ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ಚಿನ್ನ ಭಾರತಕ್ಕೆ ದುಬಾರಿ

Last Updated 17 ಜುಲೈ 2011, 19:30 IST
ಅಕ್ಷರ ಗಾತ್ರ

ಲಂಡನ್ ಒಲಿಂಪಿಕ್‌ಗೆ ಸರಿಯಾಗಿ ಒಂದು ವರ್ಷ ಹತ್ತು ದಿನಗಳು ಉಳಿದಿವೆ. ಅಂದರೆ 2012ರ ಜುಲೈ 27ರಂದು 30ನೇ ಒಲಿಂಪಿಕ್ ಕ್ರೀಡಾಕೂಟ ಆರಂಭ. ಆಧುನಿಕ ಒಲಿಂಪಿಕ್ ಕ್ರೀಡೆಗಳ 115 ವರ್ಷಗಳ ಇತಿಹಾಸದಲ್ಲಿ, ಲಂಡನ್ ನಾಲ್ಕನೇ ಬಾರಿಗೆ ಈ ಕ್ರೀಡಾಕೂಟದ ಆತಿಥ್ಯ ವಹಿಸಿಕೊಳ್ಳಲಿದೆ.
 
1908, 1944 ಮತ್ತು 1948ರ ಒಲಿಂಪಿಕ್ಸ್ ನಡೆಸಿದ್ದ ಲಂಡನ್, ಆರು ದಶಕಗಳ ನಂತರ ವಿಶ್ವದ ಅತಿ ದೊಡ್ಡ ಕ್ರೀಡಾಮೇಳಕ್ಕೆ ತಯಾರಾಗುತ್ತಿದೆ. ವಿಶ್ವ ಕ್ರೀಡಾರಂಗದಲ್ಲಿ ಒಲಿಂಪಿಕ್ ಚಿನ್ನದ ಪದಕಕ್ಕೆ ಸಮನಾದದ್ದು ಬೇರೆ ಯಾವುದೂ ಇಲ್ಲ.

ಒಲಿಂಪಿಕ್ಸ್‌ನಲ್ಲಿ ಹಣ ದೊರೆಯದಿದ್ದರೂ ಅಲ್ಲಿ ಗೆಲ್ಲುವ ಪದಕ ಕ್ರೀಡಾಪಟುಗಳನ್ನು ಶ್ರೀಮಂತರನ್ನಾಗಿಸುತ್ತದೆ. ಪದಕ ಗೆಲ್ಲುವ ಕ್ರೀಡಾಪಟು ರಾಷ್ಟ್ರದ ಆಸ್ತಿಯಾಗಿಬಿಡುತ್ತಾನೆ.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಭಿನವ್ ಬಿಂದ್ರಾ ಶೂಟಿಂಗ್‌ನಲ್ಲಿ ಚಿನ್ನ ಗೆದ್ದಾಗ ಇಡೀ ದೇಶವೇ ಹಿಂದೆಂದೂ ಪಡದಷ್ಟು ಸಂಭ್ರಮ ವ್ಯಕ್ತಪಡಿಸಿತ್ತು.ಯಾಕೆಂದರೆ ಅದುವರೆಗೆ ಹಾಕಿ ಬಿಟ್ಟರೆ ಭಾರತದ ಯಾವ ಕ್ರೀಡಾಪಟುವೂ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರಲಿಲ್ಲ.

1952ರಲ್ಲಿ ಕುಸ್ತಿಯಲ್ಲಿ ಕೆ.ಡಿ. ಜಾಧವ ಎಂಬ ಪೈಲ್ವಾನ ಕಂಚಿನ ಪದಕ ಗಳಿಸಿ ವಾಪಸ್ಸಾದಾಗ ಅವರನ್ನು ಅಲಂಕೃತ ಎತ್ತಿನ ಗಾಡಿಗಳಲ್ಲಿ ಊರು ತುಂಬಾ ಮೆರವಣಿಗೆ ಮಾಡಲಾಗಿತ್ತು. ಅದೇ ರೀತಿ 2008ರಲ್ಲಿ ಸುಶೀಲಕುಮಾರ್ ಕುಸ್ತಿಯಲ್ಲಿ ಕಂಚಿನ ಪದಕ ಗಳಿಸಿದಾಗಲೂ ಸಂಭ್ರಮದಿಂದ ಸ್ವಾಗತಿಸಲಾಗಿತ್ತು.

ಆದರೆ ಈ ಸಲ ಕ್ರೀಡಾಕೂಟಕ್ಕೆ ಇನ್ನೂ ಒಂದು ವರ್ಷ ಇರುವಂತೆಯೇಭಾರತೀಯರಿಗೆ ಪೆಟ್ಟು ಬಿದ್ದಿದೆ. ಹಾಕಿ ತಂಡ ಇನ್ನೂ ಅರ್ಹತೆ ಗಳಿಸಿಲ್ಲ. ಡಿಸೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆದರೆ ಮಾತ್ರ ಲಂಡನ್‌ಗೆ ಹೋಗಬಹುದು.

ಒಂದು ವೇಳೆ ಭಾರತ ಗೆಲ್ಲದಿದ್ದಲ್ಲಿ, ಫೆಬ್ರುವರಿಯಲ್ಲಿ ನಡೆಯುವ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಆಡಿ, ಅಗ್ರಸ್ಥಾನ ಗಳಿಸಲೇಬೇಕಾಗುತ್ತದೆ. ಎರಡೂ ಸವಾಲುಗಳು ಸದ್ಯದ ಸ್ಥಿತಿಯಲ್ಲಿ ಭಾರತಕ್ಕೆ ಕಷ್ಟವೇ ಆಗಿವೆ.

ಹಾಕಿಯ ಪರಿಸ್ಥಿತಿ ಹೀಗಿರುವಾಗ, ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಪ್ರದರ್ಶನದ ಭರವಸೆ ಮೂಡಿಸಿದ್ದ ಅಶ್ವಿನಿ ಅಕ್ಕುಂಜೆ ಹಾಗೂ ಇತರ ರಿಲೆ ಓಟಗಾರ್ತಿಯರು ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
 
ಅವರೆಲ್ಲ ಎರಡು ವರ್ಷ ನಿಷೇಧಕ್ಕೊಳಗಾಗುವುದು ಖಚಿತವಾಗಿದೆ. ಸೋಲಿಗಿಂತ ಅವಮಾನಕರ ಈ ಉದ್ದೀಪನ ಮದ್ದಿನ ಶಿಕ್ಷೆ.  ಒಲಿಂಪಿಕ್ ಹಾಕಿಯಲ್ಲಿ ಭಾರತದ ಸ್ವರ್ಣಯುಗ ಮುಗಿದು ಎಷ್ಟೋ ವರ್ಷಗಳಾಗಿವೆ.

ಭಾರತ 1928ರ ಆ್ಯಮಸ್ಟರಡ್ಯಾಮ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಆಡಿ, ಚಿನ್ನ ಜಯಿಸಿತು. ಅದಕ್ಕೆ ಮೊದಲು 1908 ಮತ್ತು 1920ರ   ಒಲಿಂಪಿಕ್ಸ್‌ಗಳಲ್ಲಿ ಬ್ರಿಟನ್ ಅಗ್ರಸ್ಥಾನ ಗಳಿಸಿತ್ತು.

ಭಾರತೀಯರಿಗೆ ಹಾಕಿ ಆಟ ಕಲಿಸಿದವರೇ ಬ್ರಿಟಿಷರು. ಆದರೆ `ಹಾಕಿ ಮಾಂತ್ರಿಕ~ ಎಂದು ಹೆಸರಾದ ಧ್ಯಾನಚಂದರಂಥ ಅಪ್ರತಿಮ ಆಟಗಾರರು ರೂಪುಗೊಂಡ ಮೇಲೆ ಬ್ರಿಟನ್ ಭಾರತ ತಂಡದ ವಿರುದ್ಧ ಆಡಲು ಹಿಂದೇಟು ಹಾಕತೊಡಗಿತ್ತು.

1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಬ್ರಿಟನ್ ಧ್ವಜದೊಂದಿಗೇ ಪಥಸಂಚಲನದಲ್ಲಿ ಭಾಗವಹಿಸಬೇಕಾಯಿತು. ಆದರೆ ಆಟಗಾರರು ತಮ್ಮ ಕೋಣೆಯಲ್ಲಿ ರಾಷ್ಟ್ರಧ್ವಜವೆನಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಧ್ವಜಕ್ಕೆ ವಂದನೆ ಸಲ್ಲಿಸಿ ಆಟಕ್ಕಿಳಿದಿದ್ದರು.

ಕೊನೆಗೂ 1948ರ ಕ್ರೀಡೆಗಳ ಫೈನಲ್‌ನಲ್ಲಿ ಭಾರತದ ಎದುರಾಳಿಯಾಗಿ ಬ್ರಿಟನ್ ಆಡಬೇಕಾಯಿತು. ಭಾರತ 4-0 ಗೋಲುಗಳಿಂದ ಸುಲಭವಾಗಿ ಜಯ ಗಳಿಸಿತು. ಭಾರತೀಯರು ಗುರುವಿಗೇ ತಿರುಮಂತ್ರ ಹೇಳಿದ್ದರು.

ಭಾರತ 1928 ರಿಂದ 1956ರವರೆಗಿನ  ಆರು ಒಲಿಂಪಿಕ್ಸ್‌ಗಳಲ್ಲೂ ಚಿನ್ನದ ಪದಕವನ್ನು ಬೇರೆ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಆದರೆ ಭಾರತದ ಜೊತೆಗೇ ಪ್ರಬಲ ಹಾಕಿ ಶಕ್ತಿಯಾಗಿ ರೂಪುಗೊಂಡ ಪಾಕಿಸ್ತಾನ 1960ರ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿತು.

1964ರಲ್ಲಿ ಭಾರತ ಸೇಡು ತೀರಿಸಿಕೊಂಡಿತಾದರೂ, 1968ರಿಂದ ಭಾರತ ಹಿಂದೆ ಬೀಳತೊಡಗಿತು. ಚಿನ್ನ ಹೋಗಲಿ ಕಂಚಿನ ಪದಕ ಗೆಲ್ಲುವುದೂ ಕಷ್ಟವಾಗತೊಡಗಿತು.

1980ರಲ್ಲಿ ಪ್ರಮುಖ ರಾಷ್ಟ್ರಗಳು ಮಾಸ್ಕೊ ಒಲಿಂಪಿಕ್ಸ್ ಬಹಿಷ್ಕರಿಸಿದಾಗ, ಭಾರತ ದುರ್ಬಲ ತಂಡಗಳ ವಿರುದ್ಧ ಜಯ ಗಳಿಸಿ ಚಿನ್ನದ ಪದಕ ಪಡೆಯಿತು.
 
ಅದೇ ಕೊನೆ. ಅಲ್ಲಿಂದ ಇಲ್ಲಿಯವರೆಗೆ ಭಾರತ ಹಾಕಿಯಲ್ಲಿ ಚಿನ್ನದ ಪದಕ ಗೆದ್ದಿಲ್ಲ. ಪದಕ ಹೋಗಲಿ, ಒಲಿಂಪಿಕ್ಸ್ ಹಾಕಿಯಲ್ಲಿ ಆಡುವ ಅರ್ಹತೆ ಗಳಿಸಲೂ ಪರದಾಡುವ ಸ್ಥಿತಿ ಎದುರಾಗಿದೆ.

ಅಥ್ಲೆಟಿಕ್ಸ್‌ನಲ್ಲಂತೂ ಭಾರತ ವಿಶ್ವ ದರ್ಜೆಯ ಅಥ್ಲೀಟುಗಳನ್ನು ರೂಪಿಸಿದ್ದು ಕಡಿಮೆ. 1900ರ ಪ್ಯಾರಿಸ್ ಒಲಿಂಪಿಕ್ಸ್‌ನ 100 ಮೀಟರ್ಸ್ ಓಟದಲ್ಲಿ ರಜತ ಪದಕ ಗಳಿಸಿದ ನಾರ್ಮನ್ ಪ್ರಿಚರ್ಡ್ ಎಂಬ ಆ್ಯಂಗ್ಲೊ ಇಂಡಿಯನ್ ಹೆಸರಿನ ಮುಂದೆ ಭಾರತ ಎಂದು ನಮೂದಿಸಲಾಗಿದೆಯಾದರೂ ಆತ ವಾಸ್ತವಿಕವಾಗಿ ಓಡಿದ್ದು ಬ್ರಿಟನ್ ತಂಡದ ಪರವಾಗಿಯೇ. ಆನಂತರ ಭಾರತೀಯರ ಹೆಸರು ಪದಕಪಟ್ಟಿಯಲ್ಲಿ ಬಂದಿಲ್ಲ.

ಪದಕದ ಸಮೀಪ ಬಂದವರು ಇಬ್ಬರೇ ಇಬ್ಬರು. ಮಿಲ್ಖಾಸಿಂಗ್ ಮತ್ತು ಪಿ.ಟಿ. ಉಷಾ. 1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ಸ್ ಓಟದಲ್ಲಿ ಮಿಲ್ಖಾಸಿಂಗ್ ನಾಲ್ಕನೇ ಸ್ಥಾನ ಗಳಿಸಿದ್ದರು.

ಅದೇ ರೀತಿ 1984 ಲಾಸ್ ಎಂಜಲೀಸ್ ಒಲಿಂಪಿಕ್ಸ್‌ನ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಉಷಾ ನಾಲ್ಕನೇ ಸ್ಥಾನ ಗಳಿಸಿದರು. ಆ ಸ್ಪರ್ಧೆ ಒಲಿಂಪಿಕ್ಸ್‌ನಲ್ಲಿ ನಡೆದದ್ದು ಅದೇ ಮೊದಲ ಬಾರಿಯಾಗಿತ್ತು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಅಶ್ವಿನಿ ಮತ್ತು ಆಕೆಯ ಜೊತೆಗಾರ್ತಿಯರು ರಿಲೆಯಲ್ಲಿ ಪದಕ ಗೆಲ್ಲುವರೆಂದು ಖಚಿತವಾಗಿ ಹೇಳುವ ಸಾಧ್ಯತೆ ಇರಲಿಲ್ಲ. ವೈಯಕ್ತಿಕ 400 ಮೀಟರ್ಸ್ ಓಟದಲ್ಲೂ ಅಶ್ವಿನಿ ಕಂಚಿನ ಪದಕವನ್ನಾದರೂ ಗೆಲ್ಲಬಹುದು ಎಂದು ಹೇಳುವ ಸ್ಥಿತಿಯೂ ಇರಲಿಲ್ಲ.

ಆದರೆ ಕ್ರೀಡೆಯಲ್ಲಿ ಸಹಜವಾಗಿಯೇ ಒಂದು ರೀತಿಯ ನಿರೀಕ್ಷೆ ಅಥವಾ ಆಶಾಭಾವನೆ ಮೂಡಿರುತ್ತದೆ. ಆದರೆ ಈ ಓಟಗಾರ್ತಿಯರು ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡೆಗಳಲ್ಲಿ ಮೂಡಿಸಿದ್ದ ಅಂಥ ನಿರೀಕ್ಷೆ ಮತ್ತು ಆಶಾಭಾವನೆಯನ್ನು `ಮದ್ದುರಾಕ್ಷಸ~ ಹೊಸಕಿ ಹಾಕಿದ್ದಾನೆ.

ಇದರಿಂದಾಗಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲೋ, ಕುಸ್ತಿಯಲ್ಲೋ ಪದಕವೊಂದು ಬಂದರೆ ಅದೇ ದೊಡ್ಡ ವಿಷಯವಾಗುತ್ತದೆ. ಭಾರತ ಬರಿಗೈಯಲ್ಲಿ ವಾಪಸ್ಸು ಬಂದರೂ ಆಶ್ಚರ್ಯವೇನೂ ಆಗುವುದಿಲ್ಲ.  *
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT