ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುಗರ ಪ್ರಾಥಮಿಕ ಪಾಠಶಾಲೆಯಲ್ಲಿ...

Last Updated 24 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ವರ್ಷವಿರಬೇಕು, ಬಿಜಾಪುರಕ್ಕೆ ಹೋಗಿದ್ದೆ. ಇಬ್ರಾಹಿಂ ರೋಜಾದಿಂದ ಅಮೀರಬಾಯಿ ಕರ್ನಾಟಕಿ ಅವರನ್ನು ಬಲ್ಲ ಒಬ್ಬರನ್ನು ನೋಡಲು ಜೊಹ್ರಾಪುರ ಏರಿಯಾಕ್ಕೆ ಹೋಗಬೇಕಿತ್ತು.

ಅಲ್ಲಿಗೆ ಹೋಗಲು ಹೇಗೆ ಹೋಗಬೇಕೆಂದು, ಬ್ಯಾಗು ಹಿಡಿದು ಬಜಾರಿಗೆ ಹೊರಟಿದ್ದ 75 ವರ್ಷದ ಹಿರಿಯರೊಬ್ಬರಿಗೆ ಕೇಳಿದೆ. ಅವರು ದಾರಿ ವಿವರಿಸುತ್ತ, ನನ್ನತ್ತ ನಿಟ್ಟಿಸಿ `ಪೇಪರಿನ್ಯಾಗ ಬರೀತೀರಲ್ಲ ನೀವು?~ ಎಂದರು. ಹೌದೆನ್ನಲು `ಏ, ತ್ರಿಪುರಸುಂದರಿ ಟಾಕೀಜಿನ ಮ್ಯಾಲ ನೀವು ಬರೆದಿದ್ದು ಓದೀನ್ರೀ, ಸಂಜಿ ಮುಂಜಾನಿ ಅದನ್ನ ನೋಡ್ತೀವಿ.

ಅದಕ್ಕ ಇಷ್ಟೆಲ್ಲ ಚರಿತ್ರ ಅದಾಂತ ನಮಗಾ ತಿಳದಿದ್ದಿಲ್ಲ~ ಎಂದವರೇ, ತಮ್ಮ ಕೆಲಸಬೊಗಸೆ ಬಿಟ್ಟು ನನ್ನ ಜತೆ, ಬೇಡವೆಂದರೂ ಹೊರಟರು. ಸಿಟಿಬಸ್ಸಿನಲ್ಲಿ ನನ್ನ ಟಿಕೇಟನ್ನು ಮೇಲೆಬಿದ್ದು ತಾವೇ ಕೊಳ್ಳುತ್ತಿದ್ದರು.

ಕೆಎಸ್‌ಆರ್‌ಟಿಸಿ ಅಧಿಕಾರಿಯಾಗಿದ್ದರು ಅನಿಸುತ್ತದೆ, ಕಂಡಕ್ಟರುಗಳು ಅವರಿಗೆ ಗೌರವದಿಂದ ನಮಸ್ಕರಿಸುತ್ತಿದ್ದರು. ಅವರು ಇಡೀ ದಿನ ನನ್ನೊಟ್ಟಿಗಿದ್ದು ನಾನು ಮಾತಾಡಬಯಸಿದ್ದ ವ್ಯಕ್ತಿಗಳನ್ನೆಲ್ಲ ಭೇಟಿ ಮಾಡಿಸಿದರು. ಸಂಜೆ ಬೀಳ್ಕೊಡುವಾಗ ಅವರ ಬಗ್ಗೆ ತಿಳಿಯಬಯಸಿದೆ.
ಅವರು ತಮ್ಮ ಹೆಸರನ್ನು ಹೇಳಲೂ ಬಯಸಲಿಲ್ಲ. `ಅದರ ಜರೂರತ್ತು ಏನೈತ್ರೀ?~ ಎಂದು ಕೈಮುಗಿದು ಗಾಂಧಿಚೌಕದ ಜನಸಂದಣಿಯಲ್ಲಿ ಕರಗಿಹೋದರು. ನಿಗೂಢ ಮನುಷ್ಯರು!
ಕೋಲಾರ ಸೀಮೆಯಲ್ಲಿ ತಿರುಗಾಡುತ್ತಿದ್ದೆ.

ವಿಜಯಪುರದಲ್ಲಿ ರುಚಿಕರ ತಿಂಡಿಗೆ ಖ್ಯಾತಿವೆತ್ತ ಕ್ಯಾಂಟೀನೊಂದು ಇದೆಯೆಂದು ಮಿತ್ರರು ಕರೆದೊಯ್ದಿದ್ದರು. ಸಂದಣಿ ಶಾನೆಯಿದ್ದ ಕಾರಣ, ಬೀದಿಯಲ್ಲೇ ನಿಂತು ತಿನ್ನುತ್ತಿದ್ದೆವು. ಒಬ್ಬ ತರುಣ, ನನ್ನನ್ನು ನೋಡಿ ಮುಂದೆ ಹೋದವನು, ಹೊರಳಿ ಬಂದು, ಅತ್ತಿಂದಿತ್ತ ಶಂಕಿತನಾಗಿ ಠಳಾಯಿಸಿದನು. ಮೀನು ಗಾಳಕಚ್ಚುತ್ತಿದೆ ಎಂದು ಊಹಿಸಿದೆ.

ಆತ ನಮ್ಮ ಕಾರಿನ ಚಾಲಕನನ್ನು ಪಕ್ಕಕ್ಕೆ ಕರೆದು ವಿಚಾರಣೆ ಮಾಡಿ, ಬಂದವನೇ ನನ್ನ ಕೈಹಿಡಿದು ನಿಮ್ಮ ಅಂಕಣ ತಪ್ಪದೇ ಓದುತ್ತೇನೆಂದು ಸಂಭ್ರಮಿಸಿದನು. ಅವನ ಹೆಸರು ಶಶಿಕಿರಣ. ಬಿಕಾಂ ಓದುತ್ತಿರುವ ವಿದ್ಯಾರ್ಥಿ.

ಕಾಲೇಜು ಮೇಷ್ಟರಾಗಿದ್ದ ಅನುಭವದಲ್ಲಿ ಹೇಳುವುದಾದರೆ, ನಮ್ಮ ಸಾಹಿತ್ಯದ ಹರಿಕತೆ ಕೇಳಲು ತಕ್ಕ ಗಿರಾಕಿಗಳು ಸಿಕ್ಕುತ್ತಿದ್ದುದು ವಿಜ್ಞಾನದ `ಪ್ರತಿಭಾವಂತ~ರ ಅಥವಾ ಲೆಕ್ಕಾಚಾರದ `ಜಾಣ~ರ ಕ್ಲಾಸುಗಳಲ್ಲಲ್ಲ; `ದಡ್ಡರು~ ಎಂಬ ಅಭಿದಾನಕ್ಕೆ ತಪ್ಪಾಗಿ ಪಾತ್ರರಾದವರಿದ್ದ ಆರ್ಟ್ಸ್ ತರಗತಿಗಳಲ್ಲಿ. ಹೀಗಿರುತ್ತ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಯೊಬ್ಬ ಅಂಕಣ ಓದುವುದು ವಿಶೇಷ ಎನಿಸಿತು. ಅಲ್ಲಿಂದ ಮುಂದೆ ಅಂಕಣ ಬಂದ ದಿನ ಬೆಳಿಗ್ಗೆ ಶಶಿಯ ಫೋನು ಬರುತ್ತಿತ್ತು.     

ಮತ್ತೊಂದು ಭಾನುವಾರ. ಗದಗಕ್ಕೆ ಬೆಳಗಿನ ರೈಲಿನಲ್ಲಿ ಪಯಣಿಸುತ್ತಿದ್ದೆ. ಕೊಪ್ಪಳದಲ್ಲಿ ಹತ್ತಿದ ಪಯಾಣಿಕರೊಬ್ಬರು, ಮಗಳ ಮನೆಗೆ ಹೊರಟಿದ್ದವರು, ಮನೆಯಿಂದ ತಂದಿದ್ದ ಪತ್ರಿಕೆ ಬಿಚ್ಚಿದರು. ನನ್ನ ಅಂಕಣ ಓದುಬಹುದು ಎಂದು ಕಿರುಗಣ್ಣಲ್ಲೇ ಗಮನಿಸುತ್ತಿದ್ದೆ. ಅವರು ರಾಜಕೀಯ ಸುದ್ದಿಗಳನ್ನೂ ಶಿವಗಣರಾಧನೆಯ ಜಾಹೀರಾತುಗಳನ್ನೂ, ಲೈಂಗಿಕಶಕ್ತಿವರ್ಧಕ ಜಾಹೀರಾತುಗಳನ್ನೂ ಅತಿ ಶ್ರದ್ಧೆಯಿಂದ ಓದಿದರು.
 
ಪುರವಣಿಗೆ ಬಂದಾಗ ಸಿನಿಮಾ ಭಾಗ ನೋಡಿದರು. ನನ್ನ ಬರೆಹಕ್ಕಾಗಲಿ, ಪುಸ್ತಕ ವಿಮರ್ಶೆಗಳಿಗಾಗಲಿ ದಯೆ ತೋರಲಿಲ್ಲ. ಬಾಳೆಹಣ್ಣಿನವಳು ಬಂದಾಗ, ಒಂದು ಡಜನ್ ಕೊಂಡು ನನ್ನ ಅಂಕಣವಿದ್ದ ಶೀಟಿನಲ್ಲಿ ನೀಟಾಗಿ ಪ್ಯಾಕು ಮಾಡಿಕೊಂಡು ಬ್ಯಾಗಿನಲ್ಲಿರಿಸಿಕೊಂಡರು. 

ಇದಕ್ಕಿಂತಲೂ ಬಿರುಸಾದ ತಪರಾಕಿ ಕೊಟ್ಟವರು ಒಬ್ಬ ಕನ್ನಡ ಅಧ್ಯಾಪಕರು. ಅದೊಂದು ಸಾಹಿತ್ಯದ ಕಾರ್ಯಕ್ರಮ. ಊಟ ಮಾಡುವ ಹೊತ್ತಲ್ಲಿ, ನನ್ನ ಅಂಕಣದ ಅಭಿಮಾನಿಯೊಬ್ಬರು ತಮ್ಮ ಗುರುಗಳಿಗೆ ಉಮೇದಿನಿಂದ ನನ್ನನ್ನು ಪರಿಚಯಿಸಿದರು.

ಅದಕ್ಕೆ ಗುರುಗಳು ರೊಟ್ಟಿಮುರಿದು ಎಣಗಾಯಿಯ ರಸದಲ್ಲಿ ಅದ್ದುತ್ತ ತಣ್ಣಗೆ- `ಹಾಂಗೇನು? ಯಾವ ಪೇಪರಿನ್ಯಾಗ ಬರೀತೀರ‌್ರೀ?~ ಎಂದು ಕೇಳಿದರು. ಓದುಗರ ಮೆಚ್ಚುಗೆಯ ಗಾಳಿ ಕುಡಿದು ಉಬ್ಬಿ ಬಲೂನಾಗಿ ಹಾರಾಡುತ್ತಿದ್ದ ನನಗೆ `ನಿಜದ ಸೂಜಿಮೊನೆ~ ಚುಚ್ಚಿದಂತಾಗಿ, ಕೊಳಗೊಂಡ ಗರ್ವರಸಂ ಜರ‌್ರನೆ ಇಳಿದು, ಪತ್ರಿಕೆಯ ಹೆಸರು ಹೇಳಿದೆ- ಮುಲುಕುತ್ತ. ಅವರು ನಿರಾಳವಾಗಿ `ಏ ಗೊತ್ತಿದ್ದಿಲ್ಲ ಬಿಡ್ರಿ~ ಎಂದರು. ಅವರ ಪ್ರಾಮಾಣಿಕತೆ ದೊಡ್ಡದು.

ಇನ್ನೊಮ್ಮೆ ಗುಲಬರ್ಗ ಸ್ಟೇಶನ್ನಿನ ಮುಂದಿರುವ ಹೋಟೆಲಿನೊಳಗೆ ನುಗ್ಗುತ್ತಿದ್ದೆ. ಹೊಟ್ಟೆಗೆ ಏನಾದರೂ ಹಾಕಿಕೊಂಡು ಉದ್ಯಾನ್ ಎಕ್ಸ್‌ಪ್ರೆಸ್ ಹಿಡಿದು ಬೆಂಗಳೂರಿಗೆ ತುರ್ತಾಗಿ ಹೋಗಬೇಕಿತ್ತು. ಟಿಕೇಟು ಕಾದಿರಿಸಿರಲಿಲ್ಲ. ಜನರಲ್ ಬೋಗಿಯಲ್ಲಿ ಜಾಗ ಸಿಗುವುದೋ ಇಲ್ಲವೋ ಎಂಬ ಚಿಂತೆ.

ಇಬ್ಬರು ಕರಿಕೋಟು ಹಾಕಿಕೊಂಡಿದ್ದ ತರುಣ ವಕೀಲರು, ಹೋಟೆಲು ಮುಂದೆ ನಿಂತಿದ್ದವರು, ನಾನು ಒಳಗೆ ಹೋಗುವುದನ್ನು ಗಮನಿಸಿ, ತಾವೂ ಒಳಬಂದರು. `ನೀವು...~ ಎಂದು ನನ್ನತ್ತ ಬೆರಳುಮಾಡಿ `ತರೀಕೆರೆ?~ ಎಂದರು. ತಲೆಯೊಲೆದೆ. ನಡೆದಷ್ಟೂ ನಾಡಿನ ಪ್ರಜೆಗಳಾಗಿದ್ದ ಅವರು, ನನಗೆ ಬಿಲ್ಲನ್ನು ಕೊಡಗೊಡಲಿಲ್ಲ.
 
ರೈಲಿನಲ್ಲಿ ಬಂದು ನುಗ್ಗಾಡಿ ಜಾಗ ಹಿಡಿದು ಕೂರಿಸಿ, ಇವರೊಬ್ಬ ಲೇಖಕ ಎಂದು ಬೋಗಿಯಲ್ಲಿ ಇದ್ದವರಿಗೆಲ್ಲ ಕೇಳುವಂತೆ ಘೋಷಿಸಿ ಹೋದರು. ನಾನು ಇಳಿಯುವ ತನಕ ಎದುರು ಸೀಟಿನಲ್ಲಿದ್ದವರ ವಿಚಿತ್ರ ದೃಷ್ಟಿಗೆ ಪಕ್ಕಾಗಿ ಮುದುಡಿಕೊಂಡು ಕೂರಬೇಕಾಯಿತು.

ಪ್ರೊ.ಎಸ್.ಶೆಟ್ಟರ್ ಅವರಿಗೊಮ್ಮೆ ಕಲ್ಯದ ಶಾಸನದ ಒಂದು ಸಮಸ್ಯೆಯ ಬಗ್ಗೆ ವಿಚಾರಿಸಲು ಪತ್ರ ಬರೆದೆ. ಉತ್ತರಿಸುತ್ತ ಅವರು `ನಾವಿಬ್ಬರೂ ಭೇಟಿಯಾಗದೆ ಇದ್ದರೂ, ನೀನು ದೂರ ಇದ್ದೀಯೆಂದು ತಿಳಿಯಬೇಡ. ನಿನ್ನ ಅಂಕಣದ ಮೂಲಕ ಹತ್ತಿರವೇ ಇದ್ದೀಯ. ನಾನದನ್ನು ಬಹಳ ಆಸಕ್ತಿಯಿಂದ ಓದುತ್ತೇನೆ~ ಎಂದರು.

ದೊಡ್ಡ ವಿದ್ವಾಂಸರೂ ಗಮನಿಸುತ್ತಿದ್ದಾರೆ, ಇನ್ನು ನಾನು ಖಬರುಗೇಡಿಯಾಗಿ ಬರೆಯಬಾರದು ಎಂಬ ಎಚ್ಚರ ಹುಟ್ಟಿತು. ಆದರೆ ಗುಲಬರ್ಗೆಯ ಪ್ರೊ.ಆರ್.ಕೆ. ಹುಡಗಿಯವರ ಪ್ರತಿಕ್ರಿಯೆ ಮಾತ್ರ ಯಾವಾಗಲೂ ಗಲಿಬಿಲಿ ತರುತ್ತಿತ್ತು. ಕಾರಣ, ಅವರು ಅಂಕಣ ಓದಿದಾಗೆಲ್ಲ `ಏ ಈಸಲ ನಿಮ್ಮ ಆರ್ಟಿಕಲ್ಲ, ಲಿಂಗಮೆಚ್ಚಿ ಅಹುದಹುದೆನಬೇಕು ಅನ್ನಂಗ ಐತ್ರೀ~ ಎಂದು ಕೇಕೆಹಾಕಿ ಹೇಳುತ್ತಿದ್ದರು.

ಲೇಖನದಲ್ಲಿ ಏನಾದರೂ ಮಾಹಿತಿ ದೋಷ ಮಾಡಿದರಂತೂ ಛಡಿ ಏಟಿನ ದನಿಯ ಒಂದು ಫೋನು ಬರುತ್ತಿತ್ತು- ಅರ್ಧ ಶತಮಾನದಿಂದ `ಪ್ರಜಾವಾಣಿ~ ಓದುಗರಾಗಿರುವ ಗುಬ್ಬಿಯ ರೇವಣಾರಾಧ್ಯರಿಂದ. `ಮಿಸ್ಟರ್ ತರೀಕೆರೆ, ಏನಿದು ಇಸವೀನೇ ತಪ್ಪಾಗಿ ಬರ್ದಿದ್ದೀರಲ್ಲ, ಯಾಕೆ~ ಎಂದು ಅವರು ವಿಚಾರಣೆ ನಡೆಸುತ್ತಿದ್ದರು. ವಿಜಾಪುರದ ಪ್ರೊ. ಜಿ.ಬಿ.ಸಜ್ಜನ ಅವರಂತೂ ಪ್ರತಿಶಬ್ದವನ್ನೂ ಚಿನ್ನದಂತೆ ಒರೆಗೆ ಹಚ್ಚಿನೋಡುವವರು. ತಪ್ಪಾದರೆ ತರಾಟೆಗೆ ತೆಗೆದುಕೊಳ್ಳುವಲ್ಲಿ ಕೆಲವರು ಕ್ಷಮೆ ಕೇಳಿದರೂ ಬಿಡುತ್ತಿರಲಿಲ್ಲ.

ಆಚಾರ್ಯ ಬಿ.ಎಂ.ಶ್ರೀಯವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಾಡಿದ ಐತಿಹಾಸಿಕ ಉಪನ್ಯಾಸಕ್ಕೆ ಶತಮಾನ ತುಂಬಿದಾಗ ಬರೆದ ಲೇಖನದಲ್ಲಿ, ಸಂಘದ ಹೆಸರಿಗೆ `ಕರ್ನಾಟಕ~ ವಿಶೇಷಣ ಹಚ್ಚುವುದನ್ನು ಮರೆತಿದ್ದೆ. ಸಂಘದ ಸದಸ್ಯರಾದ ಶ್ರೀ ಜೋಶಿಯವರು `ಕರ್ನಾಟಕದೊಳಗ ನೂರಾ ಒಂದದಾವ್ರೀ ವಿದ್ಯಾವರ್ಧಕ ಸಂಘಗಳು.

ನಮ್ಮದು ಕರ್ನಾಟಕ ವಿದ್ಯಾವರ್ಧಕ ಸಂಘ~ ಎಂದು ಅರ್ಧಗಂಟೆ ಕ್ಲಾಸು ತೆಗೆದುಕೊಂಡರು. ನಮಗೆ ಸಣ್ಣ ಕಣ್ತಪ್ಪು ಕೈತಪ್ಪು; ಸಂಬಂಧಪಟ್ಟವರಿಗೆ ಅದು ದೊಡ್ಡ ಗುನ್ನೆ. ಒಬ್ಬರು ಮಾತ್ರ, ಇಂಗ್ಲೆಂಡ್ ಚಕ್ರವರ್ತಿಯ ಮೇಲೆ ಡಿವಿಜಿ ಬರೆದ ಸ್ತುತಿಗೀತೆಯನ್ನು ಚರ್ಚಿಸಿದ ಲೇಖನಕ್ಕೆ ಪ್ರತಿಕ್ರಿಯಿಸುತ್ತ, `ನೀನಿನ್ನೂ ಬರೆಹ ಲೋಕದಲ್ಲಿ ಬಚ್ಚ. ಡಿವಿಜಿ ನಿನಗೆ ಮೂರು ತಲೆಮಾರು ಹಿಂದಿನವರು, ಹಿರಿಯರು.

ಸರ್ವಜ್ಞನಂತೆ ಅಹಂಕಾರ ಪಡಬೇಡ. ಎಚ್ಚೆಸ್ಕೆಯವರ ವ್ಯಕ್ತಿಚಿತ್ರಗಳನ್ನು ನೋಡಿ ಬರೆಹ ಕಲಿತುಕೊ. ನೀನು ಬಹಳ ಮೆಚ್ಚಿಕೊಳ್ಳುವ ಆ ಗಾಂಧಿ ವಿರೋಧಿ ಬಿಎಂಶ್ರೀ ಎದುರಿಗೆ ಸಿಕ್ಕರೆ ಬೀದಿಯಲ್ಲಿ ನಿಲ್ಲಿಸಿ ಹೊಡೆಯುತ್ತಿದ್ದೆ. ಪುಣ್ಯಕ್ಕೆ ಅವರು ಸ್ವಾತಂತ್ರ್ಯ ಬರುವ ಮುಂಚೆಯೇ ತೀರಿಕೊಂಡರು~ ಎಂಬ ದನಿಯಲ್ಲಿ ಬರೆದರು. ಪತ್ರದ ಕೊನೆಗೆ `ಈ ಪತ್ರದಿಂದ ನಿನಗೆ ಬೇಜಾರಾದರೆ ವಿಷಾದವಿಲ್ಲ~ ಎಂಬ ಶರಾ ಕೂಡ ಇತ್ತು. ಪತ್ರ ಬೇನಾಮಿ ಅಲ್ಲ.
 
ವಿಳಾಸ ಫೋನು ಸಮೇತವಿತ್ತು. ಈ ನಿಲುವು ನನಗೆ ಖಬೂಲಿಯಲ್ಲ. ಆದರೆ ಅದರ ನೇರತನ ಪಸಂದಾಯಿತು. ಚಿಕ್ಕಮಗಳೂರಿನ ಒಬ್ಬ ಓದುಗರದು ಇನ್ನೂ ವಿಚಿತ್ರ. ಅವರು ಲೇಖನದ ನೆರಳಚ್ಚು ತೆಗೆದು, ಅದರಲ್ಲಿ ತಮಗೆ ಚಂದ ಕಂಡ ಸಾಲುಗಳಿಗೆಲ್ಲ ಅಡಿಗೆರೆಯಿಂದ ಅಲಂಕಾರ ಮಾಡಿ, ತಮ್ಮ ಭಿನ್ನಮತಗಳಿದ್ದರೆ ಅಲ್ಲೇ ಮಗ್ಗುಲಿಗೆ ಬರೆದು, ಪೋಸ್ಟ್ ಮಾಡುತ್ತಿದ್ದರು.

ಕೆಲವು ಅಭಿಮಾನಿಗಳು ಫೇಸ್‌ಬುಕ್ಕಿನಲ್ಲಿ `ನೀವು ಬರೆಯುತ್ತಿರುವ ಕತೆಗಳು ಬಹಳ ಚೆನ್ನಾಗಿರುತ್ತವೆ~ ಎಂದು ಬೂಸಿ ಬಿಡುತ್ತಿದ್ದರು. `ಪ್ರಿಯರೇ, ನಾನು ಕತೆ ಬರೆಯುವುದಿಲ್ಲ~ ಎಂದರೆ, `ಅವು ಕತೆ ತರಹಾನೇ ಇದ್ದಾವಲ್ಲ~ ಎಂದು ಬದಲು ಹೇಳಿ ಬಾಯಿ ಮುಚ್ಚಿಸುತ್ತಿದ್ದರು. 

ಒಬ್ಬರು, ನಿಜವಾಗಿಯೂ ನನ್ನ ಆಪ್ತರು, ಒಂದು ವರ್ಷ ತುಂಬಿದ ಬಳಿಕ, ಅಂಕಣ ನಿಲ್ಲಿಸಿದರೆ ಒಳ್ಳೆಯದು ಎಂದು ಸೂಚಿಸಿದರು. ಅವರಿಗೆ ನನ್ನ ವಿಮರ್ಶೆ ಮತ್ತು ಸಂಶೋಧನೆಯ `ಗಾಂಭೀರ್ಯ~ ಅಂಕಣದಲ್ಲಿ ಅಳ್ಳಕಗೊಳ್ಳುತ್ತಿದೆ ಎಂದು ಆತಂಕವಿರಬೇಕು. ಆದರೆ ಬೆಲ್ಲಕ್ಕಲ್ಲದೆ, ಅಧರಕ್ಕೆ ಕಹಿಯೂ ಉದರಕ್ಕೆ ಸಿಹಿಯೂ ಆದ ಬೇವಿಗೆ ಬಾಯಿ ಬಿಡುವುದುಂಟೇ ನನ್ನಂಥ ಹಪಾಹಪಿಗಳು? ಸಲಹೆ ಕೇಳಿಸಿಲ್ಲವೆಂಬಂತೆ ಮುಂದುವರೆದೆ.

ಮತ್ತೊಬ್ಬ ಹಿತೈಷಿಗಳು `ಎಲ್ಲಿಯ ನಿನ್ನ ಕತ್ತಿಯಂಚಿನ ದಾರಿ, ಎಲ್ಲಿಯ ಪತ್ರಿಕಾ ಕಾಲಂ, ಬಹಳ ಚೀಪಾಗ್ತ ಇದೀಯಾ~ ಎಂದು ಸಂಕಟಪಟ್ಟರು. ಹೇಗೆ ಚೀಪು ಎಂದರೆ ವಿವರಣೆ ಕೊಡುತ್ತಿರಲಿಲ್ಲ. ಮತ್ತೆ ಕೆಲವರು `ನಿಮ್ಮ ವಿಮರ್ಶೆ ಸಂಶೋಧನೆಗಳ ಭಾರ ತಪ್ಪಿಸಿಕೊಂಡು ಇಲ್ಲಿ ಬಂದರೆ, ಅದೇ ಭಾರವನ್ನು ಇಲ್ಲೂ ತಂದು ಸುರೀತಿದೀರಿ~ ಎಂದು ಛೇಡಿಸುತ್ತಿದ್ದರು.

ಹೆಚ್ಚಿನವರು ಮಾತ್ರ `ನಿಮ್ಮ ವಿಮರ್ಶೆಯ ಓದೋಕೆ ಆಗ್ತಿರಲಿಲ್ಲಪ್ಪ. ಇದು ಪರವಾಯಿಲ್ಲ. ಪೇಪರಿಗೆ ಬರದು ಭಾಷೆ ಸುಧಾರಿಸಿದೆ~ ಎಂದು ಶಹಬ್ಬಾಸ್‌ಗಿರಿ ನೀಡುತ್ತಿದ್ದರು.
-ಹೀಗೇ ನಾನಾ ನಮೂನೆಯ ಪ್ರತಿಕ್ರಿಯೆಗಳು. ಸಾಮಾನ್ಯವಾಗಿ ಮೊಬೈಲು ಬಂದ್ ಮಾಡಿಕೊಂಡಿರುವ ನಾನು, ಅಂಕಣ ಬಂದ ದಿನ, ಅಂಗಡಿ ತೆರೆದು ಈ ಪ್ರತಿಕ್ರಿಯೆ ಕೇಳಿಸಿಕೊಳ್ಳಲು ಕೂರುತ್ತಿದ್ದೆ.

ವ್ಯಾಪಾರ ಕಡಿಮೆಯಾದರೆ ಗೊತ್ತಾಗುತ್ತಿತ್ತು, ಲೇಖನದಲ್ಲಿ ಏನೋ ಐಬಿದೆ ಎಂದು. ಪ್ರತಿಕ್ರಿಯೆ ಚೆನ್ನಾಗಿ ಬಂದರೆ ಕೊಂಚ ಆತ್ಮವಿಶ್ವಾಸ ಕುದುರುತ್ತಿತ್ತು. ಕೆಲವರು ನನ್ನ ಬರೆಹಕ್ಕೆ ಸೇರಿಸುತ್ತಿದ್ದ ಮಾಹಿತಿ ಸೋಜಿಗ ತರುತ್ತಿತ್ತು. ಒಂದೇ ಬಯಲಾಟದಲ್ಲಿ ಎರಡು ಭಾಷೆಗಳಿರುವ ಲೇಖನ ಬರೆದಾಗ, ಇಂತಹವು ನಮ್ಮಲ್ಲೂ ಇವೆ ಎಂದು ಅನೇಕ ಕಡೆಯಿಂದ ಓದುಗರು ಬರೆದು ತಿಳಿಸಿದರು.

ಹೆಚ್ಚು ಓದುಗರ ಪ್ರೀತಿಗೆ ಪಾತ್ರವಾದ ಲೇಖನಗಳೆಂದರೆ, ತ್ರಿಪುರಸುಂದರಿ ಟಾಕೀಸು, ಪೋಸ್ಕೊ ಪೀಡಿತ ರೈತರು, ಕುವೆಂಪು ಅವರ ಎಮ್ಮೆಕತೆ, ಕಲ್ಯ ಪಟ್ಟಣ, ಶಿಯಾ ಮೊಹರಂ, ಕಿರಂ, ಕರ್ನಾಟಕದಲ್ಲಿ ಉರ್ದು, ಟ್ಯಾಗೋರ್ ಮತ್ತು ಕುವೆಂಪು, ತೆಲುಗು ಶಿವ ಕನ್ನಡ ಪಾರ್ವತಿ, ರಂಗನಟಿ ಫ್ಲೊರಿನಾ, ಬನಶಂಕರಿ ಜಾತ್ರೆ, ಜೋಳದರಾಶಿ ದೊಡ್ಡನಗೌಡರು, ಹಡಗಲಿಯ ಸವಾಲ್-ಜವಾಬ್, ಜೆಸಿಬಿ ಮನೆ ಕೆಡವಿದ ಕತೆ, ಅಬ್ಬಿಗೇರಿ ವಿರೂಪಾಕ್ಷಪ್ಪ, ಹಂಪಿಯ ಸದಾಶಿವಯೋಗಿ, ಎಂ.ಎಂ.ಕಲಬುರ್ಗಿ, ಬಸ್ರೂರು ಕುರಿತು ಬರೆದಿದ್ದು. ಚರಿತ್ರೆಯ ಸ್ಮಾರಕಗಳ ಬಗ್ಗೆ ಬರೆದಾಗ ಸಾಮಾನ್ಯವಾಗಿ ನಿರ್ಲಿಪ್ತರಾಗಿರುತ್ತಿದ್ದ ಓದುಗರು, ಜೀವಂತ ಜನರ ಮತ್ತು ಉರಿವ ಸಮಸ್ಯೆಗಳ ಮೇಲೆ ಬರೆದಾಗ ಹೆಚ್ಚು ಜೀವಂತವಾಗಿ ಮಿಡಿಯುತ್ತಿದ್ದರು.
 
ಸದಾಶಿವಯೋಗಿಯವರ ಫೋನು ಕೊಡಿ, ಮನಶ್ಶಾಂತಿಗಾಗಿ ಅವರಲ್ಲಿ ಹೋಗಬೇಕು ಎಂದು ಗುಲಬರ್ಗದ ಒಬ್ಬ ವಿದ್ಯಾರ್ಥಿ ಬಹಳ ಗಂಟುಬಿದ್ದಿದ್ದುಂಟು. `ಜೆಸಿಬಿ ಮನೆಕೆಡವಿದ ಕತೆ~ ಬರೆದಾಗ, ಒಬ್ಬರು ಈಗ ಅಂಕಣ ಸರಿದಾರಿಗೆ ಬರುತ್ತಿದೆ ಎಂದು ಸಮಾಧಾನಪಟ್ಟರು.
ಆದರೆ ಬಲಾತ್ಕಾರದಲ್ಲಿ ಮನೆ ಗದ್ದೆ ಕಳೆದುಕೊಂಡಿದ್ದ ಪೆತ್ರಾವೊ ಅವರು, ಒತ್ತಡಕ್ಕೆ ಸಿಲುಕಿ ಎಸ್‌ಇಜೆಡ್‌ಗೆ ತಮ್ಮ ಜಮೀನನ್ನು ಸ್ವತಃ ಒಪ್ಪಿಸಿದ ಸುದ್ದಿ ಬಂದಾಗ, ಅನೇಕರು `ಹೀಗಾಯಿತು ನೋಡಿ~ ಎಂದು ವಿಷಾದಿಸಿ ತಿಳಿಸಿದರು. ಬರೆಹದ ಉದ್ದೇಶ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿ ಚಿಂತನೆಗೆ ಹಚ್ಚುವುದು; ಪರಿಣಾಮ ಅದರ ಕೈಮೀರಿದ್ದು ಎಂದು ಅವರಿಗೆ ಹೇಳಿದೆ. ನಮ್ಮ ಬರೆಹದ ಅಸಹಾಯಕತೆ ಮುಖಕ್ಕೆ ಬಂದು ಬಡಿಯುತ್ತಿದ್ದುದು ತಿಳಿಯುತ್ತಿತ್ತು.  

ಈಚೆಗೆ ಜನ ತಮ್ಮ ಊರುಗಳ ವಿಶೇಷತೆ ತಿಳಿಸಿ, ಒಮ್ಮೆ ಬರಬೇಕೆಂದು ಕರೆಯಲಾರಂಭಿಸಿದ್ದರು. ಮುಧೋಳದ ಕಾರ್ಯಕ್ರಮಕ್ಕೆಂದು ಹೋದಾಗ, ಪಕ್ಕದ ಜಮಖಂಡಿಯ ಗೆಳೆಯರು ಎಳೆದುಕೊಂಡು ಹೋಗಿ, ತಮ್ಮೂರಿನ ಅರಮನೆ ದರ್ಗಾ ಕೋಟೆಗಳನ್ನು ತೋರಿಸಿ, ಅವಕ್ಕೆ ಸಂಬಂಧಪಟ್ಟ ಅದ್ಭುತರಮ್ಯ ಕತೆಗಳನ್ನೆಲ್ಲ ಹೇಳಿ ಕಿವಿತುಂಬಿದರು.

ಜಮಖಂಡಿ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಶತಾಯುಷಿಯೊಬ್ಬರನ್ನು ದಲಿತಕೇರಿಗೆ ಹೋಗಿ ಭೇಟಿಮಾಡಿದ್ದು ಹಾಗೂ ನನ್ನ ಪ್ರಿಯ ಚಿಂತಕರಾದ ಗುರುದೇವ ರಾನಡೆಯವರ ಮನೆ ನೋಡಿದ್ದು ಖುಷಿಕೊಟ್ಟಿತು. ಜಮಖಂಡಿ ಗೆಳೆಯರಿಗೆ ತಮ್ಮೂರ ಕತೆ ಅಂಕಣದಲ್ಲಿ ಬರಬೇಕೆಂಬ ಆಸೆಯಿತ್ತೇ? ಇದ್ದರೆ ತಪ್ಪಲ್ಲ. ಊರಭಿಮಾನ ದೊಡ್ಡದು.

ಕುರಿತೋದದೆ ಕೃತಿಯು, ಭೇಟಿಯಾಗದೆ ಜನರು ಹಾಗೂ ತಿರುಗಾಡದೆ ನಾಡು ಸರಿಯಾಗಿ ಅರ್ಥವಾಗುವುದಿಲ್ಲ. ನಾಡನ್ನು ತಿರುಗಬೇಕು- ಉಸಿರು ಇರುವ ತನಕ ಅನಿಸುತ್ತದೆ. ಆದರೆ ನಾಡು ಬಹಳ ವಿಶಾಲ. ಹಿಂದೊಮ್ಮೆ ಬರೆದಂತೆ `ದಣಿವು ಪಥಿಕನಿಗೇ ಹೊರತು ಪಥಕ್ಕಲ್ಲ~.
 
`ಜೋಗದ ಸಿರಿಬೆಳಕಿನ ತುಂಗೆಯ ತೆನೆ ಬಳುಕಿನ~ ಈ ನಾಡು ಸುಂದರವಾಗಿದೆ. ಈಚೆಗೆ ಸಿರಗುಪ್ಪ ತಾಲೂಕಿನ ಅಗಸನೂರಿಗೆ ಹೋದಾಗ ನಾನು ಕಂಡ ಮೊಹರಂ, ಹಾಡು ಕುಣಿತ ನಾಟಕಗಳಿಂದ ಕೂಡಿ ಅತ್ಯಂತ ಕಲಾತ್ಮಕವಾಗಿತ್ತು. ಆದರೆ ಈ ನಾಡು ಸಂಕಟಗಳ ಬೀಡೂ ಹೌದು. ನೆರೆಯ ಹೊಡೆತಕ್ಕೆ ಸಿಕ್ಕ ಊರುಗಳಲ್ಲಿ ತಿರುಗುವಾಗ ಇದು ಅನುಭವಕ್ಕೆ ಬಂದಿತು.
 
ತಿರುಗಾಟ ಮಾಡಿ ನಾಡಿನ ಬವಣೆ ಮತ್ತು ಸಂಭ್ರಮಗಳ ಬಗ್ಗೆ ಬರೆಯುವವರಿಗೆ ಪ್ರೇರಣೆಗೆ ಎಂದೂ ಕೊರತೆಯಿಲ್ಲ. ನನಗೆ ಬಹಳ ಪ್ರೇರಣೆ ಕೊಟ್ಟ ಜಿಲ್ಲೆಗಳಲ್ಲಿ ಬಿಜಾಪುರವೂ ಒಂದು.
 
ವರ್ಣರಂಜಿತ ಚರಿತ್ರೆಯೂ ದುಗುಡ ತುಂಬಿದ ವರ್ತಮಾನವೂ ಕಡಿದುಬಿದ್ದಿದೆ ಅಲ್ಲಿ. ನನ್ನ ಮೂರು ಲೇಖನಗಳಿಂದ ಬಿಜಾಪುರ ಜಿಲ್ಲೆಯ ಜನ ನನಗೆ ಬಂಧುಗಳೇ ಆದರು. ಪ್ರತಿ ಲೇಖನವೂ ನಾಡಿನ ಒಂದು ಭಾಗದಲ್ಲಿ ಓದುಗ ಬಳಗವನ್ನು ಗಳಿಸಿಕೊಡುತ್ತಿತ್ತು. ಆದರೆ ಕಂಡದ್ದೆಲ್ಲ ಬರೆಯುವುದಕ್ಕೆ ವಸ್ತುವಾಗತೊಡಗಿದರೆ, ಬರೆಹವು ಯಾಂತ್ರಿಕ ಕಸುಬಾಗಿ ಬಿಡುತ್ತದೆ. ಬರೆಹ ಎದುರಿನ ಲೋಕವನ್ನು ಕಾಣಿಸುತ್ತದೆ ನಿಜ, ಆದರೆ ಬರೆದ ಬರೆಹವೇ ಲೋಕವನ್ನು ನೋಡಲು ಬೇಕಾದ ದೃಷ್ಟಿಯನ್ನೂ ಕೊಡುತ್ತದೆ.     

ಕರ್ನಾಟಕ ಸಂಸ್ಕೃತಿಯ ಅಧ್ಯಯನಕಾರನಾಗಿ ನಾನು ಎಲ್ಲ ಧರ್ಮಗಳನ್ನೂ ಅವನ್ನು ನಂಬಿ ಬದುಕುವ ಜನರನ್ನೂ ಆದರಿಸುವವನು; ಪರಂತು, ಮತಧರ್ಮವನ್ನು ಹತ್ಯಾರ ಮಾಡಿಕೊಳ್ಳುವ `ಕಂತ್ರಾಟುದಾರ~ರರನ್ನಲ್ಲ. ಆದರೆ ಈ ಕಂತ್ರಾಟುದಾರರು ಜನರ ಭಾವನೆ ಕೆರಳಿಸಿ ತಮ್ಮ ಕದನಕ್ಕೆ ಸೈನಿಕರನ್ನಾಗಿ ಮಾಡಿಕೊಳ್ಳಬಲ್ಲರು.

ಆದ್ದರಿಂದ ಮತ ಧರ್ಮಗಳ ವಿಷಯ ಬರೆಯುವಾಗ, ಅದರಲ್ಲೂ ಲಕ್ಷಾಂತರ ಜನ ಓದುವ ಮುಖ್ಯಧಾರೆಯ ಪತ್ರಿಕೆಯಲ್ಲಿ ಬರೆಯುವಾಗ, ಮೈತುಂಬ ಎಚ್ಚರಬೇಕು. ನನಗೆ ಧರ್ಮ ಮತ್ತು ಸಮುದಾಯಗಳ ಮೇಲೆ ಬರೆಯುವಾಗ ಮಾತ್ರವಲ್ಲ, ಬರೆದ ಬಳಿಕವೂ ಸಣ್ಣ ಆತಂಕವಿರುತ್ತಿತ್ತು. ಓದುಗರ ಔದಾರ್ಯವೆಂದರೆ, ಅವರೆಂದೂ ನನ್ನನ್ನು ತಪ್ಪು ತಿಳಿಯಲಿಲ್ಲ.

ಪತ್ರಿಕಾ ಅಂಕಣಗಳನ್ನು ಓದುವ ಬಹುತೇಕ ಓದುಗರು ನನ್ನಂತಹವರು ಬರೆದ ಸಾಹಿತ್ಯ ವಿಮರ್ಶೆ ಮತ್ತು ಸಂಶೋಧನಾ ಗ್ರಂಥಗಳನ್ನು ಓದಿದವರಲ್ಲ. ಬಹುಶಃ ಓದುವವರೂ ಅಲ್ಲ. ಅವರಲ್ಲಿ ಕೆಲವರು ಅಂಕಣದಿಂದ ಪುಸ್ತಕಗಳ ಓದಿಗೆ ದಾಟಬಹುದಾದರೂ, ಹೆಚ್ಚಿನವರು ಪತ್ರಿಕೆಯ ಬರೆಹಗಳಿಂದಲೇ ಲೋಕದ ತಿಳಿವಳಿಕೆ ಕಟ್ಟಿಕೊಳ್ಳುವವರು. ಈ ಸಮುದಾಯಕ್ಕೆ ಅದರದ್ದೇ ಆದ ಒಂದು ನಿರೀಕ್ಷೆ ಇದೆ. ಪತ್ರಿಕಾ ಅಂಕಣಗಳು ಅವನ್ನು ಪೂರೈಸುತ್ತವೆ.

ಅದನ್ನು ಪೂರೈಸುವುದು ಸಾಂಸ್ಕೃತಿಕ ಹೊಣೆಗಾರಿಕೆ ಕೂಡ. ಈ ಅರ್ಥದಲ್ಲಿ ಪತ್ರಿಕೆಗಳು ಜನತಾ ವಿಶ್ವವಿದ್ಯಾಲಯಗಳು. ಇಲ್ಲಿ ಸಂಶೋಧನೆ ಚಿಂತನೆಗಳನ್ನು ಹಂಚಿಕೊಳ್ಳುವ ಖುಷಿ, ಜನಪ್ರಿಯತೆಯ ಸಂಭ್ರಮ, ಭಾಷೆಯನ್ನು ಸರಳಗೊಳಿಸುವ ಪ್ರಯೋಗ, ಚಿಂತನೆ ಸರಳೀಕರಣವಾಗುತ್ತಿರುವ ಆತಂಕ ಎಲ್ಲವೂ ಏಕಕಾಲದಲ್ಲಿ ಸಂಭವಿಸುತ್ತಿರುತ್ತದೆ.
 
ಈ ಅಂಕಣ ಬರೆದ ಅಷ್ಟಾದಶ ಮಾಸಗಳು, ನಿಸ್ಸಂಶಯವಾಗಿ, ನನ್ನ ಬರೆಹದ ಬದುಕಿನಲ್ಲಿ ಅಮೂಲ್ಯ ದಿನಗಳು. ಇದರಿಂದ ಓದುಗರಿಗೆ ಎಷ್ಟು ಉಪಯೋಗವಾಗಿದೆಯೋ ಕಾಣೆ, ಆದರೆ ಅವರ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ನಾನು ಅನೇಕ ಪಾಠಗಳನ್ನು ಕಲಿತಿದ್ದು ಮಾತ್ರ ದಿಟ.

ಈಗಲೂ ಯಾರೋ ಗೃಹಿಣಿ, ನಿವೃತ್ತ ಸೈನಿಕ, ಲೈನ್‌ಮನ್, ಪತ್ರಕರ್ತರು, ಜೈಲಿನ ವಾರ್ಡನ್, ರಂಗನಟ, ಬಟ್ಟೆ ಅಂಗಡಿಯ ಸೇಲ್ಸ್‌ಬಾಯ್, ಪ್ರಾಧ್ಯಾಪಕ, ಆಸ್ಪತ್ರೆಯ ವೈದ್ಯ, ಅಧಿಕಾರಿ, ರೈತ, ವಿದ್ಯಾರ್ಥಿ ಮುಂತಾಗಿ ಬಾಳಿನ ನಾನಾ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಪತ್ರ ಬರೆದಾಗ ಅಥವಾ ಫೋನು ಮಾಡಿದಾಗ, ಎದುರು ಸಿಕ್ಕಾಗ ಮಾತಾಡಿದಾಗ, ಮುದವಾಗುತ್ತದೆ.

ನನ್ನ ಸಂಶೋಧನಾ ಕೃತಿಗಳು ಗಳಿಸಿಕೊಡದ ಭಾಗ್ಯವಿದು. ಈ ಅಂಕಣವು ಹೊಸ ಓದುಗ ವಲಯದ ಜತೆಗೆ ಹೊಸ ಸಂಬಂಧ ಬೆಸೆಯಿತು. ಬಿಜಾಪುರದಲ್ಲಿ ನನ್ನೊಂದಿಗೆ ಸುತ್ತಾಡಲು ಬಂದ ಆ ಹಿರಿಯರ ವಿಶ್ವಾಸವನ್ನು ಯಾವ ಮಾಪನದಲ್ಲಿ ಅಳೆಯಲಿ? ಓದುಗರು ಕೊಡುವ ಪ್ರೀತಿಯ ಮುಂದೆ ಸಂಸ್ಥೆಗಳು ಕೊಡುವ ಪ್ರಶಸ್ತಿಗಳು ಮಂಕಾಗಿ ತೋರುತ್ತವೆ.

ಕನ್ನಡದ ಓದುಗರ ಪ್ರೀತಿಯನ್ನು ಸುರುವಿಕೊಂಡು ಉಂಡಿರುವ ತೇಜಸ್ವಿ ಮುಂತಾದ ಲೇಖಕರ ಮುಂದೆ ಇದು ಸಣ್ಣ ಮರಳಿನ ಕಣ. ಆದರೆ ಇರುವೆಗೆ ಸಿಗುವ ಒಂದು ಸಕ್ಕರೆ ಕಾಳು ಅದರ ಪಾಲಿಗೆ ಹಿಮಾಲಯ. ನನ್ನಂತಹ ಅಲೆಮಾರಿಗೆ ಆಶ್ರಯ ಕೊಟ್ಟಿರುವ ಪ್ರೀತಿಯ ಕನ್ನಡ ವಿಶ್ವವಿದ್ಯಾಲಯವನ್ನು, ಸುತ್ತಾಟದ ಅನುಭವ ಹಂಚಿಕೊಳ್ಳಲು ಅವಕಾಶವಿತ್ತ `ಪ್ರಜಾವಾಣಿ~ಯನ್ನು, ಬೆಚ್ಚನೆಯ ಪ್ರೀತಿ ಮತ್ತು ಎಚ್ಚರದ ಟೀಕೆಗಳನ್ನಿತ್ತು ಪೊರೆದ ಓದುಗರನ್ನು ಸುಮ್ಮನೆ ನೆನೆಯುತ್ತೇನೆ. ಧನ್ಯವಾದ ಕೃತಜ್ಞತೆ ಥ್ಯಾಂಕ್ಸ್ ಇವೆಲ್ಲ ಒಣಕಲು ಪದಪುಂಜಗಳು. 

ಈ ಬರಹದೊಂದಿಗೆ `ನಡೆದಷ್ಟೂ ನಾಡು~ ಅಂಕಣ ಕೊನೆಗೊಂಡಿದೆ.

-ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT