ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯದರ ಮಾದರಿಗಳು ನೆರೆಹೊರೆಯಲ್ಲೇ ಇವೆ...

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ನಾನು ಕೆಲವು ದಿನಗಳ ಹಿಂದೆ ನೇಪಾಳದಲ್ಲಿದ್ದೆ. ಅಲ್ಲಿ ಕೆಲವು ಆಸಕ್ತಿಕರ ಸಂಗತಿಗಳನ್ನು ಗಮನಿಸಿದೆ. ನಮ್ಮ ಉಪಖಂಡದ ಇತರ ನಗರಗಳ ಬಹುತೇಕ ಲಕ್ಷಣಗಳನ್ನು ಹೊಂದಿರುವ ನಗರ ಕಠ್ಮಂಡು. ಅಲ್ಲಿನ ಬಹುತೇಕ ಜನ ಶ್ರೀಮಂತರಲ್ಲ, ಬಹುಪಾಲು ಮನೆಗಳು ಸಾಧಾರಣ ಎನ್ನಬಹುದಾಗಿವೆ. ಅಲ್ಲಿ ರಸ್ತೆಗಳ ಧಾರಣಾ ಶಕ್ತಿಗಿಂತ ಹೆಚ್ಚಿನ ಸಂಚಾರ ದಟ್ಟಣೆ ಇದೆ. ಇದರ ಜೊತೆಗೆ, ಎರಡಕ್ಕಿಂತ ಹೆಚ್ಚು ರಸ್ತೆಗಳು ಒಂದೆಡೆ ಸೇರುವ ಜಾಗದಲ್ಲಿ ಅಳವಡಿಸಿರುವ ಸಿಗ್ನಲ್‌ಗಳು ಹಲವೆಡೆ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಅಲ್ಲಿ ಪೊಲೀಸರನ್ನು ನಿಯೋಜಿಸಿ ವಾಹನ ಸಂಚಾರವನ್ನು ನಿಭಾಯಿಸಲಾಗುತ್ತಿತ್ತು.

ನಮ್ಮ ಭಾಗದ ಯಾವುದೇ ಊರಿನಲ್ಲಿ ಇಂಥದ್ದೊಂದು ದೃಶ್ಯ ಇರುತ್ತದೆ. ಆದರೆ, ಕಠ್ಮಂಡುವಿನಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದ್ದರೂ ವಾಹನ ಸವಾರರು ಹಾರನ್‌ ಮಾಡುತ್ತಿರಲಿಲ್ಲ. ಇದು ಕುತೂಹಲದ ಸಂಗತಿ. ನಾನು ಕಠ್ಮಂಡುವಿಗೆ ಹೋಗಿದ್ದು ಇಪ್ಪತ್ತು ವರ್ಷಗಳ ನಂತರ. ಹಾಗಾಗಿ, ಅಲ್ಲಿನ ವಾಹನ ಸವಾರರು ಮೊದಲಿನಿಂದಲೂ ಹೀಗಿದ್ದರಾ ಎನ್ನುವುದು ನೆನಪಿಗೆ ಬರಲಿಲ್ಲ. ಈ ಬಗ್ಗೆ ನಾನು ಸ್ಥಳೀಯರೊಬ್ಬರಲ್ಲಿ ವಿಚಾರಿಸಿದೆ. ಹಾರನ್ ಮಾಡುವುದನ್ನು ನಿಲ್ಲಿಸುವ ವಿಚಾರವಾಗಿ ಅಲ್ಲಿ ಒಂದು ವಾರದ ಹಿಂದೆ ಕಾನೂನು ಅಥವಾ ಆದೇಶವೊಂದನ್ನು ಜಾರಿಗೆ ತಂದಿದ್ದಾರೆ ಎಂದು ಅವರು ತಿಳಿಸಿದರು. ಅವರ ಉತ್ತರ ಅನುಮಾನ ಮೂಡಿಸಿತು. ಜನ ಹಾರನ್ ಮಾಡುವುದನ್ನು ನಿಲ್ಲಿಸುವುದಕ್ಕೆ ಆ ಆದೇಶವೊಂದೇ ಸಾಕಾಯಿತೇ ಎಂದು ಪ್ರಶ್ನಿಸಿದೆ. ಅವರು ‘ಹೌದು’ ಎಂದರು. ಅಲ್ಲಿನ ಪೊಲೀಸರು ಲಂಚ ಮುಟ್ಟುವುದಿಲ್ಲ ಎಂದು ತೋರುತ್ತದೆ. ಇದು ಅಸಾಧಾರಣ ಸಂಗತಿ.

ದ್ವಿಮುಖ ಸಂಚಾರದ ರಸ್ತೆಗಳು ಕಿರಿದಾಗಿದ್ದ ಸ್ಥಳಗಳಲ್ಲಿ ವಾಹನಗಳು ಒಂದರ ಹಿಂದೊಂದರಂತೆ ಸರಾಗವಾಗಿ ಸಾಗುತ್ತಿದ್ದವು. ಇದು ಇನ್ನೊಂದು ಗಮನಾರ್ಹ ವಿಚಾರ. ನೇರವಾಗಿ ಸಾಗುವ ಇರಾದೆ ಹೊಂದಿದ್ದವರು ರಸ್ತೆಯ ಬಲಭಾಗದಲ್ಲೇ ಇರುತ್ತಿದ್ದರು.  ಎಡಭಾಗದಲ್ಲಿ ಬೇರೆ ವಾಹನಗಳು ಇಲ್ಲದಿದ್ದರೂ, ಸಂಚಾರ ದಟ್ಟಣೆ ತೀವ್ರವಾಗಿದ್ದರೂ ಆ ಭಾಗವನ್ನು ಅವರು ಆಕ್ರಮಿಸುತ್ತಿರಲಿಲ್ಲ. ಇದು ಭಾರತ ಅಥವಾ ದಕ್ಷಿಣ ಏಷ್ಯಾದ ಬೇರೆ ಯಾವುದೇ ದೇಶದಲ್ಲಿ ಆಗದ ಮಾತು. ಅಂದಹಾಗೆ, ಈ ಮಾತಿಗೆ ಒಂದು ದೇಶ ಅಪವಾದ ಎಂಬಂತಿದೆ. ಆ ದೇಶ ಯಾವುದು ಎಂಬ ಬಗ್ಗೆ ಮತ್ತೆ ಬರೆಯುತ್ತೇನೆ. ಅಲ್ಲಿಗೆ ನಾನು ಕೆಲವು ವಾರಗಳ ಹಿಂದೆ ಭೇಟಿ ನೀಡಿದ್ದೆ. ಆದರೆ ಈಗ ನೇಪಾಳದ ಬಗ್ಗೆಯೇ ಮಾತನಾಡುವೆ.

ನೇಪಾಳದಲ್ಲಿ ಸುಂದರವಾದ, ಬೃಹತ್ ಆದ ದೇವಸ್ಥಾನಗಳು ಕೆಲವಿವೆ. ಅವುಗಳಲ್ಲಿ ಅತ್ಯಂತ ಭವ್ಯವಾಗಿರುವುದು ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನ. ಅಲ್ಲಿ ಸುಂದರವಾದ, ಬೃಹತ್ ಆದ ನಂದಿ ಇದೆ. ಅದನ್ನು ಲೋಹದಿಂದ ನಿರ್ಮಿಸಲಾಗಿದೆ. ಅದು ಎಷ್ಟು ಸುಂದರವಾಗಿದೆ ಎಂಬುದನ್ನು ಓದುಗರು ಇಂಟರ್‌ನೆಟ್ ಮೂಲಕ ತಿಳಿದುಕೊಳ್ಳಬಹುದು. ಅಲ್ಲಿನ ಅರ್ಚಕರು ಕೇರಳದ ನಂಬೂದಿರಿಗಳು. ಇದು ಅಲ್ಲಿನ ಪರಂಪರೆಯಾಗಿರುವಂತಿದೆ. ಅರ್ಚಕರ ಹುದ್ದೆಗೆ ಸ್ಥಳೀಯ ಬ್ರಾಹ್ಮಣರನ್ನು ನೇಮಿಸಬೇಕು ಎಂಬುದು ಅಲ್ಲಿನ ಮಾವೊವಾದಿಗಳ ಬಯಕೆ. ಆದರೆ ಅದು ಇದುವರೆಗೆ ಸಾಧ್ಯವಾಗಿಲ್ಲ.

ಈ ದೇವಸ್ಥಾನದ ಆವರಣದೊಳಗೆ ಇಂದಿಗೂ ಎಮ್ಮೆ, ಕೋಣ ಸೇರಿದಂತೆ ಪ್ರಾಣಿಗಳನ್ನು ಪ್ರತಿ ತಿಂಗಳೂ ಬಲಿ ಕೊಡಲಾಗುತ್ತದೆ. ಇದು ಅಸಾಮಾನ್ಯ ವಿಚಾರ. ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಇಂಥ ಆಚರಣೆಗಳನ್ನು ಈಗ ಕಾಣುವುದು ಕಷ್ಟ, ಆದರೆ ಅಸಾಧ್ಯವೇನೂ ಅಲ್ಲದಿರಬಹುದು. ಬಂಗಾಳದಲ್ಲಿ ಕೋಣನ ಬಲಿ ತಮ್ಮ ಬಾಲ್ಯದ ದಿನಗಳಲ್ಲಿ (ಒಂದು ಶತಮಾನಕ್ಕಿಂತ ಹಿಂದೆ) ಆಗಿದ್ದನ್ನು ಲೇಖಕ ನೀರದ್ ಸಿ. ಚೌಧುರಿ ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಒಂದೆರಡು ಅಪವಾದಗಳನ್ನು ಹೊರತುಪಡಿಸಿದರೆ, ಭಾರತದಲ್ಲಿ ಈಗ ಪ್ರಾಣಿಬಲಿ ಇಲ್ಲ. ಭಾರತದಲ್ಲಿ ಪ್ರಾಣಿಬಲಿಗೆ ಯತ್ನಿಸಿದರೆ ಉದ್ರಿಕ್ತರಿಂದ ಹೊಡೆತ ತಿಂದು ಸಾಯಬೇಕಾಗಬಹುದು. ಆದರೆ ಈ ವಿಚಾರದಲ್ಲಿ ನೇಪಾಳದ ಸ್ಥಿತಿ ಭಿನ್ನವಾಗಿದೆ.

ಧಾರ್ಮಿಕ ವ್ಯತ್ಯಾಸದ ಇನ್ನೊಂದು ವಿಚಾರವೆಂದರೆ, ನೇಪಾಳದಲ್ಲಿ ಬೌದ್ಧ ಧರ್ಮ ಇಂದಿಗೂ ಜೀವಂತವಾಗಿದೆ. ಅಲ್ಲಿ ವಜ್ರಯಾನ ಎಂಬ ಬೇರೆಯದೇ ಆದ ಬೌದ್ಧ ಪಂಥವಿದೆ. ಇದು ಇತರ ಬೌದ್ಧ ಪಂಥಗಳಂತಲ್ಲ, ಇದರಲ್ಲಿ ತಾಂತ್ರಿಕ ಆಚಾರಗಳಿವೆ. ಬೌದ್ಧ ಧರ್ಮವು ಭಾರತದ ಬಹುತೇಕ ಭಾಗಗಳಲ್ಲಿ ಪುರಾತತ್ವ ಇಲಾಖೆ ಅಧೀನದ ಸ್ಥಳಗಳಿಗೆ ಸೀಮಿತವಾಗಿದೆ. ಹಲವು ದಲಿತರು ಆಶ್ರಯಿಸುತ್ತಿರುವ ನವಯಾನ ಎಂಬ ಹೊಸ ಪಂಥವೊಂದಿದೆ ಎಂಬುದು ನಿಜವಾದರೂ, ಭಾರತದಲ್ಲಿ ಬೌದ್ಧ ಧರ್ಮ ಈಗ ಅಷ್ಟೇನೂ ಪ್ರಭಾವಿ ಆಗಿಲ್ಲ.

ಹಾಗಾದರೆ, ಬೌದ್ಧ ಧರ್ಮವು ನೇಪಾಳದ ಸಂಸ್ಕೃತಿಯಲ್ಲಿ ಅಷ್ಟೊಂದು ಪ್ರಮುಖವಾಗಿ ಉಳಿದಿರಲು ಕಾರಣವೇನು? ಇದನ್ನು ತಿಳಿಯುವ ಆಸೆಯಿದೆ. ಬುದ್ಧ ಜನಿಸಿದ ಲುಂಬಿನಿ ಇರುವುದು ನೇಪಾಳದಲ್ಲಿ. ಬುದ್ಧ ಜನಿಸಿದ್ದು ಭಾರತದ ನೆಲದಲ್ಲಿ ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕೆಲವು ವರ್ಷಗಳ ಹಿಂದೆ ಪ್ರತಿಪಾದಿಸಿತ್ತು. ಆದರೆ ಇತರರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಟಿಬೆಟ್ ಪರಂಪರೆಯ ಬೌದ್ಧ ಧರ್ಮ ಕೂಡ ನೇಪಾಳದಲ್ಲಿದೆ. ಈ ಪರಂಪರೆಯ ಅದ್ಭುತ ದೇವಸ್ಥಾನ ಸ್ವಯಂಭುನಾಥ ಕೂಡ ಕಠ್ಮಂಡುವಿನಲ್ಲೇ ಇದೆ. ಅಲ್ಲಿಗೆ ಬರುವವರನ್ನು ಹಿಂದೂಗಳು, ಬೌದ್ಧರು ಎಂದು ಪ್ರತ್ಯೇಕಿಸುವುದಿಲ್ಲ. ಎರಡೂ ಧರ್ಮಗಳ ಜನ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇದು ನನಗೆ ಭಾರತದಲ್ಲಿ ಹಿಂದೂ-ಮುಸ್ಲಿಮರಿಬ್ಬರೂ ಭೇಟಿ ನೀಡುವ ಅಜ್ಮೇರ್, ನಿಜಾಮುದ್ದೀನ್‌ ದರ್ಗಾಗಳನ್ನು ನೆನಪಿಸಿತು.

ಇತರ ದೇಶಗಳಂತದಲ್ಲದ ದಕ್ಷಿಣ ಏಷ್ಯಾದ ಇನ್ನೊಂದು ದೇಶದ ಬಗ್ಗೆ ನಾನು ಉಲ್ಲೇಖಿಸಿದ್ದೆ. ಅದು ಶ್ರೀಲಂಕಾ. ಈ ದೇಶ ಕೂಡ ಬೌದ್ಧ ದೇಶ. ಶ್ರೀಲಂಕಾದ ಬೌದ್ಧರು ತೇರವಾದ ಅಥವಾ ಹಿನಾಯಾನ ಪಂಥದ ಅನುಯಾಯಿಗಳು. ಮ್ಯಾಕ್ಸ್‌ ಮುಲ್ಲರ್ ಅವರು ತೇರವಾದ ಪಂಥದ ಗ್ರಂಥಗಳನ್ನು ಪಾಲಿ ಭಾಷೆಯಿಂದ ಅನುವಾದಿಸಿರುವ ಕಾರಣ ನನಗೆ ಅದರ ಬಗ್ಗೆ ಗೊತ್ತು. ನಮ್ಮ ದೇಶದಲ್ಲಿರುವ ಗೊಂದಲಗಳು, ಕೊಳಕು, ಅಶಿಸ್ತು ಶ್ರೀಲಂಕಾದಲ್ಲಿ ಇಲ್ಲ ಎಂಬುದು ಇಲ್ಲಿಗೆ ಭೇಟಿ ನೀಡಿದವರಿಗೆ ತಕ್ಷಣ ಗೊತ್ತಾಗುತ್ತದೆ. ಅಲ್ಲಿನ ರಸ್ತೆಗಳು ಹಾಗೂ ಬೀದಿಗಳು ಹೆಚ್ಚು ಸ್ವಚ್ಛವಾಗಿವೆ. ಅಲ್ಲಿನ ಜನ ಕೂಡ ತುಸು ಭಿನ್ನವಾಗಿದ್ದಾರೆ, ಆದರೆ ಆ ಭಿನ್ನತೆಗೆ ಕಾರಣ ಏನು ಎಂಬುದು ನನಗೆ ತಿಳಿದಿಲ್ಲ.

ಈ ವ್ಯತ್ಯಾಸಗಳಿಗೆ ಕಾರಣ ಇರುವುದು ಧರ್ಮದಲ್ಲಾ? ಒಂದು ಶತಮಾನದ ಹಿಂದೆ ಈ ಭಾಗದಲ್ಲಿನ ಬಹುತೇಕ ಜನ ಅನಕ್ಷರಸ್ಥರಾಗಿದ್ದರು, ಸಂಸ್ಕೃತಿಯ ಬಗ್ಗೆ ಅರಿವು ನೀಡಲು ಧರ್ಮವೇ ದೊಡ್ಡ ಮಾರ್ಗವಾಗಿತ್ತು. ಹಾಗಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ.

ನೇಪಾಳಿಗಳು, ಶ್ರೀಲಂಕನ್ನರು ಹಾಗೂ ಇತರರ ನಡುವೆ ಗಮನಾರ್ಹ ವ್ಯತ್ಯಾಸ ಇದೆ ಎಂಬುದನ್ನು ನಾನು ಗುರುತಿಸುತ್ತೇನೆ. ಈ ವಿಚಾರವಾಗಿ ಊಹೆಗಳನ್ನು ಮುಂದಿಡಲು ನಾನು ಬಯಸುವುದಿಲ್ಲ. ನಮ್ಮ ಹಾಗೂ ಅವರ ನಡುವಣ ವ್ಯತ್ಯಾಸದ ಮೂಲವೇನು ಎಂಬುದನ್ನು ತಿಳಿಯುವುದು ಒಳ್ಳೆಯದು. ಅದು ಒಳ್ಳೆಯ ಕಾರಣವಾಗಿದ್ದರೆ, ಅದನ್ನು ನಾವೂ ಅಂತರ್ಗತ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಅರಿಯಬಹುದು.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT