ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಗಾವಲಿನ ಇತಿಹಾಸ ಗೊತ್ತಿದ್ದೂ ‘ಆಧಾರ್’ ಒಪ್ಪಲಾದೀತೇ?

Last Updated 27 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನಾನು ಸಂಪಾದಕನಾಗಿದ್ದ ಪತ್ರಿಕೆಯು ಹದಿನೈದು ವರ್ಷಗಳ ಹಿಂದೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವಣ ದೂರವಾಣಿ ಸಂಭಾಷಣೆಯ ಪಠ್ಯವನ್ನು ಪ್ರಕಟಿಸಿತು. ಈ ಪಠ್ಯವನ್ನು ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆ ಕೂಡ ಪ್ರಕಟಿಸಿತ್ತು. ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ವರದಿಗಾರರಾಗಿದ್ದ ಜೇ ಡೆ (ನಂತರ ಇವರು ಹತ್ಯೆಗೀಡಾದರು) ಅವರು ಈ ಸಂಭಾಷಣೆಯನ್ನು ಮುಂಬೈ ಪೊಲೀಸ್ ಮೂಲಗಳಿಂದ ಪಡೆದುಕೊಂಡಿದ್ದರು. ಆ ಸಂಭಾಷಣೆಯಲ್ಲಿ ಪ್ರೀತಿ ಝಿಂಟಾ ಬಗ್ಗೆ ಉಲ್ಲೇಖವಿತ್ತು. ಸಲ್ಮಾನ್ ಅವರು ಝಿಂಟಾ ಬಗ್ಗೆ ಅಶ್ಲೀಲವಾಗಿ ಒಂದು ಮಾತು ಆಡಿದ್ದರು. ಇದು ಝಿಂಟಾ ಅವರಿಗೆ ನೋವುಂಟು ಮಾಡಿತು. ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಝಿಂಟಾ ಅವರು ಕೈಬಿಡುವಷ್ಟು ವರ್ಷಗಳವರೆಗೆ ಈ ಪ್ರಕರಣ ಮುಂದುವರಿಯಿತು. ಆದರೆ, ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿದ್ದು ತಾವಲ್ಲ ಎಂದು ಈ ಪ್ರಕರಣದಲ್ಲಿ ಪೊಲೀಸರು ಹೇಳಿಕೊಂಡಿದ್ದು ಕುತೂಹಲದ ವಿಚಾರವಾಗಿತ್ತು. ಆ ಸಂಭಾಷಣೆಯಲ್ಲಿದ್ದುದು, ಮೇಲೆ ಹೇಳಿದ್ದ ನಟ-ನಟಿಯರದ್ದೇ ಧ್ವನಿ. ಹಾಗಾಗಿ, ಆ ಸಂಭಾಷಣೆ ನೈಜವೇ ಆಗಿತ್ತು. ಹಾಗಾದರೆ, ಅದನ್ನು ಕದ್ದಾಲಿಕೆ ಮಾಡಿದ್ದು ಯಾರು?

ಇದು ನಮಗೆ ಇನ್ನೂ ಗೊತ್ತಾಗಿಲ್ಲ. ಈ ತರಹದ ಇನ್ನೂ ಕೆಲವು ಉದಾಹರಣೆಗಳು ಇವೆ. 20 ವರ್ಷಗಳ ಹಿಂದಿನ ಟಾಟಾ ಟೇಪ್‌ನಲ್ಲಿ, ಅಸ್ಸಾಂನ ಪ್ರತ್ಯೇಕತಾವಾದಿಗಳಿಗೆ ಹಣ ಕೊಡಲು ಟಾಟಾ ಸಮೂಹದ ಮೇಲೆ ಒತ್ತಡ ಹೇರಲಾಗಿತ್ತು ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಹೇಳಿಕೊಂಡಿದೆ. ನುಸ್ಲಿ ವಾಡಿಯಾ, ಕೇಶಬ್ ಮೆಹ್ತಾ, ಫೀಲ್ಡ್‌ ಮಾರ್ಷಲ್‌ ಸ್ಯಾಮ್ ಮಣೇಕ್ ಶಾ ಮತ್ತು ರತನ್ ಟಾಟಾ ನಡುವಣ ಖಾಸಗಿ ಮಾತುಕತೆಯನ್ನು ಧ್ವನಿಮುದ್ರಿಸಿ, ಸೋರಿಕೆ ಮಾಡಲಾಯಿತು. ಇದನ್ನು ಮಾಡಿದ್ದು ಯಾರು ಎಂಬುದು ನಮಗೆ ತಿಳಿದಿಲ್ಲ. ಸರ್ಕಾರ ದೇಶದ ನಾಗರಿಕರ ಮೇಲೆ ಕಣ್ಗಾವಲು ಇಡುವ ಕಾರ್ಯ, ಅನುಮತಿ ಹಾಗೂ ಮೇಲ್ವಿಚಾರಣೆ ಇಲ್ಲದೆಯೇ ನಡೆಯುತ್ತದೆ ಎಂಬುದನ್ನು ಈ ನಿದರ್ಶನಗಳು ತೋರಿಸುತ್ತವೆ. ಈ ಅಪರಾಧಗಳು ಬಹಿರಂಗಗೊಂಡಾಗ ಕೂಡ, ಅಕ್ರಮವಾಗಿ ಕಣ್ಗಾವಲು ಇರಿಸಿದ ತಪ್ಪಿನ ದೋಷಾರೋಪವನ್ನು ಯಾವುದೇ ಅಧಿಕಾರಿ ಮೇಲೆ ಹೊರಿಸಲಾಗುವುದಿಲ್ಲ.

ಭಾರತದಲ್ಲಿ ನಡೆಯುವ ಅಕ್ರಮ ಕಣ್ಗಾವಲಿನ ಪ್ರಮಾಣ ಕೂಡ ಬೃಹತ್ ಆಗಿದೆ. ತಿಂಗಳೊಂದರಲ್ಲಿ 10 ಸಾವಿರ ದೂರವಾಣಿ ಕದ್ದಾಲಿಕೆಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅನುಮತಿ ನೀಡಿದ್ದರು ಎಂಬ ಉತ್ತರವನ್ನು ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ ನೀಡಲಾಗಿದೆ. ಈ ಮಾಹಿತಿಗಳನ್ನೆಲ್ಲ ಏಕೆ ಸಂಗ್ರಹಿಸಲಾಗುತ್ತಿದೆ? ಅದನ್ನು ನಮಗೆ ಹೇಳುವುದಿಲ್ಲ.

ಬೇರೆ ಪ್ರಜಾತಾಂತ್ರಿಕ ರಾಷ್ಟ್ರಗಳಲ್ಲಿ ಇರುವಂತಹ ರಕ್ಷಣೆ ನಮ್ಮಲ್ಲಿ ಇಲ್ಲ. ಅಮೆರಿಕದಲ್ಲಿ ದೂರವಾಣಿ ಸಂಭಾಷಣೆಯ ಕದ್ದಾಲಿಕೆಗೂ ಮೊದಲು ನ್ಯಾಯಾಧೀಶರಿಂದ ಅನುಮತಿ ಪಡೆಯಬೇಕು, ಪೊಲೀಸರು ನ್ಯಾಯಾಧೀಶರಿಗೆ ಸಾಕ್ಷ್ಯ ಒದಗಿಸಬೇಕು, ಕಠಿಣ ಷರತ್ತುಗಳನ್ನು ವಿಧಿಸಿ ಈ ಅನುಮತಿ ನೀಡಲಾಗುತ್ತದೆ. ಇಂಥ ವ್ಯವಸ್ಥೆ ಭಾರತದಲ್ಲಿ ಇಲ್ಲ. ನೀರಾ ರಾಡಿಯಾ ಅವರ ದೂರವಾಣಿ ಸಂಭಾಷಣೆಗಳನ್ನು ತಿಂಗಳುಗಳ ಕಾಲ ಕದ್ದಾಲಿಸಲಾಯಿತು. ನಂತರ ಆ ಸಂಭಾಷಣೆಗಳ ಧ್ವನಿ ಮುದ್ರಿಕೆಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವ ಅಪರಾಧ ಎಸಗಲಾಯಿತು. ಸಂಭಾಷಣೆಗಳಲ್ಲಿ ಅಪರಾಧದ ಎಳೆ ಇಲ್ಲದಿದ್ದರೂ, ಕೆಲವರಿಗೆ ಮುಜುಗರ ಆಯಿತು.

ಭಾರತದಲ್ಲಿ ಸರ್ಕಾರ ನಾಗರಿಕರ ಮೇಲೆ ಕಣ್ಗಾವಲು ಇಡಬಹುದು, ಮೇಲೆ ಉಲ್ಲೇಖಿಸಿದ ಪ್ರಕರಣಗಳಲ್ಲಿ ಆದಂತೆ ತಾನು ಹಾಗೆ ಮಾಡಿಲ್ಲ ಎಂದು ಹೇಳಬಹುದು. ಸಾಂಸ್ಥಿಕ ಪ್ರಕ್ರಿಯೆಗಳ ಕೊರತೆಯ ಕಾರಣ, ಕಣ್ಗಾವಲಿನ ಮೂಲಕ ಸಂಗ್ರಹಿಸಿದ ಮಾಹಿತಿಯ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇಲ್ಲ- ಮಾಹಿತಿ ಸಂಗ್ರಹ ಕಾನೂನುಬದ್ಧವಾಗಿ ನಡೆದಿದ್ದರೂ (ರಾಡಿಯಾ ಪ್ರಕರಣದಲ್ಲಿ ಆದಂತೆ). ಅಷ್ಟೇ ಅಲ್ಲ, ನಮ್ಮಲ್ಲಿ ಉತ್ತರದಾಯಿತ್ವ ಕೂಡ ಇಲ್ಲ. ಖಾಸಗಿತನದ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಹಿನ್ನೆಲೆ ಇದು. ಭಾರತದಲ್ಲಿ ಕಣ್ಗಾವಲಿನ ಇತಿಹಾಸ ನನಗೆ ತಿಳಿದಿರುವ ಕಾರಣ ನಾನು ಆಧಾರ್‌ ಕಾರ್ಡ್‌ ಪಡೆದಿಲ್ಲ. ನನ್ನ ಬಯೊಮೆಟ್ರಿಕ್ ವಿವರಗಳನ್ನು ಕೊಡುವಂತೆ ಸರ್ಕಾರ ಏಕೆ ಒತ್ತಾಯಿಸಬೇಕು? ಇದು ವಿಚಿತ್ರ.

ಗುರುತಿನ ಪತ್ರವಾಗಿ ನನ್ನ ಬಳಿ ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ ಪತ್ರ, ಪ್ಯಾನ್ ಕಾರ್ಡ್, ಸ್ಥಿರ ದೂರವಾಣಿ ಬಿಲ್, ವಿದ್ಯುತ್ ಬಿಲ್, ನನ್ನ ಮನೆಗೆ ಸಂಬಂಧಿಸಿದ ಕಾಗದ ಪತ್ರಗಳು ಹಾಗೂ ಮತದಾರರ ಗುರುತಿನ ಚೀಟಿ ಈಗಾಗಲೇ ಇವೆ. ಇವೆಲ್ಲವೂ ಸರ್ಕಾರ ಕೊಟ್ಟಿರುವ ಅಧಿಕೃತ ಗುರುತಿನ ಚೀಟಿಗಳು. ನನ್ನಿಂದ ಸರ್ಕಾರ ಇನ್ನೂ ಏನೇನು ಬಯಸುತ್ತಿದೆ ಹಾಗೂ ಏಕೆ ಬಯಸುತ್ತಿದೆ? ನನ್ನ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆಯನ್ನು ಆಧಾರ್ ಜೊತೆ ಜೋಡಣೆ ಮಾಡಬೇಕು ಎಂಬ ನೋಟಿಸ್‌ಗಳು ನನಗೆ ಏರ್‌ಟೆಲ್‌ನಿಂದ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಕಡೆಯಿಂದ ಬಂದಿವೆ. ಪರೀಕ್ಷೆಗಳಿಗೆ ಹಾಜರಾಗಬೇಕಾದರೆ ಆಧಾರ್‌ ಕಾರ್ಡ್ ಮಾಡಿಸಬೇಕು ಎಂದು ಶಾಲಾ ಮಕ್ಕಳಿಗೆ ಒತ್ತಾಯ ಹೇರಿದ ಆತಂಕಕಾರಿ ಕಥೆಗಳೂ ಇವೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಧಾರ್‌ ಸಂಖ್ಯೆಯನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ (ಈ ಅವಿವೇಕದ ನಿಯಮದಿಂದ ತಪ್ಪಿಸಿಕೊಳ್ಳಲು ನಾನು ಮೊದಲೇ ರಿಟರ್ನ್ಸ್‌ ಸಲ್ಲಿಸಿದ್ದೆ). ‘ವ್ಯಕ್ತಿಗೆ ಬಚ್ಚಿಟ್ಟುಕೊಳ್ಳಲು ಏನೂ ಇಲ್ಲ ಎಂದಾದರೆ ಆಧಾರ್‌ ಸಂಖ್ಯೆಗೆ ನೋಂದಣಿ ಮಾಡಿಕೊಳ್ಳಲು ಹಿಂಜರಿಕೆ ಏಕೆ’ ಎಂದು ಸರ್ಕಾರದ ಬೆಂಬಲಿಗರು ವಾದಿಸುತ್ತಾರೆ. ‘ಸರ್ಕಾರ ರೂಪಿಸುವ ರಕ್ಷಣಾ ವ್ಯವಸ್ಥೆ ದುರ್ಬಲವಾಗಿರುವ ಕಾರಣ ಆಧಾರ್‌ಗೆ ನೋಂದಾಯಿಸಿಕೊಳ್ಳಲು ಒಪ್ಪುವುದಿಲ್ಲ’ ಎಂಬ ಉತ್ತರವನ್ನು ನಾನು ನೀಡುತ್ತೇನೆ.

ಬ್ಯಾಂಕ್‌ ಖಾತೆಗಳು ಹಾಗೂ ಪ್ಯಾನ್‌ ಜೊತೆ ಆಧಾರ್‌ ಸಂಖ್ಯೆ ಜೋಡಿಸುವುದರಿಂದ ತೆರಿಗೆ ಕಳ್ಳರನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಬಹುದು ಎನ್ನುವುದಾದರೆ, ಅದಕ್ಕೆ ನನ್ನ ಆಕ್ಷೇಪ ಇದೆ. ಜನ ನಿರಪರಾಧಿಗಳು ಎಂಬ ನಂಬಿಕೆಯನ್ನು ಹೆಚ್ಚು ನಾಗರಿಕವಾಗಿರುವ ಪ್ರಜಾತಂತ್ರ ವ್ಯವಸ್ಥೆ ಹೊಂದಿರುತ್ತದೆ. ಹಣಕಾಸಿನ ವ್ಯವಹಾರಗಳ ಜೊತೆ ಬಯೊಮೆಟ್ರಿಕ್ ಮಾಹಿತಿಯನ್ನು ಎಲ್ಲರೂ ಜೋಡಿಸಬೇಕು ಎಂಬ ಒತ್ತಾಯ ಹೇರುವುದು, ಎಲ್ಲರೂ ಅಪರಾಧಿಗಳು ಎಂಬ ಭಾವನೆ ಹೊಂದಿರುತ್ತದೆ. ಇದನ್ನು ಒಪ್ಪಲು ನನ್ನಿಂದ ಆಗದು.

2014ರ ಏಪ್ರಿಲ್ 8ರಂದು ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಚುನಾವಣೆಯಲ್ಲಿ ಜಯ ಸಾಧಿಸಿದ ನಂತರ ಆಧಾರ್‌ ಯೋಜನೆಯನ್ನು ರದ್ದು ಮಾಡುವುದಾಗಿ ಅವರು ಹೇಳಿದ್ದರು. ನಂದನ್ ನಿಲೇಕಣಿ (ಆಧಾರ್‌ ಪರಿಕಲ್ಪನೆ ರೂಪಿಸಿದವರು) ಅವರ ಮೇಲೆ ವಾಗ್ದಾಳಿ ನಡೆಸಿದ್ದ ಮೋದಿ, ಹೀಗೆ ಹೇಳಿದ್ದರು: ‘ನಿಮ್ಮ ಆಧಾರ್ ಯೋಜನೆಗೆ ಸುಪ್ರೀಂ ಕೋರ್ಟ್ ಒಂದು ಗುದ್ದು ಕೊಟ್ಟಿದೆ. ನೀವು ಮಾಡಿರುವ ಅಪರಾಧ ಏನು ಎಂಬುದನ್ನು ಕೇಳಲು ಬಯಸುತ್ತೇನೆ’.

‘ಮೊದಲ ಬಾರಿಗೆ ಸಾರ್ವಜನಿಕವಾಗಿ ಒಂದು ಮಾತು ಹೇಳಲು ಬಯಸುತ್ತೇನೆ. ಆಧಾರ್ ಯೋಜನೆಯ ಬಗ್ಗೆ ನಾನು ಹಲವು ಪ್ರಶ್ನೆಗಳನ್ನು ಕೇಳಿದೆ. ಅಕ್ರಮ ವಲಸಿಗರು ಹಾಗೂ ರಾಷ್ಟ್ರದ ಭದ್ರತೆ ಕುರಿತು ನಾನು ಪ್ರಶ್ನಿಸಿದೆ. ಅವರ (ಯುಪಿಎ ಸರ್ಕಾರ) ಬಳಿ ಉತ್ತರ ಇರಲಿಲ್ಲ’.

ಈ ರೀತಿಯ ನಿಲುವು ಹೊಂದಿದ್ದ ಮೋದಿ ಅವರು ಈಗ ಸಂಪೂರ್ಣ ಭಿನ್ನವಾದ ನಿಲುವು ತಾಳಿದ್ದಾರೆ. ತಮಗೆ ಬೇಡ ಎನ್ನುವವರೂ ಆಧಾರ್‌ ಸಂಖ್ಯೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನಿಲುವು ಹೀಗೆ ಬದಲಾಗಿದ್ದು ಏಕೆ ಎಂದು ಅವರು ವಿವರಿಸಬೇಡವೇ? ಆದರೆ, ಅವರು ಇಂತಹ ವಿವರಣೆ ನೀಡುವುದಿಲ್ಲ. ಗುಪ್ತಚರ ಸಂಸ್ಥೆಯ ಒಬ್ಬರನ್ನು ನಾನು ಕೆಲವು ದಿನಗಳ ಹಿಂದೆ ಭೇಟಿ ಮಾಡಿದೆ. ನನ್ನ ಬಗ್ಗೆ ಒಂದು ಕಡತ ಇದೆ, ಅದರಲ್ಲಿ ಹಲವು ಮಾಹಿತಿಗಳು ಇವೆ, ಬಹುಪಾಲು ಮಾಹಿತಿ ಸಂಗ್ರಹಿಸಿರುವುದು ಅಕ್ರಮವಾಗಿ ಎಂದು ಅವರು ಹೇಳಿದರು. ಲಕ್ಷಾಂತರ ಅಲ್ಲದಿದ್ದರೂ, ಸಾವಿರಾರು ಜನರ ಮೇಲೆ ಸರ್ಕಾರ ಅಕ್ರಮವಾಗಿ ಕಣ್ಗಾವಲು ಇಟ್ಟಿರಬಹುದು. ನಮ್ಮ ಮಾಹಿತಿಗಳನ್ನು ನಾವಾಗಿಯೇ ನೀಡಿ ಇಂತಹ ಅಪರಾಧ ಕೃತ್ಯಗಳಿಗೆ ಏಕೆ ಇಂಬು ಕೊಡಬೇಕು?

ಅಂತಹ ಕೆಲಸವನ್ನು ನಾವು ಮಾಡಬಾರದು. ಆಧಾರ್‌ ಯೋಜನೆಯ ವ್ಯಾಪ್ತಿಗೆ ಕಡ್ಡಾಯವಾಗಿ ಒಳಪಡುವುದು, ನಮ್ಮ ಬಯೊಮೆಟ್ರಿಕ್ ಮಾಹಿತಿಯನ್ನು ಜೀವನದ ಎಲ್ಲ ಚಟುವಟಿಕೆಗಳ ಜೊತೆಯೂ ಜೋಡಿಸುವುದು ನಿಲ್ಲುತ್ತದೆ ಎಂಬ ಆಶಾಭಾವನೆಯನ್ನು ಸುಪ್ರೀಂ ಕೋರ್ಟ್‌ ನಮ್ಮಲ್ಲಿ ಮೂಡಿಸಿದೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT