ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಂಗ್‌ಜೇಬ್‌ನ ಬಂಗಲೆಯಲ್ಲಿ ಡಿ.ಸಿ. ಸಾಹೇಬರು!

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಒಂದು ಕಡುಬೇಸಿಗೆ ಮಧ್ಯಾಹ್ನ ನಾನು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ರಾಮಕೃಷ್ಣ, ಬಾದಾಮಿ ತಾಲ್ಲೂಕಿನ ಅಂಚಿನ ಒಂದು ಹಳ್ಳಿಗೆ ಕಾರ್ಯನಿಮಿತ್ತ ಭೇಟಿ ನೀಡಿದ್ದೆವು. ಅದೇ ಸಮಯಕ್ಕೆ ಇಂಡಿ ತಾಲ್ಲೂಕಿನ ಭೀಮಾ ನದಿತೀರದ ಒಂದು ಹಳ್ಳಿಯಲ್ಲಿ ಅಗ್ನಿ ಅನಾಹುತವಾಗಿದೆಯೆಂದೂ ಹಲವಾರು ಮನೆಗಳು ಮತ್ತು ಗುಡಿಸಲುಗಳು ಅದಕ್ಕೆ ಆಹುತಿ ಆಗಿದ್ದರಿಂದ ಜನ ಸಂಕಷ್ಟದಲ್ಲಿ ಇದ್ದಾರೆಂದೂ ವೈರ್‌ಲೆಸ್ ಮಾಹಿತಿ ಬಂತು. ಆಗ ಇನ್ನೂ ವಿಭಜನೆ ಆಗದಿದ್ದರಿಂದ ವಿಜಾಪುರ ದೊಡ್ಡ ಜಿಲ್ಲೆಯಾಗಿತ್ತು. ಜಿಲ್ಲೆಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಲುಪಲು ಸುಮಾರು 200 ಕಿ.ಮೀ. ಕ್ರಮಿಸಬೇಕಿತ್ತು. ವಿಜಾಪುರದ ಅಂದಿನ ರಸ್ತೆಗಳ ದುಃಸ್ಥಿತಿಯಲ್ಲಿ ಈ ದೂರವನ್ನು ಕ್ರಮಿಸಲು 4-6 ಗಂಟೆಗಳ ಕಾಲಾವಕಾಶ ಬೇಕಾಗಿತ್ತು.

ಇಂಡಿಯಲ್ಲಿ ಅಸಿಸ್ಟಂಟ್ ಕಮಿಷನರ್ ಇದ್ದರೂ ಅವರಿಗೆ ನೆರವಾಗಲು ವಿಜಾಪುರದ ಅಂದಿನ ಅಸಿಸ್ಟಂಟ್ ಕಮಿಷನರ್ ರಾಕೇಶ್ ಸಿಂಗ್ ಮತ್ತು ಸಹಾಯಕ ಅಧಿಕಾರಿ ಕೆ.ಮಲ್ಲಿನಾಥ್ ಅವರನ್ನು ತಕ್ಷಣ ಆಹಾರ ಸಾಮಗ್ರಿ, ಸೀರೆ, ಧೋತಿ ಮತ್ತಿತರ ಸರಂಜಾಮುಗಳ ಜೊತೆ ಸ್ಥಳಕ್ಕೆ ಧಾವಿಸುವಂತೆ ಸೂಚಿಸಿದೆ. ನಾವು ಸಹ, ಅಗ್ನಿ ಆಕಸ್ಮಿಕ ಸಂಭವಿಸಿದ ಹಳ್ಳಿ ಕಡೆಗೆ ಹೊರಟೆವು.  ಅವಘಡಕ್ಕೆ ಒಳಗಾದ ಗ್ರಾಮ ತಲುಪುವ ವೇಳೆಗೆ ಮುಸ್ಸಂಜೆಯಾಗಿತ್ತು.

ಘಟನಾ ಸ್ಥಳ ತಲುಪಿದ ತಕ್ಷಣ ಪರಿಹಾರದ ಸಾಮಗ್ರಿಗಳನ್ನು ವಿತರಿಸಲು ಆರಂಭಿಸಿದೆವು. ಆಹಾರ ವಸ್ತುಗಳು, ಸೀರೆ, ಧೋತಿ, ಬೆಡ್‌ಶೀಟ್ ಇತ್ಯಾದಿಗಳನ್ನು ವಿತರಣೆ ಮಾಡುತ್ತಿದ್ದೆವು. ಒಬ್ಬ ವೃದ್ಧೆ ಒಂದು ಜೊತೆ ಬಟ್ಟೆ ಪಡೆದ ಮೇಲೆ ಇನ್ನೊಂದು ಜೊತೆ ಬೇಕೆಂದು ಕೇಳಿದಳು. `ಯಾರಿಗೆ ತಾಯಿ?' ಎಂದು ಕೇಳಿದೆ. `ನನ್ನ ಮೊಮ್ಮಗಳು ಅನಾಥೆ. ನಾನೇ ಸಾಕಿದ್ದೇನೆ. ಬೇರೆ ಯಾರೂ ದಿಕ್ಕಿಲ್ಲ' ಎಂದಳು.

ಒಮ್ಮೆ ಆಕೆಯನ್ನು ದಿಟ್ಟಿಸಿ ನೋಡಿದೆ. ಸುಮಾರು 60-65ರ ವಯಸ್ಸು. ಇನ್ನು ಎಲ್ಲಿಯೂ ಹೊಲಿಯಲು ಸಾಧ್ಯವಿಲ್ಲದಂತೆ ತೇಪೆ ಹಾಕಲಾಗಿದ್ದ ಸೀರೆ, ಬಡಕಲು ದೇಹ, ಸುಕ್ಕುಗಟ್ಟಿದ ಮುಖ. ನನಗೆ ಬಡತನದ ಸಾಕ್ಷಾತ್ ದರ್ಶನವಾಗಿತ್ತು. ನಾನು ತುಸು ಆಸಕ್ತಿ ತೋರಿಸಿದ್ದರಿಂದ ಆಕೆ ಮುಂದುವರಿಸಿದಳು- `ನನ್ನ ಅಳಿಯ ನನ್ನ ಮಗಳನ್ನ ಬಿಟ್ಟು ಎಲ್ಲಿಯೋ ನಾಪತ್ತೆಯಾದ. ತಬ್ಬಲಿಯನ್ನು ಬಿಟ್ಟು ನನ್ನ ಮಗಳು ಸತ್ತುಹೋದಳು. ಅವಳಿಗೀಗ 12 ವರ್ಷ. ಅವಳ ಮದುವೆಗಾಗಿ 700 ರೂಪಾಯಿ ಕೂಡಿಟ್ಟಿದ್ದೆ. ಉರಿವ ಬೆಂಕಿಯಲ್ಲಿ ಹಣವೂ ಸುಟ್ಟು ಬೂದಿಯಾಯಿತು' ಎಂದು ಕಣ್ಣೀರಾದಳು. ಅವಳ ಮೊಮ್ಮಗಳು ಸಹ ಬಂದು ನಿಂತಳು. ಅಲ್ಲಿಯತನಕ ನಾನು ಕಡು ಬಡತನದ ಅಂತಹ ಹೃದಯವಿದ್ರಾವಕ ನೋಟವನ್ನು ಕಂಡಿರಲಿಲ್ಲ. ನಿರಾಶ್ರಿತರಾಗಿದ್ದವರೆಲ್ಲ ಬಡವರೇ. ಆದರೆ, ಆ ವೃದ್ಧೆಯ ಕಣ್ಣಲ್ಲಿದ್ದ ದೈನ್ಯತೆ, ಅಸಹಾಯಕತೆ ನನ್ನ ಮನವನ್ನು ಕಲಕಿತು. ಅವಳಿಗೆ ಎರಡು ಜೊತೆ ಬಟ್ಟೆ ಕೊಟ್ಟೆ. ಅಲ್ಲಿಯೇ ಸ್ವಲ್ಪ ಹಣವನ್ನು ಸಂಗ್ರಹಿಸಿ ನೀಡಿದೆವು. ಬಾಳ ಸಂಧ್ಯೆಯಲ್ಲಿದ್ದ ಆ ಜೀವ ಅದನ್ನು ಪಡೆದ ಮೇಲೆ ಕೈಮುಗಿದು ಕೃತಜ್ಞತೆ ಅರ್ಪಿಸಿದ ರೀತಿ ಎಂದಿಗೂ ಮರೆಯಲಾಗದ್ದು.
ನನ್ನನ್ನು 1991ರಲ್ಲಿ ವಿಜಾಪುರ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿದಾಗ ನಾನು ನಾನಾಗಿರಬೇಕೆಂದು ನಿರ್ಧರಿಸಿದೆ.

ಸಾರ್ವಜನಿಕರು ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಮುಕ್ತ ಅವಕಾಶ ನೀಡಿದೆ. ಅಧಿಕಾರವನ್ನು ಅವಕಾಶವೆಂದು ತಿಳಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾಹಿತಿಗಳ ಬಳಗದ ಸಹಾಯದಿಂದ ಜನರನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸಲು ಯತ್ನಿಸಿದೆ. ಅದಾಲತ್ ಮಹಲ್, ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ. ಗೋಲ್ ಗುಂಬಜ್ ಕಟ್ಟಿಸಿದ ಮಹಮ್ಮದ್ ಆದಿಲ್‌ಶಾಹಿಯೇ ಈ ಮಹಲ್ ಕಟ್ಟಿಸಿದ. ಔರಂಗ್‌ಜೇಬ್ ಸಹ ಇಲ್ಲಿ ವಾಸ ಮಾಡಿದ್ದ. ಅದಾಲತ್ ಮಹಲ್ ಎದುರೇ ಔರಂಗ್‌ಜೇಬ್ ನಮಾಜ್ ಮಾಡಲು ಕಟ್ಟಿಸಿದ ಅಲಂಗೀರ್ ಮಸೀದಿ ಇದೆ. ಅಲ್ಲಿ ವಾಸಿಸಿದ ದಿನಗಳಿಂದ ವಿಜಾಪುರದ ಇತಿಹಾಸದ ಪುಟಗಳು ತೆರೆದುಕೊಂಡು ನನ್ನನ್ನು ಹೊಸ ಆಲೋಚನೆಗೆ ಹಚ್ಚಿದವು. ಅದಾಲತ್ ಮಹಲ್‌ನಲ್ಲಿ ನನ್ನ ಪುಟ್ಟ ಸಂಸಾರ ಕಳೆದು ಹೋದಂತೆ ಭಾಸವಾಗುತ್ತಿತ್ತು. ವಿಸ್ತಾರವಾದ ಹತ್ತಾರು ಕೋಣೆಗಳ ಎರಡು ಅಂತಸ್ತಿನ ಮತ್ತು ನೆಲ ಮಾಳಿಗೆಯನ್ನು ಹೊಂದಿದ್ದ ಆ ಬೃಹತ್ ಬಂಗಲೆ ಚರಿತ್ರೆ ತಿಳಿಯಲು ಸ್ಫೂರ್ತಿಯಾಗಿತ್ತೇ ಹೊರತು ವಾಸಿಸಲು ಅಷ್ಟೇನೂ ಅನುಕೂಲಕರವಾಗಿರಲಿಲ್ಲ.

ವಿಜಾಪುರದ ನಂದಿ ಸಕ್ಕರೆ ಕಾರ್ಖಾನೆಗೆ ಹಿಂದಿನ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ ಭದ್ರ ಬುನಾದಿ ಹಾಕಿದ್ದರು. ಹಲವಾರು ಕಾರಣಗಳಿಂದ ಕಟ್ಟಡ ಕಟ್ಟುವ ಕೆಲಸ ಕುಂಟುತ್ತಾ ಸಾಗಿತ್ತು. ಆ ಭಾಗದ ಪ್ರಮುಖ ರೈತರ ಸಭೆ ಕರೆದು ಕಾರ್ಖಾನೆ ಶೀಘ್ರವಾಗಿ ಕಾರ್ಯ ನಿರ್ವಹಿಸಲು ಮಾಡಬೇಕಾದ ಕೆಲಸಗಳ ಕುರಿತು ಚರ್ಚಿಸಿ, ಕಾರ್ಖಾನೆ ಪ್ರಾರಂಭಕ್ಕೆ ಸಮಯ ನಿಗದಿ ಮಾಡಿದೆ. ಸರ್ಕಾರದಿಂದ ಹಲವಾರು ಮಂಜೂರಾತಿ ಆದೇಶಗಳನ್ನು ಪಡೆದು ಸಂಬಂಧಿಸಿದ ಎಲ್ಲರೊಡನೆ ಸಭೆ ನಡೆಸಿದ ಪರಿಣಾಮವಾಗಿ ಒಂದು ವರ್ಷದ ದಾಖಲೆ ಅವಧಿಯಲ್ಲಿ `ನಂದಿ ಸಕ್ಕರೆ ಕಾರ್ಖಾನೆ' ಕಬ್ಬು ಅರೆಯಲು ಪ್ರಾರಂಭಿಸಿತು. ಈ ಭಾಗದ ರೈತರೆಲ್ಲ ತಮ್ಮ ಟ್ರ್ಯಾಕ್ಟರ್‌ಗಳು ಮತ್ತು ಗಾಡಿಗಳಲ್ಲಿ ಕಬ್ಬು ತುಂಬಿಕೊಂಡು ಮೆರವಣಿಗೆಯಲ್ಲಿ ಬಂದು ಕಾರ್ಖಾನೆ ಕಾರ್ಯಾಚರಣೆಗೆ ನಾಂದಿ ಹಾಡಿದರು. ನನ್ನನ್ನು ಕಬ್ಬು ತುಂಬಿದ ಗಾಡಿ ಮೇಲೆ ಬಲವಂತವಾಗಿ ಕೂರಿಸಿ, ಪಟಕಾ (ಪೇಟ) ಸುತ್ತಿ, ಕೈಗೆ ಬಾರುಕೋಲು ಕೊಟ್ಟು ಗಾಡಿ ಓಡಿಸಲು ಹಚ್ಚಿದರು. ಹಣೆಯ ತುಂಬಾ ಕುಂಕುಮದ ನಾಮವಿಟ್ಟು ಗಾಡಿ ಓಡಿಸುತ್ತಿದ್ದ ಆ ರೈತರ ಆವೇಶ, ಸಂತೋಷ, ಕೇಕೆ-ಕೂಗು ನನ್ನನ್ನು ಹೊಸ ಲೋಕಕ್ಕೆ ಕರೆದೊಯ್ದಿದ್ದವು. ಸಕ್ಕರೆ ಕಾರ್ಖಾನೆ ಕಾರ್ಯಾರಂಭ ನನ್ನಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು.

ಆಡಳಿತದ ಅನುಭವವಗಳನ್ನು ಹೇಳುವಾಗ ಇದೊಂದು ಘಟನೆಯನ್ನು ಹೇಳಲೇಬೇಕು. ಒಂದು ದಿನ ಸಂಜೆ ಬಾಗಲಕೋಟೆಯಿಂದ ವಿಜಾಪುರಕ್ಕೆ ವಾಪಸಾಗುತ್ತಿದ್ದೆ. 10-12 ಕಿ.ಮೀ. ಸಾಗಿರಬೇಕು. ಚಾಲಕ ಜಬ್ಬಾರ್‌ಗೆ ಕಾರು ನಿಲ್ಲಿಸಲು ಸೂಚಿಸಿದೆ. ಏನಾಯಿತು ಎಂದು ಗಾಬರಿಯಿಂದ ಕಾರು ನಿಲ್ಲಿಸಿದ. ಕಾರಿಳಿದು ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬ ಆಜಾನುಬಾಹು ವ್ಯಕ್ತಿಯನ್ನು ಕೂಗಿ ಕರೆದೆ. ಆರಡಿ ಎತ್ತರದ ಅವನು ಗಿರಿಜಾ ಮೀಸೆ ಬಿಟ್ಟು, ತಲೆಗೆ ಕೆಂಪು ವಸ್ತ್ರ ಸುತ್ತಿಕೊಂಡು ಖುಷಿಯಿಂದಿದ್ದ. ಕೆಂಪುದೀಪದ ಕಾರು ನೋಡಿ, ಪೊಲೀಸ್ ಎಂದು ಅನುಮಾನಿಸುತ್ತಿದ್ದ ಅವನ ಶಂಕೆಯನ್ನು ಜಬ್ಬಾರ್ `ಡಿ.ಸಿ ಸಾಹೇಬ್ರು' ಎಂದು ಹೇಳುವ ಮೂಲಕ ದೂರ ಮಾಡಿದ. ಅವನ ಹಿಂದೆ ಆರು ಮಾರು ದೂರದಲ್ಲಿ ನಡೆದು ಬರುತ್ತಿದ್ದ ಮಹಿಳೆಯನ್ನು ತೋರಿಸಿ `ಅವಳು ಯಾರು ?' ಎಂದು ಕೇಳಿದೆ. `ಏ, ಅವಳು ನನ್ನ ಹೆಂಡ್ತಿ ಸಾಹೇಬ್ರೆ' ಎಂದು ಜಂಬದಿಂದ ಹೇಳಿದ. ಈ ವಿಚಾರಣೆ ವೇಳೆಗೆ ಆ ಮಹಿಳೆ ನಮ್ಮ ಸಮೀಪಕ್ಕೆ ಬಂದಳು. ಕಂಕುಳಲ್ಲಿ ಮಗು, ತಲೆ ಮೇಲೆ ಕಟ್ಟಿಗೆ ಹೊರೆ, ಇನ್ನೊಂದು ಕೈಯಲ್ಲಿ ಮೇಕೆಯ ಹಗ್ಗ, ಇಷ್ಟು ಸಾಲದೆಂಬಂತೆ ಹೊಟ್ಟೆಯಲ್ಲೊಂದು ಮಗು. ಭೂಭಾರವನ್ನೇ ಆಕೆ ಹೊತ್ತಂತೆ ಕಂಡುಬಂದಳು. `ಅಲ್ಲಯ್ಯ, ಇಷ್ಟು ಎತ್ತರ, ಗಾತ್ರ ಇದ್ದೀಯಾ, ಕೈ ಬೀಸಿಕೊಂಡು ಸಿಳ್ಳೆ ಹಾಕುತ್ತಾ ಹೋಗುತ್ತಿದ್ದೀಯಾ. ಆ ಹೆಂಗಸು, ನಿನ್ನ ಹೆಂಡ್ತಿ, ಅಷ್ಟೊಂದು ಹೊರೆ ಹೊತ್ತಿದ್ದಾಳೆ. ನಿನಗೆ ನಾಚಿಕೆ ಆಗುವುದಿಲ್ಲವೇ?' ಎಂದೆ. ಆ ಹೆಂಗಸಿಗೆ `ನಿನ್ನ ಕಟ್ಟಿಗೆ ಹೊರೆ, ಕಂಕುಳ ಮಗು ಮತ್ತು ಮೇಕೆಯ ಹಗ್ಗವನ್ನು ಅವನಿಗೆ ಕೊಡು' ಎಂದೆ. ಅವನು ಅತ್ಯಂತ ವಿಧೇಯನಾಗಿ ಎಲ್ಲ ಹೊರೆಯನ್ನು ಹೊತ್ತುಕೊಂಡ. `ಏನಮ್ಮ, ಎಲ್ಲ ಹೊರೆ ನೀನೇ ಹೊತ್ತಿದ್ದೀಯಾ, ಅವನಿಗೆ ಸ್ವಲ್ಪ ಹೊರಿಸಬಾರದೆ? ' ಎಂದು ಪ್ರಶ್ನಿಸಿದೆ.

ಆಕೆ, `ಇಷ್ಟೇ ಅಲ್ಲ ಸಾಹೇಬ್ರೆ, ನಾನು ಮನೆಗೆ ಹೋಗಿ ಇವನು ಬರುವ ವೇಳೆಗೆ ಅಡುಗೆಯನ್ನೂ ಮಾಡಿಡಬೇಕು. ಇಲ್ಲದಿದ್ದರೆ ಕುಡಿದು ಬಂದು ದನಕ್ಕೆ ಬಡಿದಂತೆ ಬಡಿಯುತ್ತಾನೆ' ಎಂದಳು. `ಏನಯ್ಯಾ, ಹೀಗೆಲ್ಲ ಮಾಡುವುದು ಸರಿಯೇ?' ಎಂದು ಆತನನ್ನು ಕೇಳಿದೆ. ಅವನು ತಪ್ಪು ಅರಿವಾದವನಂತೆ ಇನ್ನು ಮುಂದೆ ಹೀಗೆಲ್ಲ ಮಾಡವುದಿಲ್ಲ ಎಂದು ದೇವರ ಮೇಲೆ ಆಣೆ ಮಾಡಿದ. ಅವನ ವಿವರ ಪಡೆಯುವಂತೆ ಜಬ್ಬಾರ್‌ಗೆ ತಿಳಿಸಿದೆ. ಆ ಹೆಣ್ಣು ಮಗಳಿಗೆ 5-6 ನಿಮಿಷಗಳಲ್ಲಿ ಸ್ವಾತಂತ್ರ್ಯ ಸಿಕ್ಕಷ್ಟು ಸಂಭ್ರಮವಾಗಿತ್ತು.

ವಿಜಾಪುರ ನನಗೆ ಜನರ ಬಡತನ ಮತ್ತು ಪ್ರೀತಿಯ ಕುರಿತು ಹೊಸ ಒಳನೋಟ ಒದಗಿಸಿದ ಜಿಲ್ಲೆ. ಹಳೆಯ ಮೈಸೂರು ಪ್ರಾಂತ್ಯದ ಜನರ ಬದುಕಿನ ಅರಿವಿದ್ದ ನನಗೆ ವಿಜಾಪುರ ಜನರ ಶ್ರಮದ ಜೀವನ, ಮುಗ್ಧತೆ, ಸರಳತೆ, ನೇರ ನಡೆ, ನುಡಿ, ನಿಷ್ಕಲ್ಮಶ ಮನಸ್ಸು ಹೊಸ ಜೀವನಾನುಭವವನ್ನು ನೀಡಿತ್ತು.

ಜಿಲ್ಲಾಧಿಕಾರಿ ಹುದ್ದೆ, ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಒಂದು ವಿಶಿಷ್ಟವಾದ ಹುದ್ದೆ. ಐ.ಎ.ಎಸ್. ಅಧಿಕಾರಿ ಮಾತ್ರ ಜಿಲ್ಲಾಧಿಕಾರಿಯಾಗಲು ಸಾಧ್ಯ. ಈ ಅಧಿಕಾರಿಯನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ ಡಿಸ್ಟ್ರಿಕ್ಟ್ ಕಲೆಕ್ಟರ್ ಅಥವಾ ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಇಲ್ಲವೆ ಡೆಪ್ಯೂಟಿ ಕಮಿಷನರ್ ಎಂದು ಕರೆಯಲಾಗುತ್ತದೆ. ಭಾರತೀಯ ಆಡಳಿತ ಸೇವೆಯ ಪ್ರತಿಯೊಬ್ಬ ಅಧಿಕಾರಿ ಈ ಹುದ್ದೆಯ ಬಗೆಗೆ ವಿಶೇಷವಾದ ಕನಸುಗಳನ್ನು ಇಟ್ಟುಕೊಂಡಿರುತ್ತಾನೆ. ಸಾಮಾನ್ಯ ಜನರಲ್ಲಿ ಸಹ ಐ.ಎ.ಎಸ್. ಎಂದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎಂದರೆ ಐ.ಎ.ಎಸ್. ಎಂಬ ಕಲ್ಪನೆ ಇರುತ್ತದೆ. ಜಿಲ್ಲಾಧಿಕಾರಿ ಎಂದರೆ ಅವನು ಜಿಲ್ಲೆಯ ಸರ್ವಕ್ಕೂ ಜವಾಬ್ದಾರನಾದ ವ್ಯಕ್ತಿ. ಜನರೂ ಅಷ್ಟೇ, ಅವರ ಎಲ್ಲ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಯಿಂದ ಪರಿಹಾರ ನಿರೀಕ್ಷಿಸುತ್ತಾರೆ. ಈ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲು ವಿವಿಧ ಶಾಖೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ನೆರವು ನೀಡಲು ಹಲವು ಅಧಿಕಾರಿಗಳು ಇರುತ್ತಾರೆ. ಆ ಪ್ರತಿಯೊಬ್ಬ ಅಧಿಕಾರಿಯ ಕೈಕೆಳಗೆ ಸಿಬ್ಬಂದಿಯ ಒಂದು ಸೈನ್ಯವೇ ಇರುತ್ತದೆ. ಕೆಲವು ಜಿಲ್ಲೆಗಳಲ್ಲಿ ಇದು `ಲಗಾನ್' ತಂಡದಂತೆ ಇರುತ್ತದೆ. ಆದರೆ, ನಾಯಕ ಎಡವಟ್ಟಿನ ಮನೋಭಾವ ಹೊಂದಿರುತ್ತಾನೆ. ಇಂತಹ ಪ್ರಸಂಗಗಳು ಹಲವಾರು. ಉತ್ತರ ಭಾರತದಲ್ಲಂತೂ ಡಿ.ಸಿ ಎಂದರೆ `ಬ್ರಿಟಿಷ್ ಸಾಮ್ರಾಜ್ಯ'ದ ವಾರಸುದಾರರಂತೆ. ಈ ವಿಷಯದಲ್ಲಿ ದಕ್ಷಿಣದ ಜನ ತುಸು ಪುಣ್ಯವಂತರು. ಇಲ್ಲೂ `ತಿಕ್ಕಲು ದೊರೆ'ಗಳಿಗೇನೂ ಕಡಿಮೆ  ಇಲ್ಲ. ಹಲವು ಸಲ ಸರ್ವಾಧಿಕಾರಿಗಳಂತೆ ವರ್ತಿಸುವ, ಸಹ ಅಧಿಕಾರಿಗಳನ್ನು ಜವಾನರಂತೆ  ಕಾಣುವ, ಜನರ ಆಶೋತ್ತರಗಳಿಗೆ ಸ್ಪಂದಿಸದೆ ದರ್ಪವೇ ದಕ್ಷತೆಯೆಂಬ ಭ್ರಮೆಯಲ್ಲಿರುವ  ಜಿಲ್ಲಾಧಿಕಾರಿಗಳನ್ನು ಸಹ ನೋಡಿದ್ದೇನೆ. ಕೆಲವರದು ಅವರದೇ ಗತ್ತು, ಗೈರತ್ತು, ದರ್ಬಾರು.  ಬ್ರಿಟಿಷ್ ಸಾಮ್ರಾಜ್ಯದ ತುಂಡೇನೋ ಎನ್ನುವ ವೈಭವ, ಆರ್ಭಟ ಮತ್ತು ಕೃತಕ ಮನೋಭಾವ  ನೋಡಿ ಕನಿಕರಪಟ್ಟಿದ್ದೇನೆ.

ಜಿಲ್ಲಾಧಿಕಾರಿ ಕೆಲಸ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ತಿ ಸಂರಕ್ಷಣೆ, ಎಲ್ಲ ಇಲಾಖೆಗಳ ಬಾಕಿ ವಸೂಲಿ, ಚುನಾವಣೆ ನಿರ್ವಹಣೆ, ಕಾನೂನು ಅನುಷ್ಠಾನ, ಪ್ರಕೃತಿ ವಿಕೋಪ ಮತ್ತು ವಿಪತ್ತು ಸ್ಥಿತಿ ನಿರ್ವಹಣೆ ಸೇರಿದಂತೆ  ಸರ್ಕಾರದ ಒಟ್ಟಾರೆ ಧ್ಯೇಯೋದ್ದೇಶಗಳ ಅನುಷ್ಠಾನವನ್ನು ಒಳಗೊಂಡಿರುತ್ತದೆ. ಸರ್ಕಾರದ ಪ್ರತಿನಿಧಿಯಾಗಿ ಇಷ್ಟೊಂದು ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಜಿಲ್ಲಾಧಿಕಾರಿ ಹುದ್ದೆಗೆ ಸೂಕ್ತ ವ್ಯಕ್ತಿಗಳು ನೇಮಕಗೊಂಡಾಗ ಮಾತ್ರ ಅವರು ಜನರ ಸಂಕಷ್ಟಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿ ಆಡಳಿತದಲ್ಲಿರುವ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬಲ್ಲರು.  

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT