ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಜ್ವರಕ್ಕೆ ಔಷಧವಿದೆಯೇ?

Last Updated 2 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಮಾರ್ಚ್ 3, 1934 ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹತ್ವದ ದಿನಾಂಕ. ಹೌದು. ಅದರೆ ಭಾರತದಲ್ಲಿ ವಾಕ್ಚಿತ್ರ ಶಕೆ ಆರಂಭವಾಗಿ ಅದಾಗಲೇ ಮೂರುವರ್ಷಗಳೇ  ಕಳೆದುಹೋಗಿದ್ದವು. ದೇಶದ ಮೊದಲ ವಾಕ್ಚಿತ್ರ `ಆಲಂ ಆರಾ' 1931ರಲ್ಲೇ ತೆರೆಕಂಡಿತ್ತು. ಆ ವೇಳೆಗೆ ಕರ್ನಾಟಕದಲ್ಲಿ ಇನ್ನೂ ಮೂಕಿಚಿತ್ರಗಳೇ ನಿರ್ಮಾಣವಾಗುತ್ತಿದ್ದವು. ನೆರೆಯ ಆಂಧ್ರಪ್ರದೇಶದಲ್ಲಿ `ಭಕ್ತಪ್ರಹ್ಲಾದ' (1931), ತಮಿಳುನಾಡಿನಲ್ಲಿ `ಕಾಳಿದಾಸ' (1931), ಮರಾಠಿಯಲ್ಲಿ `ಅಯೋಧ್ಯಾಚ ರಾಜ' (1932), ಗುಜರಾತಿನಲ್ಲಿ `ನರಸೀಮೆಹತಾ' (1932) ಮೊದಲ ವಾಕ್ಚಿತ್ರಗಳಾಗಿ ಬಿಡುಗಡೆಯಾಗಿ ಹೊಸ ಆವಿಷ್ಕಾರದ ಪುಳಕವನ್ನು ಜನ ಅನುಭವಿಸುತ್ತಿದ್ದರು. ಆದರೆ ಕನ್ನಡ ವಾಕ್ಚಿತ್ರದ ಹುಟ್ಟು ಮೂರು ವರ್ಷ ತಡವಾಯಿತು. ಹೊಸತುಗಳ ಓಟದಲ್ಲಿ ಕನ್ನಡ ಚಿತ್ರರಂಗ ಹಿಂದೆ ಬಿದ್ದದ್ದು ಏಕೆ?

ಭ್ರೂಣಾವಸ್ಥೆಯಲ್ಲಿಯೇ ಕನ್ನಡ ಚಿತ್ರರಂಗ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಕೊಂಡಿತ್ತು. 175 ಮೂಕಿ ಚಿತ್ರಗಳನ್ನು ತಯಾರಿಸಿ, ಬೆಂಗಳೂರು ಕೂಡ ಚಿತ್ರನಿರ್ಮಾಣ ಕೇಂದ್ರ ಎನ್ನುವುದನ್ನು ಅದಾಗಲೇ ಸಾಬೀತು ಮಾಡಿದ್ದರೂ, ವಾಕ್ಚಿತ್ರ ನಿರ್ಮಾಣಕ್ಕೆ ವೇದಿಕೆ ಸೃಷ್ಟಿಯಾಗಲಿಲ್ಲ. ಆವಿಷ್ಕಾರದ ಸಮಯದಲ್ಲಿನ ಬಹುತೇಕ ಸಮಸ್ಯೆಗಳು ಕನ್ನಡವನ್ನು ಕಾಡಿವೆ. ಮದ್ರಾಸು, ಹೈದರಾಬಾದ್ ಹಾಗೂ ಕಲ್ಕತ್ತಗಳಲ್ಲಿ ಇದ್ದ ಮೂಲಭೂತ ಸೌಕರ್ಯಗಳು ಬೆಂಗಳೂರಿನಲ್ಲಾಗಲಿ, ಮೈಸೂರಿನಲ್ಲಾಗಲಿ ಇರಲಿಲ್ಲ. ವಿದೇಶಗಳಿಂದ ಆಗಮಿಸಿ ಚಲನಚಿತ್ರ ಸಲಕರಣೆಗಳ ಮಾರಾಟ ಮಾಡುವವರು, ಸಿನಿಮಾ ತಂತ್ರಜ್ಞರುಗಳು ನೇರವಾಗಿ ಮದ್ರಾಸು, ಮುಂಬೈ ನಗರಗಳಲ್ಲಿ ಬಂದಿಳಿಯುತ್ತ್ದ್ದಿದರು. ಹೀಗಾಗಿ, ಆರ್.ನಾಗೇಂದ್ರರಾಯರಿಗೆ, ಗುಬ್ಬಿವೀರಣ್ಣನವರಿಗೆ ಕನ್ನಡದಲ್ಲಿ ಮಾತನಾಡುವ ಚಿತ್ರವೊಂದನ್ನು ತಯಾರಿಸಬೇಕು ಎನ್ನುವ ಹಂಬಲವಿದ್ದರೂ ಅದು ಕಾರ್ಯಸಾಧುವಾಗಿರಲಿಲ್ಲ. ಒಂದು ಸುಸಜ್ಜಿತ ಸ್ಟುಡಿಯೊ ಕೂಡ ಇರಲಿಲ್ಲ. ಕ್ಯಾಮೆರಾ ಬೇಕೆಂದರೂ ಮದ್ರಾಸ್, ಮುಂಬೈಗಳನ್ನೇ ಅವಲಂಬಿಸಬೇಕಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಚಲನಚಿತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಕೇಂದ್ರೀಕೃತವಾಗಲು ಸಾಧ್ಯವಾಗಲೇ ಇಲ್ಲ.

ಮೈಸೂರು ರಾಜ್ಯದಲ್ಲಿ ಕೆಲವು ಪ್ರಾಂತ್ಯಗಳು ಹರಿದುಹಂಚಿಹೋಗಿದ್ದುದೂ ಚಲನಚಿತ್ರರಂಗದ ಶೀಘ್ರಗತಿಯ ಬೆಳವಣಿಗೆಗೆ ತಡೆಯಾಗಿ ಪರಿಣಮಿಸಿತ್ತು. ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕಗಳಲ್ಲದೆ, ಮದ್ರಾಸು ಪ್ರಾಂತ್ಯದಲ್ಲಿ ಹಲವಾರು ಪ್ರದೇಶಗಳು ಸೇರಿಕೊಂಡಿದ್ದವು. ಹೀಗಾಗಿ ಹಳೇ ಮೈಸೂರಿನಲ್ಲಿ ಮಾತ್ರ ಮೂಕಿ ಚಿತ್ರಗಳ ಚಟುವಟಿಕೆ ಹೆಚ್ಚಾಗಿತ್ತು. ಕನ್ನಡಿಗರಿಗೆ ಸೀಮೆ ಗುರುತಿಸುವ, ಕನ್ನಡ ಪ್ರೇಕ್ಷಕರನ್ನು ಹುಡುಕುವ ತೊಂದರೆ ವಾಕ್ಚಿತ್ರ ಆರಂಭಕ್ಕೆ ಮುನ್ನವೇ ಆರಂಭವಾಗಿತ್ತು. ಅಂತದೊಂದು `ಒಳಜ್ವರ'80 ವರ್ಷಗಳಿಂದ ಕನ್ನಡ ಚಿತ್ರರಂಗವನ್ನು ಕಾಡುತ್ತಿದೆ. ರಾಯಚೂರು, ಬಳ್ಳಾರಿ, ಕೋಲಾರದಲ್ಲಿ ತೆಲುಗು ಚಿತ್ರಗಳ ಪ್ರಾಬಲ್ಯ, ಹುಬ್ಬಳ್ಳಿ, ಮಂಗಳೂರುಗಳಲ್ಲಿ ಹಿಂದಿ ಚಿತ್ರಗಳ ಆಕರ್ಷಣೆ ಇಂದಿಗೂ ಉಳಿದುಕೊಂಡಿದೆ. ಕನ್ನಡದ ಮಾರುಕಟ್ಟೆ ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಲು ಈ ಎಲ್ಲ ಕಾರಣಗಳಿವೆ. ಮದ್ರಾಸಿಗಾಗಲಿ, ಹೈದರಾಬಾದಿಗಾಗಲೀ, ಮುಂಬೈಗಾಗಲಿ ಇಂತಹ ಆಂತರಿಕ ಸಮಸ್ಯೆಗಳು ಇರಲಿಲ್ಲ. ಇದರಿಂದಾಗಿ ಅಲ್ಲಿ ಆರಂಭದಿಂದಲೇ ಸಿನಿಮಾ ಒಂದು ದೊಡ್ಡ ಉದ್ಯಮವಾಗಿ ರೂಪುಗೊಳ್ಳಲಾರಂಭಿಸಿತು. ಕನ್ನಡ ಚಿತ್ರ ತಯಾರಿಸಬೇಕೆಂದರೆ ಮದ್ರಾಸನ್ನೇ ಆಶ್ರಯಿಸಬೇಕು, ಮುಂಬೈಯನ್ನೇ ಆಶ್ರಯಿಸಬೇಕು ಎನ್ನುವ ಅನಿವಾರ್ಯತೆ ಸೃಷ್ಟಿಯಾದದ್ದೇ ಹೀಗೆ. ಮೊದಲ ವಾಕ್ಚಿತ್ರ `ಸತಿ ಸುಲೋಚನ' ಸಂಪೂರ್ಣವಾಗಿ ಮಹಾರಾಷ್ಟ್ರದ ಛತ್ರಪತಿ ಸಿನಿಟೋನ್ ಸ್ಟುಡಿಯೊದಲ್ಲಿ ತಯಾರಾಗಿದೆ. ಈ ಚಿತ್ರದಲ್ಲಿ ಯುದ್ಧದ ಸನ್ನಿವೇಶಗಳಿದ್ದುದರಿಂದ ಹಾಗೂ ಈಗಾಗಲೇ ಆ ರೀತಿಯ ಚಲನ ಚಿತ್ರಗಳಿಗೆ ಆ ಸ್ಟುಡಿಯೊ ಹೆಸರಾಗಿದ್ದುದರಿಂದ ಸಹಜವಾಗಿಯೇ ಚಿತ್ರದ ನಿರ್ದೇಶಕ ವೈ. ವಿ. ರಾವ್ ಚಿತ್ರೀಕರಣಕ್ಕೆ ಛತ್ರಪತಿ ಸಿನಿಟೋನ್ ಸ್ಟುಡಿಯೊವನ್ನೇ ಆಯ್ಕೆ ಮಾಡಿಕೊಂಡರು. ಮುಂಬೈ, ಕಲ್ಕತ್ತಗಳ ಸ್ಟುಡಿಯೊಗಳಿಗಿಂತ ಕೊಲ್ಲಾಪುರದ ಸ್ಟುಡಿಯೊ ಬಾಡಿಗೆ ಕಡಿಮೆ ಇದ್ದುದೂ ಒಂದು ಕಾರಣ. ಕೊಲ್ಲಾಪುರ, ಮದ್ರಾಸುಗಳನ್ನು ಕನ್ನಡ ಚಿತ್ರರಂಗದವರು ಆಶ್ರಯಿಸುವ ಅನಿವಾರ್ಯತೆ ವಿರುದ್ಧ ಅಸಮಾಧಾನವಿತ್ತು. ಮೈಸೂರನ್ನು ಕನ್ನಡ ಚಿತ್ರರಂಗದ ಕೇಂದ್ರವನ್ನಾಗಿಸಬೇಕೆಂದು ನಿರ್ಮಾಪಕ ಶಂಕರ್‌ಸಿಂಗ್ ಆಗಲೇ ಹೋರಾಟ ಆರಂಭಿಸಿದ್ದರು. ಕೊಯಮತ್ತೂರು ಬಳಿ ಇರುವ ಪಕ್ಷಿರಾಜಾ ಸ್ಟುಡಿಯೊ ಇತರ ಸ್ಟುಡಿಯೊಗಳಿಗಿಂತ ಕನ್ನಡಿಗರಿಗೆ ಅನುಕೂಲ ಎನ್ನುವುದು ಶಂಕರ್‌ಸಿಂಗ್ ಅವರ ವಾದವಾಗಿತ್ತು. ಈಗಲೂ ಮೈಸೂರಿನಲ್ಲೇ ಚಿತ್ರನಗರಿಯನ್ನು ಸ್ಥಾಪಿಸಬೇಕೆಂಬ ವಾದವಿದೆ. ಇಡಿಕಿರಿದ ಜನಸಂಖ್ಯೆಯಿಂದ ಸ್ಫೋಟಗೊಳ್ಳುತ್ತಿರುವ ಬೆಂಗಳೂರಿಗಿಂತ ಪ್ರಶಾಂತ ಮೈಸೂರು ಚಿತ್ರರಂಗದ ಕೇಂದ್ರಸ್ಥಾನವಾಗಲು ಸೂಕ್ತವಾಗಿದೆ.

ಮೊದಲ ವಾಕ್ಚಿತ್ರ ದಿನವನ್ನು ಕನ್ನಡ ಚಲನಚಿತ್ರ ದಿನ ಎಂದು ಆಚರಿಸುವುದು ಅರ್ಥಪೂರ್ಣ. ಜೊತೆಗೇ ಕನ್ನಡ ಚಿತ್ರರಂಗ ಮೊದಲ ದಿನದಿಂದ ಇಂದಿನವರೆಗೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳತ್ತಲೂ ಚರ್ಚೆ ಕೇಂದ್ರೀಕೃತವಾಗಬೇಕು. ಈಗಲೂ ನಾವು ಹೊಸ ತಂತ್ರಜ್ಞಾನಕ್ಕಾಗಿ ಚೆನ್ನೈನತ್ತ, ಮುಂಬೈನತ್ತ ನೋಡುತ್ತಿದ್ದೇವೆ. ಕತೆಗಳನ್ನು ಅಲ್ಲಿಂದಲೇ ಪಡೆದು ರೀಮೇಕ್ ಸಂಸ್ಕೃತಿ ಬೆಳೆಸುತ್ತಿದ್ದೇವೆ. ದಕ್ಷಿಣ ಭಾರತದ ಚಿತ್ರರಂಗ ಎಂದರೆ ಚೆನ್ನೈ ಎನ್ನುವ ಭಾವನೆಯನ್ನು ದೂರ ಮಾಡುವ ಯಾವುದೇ ಶಕ್ತಿ ಕನ್ನಡ ಚಿತ್ರರಂಗದಿಂದ ಹೊರಹೊಮ್ಮುತ್ತಿಲ್ಲ ಏಕೆ ಎನ್ನುವುದಕ್ಕೆ ಉತ್ತರ ಹುಡುಕುವ ಕೆಲಸವೂ `ಚಲನಚಿತ್ರ ದಿನ'ದಿಂದ ಆರಂಭವಾಗಲಿ.

`ಭಕ್ತ ಧ್ರುವ' 1933ರಲ್ಲಿ ತಯಾರಿಕೆ ಆರಂಭಿಸಿ ಮೊದಲು ಸೆನ್ಸಾರ್ ಆಗಿದ್ದರೂ, ಬಿಡುಗಡೆಯಾದದ್ದು 1934ರ ಏಪ್ರಿಲ್‌ನಲ್ಲಿ. ಇದಕ್ಕೆ ಮೊದಲೇ ಸೌತ್ ಇಂಡಿಯಾ ಮೂವಿಟೋನ್ ಲಾಂಛನದಲ್ಲಿ ತಯಾರಾದ `ಸತಿ ಸುಲೋಚನ' 3-3-1934ರಂದು ತೆರೆಕಂಡಿತು. ಆದ್ದರಿಂದಲೇ `ಸತಿ ಸುಲೋಚನ' ಕನ್ನಡ ಪ್ರಥಮ ವಾಕ್ಚಿತ್ರ ಎಂಬ ದಾಖಲೆಯನ್ನು ಉಳಿಸಿಕೊಂಡಿತು. ಆದರೆ ಚಲನ ಚಿತ್ರರಂಗದ ಇತಿಹಾಸದಲ್ಲಿ ಈ ಎರಡೂ ಚಿತ್ರಗಳೂ ಮಹತ್ವ ಪಡೆಯುತ್ತವೆ. ಕನ್ನಡದ ವಾಕ್ಚಿತ್ರಕ್ಕೆ ನಾಂದಿ ಹಾಡಿದ 1934ನೇ ಇಸವಿಯಲ್ಲಿ ಬಿಡುಗಡೆಯಾದ ಈ ಎರಡೂ ಚಿತ್ರಗಳು ಕನ್ನಡ ಚಿತ್ರ ಇತಿಹಾಸಕ್ಕೆ ಹಲವಾರು ವರ್ಣಮಯ ಗರಿಗಳನ್ನು ಸೇರಿಸಿವೆ. `ಸತಿ ಸುಲೋಚನ'ದ ಬಿಡುಗಡೆಯೊಂದಿಗೆ ಕನ್ನಡ ಚಿತ್ರರಂಗ ಅಸ್ತಿತ್ವಕ್ಕೆ ಬಂದಿತು.

ಕನ್ನಡದ ಪ್ರಥಮ ವಾಕ್ಚಿತ್ರ `ಸತಿ ಸುಲೋಚನ' ತಯಾರಿಸಲು ಮುಂದಾದವರು ಉತ್ತರ ಭಾರತದ ವ್ಯಾಪಾರಸ್ಥ ಚಮನ್‌ಲಾಲ್ ಡೊಂಗಾಜಿ. ಇಂದೂ ` ಸತಿ ಸುಲೋಚನಾ' ಹಾಕಿಕೊಟ್ಟ ಸೂತ್ರವೇ ಭಾರತೀಯ ಚಿತ್ರರಂಗಕ್ಕೆ ತಳಹದಿಯಾಗಿದೆ. ಮೊದಲ ವಾಕ್ಚಿತ್ರದ ನಾಯಕಿ ಸುಲೋಚನ ಪಡಬಾರದ ಪಾಡು ಪಡುತ್ತಾ ತೆರೆಯ ಮೇಲೆ ಕಣ್ಣೀರು ಸುರಿಸುತ್ತಾ ಸಹಗಮನ ಮಾಡುತ್ತಾಳೆ. ಆ ಪಾತ್ರದ ಜೊತೆ ಜನರೂ ಕಣ್ಣೀರು ಸುರಿಸುತ್ತಿದ್ದರಂತೆ. ಮುಂದೆ ಕನ್ನಡ ಚಿತ್ರರಂಗದಲ್ಲಿ ಕಣ್ಣೀರು ಗಲ್ಲಾಪೆಟ್ಟಿಗೆ ಸೂತ್ರವಾಗಿದ್ದು ಹೀಗೆ. ಅಲ್ಲದೆ ಒಂದು ಚಿತ್ರದ ನಾಡಿಮಿಡಿತವನ್ನು ಕಂಡುಕೊಂಡದ್ದೂ ಅಲ್ಲೇ.

“ಸತಿ ಸುಲೋಚನ”ದಲ್ಲಿ ಇಂದ್ರಜಿತ್ ಪಾತ್ರ ವಹಿಸಿದ್ದ ಎಂ.ವಿ. ಸುಬ್ಬಯ್ಯನಾಯಿಡು ಕನ್ನಡ ವಾಕ್ಚಿತ್ರದ ಮೊದಲ ಹೀರೋ. ರಾವಣನ ಪಾತ್ರದಲ್ಲಿ ಆರ್. ನಾಗೇಂದ್ರರಾವ್, ಸುಲೋಚನೆಯಾಗಿ ತ್ರಿಪುರಾಂಬ, ಮಂಡೋದರಿಯಾಗಿ ಮೂಕಿ ಚಿತ್ರಗಳ ಸ್ಟಾರ್ ಆಗಿದ್ದ ಲಕ್ಷ್ಮೀಬಾಯಿ, ನಾರದನಾಗಿ ಸಿ.ಟಿ. ಶೇಷಾಚಲಂ, ರಾಮನಾಗಿ ಸ್ವತಃ ನಿರ್ದೇಶಕ ವೈ.ವಿ. ರಾವ್, ಡಿ.ಎನ್. ಮೂರ್ತಿರಾವ್, ಕಮಲಾಬಾಯಿ ಮೊದಲಾದವರು ತಾರಾಗಣದಲ್ಲಿದ್ದರು. 

ಅಭಿನಯಿಸುವುದರ ಜತೆಗೆ ಆರ್. ನಾಗೇಂದ್ರರಾವ್ ಅವರು ಮೊದಲ ವಾಕ್ಚಿತ್ರದ ಸಂಗೀತ ನಿರ್ದೇಶಕರೂ ಆಗಿದ್ದರು. ಮುಂಬೈನಲ್ಲಿ ಹಲವಾರು ಮೂಕಿ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಹೆಸರಾಂತ ಹಾರ್ಮೋನಿಯಂ ವಾದಕ ಎಚ್. ಆರ್. ಪದ್ಮನಾಭಶಾಸ್ತ್ರಿಗಳು ಸಹಾಯಕ ಸಂಗೀತ ನಿರ್ದೇಶಕರಾಗಿದ್ದರು. ಹಿನ್ನೆಲೆ ಗಾಯನ ಪದ್ಧತಿಯೂ ಸತಿ ಸುಲೋಚನದಿಂದಲೇ ಆರಂಭ. ಲಕ್ಷ್ಮೀಬಾಯಿ, ತ್ರಿಪುರಾಂಬ, ಸುಬ್ಬಯ್ಯನಾಯ್ಡು, ನಾಗೇಂದ್ರರಾವ್ ಎಲ್ಲರಿಗೂ ಹಾಡುವುದು ರಂಗಭೂಮಿಯಿಂದಲೇ ಅನುಭವಕ್ಕೆ ಬಂದಿದ್ದರಿಂದ ಎಲ್ಲರೂ ಈ ಚಿತ್ರದ್ಲ್ಲಲಿ ಹಿನ್ನೆಲೆಗಾಯಕರಾದರು. ಇದರಲ್ಲಿ ಒಟ್ಟು 16 ಹಾಡುಗಳಿದ್ದವು. ಕನ್ನಡ ಚಿತ್ರರಂಗದ ಮೊದಲ ಹಿನ್ನೆಲೆಗಾಯಕಿ ಲಕ್ಷ್ಮೀಬಾಯಿ. ಅವರು ಹಾಡಿದ ಮೊದಲ ಹಾಡು “ಭಲೇ ಭಲೇ ಪಾರ್ವತಿ ಬಲು ಚತುರೆ “ಅಂದು ಇದು ಅತ್ಯಂತ ಜನಪ್ರಿಯ ಹಾಡು. ಇದು ಮೊಟ್ಟ ಮೊದಲ ಜನಪ್ರಿಯ ಚಿತ್ರಗೀತೆ. ಹೀಗಾಗಿ ಚಲನಚಿತ್ರ ಅಕಾಡೆಮಿ ಇಂದು `ಸಂಗೀತ ಹಬ್ಬ' ಆಚರಿಸುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT