ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಡಾಯ ಮತದಾನ: ಹೊಸ ಪ್ರಯೋಗ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವ ಎಂದರೆ ಜನರಿಗೆ ಸೇರಿದ, ಜನರಿಗೋಸ್ಕರ, ಜನರೇ ನಡೆಸುವ ಒಂದು ವ್ಯವಸ್ಥೆ ಎನ್ನುವುದಂತೂ ಅಕ್ಷರಶಃ ಸರಿಯಾದ ಬಣ್ಣನೆ; ಆದರೆ ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಅಂಗವಾದ ಚುನಾವಣೆ­ಯಲ್ಲಿ ಮತದಾನ ಮಾಡಲು ಜನರೇ ನಿರಾಸಕ್ತಿ ತೋರಿದರೆ ಅದನ್ನು ಏನೆಂದು ಬಣ್ಣಿಸಬೇಕು? 

ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಿ ಗಟ್ಟಿ­ಗೊಳಿಸಲು ಪ್ರಜೆಗಳ ಪ್ರತ್ಯಕ್ಷ ಮತ್ತು ಪರೋಕ್ಷ ಪಾಲ್ಗೊಳ್ಳುವಿಕೆ ನಿರಂತರವಾಗಿ ಇರಬೇಕು. ಚುನಾವಣೆ ನಡೆದಾಗ ಮತಗಟ್ಟೆಗೆ ಬಂದು ಮತದಾನ ಮಾಡುವುದು ಅದರಲ್ಲಿ ಕಣ್ಣಿಗೆ ಕಾಣುವ ಒಂದು ಸಣ್ಣ ಸಂಕೇತ; ಇದರ ಪರಿಣಾಮ ಮಾತ್ರ ಬಹಳ ದೊಡ್ಡದು. ಆದರೂ ಜನರು ತಮ್ಮ ಬದುಕಿನಲ್ಲಿ ಬೇಕಾದ ಸಂಗತಿಗಳಿಗೆ ಸಹಜವಾಗಿ ಆಸಕ್ತಿ ತೋರುವಂತೆ, ಬೇಕಾದ ಸರ್ಕಾರವನ್ನು ಆರಿಸಿಕೊಳ್ಳಲು ಆಸಕ್ತಿ ತೋರುವು­ದಿಲ್ಲ. ‘ಆಸಕ್ತಿ ತೋರಿಸಿ, ಮತದಾನ ಮಾಡಿ’ ಎಂದು  ಅವರನ್ನು ಒತ್ತಾಯಿಸಬೇಕೇ ಬೇಡವೇ ಎನ್ನು­ವುದು ಜಗತ್ತಿನ ಪ್ರಜಾಸತ್ತಾತ್ಮಕ ರಾಜಕಾರಣದ ಒಂದು ಜ್ವಲಂತ ಚರ್ಚೆ. 

ಆ ಚರ್ಚೆಯ ಮಾತಿರಲಿ, ಆಸ್ಟ್ರೇಲಿಯ, ಬೆಲ್ಜಿಯಂ, ಬೊಲಿವಿಯ, ಇಟಲಿ, ಸಿಂಗಪುರ ಮುಂತಾದ ಅನೇಕ ದೇಶಗಳಲ್ಲಿ ಅರ್ಹ ಪ್ರಜೆ­ಗಳಿಗೆ ಮತದಾನವನ್ನು ಕಡ್ಡಾಯ ಮಾಡಲಾ­ಗಿದೆ. ಇನ್ನೂ ಕೆಲವು ದೇಶಗಳಲ್ಲಿ ಅದನ್ನು ಹೋಲುವ ಕ್ರಮಗಳು ಜಾರಿಯಲ್ಲಿವೆ. ಮತ­ದಾನ ಮಾಡುವುದು ನಿಮ್ಮ ಹಕ್ಕೂ ಹೌದು, ನಿಮ್ಮ ಕರ್ತವ್ಯವೂ ಹೌದು ಎನ್ನುವುದು ಆ ದೇಶ­ಗಳ ವಾದ. ನೀವಿಲ್ಲದೆ ನನಗೇನಿದೆ ಎನ್ನುವುದು ಪ್ರಜಾಪ್ರಭುತ್ವ ಅಲ್ಲಿನ ಜನರಿಗೆ ಕೇಳುವ ಪ್ರಶ್ನೆ. ಮತ ಹಾಕದ ಜನರಿಗೆ ಆ ದೇಶಗಳಲ್ಲಿ ಸಣ್ಣಪುಟ್ಟ ದಂಡ ಅಥವಾ ಶಿಕ್ಷೆಯೂ ಇದೆ. ಆಸ್ಟ್ರೇಲಿಯ­ದಲ್ಲಿ ಕಡ್ಡಾಯಕ್ಕೆ ಮೊದಲು ಮತದಾನದ ಪ್ರಮಾಣ ಕೇವಲ ಶೇ 28 ಇತ್ತಂತೆ.

ಮತದಾನ ಕಡ್ಡಾಯ ಕ್ರಮಕ್ಕೆ ಆ ದೇಶಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಸಮರ್ಥನೆ­ಗಳುಂಟು. ಅವುಗಳ ಪೈಕಿ, ಪ್ರಜಾಪ್ರಭುತ್ವದಲ್ಲಿ ‘ನೈಜ ಪ್ರಾತಿನಿಧ್ಯ’ ಮತ್ತು ‘ನೈಜ ಜನಾದೇಶ’ ಇರಬೇಕು, ಇರದಿದ್ದರೆ (ಕಾನೂನಿನ ಕೋಲು ಹಿಡಿದಾದರೂ) ಅದನ್ನು ತರಬೇಕು ಅನ್ನುವ ಸಮರ್ಥನೆಯೇ ಬಹಳ ಮುಖ್ಯ. ಏನಾದರೂ ಮತದಾನಕ್ಕೆ ಜನರ ನಿರಾಸಕ್ತಿ ಒಂದು ಜಾಗತಿಕ ಲಕ್ಷಣ. ಆದರೆ ‘ರಾಜಕೀಯ ಪಕ್ಷಗಳ ಭ್ರಷ್ಟಾ­ಚಾರದ ಹಗರಣಗಳು, ಭಾರೀ ಉದ್ಯಮಗಳ ಓಲೈಕೆ ಮತ್ತು ಮುಂದಿನ ಚುನಾವಣೆಗೆ ಹಣ ಸಂಗ್ರಹ– ಈ ಮೂರು ನಮ್ಮನ್ನು ಮತಗಟ್ಟೆ­ಯಿಂದ ಮಾರು ದೂರ ನಿಲ್ಲಿಸುತ್ತವೆ’ ಎಂಬ, ಮತ ಹಾಕಲೊಪ್ಪದ ಅಮೆರಿಕದ ಹುಡುಗಿ­ಯೊಬ್ಬಳ ಹೇಳಿಕೆಗೆ ಭಾರತವೂ ಸೇರಿ ಯಾವ ದೇಶದ ಜನ ಮತ ಹಾಕುವುದಿಲ್ಲ ಹೇಳಿ!

ನೈಜ ಪ್ರಾತಿನಿಧ್ಯ ಮತ್ತು ನೈಜ ಜನಾದೇಶದ ಉದಾಹರಣೆಗೆ ನಮ್ಮ ದೇಶದ ನೂರು ಜನ ಮತ­ದಾರರ ಲೆಕ್ಕವನ್ನೇ ತೆಗೆದುಕೊಳ್ಳೋಣ. ಅವರಲ್ಲಿ ಐವತ್ತು ಜನ ಮತಗಟ್ಟೆಗೆ ಬಂದು ಮತ ಹಾಕುತ್ತಾರೆ. ಅನನುಕೂಲ, ಅನಾರೋಗ್ಯ, ಅತಿ ದೂರ, ಆದಾಯನಷ್ಟ ಮುಂತಾದ ‘ಒಪ್ಪಬಹು­ದಾದ’ ಕಾರಣಗಳಿಂದ ಹತ್ತು ಜನರಿಗೆ ಬರಲು ಸಾಧ್ಯವಾಗುವುದಿಲ್ಲ. ಆದರೆ ಮಿಕ್ಕ ನಲವತ್ತು ಜನ ಬರದೇ ಇರಲು ಏನು ಕಾರಣ? ಅನಾಸಕ್ತಿ, ಅನಾದರ, ಅಸಡ್ಡೆ, ಅಜ್ಞಾನ ಅಥವಾ ಅಹಂಕಾರ? ‘ಯಾವ ರಾಜ ಬಂದರೇನು ರಾಗಿ ಬೀಸುವುದು ತಪ್ಪುವುದಿಲ್ಲ’ ಎಂಬ ಅಸಮಾ­ಧಾನ? ಹಸಿರುನೋಟು ಕೆಂಪುನೋಟು, ನಶೆ ಬರಿಸುವ ಪಾಕೀಟು, ಸೀರೆ ಕುಪ್ಪುಸ ಪ್ಯಾಂಟು ಕೋಟು, ಸ್ಟೀಲ್ ಪಾತ್ರೆ ಬಕೀಟು, ಬಣ್ಣದ ಟಿವಿ ಸೆಟ್ಟು ಇತ್ಯಾದಿ ನೂರೆಂಟು ಉಡುಗೊರೆಗಳನ್ನು ಸ್ವೀಕರಿಸಿದ ಮೇಲೂ ಮತಗಟ್ಟೆಗೆ ಬರದೇ ಇರುವ ‘ಅಪ್ರಾಮಾಣಿಕತೆ’?! ಕಾರಣ ಏನಾ­ದರೂ  ಇರಲಿ, ಆ ಕ್ಷೇತ್ರದಲ್ಲಿ ಮೂರು ಜನ ಸ್ಪರ್ಧಿಸಿದ್ದರೆ ಬಿದ್ದ ಐವತ್ತು ಮತಗಳ ಪೈಕಿ ಅತಿ ಹೆಚ್ಚು ಪಡೆದ ಅಭ್ಯರ್ಥಿಯೇ ನೂರು ಜನರ ಪ್ರತಿನಿಧಿ ಆಗುವುದು ಅನಿವಾರ್ಯ. ಇದು ಲಕ್ಷಾಂತರ, ಕೋಟ್ಯಂತರ ಮತದಾರರ ಮಟ್ಟಿಗೂ ಅನ್ವಯ.

ಪ್ರಜಾಪ್ರಭುತ್ವದಲ್ಲಿ ಅಂಥ ಪ್ರಶ್ನೆ ಇರುವ ಹಾಗೆ ಪ್ರಯೋಗ, ಪರಿಹಾರವೂ ಇದ್ದೇ ಇರ­ಬೇಕ­ಲ್ಲವೇ? ಕಡ್ಡಾಯ ಮತದಾನ ಅಂಥ­ದೊಂದು ಪ್ರಯೋಗ, ಪರಿಹಾರ ನೀಡಬಹುದೇ ಎನ್ನು­ವುದು ಸಾರ್ವಜನಿಕ ಚಿಂತನೆಗೆ ಯೋಗ್ಯ­ವಾಗಿದೆ. ಅದಕ್ಕೊಂದು ನಿಮಿತ್ತವೂ ಸಿಕ್ಕಿದೆ. ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆ­ಗಳಲ್ಲಿ ಮತದಾನ ಕಡ್ಡಾಯ ಮಾಡುವ ಉದ್ದೇಶದ ‘ಗುಜರಾತ್ ಸ್ಥಳೀಯ ಆಡಳಿತ ಕಾನೂನು (ತಿದ್ದುಪಡಿ) ವಿಧೇಯಕ’ಕ್ಕೆ ಕೊನೆಗೂ ಈ ತಿಂಗಳು ಅಂಕಿತ ಬಿದ್ದಿದೆ. ಹಿಂದಿನ ರಾಜ್ಯ­ಪಾಲರಿಂದ ಎರಡು ಬಾರಿ ವಾಪಸ್ ಬಂದಿದ್ದ ವಿಧೇಯಕಕ್ಕೆ ಈಗಿನ ರಾಜ್ಯಪಾಲರ ಅಂಕಿತ ಪಡೆದ ಗುಜರಾತ್, ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯ ಮತದಾನ ಜಾರಿಗೆ ತಂದ ಮೊದಲ ರಾಜ್ಯವಾಗಲಿದೆ. ಹಾಗೆ ನೋಡಿದರೆ ಇದು ಆರಂಭ ಮಾತ್ರ. ದೇಶಕ್ಕೆ ಪ್ರಧಾನ ಮಂತ್ರಿಯನ್ನು ಕೊಟ್ಟ ಗುಜರಾತ್, ಕಡ್ಡಾಯ ಮತದಾನವನ್ನೂ ಕೊಟ್ಟರೆ ಆಶ್ಚರ್ಯವಿಲ್ಲ. ಏಕೆಂದರೆ ಇದು ಗುಜ­ರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಅವರೇ ಆಕಾರ ಕೊಟ್ಟಿದ್ದ ಚಿಂತನೆ.

ಗುಜರಾತ್‌ನಲ್ಲಿ ಕಾಣುತ್ತಿರುವ ಹುಮ್ಮಸ್ಸೇ, ಕಡ್ಡಾಯ ಮತದಾನ ಕುರಿತು ದೇಶದಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ರಾಜಕೀಯ ಮತ್ತು ಸಾರ್ವಜನಿಕ ಮಧ್ಯರಂಗಕ್ಕೆ ಎಳೆದು ನಿಲ್ಲಿಸಿದೆ. ಆದರೆ ಯಾವುದೇ ವಿಷಯ ಕುರಿತ ಚರ್ಚೆ ಅದನ್ನು ಮುಂದಿಟ್ಟ ವ್ಯಕ್ತಿಯನ್ನು ಅಥವಾ ಪಕ್ಷ­ವನ್ನು ಮೀರಿ, ಮರೆತು ನಡೆಯಬೇಕು. ಹೆಚ್ಚು ಕಡಿಮೆ ಇದೇ ಸಮಯದಲ್ಲಿ, ಸುಪ್ರೀಂಕೋರ್ಟ್ ಮಾತ್ರವಲ್ಲದೆ, ಬಾಂಬೆ ಮತ್ತು ಲಖನೌ ಹೈಕೋರ್ಟ್‌ಗಳೂ ಕಡ್ಡಾಯ ಮತದಾನಕ್ಕೆ ಆಗ್ರಹಿಸುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ­ಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿ­ಸುತ್ತಾ ‘ಕಡ್ಡಾಯ ಮತದಾನ ಕುರಿತು ಆಲೋ­ಚಿಸಬಾರದೇಕೆ’ ಎಂದು ಕೇಂದ್ರ ಸರ್ಕಾರವನ್ನೂ ಸಾರ್ವಜನಿಕರನ್ನೂ ಕೇಳಿವೆ. ಚುನಾವಣೆಯ ದಿನ ರಜೆ ಕೊಟ್ಟರೆ ನಮ್ಮ ಜನ ಬಂದು ಮತದಾನ ಮಾಡದೆ ಸುಮ್ಮನೆ ರಜೆಯ ಖುಷಿ ಅನುಭವಿ­ಸು­ತ್ತಾರಲ್ಲ, ಇದನ್ನು ತಪ್ಪಿಸಲು ಏನಾದರೂ ಮಾಡ­ಬೇಕಲ್ಲವೇ ಎಂದು ಬಾಂಬೆ ಹೈಕೋರ್ಟ್ ಕಾಳಜಿ ವ್ಯಕ್ತಪಡಿಸಿದೆ. ಮತದಾನ ಕಡ್ಡಾಯ ಮಾಡುವ ದಿಕ್ಕಿನಲ್ಲಿ ನ್ಯಾಯಾಲಯಗಳ ಈ ಅಭಿಪ್ರಾಯ­ಗಳು ಬಹಳ ಮುಖ್ಯ ಮತ್ತು ಗಮನಾರ್ಹ.

ಪ್ರಜಾಪ್ರಭುತ್ವದಲ್ಲಿ ಯಾವುದೇ ವಿಚಾರಕ್ಕೆ ಮುಕ್ತ ಬೆಂಬಲದ ಪ್ರತಿಕ್ರಿಯೆಗಳು ಇರುವಂತೆ ಉಗ್ರ ವಿರೋಧದ ವ್ಯತಿರಿಕ್ತ ಅನಿಸಿಕೆಗಳು ಇರುವುದು ಸಹಜ. ಮತದಾನ ಕಡ್ಡಾಯ ಮಾಡು­ವುದು ಸಂವಿಧಾನಕ್ಕೆ ವಿರೋಧ, ವ್ಯಕ್ತಿಯ ಸ್ವಾತಂತ್ರ್ಯ ಹರಣ, ವ್ಯಕ್ತಿಯ ಅಭಿವ್ಯಕ್ತಿ–ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ, ಮತದಾರರ ಮೇಲಿನ ಬಲಾ­ತ್ಕಾರ, ಬಡವರ ಮೇಲೆ ಪ್ರಹಾರ, ಪ್ರಜಾಸತ್ತೆಯ ಕೊಲೆ, ಹಕ್ಕು–ಕರ್ತವ್ಯ ಕುರಿತ ಗೊಂದಲ, ಮತ­ದಾರರಲ್ಲಿ ಜಾಗೃತಿ ಮೂಡಿಸಲು ಆಲಸ್ಯ, ಮತ ಕಡ್ಡಾಯ ಚಲಾವಣೆಯಿಂದ ಯಾರದೋ ಹಿತ ರಕ್ಷಣೆ, ರಾಜಕಾರಣಿಗಳಿಗೆ ಹಣ ಉಳಿತಾಯ ಮತ­ದಾರರಿಗೆ ನಷ್ಟ (!) ಇತ್ಯಾದಿ ಮತ್ತು ಇನ್ನೂ ಮುಂತಾಗಿ ವಾದ ವಾಗ್ವಾದ, ಕೆಲಮಟ್ಟಿಗೆ ವಿರೋಧ­ಕ್ಕಾಗಿ ವಿರೋಧ ಈ ವಿಚಾರದಲ್ಲಿ ಆರಂಭ­ವಾಗಿದೆ. ಇವೆಲ್ಲವೂ ಖಂಡಿತಾ ಸ್ವಾಗ­ತಾರ್ಹ ಮತ್ತು ಪರಿಶೀಲನೆಗೆ ಅರ್ಹ. ಏಕೆಂದರೆ ಈಗ ಪ್ರಜಾಪ್ರಭುತ್ವದಲ್ಲಿ ನಾವು ಗುರುತಿಸುವ ಒಳ್ಳೆಯ ಅಂಶಗಳೆಲ್ಲವೂ ರೂಪ ಪಡೆದಿರುವುದು ಕಾಲ ಮತ್ತು ಚರ್ಚೆಯ ಮೂಸೆಯಲ್ಲಿ ಬೆಂದ ನಂತರವೇ. 

ಕಡ್ಡಾಯ ಮತದಾನದ ವಿಚಾರದಲ್ಲಿ ಮೊದ­ಲಿಗೆ, ಯಾವುದನ್ನಾದರೂ ಕಡ್ಡಾಯ ಮಾಡು­ವುದೇ ಸರ್ವಾಧಿಕಾರವಲ್ಲವೇ ಎಂಬ ಪ್ರಶ್ನೆ ಏಳು­ವುದು ಸಹಜ. ಇದರ ಪಕ್ಕದಲ್ಲೇ ರಾಜಕಾರ­ಣಿ­ಗಳ ಸರ್ವಾಧಿಕಾರಿ ಮನೋಭಾವವನ್ನು ಅಳಿಸಿ ಪ್ರಜಾಸತ್ತೆಯನ್ನು ಬಲಪಡಿಸಲು ಕಡ್ಡಾಯ ಮತ­ದಾನ ಅಗತ್ಯ ಎಂಬ ವಾದ ಬಲವಾಗಿದೆ. ಜನರು ಮತದಾನ ಮಾಡದಿರುವುದು ಏನನ್ನು ಹೇಳು­ತ್ತದೆ ಎಂಬುದನ್ನು ಗುರುತಿಸುವ ಸೂಕ್ಷ್ಮತೆ ರಾಜ­ಕಾರಣಿಗಳಿಗೆ ಬೇಕು, ಅವರಿಗೆ ಮತದಾರರಿಗಿಂತ ಹೆಚ್ಚಾಗಿ ರಾಜಕೀಯ ವ್ಯವಸ್ಥೆಯ ಬಗ್ಗೆ ಹೆಚ್ಚು ಅನುಮಾನ ಬರಬೇಕು, ರಾಜಕಾರಣಿಗಳು ಜನ­ರನ್ನು ಮತಗಟ್ಟೆಗಳಿಗೆ ತರುವುದಕ್ಕೆ ತಂತ್ರ ಮಾಡ­ಬಾರದು, ಜನರು ಮತಗಟ್ಟೆಗಳಿಗೆ ಬರುವುದಕ್ಕೆ ಏಕೆ ಹಿಂಜರಿಯುತ್ತಿದ್ದಾರೆ ಎನ್ನುವುದರ ಬಗ್ಗೆ ಚಿಂತಿ­ಸಬೇಕು ಎಂಬ ಹತ್ತಾರು ರೀತಿಯ ಟೀಕೆ­ಗಳೂ ಇವೆ. ಆದರೆ ಜನರಿಗೆ ರಾಜಕಾರಣಿಗಳ ಬಗ್ಗೆ ನಂಬಿಕೆ ಇಲ್ಲದಿದ್ದರೂ ಪರವಾಗಿಲ್ಲ, ಚುನಾ­ವಣೆ ವ್ಯವಸ್ಥೆಯ ಬಗ್ಗೆ ನಂಬಿಕೆ ಇರಬೇಕು, ಅದನ್ನು ಮೂಡಿಸಲು ಕಡ್ಡಾಯ ಮತದಾನ ಬೇಕು ಎಂಬ ಉತ್ತರ ಅದಕ್ಕಿದೆ.

ಕಡ್ಡಾಯ ಮತದಾನಕ್ಕೆ ಎಷ್ಟು ವಿರೋಧ ಇದೆಯೋ ಅಷ್ಟೇ ಬೆಂಬಲವೂ ಇರುವುದು ಸಾರ್ವ­ಜನಿಕ ಸಂವಾದದ ಶಕ್ತಿ ಮತ್ತು ಜೀವಂತಿಕೆ­ಯನ್ನು ಎತ್ತಿ ತೋರಿಸುತ್ತಿದೆ. ಮತದಾನ ಕಡ್ಡಾಯ­ವಾದರೆ ಚುನಾವಣೆ ಸಮಯದ ಅಕ್ರಮ­ಗಳು ಕಡಿಮೆ ಆಗುತ್ತವೆ, ಈಗ ಮತ­ದಾನಕ್ಕೆ ಬರುವ ಕಡಿಮೆ ಜನರನ್ನು ತನ್ನತ್ತ ಸೆಳೆ­ಯಲು ಅಭ್ಯರ್ಥಿ ಮುಂದಿಡುವ ಆಮಿಷಗಳು ಆಗ ಅನಗತ್ಯವಾಗುತ್ತವೆ ಎಂಬಂಥ ಆಸೆಗಳೂ ನಮ್ಮ ದೇಶದಲ್ಲಿ ಇರುವುದು ಸುಳ್ಳಲ್ಲ. ಕಡ್ಡಾಯ ಮತದಾನದ ಮೂಲಕ ಸಿಗುವ ಜನಬೆಂಬಲ, ಜನಬಲವಾಗಿ ಪರಿವರ್ತನೆ ಹೊಂದುತ್ತದೆ ಎಂದು ಹಲವು ದೇಶಗಳು ನಂಬುತ್ತವೆ. ಅದ­ಕ್ಕಾಗಿ ತಮ್ಮ ಸಂವಿಧಾನ– ಸಂಹಿತೆಗಳಲ್ಲಿ ಅಲ್ಪ­ಸ್ವಲ್ಪ ತಿದ್ದುಪಡಿ ಮಾಡಲು ಅವು ಹಿಂಜರಿದಿಲ್ಲ. ನಾವಂತೂ ಸಂವಿಧಾನವನ್ನು ಈಗಾಗಲೇ 98 ಬಾರಿ ತಿದ್ದುಪಡಿ ಮಾಡಿದ್ದೇವೆ. ‘ನಾನು ಎಷ್ಟು ಬೇಕಾದರೂ ಹಣ ಸಂಪಾದಿಸುತ್ತೇನೆ, ನನ್ನ ಸಂಪಾದನೆಗೆ ಸರ್ಕಾರಕ್ಕೇಕೆ ತೆರಿಗೆ ಕೊಡಲಿ?’ ಎಂದು ಕೇಳುವುದು ಹೇಗೆ ಅಸಂಬದ್ಧವೋ ಹಾಗೆಯೇ ದೇಶದ ವ್ಯವಸ್ಥೆ ನೀಡುವ ಸಕಲ ಸವಲತ್ತುಗಳನ್ನು ಅನುಭವಿಸುವ ವ್ಯಕ್ತಿ ‘ನಾನೇಕೆ ಮತ ಹಾಕಲಿ?’ ಎಂದು ಕೇಳುವುದೂ ಅಸಂಬದ್ಧ ಎನ್ನುವ ಪ್ರಬಲ ಬೆಂಬಲವೂ ಕಡ್ಡಾಯ ಮತದಾನಕ್ಕೆ ಸಿಕ್ಕಿದೆ. 

ಈ ವರ್ಷದ ಏಪ್ರಿಲ್– ಮೇನಲ್ಲಿ ನಮ್ಮ ದೇಶ­ದಲ್ಲಿ ನಡೆದ ಮಹಾಚುನಾವಣೆಯನ್ನು ಇಡೀ ಜಗತ್ತೇ ಅತ್ಯಂತ ಕುತೂಹಲದಿಂದ ಗಮನಿಸಿದ್ದಕ್ಕೆ, ಚುನಾವಣೆಯ ಗಾತ್ರ ಮತ್ತು ಪ್ರಮಾಣವೂ ಒಂದು ಮುಖ್ಯ ಕಾರಣ. ಚುನಾವಣಾ ಆಯೋಗ ಹೇಳಿದ ಹಾಗೆ 81.45 ಕೋಟಿ ಅರ್ಹ ಮತದಾರರು ಇದರಲ್ಲಿದ್ದು, ಕಳೆದ ಚುನಾ­ವಣೆಗಿಂತ 10 ಕೋಟಿ ಮತದಾರರು ಹೆಚ್ಚಿಗೆ ಇದ್ದರು. ಮತದಾನದ ಪ್ರಮಾಣ
ಶೇ 66.38 ಇದ್ದದ್ದು, ಅದು ಇದುವರೆಗಿನ ಅತಿ­ಹೆಚ್ಚು ಎನ್ನುವುದೂ ತುಂಬಾ ಮುಖ್ಯವೆನಿಸಿತು. ಫಲಿತಾಂಶ ಬಂದ ಮೇಲಿನ ಲೆಕ್ಕ ನೋಡಿದಾಗ, ಜಯಭೇರಿ ಬಾರಿಸಿದವರಿಗೆ ಇರುವುದು ಶೇ 31.0 ಮತಗಳ ಬೆಂಬಲ ಎಂಬುದನ್ನು ಲೆಕ್ಕಿಸ­ದಿರಲು ಸಾಧ್ಯವಿಲ್ಲ. ಆಮೇಲೆ ನಮ್ಮ ಚುನಾವಣೆ ನಡೆಸಲು ಸಾವಿರಾರು ಕೋಟಿ ರೂಪಾಯಿ ಖರ್ಚಾ­ಯಿತಂತೆ. ಅಷ್ಟೂ ಜನ ಮತದಾರರು ಮತ­ಗಟ್ಟೆಗೆ ಬರಲಿ, ಬಿಡಲಿ ಇಷ್ಟೂ ಸಾವಿರ ಕೋಟಿ ರೂಪಾಯಿ ಖರ್ಚಾಗಿದ್ದಂತೂ ಖಚಿತ. ಇನ್ನು ಅಭ್ಯರ್ಥಿಗಳು ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಸಾವಿರ ಕೋಟಿಗಳನ್ನು ಖರ್ಚು ಮಾಡಿ­ದ್ದರ ಮಾತು ಬೇರೆ. ಮತದಾನ ಕಡ್ಡಾಯ­ವಾದರೆ ಚುನಾವಣೆಯ ಈ ಲೆಕ್ಕಾಚಾರಗಳೆಲ್ಲ ಏನಾಗುವುದೋ ನೋಡಬೇಕು. ಅನೇಕ ದೃಷ್ಟಿಗಳಿಂದ ಇದು ನಮ್ಮ ಪ್ರಜಾಪ್ರಭುತ್ವದ ಒಂದು ಮಹಾ ಪ್ರಯೋಗ ಆಗಬಹುದು.

ಮತದಾನ ಕಡ್ಡಾಯ ಮಾಡಿ ತಪ್ಪಿದವರಿಗೆ ಶಿಕ್ಷೆ ವಿಧಿಸಿದರೆ, ಕೋಟ್ಯಂತರ ಜನ ಹಿಡಿಸುವ ಸೆರೆಮನೆಗಳೆಲ್ಲಿವೆ ಎಂಬ ಕೆಲವರ ಆತಂಕಕ್ಕೆ ಆಧಾರ­ವಿಲ್ಲ. ಒಂದೊಮ್ಮೆ ಮತದಾನ ಕಡ್ಡಾಯ ಕರ್ತವ್ಯ ಎಂದಾಗಿಬಿಟ್ಟು ಮತದಾರ ಮತಗಟ್ಟೆಗೆ ಬಂದೇ ಬರಬೇಕಾದರೂ, ಯಾರಿಗೂ ಮತ ಹಾಕ­ದಿರುವ ಹಕ್ಕು ಮತಯಂತ್ರದ ‘ನೋಟ’ ದಲ್ಲಿ ಢಾಳಾಗಿ ಕಾಣಿಸುತ್ತಿದೆಯಲ್ಲ! ಕರ್ತವ್ಯ­ಪಾಲನೆಯಲ್ಲೂ ಹಕ್ಕು ಇರುವುದು ನಮ್ಮ ಪ್ರಜಾಪ್ರಭುತ್ವದ ವಿಶೇಷ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT