ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡವೇ ಸತ್ಯ, ಕಟ್ಟಡವೇ ನಿತ್ಯ

Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇದು ದುಂದುವೆಚ್ಚದ ವಿಚಾರವಲ್ಲ. ಅಥವಾ ದುಂದುವೆಚ್ಚದ ವಿಚಾರ ಮಾತ್ರವಲ್ಲ. ಆಳುವ ಸರ್ಕಾರಗಳು ಮಾಡುವ ದುಂದುವೆಚ್ಚಕ್ಕೆ ದೊಡ್ಡ ಒಂದು ಪರಂಪರೆಯೇ ಇದೆ. ಆದುದರಿಂದ ವಿಧಾನಸೌಧ ಎಂಬ ಕಟ್ಟಡಕ್ಕೆ 60 ತುಂಬಿರುವುದು ಮತ್ತು ಅದನ್ನು ಆಚರಿಸಲು ಎಷ್ಟು ಕೋಟಿ ಹೆಚ್ಚು ಖರ್ಚು ಮಾಡಿದರೆ ದುಂದುವೆಚ್ಚ, ಎಷ್ಟು ಕೋಟಿ ಕಡಿಮೆ ಖರ್ಚು ಮಾಡಿದರೆ ಸಮರ್ಪಕ ವೆಚ್ಚ ಎನ್ನುವುದೆಲ್ಲಾ ಕೇವಲ ಚರ್ಚೆಯ ವಿಚಾರ.

ಸರ್ಕಾರಗಳು ಸಾಂವಿಧಾನಿಕವಾಗಿ ತಮ್ಮ ಕರ್ತವ್ಯವಲ್ಲದ ಅವೆಷ್ಟು ಉದ್ದೇಶಗಳಿಗಾಗಿ ಯಾರದ್ದೋ ಹಣ ಹಾಕಿ ಜಾತ್ರೆ ಮಾಡುತ್ತವೆ ಮತ್ತು ಅವುಗಳನ್ನೆಲ್ಲಾ ಭಾರತೀಯ ಪ್ರಜಾತಂತ್ರ ವ್ಯವಸ್ಥೆ ಎಷ್ಟೊಂದು ಸಲೀಸಾಗಿ ಒಪ್ಪಿಕೊಂಡುಬಿಟ್ಟಿದೆ ಎಂದರೆ ಈ ವಿಚಾರಗಳ ಬಗ್ಗೆ ಬರೆಯುವುದು ಮತ್ತು ಚರ್ಚಿಸುವುದು ಇತ್ಯಾದಿಗಳೆಲ್ಲಾ ಒಂದು ರೀತಿಯಲ್ಲಿ ಸಮಯದ ದುಂದುವೆಚ್ಚ ಎಂದುಕೊಳ್ಳಬಹುದು.

ಉದಾಹರಣೆಗೆ, ಇದೇ ಕರ್ನಾಟಕದಲ್ಲಿ ಎರಡೂ ಪ್ರಮುಖ ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ಅಧಿಕಾರಾವಧಿಯಲ್ಲಿ ಸ್ಪರ್ಧೆಗೆ ಬಿದ್ದವರಂತೆ ಕಂಡ ಕಂಡ ಚಾರಿತ್ರಿಕ ಮತ್ತು ಕಾಲ್ಪನಿಕ ವ್ಯಕ್ತಿಗಳ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು, ರಜೆ ಘೋಷಿಸುತ್ತಿರುವುದು, ಅದಕ್ಕಾಗಿ ಸರ್ಕಾರಿ ವ್ಯವಸ್ಥೆಯ ಸಮಯ ಮತ್ತು ಜನರ ಹಣ ಎರಡನ್ನೂ ಎಗ್ಗಿಲ್ಲದೆ ಬಳಸುತ್ತಿರುವುದು ದುಂದುವೆಚ್ಚ ಮಾತ್ರವಲ್ಲ; ಅದು ಇಂಗ್ಲಿಷ್‌ನಲ್ಲಿ ಹೇಳುತ್ತಾರಲ್ಲ ‘ಕ್ರಿಮಿನಲ್ ವೇಸ್ಟ್’ ಅಂತ, ಹಾಗೆ. ಅವುಗಳನ್ನೆಲ್ಲಾ ಮಾಧ್ಯಮಗಳಾಗಲೀ, ಮಾಧ್ಯಮವರ್ಗದವರಾಗಲೀ ಪ್ರಶ್ನಿಸುವುದಿಲ್ಲ. ‘ಯಾವ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಲು ಇದನ್ನೆಲ್ಲಾ ಮಾಡುತ್ತಿದ್ದೀರಿ’ ಅಂತ ಕೇಳುವುದಿಲ್ಲ. ಯಾಕೆಂದರೆ ಅಲ್ಲಿ ‘ಜಾತಿ’ಯ ಪ್ರಶ್ನೆ ಇದೆ ನೋಡಿ. ವಿಧಾನಸೌಧ ಹೇಳಿಕೇಳಿ ಜಡ ಕಟ್ಟಡ. ಅಷ್ಟರಮಟ್ಟಿಗೆ ಅದು ‘ಸೆಕ್ಯುಲರ್’. ಆದಕಾರಣ ಅದರ ಹೆಸರಿನಲ್ಲಿ ನಡೆಯುವ ದುಂದುವೆಚ್ಚವನ್ನು ಪ್ರಶ್ನಿಸಬಹುದು. ಅಂದಮಾತ್ರಕ್ಕೆ ಅಲ್ಲಿ ದುಂದು ವೆಚ್ಚ ಮಾಡಿದ ಕಾರಣ ಇಲ್ಲೂ ಮಾಡಬಹುದು ಎಂಬ ಸಮರ್ಥನೆ ಅಲ್ಲ. ಆಯ್ದು-ಆಯ್ದು ಟೀಕೆ ಮಾಡುವುದರಿಂದ, ಅನುಕೂಲಕರ ಸತ್ಯಗಳನ್ನಷ್ಟೇ ಹೇಳುವುದರಿಂದ ಪ್ರಜಾತಂತ್ರ ಬೆಳೆಯುವುದಿಲ್ಲ. ಬದಲಾಗಿ ಅದು ಇನ್ನಷ್ಟೂ ಸಂಕೀರ್ಣವೂ, ಸತ್ವರಹಿತವೂ ಆಗುತ್ತದೆ. ಎಲ್ಲಿ ಪ್ರಶ್ನಿಸಬೇಕೋ ಅಲ್ಲಿ ಪ್ರಶ್ನಿಸಬೇಕಿರುವುದು, ದುಂದುವೆಚ್ಚದ ಮೊತ್ತವನ್ನಲ್ಲ, ದುಂದುವೆಚ್ಚದ ಹಿಂದಿನ ಮನಸ್ಥಿತಿಯನ್ನು, ದುಂದುವೆಚ್ಚದ ಹಿಂದಿನ ನಾಯಕತ್ವದ ಯೋಚನಾ ದಾರಿದ್ರ್ಯವನ್ನು. ಪ್ರಶ್ನಿಸಬೇಕಾಗಿರುವುದು ಸಾರ್ವಜನಿಕ ಜೀವನದಲ್ಲಿ ನಾಚಿಕೆ ಎಂಬ ಸಂವೇದನೆಗೆ ಬಡಿದಿರುವ ಗರ ಮತ್ತು ಬರವನ್ನು.

ಇರಲಿ. ಮತ್ತೆ ವಿಧಾನಸೌಧ ಎಂಬ ಕಟ್ಟಡದ ವರ್ಧಂತಿಯ ವಿಚಾರಕ್ಕೆ ಬರೋಣ. ಒಂದು ಪ್ರಶ್ನೆ. ವಿಧಾನಸೌಧ ಎಂಬ ಕಟ್ಟಡಕ್ಕೆ 60 ತುಂಬಿದೆ ಎನ್ನುವ ಆಚರಣೆ ಯಾಕಾಗಿ? ಆ ಕಟ್ಟಡ ಕರ್ನಾಟಕದ ವಿಧಾನಮಂಡಲ ಎಂಬ ಸಾಂವಿಧಾನಿಕ ಸಂಸ್ಥೆಗೆ ಆವಾಸಸ್ಥಾನ ಆಗಿದೆ ಎನ್ನುವ ಕಾರಣಕ್ಕಾಗಿಯೇ? ಅಥವಾ ಅದು ಸದ್ಯ ರಾಜ್ಯದಲ್ಲಿರುವ ಸರ್ಕಾರಿ ಕಟ್ಟಡಗಳ ಪೈಕಿ ಅತ್ಯಂತ ಸುಂದರವಾಗಿಯೂ, ಗಟ್ಟಿಮುಟ್ಟಾಗಿಯೂ ಇರುವ ಕಟ್ಟಡ ಎನ್ನುವ ಕಾರಣಕ್ಕಾಗಿಯೇ?

ಆಚರಣೆಗೆ ನೆಪ ಮೊದಲನೆಯದ್ದು ಅರ್ಥಾತ್ ಆ ಕಟ್ಟಡದಲ್ಲಿ ವಿಧಾನಮಂಡಲ ಸಭೆ ಸೇರುತ್ತದೆ ಎನ್ನುವುದೇ ಆಗಿದ್ದರೆ, ಇದು ವಿಚಿತ್ರವಾಗಿದೆ. ವಿಧಾನಸಭೆಯ ಸುವರ್ಣ ವರ್ಷಾಚರಣೆ 2012ರಲ್ಲೇ ನಡೆದಿತ್ತು. ಆಗ ಒಂದು ವಿಶೇಷ ಅಧಿವೇಶನ ನಡೆದಿತ್ತು. ವಿಧಾನಮಂಡಲ ಸಾಗಿ ಬಂದ ಹಾದಿಯನ್ನು ಪುನರ್ ಅವಲೋಕಿಸುವ ಕೆಲಸವೂ ನಡೆದಿತ್ತು. ಅದನ್ನೆಲ್ಲಾ ಈಗ ಇನ್ನೊಮ್ಮೆ ನಡೆಸುತ್ತಿದ್ದಾರೆಯೇ? ಒಮ್ಮೆ ಸಂಸ್ಥೆಯ ವರ್ಧಂತಿ, ಇನ್ನೊಮ್ಮೆ ಸಂಸ್ಥೆಯನ್ನು ಹೊಂದಿರುವ ಕಟ್ಟಡದ ವರ್ಧಂತಿ ಎಂದು ಆಚರಣೆ ನಡೆಸುವುದಕ್ಕೆ ಏನಾದರೂ ಅರ್ಥ ಇದೆಯೇ? ಈಗ ಎರಡನೆಯ ಕಾರಣಕ್ಕೆ ಬರೋಣ. ಅಂದರೆ ವಿಧಾನ ಸೌಧ ಎನ್ನುವ ಕಟ್ಟಡ ಅತ್ಯಂತ ಸುಂದರವೂ, ಸದೃಢವೂ ಆಗಿರುವ ಸರ್ಕಾರಿ ಕಟ್ಟಡ, ರಾಜ್ಯ ರಾಜಧಾನಿಯ ಹೆಗ್ಗುರುತುಗಳಲ್ಲಿ ಒಂದು, ಇದು ರಾಜ್ಯ ಸರ್ಕಾರದ ಮುಖ್ಯಕಚೇರಿ, ಇದರ ವಿನ್ಯಾಸದಲ್ಲಿ, ರಚನೆಯಲ್ಲಿ ಕಲಾತ್ಮಕತೆ-ವೃತ್ತಿಪರತೆ ಇದೆ ಇತ್ಯಾದಿ ಕಾರಣಗಳಿಗೋಸ್ಕರ ಈ ಆಚರಣೆ ಎಂದಾದರೆ ಈ ಸಂದರ್ಭದಲ್ಲಿ ಯೋಚಿಸಬೇಕಾದ ಹಲವು ವಿಚಾರಗಳಿವೆ.

ಮೊದಲನೆಯದ್ದು ಒಂದು ಆಡಳಿತಾತ್ಮಕ ವಿಚಾರ. ವಿಧಾನಸೌಧ ಎಂಬ ಕಟ್ಟಡ ವಿಧಾನಮಂಡಲದ ಆಡಳಿತ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅದು ಸರ್ಕಾರದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗಿರುವಾಗ ವಿಧಾನಮಂಡಲದ ಉಭಯ ಸದನಗಳ ಮುಖ್ಯಸ್ಥರಿಗೆ ಈ ಆಚರಣೆಯ ಉಸಾಬರಿ, ಅದಕ್ಕೋಸ್ಕರ ಸರ್ಕಾರದ ಜತೆಗಿನ ಹಗ್ಗ-ಜಗ್ಗಾಟ ಇತ್ಯಾದಿಗಳೆಲ್ಲಾ ಯಾಕೆ ಎನ್ನುವುದು ಒಂದು ಪ್ರಶ್ನೆ. ಈ ಹಿಂದೆ ವಿಧಾನಸೌಧ ಮತ್ತು ವಿಕಾಸಸೌಧಗಳ ನಡುವೆ ಮಹಾತ್ಮ ಗಾಂಧಿಯವರ ಬೃಹತ್ ಪ್ರತಿಮೆಯೊಂದನ್ನು ಪ್ರತಿಷ್ಠಾಪಿಸುವ ಕೆಲಸ ಕೂಡ ಆಗಿದ್ದು ಸದನಗಳ ಮುಖ್ಯಸ್ಥರಲ್ಲಿ ಒಬ್ಬರ ಆಸಕ್ತಿಯಿಂದಾಗಿ. ಭಾರತದಲ್ಲಿ ಅಧಿಕಾರಸ್ಥ ರಾಜಕಾರಣಿಗಳಿಗೆ ಅಂಟಿಕೊಂಡಿರುವ ಕಟ್ಟಡಗಳನ್ನು ಕಟ್ಟುವ ಮೋಹ ಮತ್ತು ಪ್ರತಿಮೆಗಳನ್ನು ಸ್ಥಾಪಿಸುವ ಮೋಹ ಒಂದು ಪಿಡುಗು. ಮಹಾರಾಷ್ಟ್ರದಲ್ಲಿ ಬೃಹತ್ ಶಿವಾಜಿಯ ಪ್ರತಿಮೆ, ಗುಜರಾತ್‌ನಲ್ಲಿ ಬೃಹತ್ ವಲ್ಲಭ ಬಾಯ್ ಪಟೇಲ್ ಪ್ರತಿಮೆ, ಉತ್ತರ ಪ್ರದೇಶದಾದ್ಯಂತ ಅಂಬೇಡ್ಕರ್ ಪ್ರತಿಮೆಗಳು- ಈ ಚಾಳಿಯ ಮುಂದುವರಿದ ಭಾಗವಾಗಿ ವಿಧಾನ ಸೌಧದ ಪಕ್ಕ ಒಂದು ಮಹಾತ್ಮ ಗಾಂಧಿಯ ಪ್ರತಿಮೆ. ಅಲ್ಲಿ ಒಂದು ಗಾಂಧಿ ಪ್ರತಿಮೆ ಹೇಗೂ ಮೊದಲೇ ಇತ್ತು. ಇದು ಎರಡನೆಯದ್ದು. ಮಹಾತ್ಮ ಗಾಂಧಿ ಇರಲಿ, ಗಾಂಧಿಯವರಿಗಿಂತ ದೊಡ್ಡ ಇನ್ನೊಂದು ಆತ್ಮವೇ ಇರಲಿ ಅವರ ಪ್ರತಿಮೆ ಸ್ಥಾಪಿಸಿ ಪ್ರತಿಷ್ಠೆ ಮೆರೆಯುವ ಸಮಕಾಲೀನ ರಾಜಕಾರಣವನ್ನು ಪ್ರಶ್ನಿಸುವ ಅಗತ್ಯವಿದೆ.

ಸಾರ್ವಜನಿಕ ಕಟ್ಟಡಗಳ ಸುತ್ತ ಇರಬೇಕಾದದ್ದು ಪ್ರತಿಮೆಗಳ ಕಾಡಲ್ಲ, ಅಲ್ಲಿರಬೇಕಾದದ್ದು ಮುಕ್ತ ಪರಿಸರ (ಓಪನ್ ಸ್ಪೇಸ್). ಪ್ರತಿಮೆ ಸ್ಥಾಪಿಸುವ, ಕಟ್ಟಡ ಎಬ್ಬಿಸುವ ಮಾಮೂಲಿ ಕ್ರಮಗಳ ಜತೆ ಈಗ ಇರುವ ಕಟ್ಟಡಗಳ ವರ್ಧಂತಿ ಆಚರಿಸುವ ಮೋಹವೂ ಸೇರಿಕೊಂಡಂತಿದೆ. ಸರ್ಕಾರ ಇಂತಹ ಅನಗತ್ಯ ಕ್ರಮಗಳಿಗೆ ಮುಂದಾದಾಗ ಅದನ್ನು ಪ್ರಶ್ನಿಸಬೇಕಿರುವ ವಿಧಾನಮಂಡಲದ ಮುಖ್ಯಸ್ಥರೇ ಹೀಗೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ಕರ್ನಾಟಕದ ಆಧುನಿಕ ರಾಜಕೀಯದ ವಿಪರ್ಯಾಸಗಳಲ್ಲಿ ಒಂದು.

ಕೆಲ ಸಮಯದ ಹಿಂದೆ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಕೋರಿಕೆಯಂತೆ ದೇವರಾಜ ಅರಸು ಅವರ ಆಡಳಿತಕ್ಕೆ ಸಂಬಂಧಿಸಿದ ಒಂದು ಪುಸ್ತಕ ಬರೆಯಲು ಅರಸು ನೇತೃತ್ವದ ಸರ್ಕಾರದ ಬಗ್ಗೆ ಮಾಹಿತಿ ಬೇಕಿತ್ತು. ಅರಸು ಅವರ ಕುರಿತಾಗಿ ಈ ತನಕ ಬಂದ ಎಲ್ಲಾ ಪುಸ್ತಕಗಳು ಬೇರೆಲ್ಲೂ ಸಿಗದೇ ಹೋದರೂ ಕರ್ನಾಟಕ ವಿಧಾನ ಮಂಡಲದ ಗ್ರಂಥಾಲಯದಲ್ಲಿ ಸಿಗಬಹುದು ಅಂದುಕೊಂಡು ಅಲ್ಲಿಗೆ ಹೋದರೆ ಅಚ್ಚರಿ ಕಾದಿತ್ತು. ಕರ್ನಾಟಕದಲ್ಲಿ ಈ ತನಕ ಆಗಿ ಹೋದ ಅಷ್ಟೂ ಮುಖಮಂತ್ರಿಗಳ ಪೈಕಿ ಅತ್ಯಂತ ಹೆಚ್ಚು ಪುಸ್ತಕಗಳು ಪ್ರಕಟವಾಗಿರುವುದು ದೇವರಾಜ ಅರಸು ಅವರ ಕುರಿತು. ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲೂ ಅವರ ಆಡಳಿತದ ಮೇಲೆ ಲೇಖನಗಳು ಪ್ರಕಟವಾಗಿವೆ. ಅರಸು ಅವರ ಕುರಿತಾಗಿ ಇರುವಷ್ಟು ಬರಹಗಳು ಇಡೀ ದೇಶದಲ್ಲೇ ಇನ್ನೊಬ್ಬ ಮುಖಮಂತ್ರಿಯ ಕುರಿತು ಈ ತನಕ ಬಂದಿಲ್ಲ. ಆದರೂ ಕರ್ನಾಟಕ ವಿಧಾನ ಮಂಡಲದ ಗ್ರಂಥಾಲಯದಲ್ಲಿ ಅರಸು ಕುರಿತು ಒಂದೇ ಒಂದು ಪುಸ್ತಕವೂ ಇರಲಿಲ್ಲ. ಇನ್ನು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಬಂದ ಪ್ರಕಟಣೆಗಳ ಮಾತಂತೂ ದೂರ ಉಳಿಯಿತು. ಕೊನೆಗೆ ಕರ್ನಾಟಕ ವಿಧಾನ ಮಂಡಲದವರೇ ಹೊರತಂದ ಒಂದು ಪುಸ್ತಕವಾದರೂ ಅಲ್ಲಿ ಸಿಕ್ಕಬಹುದು ಅಂದುಕೊಂಡದ್ದು ಕೂಡ ತಪ್ಪಾಯಿತು. ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾದ ಜ್ಞಾನಕೋಶದಲ್ಲಿ (ವಿಶ್ವಕೋಶ) ಅರಸು ಕುರಿತಾಗಿ ಇದ್ದ ಅರ್ಧ ಪುಟದಷ್ಟು ಮಾಹಿತಿ ತೋರಿಸಿದ ಗ್ರಂಥಾಲಯದ ಸಿಬ್ಬಂದಿ ‘ನಮ್ಮಲ್ಲಿ ಇಷ್ಟೇ ಇರುವುದು’ ಎಂದು ನಯವಾಗಿ ಹೇಳಿ ಬಿಟ್ಟರು! ಗ್ರಂಥಾಲಯ ಈ ಪರಿಸ್ಥಿತಿಯಲ್ಲಿದ್ದರೆ ವಿಧಾನ ಮಂಡಲದಲ್ಲಿ ಎಂತಹ ಚರ್ಚೆಗಳು ಸಾಧ್ಯ ಎನ್ನುವುದನ್ನು ಊಹಿಸಲು ಕಷ್ಟವೇನಿಲ್ಲ.

ಶಾಸಕರು ಗ್ರಂಥ ಓದಿ ಏನು ಮಾಡಬೇಕು, ಅರಸು ಚರಿತ್ರೆ ತಿಳಿದುಕೊಂಡು ಏನಾಗಬೇಕು, ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದರೆ ಸಾಲದೇ, ಗ್ರಂಥಾಲಯ ಹೀಗಿರುವುದಕ್ಕೂ ವರ್ಧಂತ್ಯುತ್ಸವಕ್ಕೂ ಏನು ಸಂಬಂಧ ಇತ್ಯಾದಿ ಪ್ರಶ್ನೆಗಳನ್ನು ಸಂಬಂಧಪಟ್ಟವರು ಕೇಳಿದರೆ ಅವರಿಗೆ ಪ್ರಜಾತಂತ್ರದ ಮೂಲಪಾಠಗಳನ್ನು ಯಾರು ತಾನೇ ಬೋಧಿಸಲು ಸಾಧ್ಯ? ಈಗ ಹಾಕಿಕೊಂಡ ಆಚರಣೆಯ ರೂಪುರೇಷೆ ನೋಡಿದರೆ ಕಟ್ಟಡವೇ ಸತ್ಯ, ಕಟ್ಟಡವೇ ನಿತ್ಯ, ಕಟ್ಟಡದೊಳಗೆ ಏನಿದೆ ಎನ್ನುವುದು ಬರೀ ಅಕಾಡೆಮಿಕ್ ಮಿಥ್ಯ ಎನ್ನುವ ತತ್ವಕ್ಕೆ ವಿಧಾನಮಂಡಲದ ಮುಖ್ಯಸ್ಥರು ಅಂಟಿಕೊಂಡ ಹಾಗೆ ಕಾಣಿಸುತ್ತದೆ.

ಈಗ್ಗೆ ಎರಡು– ಮೂರು ವರ್ಷಗಳ ಹಿಂದೆ ರಾಜ್ಯದ ಯೋಜನಾ ಇಲಾಖೆಯ ಆಗಿನ ಪ್ರಧಾನ ಕಾರ್ಯದರ್ಶಿಯವರು ಮಾತಿಗೆ ಸಿಕ್ಕಾಗ ಅಂಗನವಾಡಿ ಕಟ್ಟಡಗಳ ಸ್ಥಿತಿಗತಿಗಳ ಬಗ್ಗೆ ಹೇಳಿದರು. ಅವರು ಭೇಟಿ ನೀಡಿದ್ದ ಬಹುತೇಕ ಅಂಗನವಾಡಿ ಕಟ್ಟಡಗಳು ಗಾಳಿ–ಬೆಳಕಿಲ್ಲದ ಆಯತಾಕಾರದ ಪೆಟ್ಟಿಗೆಗಳಂತಿವೆ ಎಂದೂ, ಈ ಪುಟ್ಟ ಕಟ್ಟಡಗಳಿಗೆ ಒಂದು ಆವರಣ ಗೋಡೆ ಕೂಡಾ ಇಲ್ಲದೆ ಮಕ್ಕಳಿಗೆ ಆಡಲು ನಿರ್ಮಲವಾದ ಪರಿಸರವೇ ಇಲ್ಲ ಎಂದೂ, ಇರುವ ಒಂದೇ ಕೊಠಡಿಯಲ್ಲಿ ಮಕ್ಕಳ ಆಟ, ಪರಿಚಾರಕಿ ನಿರ್ವಹಿಸಬೇಕಾದ ಅಸಂಖ್ಯ ಕಡತಗಳ ದಾಸ್ತಾನು, ಸಾಮಾನು ಶೇಖರಣೆ ಎಲ್ಲವೂ ಆಗಬೇಕು ಎಂದೂ ಹೇಳಿ ವಿಷಾದ ವ್ಯಕ್ತಪಡಿಸಿದರು.

ಇದು, ಕೇವಲ ಅಂಗನವಾಡಿ ಕಟ್ಟಡಗಳ ಸ್ಥಿತಿಯಲ್ಲ. ಬಹುತೇಕ ಸರ್ಕಾರಿ ಕಚೇರಿಗಳ ವಾಸ್ತುಶಿಲ್ಪ, ವಿನ್ಯಾಸ ಮತ್ತು ರಚನೆಯ ಕುರಿತು ಒಂದು ಕ್ಷಣ ಯೋಚಿಸಿ. ಅವುಗಳೆಲ್ಲಾ ಮನುಷ್ಯರಿಗೋಸ್ಕರ ನಿರ್ಮಿಸಿದ ಹಾಗೆ ಇವೆಯೇ? ಯಾವುದೋ ಶುಷ್ಕ, ಭಾವಶೂನ್ಯ ವ್ಯವಹಾರಗಳಿಗೋಸ್ಕರ ನಿರ್ಮಿಸಿದ ಕಟ್ಟಡಗಳಂತಿಲ್ಲವೇ? ಸ್ವಾತಂತ್ರ್ಯಾ ನಂತರದ 70 ವರ್ಷಗಳಲ್ಲಿ ನಮ್ಮ ಯಾವುದಾದರೂ ಒಂದು ಸರ್ಕಾರಿ ಕಚೇರಿಯ ಆವರಣ, ವಿನ್ಯಾಸ, ರಚನೆ ಹೆಚ್ಚು ಜನಸ್ನೇಹಿಯಾಗಿ ಬದಲಾಗಿದೆಯೇ? ಹೊಸದಾಗಿ ನಿರ್ಮಿಸಿದ ಮಿನಿ ವಿಧಾನಸೌಧಗಳಲ್ಲಿ ಒಂದು ಪಡಸಾಲೆ, ಸಾರ್ವಜನಿಕರಿಗೋಸ್ಕರ ಆಸನ ವ್ಯವಸ್ಥೆ ಇತ್ಯಾದಿಗಳೆಲ್ಲಾ ಸ್ವಲ್ಪಮಟ್ಟಿಗೆ ಇವೆ. ಆದರೆ ಆ ಕಡೆ ಈ ಕಡೆ ಕಣ್ಣಾಯಿಸಿದರೆ ಗೋಡೆಗಳು ಬಿರುಕುಬಿಟ್ಟಿರುತ್ತವೆ, ಮಾಡುಗಳು ಸೋರುತ್ತಿರುತ್ತವೆ, ಪೈಂಟು ಕಿತ್ತುಬರುತ್ತಿರುತ್ತದೆ. ಮತ್ತದೇ ಭೂತ ಬಂಗಲೆಯ ವಾತಾವರಣ ನಿರ್ಮಾಣವಾಗುತ್ತಿದೆ. ಸಂಬಂಧಪಟ್ಟವರನ್ನು ಕೇಳಿದರೆ ‘ನಿರ್ವಹಣೆಗೆ ನಮಗೆ ಸಿಕ್ಕುವುದು ಚಿಕ್ಕಾಸು’ ಎನ್ನುವ ಉತ್ತರ ಬರುತ್ತದೆ.

ಪ್ರಪಂಚದಾದ್ಯಂತ ಶಾಲಾ ಕಟ್ಟಡಗಳ, ತರಗತಿಗಳ ವಿನ್ಯಾಸದಲ್ಲಿ ಹೊಸತನದ ಆವಿಷ್ಕಾರವಾಗಿದೆ. ಆದರೆ ಸರ್ಕಾರಿ ಶಾಲಾ–ಕಾಲೇಜುಗಳು ಇನ್ನೂ ನಡೆಯುವುದು ಅದೇ ಹಳೆಯ ಆಯತಾಕಾರದ ಉದ್ದನೆಯ ಕಟ್ಟಡಗಳಲ್ಲಿ. ಒಂದು ತರಗತಿಯಲ್ಲಿ ನಡೆದದ್ದು ಇನ್ನೊಂದು ತರಗತಿಗೆ ಕೇಳುವಂತೆ ಕೋಣೆಗಳ ಸಾಲುಗಳು. ಅಧ್ಯಾಪಕರಿಗೆ ವಿರಮಿಸಲು ಇಕ್ಕಟ್ಟಾದ ವ್ಯವಸ್ಥೆ. ಎಲ್ಲಾ ಬಿಡಿ. ಶಾಲೆಯಲ್ಲೊಂದು ಶೌಚಾಲಯ ಇರಬೇಕು ಎನ್ನುವುದನ್ನು ಕಡ್ಡಾಯಗೊಳಿಸಲು ಸಂವಿಧಾನವನ್ನೇ ತಿದ್ದುಪಡಿ ಮಾಡಬೇಕಾದ ದೇಶ ಇದು.

ಸರ್ಕಾರಿ ಆಸ್ಪತ್ರೆಗಳಂತೂ ದೇವರಿಗೇ ಪ್ರೀತಿ. ಅದೇ ವೇಳೆ ವಿಧಾನಸೌಧದಲ್ಲಿ, ವಿಕಾಸಸೌಧದಲ್ಲಿ, ಇನ್ನಿತರ ಕಡೆ ಉನ್ನತ ಹುದ್ದೆಯ ಮಂದಿ ಕುಳಿತುಕೊಳ್ಳುವ ಕಚೇರಿಗಳನ್ನು ನೋಡಿ. ಅಲ್ಲಿರುವ ಫರ್ನಿಚರ್, ವುಡನ್ ಪ್ಯಾನೆಲಿಂಗ್, ಎಕರೆ ವಿಸ್ತಾರದ ಕೋಣೆ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ ನೋಡಿ. ಇಡೀ ಸರ್ಕಾರಿ ವ್ಯವಸ್ಥೆ ಎನ್ನುವುದು ಒಂದು ಸೆಕ್ಯುಲರ್ ವರ್ಣಾಶ್ರಮ ವ್ಯವಸ್ಥೆ ಎನ್ನುವುದನ್ನು ಅರಿಯಲು ಸರ್ಕಾರಿ ಕಟ್ಟಡಗಳು ಮತ್ತು ಅಲ್ಲಿ ಯಾರ್‍ಯಾರಿಗೆ ಎಂಥೆಂಥ ಅನುಕೂಲಗಳಿವೆ ಎನ್ನುವುದನ್ನು ನೋಡಿದರೆ ಸಾಕು. ವಿಧಾನಸೌಧ ದಿವ್ಯವೂ, ಭವ್ಯವೂ ಆಗಿದೆ ಎನ್ನುವುದನ್ನು ಅದ್ಧೂರಿಯಾಗಿ ಆಚರಿಸುವ ಹೊತ್ತಿಗೆ ಉಳಿದ ಸರ್ಕಾರಿ ಕಚೇರಿಗಳ ಕತೆಯನ್ನು ಯಾರಾದರೂ ಹೇಳಬೇಕು, ಕೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT