ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುವ ಕ್ರಿಯಾಶೀಲತೆ ನೋಡುವ ಸೋಮಾರಿತನ

Last Updated 27 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹಳೆಯ ಕಪ್ಪು ಮರದ ಕೆತ್ತನೆಯ ಗಟ್ಟಿ ಕುರ್ಚಿಯ ಮೇಲೆ ಅಚಲವಾಗಿ ಅಜ್ಜ ಕುಳಿತಿದ್ದಾರೆ. ಕೈಗಳು ಸುಕ್ಕು ಬಂದಿದ್ದರೂ ಕುರ್ಚಿಯ ತೋಳನ್ನು ಅವರು ಸ್ಪಷ್ಟವಾಗಿ, ದಿಟ್ಟವಾಗಿ ಹಿಡಿದಿದ್ದಾರೆ. ತೋರುಬೆರಳು ಅನಿಷ್ಟಗಳನ್ನು ತೋರುತ್ತಿದೆ. ಶ್ವೇತವಸ್ತ್ರಗಳು ಅವರ ಸ್ವಚ್ಛ ಬದುಕನ್ನು ಸಂಕೇತಿಸುತ್ತವೆ. ಕುಳಿತಿರುವ ಭಂಗಿ ಅವರ ದೂರದೃಷ್ಟಿಯನ್ನು ಅದರ ತೀಕ್ಷ್ಣತೆಯನ್ನು ನಿಮ್ಮ ಊಹೆಗೆ ಬಿಡುತ್ತದೆ. ದೇಹ ಮಾಗಿದ್ದರೂ ವಿಚಾರದ ಹರೆಯ ಎದ್ದು ಕಾಣುತ್ತಿದೆ.

ಪರಂಪರೆಯನ್ನು ಪೂರ್ತಿ ನಿರಾಕರಿಸದೆ ಅದನ್ನು ಪಳಗಿಸಿ ನೇರ್ಪುಗೊಳಿಸಿ ಅದರ ಮೇಲೆ ವಿರಾಜಮಾನಗೊಳ್ಳುವ ಗಾಂಭೀರ್ಯವಿದೆ. ಕುರ್ಚಿಯ ಬಲಬದಿಯಲ್ಲಿ ನೆಲಮಟ್ಟದಲ್ಲಿ ಕ್ಯಾಮೆರಾ ಇರಿಸಿ ತೆಗೆದಿದ್ದರೂ ದಶದಿಕ್ಕುಗಳಲ್ಲಿ ಮತ್ತು ವಿವಿಧ ಕೋನಗಳಲ್ಲಿ ಇರಿಸಿ ತೆಗೆದಾಗ ಆ ಚಿತ್ರಗಳು ಹೇಗೆ ಕಂಡಾವು ಎಂಬ ಕಲ್ಪನೆಗೆ ಅವಕಾಶ ಕೊಡುತ್ತದೆ. ಕಂಸ, ತ್ರಿಜ್ಯಗಳನ್ನು ಬಳಸಿ ವ್ಯಾಸಗಳನ್ನು ರಚಿಸಿಕೊಳ್ಳಲು ಉತ್ತಮ ಕಾವ್ಯವು ಆಸ್ಪದ ಕೊಡುವಂತೆ ಈ ಚಿತ್ರವೂ ಅಪಾರ ಸ್ಫೋಟಕ ಶಕ್ತಿಯುಳ್ಳದ್ದು. ಅರ್ಧಸತ್ಯಗಳನ್ನು ಬಿಟ್ಟುಕೊಟ್ಟು ಪೂರ್ಣಸತ್ಯಗಳನ್ನು ಹುಡುಕಿಕೊಳ್ಳಲು ಪ್ರೇರೇಪಿಸುತ್ತದೆ.

ಇದು ಚಿತ್ರವೊಂದರ ಸಾರ್ಥಕತೆಗೆ ಮತ್ತು ಘನತೆಗೆ ಸಂಬಂಧಿಸಿದ್ದು. ಮುಖವಿಲ್ಲದ ಈ ಚಿತ್ರ ಏನೇನನ್ನು ಹೇಳಬಲ್ಲುದು? ಇದನ್ನು ನೋಡುತ್ತ ಒಂದು ಚುಟುಕು ಹೊಳೆಯಬಹುದು. ಕಾವ್ಯವೂ ಹುಟ್ಟಬಹುದು. ಕಾದಂಬರಿ, ಮಹಾಕಾವ್ಯವೇ ಅವತರಿಸಬಹುದು. ವಿಚಾರ ಕ್ರಾಂತಿ ಮೊಳಗಬಹುದು. ಮುಖವೇ ಇಲ್ಲದ ಈ ಕಪ್ಪುಬಿಳುಪಿನ ಚಿತ್ರಕ್ಕೆ ಅನೇಕ ಧ್ವನಿಗಳಿವೆ. ಹಲವು ರಾಗಗಳಿವೆ. ಅಸಂಖ್ಯ ಭಾವಗಳಿವೆ. ಚಿತ್ರವೊಂದು ವಿವಿಧಾರ್ಥ ತುಂಬಿಕೊಳ್ಳುವ ಈ ಪರಿ ಸೋಜಿಗ. ಥಟ್ ಅಂತ ಹೇಳಿ ಎಂದು ಪರೀಕ್ಷಿಸುವ ಅಗತ್ಯವಿಲ್ಲ. ಕುಳಿತಿರುವವರು ಕುವೆಂಪು.

ಅವರು ತನ್ನ ನೂರಾಹತ್ತನೇ ಹುಟ್ಟುಹಬ್ಬವನ್ನು, ತನ್ನನ್ನು ಓದಿಕೊಳ್ಳದ ಜನರೂ ಹೇಗೆ ಆಚರಿಸುತ್ತಿದ್ದಾರೆ ಎಂದು ನೋಡುತ್ತಿರುವಂತಿದೆ. ಇದರ ಚಿತ್ರಕಾರರು ಎಲ್ಲರೂ ಊಹಿಸುವಂತೆ, ತಮ್ಮ ಅಪೂರ್ವ ಛಾಯಾಚಿತ್ರಗಳಿಂದ ಖ್ಯಾತರಾಗಿರುವ ಕೃಪಾಕರ-ಸೇನಾನಿ.
ಇತ್ತೀಚೆಗೆ ಕುವೆಂಪು ಚಿತ್ರಸಂಪುಟ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಿಂದ ಬಿಡುಗಡೆಯಾಯಿತು. ಪ್ರವೇಶ ನಿರ್ಬಂಧಿತವಾದ್ದರಿಂದ ಹೆಚ್ಚು ಜನ ಬಂದಿರಲಿಲ್ಲ.

ಅರಮನೆ ಗುರುಮನೆಗಳನ್ನು ನಿರಾಕರಿಸಿದ್ದ ಕುವೆಂಪು ಅವರನ್ನು ಕುರಿತ ಈ ಆಲ್ಬಮ್ಮು, ಶ್ರೀಸಾಮಾನ್ಯರಿಗೆ ಅವಕಾಶವಿರುವ ಸಾರ್ವಜನಿಕ ಸಭೆಯಲ್ಲಿ ಬಿಡುಗಡೆಯಾಗಿದ್ದರೆ ಹೆಚ್ಚು ಜನ ಬರುತ್ತಿದ್ದರೇನೋ. ಆ ಪುಸ್ತಕದ ದ್ರವ್ಯದಂತಿರುವ ‘ವಿಚಾರ ಕ್ರಾಂತಿಗೆ ಜಯವಾಗಲಿ’ ಎಂದು ಸಾರುವ ಈ ಚಿತ್ರವು ಕೊನೆಯ ಪುಟದಲ್ಲಿದೆ. ಕುವೆಂಪು ಅವರನ್ನು ಓದಿದವರು, ಓದಲಿಚ್ಛಿಸುವವರು, ಓದಲಿಚ್ಛಿಸದವರು, ಓದಲು ಪುರಸೊತ್ತಿಲ್ಲದವರು ಎಲ್ಲರೂ ಒಮ್ಮೆ ‘ನೋಡಬೇಕಾದ’ ಆಲ್ಬಮ್ಮು ಇದು.

ಓದುಗನೆಂಬ ಕ್ರಿಯಾಶೀಲ, ನೋಡುಗನೆಂಬ ಸೋಮಾರಿಯಾಗುತ್ತಿರುವ ಈ ಕಾಲಗುಣಕ್ಕೆ ಪೂರಕವಾಗಿರುವ ಈ ಕೃತಿಗೆ, ಮತ್ತೆ ನೋಡುಗನನ್ನು ಓದಿಗೆ ಹಚ್ಚುವ ಶಕ್ತಿ ಇದೆ. ಇಲ್ಲಿ ಬರೇ ಚಿತ್ರಗಳಿಲ್ಲ. ಚಿತ್ರಗಳ ನಡುವೆ ಆಯ್ದ ಕವಿತೆ, ಬರಹ ಮತ್ತು ವಿವರಗಳಿವೆ. ಇವು ಕುವೆಂಪು ಓದಿನ ಬಾಗಿಲು ತೆರೆಯುವ ಕೀಲಿಕೈಗಳಂತಿವೆ. ಕುವೆಂಪು ಅವರನ್ನು ಪ್ರೇರೇಪಿಸಿದ್ದ ಉಷಃಕಾಲದ ನವಿಲುಕಲ್ಲು, ರಾಮತೀರ್ಥದ ಕಲ್ಲುಸಾರ, ಸಿಬ್ಬಲು ಗುಡ್ಡೆ, ಅವರ ಕೈಬರಹ, ಅನಾಮಿಕ ಪ್ರವಾಸಿ ತೆಗೆದ ಐದು ವರ್ಷದ ಬಾಲಕ ಕುವೆಂಪುವಿನ ಛಾಯಾಚಿತ್ರ, ಹುಟ್ಟಿ ಬಾಳಿದ ಮನೆ, ತೋಟ, ಕಾಡು, ನದಿ!

ಇವೆಲ್ಲವುಗಳ ಜತೆಗೆ ಕಾಡುಹಾದಿಯ ಕಾಲ್ನಡಿಗೆಯಲ್ಲಿ Longfello ಕವಿಯ The Psalm of Life ಪದ್ಯವನ್ನು ಹೇಳಿ ಕುವೆಂಪುಗೆ ಕಾವ್ಯ ಬೀಜ ಬಿತ್ತಿದ ಹೊಸಮನೆ ಮಂಜಪ್ಪಗೌಡರು; ಇಂಗ್ಲಿಷ್ ಬದಲಿಗೆ ಕನ್ನಡದಲ್ಲಿಯೇ ಸಾಹಿತ್ಯ ರಚಿಸು ಎಂದು ಸೂಚಿಸಿದ ಐರಿಷ್ ಕವಿ ಜೇಮ್ಸ್ ಹೆನ್ರಿ ಕಸಿನ್ಸ್; ನೆನಪಿನ ದೋಣಿಯನ್ನು ರಚಿಸಲು ಪ್ರೇರಣೆಯಾದ ಅಲಿಗೆ ಪುಟ್ಟಯ್ಯನಾಯಕರು -ಇವರೆಲ್ಲರ ಚಿತ್ರಗಳು;

1924ರಲ್ಲಿ ಕುವೆಂಪು ಬರೆದ ‘ಪೂವು’ ಎಂಬ ಮೊದಲ ಕನ್ನಡ ಕವಿತೆಯ ಪೂರ್ಣ ಪಠ್ಯ. ಈ ಆರಂಭಿಕ ಹೆಜ್ಜೆಗುರುತುಗಳದೇ ಒಂದು ಸೊಗಸು. ಕಡಿದಾಳ್ ಪ್ರಕಾಶ್, ಎಂ. ವಿಶ್ವನಾಥ್, ಎನ್. ಪ್ರಕಾಶ್, ಜಿ. ಪ್ರಶಾಂತ್ ತಂಡವು ಛಾಯಾಚಿತ್ರ ಮತ್ತು ಬರಹಗಳನ್ನು ಒಪ್ಪವಾಗಿಟ್ಟು ಜೋಡಿಸಿದ್ದಾರೆ. ಕುವೆಂಪು ನೆಪದಲ್ಲಿ ಅವರ ಕಾಲದ ಗಣ್ಯರನ್ನೆಲ್ಲ ಒಟ್ಟಿಗೆ ನೋಡುವ ಅವಕಾಶ. ಇದೊಂದು ಕಲಾತ್ಮಕ ದೃಶ್ಯಕಾವ್ಯ ಸಂಯೋಜನೆ. ಕುವೆಂಪು ಅವರ ಇಡೀ ಕುಟುಂಬ ಪ್ರೀತಿಯಿಂದ ಸಂಗ್ರಹಿಸಿಟ್ಟ, ಅವರ ಅಭಿಮಾನಿಗಳು ತೆಗೆದ ಚಿತ್ರಗಳು ಇಲ್ಲಿವೆ. ಇಲ್ಲಿನ ಹಲವು ಚಿತ್ರಗಳು ತೇಜಸ್ವಿಯವರ ಕೊಡುಗೆ.

ತೇಜಸ್ವಿ ‘ಕುವೆಂಪು ಫೋಟೋಗ್ರಾಫರಿಗೆ ಹೇಳಿ ಮಾಡಿಸಿದಂಥ ಮಾಡೆಲ್‌ನ ಹಾಗಿದ್ದರು. ಆದರೆ ನನ್ನ ಕೈಗೆ ಕ್ಯಾಮೆರಾ ಬರುವಾಗ ಆಗಲೇ ಅವರಿಗೆ ಸಾಕಷ್ಟು ವಯಸ್ಸಾಗಿತ್ತು. ಫೋಟೋಗ್ರಫಿ ಆಗ ದುಬಾರಿಯ ಹಾಬಿ. ನಾನು ಕೊಂಡ ಮೊಟ್ಟಮೊದಲ ಕ್ಯಾಮೆರಾ ಹದಿನೆಂಟು ರೂಪಾಯಿಯ ಕೊಡಕ್ ಬೇಬಿ ಬ್ರೌನಿ. ಯಾವ್ಯಾವುದಕ್ಕೋ ಕೇಳಿ ತಗೊಂಡ ದುಡ್ಡಿನಿಂದೆಲ್ಲಾ ಫಿಲಂ ತಂದು ಫೋಟೊ ತೆಗೆಯುತ್ತಿದ್ದೆ. ಅವುಗಳಲ್ಲಿ ಅಣ್ಣನ ಅನೇಕ ಫೋಟೊಗಳೂ ಇದ್ದವು. ಅವುಗಳ ಅಮೂಲ್ಯತೆಯ ಅರಿವಿದ್ದಿದ್ದರೆ ಸಾಕಷ್ಟು ಜೋಪಾನ ಮಾಡುತ್ತಿದ್ದೆನೋ ಏನೋ’. ಎನ್ನುತ್ತಿದ್ದರು ತೇಜಸ್ವಿ.

ಹತ್ತು ಕವಿತೆಗಳು ಹೇಳುವ ಸತ್ಯವನ್ನು ಒಂದು ಕಪ್ಪುಬಿಳುಪಿನ ಚಿತ್ರ ಹೇಳುವ ಸಾಧ್ಯತೆ ಇದೆ. ಆಗಿನ ಕಾರುಗಳು, ಮೈಕುಗಳು, ಉಡುಗೆ ತೊಡುಗೆಯ ವಿನ್ಯಾಸ, ಕೇಶ ವಿನ್ಯಾಸ, ಕಟ್ಟಡಗಳ ವಿನ್ಯಾಸ ಎಲ್ಲ ಯಥಾವತ್ತಾಗಿ ದಾಖಲಾಗಿವೆ. ಮೊಳೆ ಜೋಡಿಸುವ ಮುದ್ರಣಾಲಯದಲ್ಲಿ ಅಚ್ಚಾದ ಕುವೆಂಪು ಮದುವೆಯ ಆಮಂತ್ರಣ ಪತ್ರಿಕೆ ಎಷ್ಟು ಸ್ವಾರಸ್ಯಕರವಾಗಿದೆ ! ಮಾಯಾರಾವ್ ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿರುವ ಮಾತು ಇಲ್ಲಿ ಉಲ್ಲೇಖಗೊಂಡಿದೆ.

ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ, ಮೂಲ ರಾಮಾಯಣವನ್ನು ಹೊಸ ದೃಷ್ಟಿಕೋನದಲ್ಲಿ ಗ್ರಹಿಸಲಾಗಿದ್ದ ಶ್ರೀ ರಾಮಾಯಣ ದರ್ಶನಂನ ಆಯ್ದ ಭಾಗವನ್ನು, ನಲವತ್ತೈದು ನಿಮಿಷಗಳ ನೃತ್ಯ ರೂಪಕವಾಗಿ ಅಳವಡಿಸಲು, ಮಾರ್ಗದರ್ಶನಕ್ಕಾಗಿ ಕುವೆಂಪು ಅವರನ್ನು ಕಾಣಲು ಹೋದಾಗ, ಶ್ವೇತವಸ್ತ್ರಧಾರಿ ಕುವೆಂಪು ಬೈತಲೆ ತೆಗೆದ ಗ್ರೀಕ್ ದೇವತೆಯಂತೆ ಕಾಣಿಸಿದರು ಎನ್ನುತ್ತಾರೆ. ಕುವೆಂಪು ಭಾವಗೀತೆಗಳನ್ನು ಸುಗಮ ಸಂಗೀತದ ಸಂಯೋಜಕರು ಮತ್ತು ಅನೇಕ ಗಾಯಕರು ಜನರ ಕಿವಿಗಳಿಗೆ ಮುಟ್ಟಿಸಿದರು.

ಅದರಲ್ಲಿ ಪ್ರಮುಖರು ಶಿವಮೊಗ್ಗ ಸುಬ್ಬಣ್ಣ. ಇಂಥವು ಬರಿಯ ಮಾಹಿತಿಗಳಾಗದೆ ಸಾಂಸ್ಕೃತಿಕ ಸಂಗತಿಗಳಾಗಿ ಸಂತೋಷ ಕೊಡುತ್ತವೆ. ಕುವೆಂಪು ಮಗುವಾಗಿ, ಕವಿಯಾಗಿ, ನಾಟಕಕಾರನಾಗಿ, ಕಾದಂಬರಿಕಾರನಾಗಿ, ವೈಚಾರಿಕ ಬರಹಗಾರನಾಗಿ, ಅಧ್ಯಾಪಕನಾಗಿ, ಆಡಳಿತಗಾರನಾಗಿ, ಸಂತನಾಗಿ, ದಾರ್ಶನಿಕರಾಗಿ- ಒಂದೇ ಆಲ್ಬಮ್ಮಿನೊಳಗೆ ಮೈತಳೆಯುವ ಚಮತ್ಕಾರ ಇಲ್ಲಿಯದು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಹಂಪನಾ ‘ಇಂಥ ಅಪೂರ್ವ ಚಿತ್ರ ಸಂಪುಟ ಕನ್ನಡದಲ್ಲಿ ಇದೇ ಮೊದಲು’ ಎಂದು ಅಭಿಮಾನ ಪಡುತ್ತಾರೆ. ಸರ್ಕಾರದ ಮತ್ತು ಸಮಾಜದ ಔದಾರ್ಯಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿಷ್ಠಾನವು ಅನೇಕ ಉಪಯುಕ್ತ ಕೆಲಸಗಳನ್ನು ಮಾಡುತ್ತಿದೆ.

ಈ ಕೆಲಸ ಎಲ್ಲ ಹಿರಿಯರ ಬಗ್ಗೆ ಆಗಬೇಕು. ಮತ್ತು ಅದು ಸರ್ಕಾರದ ಸಹಕಾರವನ್ನು ಬಳಸಿಕೊಂಡು ನಡೆಸಬಲ್ಲ ಸಾಹಿತ್ಯಾಸಕ್ತರ ಸಂಸ್ಥೆಯಾಗಬೇಕು. ಪೂರ್ತಿ ಸರ್ಕಾರವನ್ನೇ ನೆಚ್ಚಿದರೆ ಆಗದು. ನಾನು ಕೆಲವು ದಿನಗಳ ಹಿಂದೆ ಈ ಅಂಕಣದಲ್ಲಿ ಸರ್ಕಾರ ವಹಿಸಿಕೊಂಡ ಮೇಲೆ ಟಾಗೋರರ ಶಾಂತಿನಿಕೇತ, ಶ್ರೀನಿಕೇತಗಳು ಯಾವ ದುಸ್ಥಿತಿಯಲ್ಲಿವೆ ಎಂದು ಬರೆದಿದ್ದೆ. ದೃಶ್ಯಮಾಧ್ಯಮದಲ್ಲಿರುವವರ ಬಗ್ಗೆ, ನಟ-ನಟಿಯರ ಬಗ್ಗೆ ಚಿತ್ರ ಸಂಪುಟಗಳನ್ನು ತರುವುದು ಕೊಂಚ ಸುಲಭ. ಮೇರು ನಟ ಅಮಿತಾಭ್ ಬಚ್ಚನ್, ಡಾ. ರಾಜ್‌ಕುಮಾರ್ ಅಂಥವರ ಬಗ್ಗೆ ಅಪರೂಪದ ಆಲ್ಬಮ್‌ಗಳು ಪ್ರಕಟವಾಗಿವೆ.

ಯಾರೇ ಆಗಲಿ, ಖ್ಯಾತಿವಂತರಾದ ಮೇಲಿನ ಫೋಟೊಗಳು ದೊರಕಬಹುದು. ಆದರೆ ಹಿಂದಿನ ಸಾಹಿತಿಗಳ ಛಾಯಾಚಿತ್ರಗಳು, ಅದರಲ್ಲೂ ಬಾಲ್ಯಕಾಲದವು ದುರ್ಲಭ. ಅನೇಕರು ತೆಗೆಸಿಕೊಂಡ ಮೊತ್ತಮೊದಲ ಫೋಟೊ ಅವರ ಮದುವೆಯದ್ದಾಗಿರುತ್ತದೆ ! ಗುಂಪಿನ ಚಿತ್ರಗಳಲ್ಲಿ ಮುಖ್ಯರು, ಅಮುಖ್ಯರನ್ನು ಗುರುತಿಸುವುದು ಕಷ್ಟ. ನೆಗೆಟಿವ್ ರಕ್ಷಣೆಗಾಗಿ ಸ್ಟುಡಿಯೊಗಳನ್ನು ಅವಲಂಬಿಸಿದ್ದ ಕಾಲ ಅದು. ಈಗ ಎಲ್ಲರ ಕೈಗೆ ಡಿಜಿಟಲ್ ಕ್ಯಾಮೆರಾ ಬಂದು ಇನ್ನೊಂದು ಅತಿರೇಕ ಮುಟ್ಟಿದೆ. ಇನ್ನೊಬ್ಬರ ಖಾಸಗಿ ಕ್ಷಣಗಳ ಮೇಲೆರಗುವ ಆಯುಧವಾಗಿದೆ. ಆಪತ್ತಿನಲ್ಲಿರುವವರನ್ನು ರಕ್ಷಿಸದೆ ಅದನ್ನು ಸೆರೆ ಹಿಡಿಯುವ ಮೋಜಿನ ಸಲಕರಣೆಯಾಗಿದೆ.

ನಾವು ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ. ಕಲಿಯುತ್ತಿರುವಾಗ ಕೆಲವು ವಿದ್ಯಾರ್ಥಿಗಳು ತರಗತಿಯ ಬಿಡುವಿನ ಅವಧಿಯಲ್ಲಿ ಉದಯರವಿಗೆ ಹೋಗುತ್ತಿದ್ದೆವು. ನಮಗೆ ಶ್ರೀ ರಾಮಾಯಣ ದರ್ಶನಂ ಭಾಗಶಃ ಪಠ್ಯವಾಗಿತ್ತು. ಕುವೆಂಪು ಅವರು ಮನೆಯಂಗಳದಲ್ಲಿ ಚರ್ಚೆಗೆ ಸಿಗುತ್ತಿದ್ದರು. ಅವು ಎಷ್ಟು ಉಪಯುಕ್ತ ಕ್ಷಣಗಳೆಂದು ನಮಗೆ ಆಗ ಅರ್ಥವಾಗುತ್ತಿರಲಿಲ್ಲ. ಅವರ ಸಣ್ಣಕಥೆ ‘ಯಾರೂ ಅರಿಯದ ವೀರ’ವನ್ನು ನಾನು ಮೈಸೂರು ಆಕಾಶವಾಣಿಗಾಗಿ ರೇಡಿಯೊ ರೂಪಾಂತರಗೊಳಿಸಿದ್ದೆ.

ಹಸ್ತಪ್ರತಿಯ ಮೇಲೆ ಕುವೆಂಪು ಸಹಿ ಹಾಕಿದ್ದರು. ಅವರ ಹಸ್ತಾಕ್ಷರವಿರುವ ಶ್ರೀ ರಾಮಾಯಣ ದರ್ಶನಂ ಕೃತಿ ನನ್ನ ಬಳಿ ಈಗಲೂ ಇದೆ. ಆದರೆ ಅವರೊಟ್ಟಿಗೆ ಫೋಟೊ ತೆಗೆಸಿಕೊಳ್ಳಲಾಗಲಿಲ್ಲ. ಕಾರಣ ಆಗ ಫೋಟೊ ಒಂದು ಅಮೂಲ್ಯ ದಾಖಲೆ ಎಂದು ಹೊಳೆದಿರಲಿಲ್ಲ. ಸ್ಟುಡಿಯೊದವನನ್ನು ಕರೆದುಕೊಂಡು ಹೋಗಿ ಫೋಟೊ ತೆಗೆಸಿಕೊಳ್ಳುವ ಆರ್ಥಿಕ ಚೈತನ್ಯವೂ ಇರಲಿಲ್ಲ. ಕುವೆಂಪು ಚಿತ್ರಸಂಪುಟದಲ್ಲಿ ಭಾಗಿಯಾಗುವ ಅವಕಾಶ ತಪ್ಪಿಹೋಯಿತು.

ದೃಷ್ಟಿ ಸಾತತ್ಯವನ್ನು ಪ್ರತಿಪಾದಿಸಲು ಹತ್ತೊಂಬತ್ತನೆ ಶತಮಾನವು ಕಂಡುಹಿಡಿದ ಒಂದು ವೈಜ್ಞಾನಿಕ ಆವಿಷ್ಕಾರ ಈ ಫೋಟೊಗ್ರಫಿ. Phos ಮತ್ತು graphe ಗ್ರೀಕ್ ಪದಗಳ ಸಮನ್ವಯದ ವ್ಯುತ್ಪತ್ತಿಯೇ Photography. ಈ ಸ್ಥಿರ ಚಿತ್ರವು ಚಲಿಸತೊಡಗಿ ಚಲನಚಿತ್ರವಾಯಿತು. ಇದೆಲ್ಲ ಬರುವ ಮುನ್ನ ಚಿತ್ರಕಾರ ಎಳೆದ ಕಾಲ್ಪನಿಕ ಗೆರೆ ಮತ್ತು ತುಂಬಿಸಿದ ಬಣ್ಣಗಳೇ ನಮಗೆ ದಿಕ್ಕಾಗಿದ್ದವು. ಬಾಲ್ಯಕಾಲದ ಪಠ್ಯಗಳಲ್ಲಿ ಎಲ್ಲ ಚಿತ್ರಗಳೂ ಬಹುತೇಕ ಒಂದೇ ಬಗೆಯಲ್ಲಿದ್ದವು. ಪಂಪನಿಗೆ ವಿಭೂತಿ ಹಚ್ಚಿದರೆ ಅವನೇ ಬಸವಣ್ಣನಾಗುತ್ತಿದ್ದ. ಪುರಂದರದಾಸರ ಹೆಗಲಿಗೆ ಕಂಬಳಿ ನೇತು ಹಾಕಿದರೆ ಕನಕದಾಸರು.

ಕಂಬಳಿ ತೆಗೆದು ಜನಿವಾರ ಹಾಕಿದರೆ ಕುಮಾರವ್ಯಾಸ. ಕಿತ್ತೂರು ಚೆನ್ನಮ್ಮ ಮತ್ತು ಝಾನ್ಸಿ ರಾಣಿ ಒಂದೇ ರೀತಿ ಕಾಣಿಸುತ್ತಿದ್ದರು-–-ವಿಭೂತಿ ಹೊರತುಪಡಿಸಿ. ಆದರೆ ನಾವು ಅವರ ಗುಣಾತಿಶಯಗಳ ಆಧಾರದ ಮೇಲೆ ಅವರ ನಿರಾಕಾರ ವ್ಯಕ್ತಿತ್ವವನ್ನು ಊಹಿಸಿಕೊಳ್ಳಬೇಕಾಗಿತ್ತು. ಹಾಗಾದರೆ ಫೋಟೊಗ್ರಫಿ ನಮ್ಮ ನಿರಾಕಾರ ಕಲ್ಪನೆಗಳನ್ನೇ ಕೊಂದುಹಾಕಿತೆ? ಅದು ಕೊಟ್ಟ ಆಕಾರಗಳಿಗೆ ಮಾತ್ರ ನೇತು ಬಿದ್ದೆವೆ? ಹೀಗೆ ಸರಳೀಕರಿಸುವುದೂ ಕಷ್ಟ. ಫೋಟೊಗ್ರಫಿಯಲ್ಲೂ ಅನೇಕ ಅರ್ಥಸಾಧ್ಯತೆಗಳಿವೆ.

ಆಕಾರ-ನಿರಾಕಾರಗಳೆರಡೂ ಜತೆಯಾಗಿ ಸಾಗಿದರೇ ಸೊಗಸು. ಕುವೆಂಪು ಆಕಾರ. ಕುವೆಂಪು ಬರೆದದ್ದು ನಿರಾಕಾರ. ಅವರ ನೂರಹತ್ತನೇ ಜನ್ಮದಿನದ ನೆನಪಿನಲ್ಲಿ ತೆಗೆಯಬೇಕಾಗಿರುವ ತಕರಾರು ಎಂದರೆ ಕುವೆಂಪು, ಗಾಂಧಿ, ಅಂಬೇಡ್ಕರ್ ಅವರ ಭಾವಚಿತ್ರ ಹಾಕಿಕೊಳ್ಳುವ ಅನೇಕರು ಅವರನ್ನು ಓದುವುದಿಲ್ಲ ಏಕೆ ? ಕೆಲವರಿಗೆ ಸೋಮಾರಿತನ. ಕೆಲವರಿಗೆ ಅದು ತಮ್ಮ ಅಹಂಕಾರಕ್ಕೆ ಪೆಟ್ಟು ಕೊಡುತ್ತದೆ ಎಂಬ ಭಯ. ನಮ್ಮ ನೆನಪಿನ ಕೋಶ ಎಷ್ಟು ಬರಿದಾಗಿದೆ ಎಂದರೆ ಅಲ್ಲಿ ಬೇಕಾದ್ದು ಒಂದೂ ಇಲ್ಲ. ಅನಗತ್ಯವಾದದ್ದನ್ನು ಮಾತ್ರ ಪೇರಿಸಿಟ್ಟುಕೊಂಡು ಗುದ್ದಾಡಿಕೊಳ್ಳುತ್ತೇವೆ. ಇದು ಫೋಟೊಗ್ರಫಿಯಿಂದಾಗಿರುವ ಒಂದು ಅವಾಂತರ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT