ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಗಳ ಬೆಲೆ: ಬದಲಾಗುತ್ತಿರುವ ಚಿತ್ರಣ

Last Updated 27 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ರಾಜ್ಯ ವಿಧಾನಸಭಾ ಚುನಾವಣೆಗಳ ಗೌಜು ಗದ್ದಲ ಕೊನೆಗೊಂಡಿದೆ. ಕೇಂದ್ರ ಸರ್ಕಾರದ ಬಜೆಟ್, ರೈಲ್ವೆ ಬಜೆಟ್ ಮತ್ತು ರಾಜ್ಯದ ಬಜೆಟ್‌ಗೆ ಸಂಬಂಧಿಸಿದ ಪುಟಗಟ್ಟಲೆ ಹೇಳಿಕೆ - ಪ್ರತಿ ಹೇಳಿಕೆಗಳೆಲ್ಲ ಮುಗಿದಿವೆ.
 
ಈ ಎಲ್ಲ ಕೋಲಾಹಲಗಳ ಮಧ್ಯೆ ಬಹುಮುಖ್ಯ ಘಟನೆಯೊಂದು ಹೆಚ್ಚಿನ ಜನರ ಗಮನಕ್ಕೆ ಬರದೇ ಸದ್ದು ಮಾಡದೇ ನಡೆದುಹೋಗಿದೆ. ಹಕ್ಕುಸ್ವಾಮ್ಯ ನಿಯಂತ್ರಕರು (ಪೇಟೆಂಟ್ ಕಂಟ್ರೋಲರ್) ಐತಿಹಾಸಿಕ ನಿರ್ಧಾರ ಕೈಗೊಂಡಿರುವುದು ಹೆಚ್ಚು ಸುದ್ದಿ ಮಾಡಲಿಲ್ಲ. ಅಥವಾ ಈ ಚುನಾವಣೆ, ಬಜೆಟ್ ವಿಶ್ಲೇಷಣೆಗಳ ಮಧ್ಯೆ ಹೆಚ್ಚಿನ ಓದುಗರ ಗಮನಕ್ಕೆ ಬರದೇ ಹೋಯಿತು.

 ಮುಂಬೈನಲ್ಲಿ ಇರುವ ಹಕ್ಕುಸ್ವಾಮ್ಯ ನಿಯಂತ್ರಕರು  ಈ ತಿಂಗಳ 12ರಂದು `ನ್ಯಾಟ್ಕೊ~ ಔಷಧ ತಯಾರಿಕಾ ಕಂಪೆನಿಗೆ ಕಡ್ಡಾಯ ಪರವಾನಗಿ ಒದಗಿಸಿ ದೇಶಿ ಔಷಧಿ ತಯಾರಿಕಾ ರಂಗದಲ್ಲಿ ಸಂಚಲನ ಮೂಡಿಸಿದ್ದಾರೆ.

ಮೂತ್ರಪಿಂಡ (ಕಿಡ್ನಿ) ಕ್ಯಾನ್ಸರ್‌ಗೆ ಬಳಸುವ ಪೇಟೆಂಟ್ ಇರುವ ಔಷಧ ಉತ್ಪಾದಿಸುವುದಕ್ಕೆ ಅವಕಾಶ ನೀಡುವ ಮಹತ್ವದ ನಿರ್ಧಾರವನ್ನು ಅವರು ಕೈಗೊಂಡಿದ್ದರು. ಇದೊಂದು ಐತಿಹಾಸಿಕ ಘಟನೆ ಏಕೆ ಎಂದರೆ, ಕಂಪೆನಿಯೊಂದು ಪಡೆದ ಪೇಟೆಂಟ್, ಸತ್ವಹೀನಗೊಳಿಸುವ ಯಾವುದೇ ಪ್ರಯತ್ನ ಈ ಹಿಂದೆ ದೇಶದಲ್ಲಿ ನಡೆದಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ಪೇಟೆಂಟ್ ಹೊಂದಿದವರಿಗೆ ರಾಯಧನ ನೀಡಲು ಕಾಯ್ದೆ ಅವಕಾಶ ನೀಡಲಾಗುತ್ತಿತ್ತು.

`ನೆಕ್ಸವರ್~ ಹೆಸರಿನ ಈ ಔಷಧವನ್ನು ಉತ್ಪಾದಿಸುವ ಜಾಗತಿಕ ಪೇಟೆಂಟ್ ಬೇಯರ್ ಕಂಪೆನಿ ಬಳಿ ಇದೆ. ಕಿಡ್ನಿ ಕ್ಯಾನ್ಸರ್‌ಗೆ ಇದು ಪ್ರಮುಖ ಔಷಧ ಎಂಬುದು ಈಗಾಗಲೇ ಸಾಬೀತಾಗಿದೆ. ಕಂಪೆನಿಯು ಒಂದು ತಿಂಗಳ ಔಷಧಿಯನ್ನು 2.80 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿತ್ತು. ಇದೀಗ ಮೂಲ ಔಷಧದ ಗುಣಧರ್ಮಗಳನ್ನೇ ಹೊಂದಿರುವ ಔಷಧವನ್ನು ನ್ಯಾಟ್ಕೊ ಕಂಪೆನಿ ತಯಾರಿಸುವುದು ಸಾಧ್ಯವಾಗಲಿದೆ. ಒಂದು ತಿಂಗಳ ಔಷಧವನ್ನು ಕೇವಲ 8,800 ರೂಪಾಯಿಗೆ ಮಾರಾಟ ಮಾಡುವುದೂ ಕಾರ್ಯರೂಪಕ್ಕೆ ಬರಲಿದೆ.

ಅಂದರೆ, ಮೂಲ ಔಷಧಕ್ಕಿಂತ ಈ ಔಷಧ ಶೇ 97ರಷ್ಟು ಅಗ್ಗದಲ್ಲಿ ಸಿಗಲಿದೆ. ಜೀವರಕ್ಷಕ ಮಹತ್ವದ ಔಷಧ ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ದೊರಕಬೇಕು ಎಂಬ ತತ್ವದ ಆಧಾರದಲ್ಲೇ ಪೇಟೆಂಟ್ ನಿಯಂತ್ರಕರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಕಡ್ಡಾಯ ಪರವಾನಗಿ (ಸಿಎಲ್) ವ್ಯವಸ್ಥೆಯಡಿಯಲ್ಲಿ ಔಷಧ ತಯಾರಿಕೆಗೆ ಅವಕಾಶ ಕಲ್ಪಿಸಿಕೊಟ್ಟ ಪ್ರಥಮ ವಿದ್ಯಮಾನವೂ ಇದಾಗಿದೆ.

ದೇಶದಲ್ಲಿ ಪೇಟೆಂಟ್ ಕಾಯ್ದೆಗೆ 2005ರಲ್ಲಿ ತಿದ್ದುಪಡಿ ತರಲಾಗಿತ್ತು. ಈ ತಿದ್ದುಪಡಿಯ ಮೂಲಕ ಸಾರ್ವಜನಿಕ ಹಿತಾಸಕ್ತಿಯಿಂದ ಉತ್ಪಾದಕರಿಗೆ `ಸಿಎಲ್~ ಒದಗಿಸುವ ಅಧಿಕಾರ ಪೇಟೆಂಟ್ ನಿಯಂತ್ರಕರಿಗೆ ಲಭಿಸಿತ್ತು. ಇದೊಂದು ಪ್ರಥಮ ವಿದ್ಯಮಾನವಾಗಿದ್ದು, ನಿಕಷಕ್ಕೆ ಒಳಪಡಲಿರುವ ಘಟನೆ ಆಗಿಯೂ ಗಮನ ಸೆಳೆಯಲಿದೆ.
 ಸಾರ್ವಜನಿಕರ ಹಿತಾಸಕ್ತಿ ರಕ್ಷಣೆ ಕಾರಣಕ್ಕಾಗಿಯೇ ಇಲ್ಲಿ `ಸಿಎಲ್~ ಒದಗಿಸಲಾಗಿದೆ.
 
ಕೈಗೆಟುಕುವ ದರದ್ಲ್ಲಲಿ ಜನಸಾಮಾನ್ಯರು ಸಂಶೋಧನೆಯೊಂದರ ಲಾಭ ಪಡೆಯದಿದ್ದರೆ ಅಂತಹ ಸಂಶೋಧನೆ ಯಾವ ಪುರುಷಾರ್ಥಕ್ಕೆ. ಹಾಗಿದ್ದರೂ, ಬೇಯರ್ ಕಂಪೆನಿ ತನ್ನೆಲ್ಲಾ ಸಾಮರ್ಥ್ಯ - ಪ್ರಭಾವ ಬಳಸಿಕೊಂಡು ಪೇಟೆಂಟ್ ನಿಯಂತ್ರಕರ ಆದೇಶ ಪ್ರಶ್ನಿಸುವುದು ನಿಶ್ಚಿತ.

ಆದರೆ, ಪೇಟೆಂಟ್ ನಿಯಂತ್ರಕರ ಈ ಆದೇಶದ ಮೂಲಕ ದೇಶದ ಇತಿಹಾಸದ್ಲ್ಲಲಿ ಹೊಸ ಸಂಪ್ರದಾಯವೊಂದು ದಾಖಲಾಗಿಬಿಟ್ಟಿರುವುದಂತೂ ನಿಜ.  ಇದರಿಂದ ಔಷಧಿ ತಯಾರಿಕಾ ರಂಗದಲ್ಲಿ ಹೊಸ ವ್ಯವಸ್ಥೆಯೊಂದಕ್ಕೆ ನಾಂದಿಯನ್ನೂ ಹಾಡಿದಂತಾಗಿದೆ. ಈ ಬೆಳವಣಿಗೆಯು ದೀರ್ಘಾವಧಿಯ ಪರಿಣಾಮಗಳಿಗೆ ಕಾರಣವಾಗಲಿರುವುದು ನಿಶ್ಚಿತ ಎಂಬುದು ಔಷಧ ಕ್ಷೇತ್ರದಲ್ಲಿನ ಕೆಲವು ಪರಿಣತರ ಅನಿಸಿಕೆ. 

 ನಾವೆಲ್ಲ ಇಲ್ಲಿ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ ಜತೆಗೆ, ಹಲವು ಸವಾಲುಗಳನ್ನೂ ಎದುರಿಸಬೇಕಾಗುತ್ತದೆ. ಔಷಧ ತಯಾರಿಕಾ ಕಂಪೆನಿಗಳ ಪ್ರತಿಕ್ರಿಯೆ ಮೊದಲಿಗೆ ಎದುರಾಗುವುದು.

ಹೊಸ ಔಷಧವನ್ನು ಮಾರುಕಟ್ಟೆಗೆ ತರಲು ಇವುಗಳು ದಶಕಗಳ ಕಾಲ ಸಂಶೋಧನೆ ನಡೆಸಿ ಅದಕ್ಕಾಗಿ ಹಲವು ಶತಕೋಟಿ ಡಾಲರ್ ಹಣ ಖರ್ಚು ಮಾಡಿರುತ್ತವೆ. ಕಾಲಕಾಲಕ್ಕೆ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳ ನಿವಾರಣೆಗೆ ಹೊಸ ಹೊಸ ಔಷಧಗಳೇ ಬೇಕಾಗುತ್ತವೆ.

 ಕ್ಯಾನ್ಸರ್, ಏಡ್ಸ್, ಅಲ್ಜೈಮರ್ಸ್‌, ಬುದ್ಧಿಮಾಂದ್ಯತೆಗಳಂತಹ ಕಾಯಿಲೆಗಳಿಗೆ ಇದುವರೆಗೂ ಸೂಕ್ತ ಔಷಧ ಕಂಡುಹಿಡಿಯುವುದು ಸಾಧ್ಯವಾಗಿಲ್ಲ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಈ ಕಗ್ಗಂಟುಗಳನ್ನು ಬಗೆಹರಿಸಲು ಸ್ಪರ್ಧೆಯಲ್ಲಿರುವ ಔಷಧ ತಯಾರಕದು ಹಗಲಿರುಳೂ ಪ್ರಯತ್ನಿಸುತ್ತಿದ್ದಾರೆ.

ಸ್ಪರ್ಧಾ ಜಗತ್ತಿನಲ್ಲಿ ಅತ್ಯುತ್ತಮ ಔಷಧ ತಯಾರಿಸುವುದರಲ್ಲಿ ವೆಚ್ಚ ಸರಿದೂಗಿಸಿಕೊಂಡು ಲಾಭ ಗಳಿಸುವುದು ಔಷಧ ತಯಾರಿಕಾ ಕಂಪೆನಿಗಳಿಗೆ ಮುಖ್ಯವಾಗುತ್ತದೆ. ಪೇಟೆಂಟ್ ನಿಯಂತ್ರಕರು ಕಿಡ್ನಿ ಕ್ಯಾನ್ಸರ್‌ನ ಔಷಧ ತಯಾರಿಕೆಗೆ ಅವಕಾಶ ನೀಡಿದ್ದಕ್ಕೆ ಭಾರತೀಯ ಔಷಧ ಉತ್ಪಾದಕರ ಸಂಘಟನೆ (ಒಪಿಪಿಐ) ನೀಡಿದ ಪ್ರತಿಕ್ರಿಯೆ ನಿರಾಶಾದಾಯಕ ಮತ್ತು ದಿಗಿಲು ಹುಟ್ಟಿಸುವಂತಿದೆ.

ಕ್ಷುಲ್ಲಕ ಕಾರಣಗಳಿಗೆಲ್ಲಾ ಕೆಲವು ಬಗೆಯ ಔಷಧಗಳನ್ನು ಉತ್ಪಾದಿಸುವುದಕ್ಕೆ ಅವಕಾಶ ನೀಡಬೇಕೆಂದು ಕೋರಿ ಅರ್ಜಿಗಳ ಮಹಾಪೂರವೇ ಹರಿದು ಬರಬಹುದು. ಈ ಸೌಲಭ್ಯದ ಸದುಪಯೋಗಕ್ಕಿಂತ ದುರುಪಯೋಗಪಡಿಸುವ ಸಾಧ್ಯತೆ ಹೆಚ್ಚು ಎಂಬುದು ಈ ಔಷಧ ತಯಾರಿಕಾ ಕಂಪೆನಿಗಳ ಅನಿಸಿಕೆಯಾಗಿದೆ..ಇವುಗಳ ಭೀತಿ ನಿಜಕ್ಕೂ ನಿಜವೇ ಎಂಬುದನ್ನು ಈ ಆರಂಭಿಕ ಹಂತದಲ್ಲೇ ನಿರ್ಧರಿಸುವುದು ಕಷ್ಟವಾದೀತು.

ಆದರೆ, ಈ ವಿಚಾರದಲ್ಲಿ ಸಾರ್ವಜನಿಕರ ನಿಲುವು ತೀರಾ ಭಿನ್ನವಾಗಿದೆ. ಇಂತಹ ಔಷಧಗಳ ದರವನ್ನು ನಿರ್ಧರಿಸುವಾಗ ಜನಸಾಮಾನ್ಯರ ಹಿತಾಸಕ್ತಿಯೇ ಮುಖ್ಯವಾಗುತ್ತದೆ ಎಂದು ಕೆಲವು ವೈದ್ಯರ ಸಹಿತ ಪ್ರತಿಯೊಬ್ಬರೂ ಹೇಳುತ್ತಾರೆ.
ಕೆಲವು ಪ್ರಸಂಗಗಳಲ್ಲಿ ಉತ್ಪಾದಕರು ಕೆಲವು ರಿಯಾಯಿತಿಗಳನ್ನು ನೀಡಬಹುದು, ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಸಮತೂಕವಿಲ್ಲದ ದರವನ್ನೇ ವಿಧಿಸಿರುವುದು ಸ್ಪಷ್ಟವಾಗುತ್ತದೆ.

ಶ್ರೀಮಂತ ದೇಶಗಳಲ್ಲಿನ ರೋಗಿಗಳಿಗೆ ಸಹ ಕೆಲವೊಂದು ಔಷಧಗಳನ್ನು ಖರೀದಿಸುವುದು ಕಷ್ಟಕರವಾದಂತಹ ಸ್ಥಿತಿ ಇದೆ. ಹೀಗಿದ್ದಾಗ ಹೊಸ ಔಷಧವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮೂಲ ಉದ್ದೇಶವೇ ಕಳೆದು ಹೋದಂತಾಗುತ್ತದೆ.
 ಬೇಯರ್ ಕಂಪೆನಿ ತನ್ನ ಔಷಧದ ದರ ನಿರ್ಧರಿಸುವುದಕ್ಕೆ ಮೊದಲು ಈ ಎಲ್ಲ ಸಂಗತಿಗಳನ್ನು ಪರಿಗಣಿಸಬೇಕಿತ್ತು.
 
ಹಲವು ಬಹುರಾಷ್ಟ್ರೀಯ ಕಂಪೆನಿಗಳು ಒಂದೊಂದು ದೇಶದಲ್ಲಿ ಒಂದೊಂದು ಬೆಲೆ ನಿಗದಿಪಡಿಸುವ ಕ್ರಮ ಅನುಸರಿಸುತ್ತವೆ. ಅಂತಹ ಕ್ರಮವನ್ನು ಬೇಯರ್ ಸಹ ಅನುಸರಿಸುತ್ತಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ. ಬೇಯರ್ ಕಂಪೆನಿ ತನ್ನ ದರ ನಿರ್ಧಾರಿಸುವ ತೀರ್ಮಾನ ಪರಿಷ್ಕರಿಸಿ ಬಡ ಬಳಕೆದಾರರತ್ತಲೂ ಸ್ವಲ್ಪ ಕರುಣೆ ತೋರಬೇಕಿತ್ತು. ಇದರಿಂದ ಕಂಪೆನಿ ಭಾರಿ ಜನಪ್ರಿಯತೆ ಮತ್ತು ಜನರ ಸದಾಶಯ ಗಳಿಸಿಕೊಳ್ಳುವುದು ಸಾಧ್ಯವಿತ್ತು.

ಇಲ್ಲಿ ಇನ್ನೂ ಹಲವು ಸಂಗತಿಗಳು ಈ ವಿವಾದಿತ ಹೇಳಿಕೆಯಲ್ಲಿ ತಳಕು ಹಾಕಿಕೊಂಡಿವೆ. ಕಡ್ಡಾಯ ಪರವಾನಗಿ ಎಂಬುದು ಭಾರತದಲ್ಲಿ ಮಾರಾಟ ಮಾಡುವುದಕ್ಕೆ ಮಾತ್ರ ಇರುವ ಪರವಾನಗಿ. ಇತರ ಹಲವು ದೇಶಗಳ ಬಳಕೆದಾರರೂ ಸಹ ಈ ಅಗ್ಗದ ದರದ ಔಷಧ ಬಳಸಿಕೊಳ್ಳಲು ಆಸಕ್ತಿ ತೋರಿಸುವ ಸಾಧ್ಯತೆ ಇದೆ. ಇದರಿಂದ ಔಷಧದ ಕಳ್ಳಸಾಗಾಟಕ್ಕೂ ದಾರಿ ಮಾಡಿಕೊಡಬಹುದು.

ಮೂಲ ಪೇಟೆಂಟ್ ಪಡೆದವರಿಗೆ ದೊಡ್ಡ ಪ್ರಮಾಣದಲ್ಲಿಯೂ ಹಾನಿ ಉಂಟಾಗಬಹುದು. ಈ ವಾದದಲ್ಲಿ ಸತ್ಯ ಇರುವಂತೆ ಕಾಣಿಸುತ್ತದೆ, ಏಕೆಂದರೆ ಭಾರತಕ್ಕೆ ಬರುವ ಪ್ರವಾಸಿಗರು ತಮ್ಮ ದೇಶಕ್ಕೆ ಮರಳುವಾಗ ತಮ್ಮ ಜತೆಗೆ ಇಂತಹ ಔಷಧವನ್ನೂ ಸಾಗಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ವಿಚಾರಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಆದರೆ, ಇತಿಹಾಸದ ಮೇಲೆ ದೃಷ್ಟಿ ಹರಿಸಿದಾಗ ಹಲವು ದೇಶಗಳು ಇದೇ ಹಾದಿಯನ್ನು ತುಳಿದಿರುವುದು ಕಾಣಿಸುತ್ತದೆ. ಮಾರುಕಟ್ಟೆ ಆಧಾರಿತ ಆರ್ಥಿಕತೆಯಲ್ಲಿ ನಂಬಿಕೆ ಇಟ್ಟಿರುವ ಅಮೆರಿಕ ಸಹ, ಆಂಥ್ರಾಕ್ಸ್ ಉತ್ಪಾದನೆಗೆ ಇದೇ ದಾರಿ ಹಿಡಿಯುವ ಪರಿಶೀಲನೆ ನಡೆಸಿತ್ತು.

ಹೀಗಾಗಿ ಸದ್ಯಕ್ಕೆ ಭಾರತಕ್ಕೆ ಸಹ ಇದೊಂದು ವಿಶಿಷ್ಟ ಸನ್ನಿವೇಶವಾಗಿ ಕಾಣಿಸುತ್ತಿಲ್ಲ ಮತ್ತು ನಾವು ಇದಕ್ಕಾಗಿ ತಪ್ಪಿತಸ್ಥ ಭಾವ ಅನುಭವಿಸಬೇಕಾಗಿಲ್ಲ. ಪೇಟೆಂಟ್ ನಿಯಂತ್ರಕರು ಇಂತಹ ಐತಿಹಾಸಿಕ ಆದೇಶ ಹೊರಡಿಸುವಲ್ಲಿ ಬಹಳ ಎದೆಗಾರಿಕೆ ಪ್ರದರ್ಶಿಸಿದ್ದಾರೆ. ಈ ಕಾರಣಕ್ಕೆ ಅವರಿಗೆ ನಾವೆಲ್ಲ ಅಭಿನಂದನೆ ಸಲ್ಲಿಸಲೇಬೇಕಾಗಿದೆ.

ನಾನು ಈ ಮೊದಲು ನಮ್ಮ ಸಂಸ್ಥೆಗಳ ಶಕ್ತಿಯ ಬಗ್ಗೆ ಸ್ವಲ್ಪ ಬರೆದಿದ್ದೆ. ಪೇಟೆಂಟ್ ನಿಯಂತ್ರಕರ ಈಗಿನ ಕ್ರಮಗಳು ನಾನು ಪ್ರಸ್ತಾಪಿಸಿದ್ದ ವಿಷಯ ಸಾಬೀತುಪಡಿಸಿವೆ. ಕ್ರಿಯಾಶೀಲ ಪ್ರಜಾಪ್ರಭುತ್ವದಲ್ಲಿ ಸಂಸ್ಥೆಗಳೇ ಬೆನ್ನೆಲುಬು ಮತ್ತು ಇಂತಹ ದೇಶಗಳಲ್ಲಿ ಮಾತ್ರ ವ್ಯಾಪಾರ ವಹಿವಾಟು ಸುಲಲಿತವಾಗಿ ನಡೆಯಲು ಸಾಧ್ಯ ಎಂದು ನಾನು ಈಗಲೂ ಬಲವಾಗಿ ಪ್ರತಿಪಾದಿಸುವೆ.

ಭಾರತದ ಔಷಧ ತಯಾರಿಕಾ ಕಂಪೆನಿಯೊಂದಕ್ಕೆ ಪೇಟೆಂಟ್ ಔಷಧ ಉತ್ಪಾದಿಸಲು ಅವಕಾಶ ಕಲ್ಪಿಸಿದ್ದು ನಿಜಕ್ಕೂ ಒಂದು ಚಾರಿತ್ರಿಕ ನಿರ್ಧಾರ. ಈ ನಿರ್ಧಾರ ತೆರೆಮರೆಗೆ ಸರಿಯಲು ಸ್ವಲ್ಪ ಸಮಯ ಬೇಕು. ಆದರೆ, ಭಾರತೀಯ ಔಷಧ ತಯಾರಿಕಾ ಉದ್ಯಮರಂಗದಲ್ಲಿ ಈ ನಿರ್ಧಾರ ಬಹು ದೀರ್ಘ ಅವಧಿಗೆ ತನ್ನ ಪಾತ್ರ ನಿರ್ವಹಿಸುವುದಂತೂ ಸತ್ಯ. ದೇಶದ ಆರೋಗ್ಯ ಕಾಳಜಿ ಉದ್ಯಮ ಮತ್ತು ಬಳಕೆದಾರರು ಇದರಿಂದ ಭಾರಿ ದೊಡ್ಡ ಪ್ರಯೋಜನ ಪಡೆಯಲಿದ್ದಾರೆ ಎಂಬುದಂತೂ ನಿಶ್ಚಿತ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT