ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಮಾದರಿ ಹಾಕುವುದು ಕಷ್ಟವಾದರೂ ಅಸಾಧ್ಯವೇನು ಅಲ್ಲ

Last Updated 27 ಜುಲೈ 2013, 19:59 IST
ಅಕ್ಷರ ಗಾತ್ರ

1978-79ನೇ ಸಾಲು ಇರಬೇಕು. ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಸರ್ಕಾರಿ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಸಂದರ್ಶನ ಇತ್ತು. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಂದರ್ಶನ ನಡೆಸುತ್ತಿತ್ತು. ನನಗಿಂತ ಮುಂಚೆ ಸಂದರ್ಶನಕ್ಕೆ ಹೋಗಿ ಬಂದ ಒಬ್ಬ ಅಭ್ಯರ್ಥಿ ಮುಖದಲ್ಲಿ ಒಂದಿಷ್ಟೂ ಕಳೆಯಿರಲಿಲ್ಲ. `ಬೇಕಾಬಿಟ್ಟಿ ಪ್ರಶ್ನೆ ಕೇಳಿದರು. ಸಂದರ್ಶನ ಮಾಡುವವರ ಕೈಯಲ್ಲಿ ಪೆನ್ನು ಇರಲಿಲ್ಲ, ಪೆನ್ಸಿಲ್ ಇತ್ತು. ಎಲ್ಲಾ ಮೊದಲೇ ತೀರ್ಮಾನ ಆಗಿಹೋಗಿದೆ. ಕಾಟಾಚಾರಕ್ಕೆ ಸಂದರ್ಶನ ಮಾಡುತ್ತಿದ್ದಾರೆ' ಎಂದು ಆತ ಹೇಳಿದ. ಸಂದರ್ಶನಕ್ಕೆ ಹಾಜರಾಗುವುದು, ಅವರು ಕೇಳಿದ ಬೇಕಾಬಿಟ್ಟಿ ಪ್ರಶ್ನೆಗೆ ಉತ್ತರ ಕೊಡುವುದೆಲ್ಲ ನನಗೆ ವ್ಯರ್ಥ ಎನಿಸಿತು.

`ನಾನು ಸಂದರ್ಶನಕ್ಕೆ ಹಾಜರಾಗುವುದಿಲ್ಲ' ಎಂದು ಅಲ್ಲಿ ಸೇರಿದ್ದ ಗೆಳೆಯರಿಗೆ ಹೇಳಿ ಊರಿಗೆ ಹೊರಟು ಹೋದೆ. ನಂತರ ನಾನು ಯಾವುದೇ ಸರ್ಕಾರಿ ನೌಕರಿಗೆ ಅರ್ಜಿ ಹಾಕಲಿಲ್ಲ. ಸಂದರ್ಶನಕ್ಕೆ ಹಾಜರಾಗಲಿಲ್ಲ. ತೀರಾ ಈಚೆಗೆ ನಡೆದ ಕೆಪಿಎಸ್‌ಸಿಯ ಒಂದು ಸಂದರ್ಶನಕ್ಕೆ ವಿಷಯ ಪರಿಣತರಾಗಿ ಹೋಗಿದ್ದ ನನ್ನ ಸ್ನೇಹಿತನ ಹೆಂಡತಿಯ ಕೈಗೆ ಪೆನ್ಸಿಲ್ ಅನ್ನೇ ಕೊಡಲಾಗಿತ್ತು. ಇನ್ನೊಬ್ಬ ಸ್ನೇಹಿತ ಅಧಿಕಾರಿ ಕೈಗೆ ಅದನ್ನೂ ಕೊಟ್ಟಿರಲಿಲ್ಲ! ಪೆನ್ಸಿಲ್‌ನಿಂದ ಹಾಕಿದ ಅಂಕಗಳನ್ನು ಬದಲಿಸಬಹುದು, ಪೆನ್ನಿನಿಂದ ಬರೆದುದನ್ನು ಅಳಿಸುವುದು ಸುಲಭವಲ್ಲ. ನಂತರದ ವರ್ಷಗಳಲ್ಲಿ ನಾನು ಇಬ್ಬರು ಕೆಪಿಎಸ್‌ಸಿ ಅಧ್ಯಕ್ಷರನ್ನು ಅವರ ಕೊಠಡಿಯಲ್ಲಿಯೇ ಕಂಡಿದ್ದೆ. ಅವರ ಮೇಜಿನ ಮೇಲೆ ಪೆನ್ಸಿಲ್ ಇತ್ತೇ ಹೊರತು ಪೆನ್ನು ಇರಲಿಲ್ಲ!

ನಾನು ಸಂದರ್ಶನಕ್ಕೆ ಹಾಜರಾದುದು ನಿವೃತ್ತ ಪೊಲೀಸ್ ಅಧಿಕಾರಿ ಎಂ.ಎಲ್.ಚಂದ್ರಶೇಖರ್ ಅವರು ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದಾಗಿನ ಕಥೆ. ಅವರು ಅತ್ಯಂತ ದಕ್ಷ, ಪ್ರಾಮಾಣಿಕ ಮತ್ತು ಕಟ್ಟುನಿಟ್ಟಿನ ಅಧಿಕಾರಿ ಆಗಿದ್ದವರು. ಅವರ ಆ ಎಲ್ಲ ಗುಣಗಳನ್ನು ನೋಡಿಯೇ ಅವರನ್ನು ಆಯೋಗದ ಅಧ್ಯಕ್ಷರಾಗಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ನೇಮಕ ಮಾಡಿದ್ದರು. ಆಗಿನ ಅಧ್ಯಕ್ಷರನ್ನು, ಸದಸ್ಯರನ್ನು ನೇಮಕ ಮಾಡುವಾಗ ಈಗಿನ ಹಾಗೆ ಜಾತಿಯನ್ನೂ, ಸಂಬಂಧವನ್ನೂ ನೋಡುತ್ತಿರಲಿಲ್ಲ. ಅವರನ್ನು ಹೋಗಿ ಭೇಟಿ ಮಾಡುವುದು ಅಷ್ಟು ಸುಲಭವೂ ಆಗಿರಲಿಲ್ಲ. ಆಯೋಗದ ಕಚೇರಿಗೆ ಹೋಗಬೇಕಾದರೆ ನ್ಯಾಯಾಲಯಕ್ಕೆ ಹೋಗುವಾಗ ಇರುವ ಭಯ ಭೀತಿಯೇ ಇರುತ್ತಿತ್ತು.

ಆದರೆ, ಕೊಳೆಯುವಿಕೆ ಶುರುವಾಗಿತ್ತು ಎಂದು ಅನಿಸುತ್ತದೆ. ಏಕೆಂದರೆ 1975-79ರ ಅವಧಿಯ ತಡವಾಗಿ ಮಂಡಿಸಿದ ಕೆಪಿಎಸ್‌ಸಿ ವರದಿ ಕುರಿತು 1983ರಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆದಿತ್ತು! ವಿಧಾನಪರಿಷತ್ತಿನಲ್ಲಿ ನಡೆದ ಚರ್ಚೆಯಲ್ಲಿ ಜನತಾ ಪಕ್ಷದ ಜಿ.ಪುಟ್ಟಸ್ವಾಮಿಗೌಡರು ಮತ್ತು ಕಾಂಗ್ರೆಸ್ ಪಕ್ಷದ ಕೆ.ಎನ್. ನಾಗೇಗೌಡರು ಭಾಗವಹಿಸಿ ಆಯೋಗದ ಕಾರ್ಯವೈಖರಿ ಕುರಿತು ಒಳ್ಳೆಯ ಮಾತುಗಳನ್ನೇನೂ ಆಡಿರಲಿಲ್ಲ. ಪುಟ್ಟಸ್ವಾಮಿಗೌಡರು ಆಯೋಗವನ್ನು `ಭ್ರಷ್ಟಾಚಾರದ ಪ್ರತಿರೂಪ' ಎಂದು ಕರೆದರೆ ನಾಗೇಗೌಡರು, `ಇಂಥ ಭ್ರಷ್ಟ ನೇಮಕಾತಿ ಆಯೋಗವನ್ನು ಇಟ್ಟುಕೊಳ್ಳುವುದಕ್ಕಿಂತ ಅದನ್ನು ಮುಚ್ಚುವುದೇ ಒಳ್ಳೆಯದು' ಎಂದಿದ್ದರು. ಈಗ ಪುಟ್ಟಸ್ವಾಮಿಗೌಡರೂ ಬದುಕಿಲ್ಲ. ನಾಗೇಗೌಡರೂ ಜೀವಂತ ಇಲ್ಲ. ಇಬ್ಬರೂ ಇದ್ದಿದ್ದರೆ ಆಯೋಗ ಈಗ ತಲುಪಿರುವ ಸ್ಥಿತಿಯನ್ನು ನೋಡಿ ಏನು ಅಂದುಕೊಳ್ಳುತ್ತಿದ್ದರೋ ಗೊತ್ತಿಲ್ಲ. 1983ರ ನಂತರ ಆಯೋಗದ ಕಾರ್ಯವೈಖರಿ ಕುರಿತು ಸದನದಲ್ಲಿ ಚರ್ಚೆ ನಡೆದುದು ನನಗೆ ನೆನಪು ಇಲ್ಲ.

ಏಕೆ ಹೀಗೆ ಆಯಿತು? ಪ್ರಶ್ನೆ ಬಹಳ ಕಠಿಣವಾದುದೇನೂ ಅಲ್ಲ. ಅದಕ್ಕೆ ಉತ್ತರವೂ ಕಠಿಣವಾಗಿಲ್ಲ. ಹೊರಗಿನ ರಾಜಕೀಯ ವ್ಯವಸ್ಥೆಯಲ್ಲಿ ಆಗಿರುವ ಪತನವೇ ಆಯೋಗದಲ್ಲಿಯೂ ಆಯಿತು. ಮುಖ್ಯಮಂತ್ರಿಗೆ ಅಥವಾ ಆಡಳಿತ ಪಕ್ಷಕ್ಕೆ ಆಯೋಗವು ಎಷ್ಟು ಮುಖ್ಯ ಸಂಸ್ಥೆ ಎಂದು ತಿಳಿಯುತ್ತ ಹೋಯಿತು. ತಮ್ಮವರು ಒಬ್ಬರು ಅಲ್ಲಿ ಇರಲಿ ಎಂದು ಅನಿಸತೊಡಗಿತು. ಸಾಧ್ಯವಾದಷ್ಟು ತಮ್ಮ ಜಾತಿಯವರೇ ಇರಲಿ ಎಂದೂ ಅನಿಸಿತು. ಅದಕ್ಕೆ ಕಾರಣ ಸ್ಪಷ್ಟವಾಗಿತ್ತು. ತಮ್ಮವರು ಅಲ್ಲಿ ಇದ್ದರೆ ತಮಗೆ ಬೇಕಾದವರನ್ನು ನೇಮಕ ಮಾಡಬಹುದು ಎಂದು ಸರ್ಕಾರದಲ್ಲಿ ಇದ್ದವರಿಗೆ ಗೊತ್ತಾಗತೊಡಗಿತು. ಸರಿ, ಪಕ್ಷದ ಸದಸ್ಯರನ್ನು, ಕಾರ್ಯಕರ್ತರನ್ನು, ಇನ್ನೂ ಸೇವಾವಧಿ ಇರುವ ಅಧಿಕಾರಿಗಳನ್ನು, ತಮ್ಮ ಸೇವೆ ಮಾಡಿದ ಅಧಿಕಾರಿಗಳನ್ನು ಎಲ್ಲ ಪಕ್ಷಗಳು ನೇಮಕ ಮಾಡಿದುವು. ಕೆಲವರು ವರ್ತಕರನ್ನು ನೇಮಿಸಿದರು! ಹೀಗೆ ಸದಸ್ಯರಾಗಿ, ಅಧ್ಯಕ್ಷರಾಗಿ ನೇಮಕ ಆದವರು ಸುಲಭವಾಗಿ ಸರ್ಕಾರದ ಮರ್ಜಿಗೆ ಬೀಳತೊಡಗಿದರು.

ಮುಖ್ಯಮಂತ್ರಿ, ಮಂತ್ರಿ, ಆಡಳಿತ ಪಕ್ಷ ಮತ್ತು ಸರ್ಕಾರದಲ್ಲಿ ಪ್ರಭಾವಿ ಆಗಿದ್ದವರು ಹೇಳಿದಂತೆ ನೇಮಕ ಆಗತೊಡಗಿತು. ಶಿಫಾರಸಿನ ಜತೆಗೆ ಕಾಂಚಾಣವೂ ಹರಿದಾಡಿತು. ಯಾರು ಯಾರನ್ನೋ ತಲುಪಿತು. ಮೊದಲು ಕಾರ್ಯಾಂಗ ಒಂದು ಸ್ವತಂತ್ರ ಸಂಸ್ಥೆ ಆಗಿತ್ತು. ಮುಖ್ಯಮಂತ್ರಿಗೆ, ಮಂತ್ರಿಗಳಿಗೆ, `ಇದು ಸರಿಯಾದ ನಿರ್ಧಾರವಲ್ಲ' ಎಂದು ಹೇಳುವಂಥ ಧೈರ್ಯ ಅಧಿಕಾರಿಗಳಿಗೆ ಇರುತ್ತಿತ್ತು. ಆದರೆ, ಒಂದು ಹಂತದಲ್ಲಿ ಇಂಥ ಸ್ವತಂತ್ರ ಅಧಿಕಾರಿಗಳಿಗಿಂತ ಎಲ್ಲ ಕಡೆ ತಮ್ಮ ಮಾತು ಕೇಳಿಕೊಂಡು ಬಿದ್ದಿರುವ, ತಮ್ಮದೇ ಜಾತಿಯ ಅಧಿಕಾರಿಗಳು ಇದ್ದರೆ ಆಡಳಿತ ಮಾಡುವುದು ಸುಲಭ ಎಂದು ರಾಜಕಾರಣಿಗಳಿಗೆ ಅನಿಸಿತು. ಆ ವೇಳೆಗೆ ರಾಜಕೀಯದ ವ್ಯಾಖ್ಯೆಯೂ ಬದಲಾಗಿತ್ತು. ಈಚಿನ ವರ್ಷಗಳಲ್ಲಿ ಆಯ್ಕೆಯಾದ ಅಧಿಕಾರಿಗಳ ಜಾತಿ ನೋಡಿದರೆ ಮುಂದಿನ ವರ್ಷಗಳಲ್ಲಿ ಯಾರೇ ಮುಖ್ಯಮಂತ್ರಿ ಆಗಿದ್ದರೂ ಕರ್ನಾಟಕದ ಆಡಳಿತ ಯಾರ ಕೈಯಲ್ಲಿ ಇರುತ್ತದೆ ಎಂದು ಊಹಿಸುವುದು ಕಷ್ಟವೇನೂ ಅಲ್ಲ.

ಇದನ್ನು ಸರಿಪಡಿಸುವುದು ಸುಲಭ ಇತ್ತು. ದೇಶದಲ್ಲಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಹೇಗೆ ಕೆಲಸ ಮಾಡುತ್ತದೆ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ, ಒಳ್ಳೆಯ ಮಾದರಿಗಳನ್ನು ಹಾಕುವುದು ಯಾರಿಗೂ ಬೇಕಾಗಿರಲಿಲ್ಲ. ಯಾವ ಪಕ್ಷಕ್ಕೂ ಬೇಕಾಗಿರಲಿಲ್ಲ. ಕಾಂಗ್ರೆಸ್, ಜನತಾದಳ ಮತ್ತು ಬಿಜೆಪಿಯ ಮೂರೂ ಸರ್ಕಾರಗಳ ಅವಧಿಯಲ್ಲಿ ಆಯೋಗದ ಕಾರ್ಯವೈಖರಿ ಒಂದೇ ತೆರನಾಗಿದೆ. ಈ ಮೂರೂ ಸರ್ಕಾರಗಳ ಅವಧಿಯಲ್ಲಿ ಸದಸ್ಯರ ನೇಮಕವೂ ಒಂದೇ ತೆರನಾಗಿದೆ. ಯಾರಿಗೂ ಆಯೋಗವನ್ನು ಸರಿ ಮಾಡಬೇಕು ಎಂದು ಅನಿಸಲಿಲ್ಲ. ಅಂದರೆ ಈಗ ಆಯೋಗಕ್ಕೆ ಆಗಿರುವ ಗತಿಯಲ್ಲಿ ಎಲ್ಲರ ಸಮಪಾಲು ಇದೆ ಎಂದೇ ಅರ್ಥ.

ಯಾವುದಾದರೂ ಒಂದು ಸರ್ಕಾರಕ್ಕೆ ಇದನ್ನು ಸರಿಮಾಡಬೇಕು ಎಂದು ಅನಿಸಿದ್ದರೆ ಮೊದಲನೆಯ ಹೆಜ್ಜೆಯಾಗಿ ಸದಸ್ಯರ ನೇಮಕದ ವಿಧಾನವನ್ನು ಬದಲಿಸಬಹುದಿತ್ತು. ಆಯೋಗದ ಸದಸ್ಯರಿಗೆ ಹೈಕೋರ್ಟ್ ನ್ಯಾಯಮೂರ್ತಿಯ ಸ್ಥಾನಮಾನ ಇದೆ. ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕದ ವಿಧಾನವನ್ನೇ ಇಲ್ಲಿಯೂ ಬಳಸಿದ್ದರೆ ಸಾಕಿತ್ತು. ಬರೀ ರಾಜಕೀಯ ಮತ್ತು ಆಡಳಿತ ಕ್ಷೇತ್ರದಿಂದ ಸದಸ್ಯರ ನೇಮಕ ಮಾಡುವ ಬದಲು ಇನ್ನಿತರ ಕ್ಷೇತ್ರಗಳ ಪ್ರತಿನಿಧಿಗಳನ್ನೂ ನೇಮಿಸಬಹುದಿತ್ತು.

 ಎರಡನೇ ಸುಧಾರಣೆಯ ಹೆಜ್ಜೆಯಾಗಿ ಯುಪಿಎಸ್‌ಸಿಯಲ್ಲಿ ಇರುವ ಹಾಗೆ ಲಿಖಿತ ಪರೀಕ್ಷೆಯ ಅಂಕಗಳನ್ನು ರಹಸ್ಯವಾಗಿ ಇಡಲು ಕ್ರಮ ತೆಗೆದುಕೊಳ್ಳಬೇಕಿತ್ತು. ಕೆಳಹಂತದ ನ್ಯಾಯಾಧೀಶರ ನೇಮಕದಲ್ಲಿಯೂ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ. ಆಗ ವ್ಯವಹಾರ ಕುದುರಿಸಲು ಅವಕಾಶವೇ ಇರುವುದಿಲ್ಲ. ಮೂರನೇ ಹೆಜ್ಜೆಯಾಗಿ ಮೌಖಿಕ ಪರೀಕ್ಷೆಯ ಅಂಕಗಳನ್ನು 200ರ ಬದಲು 50ಕ್ಕೆ ಇಳಿಸಬೇಕಿತ್ತು. ಸಂದರ್ಶನಕ್ಕೆ ಹಾಜರಾದರೂ ಸಾಕು ಗರಿಷ್ಠ 50 ಅಂಕಗಳಲ್ಲಿ ಇಂತಿಷ್ಟು ಅಂಕಗಳು ಅಭ್ಯರ್ಥಿಗೆ ಸಿಗುತ್ತವೆ ಎಂದು ಪ್ರಕಟ ಮಾಡಬೇಕಿತ್ತು. ಹೀಗೆಲ್ಲ ಮಾಡಿದ್ದರೆ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದವರು ಜೈಲಿಗೆ ಹೋಗಬೇಕಿರಲಿಲ್ಲ ಮತ್ತು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಕೊಳ್ಳಬೇಕಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ರಾಜ್ಯದ ಆಡಳಿತ ಹಳಿ ತಪ್ಪುತ್ತಿರಲಿಲ್ಲ, ಜಾತೀಯತೆ ತಾಂಡವ ಆಡುತ್ತಿರಲಿಲ್ಲ, ಭ್ರಷ್ಟಾಚಾರ ಮೇರೆ ಮೀರುತ್ತಿರಲಿಲ್ಲ.

ಒಂದು ಭ್ರಷ್ಟ ವ್ಯವಸ್ಥೆ ಪ್ರಾಮಾಣಿಕ ಅಧಿಕಾರಿಗಳನ್ನು ಹುಟ್ಟು ಹಾಕುವುದು ಕಷ್ಟ. ಅರವತ್ತು ಎಪ್ಪತ್ತು ಲಕ್ಷ ರೂಪಾಯಿ ಕೊಟ್ಟು ಸಹಾಯಕ ಕಮಿಷನರ್, ಡಿವೈಎಸ್‌ಪಿ ಅಥವಾ ಇನ್ನಾವುದೋ ಉನ್ನತ ಹುದ್ದೆಯ ಒಬ್ಬ ಅಧಿಕಾರಿ ಪ್ರಾಮಾಣಿಕನಾಗಿ ಉಳಿಯಬೇಕು ಎಂದು ಬಯಸುವುದು ಇನ್ನೂ ಕಷ್ಟ. ಆತ ತನ್ನನ್ನು ನೇಮಕ ಮಾಡಿದ ಸಂಸ್ಥೆಯ ಸದಸ್ಯರಿಗೆ ಲಂಚ ಕೊಡುವ ಮೂಲಕ ತಾನು ಅಪ್ರಾಮಾಣಿಕನಾಗಲು ಪರವಾನಗಿಯನ್ನೂ ಪಡೆದುಕೊಂಡಿರುತ್ತಾನೆ. ಉನ್ನತ ಅಧಿಕಾರಿಗಳೇ ಲಂಚ ತೆಗೆದುಕೊಳ್ಳುವಾಗ ಕೆಳಗಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕರಾಗಿ ಇರಬೇಕು ಎಂದು ಬಯಸುವುದು ಹಾಸ್ಯಾಸ್ಪದವಾಗುತ್ತದೆ. ಲಂಚ ಹೋಗುವುದು ಯಾವಾಗಲೂ ಕೆಳಗಿನಿಂದಲೇ! ಮೇಲಿನಿಂದ ಕೆಳಗೆ ಬರುವುದಿಲ್ಲ! ಮೊದಲು ಭ್ರಷ್ಟಾಚಾರ ತಪ್ಪು ಎಂದು ಅನಿಸುತ್ತಿತ್ತು. ಅದು ಒಂದು ವಾಸ್ತವ ಎಂದು ಒಪ್ಪಿಕೊಂಡು ದಶಕಗಳೇ ಆಗಿವೆ. ಈಗ ಜನರಿಗೆ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದೇ ರೂಢಿಯಾಗಿದೆ.

`ಕಾಂಚಾಣದಿಂದ ಕಾರ್ಯಸಿದ್ಧಿ' ಎಂದು ಅವರಿಗೆ ಗೊತ್ತಾಗಿದೆ! ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವಾಗ ಬರೀ ಸಕ್ರಮ ಕೆಲಸಗಳು ಮಾತ್ರವಲ್ಲ ಅಕ್ರಮ ಕೆಲಸಗಳನ್ನೂ ಮಾಡಿಸಿಕೊಳ್ಳುತ್ತೇವೆ. ಅಲ್ಲಿಗೆ ಇಡೀ ಆಡಳಿತ ವ್ಯವಸ್ಥೆ ಭ್ರಷ್ಟವಾಗುತ್ತದೆ, ಕುಸಿದು ಬೀಳುತ್ತದೆ. ಜನ ವಿರೋಧಿ ಆಗುತ್ತದೆ ಮತ್ತು ಅಲ್ಲಿ ಹಿಂಸೆ ಸೇರಿಕೊಳ್ಳುತ್ತದೆ. ಈಗ ಅದೇ ಆಗಿದೆ.

ಈಗ ಕೆಪಿಎಸ್‌ಸಿ ಮತ್ತೆ ಸುದ್ದಿಯಲ್ಲಿ ಇದೆ. ಮುಖ್ಯಮಂತ್ರಿಗಳು `ಬೇಡ' ಎಂಬ ಒತ್ತಡದ ನಡುವೆಯೂ ಆಯೋಗದ ಅಕ್ರಮಗಳನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದಾರೆ. ಹಿಂದಿನ ಒಂದು ಅವಧಿಯ ಹಗರಣಗಳು ಈಗಾಗಲೇ ಸಿಐಡಿ ತನಿಖೆಗೆ ಒಳಪಟ್ಟಿವೆ. ಆಗ ಏನೇನಾಗಿದೆ ಎಂಬುದೆಲ್ಲ ಈಗ ರಹಸ್ಯವಾಗಿ ಉಳಿದಿಲ್ಲ. ಈಗ ನಡೆದಿರುವುದೂ ಅದಕ್ಕಿಂತ ಭಿನ್ನವಾಗಿ ಇರಲು ಸಾಧ್ಯವಿಲ್ಲ. ನಾನೇನು ಸಿನಿಕನಲ್ಲ. ಆದರೆ, ಇದು ಒಂದು ತಾರ್ಕಿಕ ಅಂತ್ಯ ಕಾಣಬಹುದೇ? ಹಾಗೆಂದು ನನಗೆ ಅನಿಸುವುದಿಲ್ಲ. ಇದರಲ್ಲಿ ಬರೀ ಆಯೋಗದ ತಪ್ಪು ಇಲ್ಲ. ಆಯೋಗದ ಅಧ್ಯಕ್ಷರಿಂದ, ಸದಸ್ಯರಿಂದ ತಪ್ಪು ಮಾಡಿಸಿದವರ ತಪ್ಪೂ ಇದೆ. ತಮ್ಮನ್ನು ನೇಮಕ ಮಾಡಿದ `ಯಜಮಾನ'ರ ಕೋರಿಕೆಯನ್ನು ತಳ್ಳಿ ಹಾಕುವಂಥ ಧೈರ್ಯವನ್ನು ಸದಸ್ಯರು, ಅಧ್ಯಕ್ಷರು ತೋರಿಸಿಲ್ಲ.

ಆಯೋಗ ಮತ್ತು ರಾಜಕಾರಣಿಗಳ ನಡುವಿನ ಅಪವಿತ್ರ ಸಂಬಂಧವನ್ನು ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತ್ರ ಒಪ್ಪಿಕೊಂಡಿದ್ದಾರೆ. ಉಳಿದ ಯಾವ ನಾಯಕರೂ ಒಪ್ಪಿಕೊಂಡಿಲ್ಲ. ಈಚೆಗೆ ನಡೆದ 360ಕ್ಕಿಂತ ಹೆಚ್ಚು ಕೆಎಎಸ್ ಅಧಿಕಾರಿಗಳ ನೇಮಕದಲ್ಲಿ ಕೆಲವಕ್ಕಾದರೂ ಯಾವ ಯಾವ ರಾಜಕೀಯ ಮುಖಂಡರು ಶಿಫಾರಸು ಮಾಡಿದ್ದಾರೆ ಎಂಬ ದಾಖಲೆ ಆಯೋಗದ ಬಳಿ ಇದ್ದೇ ಇರಬೇಕು. ಆಯೋಗದ ಬಳಿ ಇರದೇ ಇದ್ದರೂ ಸದಸ್ಯರ ಖಾಸಗಿ ಡೈರಿಯಲ್ಲಿಯಂತೂ ಇದ್ದೇ ಇರುತ್ತದೆ. ಈಗ ಸರ್ಕಾರದ ಉನ್ನತ ಹುದ್ದೆಯಲ್ಲಿ ಇರುವವರು ಅಂಥ ಶಿಫಾರಸು ಮಾಡಿಲ್ಲವೇ? ಸಿಐಡಿ ಪೊಲೀಸರು ಎಲ್ಲಿಯವರೆಗೆ ಹೋಗಲು ಸಾಧ್ಯ? ಒಂದು ಹಂತದವರೆಗೆ ಮಾತ್ರ ಅಲ್ಲವೇ? ಹಾಗಾದರೆ ಮುಂದೆ ಏನಾಗುತ್ತದೆ? ಯಾವ ಸರ್ಕಾರವೂ, ಯಾವ ಪಕ್ಷವೂ ಆಯೋಗವನ್ನು ಶುದ್ಧೀಕರಿಸಬೇಕು ಎಂದು ಪ್ರಯತ್ನ ಮಾಡಿಲ್ಲವಾದ್ದರಿಂದ ಸತ್ಯ ಯಾರಿಗೂ ಬೇಕಾಗಿಲ್ಲ.

ಸಿ.ಐ.ಡಿ ತನಿಖಾ ವರದಿ ಬಂದ ನಂತರ ಏನಾಗುತ್ತದೆ ಎಂದು ಊಹಿಸುವುದು ಅಷ್ಟು ಕಷ್ಟ ಎಂದು ನನಗಂತೂ ಅನಿಸಿಲ್ಲ. ಆದರೆ, ಹಿಂದೆ ಆಗಿರುವ ತಪ್ಪನ್ನು ಸರಿಪಡಿಸುವುದು ಒಂದು ಹಂತದ ಶುದ್ಧೀಕರಣ. ಮುಂದೆ ಆಗುವ ತಪ್ಪನ್ನು ತಡೆಯುವುದು ಎರಡನೇ ಹಂತದ ಶುದ್ಧೀಕರಣ. ಅದು ದೊಡ್ಡದು ಮತ್ತು ಅದಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಇರಬೇಕು. ಅಂಥ ಇಚ್ಛಾಶಕ್ತಿಯಿದ್ದರೆ ಕೇಂದ್ರ ಲೋಕ ಸೇವಾ ಆಯೋಗದ ಮಾದರಿಯ ಒಂದು ನೇಮಕಾತಿ ಆಯೋಗವನ್ನು ಕರ್ನಾಟಕದಲ್ಲಿಯೂ ಅಸ್ತಿತ್ವಕ್ಕೆ ತರಬಹುದು. ಭ್ರಷ್ಟ ಮಾರ್ಗದಿಂದ ನೌಕರಿ ಹಿಡಿಯಬೇಕು ಎನ್ನುವ ಕೆಲವರನ್ನು ಬಿಟ್ಟು ಎಲ್ಲ ಜಾತಿಗಳ ಪ್ರಾಮಾಣಿಕ, ಅರ್ಹ ಅಭ್ಯರ್ಥಿಗಳಿಗೂ ಅಂಥ ಆಯೋಗವೇ ಬೇಕು. ಏಕೆಂದರೆ ವಾಮಮಾರ್ಗದಲ್ಲಿ ಹೋಗುವ, ನೌಕರಿ ಪಡೆಯುವ ಶಕ್ತಿ ಎಷ್ಟು ಜನರಿಗೆ ಇದೆ? ಆ ಕನಸು ನನಸಾದೀತೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಮಾಡಿಯಾರೇ? ಒಳ್ಳೆಯ ಮಾದರಿ ಹಾಕುವುದು ಸುಲಭವೇನೂ ಅಲ್ಲ. ಆದರೆ, ಅದು ಅಸಾಧ್ಯವಲ್ಲ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT