ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿದ ಪದವಿಗೆ ನ್ಯಾಯ ಒದಗಿಸಿದ ಮುಖರ್ಜಿ

Last Updated 13 ಜುಲೈ 2017, 19:30 IST
ಅಕ್ಷರ ಗಾತ್ರ

ಇನ್ನು ಹತ್ತು ದಿನಗಳಲ್ಲಿ ರಾಷ್ಟ್ರಪತಿ ಪ್ರಣವ್  ಮುಖರ್ಜಿ  ಅವರ ಅಧಿಕಾರ ಅವಧಿ ಮುಗಿಯುತ್ತದೆ. 340 ಕೊಠಡಿಗಳ ಮಹಲನ್ನು ಪ್ರಣವ್ ಮುಖರ್ಜಿ ತೊರೆಯಲಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರಪತಿಯಾಗಿ ಪ್ರಣವ್  ಮುಖರ್ಜಿ ಸಾಕಷ್ಟು ಲವಲವಿಕೆಯಿಂದ ಕಾರ್ಯನಿರ್ವಹಿಸಿದ್ದಾರೆ. ಹಲವು ದೇಶಗಳ ಭೇಟಿ, ಕಾರ್ಯಯೋಜನೆಗಳ ಉದ್ಘಾಟನೆ, ಜಂಟಿ  ಸದನ ಉದ್ದೇಶಿಸಿ ಭಾಷಣ ಇತ್ಯಾದಿ ನಿಯತ ಕಾರ್ಯಕ್ರಮಗಳ ಜೊತೆಗೆ ರಾಷ್ಟ್ರಪತಿ ಭವನದ ಮುಚ್ಚಿದ ಕೋಣೆಗಳ ಬಾಗಿಲು ತೆರೆಸುವ, ಈ ಹಿಂದೆ ವಿವಿಧ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸುವಾಗ ಬಂದ ಉಡುಗೊರೆಗಳನ್ನೆಲ್ಲಾ ಒಟ್ಟು ಮಾಡಿ ಅದಕ್ಕೆ ವಸ್ತು ಸಂಗ್ರಹಾಲಯದ ರೂಪಕೊಟ್ಟು ಸಾರ್ವಜನಿಕಗೊಳಿಸುವ, ಅಶೋಕ ಹಾಲ್ ಮತ್ತು ಗಣ್ಯರ ಸತ್ಕಾರ ಕೊಠಡಿಗೆ ನಾವೀನ್ಯ ತರುವ, ಅಬ್ದುಲ್ ಕಲಾಂ ನಂತರ ರಾಷ್ಟ್ರಪತಿ ಭವನವನ್ನು ಸಾರ್ವಜನಿಕರಿಗೆ ಹತ್ತಿರವಾಗಿಸುವ ಪ್ರಯತ್ನಗಳನ್ನು ಪ್ರಣವ್ ಮಾಡಿದ್ದಾರೆ. ಪ್ರಚಲಿತ ವಿದ್ಯಮಾನಗಳಿಗೆ ನೇರವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೂ ರಾಜಕಾರಣದಲ್ಲಿ ಹಲವು ದಶಕಗಳನ್ನು ಕಳೆದು, ಹಣಕಾಸು,  ರಕ್ಷಣೆ, ವಿದೇಶಾಂಗ, ವಾಣಿಜ್ಯ ಖಾತೆಗಳಂತಹ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಚಾಣಾಕ್ಷ ಮತ್ತು ಸಕ್ರಿಯ ರಾಜಕಾರಣಿ ಪ್ರಣವ್‌ಗೆ  ರಾಷ್ಟ್ರಪತಿ ಕುರ್ಚಿಯಲ್ಲಿ ಐದು ವರ್ಷಗಳ ಕಾಲ ಕೈಕಟ್ಟಿ ಕೂರುವ ಕೆಲಸ ತ್ರಾಸವಾಗಿದ್ದಿರಬಹುದು.

ಆದರೆ ಭಾರತದ ರಾಷ್ಟ್ರಪತಿ ಹುದ್ದೆಯ ಲಕ್ಷಣವೇ ಹಾಗಿದೆ. ಸಂಸದೀಯ ಪ್ರಜಾಪ್ರಭುತ್ವ ಮಾದರಿಯ ಆಡಳಿತದಲ್ಲಿ ಅಧಿಕಾರದ ಚುಕ್ಕಾಣಿ ಸಂಖ್ಯಾಬಲದ ಆಧಾರದ ಮೇಲೆ ರೂಪುಗೊಳ್ಳುವ ಸರ್ಕಾರದ ಕೈಯಲ್ಲಿರುತ್ತದೆ. ರಾಷ್ಟ್ರಪತಿಗಳದ್ದು ಮನೆಯಲ್ಲಿನ ವಯಸ್ಸಾದ ಯಜಮಾನರ ಸ್ಥಾನಮಾನ. ಈ ಅತ್ಯುನ್ನತ ಹುದ್ದೆಯ ಘನತೆ ಕಾಲದಿಂದ ಕಾಲಕ್ಕೆ ಮಾಸಿದೆ. ರಾಷ್ಟ್ರಪತಿ ಎಂದರೆ ‘ರಬ್ಬರ್ ಸ್ಟಾಂಪ್’ ಎಂದು ಮೂದಲಿಸುವಂತೆ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದವರಿದ್ದಾರೆ.

ಹಾಗೆ ನೋಡಿದರೆ, ದೇಶದ ಪ್ರಥಮ ಪ್ರಜೆಯ ಸ್ಥಾನಕ್ಕೆ ಅನರ್ಹರನ್ನು ಕೂರಿಸಿ, ಆ ಹುದ್ದೆಯ ಗೌರವ ಕುಸಿಯುವಂತೆ ಮಾಡಿದ ಅಪಕೀರ್ತಿ ಇಂದಿರಾ ಗಾಂಧಿಯವರಿಗೆ ಸಲ್ಲಬೇಕು. ಬಹುಶಃ 1950ರಿಂದ 1969ರವರೆಗೂ ಆ ಹುದ್ದೆಗೆ ಕಳಂಕವಿರಲಿಲ್ಲ. ರಾಜೇಂದ್ರ ಪ್ರಸಾದ್, ರಾಧಾಕೃಷ್ಣನ್, ಜಾಕೀರ್ ಹುಸೇನ್ ಆ ಹುದ್ದೆಯನ್ನು ಅಲಂಕರಿಸಿದಷ್ಟು ದಿನ ಆ ಸ್ಥಾನದ ಬಗ್ಗೆ ಹಗುರ ಮಾತುಗಳು ಬಂದಿರಲಿಲ್ಲ. ಆದರೆ ಆ ನಂತರ ರಾಜಕೀಯದ ಚದುರಂಗದಾಟಕ್ಕೆ, ವ್ಯಕ್ತಿಗತ ಪ್ರತಿಷ್ಠೆಗೆ ರಾಷ್ಟ್ರಪತಿ ಚುನಾವಣೆಯನ್ನು ಬಳಸಿಕೊಳ್ಳುವ ಕೆಲಸ ಆರಂಭವಾಯಿತು.  ತಮಗೆ ಸೈ ಎನ್ನುವ ಅಭ್ಯರ್ಥಿಯನ್ನೇ ರಾಷ್ಟ್ರಪತಿ ಹುದ್ದೆಯಲ್ಲಿ ಕೂರಿಸುವ ಉಪಾಯವನ್ನು ಪ್ರಧಾನಿ ಹುದ್ದೆಯಲ್ಲಿದ್ದವರು ಕಂಡುಕೊಂಡರು.

1969ರಲ್ಲಿ ರಾಷ್ಟ್ರಪತಿಗಳ ಆಯ್ಕೆಯ ವಿಷಯ ಬಂದಾಗ, ಆ ಚುನಾವಣೆ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ವೈಯಕ್ತಿಕ ಪ್ರತಿಷ್ಠೆಯ ಕಣವಾಯಿತು. ನೆಹರೂ ಉತ್ತರಾಧಿಕಾರಿಯಾಗಿ ಪ್ರಧಾನಿ ಹುದ್ದೆಗೆ ಇಂದಿರಾರನ್ನು ತಂದಿದ್ದ ಕಾಂಗ್ರೆಸ್ ಸಿಂಡಿಕೇಟ್ ನಂತರ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗೊಂಡಿತ್ತು. ಕಾಮರಾಜ್, ಎಸ್. ನಿಜಲಿಂಗಪ್ಪ, ಎಸ್.ಕೆ ಪಾಟೀಲ್, ಅತುಲ್ಯ ಘೋಷ್, ಸಂಜೀವ ರೆಡ್ಡಿ ಒಳಗೊಂಡ ಸಿಂಡಿಕೇಟ್, ಇಂದಿರಾ ಬೆಳವಣಿಗೆಯ ವೇಗಕ್ಕೆ ಕಡಿವಾಣ ಹಾಕಲು ರಾಷ್ಟ್ರಪತಿ ಚುನಾವಣೆಯನ್ನು ಬಳಸಿಕೊಂಡಿತು. ಅಭ್ಯರ್ಥಿಯನ್ನಾಗಿ ನೀಲಂ ಸಂಜೀವ ರೆಡ್ಡಿಯವರನ್ನು ಮುಂದುಮಾಡಿತು. ದಲಿತ ನಾಯಕ ಜಗಜೀವನ ರಾಮ್‌ ಹೆಸರನ್ನು ಇಂದಿರಾ ಸೂಚಿಸಿದರು. ಕೊನೆಗೆ ಒಮ್ಮತದ ಅಭ್ಯರ್ಥಿಯಾಗಿ ಸಂಜೀವ ರೆಡ್ಡಿ ಕಣಕ್ಕಿಳಿದರು. ಆದರೆ ಇಂದಿರಾ ತಂತ್ರಗಾರಿಕೆಯ ಫಲವಾಗಿ ಸಂಜೀವ ರೆಡ್ಡಿ ಸೋತರು. ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣದಲ್ಲಿದ್ದ ವಿ.ವಿ. ಗಿರಿ ರಾಷ್ಟ್ರಪತಿಯಾದರು.

ವಿ.ವಿ. ಗಿರಿ ತಮ್ಮ ಬೆನ್ನಿಗೆ ನಿಂತವರ ಮುಲಾಜಿಗೆ ಬಿದ್ದಂತೆ ನಡೆದುಕೊಂಡರು. 1974ರಲ್ಲಿ ವಿ.ವಿ. ಗಿರಿಯವರ ನಂತರ ತನ್ನ ಮಂತ್ರಿಮಂಡಲದ ಹಿರಿಯ ಸಚಿವರಾಗಿದ್ದ ಫಕ್ರುದ್ದಿನ್ ಅಲಿ ಅಹಮದ್ ಅವರನ್ನು ಇಂದಿರಾ ರಾಷ್ಟ್ರಪತಿಯನ್ನಾಗಿಸಿದರು. ಫಕ್ರುದ್ದಿನ್ ಅಲಿಯವರು ಇಂದಿರಾ ಕೈಗೊಂಬೆಯಂತೆಯೇ ವರ್ತಿಸಿದರು. ತುರ್ತುಪರಿಸ್ಥಿತಿ ಹೇರಲು ಮಧ್ಯರಾತ್ರಿ ತಂದ ಒಪ್ಪಿಗೆ ಪತ್ರಕ್ಕೆ ನಿದ್ದೆಗಣ್ಣಿನಲ್ಲೇ ಮರುವಿಚಾರ ಮಾಡದೆ ಸಹಿ ಹಾಕಿದರು. ಹೀಗೆ ಪ್ರಥಮ ಪ್ರಜೆಗೆ ‘ರಬ್ಬರ್ ಸ್ಟಾಂಪ್’ ಎಂಬ ಉಪನಾಮ ಅಂಟಿಕೊಂಡಿತು. ನಂತರ ಆ ಪರಂಪರೆ ಮುಂದುವರೆಯಿತು. ಗ್ಯಾನಿ ಜೇಲ್ ಸಿಂಗ್ ಆ ಕುರ್ಚಿಯಲ್ಲಿ ಕೂತಾಗ ಆ ಹುದ್ದೆಗಿದ್ದ ಗೌರವ ಕುಸಿದುಬಿತ್ತು. ‘ಇಂದಿರಾ ಹೇಳಿದರೆ ಅವರ ಮನೆಯ ಚಾಕರಿಗೂ ಸಿದ್ಧ’ ಎಂದಿದ್ದವರು ಈ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದರು. ಆದರೆ ಜೇಲ್ ಸಿಂಗ್‌ರ ನಂಟು ಇಂದಿರಾರೊಂದಿಗಿತ್ತೇ ವಿನಾ ರಾಜೀವರೊಂದಿಗೆ ಮುಂದುವರಿಯಲಿಲ್ಲ. ಒಬ್ಬರು ಮತ್ತೊಬ್ಬರಿಗೆ ತೊಂದರೆ ಕೊಡಬಹುದೆಂಬ ಅಪನಂಬಿಕೆ ಇಬ್ಬರಲ್ಲೂ ಇತ್ತು.

ಇಂದಿರಾ ಗಾಂಧಿಯವರು ತೀರಿಕೊಂಡಾಗ ಜೇಲ್ ಸಿಂಗ್ ಪ್ರವಾಸದಲ್ಲಿದ್ದರು. ರಾಜೀವ್ ಗಾಂಧಿ ಆಪ್ತವಲಯದಲ್ಲಿದ್ದ ಅರುಣ್ ನೆಹರೂ, ‘ಉಪರಾಷ್ಟ್ರಪತಿಗಳ ಸಮ್ಮುಖದಲ್ಲೇ ಪ್ರಮಾಣವಚನ ಸ್ವೀಕರಿಸಿಬಿಡಿ’ ಎಂಬ ಸಲಹೆ ಇತ್ತಿದ್ದರು. ಆದರೆ ಅದು ಸಂವಿಧಾನಾತ್ಮಕವಾಗಿ ಸರಿಯಾದ ಕ್ರಮವಲ್ಲ ಎಂದು ಆಗ ಅದನ್ನು ತಡೆದವರು ಇಂದಿರಾ ಮತ್ತು ರಾಜೀವ್ ಇಬ್ಬರಿಗೂ ಆಪ್ತರಾಗಿದ್ದ ಪ್ರಣವ್  ಮುಖರ್ಜಿ. ಕೊನೆಗೆ ಜೇಲ್ ಸಿಂಗ್ ಪ್ರವಾಸ ಮೊಟಕುಗೊಳಿಸಿ ಬಂದರು. ತುರ್ತಿನಲ್ಲೇ ರಾಜೀವ್ ಗಾಂಧಿ ಪ್ರಧಾನಿಯಾದದ್ದೇನೋ ಖರೆ, ಆದರೆ ರಾಷ್ಟ್ರಪತಿ ಮತ್ತು ಪ್ರಧಾನಿ ಮಧ್ಯದ ಹಗ್ಗಜಗ್ಗಾಟ ಮುಂದುವರೆಯಿತು. ಜೇಲ್ ಸಿಂಗ್ ನಂತರ ಆ ಹುದ್ದೆಗೆ ಕೊಂಚ ಗೌರವ ಮರುಕಳಿಸಿದ್ದು ಆರ್. ವೆಂಕಟರಾಮನ್, ಡಾ. ಶಂಕರದಯಾಳ ಶರ್ಮ, ಕೆ.ಆರ್. ನಾರಾಯಣನ್ ಮತ್ತು ಡಾ. ಅಬ್ದುಲ್ ಕಲಾಂ. ಈ ನಾಲ್ವರ ಆಯ್ಕೆಯ ಹಿಂದೆ ರಾಜಕೀಯ ಕಾರಣಗಳು ಇರಲಿಲ್ಲ ಎಂದಲ್ಲ, ಆದರೆ ತೀರಾ ಸರ್ಕಾರದ ಕೈಗೊಂಬೆಯಾಗಿ ಇವರು ವರ್ತಿಸಲಿಲ್ಲ.

ನಂತರ ಮತ್ತೊಮ್ಮೆ ರಾಷ್ಟ್ರಪತಿ ಹುದ್ದೆಯ ಘನತೆ ಚರ್ಚೆಗೆ ಬಂತು. ತಮ್ಮ ಕುಟುಂಬಕ್ಕೆ ಆಪ್ತರಾಗಿದ್ದರು ಎಂಬ ಕಾರಣಕ್ಕೆ, ಪ್ರತಿಭಾ ಪಾಟೀಲರನ್ನು ರಾಷ್ಟ್ರಪತಿ ಸ್ಥಾನಕ್ಕೆ ಸೋನಿಯಾ ಗಾಂಧಿ ತಂದರು ಎಂಬ ಟೀಕೆ ಕೇಳಿಬಂತು. ಪ್ರತಿಭಾ ಪಾಟೀಲರ ವಿದೇಶ ಪ್ರವಾಸ, ಭೂಮಿ ಖರೀದಿ ವಿಷಯಗಳು ಚರ್ಚೆಯಾದವು. ನಂತರದ ಅವಧಿಗೆ ಪ್ರಣವ್  ಮುಖರ್ಜಿ ಹೆಸರು ಚಾಲ್ತಿಗೆ ಬಂದಾಗ ಬಹುತೇಕ ಪಕ್ಷಗಳು ಒಮ್ಮತ ಸೂಚಿಸಿದರೂ ಕೆಲವು ಅಪಸ್ವರಗಳು ಕೇಳಿ ಬಂದವು. ಮುಖ್ಯವಾಗಿ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಅವರ ಹಾದಿ ಸುಗಮವಾಗಲಿ ಎಂಬುದು ಈ ಆಯ್ಕೆಯ ಹಿಂದಿನ ಉದ್ದೇಶ ಎಂಬ ಗುಸುಗುಸು ಕೇಳಿಸಿತು. ಈ ಮಾತು ಬರಲು ಕಾರಣ ಇದ್ದವು. ಪ್ರಣವ್ ಮುಖರ್ಜಿ ಈ ಹಿಂದೆ ಹಲವು ಬಾರಿ ಪ್ರಧಾನಿ ಸ್ಥಾನಕ್ಕೆ ತೀರಾ ಹತ್ತಿರ ಬಂದಿದ್ದರು. ಆದರೆ ಕುರ್ಚಿ ಒಲಿದಿರಲಿಲ್ಲ.

1969ರಲ್ಲಿ ರಾಜ್ಯಸಭೆಗೆ ಆಯ್ಕೆಯಾದಾಗ ಪ್ರಣವ್ ಮುಖರ್ಜಿ ಅವರ ವಯಸ್ಸು ಕೇವಲ 34. ಮುಖರ್ಜಿ ಅವರ ವಾಕ್ಚಾತುರ್ಯ ಕಾಂಗ್ರೆಸ್ ಅಧಿನಾಯಕಿ ಇಂದಿರಾರ ಗಮನ ಸೆಳೆದಿತ್ತು. ಪ್ರಣವ್ ಇಂದಿರಾರ ಆಪ್ತವಲಯದಲ್ಲಿ ಜಾಗ ಪಡೆದರು. ಚುನಾವಣೆಗೆ ನಿಂತು ಗೆದ್ದುಬರಬಹುದಾದ ‘ಚಾತುರ್ಯ’ ಇಲ್ಲದ ಪ್ರಣವ್  ಮುಖರ್ಜಿ ಅವರನ್ನು ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುವಂತೆ ಇಂದಿರಾ ನೋಡಿಕೊಂಡರು. 1973ರಲ್ಲಿ ಕೈಗಾರಿಕಾ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಸ್ಥಾನ, ನಂತರ ನೌಕಾಯಾನ ಮತ್ತು ಸಾರಿಗೆ, ಹಣಕಾಸು ಖಾತೆ ರಾಜ್ಯ ಸಚಿವ ಪದವಿ, ಕಂದಾಯ ಮತ್ತು ಬ್ಯಾಂಕಿಂಗ್ ಖಾತೆ... ಹೀಗೆ ಪ್ರಣವ್  ಮುಖರ್ಜಿ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಒಂದೊಂದೇ ಮೆಟ್ಟಿಲೇರುತ್ತಾ ಬಂದರು. ಬ್ಯಾಂಕಿಂಗ್ ಕ್ಷೇತ್ರದ ರಾಷ್ಟ್ರೀಕರಣ ಇಂದಿರಾರ ದಿಟ್ಟ ಹೆಜ್ಜೆಗಳಲ್ಲಿ ಒಂದು, ಅದಕ್ಕೆ ಪೂರಕವಾಗಿ ಆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ಪ್ರಣವ್ ತಂದರು.

1984ರ ಹೊತ್ತಿಗೆ ಇಂದಿರಾ ಸಂಪುಟದಲ್ಲಿ ಇಂದಿರಾರ ನಂತರದ ಸ್ಥಾನದಲ್ಲಿ ಪ್ರಣವ್ ಮುಖರ್ಜಿ ಇದ್ದರು. ನೆಹರೂ ನಂತರ ಯಾರು? ಎಂಬ ಪ್ರಶ್ನೆಯಂತೆಯೇ ‘ಇಂದಿರಾ ನಂತರ ಯಾರು?’ ಎಂಬ ಪ್ರಶ್ನೆಯೂ ಎದ್ದಿತ್ತು. ಪ್ರಣವ್ ಮುಖರ್ಜಿ ಕೊಂಚ ಉತ್ಸಾಹ ತೋರಿ, ಪತ್ರಕರ್ತರು ಈ ಪ್ರಶ್ನೆ ಮುಂದಿಟ್ಟಾಗ ‘ನಾನಿದ್ದೇನಲ್ಲ’ ಎಂಬ ಧಾಟಿಯಲ್ಲಿ ಉತ್ತರಿಸಿದ್ದರು. ಅಲ್ಲಿಂದ ಪ್ರಣವ್,  ಕಾಂಗ್ರೆಸ್ಸಿನ ಕುಟುಂಬ ಆರಾಧಕ ಪಡೆಯ ವಿರೋಧ ಎದುರಿಸಬೇಕಾಯಿತು. ಇಂಧನ ಖಾತೆಯ ರಾಜ್ಯಸಚಿವರಾಗಿದ್ದ ಅರುಣ್ ನೆಹರೂ, ರಾಜೀವ್ ಗಾಂಧಿ ಪರ ಹಿರಿಯ ಕಾಂಗ್ರೆಸ್ಸಿಗರ ಅಭಿಪ್ರಾಯ ರೂಪಿಸುವ ಕೆಲಸ ಮಾಡಿದರು. ಇಂದಿರಾ ಮರಣಾ ನಂತರ ತಕ್ಷಣವೇ ಸರ್ಕಾರಕ್ಕೊಬ್ಬ ಸಾರಥಿಯನ್ನು ನೇಮಿಸುವ ಪ್ರಸ್ತಾಪಕ್ಕೆ ಅಭಿಪ್ರಾಯ ಪಡೆಯಲು ಪಿ.ಸಿ. ಅಲೆಕ್ಸಾಂಡರ್ ಮುಂದಾದಾಗ ಎಲ್ಲರೂ ಒಕ್ಕೊರಲಿನಿಂದ ರಾಜೀವ್ ಎಂದರು. ಪ್ರಣವ್  ಪ್ರಧಾನಿ ಪಟ್ಟದಿಂದ ದೂರ ಉಳಿಯಬೇಕಾಯಿತು.

ರಾಜೀವ್ ಗಾಂಧಿ ಪ್ರಧಾನಿಯಾದಾಗ ಅವರ ಜೊತೆಯಲ್ಲೇ ಪ್ರಣವ್ ಮುಖರ್ಜಿ, ಪಿ.ವಿ. ನರಸಿಂಹರಾವ್, ಪಿ. ಶಿವಶಂಕರ್ ಮತ್ತು ಬೂಟಾ ಸಿಂಗ್ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಆಡಳಿತದಲ್ಲಿ ಅನನುಭವಿಯಾಗಿದ್ದ ರಾಜೀವ್  ಅವರಿಗೆ ಪ್ರಣವ್ ಮತ್ತು  ನರಸಿಂಹರಾವ್  ಅವರ ರಾಜಕೀಯ ಅನುಭವ ಅಗತ್ಯವಾಗಿತ್ತು. ಸಿಖ್ಖರ ಮೇಲಿನ ದಾಳಿಗೆ ಮುಲಾಮು ಹಚ್ಚಲು ಬೂಟಾ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಪ್ರಣವ್ ಮುಖರ್ಜಿ ಪತ್ರಕರ್ತರ ಮುಂದೆ ‘ನಾನಿದ್ದೇನೆ’ ಎಂದಿದ್ದನ್ನು ರಾಜೀವ್ ಗಾಂಧಿ ಮರೆಯುವುದು ಸಾಧ್ಯವಾಗಲಿಲ್ಲ. ಒಂದು ರೀತಿಯಲ್ಲಿ ತಮ್ಮ ಪ್ರತಿಸ್ಪರ್ಧಿಯಂತೆಯೇ ಪ್ರಣವ್ ಅವರನ್ನು ನೋಡಿದರು. 84ರ ಚುನಾವಣೆ ಬಳಿಕ ಪ್ರಣವ್  ಅವರನ್ನು ಸಂಪುಟದಿಂದ ಹೊರಗಿಟ್ಟರು. ಒಂದು ಹಂತದಲ್ಲಿ ಕೇಂದ್ರ ಸಂಪುಟದ ಎರಡನೆಯ ಸ್ಥಾನದಲ್ಲಿದ್ದ ನಾಯಕನನ್ನು, ಪಶ್ಚಿಮ ಬಂಗಾಳದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳಲು ಕಳುಹಿಸಲಾಯಿತು. ನಂತರ ಪಕ್ಷದಿಂದ ಉಚ್ಚಾಟಿಸಲಾಯಿತು. ಆದರೆ ಪಕ್ಷದ ವಿರುದ್ಧವಾಗಲೀ ರಾಜೀವ್  ವಿರುದ್ಧವಾಗಲೀ ಹಗುರವಾಗಿ ಪ್ರಣವ್ ಮಾತನಾಡಲಿಲ್ಲ. ವಿರೋಧಿಸಿ ಹೇಳಿಕೆ ಕೊಡಲಿಲ್ಲ. ತಮ್ಮದೇ ಪಕ್ಷ ಕಟ್ಟುವ ಪ್ರಯತ್ನ ಮಾಡಿ ಸೋತರು.

ಅಲ್ಲಿಗೆ ಪ್ರಣವ್  ಮುಖರ್ಜಿ ರಾಜಕೀಯ ಅಧ್ಯಾಯ ಮುಗಿಯಬೇಕಿತ್ತು. ಆದರೆ ನಂತರ ಆದ ರಾಜಕೀಯ ಬೆಳವಣಿಗೆಗಳು ಹೊಸ ಸರ್ಕಾರದ ರಚನೆಗೆ, ನಾಯಕರ ಉದಯಕ್ಕೆ ಕಾರಣವಾಯಿತು. ಮುಖರ್ಜಿ ಅವರನ್ನು ಸ್ವತಃ ರಾಜೀವ್ ಗಾಂಧಿಯೇ  ಕಾಂಗ್ರೆಸ್ಸಿಗೆ ಆಹ್ವಾನಿಸಿದರು. ರಾಜೀವ್ ಗಾಂಧಿ ತರುವಾಯ ಪ್ರಧಾನಿ ಗಾದಿಯಲ್ಲಿ ಕುಳಿತ ನರಸಿಂಹರಾವ್ ಅವರಿಗೆ ಮುಖರ್ಜಿ ಅವರ ಸಾಮರ್ಥ್ಯದ ಅರಿವಿತ್ತು. 1993ರಲ್ಲಿ ಪ್ರಣವ್  ರಾಜ್ಯಸಭೆಗೆ ಆಯ್ಕೆಯಾಗುವಂತೆ ಪಿವಿಎನ್ ನೋಡಿಕೊಂಡರು. ವಿದೇಶಾಂಗ ಖಾತೆಯ ಜವಾಬ್ದಾರಿ ಇತ್ತರು. 1998ರಲ್ಲಿ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮನವೊಲಿಸಿದವರಲ್ಲಿ ಪ್ರಣವ್  ಮುಖರ್ಜಿ ಪ್ರಮುಖರು. 2004ರಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳೊಡಗೂಡಿ ಸರ್ಕಾರ ರಚಿಸುವ ಸಂದರ್ಭ ಬಂದಾಗ ಬಹುಪಾಲು ಕಾಂಗ್ರೆಸ್ ನಾಯಕರು ಸೋನಿಯಾ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸಿದರಾದರೂ ಅದರ ಜೊತೆಗೆ ಪ್ರಣವ್  ಅವರ ಹೆಸರೂ ಮತ್ತೊಮ್ಮೆ ಕೇಳಿಬಂದಿತ್ತು. ಕೊನೆಗೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸಿದರು. ತಾವು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಆಯ್ಕೆ ಮಾಡಿದ್ದ ವ್ಯಕ್ತಿಯ ಸಂಪುಟದಲ್ಲಿ ಪ್ರಣವ್ ಸಚಿವರಾದರು! ವಿದೇಶಾಂಗ, ರಕ್ಷಣಾ ಖಾತೆ, ವಿತ್ತ ಖಾತೆಯ ಜವಾಬ್ದಾರಿಗಳನ್ನು ನಿರ್ವಹಿಸಿದರು. ಚೀನಾ ಮತ್ತು ಅಮೆರಿಕದೊಂದಿಗಿನ ಸಂಬಂಧ ಸುಧಾರಿಸಿಕೊಳ್ಳುವತ್ತ ಕೆಲಸ ಮಾಡಿದರು.

ಹೀಗೆ ಅಪಾರ ರಾಜಕೀಯ ಅನುಭವ ಮತ್ತು ಅರ್ಹತೆಯಿದ್ದಾಗಿಯೂ ಪ್ರಧಾನಿ ಪಟ್ಟ ಪ್ರಣವ್  ಅವರಿಗೆ ಏಕೆ ಎಟುಕಲಿಲ್ಲ ಎಂಬುದಕ್ಕೆ ಕೆಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಅವರು ಜನಸಮೂಹದ ನಾಯಕರಾಗಿರಲಿಲ್ಲ. ಕೈಗೊಂಬೆಯಾಗಬಲ್ಲ ವ್ಯಕ್ತಿತ್ವ ಪ್ರಣವ್ ಅವರದ್ದಾಗಿರಲಿಲ್ಲ. ಒಂದು ಕುಟುಂಬವನ್ನೇ ನೆಚ್ಚಿಕೊಂಡ ಪಕ್ಷದಲ್ಲಿ ಅವರು ರಾಜಕೀಯ ಆಯುಷ್ಯ ಸವೆಸಿದರು ಇತ್ಯಾದಿ ಇತ್ಯಾದಿ. ಆದರೆ ತಮಗೆ ಒಲಿದು ಬಂದ ಪದವಿ, ಸ್ಥಾನಗಳಿಗೆ ನ್ಯಾಯ ಒದಗಿಸುವ ಕೆಲಸವನ್ನಂತೂ ಪ್ರಣವ್  ಮಾಡಿದ್ದಾರೆ. ರಾಷ್ಟ್ರಪತಿಯಾಗಿ ಆ ಸ್ಥಾನದ ಘನತೆ ಮುಕ್ಕಾಗದಂತೆ ನೋಡಿಕೊಂಡಿದ್ದಾರೆ. ಏನೇ ಹೇಳಿ, ಪ್ರಣವ್  ಮುಖರ್ಜಿ ಅವರು ಎಲ್.ಕೆ. ಅಡ್ವಾಣಿ ಅವರಿಗಿಂತ ಅದೃಷ್ಟಶಾಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT