ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

2006ರಲ್ಲಿ ಭಾರತವನ್ನು ಪ್ರವೇಶಿಸಿದ ಟೆಕ್ನೊ ಮೊಬೈಲ್ ಮೂಲತಃ ಹಾಂಗ್‌ಕಾಂಗ್‌ನ ಕಂಪನಿ. ತನ್ನ ಬಹುತೇಕ ಫೋನ್‌ಗಳನ್ನು ಚೀನಾದಲ್ಲಿ ತಯಾರಿಸುತ್ತಿದೆ. ಈ ಕಂಪನಿ ಹಲವು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 15 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಕೊಳ್ಳಲು ಬಹುಮಂದಿ ಇಚ್ಛಿಸುತ್ತಾರೆ. ಅದರಂತೆ ಹಲವು ಕಂಪನಿಗಳು ಈ ಮಾರುಕಟ್ಟೆಯ ಮೇಲೆ ಕಣ್ಣಿಟ್ಟು ಫೋನ್‌ಗಳನ್ನು ತಯಾರಿಸಿದೆ. ಇದಕ್ಕೆ ಟೆಕ್ನೊ ಕಂಪನಿ ಹೊರತಲ್ಲ. ಈ ವಾರ ನಾವು ವಿಮರ್ಶೆ ಮಾಡುತ್ತಿರುವುದು ಟೆಕ್ನೊ ಕಮೊನ್ ಐ (Tecno Camon I) ಫೋನನ್ನು.

ನಾನು ಹಲವು ಸಲ ಬರೆದಂತೆ ವಿಮರ್ಶೆ ಮಾಡುವಾಗ ನಾವು ನೋಡಬೇಕಾಗಿರುವುದು ಈ ಗ್ಯಾಜೆಟ್ ನಾವು ನೀಡುವ ಬೆಲೆಗೆ ತಕ್ಕುದೇ ಎಂದು. ಈಗಾಗಲೇ ಬರೆದಂತೆ ಇದೊಂದು ಕಡಿಮೆ ಬೆಲೆಯ ಫೋನ್. ಅಂತೆಯೇ ನಾವು ವಿಮರ್ಶೆ ಮಾಡುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್ಕಿನ ದೇಹವಿದೆ. ಬಲಗಡೆ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ.

ಎಡಗಡೆ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇ ಇದೆ. ಮೇಲ್ಗಡೆ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಕೆಳಗಡೆ ಮೈಕ್ರೊಯು ಎಸ್‌ಬಿ ಕಿಂಡಿಗಳಿವೆ. ಹಿಂಭಾಗದಲ್ಲಿ ಮೂಲೆಯಲ್ಲಿ ಕ್ಯಾಮೆರಾ ಮತ್ತು ಅದರ ಕೆಳಗಡೆ ಫ್ಲಾಶ್ ಇದೆ. ಹಿಂಭಾಗದಲ್ಲಿ ಸ್ವಲ್ಪ ಮೇಲ್ಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಇದು ಅಂಚುರಹಿತ ಪರದೆಯುಳ್ಳ ಫೋನ್. ಅಂದರೆ ಪರದೆಯ ಮತ್ತು ದೇಹದ ಗಾತ್ರಗಳ ಅನುಪಾತ ಉತ್ತಮವಾಗಿದೆ. ಮೂರು ಸಾಫ್ಟ್ ಬಟನ್‌ಗಳಿಲ್ಲ. ಪರದೆಯಲ್ಲೇ ಅಗತ್ಯವಿದ್ದಾಗ ಮೂರು ಬಟನ್‌ಗಳು ಮೂಡಿಬರುತ್ತವೆ. ಹಿಂಭಾಗದ ಕವಚ ತೆಗೆಯಲಸಾಧ್ಯ. ಅಂದರೆ ಬ್ಯಾಟರಿಯನ್ನು ನಾವೇ ಬದಲಿಸುವಂತಿಲ್ಲ. ಹಿಂಭಾಗದ ಕವಚ ಬದಿಗಳಲ್ಲಿ ವಕ್ರವಾಗಿದೆ. ತುಂಬ ನಯವೂ ಅಲ್ಲ, ದೊರಗೂ ಅಲ್ಲದ ಕವಚ. ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ಪರವಾಗಿಲ್ಲ. ಕಳಪೆ ಫೋನ್ ಎಂದು ಅನ್ನಿಸುವುದಿಲ್ಲ. ನೀಡುವ ಹಣಕ್ಕೆ ತಕ್ಕಂತಿದೆ.

ಇದರಲ್ಲಿರುವುದು ಮೇಲ್ದರ್ಜೆಯ ಪ್ರೊಸೆಸರ್ ಅಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ ಕೇವಲ 39,108 ಇದೆ. ಅಂದರೆ ಇದು ಕಡಿಮೆ ವೇಗದಲ್ಲಿ ಕೆಲಸ ಮಾಡುವ ಫೋನ್ ಎನ್ನಬಹುದು. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಆಡಬಹುದು. ಆದರೆ ತುಂಬ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವುದಕ್ಕೆ ಇದು ತಕ್ಕುದಲ್ಲ. ಆದರೂ 3 ಗಿಗಾಬೈಟ್ ಮೆಮೊರಿ ಇರುವ ಕಾರಣ ಕೆಲಸ ಮಾಡುವಾಗ ಅಷ್ಟೇನೂ ಅಡೆತಡೆ ಅನ್ನಿಸುವುದಿಲ್ಲ.

ಇದರಲ್ಲಿ 13 ಮೆಗಾ ಪಿಕ್ಸೆಲ್‌ನ ಪ್ರಾಥಮಿಕ ಮತ್ತು ಸ್ವಂತೀ ಕ್ಯಾಮೆರಾಗಳಿವೆ. ಪ್ರಾಥಮಿಕ ಕ್ಯಾಮೆರಾದ ಗುಣಮಟ್ಟ ಒಂದು ಮಟ್ಟಿಗೆ ತೃಪ್ತಿದಾಯಕವಾಗಿವೆ. ತುಂಬ ಬೆಳಕಿದ್ದಲ್ಲಿ ತೆಗೆದ ಫೋಟೊ ಚೆನ್ನಾಗಿ ಬಂದಿದೆ.

ಹತ್ತಿರದ ವಸ್ತುಗಳ, ಉದಾಹರಣೆಗೆ ಹೂವುಗಳ ಫೋಟೊ ಚೆನ್ನಾಗಿ ಮೂಡಿಬರುತ್ತದೆ. ಪ್ರಕೃತಿ ದೃಶ್ಯಗಳ (landscape) ಫೋಟೊ ಉತ್ತಮ ಬೆಳಕಿದ್ದಲ್ಲಿ ಚೆನ್ನಾಗಿ ಬರುತ್ತದೆ. ಆದರೆ ದೃಶ್ಯದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬೆಳಕಿನ ವ್ಯತ್ಯಾಸ ತುಂಬ ಇದ್ದಲ್ಲಿ ಫೋಟೊ ಚೆನ್ನಾಗಿ ಮೂಡಿಬರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಬಳಸುವುದು ಎಚ್‌ಡಿಆರ್ ವಿಧಾನ. ಅದರಲ್ಲೂ ಫೋಟೊ ಅಷ್ಟಕ್ಕಷ್ಟೆ. ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ಬರುವುದಿಲ್ಲ. ವಿಡಿಯೊ ಚಿತ್ರೀಕರಣ ಚೆನ್ನಾಗಿಲ್ಲ. ಒಟ್ಟಿನಲ್ಲಿ ಕ್ಯಾಮೆರಾ ವಿಭಾಗದಲ್ಲಿ ಇದು ಪೂರ್ತಿಯಾಗಿ ಪಾಸು ಆಗುವುದಿಲ್ಲ.

ಇದರ ಪರದೆ ಪರವಾಗಿಲ್ಲ. ವಿಡಿಯೊ ನೋಡುವ ಅನುಭವ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಹೈಡೆಫಿನಿಶನ್ ವಿಡಿಯೊ ಪ್ಲೇ ಆಗುತ್ತದೆ. ಆದರೆ 4k ವಿಡಿಯೊ ಪ್ಲೇ ಆಗುವುದಿಲ್ಲ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಅವರು ನೀಡಿರುವ ಇಯರ್‌ಫೋನ್ ಕೂಡ ಒಂದು ಮಟ್ಟಿಗೆ ಅಂದರೆ ನೀಡುವ ಹಣಕ್ಕೆ ತೃಪ್ತಿದಾಯಕವಾಗಿದೆ ಎನ್ನಬಹುದು. ನಿಮ್ಮಲ್ಲಿ ಯಾವುದಾದರೂ ಉತ್ತಮ ಇಯರ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಒಂದು ಮಟ್ಟಿಗೆ ತೃಪ್ತಿದಾಯಕವಾಗುವಂತಹ ಸಂಗೀತ ಆಲಿಸಬಹುದು.

ಭಾರತೀಯ ಭಾಷೆಗಳಿಗೆ ಬೆಂಬಲವಿದೆ. ಕನ್ನಡವೂ ಇದೆ. ಕನ್ನಡ ಭಾಷೆಯ ತೋರುವಿಕೆ ಸರಿಯಾಗಿದೆ. 3050 mAh ಶಕ್ತಿಯ ಬ್ಯಾಟರಿ ಇದೆ. ಆದರೆ ವೇಗವಾಗಿ ಚಾರ್ಜ್ ಮಾಡುವ ಸೌಲಭ್ಯ ನೀಡಿಲ್ಲ. ಇಷ್ಟು ಶಕ್ತಿಯ ಬ್ಯಾಟರಿ ಇರುವುದು ಬಳಕೆಯಲ್ಲಿ ಅನುಭವಕ್ಕೆ ಬರುತ್ತಿಲ್ಲ. ಸ್ವಲ್ಪ ಬೇಗನೆ ಬ್ಯಾಟರಿ ಖಾಲಿಯಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ನೀಡುವ ಹಣಕ್ಕೆ ಅಲ್ಲಿಂದಲ್ಲಿಗೆ ತೃಪ್ತಿ ನೀಡಬಹುದಾದ ಫೋನ್

ವಾರದ ಆ್ಯಪ್: ಸೌಂದರ್ಯ ಕ್ಯಾಮೆರಾ
ಸ್ಮಾರ್ಟ್‌ಫೋನ್ ಇರುವುದೇ ಸ್ವಂತೀ ತೆಗೆದು ಎಲ್ಲ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವುದಕ್ಕೇ ಎಂದು ಹಲವರು ನಂಬಿದ್ದಾರೆ. ಇದರಲ್ಲಿ ಯುವತಿಯರು ಎತ್ತಿದ ಕೈ. ಅಂಥವರಿಗಾಗಿಯೇ ಹಲವು ನಮೂನೆಯ ಕಿರುತಂತ್ರಾಂಶಗಳು (ಆ್ಯಪ್) ಲಭ್ಯವಿವೆ. ಅಂಥ ಒಂದು ಕಿರುತಂತ್ರಾಂಶ ಬೇಕಿದ್ದರೆ ಗೂಗಲ್‌ ಪ್ಲೇ ಸ್ಟೋರಿನಲ್ಲಿ B612 - Beauty & Filter Camera ಎಂದು ಹುಡುಕಿ ಅಥವಾ http://bit.ly/gadgetloka320 ಜಾಲತಾಣಕ್ಕೆ ಭೇಟಿ ನೀಡಿ. ಇದರಲ್ಲಿ ನಿಮ್ಮ ಸ್ವಂತೀಯನ್ನು ಹಲವು ನಮೂನೆಯಲ್ಲಿ ಬದಲಾವಣೆಗಳನ್ನು ಮಾಡುವುದು, ತಲೆಗೆ ಹಲವು ಕಿರೀಟಗಳನ್ನು, ಕೋಡುಗಳನ್ನು ಸೇರಿಸುವುದು ಎಲ್ಲ ಸೇರಿವೆ. ಸಮಯ ಹಾಳು ಮಾಡಲು ಒಂದು ಉತ್ತಮ ಕಿರುತಂತ್ರಾಂಶ. ಯುವತಿಯರ ಮೆಚ್ಚಿನ ಕಿರುತಂತ್ರಾಂಶ ಇದು.

ಗ್ಯಾಜೆಟ್ ಪದ: NFC (Near Field Communication) = ಅತಿ ಸಮೀಪ ಸಂವಹನ
ತುಂಬ ಸಮೀಪದಲ್ಲಿರುವ ಎರಡು ಸಾಧನಗಳ ನಡುವೆ ನಿಸ್ತಂತು ಸಂವಹನವನ್ನು ಸಾಧ್ಯವಾಗಿಸುವ ತಂತ್ರಜ್ಞಾನ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ಸ್ಮಾರ್ಟ್‌ ಫೋನ್‌ಗಳಲ್ಲಿ ಈ ಸೌಲಭ್ಯವಿದೆ. ಇದನ್ನು ಬಳಸಿ ಸ್ಪೀಕರ್ ಜೋಡಣೆ, ಫೋನ್‌ಗಳ ನಡುವೆ ಸಂಪರ್ಕ ಸಾಧಿಸುವುದು, ಅಂಗಡಿಗಳಲ್ಲಿ ಹಣ ವರ್ಗಾವಣೆ ಎಲ್ಲ ಸಾಧ್ಯ.

ಗ್ಯಾಜೆಟ್ ಸಲಹೆ
ಮಹೇಶ ಗೌಡರ ಪ್ರಶ್ನೆ: ನನ್ನಲ್ಲಿ ಶಿಯೋಮಿ ರೆಡ್‌ಮಿ ವೈ1 ಫೋನ್ ಇದೆ. ಅದು ಅಪ್‌ಡೇಟ್ ಮಾಡಿ ಎನ್ನುತ್ತಿದೆ. ಅಪ್‌ಡೇಟ್ ಮಾಡಬಹುದೇ? ಇದರಿಂದ ತೊಂದರೆ ಇದೆಯೇ?

ಉ: ಯಾವ ತೊಂದರೆಯೂ ಇಲ್ಲ. ಖಂಡಿತ ನವೀಕರಿಸಿಕೊಳ್ಳಬಹುದು. ಆಗಿಂದಾಗೆ ನವೀಕರಿಸಿಕೊಳ್ಳುವುದು ನಿಜಕ್ಕೂ ಉತ್ತಮ.

ಗ್ಯಾಜೆಟ್ ತರ್ಲೆ
1990ರಲ್ಲಿ ಮನುಷ್ಯರು ತೆಳ್ಳಗಾಗಿದ್ದರು. ಗಣಕಗಳು ದೊಡ್ಡದಾಗಿದ್ದವು. 2018ರಲ್ಲಿ ಗಣಕಗಳ ಜಾಗವನ್ನು ತೆಳ್ಳಗಿನ, ಚಿಕ್ಕದಾದ ಸ್ಮಾರ್ಟ್‌ಫೋನ್‌ಗಳು ಆಕ್ರಮಿಸಿವೆ. ಮನುಷ್ಯರು ದಪ್ಪಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT