ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುವವರು ಕೆಡವುವವರು

Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ಅದು ಎಂದೂ ನಿಜಗೊಂಡಿರದ ವ್ಯಾಖ್ಯೆ. ಆದರೆ ಎಂದಾದರೂ ನಿಜಗೊಳ್ಳಲಿ ಎಂದು ಆಸೆಪಡುವಂಥ ವ್ಯಾಖ್ಯೆ. ನಮ್ಮ ತಲೆಮಾರಿನಲ್ಲಂತೂ ಒಂದು ಪ್ಯಾರಡಿಯಂತೆ ಕಾಣಿಸುತ್ತಾ ಬಂದಿದೆ. ಅದು ವಿಧಾನಸೌಧದ ಮುಂಬರಹ: ಸರ್ಕಾರಿ ಕೆಲಸ ದೇವರ ಕೆಲಸ. ದೇವರನ್ನು ನಂಬದವರಿಗೂ ಈ ಮಾತು ಪಾವಿತ್ರ್ಯವನ್ನು ನೆನಪಿಸುತ್ತದೆ. ಅಲ್ಲೊಂದು ಇಲ್ಲೊಂದು ದೇವರುಗಳೂ, ಬಹುಸಂಖ್ಯೆಯ ದೆವ್ವಗಳೂ ಒಳಬಂದಿದ್ದರಿಂದ ಇಲ್ಲಿ ದೇವರ ಕೆಲಸಗಳು ಕಮ್ಮಿ. ಭೂತ ಚೇಷ್ಟೆಗಳೇ ಜಾಸ್ತಿ.

ಭಾರತದ ಯಾವ ರಾಜ್ಯಕ್ಕೂ ಇಂಥ ಘನವಾದ, ಮೋಹಕವಾದ, ಪಾರಂಪರಿಕವಾದ ಶಾಸನಸಭಾ ಕಟ್ಟಡವಿಲ್ಲ. ಇದನ್ನು ಕನಸಿದವರು ಕೆಂಗಲ್ ಹನುಮಂತಯ್ಯ. ಹಲವು ಊರು, ನಾನಾ ದೇಶ ಸುತ್ತಿ ಕರ್ನಾಟಕದ ಈ ಜೀವಸೌಧವನ್ನು ಪರಿಕಲ್ಪಿಸಿದರು. ೧೯೫೧ರಲ್ಲಿ ನೆಹರೂ ಅಡಿಗಲ್ಲು ಹಾಕಿದರು. ಎಲ್ಲರ ಒಳದನಿಯ ಮನೆಯಂತೆ ರೂಪುಗೊಂಡ ಇದನ್ನು ಬಿ.ಆರ್.ಮಾಣಿಕ್ಯಂ ಮತ್ತು ತಂಡ ಕಡೆದು ನಿಲ್ಲಿಸಿತು. ನವ ದ್ರಾವಿಡ ಶೈಲಿಯಲ್ಲಿ ಜೀವ ತಳೆದ ಈ ಕಲಾಕೃತಿ ೧೯೫೬ರಲ್ಲಿ ಪೂರ್ಣಗೊಂಡಿತು. ಅರ್ಧ ಶತಮಾನ ಕಂಡಿರುವ ಇದರ ಎತ್ತರ ನೂರೈವತ್ತು ಅಡಿ.  

ಸೂರ್ಯೋದಯಕ್ಕೆ ಮುಖ ಮಾಡಿ ನಿಂತರೂ ನಾಲ್ಕು ದಿಕ್ಕುಗಳಲ್ಲಿ ಸಮನ್ವಯ ಸಾಧಿಸಿರುವ ಸೌಂದರ್ಯ ಪ್ರಜ್ಞೆ. ನಲವತ್ತು ಅಡಿ ಉದ್ದದ ಹನ್ನೆರಡು ಶಿಲಾಸ್ತಂಭಗಳು, ಈಗಲೂ ಯಾರೂ ಹತ್ತಿ ಇಳಿಯದ ವಿಶಾಲವಾದ ಮೆಟ್ಟಿಲುಗಳು, ಕಿರೀಟದಂಥ ಗುಮ್ಮಟಗಳು, ತಲೆಯ ಮೇಲೆ ರಾಷ್ಟ್ರೀಯ ಲಾಂಛನ. ಕಟ್ಟಡ ನಿರ್ಮಾಣಕ್ಕೆ ಎಷ್ಟು ಖರ್ಚಾಯಿತೋ ಅಷ್ಟು ಹಣ ಈಗ ಪ್ರತಿವರ್ಷದ ನಿರ್ವಹಣೆಗೇ ಬೇಕು ಎಂಬುದು ಈ ಭವ್ಯಸೌಧದ ಮಹತ್ತಿಗೆ ಸಾಕ್ಷಿ. ದೀಪಾಲಂಕೃತ ವಿಧಾನಸೌಧ ಬಹು ಕಾವ್ಯಾತ್ಮಕ. ಕನ್ನಡಿಗರು ಮಾತ್ರವಲ್ಲ; ಅನ್ಯಭಾಷಿಕರು, ಅನ್ಯದೇಶೀಯರು ಬೆರಗಾಗಿ ನೋಡುತ್ತಾರೆ. ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿಗಳಲ್ಲೂ ಇಂಥ ವಿಶಿಷ್ಟವಾದ ವಿಧಾನಸೌಧವಿಲ್ಲ. ವಿಶಾಲವಾದ ಪಾರ್ಕಿಂಗ್ ಏರಿಯಾ, ಸುತ್ತಲೂ ಹಸಿರು ಮುಕ್ಕಳಿಸುವ-, ಹೂ ಅರಳಿಸುವ ಸಸ್ಯರಾಶಿ. ವಿಧಾನಸೌಧದ ಪೂರ್ವಾಭಿಮುಖಿ ಗತ್ತನ್ನು ಕಂಡಾಗ A building has integrity just like a man. And just seldom ಎಂಬ ಆಯನ್ ರ್‍ಯಾಂಡ್‌ಳ ಮಾತು ನೆನಪಾಗುತ್ತದೆ. ವೃತ್ತಿ ರಾಜಕಾರಣಿಗಳಿಗೆ ವಿಧಾನಸೌಧ ಹೇಗೆ ಕಾಣಿಸುತ್ತದೋ ತಿಳಿಯೆ, ಆದರೆ ನಮ್ಮಂಥ ಪಾಮರರಿಗೆ ಅದು ಅಚ್ಚರಿ. ಮುವ್ವತ್ತು ಮುಖ್ಯಮಂತ್ರಿಗಳನ್ನು ನೋಡಿದ, ನೋಡುತ್ತಲೇ ಇರುವ ಸಾವಿಲ್ಲದ ಸೌಧ. ಇನ್ನೂ ನೂರಾರು ಮುಖ್ಯಮಂತ್ರಿಗಳನ್ನು ಕಾಣಲಿರುವ ಸೌಧ.

ನಮ್ಮ ಪ್ರೀತಿಯ ಸಚಿವ ಆಂಜನೇಯ ಈ ಚಾರಿತ್ರಿಕ ಕಟ್ಟಡದ ಮೇಲೆ ಗದಾಪ್ರಹಾರ ಮಾಡಿದ್ದಾರೆ. ಗೋಡೆ ಒಡೆದಿರುವುದು ಇದೇ ಮೊದಲಲ್ಲ. ೧೯೮೦ರಲ್ಲಿ ಒಂದು ಕೊಠಡಿಯನ್ನು ವಿಸ್ತರಿಸಲು ನಾಲ್ಕು ಇಂಚಿನ ಗೋಡೆಯನ್ನು ತೆಗೆಸಲಾಗಿತ್ತು. ಈಗ ನಾಲ್ಕೂವರೆ ಇಂಚಿನ ಗೋಡೆ ತೆಗೆಸಲಾಗಿದೆ. ಇದರಿಂದ ಮೂಲ ಕಟ್ಟಡಕ್ಕೆ, ವಾಸ್ತುಶಿಲ್ಪಕ್ಕೆ ಏನೂ ಧಕ್ಕೆಯಾಗಿಲ್ಲ ಇತ್ಯಾದಿಯಾಗಿ ಆಂಜನೇಯ ಸಮರ್ಥಿಸಿಕೊಂಡಿದ್ದಾರೆ. ಅರ್ಥಾತ್ ಅನೇಕ ಮಂತ್ರಿಗಳು ಶಕ್ತ್ಯಾನುಸಾರ ಗೋಡೆ ಒಡೆಯುತ್ತ ಬಂದಿದ್ದಾರೆ. ಗೋಡೆ ಒಡೆಯುವುದು, ಗುಮ್ಮಟ ಬೀಳಿಸುವುದು ಇಂಥ ವಿಧ್ವಂಸಕ ಕೃತ್ಯಗಳಲ್ಲಿ ಬಿಜೆಪಿ ಮಾತ್ರ ನಿಸ್ಸೀಮರು; ಕಾಂಗ್ರೆಸ್ ಇದಕ್ಕೆ ಅತೀತವಾದದ್ದು ಎಂಬ ನಂಬಿಕೆ ಸುಳ್ಳಾಗಿದೆ. ಯಾವ ನೆಪ, ಕಾರಣ ಸಮರ್ಥನೆ ನೀಡಿದರೂ ಆಂಜನೇಯರು ಗೋಡೆ ಉರುಳಿಸಿದ್ದು ಖಂಡನೀಯ. ಅನೇಕ ಪರ್ಯಾಯ ಮಾರ್ಗಗಳಿದ್ದುವು. ಪ್ರತಿ ಮಂತ್ರಿಮಂಡಳದಲ್ಲಿಯೂ ಹಲವಾರು ಅನಾನುಕೂಲಗಳಿರುತ್ತವೆ. ಹೆಚ್ಚು ಖಾತೆ ವಹಿಸಿಕೊಂಡವರಿಗೆ ಹೆಚ್ಚು ಜಾಗ ಬೇಕಾಗುತ್ತದೆ. ಅದಕ್ಕೆ ಕಟ್ಟಡ ಛಿದ್ರ ಮಾಡುವುದು ಪರಿಹಾರವಲ್ಲ. ಕೆಡುವುವುದು ಸುಲಭ ಮತ್ತು ಕ್ಷಣಿಕ. ಕಟ್ಟುವುದು ಕಷ್ಟ ಮತ್ತು ನಿಧಾನ. ಸುಲಭ ಮತ್ತು ಕ್ಷಣಿಕವನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಪಲಾಯನವಾದೀ ಮನೋಧರ್ಮ. ಅವು ಪಾರಂಪರಿಕ ಕಟ್ಟಡಗಳಾಗಿದ್ದರೆ- ಖಾಸಗಿ ಆಸ್ತಿಯೇ ಆಗಿದ್ದರೂ- ನೆಲಸಮ ಮಾಡುವುದು ಅನ್ಯಾಯ. ಅಂತಹುದರಲ್ಲಿ ಸರ್ಕಾರಿ ಆಸ್ತಿಯ ಬಗ್ಗೆ ವಿನಯ, ವಿವೇಕಗಳು ಇನ್ನೂ ಹೆಚ್ಚಾಗಿರಬೇಕು. ಇಲ್ಲಿನ ಪ್ರತಿ ಕಿಟಕಿ, ಬಾಗಿಲು, ಗೋಡೆ, ಮೇಲ್ಛಾವಣಿಗಳು ಒಂದೊಂದು ಕತೆ ಹೇಳುತ್ತವೆ. ಅವುಗಳ ಹಿಂದೆ ಹಿರಿಯ ತಂತ್ರಜ್ಞನಿಂದ ಹಿಡಿದು ಗಾರೆ ಕೆಲಸದವನ ತನ್ಮಯತೆ ಮತ್ತು ಶ್ರದ್ಧೆ, ಕೌಶಲ್ಯ ಮತ್ತು ಕಾಣ್ಕೆ ಇರುತ್ತದೆ. ಒಂದೇ ಒಂದು ಸುತ್ತಿಗೆಯ ಏಟು ಈ ಕಾಣ್ಕೆಯನ್ನು ನಾಶ ಮಾಡಬಲ್ಲದು.

ವಿಧಾನಸೌಧ ಕಟ್ಟಿದ ಎಂಜಿನಿಯರ್‌ಗಳ ತಂಡದ ಸದಸ್ಯರಲ್ಲೊಬ್ಬರಾದ ಕೃಷ್ಣಮೂರ್ತಿ ಹೇಳಿದ್ದಾರೆ: ಆಂಜನೇಯರ ಕ್ರಮ ಸಮರ್ಥನೀಯವಲ್ಲ. ಡಿಸೈನ್ ಎಂಜಿನಿಯರ್ ಆಗಿದ್ದ ಎಂ.ಬಿ.ಕೃಷ್ಣ ಅಯ್ಯಂಗಾರ್, ಮುಖ್ಯ ವಾಸ್ತುಶಾಸ್ತ್ರಜ್ಞರಾದ ಬಿ.ಆರ್.ಮಾಣಿಕ್ಯಂ ಅವರ ನೇತೃತ್ವದ ತಂಡದಲ್ಲಿ ನಾನೂ ಇದ್ದೆ. ತಮಿಳುನಾಡು, ಕೇರಳ, ಪುದುಚೇರಿ, ಗೋವಾ ಮತ್ತಿತರ ಸ್ಥಳಗಳಲ್ಲಿ ಕಟ್ಟಿರುವ ಕಲ್ಲಿನ ದೇವಾಲಯ, ಕಟ್ಟಡಗಳಿಗೆ ಭೇಟಿ ನೀಡಿ ವೀಕ್ಷಿಸಲಾಯಿತು. ನಂತರ ವಿಧಾನಸೌಧದ ನೀಲನಕ್ಷೆ ಸಿದ್ಧಪಡಿಸಿ ಅನುಮೋದನೆ ಪಡೆಯಲಾಯಿತು. ದೊಡ್ಡಬಳ್ಳಾಪುರದ ಗ್ರಾನೈಟ್ ಕಲ್ಲುಗಳಿಂದ ಇಡೀ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಇದು ನೂರಾರು ವರ್ಷಗಳ ಕಾಲ ಬಾಳಿಕೆ ಬರುವಂತಿದೆ. ಆಂಜನೇಯ ಅವರ ಸಮರ್ಥನೆ ವೈಜ್ಞಾನಿಕವಾಗಿ ತಪ್ಪು. ಅವರ ಕೊಠಡಿ ಮೇಲ್ಛಾವಣಿ ಭಾರ ತಡೆಯಲು ಅಳವಡಿಸಿರುವ ಬೀಮ್ ಕೆಳಭಾಗದಲ್ಲಿ ನಾಲ್ಕೂವರೆ ಅಂಗುಲದ ಗೋಡೆ ವಿನ್ಯಾಸ ಮಾಡಲಾಗಿದೆ. ಇದನ್ನು ಡಿಸೈನ್ ಫ್ಯಾಕ್ಟರ್ ಎನ್ನುತ್ತಾರೆ. ಈ ಗೋಡೆಯನ್ನು ತೆಗೆಯಬಾರದಿತ್ತು.

ಪಾರಂಪರಿಕ ಮತ್ತು ಚಾರಿತ್ರಿಕ ಕಟ್ಟಡಗಳನ್ನು ಒಂದು ದೇಶದ ಸಂಪತ್ತಿನಂತೆ, ನೆನಪಿನ ಕೋಶದಂತೆ ಕಾಪಾಡಿಕೊಳ್ಳಬೇಕು. ಪಾಶ್ಚಾತ್ಯರಲ್ಲಿ ಆ ನಂಬಿಕೆ ಇದೆ. ಅಲ್ಲಿ ಮೂಲ ಆಕಾರ ಕೆಡದಂತೆ ದುರಸ್ತಿ ಮಾಡಲಾಗುತ್ತದೆ. ಪ್ಯಾರಿಸ್ಸಿನ ಬೀದಿಗಳಲ್ಲಿ ತಿರುಗಾಡಿದರೆ ಈ ಮಹತ್ವ ಅರಿವಾಗುತ್ತದೆ. ಹಳತನ್ನು ಒಂದು ಪುಟ್ಟ ಮಗುವಿನಂತೆ ಅವರು ಜೋಪಾನ ಮಾಡುತ್ತಾರೆ. ಅದು ಕೇವಲ ಕಾನೂನಿನ ಪ್ರಶ್ನೆಯಲ್ಲ. ಅದೊಂದು ಆರೋಗ್ಯಕರ ಕಾಳಜಿ ಮತ್ತು ಮನೋಧರ್ಮ. ಆದ್ದರಿಂದಲೇ ಪ್ಯಾರಿಸ್‌ನಲ್ಲಿ ಈಗಲೂ ೧೫ನೇ ಶತಮಾನದ ವಾಸಯೋಗ್ಯ ಮನೆಗಳು, ವಾಣಿಜ್ಯ ಕಟ್ಟಡಗಳು ಕಾಣಸಿಗುತ್ತವೆ. ಅವುಗಳ ವಾಸ್ತುಶಿಲ್ಪವನ್ನು ಕಾದಿರಿಸಿ ಒಳಾಂಗಣವನ್ನು ಅತ್ಯಾಧುನಿಕವಾಗಿ ನವೀಕರಿಸಿರುತ್ತಾರೆ. ಪುದುಚೇರಿ, ಗೋವಾಗಳಲ್ಲಿ ಇಂಥ ಖಾಸಗಿ ಕಟ್ಟಡಗಳನ್ನೂ ಸರ್ಕಾರವೇ ನಿರ್ವಹಿಸುತ್ತದೆ. ಆದರೆ ಇಲ್ಲಿ ಸರ್ಕಾರಿ ಕಟ್ಟಡವನ್ನು ಸಚಿವರೊಬ್ಬರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿಸ್ತರಿಸಿಕೊಳ್ಳುತ್ತಾರೆ. ಸಚಿವ ಸ್ಥಾನ ಶಾಶ್ವತವಲ್ಲ. ವಿಧಾನಸೌಧ ಶಾಶ್ವತವಾದದ್ದು. ಸಚಿವರಿಗೆಲ್ಲ ಕುಂಟುನೆಪಗಳಿರಲು ಸಾಧ್ಯ. ವಿಶಾಲಗೊಂಡ ಕೋಣೆ­ಯಿಂದ ಆಂಜನೇಯ ಅದೆಷ್ಟು ವಿಸ್ತಾರವಾದ ಸಮಾಜ ಕಲ್ಯಾಣ ಕಾಯಕ ಮಾಡುತ್ತಿದ್ದಾರೋ ಎಂದು ಕುತೂಹಲಿಯಾಗಿದ್ದೇನೆ.

ಈ ಸಮಸ್ಯೆಗೆ ಮತ್ತೊಂದು ಮುಖವಿದೆ. ವಿಧಾನಸೌಧದ ಒಟ್ಟು ಕಟ್ಟಡ ನಿರ್ವಹಣೆ ತೃಪ್ತಿಕರವಾಗಿಲ್ಲ. ಶುಚಿತ್ವ ಇಲ್ಲದ ಶೌಚಾಲಯಗಳು, ಬಣ್ಣಗೆಟ್ಟ ಬಾಗಿಲುಗಳು, ಒಡೆದ ಗಾಜುಗಳು, ಮುರಿದ ಕಿಟಕಿಗಳು, ಕಟ್ಟಿದ ಜೇಡರ ಬಲೆ ಅಲ್ಲಲ್ಲಿ ಕಾಣಸಿಗುತ್ತವೆ. ಕಟ್ಟಡ ಅಂದಗೆಡದಂತೆ ಅತ್ಯಾಧುನಿಕಗೊಳಿಸಬಹುದು. ಭದ್ರತೆಯ ದೃಷ್ಟಿಯಿಂದ ಸುಸ್ಥಿತಿಯಲ್ಲಿರುವ ಕೆಮರಾಗಳನ್ನು ಅಳವಡಿಸಬಹುದು. ಅಭಿರುಚಿಹೀನತೆಯ ರೋಗದಿಂದ ನರಳುವ ನಮ್ಮವರಿಗೆ ಹಿರಿಯರು ಕಟ್ಟಿಕೊಟ್ಟ ಇಂಥದ್ದೊಂದು ಕಟ್ಟಡವನ್ನು ನಿರ್ವಹಿಸುವುದೂ ಗೊತ್ತಿಲ್ಲ. ನಾನು ವಿಧಾನಸೌಧದಲ್ಲಿ ಕೆಲಸ ಮಾಡುತ್ತೇನೆ ಎಂಬುದು ನೌಕರನೊಬ್ಬನಿಗೆ ಘನತೆಯ ವಿಷಯವಾಗಬೇಕು. ಅಸಹಾಯಕರಾಗಿ ಬರುವ ಜನ ಮತ್ತು ಅವರ ಕೈಯಲ್ಲಿರುವ ಅರ್ಜಿ ಅಲ್ಲಿನ ನೌಕರನನ್ನು ಅಂತಃಕರಣಕ್ಕೆ ದೂಡಬೇಕು. ಅಂಥ ಪ್ರಾಮಾಣಿಕರು ಇಲ್ಲವೇ ಇಲ್ಲ ಎನ್ನುವಂತಿಲ್ಲ. ಆದರೆ ಅವರ ಸಂಖ್ಯೆ ವಿರಾಳತಿವಿರಳ. ಕಾರಿಡಾರುಗಳು ಭರ್ತಿಯಾಗಿ, ಆಪ್ತತೆ ಮಾಯವಾಗಿ, ವಿಳಂಬವು ದಿನಚರಿಯಾಗಿ ಅದು ನಿಧಾನಸೌಧವಾಗಿದೆ. ಕಿಷ್ಕಿಂಧೆಯಾಗಿದೆ. ೨೦೦೫ರಲ್ಲಿ ಎಸ್.ಎಂ.ಕೃಷ್ಣ ಅವರು ರೂಪಿಸಿದ ವಿಕಾಸಸೌಧ ಬದಿಯಲ್ಲಿಯೇ ಇದೆ. ಇವೆರಡೂ ಸೌಧಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಗೋಡೆ ಒಡೆಯುವುದು ನಿಲ್ಲಬಹುದು. ಜನಬಾಹುಳ್ಯ, ಕಾರ್ಯಬಾಹುಳ್ಯದ ಕಾರಣ ಅಗಲೀಕರಣ ಅನಿವಾರ್ಯವಿರಬಹುದು. ಆದರೆ ಅದು ವ್ಯಕ್ತಿ ನಿರ್ಣಯವನ್ನಾಧರಿಸಿದ ಅವೈಜ್ಞಾನಿಕ ಕೃತ್ಯವಾಗಬಾರದು. ಕಟ್ಟಡದ ಗೋಡೆ, ನೆಲಹಾಸು, ಛಾವಣಿಗಳನ್ನು ಮುಟ್ಟದೆ ಪೀಠೋಪಕರಣ ಮುಂತಾದ ಫಿಕ್ಸ್‌ಚರ್‌ಗಳನ್ನಷ್ಟೇ ಬದಲಿಸಬೇಕು. ಮುಖ್ಯವಾಗಿ ಹಳತಾದುದೆಲ್ಲ ತಿರಸ್ಕಾರಯೋಗ್ಯ ಎಂಬ ಮನೋಧರ್ಮ ಹೋಗಬೇಕು. ಹಳತನ್ನು ಬಿಸಾಕುವುದು ಸರಿ ಅನ್ನುವುದಾದರೆ ವೃದ್ಧರನ್ನು ಏನು ಮಾಡಬೇಕು? ಮೈಸೂರಿನಲ್ಲಿ ನಾಶವಾಗಿರುವ ಪಾರಂಪರಿಕ ಕಟ್ಟಡಗಳನ್ನು ನೆನೆದರೆ ಸಂಕಟವಾಗುತ್ತದೆ. ಮಡಿಕೇರಿಯ ಐತಿಹಾಸಿಕ ಕೋಟೆಯೊಳಗೆ ಸರ್ಕಾರಿ ಕಚೇರಿಗಳ ತಾರಸಿ ಕಟ್ಟಡ ನಿರ್ಮಿಸಿದ ಎಂಜಿನಿಯರ್ ಮಹಾನುಭಾವರು ನಮ್ಮಲ್ಲಿದ್ದಾರೆ. ಈಗ ವಿಧಾನಸೌಧ. ಈ ವಿಸ್ತರಣೆ ನ್ಯಾಯಸಮ್ಮತವಾಗಿದ್ದರೆ ರಾತ್ರಿಯಲ್ಲಿ ಗೋಡೆ ಏಕೆ ಒಡೆಯಬೇಕಿತ್ತು? ಮಾಧ್ಯಮದವರನ್ನು ಏಕೆ ತಡೆಯಬೇಕಿತ್ತು? ಇಂಥ ಗಹನವಾದ ವಿಚಾರಗಳು ಸಾರ್ವಜನಿಕ ಚರ್ಚೆಗೆ ಒಳಪಡಬಾರದೆ?

ವಾಸ್ತುವಿನ ನೆಪದಲ್ಲಿ ಈಗ ಆಗುತ್ತಿರುವ ಅವಾಂತರಗಳು ಅಸಂಖ್ಯ. ಆದರೆ ಆಂಜನೇಯ ತಳಸಮುದಾಯದಿಂದ ಬಂದು ಪೌರ ಕಾರ್ಮಿಕರ ನೆಮ್ಮದಿಗೆ ಶ್ರಮಿಸಿದವರೆಂದು, ಪ್ರಗತಿಪರ ಚಿಂತನೆ ಉಳ್ಳವರೆಂದು, ರಾಜಕೀಯ ಬದುಕಿನಲ್ಲಿ ಕೆಟ್ಟ ಹೆಸರಿಲ್ಲದ ವ್ಯಕ್ತಿ ಎಂದು ಕೇಳಿದ್ದೇನೆ. ಹೊಳಲ್ಕೆರೆ, ಭರಮಸಾಗರ, ಚಿತ್ರದುರ್ಗ, ದಾವಣಗೆರೆ ಸೀಮೆಯಲ್ಲಿ ಆಂಜನೇಯ ಕೆಲವು ಜನಪರ ಕೆಲಸಗಳನ್ನು ಮಾಡಿದ್ದಾರೆ. ಬಸವಣ್ಣ, ಅಂಬೇಡ್ಕರ್ ಹೆಸರಿನಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಇದೆಲ್ಲ ಪ್ರಶಂಸನೀಯವೇ. ಆದರೂ ಆಂಜನೇಯ ಅವರಿಗೆ ನಾನು ಕೇಳಬಯಸುವ ಪ್ರಶ್ನೆ: ಮುಂದೆ ಬರುವ ಸಚಿವನೊಬ್ಬ ನಿಮ್ಮ ಉದಾಹರಣೆ ತೋರಿಸಿ ಅವರು ನಾಲ್ಕಿಂಚು ಗೋಡೆ ಒಡೆದರು,- ನಾನು ಎಂಟಿಂಚು ಗೋಡೆ ಉರುಳಿಸುತ್ತೇನೆ ಎಂದರೆ ನೀವು ಅದನ್ನು ಹೇಗೆ ತಡೆಯಬಲ್ಲಿರಿ? ವಿಧಾನಸೌಧದ ವಿರೂಪಕ್ಕೆ ನೀವೂ ಕಾರಣರಾದಂತಾಗುವುದಿಲ್ಲವೆ?

ಮೂಢನಂಬಿಕೆ ನಿಷೇಧ ಕಾಯಿದೆ ಜಾರಿಗೆ ಬರುತ್ತದೋ ಇಲ್ಲವೋ. ಆದರೆ ವಿಧಾನಸೌಧ ವಿಧ್ವಂಸಕ ನಿಷೇಧ ಕಾಯಿದೆ ಜಾರಿಗೆ ಬರುವುದು ಸೂಕ್ತ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT