ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿ ಮೂಳೆ

Last Updated 1 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಮುಂದಿನ ಕಾಲದ ಸಂಗತಿಗಳನ್ನು ತಿಳಿಯಲು ಬಳಸುತಿದ್ದ ಮೂಳೆ ಚೂರುಗಳ ಮೇಲಿನ ಬರಹವು ಭಾಷೆ, ಚರಿತ್ರೆ ಮತ್ತು ಸಂಸ್ಕೃತಿಗಳ ಹಿಂದಿನ ಕಾಲದ ಖಚಿತ ತಿಳಿವಳಿಕೆಯನ್ನು ದೊರಕಿಸಿಕೊಟ್ಟಿತು.

ಚೀನಾ ದೇಶದ್ದು ಪ್ರಾಚೀನ ನಾಗರಿಕತೆಗಳಲ್ಲಿ ಒಂದು, ಅದರ ಭಾಷೆ ಹಳೆಯದು ಅನ್ನುವುದು ಗೊತ್ತಿತ್ತು. ಆದರೆ ಅದರ ಲಿಪಿಯ ಸ್ವರೂಪದ ಬಗ್ಗೆ, ಚಾರಿತ್ರಿಕ ಸಂಗತಿಗಳ ಬಗ್ಗೆ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಕಣಿ ಮೂಳೆಗಳ ಬರಹ ಅಂಥ ಹಲವು ತೊಡಕುಗಳಿಗೆ ಪರಿಹಾರ ಒದಗಿಸಿತು.

ಆಮೆಯ ಚಿಪ್ಪು ಅಥವ ದನದ ಭುಜದ ಮೂಳೆಯನ್ನು ಬಳಸಿ ಭವಿಷ್ಯ ನುಡಿಯುವ ಕ್ರಮವೊಂದು ಚೀನಾದಲ್ಲಿತ್ತು. ಕ್ರಿಪೂ 1766-1122ರ ಅವಧಿಯಲ್ಲಿ ಶಾಂಗ್ ವಂಶದ ರಾಜರು ಆಳುತಿದ್ದಾಗ ಈ ಪದ್ಧತಿ ವ್ಯಾಪಕವಾಗಿ ಬಳಕೆಯಲ್ಲಿತ್ತು.

ಮಳೆ, ಬೆಳೆ, ರಾಜವಂಶದ ಜನರ ಭವಿಷ್ಯ, ಆರೋಗ್ಯ ಸಮಸ್ಯೆ, ಸೈನ್ಯದ ವ್ಯವಹಾರ, ಮಗು ಹುಟ್ಟುವ ಗಳಿಗೆ ಇಂಥ ವಿಷಯಗಳನ್ನು ತಿಳಿಯುವುದಕ್ಕೆ ಕಣಿ ಮೂಳೆಗಳ ಮೊರೆಹೋಗುತಿದ್ದರು. ಯೂರೋಪು, ಆಫ್ರಿಕದಲ್ಲಿ, ಕೊರಿಯದಲ್ಲಿ, ಉತ್ತರ ಅಮೆರಿಕದ ಭಾಗಗಳಲ್ಲಿ ಇಂಥದೇ ಪದ್ಧತಿ ಇತ್ತು ಅನ್ನುತ್ತಾರೆ.

ಪ್ರಶ್ನೆಗಳನ್ನು ಮೂಳೆಯ ಮೇಲೆ, ಚಿಪ್ಪಿನ ಮೇಲೆ ಕೆತ್ತಿ, ಅಥವ ಬಣ್ಣ ಬ್ರಶ್ಶು ಬಳಸಿ ಪ್ರಶ್ನೆ ಬರೆದು ಅದನ್ನು ಸುಡುತಿದ್ದರು; ಇಲ್ಲವೇ ಕಾದ ಕಬ್ಬಿಣದ ಸಲಾಕೆಯನ್ನು ಒತ್ತಿ ಹಿಡಿದು ಮೂಳೆ ಬಿರುಕು ಬರುವವರೆಗೆ ಕಾಯುತಿದ್ದರು. ಅದರ ಮೇಲೆ ಎಂಥ ಬಿರುಕು, ಯಾವ ಆಕಾರದ ಬಿರುಕು ಅನ್ನುವುದನ್ನು `ಓದಿ~ ಭವಿಷ್ಯ ನುಡಿಯುತಿದ್ದರು.

ಚೀನೀ ಬರವಣಿಗೆಯ ಅತಿ ಹಳೆಯ ದಾಖಲೆ ಸಿಕ್ಕಿರುವುದು ಇಂಥ ಕಣಿ ಮೂಳೆಗಳ ಮೇಲೆ. ಎಷ್ಟೋ ಜನ ವಿದ್ವಾಂಸರು ಶಾಂಗ್ ಅನ್ನುವ ವಂಶ ನಿಜವಾಗಲೂ ಇತ್ತೇ ಎಂದು ಪಡುತಿದ್ದ ಅನುಮಾನಕ್ಕೂ ಉತ್ತರ ಸಿಕ್ಕಿದ್ದು ಈ ಮೂಳೆಗಳಿಂದಲೇ. ಕ್ರಿಪೂ 1400ರಿಂದ ಕ್ರಿಪೂ 1100ರ ಅವಧಿಯ ಮೂಳೆಗಳು ಪತ್ತೆಯಾದದ್ದು ಈಗಿನ ಅನ್‌ಯಾಂಗ್ ಪ್ರದೇಶದಲ್ಲಿ, ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ.

ನೆಲ ಉಳುವಾಗ ಅಲ್ಲಿನ ರೈತರಿಗೆ ಸಿಗುತಿದ್ದ ಮೂಳೆಗಳನ್ನು ಮತ್ತೆ ನೆಲದಲ್ಲೆ ಹೂಳುತಿದ್ದರು. 19ನೆ ಶತಮಾನದ ಜನ ಆಮೆ ಮೂಳೆಗಳನ್ನು ಮಲೇರಿಯ ಜ್ವರಕ್ಕೆ ಔಷಧವಾಗಿ ಬಳಸುವುದು ಶುರುವಾದಾಗ ಕಣಿ ಮೂಳೆಗಳ ಮಾರಾಟ ಶುರುವಾಯಿತು.
1899ನೆಯ ಇಸವಿಯಲ್ಲಿ ಪ್ರಾಚೀನ ವಸ್ತುಗಳ ವ್ಯಾಪಾರಿಯೊಬ್ಬ ಈ ಪ್ರದೇಶದಲ್ಲಿ ಹಳೆಯ ವಸ್ತುಗಳಿಗೆ ಬೆದಕುತಿದ್ದ. ಸ್ಥಳೀಯರು ಒಂದಷ್ಟು ಕಣಿ ಮೂಳೆಗಳನ್ನು ಕೊಟ್ಟಿದ್ದರು. ಅವನ್ನು ತೆಗದುಕೊಂಡು ಹೋಗಿ ವಾಂಗ್ ಯಿರಾಂಗ್ ಅನ್ನುವಾತನಿಗೆ ಮಾರಿದ.

ಆತ ಬೀಜಿಂಗ್‌ನ ಇಂಪೀರಿಯಲ್ ಅಕಾಡಮಿಯ ಮುಖ್ಯಸ್ಥ, ತಿಳಿವಳಿಕೆ ಇದ್ದ ಸಂಗ್ರಾಹಕ. ಈ ಕಣಿ ಮೂಳೆಗಳ ಮೇಲೆ ಇರುವ ಬರಹ ಕ್ರಿಪೂ 1406ರ ಝೌ ರಾಜವಂಶದ ಕಂಚಿನ ವಸ್ತುಗಳ ಮೇಲಿರುವ ಚೀನೀ ಬರಹಕ್ಕೆ ಹೋಲುವಂತಿವೆ ಎಂದು ಕಂಡುಕೊಂಡ ಮೊಟ್ಟಮೊದಲ ಆಧುನಿಕ ಮನುಷ್ಯ ಇವನೇ ಅನ್ನುತ್ತಾರೆ.

ವಾಂಗ್ ಯಿರಾಂಗ್‌ಗೆ ಮಲೇರಿಯ ಆಗಿತ್ತು, ಅವನ ವಿದ್ವಾಂಸ ಮಿತ್ರ ಲಿಯು ಇ ಆಮೆ ಚಿಪ್ಪು ಪುಡಿ ಮಾಡಿಕೊಡಲು ಬಂದ. ಅದನ್ನು ಕುಟ್ಟುವ ಮೊದಲು ಚಿಪ್ಪಿನ ಮೇಲಿದ್ದ ಬರಹ ಕಂಡಿತು; ತಾಮ್ರ ಶಾಸನಗಳ ಪರಿಚಯವಿದ್ದ ಅವರು ಅದರ ಲಿಪಿಯನ್ನು ಗುರುತಿಸಿದರು ಅನ್ನುವ ಕಥೆ ಕೂಡ ಇದೆ.

1899ರ ಮೊದಲು ಎಷ್ಟು ನೂರು, ಸಾವಿರ ಕಣಿ ಮೂಳೆಗಳು ಸಾಂಪ್ರದಾಯಕ ಔಷಧದಂಗಡಿಗಳಲ್ಲಿ ಪುಡಿಯಾಗಿ ಜನರ ಹೊಟ್ಟೆ ಸೇರಿದ್ದವೋ ಎಂದು ಚೀನೀ ವಿದ್ವಾಂಸನೊಬ್ಬ ಉದ್ಗರಿಸಿದ್ದಾನೆ.

ಕಣಿ ಮೂಳೆಗಳ ಮಹತ್ವ ಗುರುತಿಸಿದ ವಾಂಗ್ 1900ರಲ್ಲಿ ರಾಜಕೀಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ. ಆಮೇಲೆ ಅವನ ಮಗ ಕಣಿ ಮೂಳೆಗಳನ್ನು ಲಿಯು ಇ ಗೆ ಮಾರಿಬಿಟ್ಟ. ಆತ 1903ರಲ್ಲಿ ಕಣಿ ಮೂಳೆಗಳ ಮೇಲಿದ್ದ ಬರಹದ ಬಗ್ಗೆ ಪುಸ್ತಕ ಬರೆದ.

ಚೀನಾದಲ್ಲಿ, ವಿದೇಶೀ ಸಂಗ್ರಾಹಕರಲ್ಲಿ, ವಿದ್ವಾಂಸರಲ್ಲಿ ಕುತೂಹಲ ಮೂಡಿ ಕಣಿಮೂಳೆಗಳಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಯಿತು. ಇಂಥ ಮೂಳೆಗಳು ಇನ್ನೆಲ್ಲೋ ಸಿಗುತ್ತವೆ ಅನ್ನುತ್ತ ಸಂಗ್ರಾಹಕರು ದಾರಿ ತಪ್ಪಿಸುತಿದ್ದರು. 1908ರಲ್ಲಿ ಲುವೊ ಝೆನ್ಯು ಎಂಬ ವಿದ್ವಾಂಸ ಈ ಕಣಿಮೂಳೆಗಳು ಅನ್‌ಯಾಂಗ್ ಪ್ರದೇಶದವು, ಅದು ಶಾಂಗ್ ರಾಜವಂಶದ ರಾಜಧಾನಿಯಾಗಿತ್ತು ಎಂದು ಪತ್ತೆ ಮಾಡಿದ.

ನೆಲ ಬಗೆದು ಸಿಕ್ಕಿದ್ದನ್ನೆಲ್ಲ ದೋಚುವ, ಮಾರುವ ಕೆಲಸ ನಡೆಯುತಿತ್ತು. ಕೆನಡದ ಜೇಮ್ಸ ಮೆಲ್ಲೋನ್ ಮೆನಿಜಿಸ್ ಕಣಿ ಮೂಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ್ದ. ಚೀನೀಯರು `ಶಾಂಗ್ ಸಂಸ್ಕೃತಿಯ ಮತ್ತು ಕಣಿ ಮೂಳೆ ಶಾಸನಗಳ ಪ್ರಮುಖ ಪಾಶ್ಚಾತ್ಯ ವಿದ್ವಾಂಸ~ ಎಂದು ಗುರುತಿಸಿ 2004ರಲ್ಲಿ ಕಣಿ ಮೂಳೆಗಳ ಅಧ್ಯಯನಕ್ಕೆಂದೇ ಅವನ ಹೆಸರಿನಲ್ಲಿ ಸ್ಮಾರಕ ಮ್ಯೂಸಿಯಮ್ ಸ್ಥಾಪಿಸಿದರು.

1928ರಲ್ಲಿ ಅಧಿಕೃತ ಉತ್ಖನನಗಳು ನಡೆದು 20 ಸಾವಿರ ಕಣಿ ಮೂಳೆಗಳು ಸಿಕ್ಕವು. ಇವು ಇದುವರೆಗೆ ಸಿಕ್ಕಿರುವ ರಾಶಿಯಲ್ಲಿ ಐದನೆಯ ಒಂದು ಭಾಗ ಅಷ್ಟೇ ಅನ್ನುತ್ತಾರೆ.
ಕಣಿಮೂಳೆಗಳು ಬಲುಮಟ್ಟಿಗೆ ಆಮೆಯ ಚಿಪ್ಪು, ಅದರಲ್ಲೂ ಹೆಣ್ಣು ಆಮೆಯದು ಅಥವ ಎತ್ತಿನ ಭುಜ, ಪಕ್ಕೆಲುಬುಗಳು. ಕುರಿ, ಹಂದಿ, ಕುದುರೆ, ಜಿಂಕೆ ಮತ್ತು ಇತರ ಪ್ರಾಣಿಗಳದೂ ಕೆಲವು ಇವೆ.

ಆಮೆ ಚಿಪ್ಪು ಎಲ್ಲಿ ಸಿಗುತಿದ್ದವು? ಶಾಂಗ್ ಅರಸರಿಗೆ ಕಾಣಿಕೆ ಬಂದವು ಅವು. `ಇಂಥ ಸಾಮಂತ 250 ಆಮೆ ಕಳಿಸಿದ್ದಾನೆ~ ಅನ್ನುವಂಥ ಬರಹಗಳು ಇವೆ. ಆಮೆ ಚಿಪ್ಪಿನ ನಡುವೆ ಸೇತುವೆಯಂತೆ ಉಬ್ಬಿರುವ ಭಾಗದಲ್ಲಿರುವದರಿಂದ ಸೇತುವೆ ಟಿಪ್ಪಣಿ ಅನ್ನುವ ಹೆಸರು ಇವಕ್ಕೆ. ಇನ್ನು ಕೆಲವು ಬಲಿ ಕೊಡುವುದಕ್ಕೆ ರಾಜನ ಪ್ರಾಣಿಸಂಗ್ರಹದಿಂದ ಬಂದವು.

ಎಲುಬನ್ನು ನಯವಾಗಿ ತಯಾರು ಮಾಡಿಕೊಂಡು ಅದರ ಮೇಲೆ ನಿರ್ದಿಷ್ಟ ಕ್ರಮ ಅನುಸರಿಸಿ ರಂಧ್ರವನ್ನೋ ಹಳ್ಳಗಳನ್ನೋ ಮಾಡುತಿದ್ದರು. `ಮುನ್ನುಡಿ~ಯ ಭಾಗದಲ್ಲಿ ಸಂವತ್ಸರದ, ಮಾಸದ, ದಿನದ ಮತ್ತು ಶಕುನ ಓದುವಾತನ ಹೆಸರು ಬರೆಯುತಿದ್ದರು.

ಆಮೇಲೆ `ಕೇಳಿಕೆ~ಯ ಬರಹ- ರಾಜನಿಗೆ ಹಲ್ಲು ನೋವು ಬರಲು ಇಂಥ ಹಿರೀಕನ ಆತ್ಮ ಕಾರಣವೇ? ಮಗು ಯಾವತ್ತು ಜನಿಸಿದರೆ ಒಳ್ಳೆಯದು? ಈ ವರ್ಷದ ಬೆಳೆ ಹೇಗೆ? ಯುದ್ಧ ಗೆಲ್ಲುತ್ತೇವೆಯೇ? ಇಂಥ ಪ್ರಶ್ನೆಗಳು.

ಆಮೇಲೆ ಮೂಳೆಗೆ ರಕ್ತ ಬಳಿದು, ಬಿರುಕು ಬಿಡುವವರೆಗೆ ಸುಡುತಿದ್ದರು. ಮೂಡಿದ ಬಿರುಕಿನ ಆಧಾರದ ಮೇಲೆ ಪ್ರಶ್ನೆಗೆ ಉತ್ತರ ಹೇಳುತಿದ್ದರು. ದೊರೆತ ಉತ್ತರವನ್ನು ದೃಢೀಕರಿಸುವ ಬರಹಗಳೂ ಇವೆ.

ಕೊನೆಕೊನೆಗೆ ರಾಜರೇ ಸ್ವತಃ ಶಕುನ ಓದುವ ಕೆಲಸ ಮಾಡುತಿದ್ದರು. ಕಣಿ ಕೇಳಿದಮೇಲೆ ಮೂಳೆಯನ್ನು ನೆಲದಲ್ಲಿ ಹೂಳುತಿದ್ದರು. ಅವೇ ಮುಂದಿನ ಕಾಲದಲ್ಲಿ ಚೀನೀ ಬರಹದ ಪ್ರಾಚೀನತೆಯನ್ನು, ವಿಕಾಸ ಕ್ರಮವನ್ನು ತಿಳಿಸಿಕೊಟ್ಟವು.

ಇತರರಿಗೆ ವಿಚಿತ್ರವಾಗಿ ಕಾಣುವ ಈ ಕೆಲವು ಸಂಗತಿಗಳನ್ನು ನೋಡಿ. ಚೀನೀ ಭಾಷೆಯಲ್ಲಿ ಮುಖ್ಯವಾದ ಎಂಟು `ಉಪ~ ಭಾಷೆಗಳಿವೆ; ಹಾಗಲ್ಲ. ಬಹುಶಃ ಜಗತ್ತಿನ ಅತಿ ದೊಡ್ಡ ಲಿಪಿ ಸುಧಾರಣೆಯ ಪ್ರಯತ್ನಗಳು ನಡೆದದ್ದು ಚೀನೀ ಭಾಷೆಗೆ ಸಂಬಂಧಿಸಿದಂತೆಯೇ ಇರಬೇಕು.

ಚೀನೀ ಬರಹವನ್ನು ಸಾಮಾನ್ಯವಾಗಿ ಚಿತ್ರಲಿಪಿ ಎಂದು ತಪ್ಪಾಗಿ ವಿವರಿಸುವುದುಂಟು. ಸ್ಥೂಲವಾಗಿ ಹೇಳಬೇಕೆಂದರೆ ಚೀನೀ ಬರಹ ಹಲವು ತತ್ವಗಳನ್ನು ಆಧರಿಸಿ ರೂಪುಗೊಂಡದ್ದು.

ಮೊದಲಿಗೆ ಚೀನೀ ಬರಹದ ಚಿಹ್ನೆಗಳ ಸಂಖ್ಯೆ ಅಗಾಧ. ಕಣಿ ಮೂಳೆಗಳು ಸಿಕ್ಕ ಕಾಲದಲ್ಲಿ ಇದ್ದ ಸುಮಾರು 3 ಸಾವಿರ ಚಿಹ್ನೆಗಳ ಸಂಖ್ಯೆ ಕ್ರಿಶ 500ರ ಹೊತ್ತಿಗೆ ಸುಮಾರು 18 ಸಾವಿರಕ್ಕೆ ತಲುಪಿ, ಕ್ರಿಶ 1000ದ ಹೊತ್ತಿಗೆ 27 ಸಾವಿರಕ್ಕೂ ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ 49 ಸಾವಿರವಾಗಿತ್ತು. ಸಂಖ್ಯೆ ಹೆಚ್ಚಿದ್ದರೂ ಬರಹದ ಹಿಂದಿನ ತತ್ವ ಮಾತ್ರ ಅತಿ ಪ್ರಾಚೀನ ಕಾಲದಿಂದಲೂ ಬದಲಾಗಿಲ್ಲ.

ಚಿತ್ರಲೇಖನ, ವಿಚಾರ ಲೇಖನ, ಅರ್ಥ ಆಧಾರಿತ ತರ್ಕ, ಸೂಚಕ ಶಬ್ದಮೂಲ, ವಿಸ್ತರಣ, ಎರವಲು ಈ ಆರು ಅಂಶಗಳನ್ನು ಆಧರಿಸಿ ಚೀನೀ ಬರಹ ರೂಪುಗೊಂಡಿದೆ.

ಚೀನೀ ಬರವಣಿಗೆ ವ್ಯಾಕರಣ ಆಧಾರಿತವಲ್ಲ, ಆದ್ದರಿಂದ ಭಾಷೆಯ ವ್ಯಾಕರಣ ಗೊತ್ತಿಲ್ಲದವರೂ ಓದಬಹುದು ಅನ್ನುತ್ತಾರೆ. ಇದು ಚೀನೀ ಬರಹದ ದೊಡ್ಡ ಶಕ್ತಿ. ಬೇರೆ ಬೇರೆ ಉಪಭಾಷೆಗಳು, ಜನಾಂಗಗಳು ಇರುವ ವಿಶಾಲ ದೇಶವನ್ನು ಒಂದು ಕೇಂದ್ರದಿಂದ ಆಳುತ್ತ ಆಡಳಿತದ ನಿಯಂತ್ರಣ ಇಟ್ಟುಕೊಳ್ಳಲು ಚೀನೀ ಭಾಷೆಯ ಈ ಸಾಮರ್ಥ್ಯ ಸಹಾಯಮಾಡಿದೆ.

19ನೆಯ ಶತಮಾನದ ಹೊತ್ತಿಗೆ ಚೀನೀ ಬರಹವನ್ನು ಸರಳಗೊಳಿಸುವ ಪ್ರಯತ್ನ, ಅಂದರೆ ರೋಮನ್ ಲಿಪಿ, ಉಚ್ಚಾರಣೆಗಳಿಗೆ ಹೊಂದಿಸುವ ಪ್ರಯತ್ನ ನಡೆಯಿತು. ಇಂಥ ಪ್ರಯತ್ನ ನಡೆಸಿದ ಫ್ರಾನ್ಸಿಸ್ ವೇಡ್ ಮತ್ತು ಎಚ್.ಎ. ಗೈಲ್ಸ್‌ರ ಹೆಸರಿನಲ್ಲೇ ಇದನ್ನು ವೇಡ್ ಗೈಲ್ಸ್ ಪದ್ಧತಿ ಅನ್ನುತ್ತಾರೆ. 1935ರಲ್ಲಿ ಚೀನೀ ಚಿಹ್ನೆಗಳನ್ನು ಸಂಪೂರ್ಣವಾಗಿ ರದ್ದು ಮಾಡುವ ಪ್ರಯತ್ನ ನಡೆದು ವಿಫಲವಾಯಿತು.

1949ರಲ್ಲಿ ಜನತೆಯ ಗಣತಂತ್ರ, ಕಮ್ಯುನಿಸ್ಟ್ ಸರ್ಕಾರ ಚೀನೀ ಭಾಷೆ ಮತ್ತು ಲಿಪಿಯ ಆಧುನೀಕರಣ ಮತ್ತು ಏಕೀಕರಣದ ಯೋಜನೆ ಆರಂಭಿಸಿ 1956ರಲ್ಲಿ ಆಧುನಿಕ ಚೀನೀ ಪ್ರಮಾಣ ಭಾಷೆಯ ಅಳವಡಿಸಿ 1958ರಲ್ಲಿ ಚೀನಾದ ಸರ್ಕಾರ ವಿದೇಶೀ ವಿದ್ವಾಂಸರು ರೂಪಿಸಿದ್ದ ವೇಡ್-ಗೈಲ್ಸ್ ಮಾದರಿಯ ಲಿಪ್ಯಂತರವನ್ನು ಸಂಪೂರ್ಣವಾಗಿ ನಿರಾಕರಿಸಿತು. ಅದರ ಬದಲಾಗಿ ಉಚ್ಚಾರಣೆ, ಅಕ್ಷರಗಳನ್ನು ಆಧರಿಸಿದ ಪಿನ್‌ಯಿನ್ ಜಾರಿಗೆ ಬಂದಿತು.

ಚೀನೀ ಬರಹ ಅಕ್ಷರ ಆಧಾರಿತ (ಸಿಲಾಬಿಕ್) ಅಥವ ಶಬ್ದದ ಉಚ್ಚಾರಣೆ ಆಧಾರಿತ (ಫೊನಿಟಿಕ್) ಅಲ್ಲವಾದ್ದರಿಂದ ಚೀನೀ ನಿಘಂಟುಗಳ ಸ್ವರೂಪವೂ ಬೇರೆಯದೇ. ಚೀನೀ ಭಾಷೆಗೆ ಅಕ್ಷರಾನುಕ್ರಮದ ಒಂದೇ ಒಂದು ನಿಘಂಟನ್ನು ಕೂಡ ರಚಿಸಲು ಸಾಧ್ಯವಾಗಿಲ್ಲ. ಆದರೆ ಚೀನಾದಲ್ಲೂ ನಿಘಂಟು ಇದ್ದವು. ಅದರಲ್ಲಿ ಚಿಹ್ನೆಯ ಆಕಾರವನ್ನು ಬರೆಯಲು ಎಷ್ಟು ಸ್ಟ್ರೋಕ್‌ಗಳು ಅನ್ನುವುದನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಇದಕ್ಕಿಂತ ಜನಪ್ರಿಯವಾದದ್ದು ರ‌್ಯಾಡಿಕಲ್ ಮೆಥಡ್.

ಬರಹದ ಚಿಹ್ನೆಗಳನ್ನು 214 ಶಬ್ದಮೂಲಗಳಾಗಿ (ರ‌್ಯಾಡಿಕಲ್) - ನೀರು, ಸಸ್ಯ, ಕೀಟ ಇತ್ಯಾದಿ- ವಿಂಗಡಿಸಿ 1-17 ಸ್ಟ್ರೋಕ್‌ಗಳ ಕೋಷ್ಟಕಕ್ಕೆ ಹೊಂದಿಸಿ ನಿಘಂಟುಗಳು ತಯಾರಾಗಿವೆ. ಚೀನೀ ಭಾಷಿಕರಿಗೆ ಚೀನೀ ಬರಹವನ್ನು ಓದುವುದು ನೆನಪಿಗೆ ಸಂಬಂಧಪಟ್ಟ ಚಿತ್ರಾಂಶಗಳ ಸಂಬಂಧ ಸ್ಥಾಪಿಸಿಕೊಳ್ಳುವ ಕೆಲಸ ಅನ್ನುತ್ತಾರೆ.

ಚೀನೀ ಭಾಷೆ, ಬರವಣಿಗೆಗಳ ಕುತೂಹಲ ತಣಿಸುವಂತೆ ಒಂದು ಲೇಖನದಲ್ಲಿ ವಿವರಗಳನ್ನು ನೀಡುವುದು ಕಷ್ಟದ ಕೆಲಸ. ಹೊರಗಿನವರಿಗೆ ಚೀನಾದ ಬರಹ ಎಷ್ಟು ವಿಚಿತ್ರ, ಜಟಿಲ ಅನ್ನಿಸಿದರೂ ಚೀನೀ ಭಾಷಿಕರಿಗೆ ಅದು ಸಹಜ, ತಾರ್ಕಿಕ, ಸುಲಭ, ವೈಜ್ಞಾನಿಕ. ಹಾವಿನ ಡೊಂಕು ಹುತ್ತಕ್ಕೆ ಸಸಿನ, ಹಾಗೆಯೇ ಭಾಷೆಯೊಂದರ ಡೊಂಕು ಆ ಭಾಷೆಯನ್ನಾಡುವವರಿಗೆ ಸಸಿನ, ಅಲ್ಲವೇ.

ದಿ ನ್ಯೂಯಾರ್ಕರ್ ಮತ್ತು ನ್ಯಾಶನಲ್ ಜಿಯಾಗ್ರಫಿಕ್‌ಗೆ ಬರೆಯುವ ಪತ್ರಕರ್ತ ಪೀಟರ್ ಹೆಸ್ಲರ್ `ಕಣಿ ಮೂಳೆ~ಯನ್ನು ರೂಪಕವಾಗಿ ಇಟ್ಟುಕೊಂಡು ಚೀನಾದ ಭೂತ ವರ್ತಮಾನಗಳನ್ನು ಚಿತ್ರಿಸುವ `ಆರಕಲ್ ಬೋನ್ಸ್~ ಪುಸ್ತಕವನ್ನು 2006ರಲ್ಲಿ ಪ್ರಕಟಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT