ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಮ್ಮೆ ತಪ್ಪಾಯ್ತು ಅಂದುಬಿಡಿ...

ಅಕ್ಷರ ಗಾತ್ರ

`ಈ  ರಾಜಕಾರಣಿಗಳಿಗೆಲ್ಲಾ ಏನಾಗಿದೆ? ಮಾತೆತ್ತಿದರೆ ತಪ್ಪಾಯಿತು, ತಪ್ಪಾಯಿತು ಅಂತ ಹೇಳ್ತಾನೇ ಇದ್ದಾರೆ. ಏನೋ ತಪ್ಪು ನಡೆದಿದೆ ಅಂತ ನನಗನ್ನಿಸ್ತಾ ಇದೆ. ವಿಧಾನಸೌಧ ಕಡೆ ಹೋದ್ರೆ ಸ್ವಲ್ಪ ಗಮನಿಸಿ' ಎಂದು ಸಂಪಾದಕರು ಪೆಕರನಿಗೆ ಹೊಸ ಕೆಲಸ ವಹಿಸಿದರು.

ಪೆಕರ ಗಾಬರಿ ಬಿದ್ದ. `ಸಾರ್, ನಾನೇನ್ ತಪ್ಪು ಮಾಡ್ದೆ ಅಂತ ಈ ರೀತಿಯ ಶಿಕ್ಷೆ ನೀಡುತ್ತಾ ಇದೀರಿ ಸಾರ್' ಎಂದು ಅಂಗಲಾಚಲಾರಂಭಿಸಿದ.

`ಇದಕ್ಯಾಕೆ ಗಾಬರಿ ಆಗ್ತೀರಾ? ಇದ್ಯಾವ ದೊಡ್ಡ ವಿಷಯ? ರಾಜಕಾರಣಿಗಳು ತಪ್ಪಾಯ್ತು, ನಾನು ತಪ್ಪು ಮಾಡ್ಡೆ ಎಂದೆಲ್ಲ ಹೇಳುತ್ತಾ ಕನ್‌ಫೆಸ್ ಮಾಡಿಕೊಳ್ತಾ ಇದ್ದಾರೆ. ಅದನ್ನು ವರದಿ ಮಾಡೋದು ತಪ್ಪೇ ಅಲ್ಲ. ತಪ್ಪನ್ನು ವರದಿ ಮಾಡ್ರಿ ಎಂದು ಹೇಳಿದರೆ, ತಪ್ಪಾಗಿ ತಿಳಿದುಕೊಂಡು ತಪ್‌ತಪ್ಪಾಗಿ ಮಾತಾಡ್ತಾ ಇದೀರಲ್ಲಾ ಏಕೆ?' ಎಂದು ಸಂಪಾದಕರು ಪೆಕರನಿಗೆ ಧೈರ್ಯ ತುಂಬಿದರು.

`ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತರೋದು ಎಷ್ಟು ಕಷ್ಟವೋ ತಪ್ಪು ಮಾಡಿಲ್ಲದ ರಾಜಕಾರಣಿಗಳನ್ನು ಕಂಡು ಹಿಡಿಯೋದು ಅಷ್ಟೇ ಕಷ್ಟ ಸಾರ್' ಎಂದು ಪೆಕರ ಪೆದ್ದು ಪೆದ್ದಾಗಿ ಹೇಳಿದ.

`ಅದೇಕೆ ಅಷ್ಟೊಂದು ಕಷ್ಟ ಆಗುತ್ತೆ? ತಾವು ಮಾಡಿದ ತಪ್ಪನ್ನು ಅವರೇ ಒಪ್ಪಿಕೊಳ್ತಾ ಇದ್ದಾರೆ, ನಿಮ್ಮ ಕೆಲಸ ಸಲೀಸಾಯಿತು' ಎಂದು ಸಂಪಾದಕರು ಪೆಕರ ಮಾಡಿಕೊಂಡಿದ್ದ ಗೋಜಲನ್ನು ಬಿಡಿಸಿದರು.

ಪೆಕರ ವಿಧಾನಸೌಧಕ್ಕೆ ನುಗ್ಗಿದ ಕೂಡಲೇ ಎದುರಾದವರು ನಗುವಾನಂದ ಗೌಡರು. `ನಮಸ್ಕಾರ ಮಾಮು ಅವರೇ, ಮೊನ್ನೆ ವಿಧಾನ ಸಭೆಯಲ್ಲಿ ರಪ್ಪ ಅವರು `ತಪ್ಪಾಗಿದೆ' ಎಂದು ಹೇಳಿದ್ದಾರೆ. `ನಾವು ತಪ್ಪು ಮಾಡಿದ್ದೇವೆ, ತಪ್ಪಿ ನಿಂದಾಗಿ ಮತವಿಭಜನೆ ಆಯಿತು. ಇದರ ಲಾಭ ವನ್ನು ಕಾಂಗ್ರೆಸ್ ಪಕ್ಷ ಪಡೆಯಿತು, ಈಗ ನಮಗೆ ತಪ್ಪಿನ ಅರಿವಾಗಿದೆ ' ಎಂದು ರಪ್ಪ ಅವರು ಸದನ ದಲ್ಲೇ ತಪ್ಪೊಪ್ಪಿಗೆ ಮಾಡಿದ್ದಾರೆ. ನಿಮ್ಮ ಅನಿಸಿಕೆ ಏನು?' ಪೆಕರ ಕೆಲಸ ಶುರುಮಾಡಿಯೇ ಬಿಟ್ಟ.

`ಬಹಳ ಒಳ್ಳೆಯ ಪ್ರಶ್ನೆ ಕೇಳಿದ್ರಿ ಮಾರಾಯ್ರೇ, ನಾನೂ ತಪ್ಪು ಮಾಡಿದ್ದೇನೆ' ಎಂದು ನಗುವಾನಂದ ಗೌಡರು ಹೇಳಿದರು.

`ಅರೆರೆರೆ, ನೀವು ಏನ್ ತಪ್ ಮಾಡಿದ್ರಿ ಸಾರ್? ನೀವು ಸಿಎಂ ಆಗಿದ್ದಾಗ ಒಂದ್ ಪತ್ರಕ್ಕೂ ಸಹಿ ಮಾಡ್ಲಿಲ್ಲ. ಯಾವುದೇ ಡೀನೋಟಿಫಿಕೇಶನ್‌ಗೆ ಸಹಿ ಹಾಕ್ಲಿಲ್ಲ. ಮತ್ತೇನ್ ತಪ್ ಮಾಡಿದ್ರಿ ಸಾರ್?'- ಪೆಕರ ಕುತೂಹಲದಿಂದ ಪ್ರಶ್ನಿಸಿದ.

`ನನ್ನನ್ನು ಸಿಎಂ ಮಾಡಿದ್ದೇ ರಪ್ಪ. ಆದರೆ ನಾನು ಅದನ್ನು ಮರೆತು ತಪ್ಪು ಮಾಡಿದೆ. ನೀವು ಎಂದು ಹೇಳುತ್ತೀರೋ ಅಂದು ರಾಜೀನಾಮೆ ಕೊಡುತ್ತೇನೆ. ನೀವು ಯಾವಾಗ ಕೇಳುತ್ತೀರೋ ಅಂದೇ ನೀವು ದಯಪಾಲಿಸಿದ ಗಾದಿಯನ್ನು ನಿಮಗೇ ಮರಳಿಸುತ್ತೇನೆ ಎಂದು ರಪ್ಪ ಅವರ ದೇವರಮನೆಯಲ್ಲಿ ಪ್ರಮಾಣ ಮಾಡಿದ್ದೆ. ಆರು ತಿಂಗಳ ನಂತರ ಅದನ್ನು ಮರೆತು ರಪ್ಪ ಅವರು ಹೇಳಿದ ಕೂಡಲೇ ರಾಜೀನಾಮೆ ಕೊಡದೆ ತಪ್ಪು ಮಾಡಿದೆ ಮಾರಾಯ್ರೆ'- ಎಂದು ನಗುವಾನಂದ ಗೌಡರು ಪ್ರಾಮಾಣಿಕರಾಗಿ ಒಪ್ಪಿಕೊಂಡರು.

`ಇತ್ತೀಚೆಗೆ ನಾನು ಇನ್ನೊಂದು ತಪ್ಪು ಮಾಡಿಬಿಟ್ಟೆ ಮಾರಾಯ್ರೆ' ಎಂದು ನಗುವಾನಂದ ಗೌಡರು ಹೇಳಿದಾಗ ಪೆಕರ ಬೆಚ್ಚಿಬಿದ್ದ. ಒಂದು ಕೇಳಿದರೆ, ತಪ್ಪುಗಳ ಪಟ್ಟಿಯನ್ನೇ ಕೊಡಲು ಶುರುವಿಟ್ಟರಲ್ಲಾ ಎಂದು ಅಚ್ಚರಿಯಿಂದ `ಇತ್ತೀಚಿನ ತಪ್ಪು ಯಾವುದು ಸಾರ್?' ಎಂದು ಪ್ರಶ್ನಿಸಿದ.

`ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಕ್ಕೆ ನನಗೆ ಕಾರು ಕೊಡ್ತೀವಿ ಅಂದ್ರು. ಇನೋವಾ ಸಾಕು ಎಂದು ಹೇಳಿದ್ದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಮಾರಸ್ವಾಮಿಗಳಿಗೆ 24 ಲಕ್ಷ ರೂಪಾಯಿಯ ಫಾರ್ಚೂನರ್ ಕೊಟ್ಟಿರುವಾಗ ನನಗೆ 16 ಲಕ್ಷದ ಕಾರಾ? ನನಗೇನು ಮಂಡೆ ಕೆಟ್ಟಿದೆಯಾ? ನಾನು ಮೊದಲು ಇನೋವಾ ಸಾಕು ಎಂದು ಹೇಳಿ ತಪ್ಪು ಮಾಡಿದೆ. ಈಗ ನನಗೆ ಫಾರ್ಚೂನರ‌್ರೇ ಬೇಕು ಮಾರಾಯ್ರೇ' ಎಂದು ನಗುವಾನಂದ ಗೌಡರು ಕ್ಯಾಮೆರಾ ಫ್ಲ್ಯಾಷ್ ಬೆಳಗಿದಂತೆ ನಕ್ಕರು.

ಮೊಗಸಾಲೆಯ ಮತ್ತೊಂದು ಕಡೆ `ತಪ್ಪೇನ್ರಿ ಸಾಹೇಬ್ರೆ, ತಪ್ಪೇನೈತ್ರಿ' ಎಂದು ಕೂಗುತ್ತಿರುವ ಶಬ್ದ ಜೋರಾಗಿ ಕೇಳಿಬಂತು. ಪೆಕರ ಅತ್ತ ದೌಡಾಯಿಸಿದ. ನೋಡಿದರೆ, ಸಣ್ಣ ನೀರಾವರಿ ಸಚಿವ ತಂಗಡಗಿಯವರು ಒಂದೇ ಸಮನೆ ರೋದಿಸುತ್ತಿದ್ದರು. `ನಾನು ಏನು ಮಾಡಿದ್ರೂ ತಪ್ಪು ಅಂತ ಹೇಳ್ತಾ ಇರೋದು ರಾಜಕೀಯ ಪಿತೂರಿ. ನನ್ನ ಕ್ಷೇತ್ರದಲ್ಲಿ ಚುನಾವಣೆ ಸಮಯದಲ್ಲಿ ಶ್ರಮಿಸಿದವರಿಗೆಲ್ಲಾ ಊಟ ಹಾಕಿಸಿದ್ರೆ ಅದಕ್ಕೂ ನನ್ನ ರಾಜಕೀಯ ಎದುರಾಳಿಗಳು ಆಡಿಕೊಳ್ತಿದ್ದಾರೆ. ನಾನೇನ್ ಮಹಾ ಖರ್ಚು ಮಾಡಿದೆ ಅಂತ ಜನ ಬೊಂಬಡಾ ಹೊಡೀತಿದ್ದಾರೋ ಗೊತ್ತಿಲ್ಲ. 30 ಸಾವಿರ ಕೋಳಿ, ಅರವತ್ತು ಕುರಿಗಳನ್ನು ಕಡಿದು ಊಟ ಹಾಕಿಸಿದ್ದರಲ್ಲಿ ತಪ್ಪೇನಿದೆ? ಎಲ್ಲಾರು ಮಾಡುವುದು ಹೊಟ್ಟೆಗಾಗಿ ಅಲ್ಲವೇ? ಇದನ್ನೂ ತಪ್ಪು ಅಂತೀರಿ, ಒಬ್ಬ ಜಿಲ್ಲಾಧಿಕಾರೀನ ವರ್ಗ ಮಾಡಿಸಿದ್ರೆ ಅದನ್ನೂ ತಪ್ಪು ಅಂತೀರಿ.

ನಾನು ಕ್ಷೇತ್ರದ ಶಾಸಕ. ನಾನು ಹೇಳಿದ ಕೆಲಸವನ್ನೇ ಜಿಲ್ಲಾಧಿಕಾರಿ ಮಾಡಲ್ಲ ಎಂದು ಹೇಳಿದರೆ, ನಾನು ಅವರನ್ನು ಟ್ರಾನ್ಸ್‌ಫರ್ ಮಾಡಿಸುವುದು ತಪ್ಪಾ?'

ಎಲ್ಲರೂ ತಪ್ಪಾಯಿತು, ತಪ್ಪಾಯಿತು ಎನ್ನುತ್ತಿರುವಾಗ, ಇವರು ತಪ್ಪೇನು, ತಪ್ಪೇನು ಎಂದು ಕೂಗುತ್ತಿರುವುದನ್ನು ಕಂಡ ಪೆಕರ ಎಲ್ಲೋ ಟ್ರ್ಯಾಕ್ ತಪ್ಪುತ್ತಿದೆ ಎಂದುಕೊಂಡು ದೊಡ್ಡಗೌಡರ ಬಳಿ ಹೋದ.

`ಸಾರ್ ಅಯ್ಯ ಅವರ ಕಚೇರಿಯಲ್ಲಿ ನಿಮ್ಮ ಫೋಟೋವನ್ನು ಮರಳಿ ಸ್ಥಾಪನೆ ಮಾಡಿದ್ದಕ್ಕೆ ನಿಮಗೆ ಶುಭಾಶಯಗಳು' ಎಂದ ಪೆಕರ. ಖುಷಿ ಯಿಂದ ದೊಡ್ಡಗೌಡರು ತಲೆಯ ಮೇಲೆ ಕೈಯಿಟ್ಟು ಕೊಂಡು, ಕಣ್ಣು ಮುಚ್ಚಿಕೊಂಡೇ `ಏನ್ ಬಂದ್ರಿ? ನಾನು ಮೀಡಿಯಾ ಜೊತೆ ಮಾತಾಡಲ್ಲ' ಎಂದರು.

`ಈಗ ರಪ್ಪ ಅವರು ಬಿಜೆಪಿ ಬಿಟ್ಟು ತಪ್ಪಾಯಿತು ಎಂದರು. ಎಲ್ಲ ನಾಯಕರೂ ತಮ್ಮ ತಮ್ಮ ತಪ್ಪನ್ನು ಒಪ್ಪಿಕೊಂಡು ಬಹಿರಂಗವಾಗಿ ಹೊರ ಬರ‌್ತಾ ಇದಾರೆ. ಮಾಡಿದ ತಪ್ಪನ್ನು ಒಪ್ಪಿಕೊಳ್ಳೋಕೂ ಗಟ್ಸ್ ಬೇಕಲ್ಲ ಸಾರ್' ಎಂದು ಪೆಕರ ವಿವರಿಸಿದ.

`ತಪ್ಪಾಯಿತು ಅಂತ ಒಪ್ಪಿಕೊಳ್ಳೋಕೆ ನಾನೇನ್ ತಪ್ಪು ಮಾಡಿದೀನಿ?' ದೊಡ್ಡಗೌಡರು ಕಣ್ಣುಮುಚ್ಚಿಕೊಂಡೇ ಖಾರವಾಗಿ ಕೇಳಿ, ಮುಖವನ್ನು ಹಿಚಕವರೆ ತರಹ ಕಿವುಚಿದರು.

`ನಿಮ್ಮ ಕುಮಾರ ಕಂಠೀರವರು ಬಿಜೆಪಿ ಜತೆ ಸೇರಿ ಟ್ವೆಂಟಿ-ಟ್ವೆಂಟಿ ಗೇಮ್ ಆಡುವಾಗ ನೋಡಿಯೂ ನೋಡದಂತೆ ಇದ್ದದ್ದು ತಪ್ಪಲ್ಲವೇ? ಆಮೇಲೆ, ರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡದೆ ಪುತ್ರನೇ ವಚನಭ್ರಷ್ಟನಾಗುವಂತೆ ಮಾಡಿದ್ದು ತಪ್ಪಲ್ಲವೇ? ಬೇಗ, ತಪ್ಪಾಯಿತು ಅಂತ ಹೇಳಿ ಬಿಡಿ ಸಾರ್, ನಾನು ಓಡಿಹೋಗಿ ಬ್ರೇಕಿಂಗ್ ನ್ಯೂಸ್ ಹಾಕಿಬಿಡ್ತೀನಿ' ಪೆಕರ ಒತ್ತಾಯದ ದನಿಯಲ್ಲಿ ಕೇಳಿದ.

`ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ರಾಜ್ಯದಲ್ಲಿ ಮೊದಲಿನಿಂದಲೂ ನಾವು ಎಡಪಕ್ಷಗಳ ಜೊತೆ ಹೊಂದಾಣಿಕೆಯ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ' ಎಂದು ಹೇಳಿದ ದೊಡ್ಡಗೌಡರು, `ನಾನು ಮಾತ್ರೆ ನುಂಗಿ, ಸ್ವಲ್ಪ ರೆಸ್ಟ್ ತಗೋಬೇಕು' ಎಂದು ಹೇಳುತ್ತಾ ಎದ್ದು ಹೊರಟೇ ಹೋದರು. ಹೋಗುವಾಗ, `ಈ ವರದಿಗಾರನನ್ನು ಒಳಗೆ ಬಿಟ್ಟವರ‌್ಯಾರು? ಆ ನನ್ಮಗನನ್ನು ಕರೀರೋ' ಎಂದು ಗೊಣಗಿದ್ದು ಪೆಕರನಿಗೆ ಕೇಳಿಸಲೇ ಇಲ್ಲ.

ಪೆಕರ ಗದುಗಿನ ಹುಲಿಯನ್ನು ಭೇಟಿಯಾದ. `ಒಂದು ರೂಪಾಯಿಗೆ ಅಕ್ಕಿ ಕೊಡೋದನ್ನ ನೀವು ಆಕ್ಷೇಪಿಸಿದಿರಿ. ಅದಕ್ಕೆ ನೀವು ರಾಜೀನಾಮೆ ಕೊಡಬೇಕು ಅಂತ ಪೂಜಾರಿಗಳು ಹೇಳ್ತಾ ಇದ್ದಾರಲ್ಲಾ ಸಾರ್' ಎಂದು ಕೆಣಕಿದ.

`ನಾನು ಹೇಳಿದ್ದರಲ್ಲಿ ತಪ್ಪೇನು? ಪೂಜಾರಿಗೆ ಪುತ್ತೂರಿಗೆ ಹೋಗಲು ಪುರುಸೊತ್ತಿಲ್ಲ, ಪ್ರೆಸ್‌ಕ್ಲಬ್‌ಗೆ ಬಂದು ಪ್ರೆಸ್‌ಮೀಟ್ ಮಾಡ್ತಾರೆ.

ಗೋಕರ್ಣೇಶ್ವರನಿಗೂ ವೀರನಾರಾಯಣನಿಗೂ ಎಲ್ಲಿಂದೆಲ್ಲಿಯ ಸಂಬಂಧ?' ಗದುಗಿನ ಹುಲಿ ರೇಗಿತು.

`ಸಾರ್ ನೀವು ಶುದ್ಧ ನೀರಿಗೆ ಎರಡು ರೂಪಾಯಿ ಚಾರ್ಜ್ ಮಾಡ್ತೀರಲ್ಲಾ, ಅದು ತಪ್ಪಲ್ಲವಾ?'

`ಅದರಲ್ಲಿ ತಪ್ಪೇನಿದೆ? ಅಕ್ಕಿ ತಿಂದವನು ನೀರು ಕುಡಿಯಲೇ ಬೇಕಲ್ಲವೇ?'

ಪೆಕರ ಜಾಗ ಖಾಲಿ ಮಾಡಿದ.

`ಏನ್ ಇತ್ತ ಕಡೆ?' ಎಂದು ರೇವಣ್ಣನವರ ದನಿ ಕೇಳಿ ಪೆಕರ ಅತ್ತ ತಿರುಗಿದ.

`ಏನಿಲ್ಲ ಸಾರ್, ತಪ್ಪಾಯ್ತು ಅಂತ ಹೇಳ್ತೀರೇನೋ ಅಂತ ಬಂದೆ' ಎಂದ ಪೆಕರ.

`ಏನಕ್ಕೆ? ಏನಕ್ಕಂಗಂತೀಯಾ?' ಎಂದರು ರೇವಣ್ಣ.

`ಅದೇ ಸಾರ್, ಕೆಎಂಎಫ್ಪೂ, ನಿಮ್ಮನ್ನು ಸಮಿತಿಗೆ ನಾಮಕರಣ ಮಾಡಿದ್ದು, ಎಲ್ಲ ಅಣ್ಣತಮ್ಮಂದಿರೇ ಹಂಚಿಕೊಂಡ್ರೆ ಉಳಿದ ಶಾಸಕರಿಗೆ ಏನೂ ಬೇಡ್ವಾ?'

ರೇವಣ್ಣನವರು ಅಧೀರರಾಗಲಿಲ್ಲ. ನೋಡಿ ಸ್ವಾಮಿ... ಎಂದು ಹೇಳಿ, ಕಳಚಿಕೊಳ್ಳುತ್ತಿದ್ದ ಪಂಚೆಯನ್ನು, ಬಿಚ್ಚಿ, ಅಗಲಿಸಿ ಮತ್ತೆ ಸುತ್ತಿಕೊಂಡು `ಅದನ್ನೆಲ್ಲಾ ತಪ್ಪು ಅನ್ನಕಾಯ್ತದ?' ಎಂದು ಹೇಳುತ್ತಾ ಮುಂದೆ ಹೋದರು.

`ನಾನೂ ತಪ್ಪು ಮಾಡಿದೆ' ಎಂದು ಪೆಕರ ಪೇಚಾಡಿದ. ಯಾರ‌್ಯಾರೋ ತಪ್ಪು ಮಾಡಿ, ತಪ್ಪೊಪ್ಪಿಕೊಂಡರೆ, ನಾನ್ಯಾಕೆ ಕೇಳಬಾರದ್ದನ್ನು ಕೇಳಬೇಕು, ನೋಡಬಾರದ್ದನ್ನು ನೋಡಬೇಕು ಎಂದು ತಲೆಚಚ್ಚಿಕೊಳ್ಳುತ್ತಾ ಪೆಕರ ಆಫೀಸಿನತ್ತ ಹೆಜ್ಜೆ ಹಾಕಿದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT