ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ತೆರೆದು ನೋಡಬೇಕಾದ ಸಂಗತಿಗಳು...

Last Updated 28 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುವಾಗ ಕನ್ನಡ ಚಲನಚಿತ್ರಗಳಿಗೆ ಅನ್ಯಾಯ ಮಾಡಲಾಗಿದೆ ಎಂಬ ಅಸಮಾಧಾನ ಚರ್ಚೆಯ ರೂಪದಲ್ಲಿ ನಡೆಯುತ್ತಿದೆ. ತೀರ್ಪುಗಾರರು ಕನ್ನಡ ಚಿತ್ರಗಳನ್ನು ಸರಿಯಾದ ರೀತಿಯಲ್ಲಿ ಸಮರ್ಥಿಸಿಕೊಳ್ಳಲಿಲ್ಲ ಎನ್ನುವ ವಾದವೂ ಇದೆ. ಮರಾಠಿ ಮತ್ತು ಮಲಯಾಳಂ ಚಿತ್ರಗಳು ಗಳಿಸಿರುವ ಪ್ರಶಸ್ತಿಗಳ ಸಂಖ್ಯೆಯನ್ನು ನೋಡಿದರೆ, ಕನ್ನಡಚಿತ್ರಗಳದ್ದು ತೀರಾ ನಿರಾಶಾದಾಯಕವಾದ ಸಾಧನೆ. ರಾಷ್ಟ್ರೀಯ ಪ್ರಶಸ್ತಿ `ನೀಡು'ವುದರಲ್ಲಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಅನ್ಯಾಯವಾಗಿದೆ ಎಂದು ಭಾವಿಸಿದ್ದರೆ ಅದೂ ತಪ್ಪು.

39 ವರ್ಷಗಳಿಂದಲೂ ಈ ರೀತಿಯ ಅನ್ಯಾಯ ನಡೆಯತ್ತಾ ಬಂದಿದೆ. ಪ್ರಶಸ್ತಿಗೆ ಪ್ರವೇಶ ಕೊಟ್ಟವರೆಲ್ಲಾ ನಮ್ಮ ಚಿತ್ರ ಪ್ರಶಸ್ತಿಗೆ ಅರ್ಹವಾಗಿದೆ ಎಂದೇ ಅಭಿಪ್ರಾಯ ಪಡುತ್ತಾರೆ. ಪ್ರಶಸ್ತಿ ಬಾರದಿದ್ದಾಗ ನಮ್ಮ ಚಿತ್ರಕ್ಕೆ ಅನ್ಯಾಯವಾಗಿದೆ ಎಂದು ಅಸಮಾಧಾನ, ಅತೃಪ್ತಿ ವ್ಯಕ್ತಪಡಿಸುವವರೂ ಚಿತ್ರಕ್ಕೆ ಸಂಬಂಧಪಟ್ಟವರು ಮಾತ್ರ. ರಾಷ್ಟ್ರೀಯ ಪ್ರಶಸ್ತಿಗೆ ಸ್ಪರ್ಧಿಸಿದ್ದ ಒಟ್ಟು ಚಿತ್ರಗಳ ಪೈಕಿ ಮೂರು ಚಿತ್ರಗಳನ್ನು ಹೊರತುಪಡಿಸಿದರೆ (`ಎದೆಗಾರಿಕೆ', `ಸಂಗೊಳ್ಳಿರಾಯಣ್ಣ', `ಅಟ್ಟಹಾಸ') ಉಳಿದ ಚಿತ್ರಗಳು ಬಿಡುಗಡೆಯಾಗದ ಚಿತ್ರಗಳು.

ಹೀಗಾಗಿ ಉಳಿದ ಚಿತ್ರಗಳ ಬಗ್ಗೆ ಜನಾಭಿಪ್ರಾಯ ಮೂಡುವುದೂ ಅಸಾಧ್ಯ. ಈ ಚಿತ್ರಗಳ ಬಗ್ಗೆ ತೀರ್ಪುಗಾರರಲ್ಲೇ ಭಿನ್ನಾಭಿಪ್ರಾಯವಿದೆ. ಕನ್ನಡ ಚಿತ್ರಗಳ ಗುಣಮಟ್ಟ ತೃಪ್ತಿಕರವಾಗಿರಲಿಲ್ಲ ಎಂದು ಒಬ್ಬ ತೀರ್ಪುಗಾರರು ಅಭಿಪ್ರಾಯಪಟ್ಟರೆ, ಬೆಂಗಳೂರಿನಿಂದ ತೆರಳಿದ್ದ ತೀರ್ಪುಗಾರರ ಪ್ರಕಾರ ಆರು ಚಿತ್ರಗಳು ಪ್ರಶಸ್ತಿ ಗಳಿಸಲು ಅರ್ಹವಾಗಿದ್ದವು.

ರಾಷ್ಟ್ರೀಯ ಪ್ರಶಸ್ತಿಗಳೆಲ್ಲಾ ಯಾವುದೇ ಲಾಬಿ ಇಲ್ಲದೆ, ರಾಜಕೀಯವಿಲ್ಲದೆ ಆಯ್ಕೆಯಾಗುತ್ತವೆ ಎಂದು ಹೇಳುವ ಎದೆಗಾರಿಕೆ ಯಾರಿಗೂ ಇಲ್ಲ. ಇದುವರೆಗಿನ ಪ್ರಶಸ್ತಿ ಇತಿಹಾಸವನ್ನು ತಿರುವಿಹಾಕಿದರೆ, ಬಹುತೇಕ ರಾಷ್ಟ್ರೀಯ ಪ್ರಶಸ್ತಿಗಳು ಕಳಂಕದ ಮಸಿಯನ್ನು ಬಳಿದುಕೊಂಡು ಕೂತಿವೆ. `ದಬಂಗ್' ಅಂತಹ ಚಿತ್ರಕ್ಕೆ ಅತ್ಯುತ್ತಮ ಜನಪ್ರಿಯ ಚಿತ್ರಪ್ರಶಸ್ತಿ ಕೊಡುವ ತೀರ್ಪುಗಾರರೂ ಇದ್ದಾರೆ.

ಬಂಗಾಳಿ ಚಿತ್ರ `ಬರ್ವಾರಿ' (2000)ಯ ಅಭಿನಯಕ್ಕಾಗಿ ಕಿರಣ್‌ಖೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಆದರೆ ಈ ಚಿತ್ರದಲ್ಲಿ ಅವರಿಗೆ ದನಿ ಕೊಟ್ಟವರು ಬಂಗಾಳಿ ನಟಿ ರೀಟಾ ಕೊಯಿರಾಲ! ಭಾರೀ ವಾಗ್ವಾದ, ವಿವಾದವಾದರೂ ಪ್ರತಿಷ್ಠಿತರ ಬೆಂಬಲದಿಂದ ಖೇರ್ ಈ ಪ್ರಶಸ್ತಿ ಪಡೆದರು. `ದಮನ್' ಮತ್ತು `ಪುಕಾರ್' (2001) ಚಿತ್ರಗಳ ಅಭಿನಯಕ್ಕಾಗಿ ಅನಿಲ್‌ಕಪೂರ್ ಮತ್ತು ರವೀನಾ ಟಂಡನ್ ಅವರಿಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪ್ರಕಟಿಸಿದಾಗ ತೀರ್ಪುಗಾರರಲ್ಲೇ ತೀವ್ರ ಭಿನ್ನಮತ ಉಂಟಾಗಿ ಮೂವರು ತೀರ್ಪುಗಾರರು ಪ್ರತಿಭಟಿಸಿ ರಾಜೀನಾಮೆ ಸಲ್ಲಿಸಿ ಹೊರನಡೆದರು.

ಆದರೂ ಪ್ರಶಸ್ತಿ ವಿತರಣೆ ಸಮಾರಂಭ ನಿಲ್ಲಲಿಲ್ಲ. ಅಜಯ್ ದೇವಗನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿದಾಗ ಸಮಿತಿಯಲ್ಲಿದ್ದ ಆಡೂರು ಗೋಪಾಲಕೃಷ್ಣನ್ (2003) ಅಸಮಾಧಾನ ವ್ಯಕ್ತಪಡಿಸಿದ್ದರು. ತೀರ್ಪುಗಾರರ ಸಮಿತಿ ಅಧ್ಯಕ್ಷರ ಪಕ್ಷಪಾತ ಎಂದೂ ಆರೋಪಿಸಿದ್ದರು. ಸೈಫ್ ಅಲಿಖಾನ್‌ಗೆ (2005) ಪ್ರಶಸ್ತಿ ನೀಡಿದಾಗ, ಆಗ ಸೆನ್ಸಾರ್ ಮಂಡಳಿ ಅಧ್ಯಕ್ಷೆಯಾಗಿದ್ದ ಶರ್ಮಿಳಾ ಟ್ಯಾಗೋರ್ ಅವರ ಒತ್ತಡವೇ ಇದಕ್ಕೆ ಕಾರಣ ಎಂಬ ಆರೋಪ ಬಂತು.

ರಾಷ್ಟ್ರೀಯ ಪ್ರಶಸ್ತಿಗಳು ಪೂರ್ವ ನಿರ್ಧರಿತವಾಗಿರುತ್ತವೆ ಎಂದು 2005ರಲ್ಲಿ ಶ್ಯಾಮಿಲಿಬ್ಯಾನರ್ಜಿ ದೇವ್ ದೇಹಲಿ ನ್ಯಾಯಾಲಯಕ್ಕೆ ದೂರು ನೀಡಿದರು. `ಬ್ಲ್ಯಾಕ್' ಚಿತ್ರಕ್ಕೆ ಸ್ವರ್ಣಕಮಲ ನೀಡಿದ್ದಕ್ಕೆ ಅವರ ಆಕ್ಷೇಪವಿತ್ತು. ಈ ಚಿತ್ರ 1962ರಲ್ಲಿ ತೆರೆಕಂಡ `ದಿ ಮಿರಾಕಲ್ ವರ್ಕರ್' ಚಿತ್ರದ ಪಡಿನೆಳಲು ಎಂದು ಅವರು ರುಜುವಾತು ಮಾಡಿದ್ದರು. ಪ್ರಶಸ್ತಿ ವಿತರಣೆ ಎರಡು ವರ್ಷ ತಡವಾಯಿತು. ಆನಂತರ ಪ್ರಶಸ್ತಿ ಯಾರಿಗೆ ಹೋಗಬೇಕಿತ್ತೋ ಅವರನ್ನೇ ತಲುಪಿತು.

ಹೀಗೆ ರಾಷ್ಟ್ರೀಯ ಪ್ರಶಸ್ತಿಗಳಿಗೆ ಒಂದು ಇತಿಹಾಸವೇ ಇದೆ. ತೀರ್ಪುಗಾರರ ಸಮಿತಿ ಮೇಲೆ ಒತ್ತಡವಿರುತ್ತದೆ. ಜನಪ್ರಿಯ ನಟರನ್ನು ಅವರು ಎಷ್ಟೇ ಕಳಪೆಯಾಗಿದ್ದರೂ ಪ್ರಶಸ್ತಿಗೆ ಪರಿಗಣಿಸಬೇಕೆಂಬ ವ್ಯಾಪಾರೀ ದೃಷ್ಟಿಯ ಒತ್ತಡವಿರುತ್ತದೆ. ಇವೆಲ್ಲವನ್ನೂ ಮೀರಿ ಒಳ್ಳೆಯ ಚಿತ್ರಗಳನ್ನು ಗುರುತಿಸಿದರೆ ಅದು ಭಾಗ್ಯ.

ಕನ್ನಡಕ್ಕೆ ಅನ್ಯಾಯವಾಗಿದೆ ಎನ್ನುವುದನ್ನು ಹೊರತುಪಡಿಸಿದರೆ, ರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ಆಯ್ಕೆಯಾಗಿರುವ ಚಿತ್ರಗಳ ಕಥಾವಸ್ತು ಗಮನ ಸೆಳೆಯುವಂತಿದೆ. ಮೊದಲ ಮೂರು ಚಿತ್ರಗಳ ಕಥಾವಸ್ತು ವಿಭಿನ್ನ. ಪ್ರಶಸ್ತಿಗೆಂದೇ ಹೊಸೆಯುವ, ಆಯುವ ಕತೆಗಳಿಗಿಂತ ತೀರಾ ವಿಭಿನ್ನವಾದ ಸಮಕಾಲೀನ ಸ್ಪಂದನವಿರುವ ಕತೆಗಳಲ್ಲಿ ನಿರ್ದೇಶಕರ ತುಡಿತವನ್ನು ಕಾಣಬಹುದಿತ್ತು. ಓಟಗಾರನೊಬ್ಬ ಡಕಾಯಿತನಾಗುವ ಕತೆಯಲ್ಲಿ, ಶೋಷಣೆ, ದಬ್ಬಾಳಿಕೆ, ಶ್ರೀಸಾಮಾನ್ಯನ ಅಸಹಾಯಕತೆ ದಟ್ಟೈಸಿತ್ತು.

ವಿಕಿ ಡೋನರ್ ಕತೆಯಲ್ಲಿ ನಗರ ಜೀವನದ ಯಾಂತ್ರಿಕತೆ, ಅದರಿಂದಾಗುವ ಪರಿಣಾಮ ಎದ್ದುಕಾಣುತ್ತಿತ್ತು. `ಭಾರತ್ ಸ್ಟೋರ್ಸ್' ಕೂಡ ಕೇಂದ್ರಸರ್ಕಾರದ ಹೊಸ ನೀತಿಯಿಂದಾಗಿ ಚಿಲ್ಲರೆ ಮಾರಾಟಗಾರರ ಮೇಲಾಗುವ ಆಘಾತವನ್ನು ಹೇಳುತ್ತಿತ್ತು. ಒಟ್ಟಾರೆ ವಸ್ತು ಆಯ್ಕೆ ವಿಷಯದಲ್ಲಿ ರಾಷ್ಟ್ರೀಯ ಚಿಂತನೆಯೊಂದು ಈ ಮಾಧ್ಯಮದ ಮೂಲಕ ಪ್ರವಹಿಸುವಂತೆ ಮಾಡುವ ಸುಳಿವು ಒಟ್ಟಾರೆ ತೀರ್ಪುಗಾರರ ಧೋರಣೆಯಾಗಿರುವುದು ಗೊತ್ತಾಗುವಂತಿತ್ತು.

ಆದರೆ ಪ್ರಾಂತೀಯ ಭಾಷಾ ಚಿತ್ರಗಳ ಆಯ್ಕೆ ವಿಷಯ ಬಂದಾಗ ಮಲತಾಯಿ ಧೋರಣೆ ಅನುಸರಿಸಿರುವುದು ಸ್ಪಷ್ಟವಾಗಿಯೇ ಗೊತ್ತಾಗುತ್ತದೆ. ಭಾರತೀಯ ಚಿತ್ರವೆಂದರೆ ಅದು ಹಿಂದಿ ಇಲ್ಲವೇ ಉತ್ತರಭಾರತದ ಚಿತ್ರಗಳು ಮಾತ್ರ. ದಕ್ಷಿಣ ಭಾರತವೆಂದರೆ ಅದು ತಮಿಳುನಾಡು ಮಾತ್ರ. ಈ ರೀತಿಯ ಒಂದು ಕುರುಡು ತಿಳಿವಳಿಕೆಯಲ್ಲಿ ಪ್ರಶಸ್ತಿ ಸಮಿತಿ ವರ್ತಿಸುವುದರಿಂದ ಕನ್ನಡ ಚಿತ್ರಗಳು ಮೂಲೆಗುಂಪಾಗುತ್ತವೆ.

1964ನೇ ಸಾಲಿನ ಕೇಂದ್ರ ಚಲನಚಿತ್ರ ಪ್ರಶಸ್ತಿ ಪಡೆಯುವಲ್ಲಿ ಎನ್. ಲಕ್ಷ್ಮೀನಾರಾಯಣ್ ನಿರ್ದೇಶನದ `ನಾಂದಿ' ವಿಫಲವಾಯಿತು. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಚಿತ್ರ ಪರಂಪರೆಗೆ ನಾಂದಿಯಾಡಿದ ಈ ಚಿತ್ರ ಕಿವುಡ, ಮೂಗರ ಸಮಸ್ಯೆಯನ್ನು ಚಿತ್ರಿಸಿತ್ತು. 39 ವರ್ಷಗಳ ಹಿಂದೆಯೇ ವಿಭಿನ್ನ ಕತೆಯೊಂದನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸಿದ್ದ ಲಕ್ಷ್ಮೀನಾರಾಯಣ್, ಚಿತ್ರರಂಗದಲ್ಲಿನ ಏಕತಾನತೆಯನ್ನು ಮುರಿಯಲು ಹೊರಟಿದ್ದರು. ಈ ವೇಳೆಗಾಗಲೇ ಲಕ್ಷ್ಮೀನಾರಾಯಣ್, ತಾವು ತಯಾರಿಸಿದ್ದ `ಬ್ಲಿಸ್' ಕಿರುಚಿತ್ರಕ್ಕಾಗಿ ಅಂತರರಾಷ್ಟ್ರೀಯ ಮನ್ನಣೆ ಪಡೆದಿದ್ದರು.

ಬ್ರಿಟಿಷ್ ಫಿಲಂ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಮಾನ್ಯತೆ ಪಡೆದಿದ್ದರು. ಸ್ಯಾನ್‌ಫ್ರಾನ್ಸಿಸ್ಕೊ ಚಲನಚಿತ್ರೋತ್ಸವದಲ್ಲೂ ಅವರ ಕಿರುಚಿತ್ರ ಪ್ರದರ್ಶನಗೊಂಡಿತ್ತು. ಆದರೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿ, `ನಾಂದಿ' ಚಿತ್ರವನ್ನು ಪ್ರಶಸ್ತಿಗೆ ಪರಿಗಣಿಸಲೇ ಇಲ್ಲ. ಇನ್ನೂ ಆಶ್ಚರ್ಯದ ಸಂಗತಿ ಎಂದರೆ, ಈ ಸಮಿತಿಯಲ್ಲಿ ಕರ್ನಾಟಕದ ನಾಲ್ವರು ತೀರ್ಪುಗಾರರಿದ್ದದ್ದು! ಕಣ್ಣಿಗೆ ರಾಚುವಂತಿದ್ದ ಪರಮ ಅನ್ಯಾಯವನ್ನು ಖಂಡಿಸಿ, ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆದವು. ಖಂಡನೆ ವ್ಯಕ್ತವಾಯಿತು.

ಆದರೆ ಪ್ರಾಥಮಿಕ ಸಮಿತಿ ತೀರ್ಮಾನವನ್ನು ಪ್ರಾದೇಶಿಕ ಸಮಿತಿ ಬದಲಿಸಲಾಗದು ಎಂಬ ತೀರ್ಮಾನ ಬಂದಿತು. ಲಕ್ಷ್ಮೀನಾರಾಯಣ್ ಅವರಿಗೆ ಅನ್ಯಾಯವಾಗಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಅನ್ನಿಸುತ್ತಿತ್ತು. ಇನ್ನೊಂದು ಭಾಷೆಯ ಗಣ್ಯರ ಚಿತ್ರಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ `ನಾಂದಿ'ಯನ್ನು ಕಡೆಗಣಿಸಲಾಯಿತು ಎನ್ನುವುದು ಎಲ್ಲರಿಗೂ ತಿಳಿದ ಸತ್ಯವೇ ಆಗಿತ್ತು. 39 ವರ್ಷದ ಹಿಂದೆ ಕನ್ನಡಿಗರೇ ನಾಲ್ವರು ತೀರ್ಪುಗಾರರಿದ್ದೂ ಒಂದು ಉತ್ತಮ ಚಿತ್ರಕ್ಕೆ ಪ್ರಶಸ್ತಿ ಕೊಡಿಸಲಾಗಲಿಲ್ಲ. ಈ ವರ್ಷ ಇದ್ದ ಇಬ್ಬರೇ ತೀರ್ಪುಗಾರರು ಆರೇಳು ಚಿತ್ರಗಳಿಗೆ ಪ್ರಶಸ್ತಿ ಕೊಡಿಸುವುದು ಸಾಧ್ಯವಾಗುವ ಮಾತೇ?

ಎಪ್ಪತ್ತರ ದಶಕದ ಪ್ರಶಸ್ತಿ ನಿಯಮಾವಳಿಗಳನ್ನು ಬದಲಿಸಿ, ಎರಡು ಹಂತದ ಪ್ರಕ್ರಿಯೆಯನ್ನು ಮೂರು ವರ್ಷಗಳ ಹಿಂದೆ ಜಾರಿಗೆ ತರಲಾಯಿತು. ಪ್ರಶಸ್ತಿ ತೀರ್ಪನ್ನು ವಿಕೇಂದ್ರೀಕರಣಗೊಳಿಸುವ ಸಲುವಾಗಿ ಪ್ರಾದೇಶಿಕ ಸಮಿತಿಗಳನ್ನು ರಚಿಸಲಾಯಿತು. ಅಂತಿಮ ಹಂತದ ತೀರ್ಪುಗಾರರ ಸಮಿತಿಗೆ, ಪ್ರಾದೇಶಿಕ ಸಮಿತಿಯಲ್ಲಿ ಯಾವುದಾದರೂ ಒಂದು ಚಿತ್ರಕ್ಕೆ ಅನ್ಯಾಯವಾಗಿದೆ ಎಂದು ಅನ್ನಿಸಿದ್ದರೆ ಅದನ್ನು ಮರುಪರಿಶೀಲನೆಗೆ ತರುವ ಹಕ್ಕು ನೀಡಲಾಗಿದೆ.

ಪ್ರಾದೇಶಿಕ ಸಮಿತಿ, ಕೇವಲ ಪ್ರಾದೇಶಿಕ ಪ್ರಶಸ್ತಿಗೆ ಮಾತ್ರ ಆಯ್ಕೆ ಮಾಡುವುದರಿಂದ ಅವು ರಾಷ್ಟ್ರೀಯ ಪ್ರಶಸ್ತಿಯಿಂದ ದೂರವೇ ಉಳಿಯುವ ಅಪಾಯವೂ ಇದೆ. ಪ್ರಾದೇಶಿಕ ಚಿತ್ರಗಳ ಆಯ್ಕೆಗಾಗಿ ನೋಡುವ ಚಿತ್ರಗಳು ರಾಷ್ಟ್ರಪ್ರಶಸ್ತಿಯ ಪರಿಗಣನೆಗೂ ಏಕೆ ಒಳಪಡಲಾಗುವುದಿಲ್ಲ ಎನ್ನುವ ಪ್ರಶ್ನೆ ಮೂಡುತ್ತದೆ. ಪ್ರಾದೇಶಿಕ ಚಿತ್ರಗಳೂ ರಾಷ್ಟ್ರೀಯ ಪ್ರಶಸ್ತಿಗೆ ಅರ್ಹವಾಗಿರುತ್ತವೆ ಎನ್ನುವುದನ್ನು ಮರೆಯುವಂತಿಲ್ಲ.

ನಿಯಮಾವಳಿಗಳನ್ನು ಬದಲಾಯಿಸಿರುವುದರಿಂದ ಅನನುಕೂಲವೂ ಇದೆ ಎಂಬ ಅಭಿಪ್ರಾಯವೂ ಇದೆ. ಪ್ರಶಸ್ತಿಗಾಗಿ ನೂರು ಚಿತ್ರಗಳು ಪ್ರವೇಶ ಪಡೆದಿದ್ದರೆ, ಎಲ್ಲ ನೂರು ಚಿತ್ರಗಳನ್ನು, ಎಲ್ಲ ತೀರ್ಪುಗಾರರೂ ನೋಡಿರುವುದಿಲ್ಲ. ಹೀಗಾಗಿ ತೀರ್ಪುಗಾರನೊಬ್ಬ ಅತ್ಯುತ್ತಮವಾದ ಚಿತ್ರವನ್ನು ವೀಕ್ಷಣೆ ಮಾಡದೆಯೇ ಪ್ರಶಸ್ತಿ ಪಟ್ಟಿಗೆ ಅನುಮೋದನೆ ನೀಡಿದಂತಾಗುತ್ತದೆ. ಈ ದೃಷ್ಟಿಯಿಂದ ರಾಜ್ಯಪ್ರಶಸ್ತಿ ಸಮಿತಿಗಳ ಕ್ರಮವೇ ಸರಿ ಎನಿಸುತ್ತದೆ.

ಪ್ರತೀಬಾರಿ ಪ್ರಶಸ್ತಿ ಪ್ರಕಟವಾದಾಗ ಬಿಡುಗಡೆಯಾದ ಚಿತ್ರ, ಬಿಡುಗಡೆಯಾಗದ ಚಿತ್ರ ಎನ್ನುವ ವಿವಾದವೂ ಇರುತ್ತದೆ. ಜನರಿಗೆ ನೋಡಲು ಅವಕಾಶವೇ ಆಗದ ಚಿತ್ರಗಳಿಗೆ ಪ್ರಶಸ್ತಿ ಏಕೆ? ಪ್ರಶಸ್ತಿ ಪಡೆದ ಚಿತ್ರಗಳನ್ನು ನೋಡಬೇಕೆಂಬ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇರುತ್ತದೆ. ಆದರೆ, ಬಹುತೇಕ ಪ್ರಶಸ್ತಿ ಪುರಸ್ಕೃತ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗುವುದೇ ಇಲ್ಲ. ಸಿನಿಮಾದ ಮೂಲ ಉದ್ದೇಶವನ್ನೇ ಪೂರೈಸದ ಇಂಥ ಚಿತ್ರಗಳು ಪ್ರಶಸ್ತಿಗಾಗಿಯೇ ತಯಾರಾಗಿ ಪ್ರಶಸ್ತಿ ಪಡೆಯುವುದರೊಂದಿಗೆ ಮುಂದಿನ ದಾರಿಗೆ ಸರಿದು ಹೋಗುತ್ತವೆ. ಹೀಗಾಗಿ, ತೆರೆಕಂಡ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ನೀಡಬೇಕೆಂಬ ವಾದ ಒಂದು ಗುಂಪಿನದಾಗಿದೆ.

ಎನ್. ಲಕ್ಷ್ಮೀನಾರಾಯಣ್ ಅವರ ನಿರ್ದೇಶನದ `ಮುಕ್ತಿ' ಚಿತ್ರಕ್ಕೆ 1969-70ನೇ ಸಾಲಿನ ರಾಜ್ಯದ ಅತ್ಯುತ್ತಮ ದ್ವಿತೀಯ ಚಿತ್ರ ಪ್ರಶಸ್ತಿ ದೊರಕಿತು. ಬಿಡುಗಡೆಯೇ ಆಗದಿದ್ದ ಈ ಚಿತ್ರ ಪ್ರಶಸ್ತಿಗೆ ಅರ್ಹವಾದದ್ದಾದರೂ ಹೇಗೆ ಎನ್ನುವ ಪ್ರಶ್ನೆ ಆಗ ಸಾಕಷ್ಟು ವಿವಾದಕ್ಕೆ ಒಳಗಾಯಿತು. ಇಂದಿಗೂ ಈ ಪರಿಸ್ಥಿತಿ ಬದಲಾಗಿಲ್ಲ. ಹೀಗಾಗಿ, ಸ್ವರ್ಣಕಮಲ ಪ್ರಶಸ್ತಿ ಪಡೆದವರು ಮುಂದಿನ ಮೂರು ವರ್ಷ ರಾಷ್ಟ್ರೀಯ ಪ್ರಶಸ್ತಿಗೆ ಚಿತ್ರ ತರುವಂತಿಲ್ಲ.

ರಾಜ್ಯದಲ್ಲಿ ಶ್ರೇಷ್ಠ ಪ್ರಶಸ್ತಿ ಪಡೆದ, ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರನಾದ ನಿರ್ದೇಶಕರೂ ಮುಂದಿನ ಮೂರು ವರ್ಷ ಚಿತ್ರವನ್ನು ಸ್ಪರ್ಧೆಗೆ ತರುವಂತಿಲ್ಲ ಎನ್ನುವ ನಿಯಮವನ್ನು ಜಾರಿಗೆ ತರಬೇಕಾಗಿರುವುದು ಇಂದಿನ ಸನ್ನಿವೇಶದಲ್ಲಿ ಅತಿ ಅವಶ್ಯವೆನಿಸುತ್ತದೆ. ಆಗ ಪ್ರತೀ ವರ್ಷ ಯುವ ನಿರ್ದೇಶಕರಿಗೆ ಪ್ರಶಸ್ತಿ ದೊರೆತು ಹೊಸ ಸಿನಿಪೀಳಿಗೆ ಅರಳುತ್ತದೆ.

ಇಲ್ಲದಿದ್ದರೆ, ಪರ್ಯಾಯ ಚಿತ್ರ ತಯಾರಿಕೆ ಎನ್ನುವುದು ಏಕವ್ಯಕ್ತಿ ಕಸುಬಾಗುತ್ತದೆ. ಪ್ರಶಸ್ತಿಗಳನ್ನು ಪಡೆದವರು ಆಯಾ ಭಾಷೆಯ ಚಿತ್ರರಂಗದ ಮೌಲ್ಯವೃದ್ಧಿ ಮಾಡುವ ಕೆಲಸದಲ್ಲಿ ತೊಡಗುವಂತೆ ಮಾಡಲು ಈ ಕ್ರಮ ಅನಿವಾರ್ಯವಾಗಬಹುದು. ಇಲ್ಲದಿದ್ದರೆ ಪ್ರಶಸ್ತಿ ಪಡೆದವರಿಗೂ, ಮುಖ್ಯವಾಹಿನಿ ಚಿತ್ರರಂಗಕ್ಕೂ ಸಂಬಂಧವೇ ಇಲ್ಲದಂತಾಗುತ್ತದೆ. ಜೀವನಪೂರ್ತಿ ಪ್ರಶಸ್ತಿಗಾಗಿಯೇ ಚಿತ್ರಗಳನ್ನು ತಯಾರಿಸುತ್ತಾ ಕಾಲ ಕಳೆದುಬಿಟ್ಟರೆ ಚಿತ್ರರಂಗದ ಪರಿವರ್ತನೆಗೆ ಅವರ ಕೊಡುಗೆಯಾದರೂ ಏನಿರುತ್ತದೆ?  ್ಢ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT