ತು. ಜಾಗತೀಕರಣೋತ್ತರ ಕಾಲಘಟ್ಟದಲ್ಲಿ ಭಾರತದ ಮಾರುಕಟ್ಟೆ ಅಮೆರಿಕವನ್ನು ಆಕರ್ಷಿಸಿತು. ಸೋವಿಯತ್ ಪತನದ ನಂತರ, ರಕ್ಷಣಾ ಸಾಮಗ್ರಿಯ ವಿಷಯದಲ್ಲಿ ಭಾರತ ರಷ್ಯಾ ಅವಲಂಬನೆ ತೊರೆದು ಅಮೆರಿಕದತ್ತ ಮುಖ ಮಾಡಿತು.

ನೆರೆಯ ದೈತ್ಯ ರಾಷ್ಟ್ರ ಚೀನಾ ಮತ್ತು ತಂಟೆಕೋರ ರಾಷ್ಟ್ರ ಪಾಕಿಸ್ತಾನಕ್ಕೆ ಅಮೆರಿಕದೊಂದಿಗಿನ ಸಖ್ಯ ಬೆದರುಬೊಂಬೆಯಂತೆ ಕೆಲಸ ಮಾಡಲಾರಂಭಿಸಿತು. ಇತ್ತ ಚೀನಾ ಸುಮ್ಮನೆ ಕೂರಲಿಲ್ಲ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾ ಎಂಬ ಮೊಂಡು ದೇಶಗಳನ್ನಿಟ್ಟುಕೊಂಡು ಭಾರತ ಮತ್ತು ಅಮೆರಿಕವನ್ನು ಅಂಕೆಯಲ್ಲಿಡಲು ಸದಾ ಪ್ರಯತ್ನಿಸುತ್ತಿದೆ. ಈ ರಾಜತಾಂತ್ರಿಕ ಆಟದಲ್ಲಿ ತಂತ್ರ ಪತಿತ್ರಂತ್ರಗಳದ್ದೇ ಮೆಲುಗೈ. ಅದರ ನಡುವೆ ರಾಜಕೀಯ ಲಾಭ ನಷ್ಟಗಳನ್ನು ಅಳೆಯಬೇಕು.

ಹಾಗೆ ನೋಡಿದರೆ, ಚೀನಾ ವಿಷಯವಾಗಿ ಟ್ರಂಪ್ ನಿಲುವು ನಿಚ್ಚಳವಾಗಿಲ್ಲ. ಟ್ರಂಪ್ ಮೊದಲಿಗೆ ತೈವಾನ್ ಅಧ್ಯಕ್ಷರಿಗೆ ಕರೆ ಮಾಡಿ ‘ಒಂದೇ ಚೀನಾ’ ನೀತಿಗೆ ಸವಾಲೆಸೆದಿದ್ದರು. ಆದರೆ ಚೀನಾ, ಉತ್ತರ ಕೊರಿಯಾವನ್ನು ಚಿವುಟಿತು. ಪರಿಣಾಮ ಚೀನಾ ಅಧ್ಯಕ್ಷರಿಗೆ ಟ್ರಂಪ್ ತಮ್ಮ ರೆಸಾರ್ಟಿನಲ್ಲಿ ಔತಣ ಕೊಡಬೇಕಾಯಿತು. ಇದರಿಂದ ಭಾರತಕ್ಕೆ ಕೊಂಚ ಕಸಿವಿಸಿಯಾದದ್ದು ದಿಟ. ಕೂಡಲೇ ಮೋದಿ ಅಮೆರಿಕ ಭೇಟಿಯ ದಿನಾಂಕ ನಿಗದಿಯಾಯಿತು. ಇದೀಗ ಟ್ರಂಪ್-ಮೋದಿ ಆಲಿಂಗನ ಮತ್ತು ಇಂಡೋ ಪೆಸಿಫಿಕ್ ಪ್ರಾಂತ್ಯದ ಭದ್ರತೆಯ ವಿಷಯದಲ್ಲಿ ಉಭಯ ದೇಶಗಳು ಸಹಕರಿಸಲಿವೆ ಎಂಬ ನಿಲುವಿಗೆ ಚೀನಾ ಮುಖ ಬಿಗಿಹಿಡಿದು ಪ್ರತಿಕ್ರಿಯಿಸಿದೆ.

ಇದೀಗ ಮೋದಿ-ಟ್ರಂಪ್ ಬಿಗಿ ಅಪ್ಪುಗೆಗೆ ಕಾರಣವಾಗಿರುವ ಸಂಗತಿ ಎಂದರೆ ವಾಣಿಜ್ಯ ಮತ್ತು ರಕ್ಷಣಾ ವಲಯದಲ್ಲಿನ ಹಿತಾಸಕ್ತಿ. ಟ್ರಂಪ್ ಅಮೆರಿಕ ಅಧ್ಯಕ್ಷರಾದರೂ ಉದ್ಯಮಿಯ ಮಾನಸಿಕತೆಯನ್ನು ಬಿಟ್ಟುಕೊಟ್ಟಿಲ್ಲ. ಅಮೆರಿಕದ ಉತ್ಪನ್ನಗಳನ್ನು ಇತರ ರಾಷ್ಟ್ರಗಳಿಗೆ ಮಾರುವ ನಿಟ್ಟಿನಲ್ಲೇ ಅವರು ಹೆಜ್ಜೆ ಇಡುತ್ತಿದ್ದಾರೆ. ಹಾಗಾಗಿ ಟ್ರಂಪ್ ಒಲಿಸಿಕೊಳ್ಳುವ ಮಾರ್ಗ ವ್ಯಾಪಾರ ಎಂಬುದನ್ನು ಪ್ರಧಾನಿ ಮೋದಿ ಗ್ರಹಿಸಿದಂತಿದೆ. ‘ವಾಣಿಜ್ಯ ಸಂಬಂಧ ನ್ಯಾಯಸಮ್ಮತವಾಗಿರಬೇಕು, ಕೊಡುಕೊಳ್ಳುವಿಕೆ ಎರಡೂ ಕಡೆಯಿಂದ ಆಗಬೇಕು’ ಎಂಬುದನ್ನು ಟ್ರಂಪ್ ಒತ್ತಿ ಹೇಳಿದ್ದಾರೆ.

ಕಳೆದ ವರ್ಷ ಭಾರತದಿಂದ 300 ಕೋಟಿ ಡಾಲರ್ (ಅಂದಾಜು ₹ 19,500 ಕೋಟಿ) ಮೊತ್ತದ ವಾಣಿಜ್ಯಿಕ ಕೊರತೆಯನ್ನು ಅಮೆರಿಕ ಎದುರಿಸಿತ್ತು. ಹಾಗಾಗಿ ಅಮೆರಿಕದ ಉದ್ದಿಮೆಗಳಿಗೆ ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಇರುವ ಅಡೆತಡೆ ನಿವಾರಿಸುವಂತೆ ಅಮೆರಿಕ ಆಗ್ರಹಿಸಿದೆ. ಇದಕ್ಕೆ ಪೂರಕವಾಗಿ ಮೋದಿ ಅಮೆರಿಕದ ಉದ್ಯಮಿಗಳ ಸಭೆಯಲ್ಲಿ ಬಂಡವಾಳ ಹೂಡಿಕೆಗೆ ಇರುವ ಅಡೆತಡೆ ನಿವಾರಿಸುವ ಭರವಸೆ ಇತ್ತಿದ್ದಾರೆ. ಭಾರತದಲ್ಲಿ ಉದ್ಯೋಗ ಸೃಷ್ಟಿಗೆ ಇದು ಅನುವಾಗಬಹುದು.

ಇನ್ನು, ಭಯೋತ್ಪಾದನೆಯ ವಿಷಯದಲ್ಲಿ ಟ್ರಂಪ್-ಮೋದಿ ಬಿಗಿ ನಿಲುವು ತಳೆದಿರುವುದು ಜಂಟಿ ಹೇಳಿಕೆಯಲ್ಲಿ ವ್ಯಕ್ತವಾಗಿದೆ. ಒಬಾಮ ಅವಧಿಯ ಭಾರತ-ಅಮೆರಿಕ ಜಂಟಿ ಹೇಳಿಕೆಯಲ್ಲಿ ‘ಮುಂಬೈ ದಾಳಿಗೆ ಕಾರಣವಾದವರ ಮೇಲೆ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು’ ಎಂದಷ್ಟೇ ಹೇಳಲಾಗಿತ್ತು. ಆದರೆ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ‘ಉಗ್ರರ ಪಾಲಿಗೆ ಪಾಕಿಸ್ತಾನ ಸ್ವರ್ಗವಾಗಿದೆ.

ಇತರ ರಾಷ್ಟ್ರಗಳ ಮೇಲೆ ದಾಳಿ ಮಾಡಲು ಉಗ್ರರು ತನ್ನ ನೆಲವನ್ನು ಬಳಸದಂತೆ ಪಾಕಿಸ್ತಾನ ನೋಡಿಕೊಳ್ಳಬೇಕು. ಮುಂಬೈ, ಪಠಾಣ್‌ಕೋಟ್ ದಾಳಿಗೆ ಕಾರಣರಾದವರನ್ನು ಶಿಕ್ಷೆಗೆ ಗುರಿಮಾಡಬೇಕು’ ಎಂದು ಹೇಳಲಾಗಿದೆ. ಭಾರತದ ಮೇಲೆ ದಾಳಿಯ ಬೆದರಿಕೆ ಹಾಕಿದ್ದ ಹಿಜ್ಬುಲ್ ಮುಜಾಹಿದಿನ್ ನಾಯಕ ಸೈಯದ್ ಸಲಾವುದ್ದೀನ್‌ನನ್ನು ‘ಜಾಗತಿಕ ಉಗ್ರ’ ಎಂದು ಅಮೆರಿಕ ಘೋಷಿಸಿದೆ.

ಇದು ಭಾರತದ ಮಟ್ಟಿಗೆ ಸಣ್ಣ ಗೆಲುವು. ಇದರ ಜೊತೆಗೆ, ರಕ್ಷಣಾ ತಂತ್ರಜ್ಞಾನ, ಇಂಧನ, ನೈಸರ್ಗಿಕ ಅನಿಲ, ವಿಮಾನಗಳ ಆಮದು ಸೇರಿದಂತೆ ದೊಡ್ಡ ಮೊತ್ತದ ಒಪ್ಪಂದಗಳ ಬಗ್ಗೆ ಮಾತುಕತೆಯಾಗಿದೆ. ಬೊಯಿಂಗ್ ಸಿ-17 ವಿಮಾನಗಳನ್ನು ಭಾರತಕ್ಕೆ ಮಾರುವ ಬಗ್ಗೆ ಅನುಮತಿ ಸಿಕ್ಕಿರುವುದಾಗಿ ಪೆಂಟಗನ್ ಘೋಷಿಸಿದೆ. ಜೊತೆಗೆ ಇದುವರೆಗೆ ‘ನ್ಯಾಟೊ’ ಸದಸ್ಯ ರಾಷ್ಟ್ರಗಳಿಗಷ್ಟೇ ಬಿಕರಿಯಾಗುತ್ತಿದ್ದ ವಿಶೇಷ ಪ್ರಿಡೇಟರ್ ಡ್ರೋನ್ ಭಾರತದ ನೌಕಾಪಡೆಯ ಬಲ ಹೆಚ್ಚಿಸಲಿದೆ.

ಉಳಿದಂತೆ, ಮೋದಿ-ಟ್ರಂಪ್ ಭೇಟಿ ಕುರಿತು ಇನ್ನಷ್ಟು ನಿರೀಕ್ಷೆಗಳಿದ್ದವು. ಹೊರಗುತ್ತಿಗೆ ಮತ್ತು ವೀಸಾ ವಿಷಯವಾಗಿ ಟ್ರಂಪ್ ಆಡಳಿತ ತೆಗೆದುಕೊಳ್ಳುತ್ತಿರುವ ನಿಲುವುಗಳು, ಬಹುರಾಷ್ಟ್ರಿಯ ಐ.ಟಿ. ಕಂಪೆನಿಗಳ ಉದ್ಯೋಗ ಕಡಿತ ಪರ್ವಕ್ಕೆ ನಾಂದಿ ಹಾಡಿದೆ. ಇದು ಬಿಜೆಪಿಯ ಮತಬ್ಯಾಂಕ್ ಎನಿಸಿಕೊಂಡಿರುವ ಐ.ಟಿ. ಯುವ ವರ್ಗದ ತಳಮಳ ಹೆಚ್ಚಿಸಿದೆ.

ಈ ನಿಟ್ಟಿನಲ್ಲಿ ಮೋದಿ, ಟ್ರಂಪ್ ಅವರಿಂದ ಕೊಂಚ ರಿಯಾಯಿತಿ ತೆಗೆದುಕೊಳ್ಳುವರೇ ಎಂದು ಈ ವರ್ಗ ಕಣ್ಣರಳಿಸಿ ನೋಡುತ್ತಿತ್ತು. ಆದರೆ ಅ ಬಗ್ಗೆ ಯಾವ ಚರ್ಚೆಯೂ ಆದಂತಿಲ್ಲ. ಅಘ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಅಮೆರಿಕದೊಂದಿಗೆ ಭಾರತ ಕೈಜೋಡಿಸಿದೆ. ಆದರೆ ಭಾರತದ ಪಾತ್ರ ಏನು ಎಂಬುದು ಸ್ಪಷ್ಟವಾಗಿಲ್ಲ.

ಚೀನಾದ ‘ಒನ್ ರೋಡ್, ಒನ್ ಬೆಲ್ಟ್’ ಯೋಜನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗುವುದನ್ನು ಭಾರತ ತಡೆಯಬೇಕಿದೆ. ಆ ವಿಷಯದಲ್ಲಿ ಅಮೆರಿಕ ತನ್ನೊಂದಿಗೆ ಧ್ವನಿಗೂಡಿಸುವುದನ್ನು ಭಾರತ ಎದುರು ನೋಡುತ್ತಿದೆ. ‘ಕಾರಿಡಾರ್ ವಿಚಾರದಲ್ಲಿ ನೆರೆರಾಷ್ಟ್ರಗಳ ಸಾರ್ವಭೌಮತೆಗೆ ಧಕ್ಕೆ ಕೂಡದು’ ಎಂದು ಪರೋಕ್ಷವಾಗಿ ಅಮೆರಿಕ ಪ್ರಸ್ತಾಪಿಸಿದೆಯೇ ಹೊರತು ಸ್ಪಷ್ಟ ಸಂದೇಶ ರವಾನಿಸಿಲ್ಲ.

ಪ್ರಸ್ತುತ ಭಾರತಕ್ಕೆ ರಾಜತಾಂತ್ರಿಕ ಸವಾಲು ಎನಿಸಿರುವುದು ಕುಲಭೂಷಣ್ ಜಾಧವ್ ಪ್ರಕರಣ. ಸದ್ಯದ ಮಟ್ಟಿಗೆ ಅಂತರರಾಷ್ಟ್ರಿಯ ನ್ಯಾಯಾಲಯದಲ್ಲಿ ಭಾರತಕ್ಕೆ  ಮೇಲುಗೈ ಆಗಿದ್ದರೂ, ಪಾಕಿಸ್ತಾನ ಐಸಿಜೆ ಆದೇಶವನ್ನು ಪುರಸ್ಕರಿಸುವುದೇ ಎಂಬ ಅನುಮಾನ ಇದೆ. ಹಾಗಾಗಿ ಭಾರತಕ್ಕೆ ಉಳಿದಿರುವ ಮಾರ್ಗ, ಪಾಕಿಸ್ತಾನದ ಪ್ರಧಾನಿಯ ಮೇಲೆ ಜಾಗತಿಕ ಒತ್ತಡ ಹೇರುವುದು. ಅದಕ್ಕೆ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರನ್ನು ಬಳಸಿಕೊಳ್ಳುವುದು. ಈ ಬಗ್ಗೆ ಮಾತುಕತೆ ನಡೆದಿರುವುದು ವರದಿಯಾಗಿಲ್ಲ. ಇನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕೆ ಒಮ್ಮತ ಮೂಡಿಸುವ ಕೆಲಸ ಹಲವು ವರ್ಷಗಳಿಂದ ನಡೆದಿದೆ. ಟ್ರಂಪ್ ಆಡಳಿತ ತಮ್ಮ ಬೆಂಬಲವನ್ನಂತೂ ಘೋಷಿಸಿದೆ. ಚೀನಾ ಅಡ್ಡಗಾಲು ಹಾಕದಿದ್ದರೆ, ಸದಸ್ಯತ್ವದ ಕನಸು ಈಡೇರುತ್ತದೆ.

ಒಟ್ಟಿನಲ್ಲಿ, ಪ್ರಸಕ್ತ ಜಾಗತಿಕ ಸನ್ನಿವೇಶದಲ್ಲಿ ಅಮೆರಿಕ– ಭಾರತ ಬಾಂಧವ್ಯ ಗಟ್ಟಿಯಾದರೆ ಉಭಯ ದೇಶಗಳಿಗೂ ಲಾಭವಿದೆ. ಬಾಂಧವ್ಯದ ನವೀಕರಣಕ್ಕೆ ಇಂತಹ ಭೇಟಿಗಳು ಅನುವಾಗುತ್ತವೆ. ಅಮೆರಿಕ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ಟ್ರಂಪ್ ಅವರೊಂದಿಗೆ ತಮಗೆ ಉತ್ತಮ ಬಾಂಧವ್ಯ ಇದೆ ಎನ್ನುವುದನ್ನು ಜಗತ್ತಿಗೆ ತೋರಿಸಲು ಪ್ರಯತ್ನಿಸಿದ್ದಾರೆ. ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರೊಂದಿಗಿನ ಭಾರತದ ಪ್ರಧಾನಿಯ ಪ್ರತೀ ಆಲಿಂಗನ ಪಾಕಿಸ್ತಾನ ಮತ್ತು ಚೀನಾಕ್ಕೆ ಕಸಿವಿಸಿ ಉಂಟುಮಾಡುತ್ತದೆ.

ಅಷ್ಟರಮಟ್ಟಿಗೆ ಅಪ್ಪಿಕೋ ರಾಜತಾಂತ್ರಿಕತೆಯನ್ನು ಮೋದಿ ಬಳಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅಮೆರಿಕದಲ್ಲಿ ಬಂದಿಳಿದಾಗ ‘ನೈಜ ಗೆಳೆಯನಿಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.

ಟ್ರಂಪ್ ಆಡಳಿತ ಭಾರತದೊಂದಿಗೆ ಹೇಗೆ ವ್ಯವಹರಿಸಲಿದೆ ಎಂಬುದರ ಮೇಲೆ ‘ನೈಜ ಗೆಳೆಯ’ ಎಂಬ ಪದಕ್ಕೆ ಅರ್ಥಬರುತ್ತದೆ. ಟ್ರಂಪ್ ಹಸ್ತಲಾಘವದಂತೆ, ಮೋದಿ ಅಪ್ಪುಗೆ ಇದೀಗ ಜನಪ್ರಿಯವಾಗಿದೆ. ಅನೇಕ ವೇಳೆ ಮಾತು, ಜಂಟಿ ಹೇಳಿಕೆಗಳಿಗಿಂತ ಇಂತಹ ಸಂಜ್ಞೆಗಳೇ ರಾಜತಾಂತ್ರಿಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ರವಾನಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT