ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆಯಾಗುತ್ತಿರುವ ಜೀವ ಸಂಕುಲ- ಸಸ್ಯ ಸಂಕುಲ

Last Updated 21 ಜೂನ್ 2014, 19:30 IST
ಅಕ್ಷರ ಗಾತ್ರ

ಅಲುಗಾಡುತ್ತಿರುವ ಹಸಿರೆಲೆ ಸಿಂಹಾಸನದ ಮೇಲೆ ಒಣಜಂಬ­ದಿಂದ ರಾಜಠೀವಿಯಲ್ಲಿ ಕುಳಿತ ಈ ಬಣ್ಣದ ಚಿಟ್ಟೆಯ ಧಿಮಾಕು ನೋಡಿ. ಯಾವುದೋ ಅಲೆಯಲ್ಲಿ ಗೆದ್ದು ಬಂದ ಎಂಪಿ­ಯಂತೆ, ಆಕಸ್ಮಿಕವಾಗಿ ಒಂದೇ ಒಂದು ಸಿನಿಮಾ ಕ್ಲಿಕ್ಕಾಗಿ ಬೀಗುವ ಸಿನಿಮಾ ತಾರೆಯಂತೆ ಕಾಣುತ್ತಿದೆ.

ಈ ಬಿಂಕಬಿನ್ನಾಣ ಕಂಡೇ ಚಿಟ್ಟೆಗೆ ಪರ್ಯಾಯ ಹೆಸರು ಕ್ಷಣಿಕ ಎಂಬಂತಾಯಿತೇನೋ. ಇದು ನನ್ನ ಸಾಧಾ­ರಣ ಕ್ಯಾಮೆರಾದಲ್ಲಿ, ಒಂದು ಅಸಾಧಾರಣ ಲೊಕೇಶನ್‌ನಲ್ಲಿ ಸೆರೆ­ಹಿಡಿದ ಚಿತ್ರ. ನೋಡುತ್ತಿದ್ದರೆ ನೋಡುತ್ತಿರಲೇಬೇಕೆನಿಸಿ ಫ್ಯಾಮಿಲಿ ಆಲ್ಬಂಗೆ ಸೇರಿಕೊಂಡುಬಿಟ್ಟಿದೆ. ಈಗ ಸದ್ಯಕ್ಕೆ ನಮ್ಮ ಫ್ಯಾಮಿಲಿ ಆಲ್ಬಮ್‌­ನಲ್ಲಿ ನ್ಯೂಜಿಲ್ಯಾಂಡ್‌ನ ಕಿವಿ, ಆಸ್ಟ್ರೇಲಿಯಾದ ಕಾಂಗರೂ, ಹಿಮಾ­ಲಯದ ಯಾಕ್, ಆಫ್ರಿಕಾದ ಜಿರಾಫೆ, ಅಲಾಸ್ಕಾದ ಬಿಳಿಕರಡಿ ಮತ್ತು ಹೆಂಡತಿ, ಮಕ್ಕಳು ಇದ್ದಾರೆ.

ಕೆನಡಾದ ಟೊರಾಂಟೋ ನಗ­ರದ ಸಮೀಪ ಒಂದು ಬೃಹತ್ ಮೃಗಾಲಯವಿದೆ. ವಿಶೇಷವೆಂದರೆ ಈ ಶೀತ­ವಲಯದ ಮೃಗಾಲಯದಲ್ಲಿ ಉಷ್ಣವಲಯ ಮತ್ತು ಸಮ­ಶೀತೋಷ್ಣವಲಯದ ಅನೇಕ ಪ್ರಾಣಿಗಳನ್ನು ತಂದು ಸಾಕಿ ಬೆಳೆಸಿದ್ದಾರೆ. ಆನೆ, ಹುಲಿ, ಸಿಂಹಗಳು ಈ ಚಳಿಯನ್ನು ವುಲ್ಲನ್ ಸ್ಪೆಟರ್ರು ಹಾಕಿ­ಕೊಳ್ಳದೆ ಹೇಗೆ ನಿಭಾಯಿಸುತ್ತವೆ ಎಂಬುದೇ ನನಗೆ ಕುತೂಹಲಕರ ಸಂಗತಿ. ಅದೂ ವಿಶಾಲವಾದ ಬಯಲಿನಲ್ಲಿ. ಪ್ರಯೋಗಶೀಲ ಮನುಷ್ಯ­ನಿಂದ ಈ ಧರೆಯ ಮೆಲೆ ಯಾರು ತಾನೆ, ಏನು ತಾನೆ ಸಹಜ­ಸ್ಥಿತಿಯಲ್ಲಿ ಉಳಿಯಬಲ್ಲುದು ?

ಅಮೆರಿಕಾದಲ್ಲಿ ಕೆಲವು ಪ್ರಜಾಪ್ರಭುತ್ವವಾದೀ ನಡವಳಿಕೆಗಳಿವೆ. ಅದು, ಜಗತ್ತು ನಿರ್ಲಕ್ಷ್ಯದಿಂದ ಕಾಣುವ, ನಿಕೃಷ್ಟ ಜೀವಿಗಳನ್ನು ಗಮ­ನಿಸಿ ಪೊರೆಯುವ ಗುಣ. ಅವರು ಅದನ್ನೂ ಲಾಭದಾಯಕವಾಗಿ ಮಾಡಿ­­ಕೊಳ್ಳುವ ವ್ಯವಹಾರಕುಶಲಿಗಳೂ ಹೌದು. ದೊಡ್ಡ ಪ್ರಾಣಿ­ಗಳಿಗೆ ದೊಡ್ಡ ಮೃಗಾಲಯಗಳಿರುವಂತೆ, ಚಿಟ್ಟೆಗಳಿಗೂ ಸುಂದರ ಕೈತೋಟ ಮಾಡಿ ಸಾಕಿದ್ದಾರೆ.

ಈ ತೋಟ ಚೇತೋಹಾರಿಯಾಗಿದೆ. ಸಿಂಬಳ ಸುರಿಸುವ ಮಕ್ಕಳ ಅಂಗನವಾಡಿ ಶಾಲೆಗೆ ಹೋಗಿ ಬಂದಷ್ಟು ಮುದ ನೀಡುತ್ತದೆ. ಮಿಸ್ಸೌರಿ ರಾಜ್ಯದ ಸೇಂಟ್‌ಲೂಯಿಸ್ ನಗರ­ದಲ್ಲಿ­ರುವ ಬಟರ್‌ಫ್ಲೈ ಹೌಸ್, ನನ್ನ ಮನೋಭಿತ್ತಿಯಲ್ಲಿ ಹೃದಯಂಗಮ ಮುದ್ರೆ ಒತ್ತಿದೆ. ಮಿಸಿಸಿಪ್ಪಿ ನದಿ ದಂಡೆಯಲ್ಲಿರುವ ಈ ಚಿಟ್ಟೆ ಮನೆ ಚಿತ್ತಾಕರ್ಷಕ. ಸೋಫಿಯಾ ಎಂಬ ಮಹಿಳೆಯ ಪರಿಕ­ಲ್ಪ­ನೆಯ ಫಲವೇ ಈ ಚಿಟ್ಟೆ ಮನೆ. ಇಲ್ಲಿ ಸಾವಿರಕ್ಕೂ ಹೆಚ್ಚು ಪ್ರಭೇದ­ಗಳನ್ನು ಸಂಗ್ರಹಿಸಲಾಗಿದೆ.

ವರ್ಣಮಯ ರೆಕ್ಕೆಗಳನ್ನು ಫ್ಯಾಷನ್ ಶೋನ ತರುಣಿಯರಂತೆ ತೋರುತ್ತಾ, ಹೂವಿನಿಂದ ಹೂವಿಗೆ ಹಾರುತ್ತಾ, ಅವರು ಸ್ಟ್ರಾನಲ್ಲಿ ಸ್ಟೈಲ್‌ಆಗಿ ಸಾಫ್ಟ್ ಡ್ರಿಂಕ್ ಕುಡಿ­ಯು­ವಂತೆ ಇವೂ ತಮ್ಮ ಬಾಯಲ್ಲಿನ ಕೊಳವೆಯಿಂದ ಹೂಗಳ ಮಕರಂದ­ವನ್ನು ಹೀರುತ್ತಾ, ಅನುಮತಿ ಇಲ್ಲದೆ ನೋಡುಗರ ತಲೆಯ ಮೇಲೆ, ಭುಜದ ಮೇಲೆ ಎಲ್ಲೆಂದರಲ್ಲಿ ಕೂರುತ್ತಾ, ಹಿಡಿಯಹೋದರೆ ಸಿಗದೆ ಹಾರುತ್ತಾ, ತಮ್ಮೊಳಗೆ ಮುಸಿಮುಸಿ ನಗುತ್ತಾ ಹಾಯಾಗಿರುವ ಈ ಚಿಟ್ಟೆ ಜಗತ್ತನ್ನು ನೋಡುವುದೇ ಚೆಂದ. ಹೀಗೆ ಚೆಲುವಾಗಿ ಕೋಮ­ಲ­ವಾ­ಗಿರುವ ಕಾರಣದಿಂದಲೇ ಚಿಟ್ಟೆಗಳಿಗೆ ಊರ ತುಂಬಾ ಶತ್ರುಗಳು.

ಅತ್ಯಾಚಾರ ಮತ್ತು ಕೊಲೆಗೆ ಈಡಾಗುವ ಸುಂದರಿಯರಂತೆ ಈ ಪಾಪದ ಚಿಟ್ಟೆಗಳನ್ನು ಹಕ್ಕಿಗಳು, ದೊಡ್ಡ ಇರುವೆ-ನೊಣಗಳು, ಇಲಿ­ಗಳು, ಹಲ್ಲಿಗಳು, ಹಾವುಗಳು, ಕೋತಿಗಳು ತಿಂದು ತೇಗುತ್ತವೆ. ರೂಪಾಂತ­ರವೂ ಸೇರಿ ಹೆಚ್ಚೆಂದರೆ ಒಂದು ವರ್ಷದವರೆಗೆ ಬದುಕುವ ಕೆಲವು ಚಿಟ್ಟೆಗಳಿವೆ. ಚಿಟ್ಟೆಯಾಗಿ ರೂಪಾಂತರಗೊಂಡ ನಂತರ ಬರಿಯ ಇಪ್ಪತ್ತು ದಿನ ಬದುಕುವಂಥವೂ ಇವೆ. ಪ್ರಪಂಚದಾದ್ಯಂತ ಹದಿ­ನೈದು ಸಾವಿರ ಚಿಟ್ಟೆ ಪ್ರಭೇದಗಳಿವೆಯಂತೆ. ಆಫ್ರಿಕಾದ ಕಾಡುಗಳಲ್ಲಿ ಹತ್ತಿಂಚು ಅಗಲದ ದೈತ್ಯ­ವಾದ ಕೆಂಪು ಚಿಟ್ಟೆಗಳು, ಅಮೆ­ಜಾನ್ ಕಾಡುಗಳಲ್ಲಿ ಬ್ಲೂ ಮಾರ್ಫೊ ಎಂಬ ಪಾರದರ್ಶಕ ರೆಕ್ಕೆಯ ನೀಲಿ­ಬಣ್ಣದ ದೈತ್ಯ ಚಿಟ್ಟೆಗಳೂ ಇವೆ. ಚಿಟ್ಟೆಗಳೂ ವಲಸೆ ಹೋಗುತ್ತವೆ. ಕೆಲವು ವಿಷಕಾರಿ­ಗಳೂ ಹೌದು. ವಿಜ್ಞಾನದ ವಿದ್ಯಾರ್ಥಿಯಲ್ಲದ ನನಗೆ ಇಂಥ­ದ್ದರ ಬಗ್ಗೆ ಅಪಾರ ಕುತೂಹಲ.

ಆ ಚಿಟ್ಟೆಮನೆಯಲ್ಲಿ ಹಿರಿಯರ, ಕಿರಿ­ಯರ ಸಡಗರ ಅನುರಣಿಸುತ್ತದೆ. ಉಪನ್ಯಾಸಗಳು, ಪುಷ್ಪ ಪ್ರದ­ರ್ಶ­ನ­­ಗಳು, ಶಿಬಿರಗಳು, ಸಂಶೋಧನೆಗಳು, ಕಿರುಹೊತ್ತಗೆಗಳು, ಚಲನ­ಚಿತ್ರ ಪ್ರದರ್ಶನಗಳು, ವಿವಿಧ ಭಾಷೆಯ ಶ್ರವ್ಯವಿವರಣೆಗಳು ಈ ಸಡ­ಗರದ ಭಾಗವಾಗಿ ಸುರಮ್ಯ ಲೋಕದಿಂದ, ಜೀವ ವಿಜ್ಞಾನದ ಗ್ರಹಿಕೆ­ಯ ಸ್ತರಕ್ಕೆ ಕರೆದೊಯ್ಯುತ್ತವೆ. ಚಿಟ್ಟೆಗಳು ಮಾತ್ರ, ಪ್ರವಾಸಿಗರ ಬಗ್ಗೆ ತಲೆ­ಕೆಡಿಸಿಕೊಳ್ಳದೆ ತಾವುಂಟು ಮೂರು ಲೋಕ ಉಂಟು ಎಂಬಂತೆ ನರ್ತಿ­ಸುತ್ತಾ, ಬಂಡುಣ್ಣುತ್ತಾ, ಹಾರುತ್ತಾ ಹಾಯಾಗಿ­ರುತ್ತವೆ. ಫ್ರಾಂಕ್ ಪಪ್ಪರ್ ಎಂಬಾತ ನಿರ್ದೇಶಿಸಿದ್ದ, ಚಿಟ್ಟೆಗಳನ್ನು ಕುರಿತ ಅನಿ­ಮೇಶನ್ ಚಿತ್ರವನ್ನು ಇಲ್ಲಿ ನೋಡಿದೆ. ಚಿಟ್ಟೆಯ ಹುಟ್ಟು, ರೂಪಾಂ­ತರ, ವಿಕಾಸ, ಮೊಟ್ಟೆ ಇಟ್ಟ ಮೇಲೆ, ಈ ಜಗ­ತ್ತಿಗೆ ಬಂದ ತನ್ನ ಉದ್ದೇಶ ಮುಗಿ­ಯಿತು ಎಂಬಂತೆ ಬಂದಷ್ಟೇ ಸರಳ­ವಾಗಿ ನಿರ್ಗಮಿಸುವ ಚಿಟ್ಟೆಯ ಜೀವಿತ­ವನ್ನು ಆತ ಚೆನ್ನಾಗಿ ಸೆರೆ ಹಿಡಿದಿದ್ದ.

ಒಂದು ಸಾಲಿನಲ್ಲಿ ಮೆಚ್ಚುವು­ದಾದರೆ Spectacular Spineless Species! ದೈತ್ಯ ಆನೆ, ಸಿಂಹ, ಹುಲಿಗಳನ್ನು ಕಂಡಾಗ ಆಗುವ ಭವ್ಯತೆಯೇ ಬೇರೆ. ಆದರೆ ಚಿಟ್ಟೆಯಂಥ ಆಕರ್ಷಕ ಅಲ್ಪಾಯು­ಗಳನ್ನು ಕಂಡಾಗ ಆಗುವ ಅನು­ಭೂತಿಯೇ ಬೇರೆ. ಚಿಟ್ಟೆ­ಯನ್ನು ಅಲ್ಪಾಯು ಅನ್ನುವ ನಾವೂ ಅಲ್ಪಾಯು­ಗಳೇ. ಆಯುಷ್ಯದ ಮಾನದಂಡ ಸಾಪೇಕ್ಷವಾದದ್ದು. ಆಸೆ­ಯಿಂದ ದುರಾಸೆ­ಯತ್ತ ನಾವು ಹಾರಿದರೆ, ಅದು ಅಮೃತವನ್ನು ಹೀರಲು ಹೂವಿಂದ ಹೂವಿಗೆ ಹಾರುತ್ತದೆ. ಮನುಷ್ಯನ ನೂರು ವರ್ಷದ ಸಂಭ್ರಮವನ್ನು ಚಿಟ್ಟೆ ಮೂರು ಗಳಿಗೆಯಲ್ಲಿ ಆಚರಿಸಿ ವಿದಾಯ ಹೇಳುತ್ತದೆ.

ಚಿಟ್ಟೆ ಎದುರು ಕವಿಯಾಗಬಹುದು, ವಿಜ್ಞಾನಿಯಾಗಬಹುದು, ತತ್ತ್ವ­ಜ್ಞಾನಿಯೂ ಆಗಬಹುದು. ಚಿಟ್ಟೆಯನ್ನು ಮುಟ್ಟದ ಕವಿ, ಜಗತ್ತಿನ ಯಾವುದೇ ಭಾಷೆಯಲ್ಲಿ ಇರಲಿಕ್ಕಿಲ್ಲ ಅನಿಸುತ್ತದೆ. ಕೈಕೊಟ್ಟ ತನ್ನ ಪ್ರಿಯ­ತಮೆ­ಯರನ್ನು ಚಿಟ್ಟೆಗೆ ಹೋಲಿಸಿದವರೆಷ್ಟೊಂದು ಜನ ! ಕೆಲವು ಕವಿ­ಗಳ ಮೇಲೆ, ಚಿಟ್ಟೆಗಳು ಮಾನನಷ್ಟ ಹೂಡುವಷ್ಟರ ಮಟ್ಟಿಗೆ, ಚಿಟ್ಟೆ ದುರ್ಬಳಕೆ­ಯಾಗಿದೆ. ಪ್ರತಿಭಾಶಾಲಿ ಕವಿಗಳು ಒಂದು ಅದ್ಭುತ ರೂಪಕವಾಗಿಯೂ ಬಳಸಿದ್ದಾರೆ. ಚಿಟ್ಟೆ ಎಂದರೆ ಕ್ರಮಿಸಲಾಗದ ದಾರಿ, ಸೇರಲಾಗದ ಊರು, ದಕ್ಕಲಾರದ ಸಂಬಂಧ, ಹಿಡಿದಿ­ಡಲಾ­ಗದ ಕೀರ್ತಿ, ಎಟುಕಲಾಗದ ಆದರ್ಶ, ನಂಬಲಾಗದ ಕನಸು, ನೆನಪಿಡ­ಲಾ­ಗದ ಹೊಳಹು ಮತ್ತು ತಿಳಿಯಲಾಗದ ಬದುಕು. ನಶ್ವರತೆಯ ಸಂಕೇತವಾಗಿಯೇ ಹೆಚ್ಚು ಬಳಸಲಾಗಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಕುವೆಂಪು ಅಪ್ಪಳಿಸಿದಗ್ನಿಗಾ ಮಂಥರೆಯ ಮೂರ್ತಿ ಹಾ ಸುಟ್ಟುದೋ ಚಿಟ್ಟೆ ಸೀವಂತೆ ಎನ್ನುತ್ತಾರೆ. ತಾನು ರಾಮನಿಗೆ ಅನ್ಯಾಯ ಮಾಡಿದೆ ಎಂದು ಪರಿ­ತಪಿಸುತ್ತಾ ಮಂಥರೆ, ಅವನನ್ನು ಹುಡುಕಿ ಕಾಡಿಗೆ ಬರುತ್ತಾಳೆ. ಓ ನನ್ನ ಭರತನಣ್ಣಯ್ಯ ! ಓ ರಾಮಯ್ಯ ! ದಮ್ಮಯ್ಯ ! ಹೇಳೆಲ್ಲಿರು­ವೆ­ಯಯ್ಯ ? ಎಂದು ರಾಮದರ್ಶನಕ್ಕೆ ಮೊರೆ ಇಡುತ್ತಾ ಬರುವಾಗ ಕಾಡಿಗೆ ಬೆಂಕಿ ಬಿದ್ದು, ಖಗಮೃಗದ ಬನದಸೊಗದ ಜೀವಗಳನ್ನು ಕೊಲ್ಲುತ್ತ, ತನ್ನ ಮಹಾಜಿಹ್ವೆಯನ್ನು ಚಾಚುತ್ತಾ ಮುಂದುವರಿದು ಆ ದಾವಾಗ್ನಿ­ಯಲ್ಲಿ ಮಂಥರೆ ಚಿಟ್ಟೆಯಂತೆ ಸುಟ್ಟುಹೋಗುತ್ತಾಳೆ. ಒಳಗೆ ಪಶ್ಚಾ­ತ್ತಾಪದ ಬೆಂಕಿ. ಹೊರಗೆ ಕಾಡಿನ ಬೆಂಕಿ. ಪಶ್ಚಾತ್ತಾಪದಿಂದ ಹೀಗೆ ಒಳಹೊರಗೆ ದಗ್ಧಳಾಗುವ ಪಾತ್ರಕ್ಕೆ ಚಿಟ್ಟೆಯನ್ನು ಪ್ರತೀಕವಾಗಿ ಬಳಸಿ­ರುವುದು ವಿಶಿಷ್ಟವಾಗಿದೆ. ಪುನೀತಳಾದ ಮಂಥರೆ, ಕವಿಯ ಕಣ್ಣಿಗೆ ದೇವಿಮಂಥರೆಯಂತೆ ಕಾಣಿಸುತ್ತಾಳೆ.

ನನ್ನ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದಲ್ಲಿ ರೈತನಾಯಕ ಹೂವಯ್ಯನು ಚಿಟ್ಟೆ ಹಿಡಿಯುವ ವಿಫಲ ಯತ್ನ ನಡೆಸುತ್ತಾನೆ. ಚಿಟ್ಟೆ ಬೇಕೆನ್ನು­ವುದು ಹೆಂಡತಿಯ ಬೇಡಿಕೆ. ಅದು ಸಿಕ್ಕಿತು ಅನ್ನುವಷ್ಟರಲ್ಲಿ ತಪ್ಪಿಸಿ­ಕೊಳ್ಳುತ್ತದೆ. ಚಿಟ್ಟೆ ನಿಜಕ್ಕೂ ಸಿಕ್ಕಿದಾಗ ಹೆಂಡತಿ ತೀರಿಕೊಂಡಿ­ರು­ತ್ತಾಳೆ. ಇಲ್ಲಿ ಚಿಟ್ಟೆಯನ್ನು ಎಂದೂ ಈಡೇರದ ರೈತ ಸಮುದಾಯದ ಕನಸು­ಗಳ ಪ್ರತೀಕವಾಗಿ ತಂದದ್ದು.

ವಿಮರ್ಶಕ ಮಿತ್ರರು ನೀವು ನಿಜ­ವಾದ ಚಿಟ್ಟೆ ಬಳಸಬೇಕಿತ್ತು. ಗ್ರಾಫಿಕ್ಸ್ ಚಿಟ್ಟೆ ಬಳಸಬಾರದಾಗಿತ್ತು ಎಂದರು. ಅವರ ಅನಿಸಿಕೆ ಸರಿಯೆ. ಆದರೆ ಚಿತ್ರೀಕರಣದಲ್ಲಿ ಚಿಟ್ಟೆಗ­ಳನ್ನು ಬಳಸುವುದು ಕಷ್ಟ. ಅವರಿಗೆ ತಾಂತ್ರಿಕ ತೊಂದರೆಗಳನ್ನು ನಿವೇದಿ­ಸಿದ್ದೆ: ಹಾಗಲ್ಲ ದೊರೆ. ಚಿಟ್ಟೆ ಅಲ್ಪಾಯು. ಪಳಗಿಸೋಕೆ ಆಗಲ್ಲ. ಪಳಗಿಸು­ವವರು ಎಲ್ಲಿದ್ದಾರೋ ಗೊತ್ತಿಲ್ಲ. ತರಲೆ ಮುಂಡೇದು, ಹೇಳಿದ ಜಾಗದಲ್ಲಿ ಕೂರಲ್ಲ. ಅದು ಕೂತ ಕಡೆಗೆ ಹೋಗಿ ಕ್ಯಾಮೆರಾ ಇಟ್ಟರೆ ಶಾಟ್ ತೆಗೆಯುವ ಮುನ್ನವೇ ಹಾರಿ ಹೋಗುತ್ತದೆ. ಕಷ್ಟಪಟ್ಟು ಶಾಟ್ ತೆಗೆದರೂ ಸೆನ್ಸಾರ್ ಮಂಡಳಿ ಮತ್ತು ಪ್ರಾಣಿ ಸುರಕ್ಷತಾ ಮಂಡಳಿ ಸ್ಪಷ್ಟನೆ ಕೇಳುತ್ತವೆ.

ಚಿಟ್ಟೆ ಚಿತ್ರೀಕರಣಕ್ಕೆ ಮುಂಚೆ ಮತ್ತು ಅನಂತ­ರವೂ ಆರೋಗ್ಯವಾಗಿತ್ತೆ ? ಹಾಗೆಂದು ಚಿಟ್ಟೆ ಡಾಕ್ಟರಿಂದ ಸರ್ಟಿಫಿ­ಕೇಟ್ ತನ್ನಿ ಎನ್ನುತ್ತಾರೆ. ಚಿಟ್ಟೆ ಡಾಕ್ಟರು ಎಲ್ಲಿದ್ದಾರೋ ತಿಳಿ­ಯದು. ಇಷ್ಟೆಲ್ಲ ಆಗುವ ವೇಳೆಗೆ ನಿಜವಾದ ಚಿಟ್ಟೆ ಕೂಡಾ ತೀರಿಕೊಂಡಿ­ರುತ್ತದೆ... ವಿಮರ್ಶಕ ಮಿತ್ರರು ತಲೆ ಚಿಟ್ಟು ಹಿಡಿದು ಕವಿಗಳೇ ವಾಸಿ, ಏನನ್ನು ಬೇಕಾದರೂ ಕಲ್ಪಿಸಿಕೊಳ್ಳಬಹುದು ಎಂದು ನಿಟ್ಟುಸಿರು­ಬಿಟ್ಟರು. ಒಟ್ಟಿನಲ್ಲಿ ಚಿಟ್ಟೆಗಳಿಗೆ ಇಂಡಿಯಾದ ಸಿನಿಮಾಗಳಲ್ಲಿ ಪಾರ್ಟು ಮಾಡುವ ಯೋಗವಿಲ್ಲ.

ಇತ್ತೀಚಿಗೆ ಪ್ರಕಟಗೊಂಡಿರುವ ಪರಿಸರ ಸಚಿವಾಲಯದ ವರದಿಯ ಪ್ರಕಾರ ಹಿಮಾಲಯ ಗಿರಿಶ್ರೇಣಿ, ಪಶ್ಚಿಮ ಘಟ್ಟ ಶ್ರೇಣಿ, ಈಶಾನ್ಯ ಪ್ರದೇಶಗಳು ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ತೀವ್ರ ಅಪಾಯಕ್ಕೆ ಸಿಲುಕಿವೆ. ಇದು ಸಂಪನ್ಮೂಲ ದುರ್ಬಳಕೆಯ ಪರಿಣಾಮ. ಹೀಗೆ ನಾಶವಾಗಲಿರುವ ಸಸ್ಯ ಪ್ರಭೇದಗಳು ೪೫,೦೦೦ ಮತ್ತು ಪ್ರಾಣಿ ಪ್ರಭೇದಗಳು 91,೦೦೦. ಜೀವವೈವಿಧ್ಯದ ತವರುಮನೆಯಾದ ಭಾರತದಲ್ಲಿ ಈ ಅನಾಹುತ ಸಂಭವಿಸಲಿದೆ.

ಏರುತ್ತಿರುವ ಗಣಿಗಾರಿಕೆ, ಕಾಳ್ಗಿಚ್ಚು, ಕೈಗಾರಿಕೀಕರಣ, ಬೇಟೆ, ನಗರೀಕರಣ, ಹವಾಮಾನ ವೈಪರೀತ್ಯ, ಭೂ ಸವಕಳಿ ಮುಂತಾದ ಕಾರಣಗಳನ್ನು ಪರಿಸರ ಸಚಿವಾಲಯ ಪಟ್ಟಿ ಮಾಡಿದೆ. ವಿಪರ್ಯಾಸವೆಂದರೆ ಇದೇ ಇಲಾಖೆ 41.೮೨ ಲಕ್ಷ ಎಕರೆ ಕಾಡನ್ನು 23,೦೦೦ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಟ್ಟು­ಕೊಡ­ಲಾಗಿದೆ ಎಂದೂ ಒಪ್ಪಿಕೊಳ್ಳುತ್ತದೆ.

ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ. ನಮಗೆ ಅಭಿವೃದ್ಧಿಯೂ ಬೇಕು; ಅರಣ್ಯವೂ ಬೇಕು. ಕೈಗಾರಿಕೆ­ಗಳೂ ಬೇಕು; ಶುದ್ಧ ವಾತಾವರಣವೂ ಬೇಕು. ಮಹಾನಗರಗಳೂ ಬೇಕು; ಪ್ರಕೃತಿಯ ಚೆಲುವಿನ ತಾಣಗಳೂ  ಬೇಕು; ವರ್ಣವೈಭವದ ಹವಳದ ದಿಬ್ಬಗಳಿಗೆ ಹೆಸರಾದ, ಮನುಷ್ಯರ ಹೆಜ್ಜೆಗುರುತುಗಳೇ ಇಲ್ಲದ, ಅಂಡಮಾನ್-ನಿಕೋಬಾರ್‌ನ ಕೆಲವು ದ್ವೀಪಸಮೂಹದಲ್ಲಿ ಆವಾಸ ಸ್ಥಾನಗಳ ನಾಶ ಮತ್ತು ಭೂಸವಕಳಿ­ಯಿಂದ ಸಸ್ಯವೈವಿಧ್ಯ ಮತ್ತು ಪ್ರಾಣಿವೈವಿಧ್ಯಗಳು ವೇಗವಾಗಿ ಕಣ್ಮರೆಯಾಗುತ್ತಿವೆ. ಆಧು­ನಿಕತೆ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನಗೈಯುವ ಸಿದ್ಧಾಂತವೇ ನಮಗೆ ಗೊತ್ತಿಲ್ಲ.

ಮಾರಿಷಸ್‌ನ ಡೋಡೋ ಹಕ್ಕಿ ಕಣ್ಮರೆಯಾಗಿ ಬಹಳ ಕಾಲವಾಯಿತು. ಕಳೆದ ವರ್ಷ ಕೇಂದ್ರ ಸರ್ಕಾರ, 9,೨೦೦ ಕೋಟಿ ಖರ್ಚು ಮಾಡಿ ಜೀವ­ವೈವಿಧ್ಯವನ್ನು ಸಂರಕ್ಷಣೆ ಮಾಡಲು ಪ್ರಯತ್ನಿಸಿದೆ. ಎಷ್ಟು ಹಣ ತೆತ್ತರೂ ಕರಗಿದ ಹಿಮಪರ್ವತ, ಕಗ್ಗೊಲೆಯದ ಕಾಡು, ಕಣ್ಮರೆಯಾದ ಜೀವಸಂಕುಲ ಮರಳಿಬಾರದು. ಕೊನೆಗೆ ಏನೂ ಉಳಿಯದೆ ಮನುಷ್ಯ ಮನುಷ್ಯನನ್ನೇ ತಿಂದು ಬದುಕಬೇಕಾಗಬಹುದು.
ಈಗ ಚಿಟ್ಟೆಯ ಈ ಚಿತ್ರ ಅಮೂಲ್ಯ ಅನ್ನಿಸುತ್ತದಲ್ಲವೆ ?

ತಿದ್ದುಪಡಿ:
ಮೊಘಲ್‌ ದೊರೆ ಬಾಬರ್‌ನ ಮಗ ಹುಮಾಯೂನ್‌. ಆದರೆ
ಜೂನ್‌ 15ರ ಸಂಚಿಕೆಯಲ್ಲಿ ಇದು ತಪ್ಪಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT