ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಚಿತ್ಯ ಪ್ರಜ್ಞೆಯ ನ್ಯಾಯದಾನ....

Last Updated 1 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನನಗೆ ರಾಜಕಾರಣ ಬೇಸರ ಮೂಡಿಸಿದಾಗಲೆಲ್ಲ ಕ್ರಿಕೆಟ್‌ ಇಷ್ಟವಾಗುವಂತೆ, ನಮ್ಮ  ನ್ಯಾಯಾಂಗ ವ್ಯವಸ್ಥೆ ಬಗ್ಗೆ ಬರೆಯುವಾಗ ಚಲನಚಿತ್ರ ಸಂಗೀತವನ್ನೂ ಎಳೆದು ತರಲು ಬಯಸುವೆ.  ಹಿಂದಿ ಚಲನಚಿತ್ರಗಳ ಗೀತ ರಚನೆಕಾರ ಆನಂದ ಬಕ್ಷಿ ಅವರ ಪುಣ್ಯತಿಥಿಯ ಸಂದರ್ಭದಲ್ಲಿಯೇ ನಾನು ಇದನ್ನು ಬರೆಯುತ್ತಿರುವೆ.

ಹಿಂದಿ ಚಿತ್ರಜಗತ್ತಿನಲ್ಲಿನ ಬಕ್ಷಿ ಅವರ ಉತ್ತುಂಗದ ದಿನಗಳನ್ನು ಸ್ಮರಿಸಿಕೊಳ್ಳುತ್ತ, ಅದೇ ಸಮಯದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಚಿಂತಿಸುತ್ತಿದ್ದಾಗ, 1969ರಲ್ಲಿ ಅಶೋಕ್ ಕುಮಾರ್, ಜಿತೇಂದ್ರ  ಮತ್ತು  ಮಾಲಾ ಸಿನ್ಹಾ  ಅವರು ನಟಿಸಿದ್ದ ‘ದೋ ಭಾಯಿ’ ಚಿತ್ರಕ್ಕೆ ಬರೆದಿದ್ದ ಹಾಡಿನ ಸಾಲುಗಳು ನೆನಪಾದವು. ಅಶೋಕ್‌ ಕುಮಾರ್‌ ಮತ್ತು ಜಿತೇಂದ್ರ ಅವರಿಬ್ಬರೂ ಚಿತ್ರದಲ್ಲಿ ಸಹೋದರರ ಪಾತ್ರದಲ್ಲಿ ನಟಿಸಿದ್ದರು. ಒಬ್ಬ ನ್ಯಾಯಾಧೀಶ, ಇನ್ನೊಬ್ಬ ಪೊಲೀಸ್‌ ಅಧಿಕಾರಿಯಾಗಿದ್ದ ಚಿತ್ರಕಥೆಯನ್ನು ಸುಲಭವಾಗಿ ಊಹಿಸಬಹುದು. ಅಪರಾಧಿ ಒಬ್ಬನನ್ನು ಶಿಕ್ಷಿಸಬೇಕೊ ಅಥವಾ ಕ್ಷಮಿಸಬೇಕೊ ಎನ್ನುವ   ಉಭಯ ಸಂಕಟವು  ನ್ಯಾಯಾಧೀಶರನ್ನು ಶಾಶ್ವತವಾಗಿ ಕಾಡುತ್ತಿರುತ್ತದೆ. ಈ ಸಂದರ್ಭಕ್ಕೆಂದೇ ಆನಂದ ಬಕ್ಷಿ ಅವರು ಬರೆದಿದ್ದ ಹಾಡಿಗೆ ಮೊಹಮ್ಮದ್‌ ರಫಿ ದನಿ ನೀಡಿದ್ದಾರೆ. ‘ಇಸ್‌ ದುನಿಯಾ ಮೆ ಓ ದುನಿಯಾ ವಾಲೊ, ಬಡಾ ಮುಷ್ಕಿಲ್‌ ಹೈ ಇನ್ಸಾಫ್‌ ಕರ್ನಾ... ಬಡಾ  ಮುಷ್ಕಿಲ್‌  ಹೈ ಪರ್‌ ಮಾಫ್‌ ಕರ್ನಾ...  ಆರೋಪಿಗೆ ಕ್ಷಮಾದಾನ ನೀಡುವುದಕ್ಕಿಂತ ಶಿಕ್ಷೆ ವಿಧಿಸುವುದೇ ನ್ಯಾಯಾಧೀಶನ ಪಾಲಿಗೆ ಹೆಚ್ಚು ಸುಲಭದ ಮಾರ್ಗವಾಗಿರುತ್ತದೆ ಎಂಬರ್ಥವನ್ನು ಈ ಹಾಡು ಧ್ವನಿಸುತ್ತದೆ.

ನಿಜ ಬದುಕಿನಲ್ಲಿಯೂ ಸಂಪಾದಕನೊಬ್ಬನ ಅಂತಸ್ತು ಸಹಜವಾಗಿಯೇ ನ್ಯಾಯಾಧೀಶನ ಕೆಳಗೆ ಬರುತ್ತದೆ. ತೀರ್ಪು ನೀಡುವಾಗ ನ್ಯಾಯಾಧೀಶನೊಬ್ಬ ಎದುರಿಸುವ ಸಂದಿಗ್ಧತೆಯು ಪತ್ರಕರ್ತರ ಬದುಕಿಗೂ ಅನ್ವಯಿಸುತ್ತದೆ. ಯಾವುದೇ ಒಂದು ಸಂಗತಿಯನ್ನು ಪ್ರಕಟಿಸಲು ಸಂಪಾದಕನೊಬ್ಬ ಹಿಂಜರಿಕೆ ತೋರುವುದಕ್ಕಿಂತ ಪ್ರಕಟಿಸುವುದೇ ಆತನ ಪಾಲಿಗೆ  ಹೆಚ್ಚು ಸುಲಭದ ಮಾರ್ಗವಾಗಿರುತ್ತದೆ.

ಓದುಗರು ಬಾಯಿ ಚಪ್ಪರಿಸಿಕೊಂಡು ಓದಬಹುದಾದ ರಸವತ್ತಾದ ವರದಿಯೊಂದರ ಪ್ರಕಟಣೆಯ ಪ್ರಸ್ತುತತೆ ಹೆಚ್ಚು ಮನವರಿಕೆಯಾಗದ ಕಾರಣಕ್ಕೇನೆ ಸಂಪಾದಕನೊಬ್ಬ  ಅದನ್ನು  ಪ್ರಕಟಿಸಲು  ಹಿಂದೇಟು ಹಾಕುತ್ತಾನೆ.

1998ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ.ಎಸ್.ಆನಂದ್‌ ಅವರಿಗೆ ಸಂಬಂಧಿಸಿದ ವರದಿ ಕುರಿತು ನನಗಾದ ಅನುಭವವನ್ನು ನಾನು ಇಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ.

ಇಪ್ಪತ್ತು ವರ್ಷಗಳ ನಂತರ ನಾನು ಇಲ್ಲಿ ಕೆಲ ಗಣ್ಯರ ಹೆಸರುಗಳನ್ನು ಪ್ರಸ್ತಾಪಿಸಬೇಕಾಗಿದೆ. ಅದರ ಹಿಂದಿನ ಕಾರಣಗಳನ್ನು ಅರ್ಥೈಸಿಕೊಳ್ಳುವ ಕಾರಣಕ್ಕೆ ಅವರು ನನ್ನನ್ನು ಕ್ಷಮಿಸುವರು ಎಂದೂ ನಾನು ಭಾವಿಸಿರುವೆ.

ನಮ್ಮ ಸಮರ್ಥ ಕಾನೂನು ಸಂಪಾದಕರೊಬ್ಬರು ಅತ್ಯಂತ ಸೂಕ್ಷ್ಮ ಸ್ವರೂಪದ ತನಿಖಾ ವರದಿಯ ಬೆನ್ನು ಬಿದ್ದಿದ್ದರು. ಅದೇ ಆಗ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದ ನ್ಯಾಯಮೂರ್ತಿ ಎ.ಎಸ್‌.ಆನಂದ್‌ ಅವರ ಹಿಂದಿನ ಬದುಕಿನ ಬಗೆಗಿನ ತನಿಖಾ ವರದಿ ಅದಾಗಿತ್ತು.

ತಮ್ಮ ವೃತ್ತಿ ಬದುಕಿನಲ್ಲಿ ನೀಡಿದ ತೀರ್ಪುಗಳ ಸಂದರ್ಭದಲ್ಲಿ ಹಿತಾಸಕ್ತಿ ಸಂಘರ್ಷಗಳನ್ನು ಕಡೆಗಣಿಸಿದ, ತಮಗೆ ಬಂದ ಕೊಡುಗೆಗಳ ಬಗ್ಗೆ ಪಾರದರ್ಶಕತೆ ತೋರದ, ತಮಗೆ ಸೇರಿದ ಭೂಮಿಯ ಗೇಣಿದಾರ ಪೂರೈಸಿದ ಆಹಾರ ಧಾನ್ಯಗಳಿಗೆ ಕಡಿಮೆ ಹಣ ಪಾವತಿಸಿ ಜಿಪುಣತನ ತೋರಿಸಿದ ನಿದರ್ಶನಗಳ ಸುತ್ತ ಈ ತನಿಖಾ ವರದಿ ಕೇಂದ್ರೀಕೃತಗೊಂಡಿತ್ತು. ವರದಿಯಲ್ಲಿನ ಪ್ರತಿಯೊಂದು ಸಂಗತಿಯನ್ನೂ ಕೂಲಂಕಷವಾಗಿ ಪರಿಶೀಲಿಸಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿತ್ತು.

ನನ್ನ ಪಾಲಿಗೆ ಅದೊಂದು ಸ್ಫೋಟಕ ಸ್ವರೂಪದ ವರದಿಯಾಗಿತ್ತು. ಆ ದಿನಗಳಲ್ಲಿ ಪ್ರಖ್ಯಾತರಾಗಿದ್ದ ಹಲವು ನ್ಯಾಯವಾದಿಗಳ ಸಲಹೆ ಪಡೆಯಲು ನಾನು ಮುಂದಾಗಿದ್ದೆ. ವರದಿ ಪ್ರಕಟಿಸುವ ಅಥವಾ ಪ್ರಕಟಿಸದಿರುವ ಕುರಿತು ಹತ್ತು ನ್ಯಾಯವಾದಿಗಳ ಪೈಕಿ 2:8 ಅಭಿಪ್ರಾಯ ವ್ಯಕ್ತಪಡಿಸಿದ್ದರು.  ಬಹುಸಂಖ್ಯಾತರು (8 ಮಂದಿ) –  ನಿಮಗೆ ಸಿಕ್ಕಿರುವ ಮಾಹಿತಿಗಳೆಲ್ಲ ಕಾನೂನುಬದ್ಧ ಅಥವಾ ವಾಸ್ತವಿಕ ಸಂಗತಿಯಾಗಿರಲಿಕ್ಕಿಲ್ಲ ಎಂದು ಪ್ರತಿಪಾದಿಸಿದ್ದರು. ‘ಮುಗ್ಧ ವ್ಯಕ್ತಿಯೊಬ್ಬರ ಮನ ನೋಯಿಸುವ ಮತ್ತು ಈ ಮೂಲಕ ನಮ್ಮ ಅತ್ಯಂತ ಶ್ರೇಷ್ಠ ಸಂಸ್ಥೆಯಾಗಿರುವ ನ್ಯಾಯಾಂಗದ ಘನತೆಗೆ ಕುಂದು ತರುವ ಪ್ರಯತ್ನ ಮಾಡಬೇಡಿ’ ಎಂದು ಸಲಹೆ ನೀಡಿದ್ದರು. ಇಬ್ಬರು ಮಾತ್ರ– ‘ವರದಿ ಪ್ರಕಟಿಸಲು ಧೈರ್ಯದಿಂದ ಮುನ್ನಡೆಯಿರಿ.

ವಾಸ್ತವಾಂಶಗಳಲ್ಲಿ ಸತ್ಯ ಅಡಗಿರುತ್ತದೆ. ಅದಕ್ಕೆ ತರ್ಕ ಅನ್ವಯಿಸಲು ಹೋಗಬೇಡಿ’ ಎಂದು ಸಲಹೆ ನೀಡಿದ್ದರು. ಸಾರಾಸಾರ ವಿಚಾರಿಸದೆ ಅವಸರಿಸಬೇಡಿ ಎಂದೂ ಕೆಲವರು ಕಿವಿಮಾತು ಹೇಳಿದ್ದರು. ‘ನಾವು ವರದಿ ಪ್ರಕಟಿಸಿದರೆ ನ್ಯಾಯಮೂರ್ತಿಗಳು ನಮಗೆ ಏನು ಮಾಡಬಹುದು? ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದೇ?’ ಎಂದು ನಾನು ಪ್ರಶ್ನಿಸಿದ್ದೆ. ‘ನ್ಯಾಯಮೂರ್ತಿಗಳು ಹಾಗೆ ಮಾಡಬಹುದು. ಅವಮಾನ ಸಹಿಸದೆ ಅತಿರೇಕದ ನಿರ್ಧಾರ ಕೈಗೊಂಡು ಆತ್ಮಹತ್ಯೆ ಯತ್ನವನ್ನೂ ನಡೆಸಬಹುದು’ ಎಂದು ನ್ಯಾಯವಾದಿಯೊಬ್ಬರು ಹೇಳಿದ್ದರು. ಅದನ್ನು ಕೇಳಿ ನಾನು ತಲ್ಲಣಿಸಿ ಹೋದೆ.

ಕಾನೂನು ಪಂಡಿತರಲ್ಲಿ ಒಬ್ಬರಾಗಿದ್ದ ಅವರ ಈ ಯಾವುದೇ ಉದ್ದೇಶಪೂರ್ವಕವಲ್ಲದ ಅಭಿಪ್ರಾಯವು ನಮ್ಮ ಆಲೋಚನೆಗೆ ವ್ಯತಿರಿಕ್ತವಾಗಿತ್ತು. ನಾವು ಮತ್ತೆ ನಮ್ಮ ತನಿಖಾ ವರದಿ ಬಗ್ಗೆ ಪುನರಾವಲೋಕನ ಮಾಡಿದೆವು.  ಆಗ, ನ್ಯಾಯಮೂರ್ತಿ ಆನಂದ್‌ ಅವರ ಪ್ರತಿಕ್ರಿಯೆಯೇ ವರದಿಯಲ್ಲಿ ಇಲ್ಲದಿರುವುದು ನಮ್ಮ ಗಮನಕ್ಕೆ ಬಂದಿತು. ಈ ಬಗ್ಗೆ ಅವರ ಪ್ರತಿಕ್ರಿಯೆ ಪಡೆಯಲು ನಡೆಸಿದ ಪ್ರಯತ್ನಗಳಿಗೆ ಫಲ ಸಿಗಲಿಲ್ಲ. ಸಿಜೆಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ನ್ಯಾಯಮೂರ್ತಿ ಆನಂದ್‌ ಅವರು ಮಾಧ್ಯಮಗಳ ಜತೆ ಮಾತನಾಡಲು ಅವಕಾಶ ಇಲ್ಲ ಎಂದು ಅವರ ಅಧಿಕೃತ ಕಚೇರಿ ವಿವರಣೆ ನೀಡಿತ್ತು.  ಆಗ ನಾವು ನಮ್ಮ ಆತ್ಮರಕ್ಷಣೆಯ ಮೊರೆ ಹೋಗಬೇಕಾಯಿತು.

ಸಾರ್ವಜನಿಕ ಬದುಕಿನಲ್ಲಿ ನಾನು ಅಪಾರವಾಗಿ ಗೌರವಿಸುವ ಇಬ್ಬರು ಗಣ್ಯ ವ್ಯಕ್ತಿಗಳನ್ನು ನಾನು ಸಂಪರ್ಕಿಸಿದೆ.  ಅಟಲ್‌ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಸುಷ್ಮಾ ಸ್ವರಾಜ್‌ ಮತ್ತು ಅರುಣ್‌ ಶೌರಿ ಅವರಲ್ಲಿ ನಾನು ಈ ಬಗ್ಗೆ ಪ್ರಶ್ನಿಸಿದೆ. ಅವರಿಬ್ಬರೂ ದೀರ್ಘ ಸಮಯದಿಂದ ನ್ಯಾಯಮೂರ್ತಿ ಆನಂದ್‌ ಮತ್ತು ಅವರ ಕುಟುಂಬದ ಸದಸ್ಯರನ್ನು ಬಲ್ಲವರಾಗಿದ್ದರು. ಆನಂದ್‌ ಅವರು ಅಪ್ರಾಮಾಣಿಕವಾದ ಕೃತ್ಯ ಎಸಗಿದ್ದಾರೆಂದು ನಂಬಲು ಅವರು ಸಿದ್ಧರಿರಲಿಲ್ಲ.  ನಮ್ಮ ಬಳಿ ಇರುವ ತನಿಖಾ ವರದಿ ನಂಬಲರ್ಹವಾಗಿದೆ ಎನ್ನುವುದನ್ನು ನಾನು ಅವರ ಗಮನಕ್ಕೆ ತಂದೆ. ಒಂದು ವೇಳೆ ನಮ್ಮ ಬಳಿ ಇರುವ ವಿವರಗಳು ತಪ್ಪಾಗಿದ್ದರೆ, ಆನಂದ್‌ ಅವರು ನಮಗೆ ಮನವರಿಕೆ ಮಾಡಿಕೊಡಲಿ ಎಂದೂ ನಾನು ಮನವಿ ಮಾಡಿಕೊಂಡಿದ್ದೆ.

ಸುಷ್ಮಾ ಸ್ವರಾಜ್‌ ಅವರು ನನಗೆ ದೂರವಾಣಿ ಕರೆ ಮಾಡಿ, ನಾನು ನ್ಯಾಯಮೂರ್ತಿ ಆನಂದ್‌ ಅವರನ್ನು ಭೇಟಿಯಾಗಬಹುದು ಎಂದು ಸೂಚಿಸಿದರು. ನನ್ನ ಕರೆಗೆ ಸ್ಪಂದಿಸಿದ ಅವರು, ಯಾವುದೂ ಅಧಿಕೃತವಾಗಿರದು ಎನ್ನುವ ನಿಬಂಧನೆಯೊಂದಿಗೆ ಎಲ್ಲ ದಾಖಲೆಗಳೊಂದಿಗೆ  ನನ್ನನ್ನು ಭೇಟಿಯಾಗಲು ಸಮ್ಮತಿಸಿದರು.

ನಂತರದ ಬೆಳವಣಿಗೆಗಳನ್ನು ನಾನು ಇಲ್ಲಿ ಸಂಕ್ಷಿಪ್ತವಾಗಿ ದಾಖಲಿಸಿರುವೆ. ಅವರು ನನ್ನನ್ನು ಅನುಮಾನದಿಂದಲೇ ಆತ್ಮೀಯವಾಗಿ  ಬರಮಾಡಿಕೊಂಡರು. ಪ್ರತಿಯೊಂದು ಆರೋಪದ ಕುರಿತೂ ಇಬ್ಬರ ಮಧ್ಯೆ ವಿವರವಾಗಿ ಮಾಹಿತಿ ವಿನಿಮಯ ನಡೆಯಿತು. ಅವರು ತಮ್ಮೊಂದಿಗೆ ಚರ್ಮದ ಬ್ಯಾಗೊಂದನ್ನು ತಂದಿದ್ದರು. ಅದರಲ್ಲಿ ದಾಖಲೆಗಳೆಲ್ಲ ಇದ್ದವು. ತೆರಿಗೆ ವಿವರ ಸಲ್ಲಿಕೆ, ಭತ್ತ ಮಾರಾಟದ ಸ್ವೀಕೃತಿ ಪತ್ರ, ತಮ್ಮ ಮಕ್ಕಳ ಮದುವೆ ಆಹ್ವಾನ ಪತ್ರ, ಮಕ್ಕಳ ಮದುವೆ ಸಂದರ್ಭದಲ್ಲಿ ಉಡುಗೊರೆ ರೂಪದಲ್ಲಿ ತಮಗೆ ಸಂದಾಯವಾದ ಹಣದ ಬಗ್ಗೆ ಕೋರ್ಟ್‌ಗೆ ಮತ್ತು ತೆರಿಗೆ ಇಲಾಖೆಗೆ ನೀಡಿದ ಮಾಹಿತಿಗಳನ್ನೆಲ್ಲ ನನಗೆ ತೋರಿಸಿದರು. ಅವರು ನೀಡಿದ ಮಾಹಿತಿಯನ್ನೆಲ್ಲ ತೆಗೆದುಕೊಂಡು ನಾನು ಮರಳಿದೆ. ಆ ಎಲ್ಲ ದಾಖಲೆಗಳನ್ನು ನೋಡಿದ ನಂತರ ನನ್ನ ಮನಸ್ಸಿನಲ್ಲಿ ತೀವ್ರ ಸ್ವರೂಪದ ಹೊಯ್ದಾಟ ನಡೆದು, ತಕ್ಷಣಕ್ಕೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.

ನಮ್ಮಲ್ಲಿ ಮೂಡಿದ್ದ ಅನೇಕ ಅನುಮಾನಗಳಿಗೆ ಸಮರ್ಪಕ ಉತ್ತರ ನೀಡಿ ನಮಗೆ ಮನವರಿಕೆ ಮಾಡಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದರು. ತಮ್ಮ ಗೇಣಿದಾರ ಪೂರೈಸಿದ್ದ ಭತ್ತದ ಹಣವನ್ನು ಮಾತ್ರ ಅವರು ಮರಳಿಸದೆ ಜಿಪುಣತನ ತೋರಿದ್ದರು.  ಆ ಸಂದರ್ಭದಲ್ಲಿ ಅದರ ಮೊತ್ತ ಹೆಚ್ಚೂಕಡಿಮೆ ಮೂರ್ನಾಲ್ಕು ಸಾವಿರ ರೂಪಾಯಿಗಳಷ್ಟಿತ್ತು. ಬಹುಶಃ ಅದೊಂದು ಲೆಕ್ಕಪತ್ರ ಮಾಡುವಾಗಿನ ತಪ್ಪು ಆಗಿರಲೂಬಹುದಿತ್ತು. ಕುಂದಿದ ಆತ್ಮವಿಶ್ವಾಸದೊಂದಿಗೆ ನಾನು ಮರಳಿದ್ದೆ. ನನ್ನ ವೃತ್ತಿ ಬದುಕಿನಲ್ಲಿ  ಭಾರಿ ಸುದ್ದಿ ಮಾಡುವ (ಸ್ಕೂಪ್‌)  ಸುವರ್ಣ ಅವಕಾಶವೊಂದು ನನ್ನ ಕೈತಪ್ಪಿತ್ತು. ನನ್ನೆಲ್ಲ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿತ್ತು. ಗೇಣಿದಾರನಿಗೆ ಭತ್ತದ ಹಣ ಪಾವತಿಸದ ಅನುಮಾನಾಸ್ಪದ ವಹಿವಾಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯೊಬ್ಬರನ್ನು ಹೀಗಳೆಯಲು ಯಾವುದೇ ದಿನಪತ್ರಿಕೆ ಮುಂದಾಗಲಿಲ್ಲ.

ನಮ್ಮಿಬ್ಬರಿಗೂ ತುಂಬ ನೋವಿನ ಮತ್ತು ಪೇಚಿನದಾದ ಭೇಟಿ ಬಗ್ಗೆ ನಾನು ಇಲ್ಲಿ ಉಲ್ಲೇಖಿಸಿರುವುದಕ್ಕೆ ನಿವೃತ್ತ ನ್ಯಾಯಮೂರ್ತಿ ಆನಂದ್ ಅವರು  ನನ್ನನ್ನು ಕ್ಷಮಿಸುವರು ಎಂದೂ ನಾನು ಆಶಿಸುವೆ.

‘ಪ್ರತಿಯೊಂದು ವಿವರ ನಿಮ್ಮ ಮುಂದೆ ಇದೆ. ನಾನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿರುವೆ. ನೀವು ಪ್ರಸ್ತಾಪಿಸಿದ ಪ್ರತಿಯೊಂದು ಪ್ರಶ್ನೆಗೆ ನಾನು ಉತ್ತರಿಸಿರುವೆ. ಆದಾಗ್ಯೂ ನೀವು ವರದಿ ಪ್ರಕಟಿಸಲು ಇಚ್ಛಿಸಿದರೆ ನಿಮಗೆ ಸರಿಕಂಡಂತೆ ಮಾಡಬಹುದು.  ಅದರಿಂದ ನೀವು ನನ್ನ ಮನಸ್ಸನ್ನಷ್ಟೇ ಘಾಸಿಗೊಳಿಸುವುದಿಲ್ಲ. ಜತೆಗೆ ನ್ಯಾಯಾಂಗದ ಉನ್ನತ ಸಂಸ್ಥೆಯನ್ನೂ ಘಾಸಿಗೊಳಿಸುವಿರಿ’ ಎಂದು ಆನಂದ್‌ ಹೇಳಿದ್ದರು. ಆಗ ಅವರ ಕಣ್ಣಂಚು ತೇವವಾಗಿದ್ದನ್ನು ಕಂಡು ನಾನು ತೀವ್ರ ಮುಜುಗರಪಟ್ಟಿದ್ದೆ.

ಇಪ್ಪತ್ತು ವರ್ಷಗಳ ಕಾಲ ಗುಟ್ಟಾಗಿ ಇರಿಸಿಕೊಂಡಿದ್ದ ಈ ಘಟನೆಯನ್ನು ಈಗ ಬಹಿರಂಗಪಡಿಸಿ, ನೀವು ನನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ದ್ರೋಹ ಎಸಗಿರುವುದಕ್ಕೆ ನಾನು ಮತ್ತೊಮ್ಮೆ ಕ್ಷಮೆ ಕೇಳುವೆ.

ತನಿಖಾ ವರದಿಯನ್ನು ಕೊನೆಗೂ ಕೈಬಿಡಲಾಯಿತು. ನನ್ನ ವೃತ್ತಿ ಬದುಕಿನಲ್ಲಿ ಕೈಗೊಂಡ ಇದೇ ಬಗೆಯ ಹಲವು ನಿರ್ಧಾರಗಳ ಪೈಕಿ ಇದೊಂದು ಅತ್ಯಂತ ಕಠಿಣ ನಿರ್ಧಾರವಾಗಿ ಉಳಿದಿದೆ.

ಈ ಬಗ್ಗೆ ನಾನು ಆನಂತರವೂ ಸಾಕಷ್ಟು ಬಾರಿ ಪರಾಮರ್ಶೆ ಮಾಡಿರುವೆ. ರಾಜಕಾರಣಿ ಅಥವಾ ಸರ್ಕಾರಿ ನೌಕರರ ಬಗ್ಗೆಯೂ ನಾವು ಇದೇ ಬಗೆಯಲ್ಲಿ ಸಹನೆ, ಮುಕ್ತ ಮನಸ್ಸು ಮತ್ತು ಸ್ವಯಂ ನಿರಾಕರಣೆಯ ಧೋರಣೆಯಿಂದ ಇರಲು ಸಾಧ್ಯವೇ?  ನಾವು ನ್ಯಾಯಾಂಗವನ್ನು ಗೌರವಿಸುತ್ತಿದ್ದರಿಂದ ಸಿಜೆಐ ಅವರ ಅಭಿಪ್ರಾಯ ಪಡೆಯಲು ದೀರ್ಘ ಸಮಯ ತೆಗೆದುಕೊಂಡೆವು.

ನ್ಯಾಯಾಂಗವು ನಮ್ಮ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಎಡಲ್‌ಮನ್‌– ಡಬ್ಲ್ಯುಇಎಫ್‌ ನಡೆಸಿದ ವಾರ್ಷಿಕ ಸಮೀಕ್ಷೆ ಪ್ರಕಾರ, ವಿಶ್ವದಾದ್ಯಂತ ಸರ್ಕಾರದ ವಿಶ್ವಾಸಾರ್ಹತೆಯು ಅತ್ಯಂತ ಕೆಳಮಟ್ಟದಲ್ಲಿ ಇದೆ. ‘ಜಾಲಿ ಎಲ್‌ಎಲ್‌ಬಿ–2’ ಹಿಂದಿ ಚಲನಚಿತ್ರದಲ್ಲಿ ನ್ಯಾಯಾಧೀಶರ ಪಾತ್ರ  ನಿರ್ವಹಿಸಿದ ಸೌರಭ್‌ ಶುಕ್ಲಾ ಅವರು ಕೋರ್ಟ್‌ನಲ್ಲಿ ಆಡಿದ ಮಾತುಗಳು ಹೀಗಿವೆ. ‘ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕಷ್ಟು ದೋಷಗಳಿವೆ.  ನೋಡಿ ಈ ಕೋರ್ಟ್‌ ಆವರಣ ಎಷ್ಟು ಗಲೀಜಾಗಿದೆ. ಪ್ರತಿದಿನ ಬೆಳಿಗ್ಗೆ ಇಲ್ಲಿಗೆ ನ್ಯಾಯ ನಿರ್ಣಯ ಮಾಡಲು ಬರುವುದಕ್ಕೆ ನನಗೆ ಮನಸ್ಸೇ ಬರುವುದಿಲ್ಲ. ಸಂಜೆ 6 ಗಂಟೆಯವರೆಗೆ ಇಲ್ಲಿ ಇರಲೂ ನನಗೆ ಮನಸ್ಸಾಗುವುದಿಲ್ಲ. ಹೀಗಾಗಿ ನಾನು ಬೇಗನೆ ಮನೆಗೆ ಮರಳಲು ಇಷ್ಟಪಡುವೆ’ ಎಂದು ಹೇಳುತ್ತಾರೆ.

ಇಬ್ಬರು ಎದುರಾಳಿಗಳು ಪರಸ್ಪರ ಹೊಡೆದಾಟದಲ್ಲಿ ತೊಡಗಿದಾಗ, ‘ನಾನು ನಿನ್ನ ಕೋರ್ಟ್‌ನಲ್ಲಿ ನೋಡಿಕೊಳ್ಳುವೆ’ ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾರೆ. ತಮ್ಮ ಗೋಳು, ಸಮಸ್ಯೆಗಳು ಏನೇ ಇರಲಿ, ನ್ಯಾಯಾಂಗವು ತಮಗೆ ನ್ಯಾಯ ಒದಗಿಸಿಕೊಡುತ್ತದೆ ಎನ್ನುವ ನಂಬಿಕೆ ಜನರಲ್ಲಿ ಇರುವುದೇ ಇದಕ್ಕೆ ಕಾರಣ.
ಈ ಎಲ್ಲ ಕಾರಣಕ್ಕೆ ನಮ್ಮ ಉನ್ನತ ನ್ಯಾಯಾಂಗವು ಈ ವಿಸ್ಮಯಕಾರಿಯಾದ ಮತ್ತು ವಿಶ್ವಾಸಾರ್ಹವಾದ ಸಂಸ್ಥೆಯ ಪಾವಿತ್ರ್ಯವನ್ನು ಕಾಪಾಡಿಕೊಂಡು ಅದನ್ನು  ಇನ್ನಷ್ಟು ಹೆಚ್ಚಿಸುವ ಬಗ್ಗೆ ತನ್ನಷ್ಟಕ್ಕೆ ತಾನೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಕಾನೂನುಬದ್ಧ ಅಧಿಕಾರವೇ ಇಲ್ಲದ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಿ, ಉಸಿರಾಡುವ ಗಾಳಿಯ ಗುಣಮಟ್ಟ, ಅಕ್ರಮ ಕಟ್ಟಡ ನಿರ್ಮಾಣ, ಕ್ರಿಕೆಟ್‌ವರೆಗೆ ಆಡಳಿತಾತ್ಮಕ ವಿಷಯಗಳನ್ನು ನಿಗದಿ

ಪಡಿಸುವುದು ಎಷ್ಟರಮಟ್ಟಿಗೆ ಸರಿ? ಬಹಿರಂಗವಾಗಿ ಮಾತನಾಡಿ, ಸಿಟ್ಟಿನಿಂದ ವರ್ತಿಸಿ, ಕಿರಿಕಿರಿ ಉಂಟು ಮಾಡಿದರೆ ನ್ಯಾಯಾಂಗದ ಘನತೆ ಹೆಚ್ಚುವುದೇ?
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಲ್ಲಿ ಶೇ 70ರಷ್ಟು ಜನರು ಸರ್ಕಾರದ ನ್ಯಾಯಮಂಡಳಿ, ಕೋರ್ಟ್‌ ನೇಮಿಸಿದ ಸಮಿತಿಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ ಎನ್ನುವುದು ಕಾನೂನು ನೀತಿಗೆ ಸಂಬಂಧಿಸಿದ ಸ್ವಯಂ ಸೇವಾ ಸಂಘಟನೆ ‘ವಿಧಿ’ (Vidhi) ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿರುವುದು ಚರ್ಚಾಸ್ಪದವಲ್ಲವೆ?

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 70ರವರೆಗೆ ವಿಸ್ತರಿಸಬೇಕು ಎನ್ನುವ  ಆಲೋಚನೆಗೆ ನನ್ನ ಬೆಂಬಲ ಇದೆ. ಹೈಕೋರ್ಟ್‌ ನ್ಯಾಯಮೂರ್ತಿಗಳ ಸೇವಾ ನಿವೃತ್ತಿ ವಯಸ್ಸು 60, ಸುಪ್ರೀಂ ಕೋರ್ಟ್‌ಗೆ 65 ಎಂದು ನಿಗದಿ ಮಾಡಿರುವುದನ್ನು  ವಿಸ್ತರಿಸಬಹುದು.

ನಿವೃತ್ತ ಸಿಜೆಐ ರಾಜ್ಯಪಾಲರಾಗಿ ನೇಮಕವಾಗಬಹುದೇ? ಯಾವುದೇ ಸೂಕ್ಷ್ಮ ವಿಷಯದ ಬಗ್ಗೆಯೂ  ಚರ್ಚೆ ನಡೆಸಬಹುದಾಗಿದೆ. ಸ್ಫೋಟಕ ಸುದ್ದಿ ಪ್ರಕಟಿಸಲು ವಾರಗಟ್ಟಲೇ ಕಾದು ಆನಂತರ ಅದನ್ನು ಕಸದ ಬುಟ್ಟಿಗೆ ಎಸೆಯುವ ಪ್ರವೃತ್ತಿ ಎದುರಾದಾಗಲೆಲ್ಲ, ಆನಂದ ಬಕ್ಷಿ ಅವರು ಬರೆದ ಹಾಡು ನನಗೆ ಮತ್ತೆ ಮತ್ತೆ ನೆನಪಾಗುತ್ತದೆ...

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT