ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಡಿರಾ ಕಾಗೆ... ಕಾಣೆಯಾಗುತ್ತಿದೆ ಹೇಗೆ?

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಪಾಲ್ ಗ್ರೀನೊ ಆಧುನಿಕ ಭಾರತದ ಇತಿಹಾಸಕಾರರು ಹಾಗೂ ಅಯೋವ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರು. ಕಳೆದ ಅರ್ಧ ಶತಮಾನದಿಂದಲೂ ವಸಾಹತುಶಾಹಿ ಮತ್ತು ಸ್ವತಂತ್ರ ಭಾರತದ ಆರೋಗ್ಯ ಮತ್ತು ಪರಿಸರಗಳ ಇತಿಹಾಸದ ಸಂಶೋಧನೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮಿಗಿಲಾಗಿ ಈ ಸಮಯದಲ್ಲಿ ಗ್ರೀನೊ ಕನ್ನಡ ಮತ್ತು ಕರ್ನಾಟಕಗಳ ಬಗೆಗೆ ಆಸಕ್ತಿ, ಒಲವುಗಳನ್ನು ಬೆಳೆಸಿಕೊಂಡಿದ್ದಾರೆ. ಅಯೋವ ವಿಶ್ವವಿದ್ಯಾಲಯದಲ್ಲಿ ಕನ್ನಡ ಪೀಠವೊಂದನ್ನು ಸ್ಥಾಪಿಸಲು ದಶಕಗಳ ಕಾಲ ಹೆಣಗಿದರು.
 
ಅಲ್ಲದೆ ಯು.ಆರ್. ಅನಂತಮೂರ್ತಿ, ಡಿ.ಆರ್.ನಾಗರಾಜ್ ಮತ್ತು ದೇವನೂರ ಮಹಾದೇವ ಸೇರಿದಂತೆ ಹಲವಾರು ಕನ್ನಡದ ಬರಹಗಾರರ ಜೊತೆಗೆ ದಶಕಗಳಿಂದ ಹತ್ತಿರದ ಒಡನಾಟ ಹೊಂದಿದವರು. ಜೊತೆಗೆ ತಮ್ಮ ವಿದ್ಯಾರ್ಥಿಗಳನ್ನು ಕರ್ನಾಟಕದಲ್ಲಿ ಅಧ್ಯಯನ ಮಾಡಲು ನಿಯಮಿತವಾಗಿ ಕಳುಹಿಸುತ್ತಾರೆ. ಕಳೆದ ದಶಕದಲ್ಲಿ ಗ್ರೀನೊ ಅವರ ಸಂಶೋಧನೆಯ ಆಸಕ್ತಿ ಭಾರತೀಯ ಕಾಗೆಯ ಕಡೆಗೆ ತಿರುಗಿದೆ. 

‘ನಗರಗಳಿಂದ ಕಣ್ಮರೆಯಾಗುತ್ತಿರುವ ಭಾರತೀಯ ಕಾಗೆ: ಒಡನಾಡಿ ವರ್ಗದ ಪಕ್ಷಿಯ ಪರಿಸರದ ಇತಿಹಾಸ’ ಎನ್ನುವ ಸಂಶೋಧನಾ ಯೋಜನೆಯನ್ನು ಕೈಗೆತ್ತಿಕೊಂಡು ಅವರು ಭಾರತಕ್ಕೆ ಬಂದಿದ್ದಾರೆ.
 
ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ಈ ಕುರಿತಾಗಿ ಅವರಿಂದ ಕೇಳಿದ್ದೆ. ಇಂದಿನ ಅಂಕಣವನ್ನು ಬರೆಯುವ ತುಸು ಮೊದಲು ಗುರುವಾರ ಬೆಳಿಗ್ಗೆ ಭಾರತೀಯ ಕಾಗೆಯ ವಿಚಾರಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧವನ್ನು ಗ್ರೀನೊ ಮೈಸೂರಿನಲ್ಲಿ ಮಂಡಿಸಿದರು.
 
ಇಂದು ಗ್ರೀನೊ ಅವರಿಂದ ಪಡೆದುಕೊಂಡ ಕೆಲವು ಒಳನೋಟಗಳನ್ನು ಹಂಚಿಕೊಳ್ಳಬೇಕು. ಜೊತೆಗೆ ಅವರ ಅಧ್ಯಯನಗಳನ್ನು, ಬದಲಾಗುತ್ತಿರುವ ನಮ್ಮ ನಗರಗಳ ಬದುಕಿನ ಪರಿಸರಕ್ಕೂ ಹೆಣೆಯಬೇಕು ಎನಿಸುತ್ತಿದೆ. 
 
ಎಲ್ಲೆಡೆಯೂ ಕಂಡುಬರುವ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅಸ್ಪಷ್ಟವಾದ, ಚಂಚಲವಾದ ಸ್ಥಾನವನ್ನು ಹೊಂದಿರುವ ಸಾಮಾನ್ಯ ಕಾಗೆಯ ಅಧ್ಯಯನ ಏಕೆ? ಈ ಪ್ರಶ್ನೆಗೆ ಗ್ರೀನೊ ಎರಡು ಉತ್ತರಗಳನ್ನು ಕೊಡುತ್ತಾರೆ. ಮೊದಲನೆಯ ಉತ್ತರ, ಇತಿಹಾಸ ಅಧ್ಯಯನದ ವಿಧಾನಗಳಿಗೆ ಸಂಬಂಧಿಸಿದುದು.
 
ಪರಿಸರದ ಇತಿಹಾಸ ಬರೆಯುವ ಸಂಶೋಧಕ, ಹವಾಮಾನ ವೈಪರೀತ್ಯಗಳು ಅತಿಯಾಗುತ್ತಿರುವ ಮತ್ತು ಜೈವಿಕ ವೈವಿಧ್ಯ ಕಣ್ಮರೆಯಾಗುತ್ತಿರುವ ಕಾಲಘಟ್ಟದ ಬಗ್ಗೆ ಹೇಗೆ ಯೋಚಿಸಬೇಕು? ತನ್ನ ಸಂಶೋಧನೆಯ ವಸ್ತುವಾಗಿ ಯಾವುದನ್ನು ಆರಿಸಿಕೊಳ್ಳಬೇಕು? ಪರಿಸರದ ಇತಿಹಾಸಕಾರರು ಸಾಮಾನ್ಯವಾಗಿ ಹುಲಿ, ಆನೆ ಅಥವಾ ಖಡ್ಗಮೃಗಗಳಂತಹ (ರೈನೊಸೆರಸ್) ಮನಮೋಹಕವಾದ ಮತ್ತು ಅರಣ್ಯಕೇಂದ್ರಿತ ಪರಿಸರ ವ್ಯವಸ್ಥೆಯೊಂದರ ಮುಖ್ಯಪ್ರಾಣಿಯೊಂದನ್ನು ಆರಿಸಿಕೊಳ್ಳುತ್ತಾರೆ.
 
ಅವುಗಳ ಇಂದಿನ ಪರಿಸ್ಥಿತಿಯನ್ನು ವಿವರಿಸುವ ಮೂಲಕ ನಮ್ಮ ಪರಿಸರದಲ್ಲಾಗುತ್ತಿರುವ ಬದಲಾವಣೆಗಳನ್ನು ಬಣ್ಣಿಸುತ್ತಾರೆ.
 
ಗ್ರೀನೊ ಅವರ ಪ್ರಶ್ನೆ ಭಿನ್ನವಾದುದು: ಮಾನವನ ಬದುಕಿನ ಸಾಮಾನ್ಯ ಪರಿಸರಗಳನ್ನೇ ಪರಿಗಣಿಸಿದರೆ, ಅಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಗೆಯಂತಹ ಪಕ್ಷಿಯನ್ನು ಅಧ್ಯಯನದ ವಸ್ತುವಾಗಿ ಆರಿಸಿದಾಗ ನಿರ್ದಿಷ್ಟವಾಗಿ ನಮ್ಮ ನಗರಗಳ ಪರಿಸರದಲ್ಲಾಗುತ್ತಿರುವ ಬದಲಾವಣೆಗಳನ್ನು ಹೇಗೆ ಅರ್ಥೈಸಿಕೊಳ್ಳಬಹುದು?
 
ಇಂತಹ ಅಧ್ಯಯನಕ್ಕೆ ಕಾಗೆ ಸಾಂಸ್ಕೃತಿಕ ಮತ್ತು ನೈಸರ್ಗಿಕ ಕಾರಣಗಳೆರಡರಿಂದಲೂ ಅತ್ಯುತ್ತಮ ವಸ್ತುವೆಂದು ಗ್ರೀನೊ ವಾದಿಸುತ್ತಾರೆ. ದಕ್ಷಿಣ ಏಷ್ಯಾದ ಉದ್ದಗಲಕ್ಕೂ ಹರಡಿರುವ ಭಾರತೀಯ ಕಾಗೆ ಸಾವಿರಾರು ವರ್ಷಗಳಿಂದ ಮನುಷ್ಯರೊಡನೆ ಒಂದು ಅವಶ್ಯಕ ಸಂಬಂಧವನ್ನು ಬೆಳೆಸಿಕೊಂಡು ಬಂದಿದೆ.

ಅಂದರೆ ಗಿಣಿ, ಪಾರಿವಾಳದಂಥ  ಪಕ್ಷಿಗಳಂತೆ ಕಾಗೆ ಸಾಕುವ ಪಕ್ಷಿಯಾಗಲಿಲ್ಲ. ಕಾಡುಪಕ್ಷಿಯಾಗಿಯೇ ಉಳಿದುಕೊಂಡಿತು. ಆದರೆ ತನ್ನ ಜೀವನಾಧಾರಕ್ಕೆ ಮನುಷ್ಯರ ಹಂಗಿನಲ್ಲಿ ಉಳಿದ ಜೀವಿಯಾಯಿತು. ಹಾಗಾಗಿ ಮನುಷ್ಯರ ಹತ್ತಿರದಲ್ಲಿ, ಅದರಲ್ಲೂ ಹೆಚ್ಚು ಆಹಾರ ತ್ಯಾಜ್ಯಗಳು ಉತ್ಪನ್ನವಾಗುವ ನಗರಗಳಲ್ಲಿ ಕಾಗೆಗಳು ಬದುಕುತ್ತವೆ ಮತ್ತು ಸಂತಾನೋತ್ಪತ್ತಿ ಮಾಡುತ್ತವೆ.

ಬಹುಮಟ್ಟಿಗೆ ಕುಟುಂಬದ ಸದಸ್ಯನೇ ಆಗಿಬಿಡುವ ಕಾಗೆಯನ್ನು ‘ಹಂಗಿನ ಒಡನಾಡಿ’ (ಒಬ್ಲಿಗೇಟ್ ಕಂಪಾನಿಯನ್) ಎಂದು ಗ್ರೀನೊ ಕರೆಯುತ್ತಾರೆ. ಹೀಗೆ ಕೃಷಿ ಮತ್ತು ಒಂದೆಡೆ ನೆಲೆಸುವ ಸ್ಥಿರ ಬದುಕು ಪ್ರಾರಂಭವಾದ ಮೇಲೆ ಕಾಗೆಗಳು ತಮ್ಮ ಜೀವವಿಕಾಸದ ಪಥದಲ್ಲಿಯೇ ಬದಲಾವಣೆ ಮಾಡಿಕೊಂಡು ಮನುಷ್ಯರ ಮೇಲೆಯೇ ನಿರ್ಭರವಾಗಿ ಬದುಕಲಾರಂಭಿಸಿದವು. ಈ ಬೆಳವಣಿಗೆಯ ನಂತರ ಕಾಗೆಗಳು ನಮ್ಮ ಭಾರತೀಯ ಸಂಸ್ಕೃತಿಯ, ಆಚಾರವಿಚಾರಗಳ (ಅದರಲ್ಲೂ ಶ್ರಾದ್ಧದ ಆಚರಣೆಗಳಿಗೆ) ಅಂಗವಾಗಿರುವುದು ಓದುಗರಿಗೆ ಪರಿಚಿತ ವಿಚಾರ.
 
ಈ ಸಾಂಸ್ಕೃತಿಕ ಮಹತ್ವ ಒಂದೆಡೆಗಿರಲಿ. ಕಾಗೆ ಮತ್ತು ಅದರ ಕುಟುಂಬಕ್ಕೆ ಸೇರಿದ ಇತರ ಪಕ್ಷಿಗಳು (ಕಾರ್ವಿಡ್ ಎಂದು ಇವುಗಳನ್ನು ಕರೆಯುತ್ತಾರೆ) ಪಕ್ಷಿ-ಪ್ರಾಣಿ ಸಂಕುಲದಲ್ಲಿಯೇ ಅತ್ಯಂತ ಬುದ್ಧಿವಂತವೆಂದು ಪರಿಗಣಿತವಾಗುತ್ತವೆ. ಅವುಗಳ ದೇಹದ ದ್ರವ್ಯರಾಶಿ (ಬಾಡಿ ಮಾಸ್) ಮತ್ತು ಮೆದುಳಿನ ಅನುಪಾತವನ್ನು ಗಮನಿಸಿದಾಗ, ಕಾಗೆಯ ಕುಟುಂಬದ ಪಕ್ಷಿಗಳು ವಾನರನ ಸಮನಾಗಿವೆ. ಅಂದರೆ ಜೀವವಿಕಾಸದ ಪಥದಲ್ಲಿ ಕಾಗೆ ಪಕ್ಷಿಯಾಗಿಯೇ ಉಳಿಯಿತು.

ಆದರೆ ಅದರ ಮೆದುಳಿನ ಬೆಳವಣಿಗೆ ಮುಂದುವರೆಯಿತು ಹಾಗೂ ಅದರ ಬುದ್ಧಿಶಕ್ತಿ ಕೂಡ ಹೆಚ್ಚಿತು. ಹಾಗಾಗಿ ಕಾಗೆಯ ಕುಟುಂಬದ ಪಕ್ಷಿಗಳು ಕನ್ನಡಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಸ್ವಪ್ರಜ್ಞೆಯನ್ನು ಮತ್ತು ಸಲಕರಣೆಗಳನ್ನು ತಯಾರಿಸುವ ಶಕ್ತಿಯನ್ನು ಹೊಂದಿವೆ. ಹೀಗೆ ನೈಸರ್ಗಿಕವಾಗಿ ಕೂಡ ಕಾಗೆ ಒಂದು ಮುಖ್ಯವಾದ ಪಕ್ಷಿಯೆನ್ನುವುದು ಸ್ಪಷ್ಟವಾಗುತ್ತದೆ. ಇಷ್ಟೆಲ್ಲ ಪ್ರಾಮುಖ್ಯವಿದ್ದರೂ ಕಾಗೆಯನ್ನು ಪಕ್ಷಿಶಾಸ್ತ್ರಜ್ಞರಾಗಲಿ, ಇತಿಹಾಸಕಾರರಾಗಲಿ ಇದುವರೆಗೆ ಅಧ್ಯಯನ ಮಾಡಿಲ್ಲ. 
 
ಕಳೆದ ದಶಕದಲ್ಲಿ ಕಾಗೆಗಳ ಸಂಖ್ಯೆ ಭಾರತದ ನಗರಗಳಲ್ಲಿ ಕಡಿಮೆಯಾಗುತ್ತಿದೆ ಎನ್ನುವುದನ್ನು, ಈ ಬಗ್ಗೆ ವ್ಯಾಪಕವಾಗಿ ಪತ್ರಿಕಾ ವರದಿಗಳು ಪ್ರಕಟವಾಗಿರುವುದನ್ನು ಗ್ರೀನೊ ಗುರುತಿಸುತ್ತಾರೆ. ಅಧ್ಯಯನಗಳ ಕೊರತೆಯ ಹಿನ್ನೆಲೆಯಲ್ಲಿ ನಿರ್ದಿಷ್ಟವಾಗಿ ಕಾಗೆಗಳ ಸಂಖ್ಯೆ ಎಷ್ಟಿತ್ತು ಹಾಗೂ ಈಗ ಎಷ್ಟಿರಬಹುದು ಎನ್ನುವ ನಿಖರ ಅಂದಾಜು ದೊರಕುತ್ತಿಲ್ಲ.

ಆದರೆ ಹಲವಾರು ಸಾವಿರ ವರ್ಷಗಳಿಂದ ಭಾರತೀಯ ಬದುಕಿನ ಅಂಗವಾಗಿದ್ದ ಕಾಗೆ ಕಾಣೆಯಾಗುತ್ತಿದೆ ಎನ್ನುವುದರ ಬಗ್ಗೆ ಅನುಮಾನವಿಲ್ಲ. ಪ್ರತಿವರ್ಷವೂ ನೂರಾರು ಸಾವಿರ ಜೀವಿಗಳನ್ನು (ಪ್ರಾಣಿ-ಸಸ್ಯಗಳೆರಡನ್ನೂ)  ಕಳೆದುಕೊಳ್ಳುತ್ತಿದ್ದೇವೆ.

ಮನುಷ್ಯ ಭೂಮಿಯ ಮೇಲೆ ಕಾಣಿಸಿಕೊಂಡ ಮೇಲೆ ಮೊದಲ ಬಾರಿಗೆ ನಾವು ಕಳೆದ ಎರಡು ಶತಮಾನಗಳಲ್ಲಿ ಜೀವವೈವಿಧ್ಯದ ‘ಅಳಿವಿನ ಕಾಲಘಟ್ಟ’ದಲ್ಲಿ ಬದುಕುತ್ತಿದ್ದೇವೆ. ಇವುಗಳ ನಡುವೆ ಭಾರತೀಯ ಕಾಗೆಯ ಉಳಿವು, ಅಳಿವುಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕೆ? 
 
ಜೀವವೈವಿಧ್ಯದ ಅಳಿವಿನ ಪ್ರಶ್ನೆ ದೂರದ ಇತಿಹಾಸಕಾರನ, ಪಕ್ಷಿಶಾಸ್ತ್ರಜ್ಞನ ಪ್ರಶ್ನೆಯಾಗಿ ಮಾತ್ರ ಉಳಿದಿಲ್ಲ. ಅಥವಾ ಅಮೆಜಾನ್ ಅರಣ್ಯಗಳು ಮತ್ತು ಪಶ್ಚಿಮಘಟ್ಟಗಳಂತಹ ಜೈವಿಕವೈವಿಧ್ಯವಿರುವ ಪ್ರದೇಶಗಳಿಗೆ ಸೀಮಿತವಾದ ಪ್ರಶ್ನೆಯಾಗಿ ಉಳಿದಿಲ್ಲ.

ನಾವು ಯಾವ ಬಗೆಯ ಪರಿಸರದಲ್ಲಿ, ಎಂತಹ ಜೀವಿಗಳ ಜೊತೆಗೆ ಬದುಕಲಿಚ್ಛಿಸುತ್ತೇವೆ ಎನ್ನುವುದು ನಾವು ಪ್ರತಿದಿನವೂ ನಮ್ಮ ನಗರಗಳಲ್ಲಿ ಸಹ ಕೇಳಿಕೊಳ್ಳುತ್ತಿರುವ, ಕೇಳಿಕೊಳ್ಳಲೇಬೇಕಿರುವ ಪ್ರಶ್ನೆಯಾಗಿದೆ.

ಅದರಲ್ಲೂ ಕಾಗೆಯಂತೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಪಕ್ಷಿಯೊಂದರ ಕಡೆಗೆ ನಮ್ಮ ಬಾಧ್ಯತೆಗಳೇನು ಎನ್ನುವ ಮುಖ್ಯವಾದ ನೈತಿಕ ಪ್ರಶ್ನೆ ನಮ್ಮ ಮುಂದಿದೆ. ಕಾಗೆಗಳು ಕಾಣೆಯಾಗುತ್ತಿರುವ ನಗರಗಳಲ್ಲಿ ಒಂದು ಎಂದು ಗ್ರೀನೊ ಮೈಸೂರನ್ನು ಗುರುತಿಸುತ್ತಾರೆ. ಕಾಗೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ನೇರವಾದ ಕಾರಣಗಳೇನಿರಬಹುದು ಎನ್ನುವುದು ಸ್ಪಷ್ಟವಾಗಿಲ್ಲ.
 
ನಗರೀಕರಣ ತೀವ್ರವಾಗಿರುವುದು, ಪ್ಲಾಸ್ಟಿಕ್ ಚೀಲಗಳ ವ್ಯಾಪಕ ಬಳಕೆ, ಮರಗಳನ್ನು ಕಡಿಯುತ್ತಿರುವುದು, ಮೊಬೈಲ್ ಟವರುಗಳು- ಹೀಗೆ ಹಲವು ಸಾಧ್ಯತೆಗಳನ್ನು ಪಟ್ಟಿ ಮಾಡಲಾಗುತ್ತಿದೆ.

ಆದರೆ ನಮ್ಮ ಪ್ರತಿದಿನದ ಬದುಕಿನ ಅನುಭವದಲ್ಲಿಯೇ ಕಳೆದ ದಶಕದಲ್ಲಿ ನಮ್ಮ ನಗರಗಳನ್ನು ನಾವು ಕಟ್ಟುತ್ತಿರುವ ರೀತಿ ಇತರ ಜೀವಜಂತುಗಳಿಗೆ ಸ್ಥಳವನ್ನು ಕಡಿಮೆ ಮಾಡುತ್ತಿದೆ. ಕಡಿಮೆ ಹಸಿರು, ಹೆಚ್ಚು ಕಾಂಕ್ರೀಟ್ ಮತ್ತು ಲಭ್ಯ ಜಾಗದ ಗರಿಷ್ಠ ಬಳಕೆ- ಇದು ನಮ್ಮ ಮುಂದೆ ಕಾಣುವ ನಮೂನೆ. 
 
ನನ್ನ ಬಡಾವಣೆಯಾದ ಮೈಸೂರಿನ ಸರಸ್ವತಿಪುರವನ್ನು ಉದಾಹರಣೆಯಾಗಿ ಪರಿಗಣಿಸಿ. 1940- 50ರ ದಶಕಗಳಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಬೋಧಕ- ಬೋಧಕೇತರರಿಗೆಂದು ರೂಪುಗೊಂಡ ಈ ಬಡಾವಣೆ ಅರ್ಧ ಶತಮಾನಕ್ಕೂ ಹೆಚ್ಚುಕಾಲ ತೆಂಗಿನ ತೋಪಿನೊಳಗೆ ಮನೆಗಳನ್ನು ಕಟ್ಟಿಕೊಂಡಂತೆ ಇತ್ತು.

ಕನಿಷ್ಠ ನಾಲ್ಕು ಮರಗಳಿಲ್ಲದ ಮನೆಗಳು ಈ ಬಡಾವಣೆಯಲ್ಲಿ ಇರಲಿಲ್ಲ ಎಂದರೆ ಉತ್ಪ್ರೇಕ್ಷೆಯೇನಲ್ಲ. ಬಹುತೇಕ ರಸ್ತೆಗಳಲ್ಲಿ ಸಾಲುಮರಗಳು ಚಾವಣಿಯಂತಿದ್ದವು. ಊರು ಬೆಳೆದಂತೆ ನಗರದ ಕೇಂದ್ರಕ್ಕೆ ಸೇರಿದ ಸರಸ್ವತಿಪುರದ ನಿವೇಶನಗಳ ಬೆಲೆ ಹೆಚ್ಚಾಯಿತು. ಹಾಗಾಗಿ ತೆಂಗಿನಮರಗಳಿಗೆ, ಇತರ ಸಸ್ಯಗಳಿಗೆ ಸ್ಥಳ ನೀಡುವುದು ಮನುಷ್ಯರ ಲೆಕ್ಕಾಚಾರದಲ್ಲಿ ಕಷ್ಟವಾಗತೊಡಗಿದೆ.

ಹಾಗಾಗಿ ಸರಸ್ವತಿಪುರದ ಬಹುತೇಕ ಮನೆಗಳು ವಿಸ್ತೃತವಾಗುತ್ತಿವೆ ಇಲ್ಲವೇ ಮತ್ತೆ ಅವುಗಳನ್ನು ಕಟ್ಟಲಾಗುತ್ತಿದೆ. ಹೊಸಮನೆಗಳು ನಿವೇಶನವನ್ನು ಸಂಪೂರ್ಣವಾಗಿ ಆವರಿಸುತ್ತಿವೆ. ಕಾಗೆಗಳು, ಚಿಟ್ಟೆಗಳು, ಇತರೆ ಪಕ್ಷಿಗಳು ಸ್ವಾಭಾವಿಕವಾಗಿಯೇ ಸರಸ್ವತಿಪುರದಲ್ಲಿ ಅಪರೂಪವಾಗುತ್ತಿವೆ. 
 
ಇಂತಹ ಸಂದರ್ಭದಲ್ಲಿ ನಮ್ಮ ಆಯ್ಕೆಗಳೇನು ಎನ್ನುವುದರ ಬಗ್ಗೆ ನುಣುಪಾದ ಮಾತುಗಳಿಂದ ತಪ್ಪಿಸಿಕೊಳ್ಳುವಂತಿಲ್ಲ. ಸರಸ್ವತಿಪುರದ ಉತ್ತರದ ಅಂಚಿನಲ್ಲಿರುವ ಕುಕ್ಕರಹಳ್ಳಿ ಕೆರೆಯ ಭವಿಷ್ಯದ ಸುತ್ತಣ ಚರ್ಚೆ ಈ ಮಾತನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ.
 
1860ರ ದಶಕದಲ್ಲಿ ಕಟ್ಟಲಾದ ಈ ಕೆರೆಯು ನಗರ ಬೆಳೆದಂತೆ ಹೊಸನೀರನ್ನು ತರುತ್ತಿದ್ದ ಪೂರ್ಣಯ್ಯ ನಾಲೆಯನ್ನೂ, ಸುತ್ತಲಿನ ಜಲಾನಯನ ಪ್ರದೇಶವನ್ನೂ ಕಳೆದುಕೊಂಡಿತು. ಜೊತೆಗೆ ಸುತ್ತಲಿನ ಬಡಾವಣೆಗಳಿಂದ ಕೊಳಚೆ ನೀರನ್ನು ಸ್ವೀಕರಿಸುತ್ತಿತ್ತು.
 
ಪ್ರಜ್ಞಾವಂತ ನಾಗರಿಕರು ಹತ್ತಾರು ಬಾರಿ ಮಧ್ಯಪ್ರವೇಶ ಮಾಡಿ ಕೆರೆ ಉಳಿಯುವಂತೆ, ಹೊಸನೀರು ಬರುವಂತೆ ಹಾಗೂ ಅದಕ್ಕೆ ಕಲ್ಮಶಗಳು ಸೇರದಂತೆ ಉಳಿಸಿಕೊಂಡರು. ಈಗ ಕುಕ್ಕರಹಳ್ಳಿ ಕೆರೆಯ ಅಭಿವೃದ್ಧಿಗೆ ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಪ್ರಜ್ಞಾವಂತ ನಾಗರಿಕರ ಎರಡು ಗುಂಪುಗಳ ನಡುವೆ ಬಿರುಸಿನ ಚರ್ಚೆ ನಡೆಯುತ್ತಿದೆ.

ಕೆರೆಯನ್ನು ಆಳಗೊಳಿಸಿ, ಕೆಲವು ಹೊಸ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಪ್ರೇಕ್ಷಣೀಯ ಸ್ಥಳವಾಗಿ ಬೆಳೆಸುವುದು ಒಂದು ಗುಂಪಿನ ಆಯ್ಕೆ. ಈ ಪ್ರಕ್ರಿಯೆಯಲ್ಲಿ ಈಗ ಕುಕ್ಕರಹಳ್ಳಿ ಕೆರೆಯಲ್ಲಿರುವ, ಪ್ರತಿವರ್ಷವೂ ಅಲ್ಲಿಗೆ ವಲಸೆ ಬರುವ ಸಾವಿರಾರು ಪಕ್ಷಿಗಳಿಗೆ ತೊಂದರೆಯಾಗುವುದೇ ಎನ್ನುವ ಆತಂಕ ಮತ್ತೊಂದು ಗುಂಪಿನದು. ಈ ಪ್ರಶ್ನೆಗಳು, ಆಯ್ಕೆಗಳು ನಮ್ಮೆಲ್ಲ ಊರುಗಳಲ್ಲಿ, ಹಳ್ಳಿಗಳಲ್ಲಿ ನಮ್ಮನ್ನು ಕಾಡುತ್ತಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT