ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಮತ್ತು ಸಂಸ್ಥೆ

Last Updated 17 ನವೆಂಬರ್ 2012, 19:30 IST
ಅಕ್ಷರ ಗಾತ್ರ

ನಮ್ಮೆಲ್ಲರ ತಲೆಯಲ್ಲೂ ಒಂದೊಂದು ಕಥೆ ಇರುತ್ತದೆ, ಅದಕ್ಕೆ ಲೋಕದಲ್ಲಿ ಸಾಕ್ಷಿ ಹುಡುಕುತ್ತ ಇರುತ್ತೇವೆ- ಸುಮಾರಾಗಿ ಈ ಅರ್ಥದ ಒಂದು ಮಾತನ್ನು ತೇಜಸ್ವಿಯವರ `ಚಿದಂಬರ ರಹಸ್ಯ~ ಕಾದಂಬರಿಯಲ್ಲಿ ಕೆಸರೂರಿಗೆ ಬಂದ ಪತ್ತೇದಾರ ಹೇಳುತ್ತಾನೆ.

ಬದುಕಿನ ಯಾವುದೇ ಸಂಗತಿಯನ್ನಾಗಲಿ ಆದಿ, ಮಧ್ಯ, ಅಂತ್ಯವಿರುವ ಕಥೆಯಾಗಿ ನಿರೂಪಿಸಿಕೊಳ್ಳದಿದ್ದರೆ ಅರ್ಥವೇ ಆಗುವುದಿಲ್ಲ. ಹತ್ತು ಅಂಗಡಿ ಸುತ್ತಿ ಶಾಪಿಂಗ್ ಮಾಡಿದ್ದು, ಪ್ರವಾಸ ಹೋದಾಗ ಆದ ನಡೆದ ಘಟನೆಗಳು, ಮನೆಯಲ್ಲಿ ಹತ್ತು ವರ್ಷದ ಹಿಂದೆ ನಡೆದ ಮದುವೆಯ ವಿಷಯ, ತಲೆಮಾರಿನಿಂದ ಸಾಗಿ ಬಂದಿರುವ ಮನಸ್ತಾಪ, ಹಿತವೋ ಅಹಿತವೋ ಆದ ಪ್ರಣಯ ಪ್ರಸಂಗ, ಇರುವ ಪಕ್ಷ ಬಿಟ್ಟು ಹೊಸ ಪಕ್ಷ ಕಟ್ಟುವ ರಾಜಕೀಯ ನಾಯಕರ ಏಳು ಬೀಳು ಎಲ್ಲವನ್ನೂ ಕಥನವಾಗಿಯೇ ಕಟ್ಟಿಕೊಂಡು ಅರ್ಥವನ್ನು ನಿರ್ಮಿಸಿಕೊಳ್ಳುತ್ತ ಇರುತ್ತೇವೆ.
 
ಪತ್ರಿಕೆಗಳಿಗೆ, ಟಿವಿಗೆ ಎಲ್ಲವೂ `ಸ್ಟೋರಿ~ಗಳೇ. ಇಂಥ ಯಾವುದೇ ಸಂಗತಿಯನ್ನು ಕಥೆಯಾಗಿ ಹೇಳುತ್ತ ಹೇಳುತ್ತ ನಾವು ಕಟ್ಟಿಕೊಂಡ ಕಥೆಯನ್ನೇ ನಿಜವೆಂದು ನಂಬುತ್ತಲೂ ಇರುತ್ತೇವೆ. ಕಟ್ಟಿಕೊಂಡ ಕಥೆಗಳ ಆಚೆಗೆ ಏನಾದರೂ ಸತ್ಯವಿದೆಯೇ ಅನ್ನುವುದೇ ಚಿದಂಬರ ರಹಸ್ಯ.

ಅಂದಹಾಗೆ ಚಿತ್-ಅಂಬರ ಅಂದರೆ ಚಿತ್ತ ಮತ್ತು ಆಕಾಶ, ಆಕಾಶವೇ ಹೊದಿಕೆಯಾದ ಚಿತ್ತ, ಆಕಾಶದ ಹಾಗೆ ಏನೂ ಇಲ್ಲದ, ಎಲ್ಲವೂ ಇರುವ ಚಿತ್ತ ಎಂದೆಲ್ಲ ಹೇಳಿಕೊಳ್ಳಬಹುದು. ತಮಿಳುನಾಡಿನ ಚಿದಂಬರಂನಲ್ಲಿರುವ ದೇವಾಲಯದ ಗರ್ಭಗುಡಿಯಲ್ಲಿ ಇರುವ ಪರದೆಯನ್ನು ತೆರೆಯುವ ಕ್ಷಣಕ್ಕೆ ಭಕ್ತರು ಕಾಯುತ್ತಾರೆ. ಪರದೆಯ ಹಿಂದೆ ಇರುವುದರ ದರ್ಶನವಾಗಲೆಂದು.

ಪರದೆ ಸರಿದಾಗ ಹಿಂದೆ ಏನೂ ಇಲ್ಲ. ಇದು ಕೂಡ ಪರದೆಯ ಹಿಂದೆ ಏನೂ ಇಲ್ಲ ಅನ್ನುವುದು ಗೊತ್ತಿದ್ದೂ ಸುಮ್ಮನೆ ಕಾಯುವ ಒಣ ಅಭ್ಯಾಸವಾಗಿಬಿಟ್ಟಿದೆ. ಆದರೆ ಇದೊಂದು ಬೆಡಗಿನಂಥ ರೂಪಕ, ಮನಸ್ಸು ಕೊಟ್ಟು ಅರಿತರೆ.

ಭಾಷೆ-ಕಥೆ-ಸಾಮಾಜಿಕ ಸಂಸ್ಥೆಗಳು ಇವಕ್ಕೆ ಇರುವ ಸಂಬಂಧವನ್ನು ಕುರಿತು ಗಿಯಾಮ್ಬತಿಸ್ತಾ ವಿಕೊ ಗಿಯಾಬತಿಸ್ತ ವಿಕೊ (1668-1774) ತುಂಬ ಹೊಸ ರೀತಿಯಲ್ಲಿ ಪರಿಶೀಲಿಸಿದ. ವಿಕೋ ಇಟಲಿಯ ನೇಪಲ್ಸಿನಲ್ಲಿ ಹುಟ್ಟಿದ. ಅವನಪ್ಪ ಪುಸ್ತಕ ವ್ಯಾಪಾರಿ. ಅಮ್ಮ ಗಾಡಿ ಕಟ್ಟುವವನ ಮಗಳು. ಅನಾರೋಗ್ಯ ಮತ್ತು ಜೆಸೂಯಿಟ್ ಶಿಕ್ಷಣ ಕ್ರಮ ಅತೃಪ್ತಿ ಹುಟ್ಟಿಸಿ ವಿಕೊ ಮನೆಯಲ್ಲೇ ಬೇಕಾದ್ದನ್ನು ಓದಿಕೊಂಡ.

ಕೆಲವು ಕಾಲ ಮೇಷ್ಟರಾಗಿದ್ದ. ಆಮೇಲೆ ನೇಪಲ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾದ. ನೇಪಲ್ಸ್‌ನ ರಾಜ ಅವನನ್ನು ಚರಿತ್ರೆಲೇಖಕನಾಗಿ ನೇಮಕಮಾಡಿದ. ಆಧುನಿಕ ವೈಚಾರಿಕತೆಗೆ ರೂಪಕೊಟ್ಟ ಪ್ರಮುಖರಲ್ಲಿ ವಿಕೊ ಒಬ್ಬ. ಸೈನ್ಝಾ ನುವೊ (ನವ ವಿಜ್ಞಾನ) ಅನ್ನುವ ಅವನ ಪುಸ್ತಕ 1725ರಲ್ಲಿ ಪ್ರಕಟವಾಯಿತು.

ಸತ್ಯ, ಜ್ಞಾನ ಇವೆಲ್ಲವೂ `ನಿರ್ಮಾಣ~ಗಳು, `ರಚನೆ~ಗಳು ಅನ್ನುವ ನಿಲುವು ಅವನದು.
ಇಡೀ ಮನುಷ್ಯ ಸಮಾಜವನ್ನು ಅರಿಯುವ ಬಗೆಯನ್ನು ವಿಕೋ ವಿಜ್ಞಾನವೆಂದು ಕರೆದ. ಗೆಲಿಲಿಯೊ, ಬೇಕನ್, ನ್ಯೂಟನ್ ಇಂಥ ಚಿಂತಕರೆಲ್ಲ ನೈಸರ್ಗಿಕ ಜಗತ್ತಿನ ವಿಜ್ಞಾನವನ್ನು ರೂಪಿಸಿದ್ದಾರೆ, ಈಗ ಮನುಷ್ಯನ ಫಿಸಿಕ್ಸ್ ರಚಿಸಿಕೊಳ್ಳುವ ಗಳಿಗೆ ಬಂದಿದೆ ಅಂದ ವಿಕೊ.
ಮನುಷ್ಯನ ವಿಜ್ಞಾನದ ಮುಖ್ಯ ಕೆಲಸವೆಂದರೆ ಕಥೆ, ಕಥನಗಳನ್ನು ಗ್ರಹಿಸುವುದು ಹೇಗೆ ಅನ್ನುವುದನ್ನು ಕಂಡುಕೊಳ್ಳುವುದು. ಆದಿಮ ಮನುಷ್ಯ ಬಾಲಿಶನಲ್ಲ, ಮೂರ್ಖನಲ್ಲ, ಬರ್ಬರನೂ ಅಲ್ಲ. ಆದಿಮ ಮನುಷ್ಯನಿಗೆ ಜನ್ಮಜಾತವಾದ ಕಾವ್ಯವಿವೇಕವಿತ್ತು. ಆದಿಮ ಮನುಷ್ಯ ಅದನ್ನು ಬಳಸಿಕೊಂಡು ಸುತ್ತಲ ಪರಿಸರಕ್ಕೆ ತೋರಿದ ಪ್ರತಿಕ್ರಿಯೆಗಳು ರೂಪಕ, ಸಂಕೇತ, ಪುರಾಣದ ರೂಪಗಳನ್ನು ತಾಳಿದವು.

ಹಾಸ್ಯಾಸ್ಪದ, ಅಸಂಬದ್ಧ, ಅತಿರಂಜಿತವೆಂಬಂತೆ ತೋರುವ ಸೃಷ್ಟಿ ಕಥನಗಳು ವಾಸ್ತವಕ್ಕೆ ತೋರಿದ ಮುಗ್ಧ ಪ್ರತಿಕ್ರಿಯೆಗಳಲ್ಲ, ಸುಳ್ಳುಗಳಲ್ಲ, ಕಲ್ಪನೆಗಳಲ್ಲ. ವಾಸ್ತವವನ್ನು ಅರಿಯುವ, ಭಾಷೆಯಲ್ಲಿ ಹಿಡಿದಿಡುವ, ನಿಭಾಯಿಸುವ ರೀತಿ ಈ ಕಥನಗಳಲ್ಲಿ ಕಾಣುತ್ತದೆ. ಪುರಾಣ ಕಥೆಗಳು ಆದಿಮ ಮನುಷ್ಯರು ನಿರೂಪಿಸಿಕೊಂಡಿದ್ದ ನಾಗರಿಕತೆಯ ಕಥೆಗಳು ಅನ್ನುತ್ತಾನೆ ವಿಕೊ.

ಮನುಷ್ಯ ತನ್ನ ವಾಸ್ತವ ಅನುಭವವನ್ನು ಸಾಮಾನ್ಯೀಕರಿಸಿ ನಿರೂಪಿಸಿದಾಗ ಪುರಾಣ ಕಥೆಗಳು ಹುಟ್ಟಿಕೊಂಡವು. ಅನುಭವಕ್ಕೆ, ಆಲೋಚನೆ, ಕಲ್ಪನೆಗಳಿಗೆ ಅರ್ಥವಾಗುವಂತ `ಆಕಾರ~ ಕೊಡುವ ಪ್ರಯತ್ನವೇ ಪುರಾಣಗಳ ಸೃಷ್ಟಿ. ಯೌವನ ಶಾಶ್ವತವಾಗಿ ಉಳಿಯಬೇಕು, ಸಾವನ್ನು ಗೆಲ್ಲಬೇಕು ಅನ್ನುವ ಹಂಬಲಗಳು ಎಲ್ಲ ಕಾಲದ ಮನುಷ್ಯರ ಹಂಬಲಗಳೇ ಅಲ್ಲವೇ.

ಅವನ್ನು ಹಾಗೆ ಹೇಳುವುದಕ್ಕಿಂತ ಯಯಾತಿಯ ಕಥೆಯಾಗಿಯೋ ಮಾರ್ಕಂಡೇಯನ ಕಥೆಯಾಗಿಯೋ ರೂಪಿಸಿಕೊಂಡಾಗ ಹಂಬಲಕ್ಕೆ ಒಂದು ಆಕಾರ ಮೂಡುತ್ತದೆ. ಊರೂರು ತಿರುಗುತ್ತ ಕಥೆ ಹೇಳಿಕೊಂಡೇ ಬದುಕಿದ್ದ ಚಾರಣ ಕವಿಗಳಿದ್ದರು, ಎಲ್ಲ ಸಂಸ್ಕೃತಿಗಳಲ್ಲೂ. ಕಥೆಗಳ ಮೂಲಕವೇ ಬದುಕಿನ, ಸಮಾಜದ ಸತ್ಯಗಳನ್ನು ಸಮುದಾಯಗಳಲ್ಲಿ ಹರಡುತಿದ್ದರು. ಭಾಷೆಯ ನಿರೂಪಣೆಗಳೇ ವಿವಿಧ ಬಗೆಯ ಮದುವೆಯ ಕ್ರಮ, ರಾಜ್ಯಾಡಳಿತ ಕ್ರಮ, ಶಿಕ್ಷೆ, ಶಿಕ್ಷಣ ಇವೆಲ್ಲ ಸಂಸ್ಥೆಗಳನ್ನೂ ರೂಪಿಸುವುದರಲ್ಲಿ ಮುಖ್ಯ ಪಾತ್ರವಹಿಸಿದ್ದವು.

`ಸಂಸ್ಥೆ~ ಅನ್ನುವ ಮಾತು ಬಂತು. ಈ ಮಾತನ್ನು ವಿಶೇಷವಾದ ಅರ್ಥದಲ್ಲಿ ಬಳಸುತ್ತಾರೆ. ಬದುಕಿನ ಬೇರೆ ಬೇರೆ ವಲಯಗಳಲ್ಲಿ ನಮ್ಮನ್ನು ನಿಯಂತ್ರಿಸುವ ವಿಧಿಗಳು, ನಿಯಮಗಳು, ನಿಯಂತ್ರಕಗಳ ಸಮೂಹವೇ ಸಂಸ್ಥೆ.

ಗಂಡು ಹೆಣ್ಣುಗಳ ಸಂಬಂಧ ಹೀಗಿರುವುದು ಅಪೇಕ್ಷಣೀಯ ಎಂದು ನಿರ್ಧರಿಸುವ ಮದುವೆ ಎಂಬ ಸಂಸ್ಥೆ, ಅಧಿಕಾರವನ್ನು ಹೇಗೆ ನ್ಯಾಯಬದ್ಧವಾಗಿ ಬಳಸಬೇಕು ಅನ್ನುವುದನ್ನು ವಿಧಿಸುವ ಸರ್ಕಾರವೆಂಬ ಸಂಸ್ಥೆ, ವಸ್ತು, ಉತ್ಪಾದನೆ, ಮಾರಾಟ, ಲಾಭ, ಇತ್ಯಾದಿಗಳನ್ನು ನಿರ್ಣಯಿಸುವ ಆರ್ಥಿಕ ವ್ಯವಸ್ಥೆ, ತಲೆಮಾರಿನಿಂದ ತಲೆಮಾರಿಗೆ ಜ್ಞಾನವನ್ನು ಹೇಗೆ ವರ್ಗಾಯಿಸಬೇಕು ಎಂಬುದನ್ನು ನಿರ್ಧರಿಸುವ ಶಿಕ್ಷಣ, ಅತಿಮಾನುಷ/ಅಲೌಕಿಕದ ಬಗ್ಗೆ ನಮ್ಮ ಸಂಬಂಧವನ್ನು ನಿರ್ಧರಿಸುವ ಧರ್ಮ ಇವು ಮನುಷ್ಯ ಸಮಾಜದ ಮುಖ್ಯವಾದ ಸಂಸ್ಥೆಗಳು ಅನ್ನುತ್ತಾರೆ.

ಮಹಾಭಾರತದಂಥ ಕಥೆ ಮನುಷ್ಯ ಕಟ್ಟಿಕೊಂಡಿರುವ ಈ ಮುಖ್ಯ ಸಂಸ್ಥೆಗಳ ಪರಿಶೀಲನೆಯೇ ಅಲ್ಲವೇ? ಅದರಲ್ಲಿ ಎಷ್ಟು ಬಗೆಯ ಮದುವೆಗಳು, ಎಷ್ಟು ಬಗೆಯ ಅಧಿಕಾರ/ರಾಜರು, ಎಷ್ಟು ಬಗೆಯ ಶಿಕ್ಷಣದ ವಿವರಗಳು, ಎಷ್ಟೆಲ್ಲ ಧರ್ಮಸೂಕ್ಷ್ಮಗಳ ಪರಿಶೀಲನೆ ಇದೆ ಅನ್ನುವುದನ್ನು ಗಮನಿಸಿ.

ಕಥೆಗಳ ಹಾಗೆಯೇ ಸಂಸ್ಥೆಗಳೂ ಮನುಷ್ಯ ಮನಸ್ಸಿನಿಂದಲೇ ಆಕಾರ ಪಡೆಯುತ್ತವೆ.
ಆಮೇಲೆ `ಜಗತ್ತು ಇರುವುದೇ ಹೀಗೆ, ಇದು ಸಹಜ, ಇದು ಸತ್ಯ~ ಎಂದು ಮನುಷ್ಯ ಮನಸ್ಸು ತಾನೇ ಕಟ್ಟಿಕೊಂಡ ಕಥೆಗಳ ಮೂಲಕ, ಸಂಸ್ಥೆಗಳ ಮೂಲಕ ಲೋಕವನ್ನು ನೋಡಲು ಕಲಿಯುತ್ತದೆ. ಇರುವ `ಸತ್ಯ~ ಮತ್ತು ಕಲ್ಪಿಸಿಕೊಂಡ `ವಾಸ್ತವ~ ಎರಡೂ ಒಂದೇ ಅನ್ನಿಸಲು ಶುರುವಾಗುತ್ತದೆ.

ಲೋಕವನ್ನು ನೋಡುವುದೆಂದರೆ ಮನುಷ್ಯ ಮನಸ್ಸು ಲೋಕಕ್ಕೆ ಕೊಟ್ಟಿರುವ ರೂಪವನ್ನು ನೋಡುವುದಷ್ಟೇ ಆಗಿರುತ್ತದೆ. ಈ ಅರ್ಥದಲ್ಲಿ ಮನುಷ್ಯ ತನ್ನನ್ನು ತಾನೇ ಸೃಷ್ಟಿಸಿಕೊಳ್ಳುವ `ಪೊಯೆಟ್~ ಅನ್ನುತ್ತಾನೆ ವಿಕೊ. ಪೊಯೆಟ್ ಅನ್ನುವ ಮಾತಿನ ಗ್ರೀಕ್ ಮೂಲ ಪದಕ್ಕೆ ನಿರ್ಮಾಪಕ, ಮಾಡುವವನು, ಸೃಷ್ಟಿಸುವವನು ಅನ್ನುವ ಅರ್ಥವಿದೆ. ನಮ್ಮಲ್ಲೂ ಕವಿ ಅನ್ನುವ ಮಾತಿಗೆ ಬ್ರಹ್ಮ ಅನ್ನುವ ಅರ್ಥವಿದೆ.

ಇನ್ನೊಂದು ಹೆಜ್ಜೆ ಮುಂದಿಟ್ಟರೆ ಮನುಷ್ಯನ ಮನಸಿನ ಬಿಂಬಗಳ ಮೂಲಕ ಸೃಷ್ಟಿಗೊಂಡ ಸಮಾಜ, ಸಂಸ್ಥೆಗಳು ಮನುಷ್ಯನನ್ನೂ ತಿದ್ದಿ ರೂಪಿಸುವುದೂ ಗಮನಕ್ಕೆ ಬರುತ್ತದೆ. `ಕುವೆಂಪುವ ಸೃಜಿಸಿದೀ ರಾಮಾಯಣಂ~ ಎಂಬ ಮಾತು ನೆನಪಿಗೆ ಬರುತ್ತದೆ. ಕುವೆಂಪು ಕೃತಿಗಳನ್ನು ರಚಿಸಿದರು, ಆ ಕೃತಿಗಳೇ ಕುವೆಂಪು ಅವರನ್ನೂ ರಚಿಸಿದವು. ಮನುಷ್ಯ ಕಥೆಗಳನ್ನು ಕಟ್ಟಿಕೊಳ್ಳುತ್ತಾನೆ, ಪುರಾಣಗಳನ್ನು ಕಟ್ಟಿಕೊಳ್ಳುತ್ತಾನೆ, ಸಂಸ್ಥೆಗಳನ್ನು ಕಟ್ಟಿಕೊಳ್ಳುತ್ತಾನೆ, ತಾನು ಗ್ರಹಿಸಿದಂತೆ ಇಡೀ ಲೋಕವನ್ನೆ ರಚಿಸಿಕೊಳ್ಳುತಾನೆ, ಹಾಗೆ ಮಾಡುತ್ತ ಮಾಡುತ್ತ ತನ್ನನ್ನೆ ರಚಿಸಿ ರೂಪಿಸಿಕೊಳ್ಳುತಾನೆ.

ರಚನೆಯ ಕ್ರಿಯೆ ಅಂದರೆ ಗುರುತಿಸಬಹುದಾದ, ರಿಪೀಟು ಮಾಡಬಹುದಾದ ರೂಪಗಳ ಸೃಷ್ಟಿ. `ಕುರ್ಚಿ~ ಅನ್ನುವುದಕ್ಕೆ ಮನುಷ್ಯ ಮನಸ್ಸು ಒಂದು ಆಕಾರ ಕೊಟ್ಟು ರಚನೆಯ ಮಾಡಿದೆಯಲ್ಲ ಅದನ್ನು ರಿಪೀಟು ಮಾಡಬಹುದು, ಆದ್ದರಿಂದಲೇ ಆ ರಚನೆ ಯಶಸ್ವಿ. ಸರ್ಕಾರದ ಮಾದರಿಗಳೂ ರಚನೆಗಳೇ ಆದ್ದರಿಂದ ಅವನ್ನೂ ರಿಪೀಟು ಮಾಡಬಹುದು. ಭಾಷೆಯೂ ರಚನೆಯೇ ಆದ್ದರಿಂದ ಅದನ್ನು ಕಲಿಯುವುದಕ್ಕೆ ಸಾಧ್ಯವಾಗಿದೆ.

ಮತ್ತಷ್ಟು ಮುಂದುವರೆದು ವಿಕೋ ಇನ್ನೊಂದು ಸಂಗತಿಯನ್ನು ಪ್ರಸ್ತಾಪಿಸುತ್ತಾನೆ. ಅದು ನಾವು ಯಾವುದನ್ನು ಮನುಷ್ಯತ್ವ, ಪ್ರೀತಿ, ಇತ್ಯಾದಿ ಸದ್ಗುಣಗಳು, ಮನುಷ್ಯತ್ವದ ಲಕ್ಷಣಗಳು ಅನ್ನುತ್ತೇವೋ ಅವೆಲ್ಲವೂ ಮನುಷ್ಯನಿಂದ ರಚನೆಗೊಂಡ ಭಾಷೆ, ಕಥನ, ಸಂಸ್ಥೆಗಳಿಂದ ಸಾಧ್ಯವಾಗಿರುವ ಫಲಿತಾಂಶಗಳು ಅನ್ನುತ್ತಾನೆ.

ಸಂಪ್ರದಾಯಗಳು, ವಿಧ್ಯುಕ್ತ ಆಚರಣೆಗಳು ಇವೆಲ್ಲ ಮನುಷ್ಯನ ಮಿದುಳನ್ನು, ಮನಸ್ಸನ್ನು ತಿದ್ದುವ ಕಾರ್ಯ ಮಾಡುತ್ತ ಮನುಷ್ಯ ನಿರ್ಮಿತ ಲೋಕವು ಸಹಜ, ಅ-ಕೃತಕ ಅನ್ನುವ ದೃಷ್ಟಿ ನಮ್ಮಲ್ಲಿ ಮೂಡತೊಡಗುತ್ತದೆ.


ಸಮಾಜ ಹೀಗೆಯೇ ಇರಬೇಕು, ಬದುಕು ಹೀಗೆಯೇ ಸಾಗಬೇಕು, ಮನುಷ್ಯತ್ವ ಅಂದರೆ ಇದು ಅನ್ನುವ ಪೂರ್ವ ನಿರ್ಧಾರಿತವಾದ ಮಾದರಿಗಳು ಯಾವುದೂ ಇಲ್ಲ ಎಂದು ಪ್ರತಿಪಾದಿಸುವ ಅಸ್ತಿತ್ವವಾದ; ಮನುಷ್ಯತ್ವ ಅನ್ನುವುದು ಮನುಷ್ಯ ಸ್ವಭಾವ ಅನ್ನುವುದು ನಿರ್ದಿಷ್ಟ ಸಾಮಾಜಿಕ ಸಂಬಂಧಗಳಿಂದ, ಮನುಷ್ಯ ಸಂಸ್ಥೆಗಳ ವ್ಯವಸ್ಥೆಯಿಂದ ರೂಪುಗೊಳ್ಳುತ್ತದೆ ಎಂದು ನಂಬುವ ಮಾಕ್ಸ್‌ವಾದ ಇವು ಕೂಡ ಬದುಕಿನ ರಾಚನಿಕ ಅಂಶಕ್ಕೇ ಪ್ರಾಮುಖ್ಯ ಕೊಡುತ್ತವೆ.

ಮನುಷ್ಯನಾಗಿರುವುದು ಅಂದರೆ ರಚನೆಯ ಸಾಮರ್ಥ್ಯ ಇರುವುದು, ಹಾಗೆ ರಚಿಸಿದ್ದಕ್ಕೆ ಹೊಂದಿಕೊಂಡು ಹೋಗುವುದು ಮಾತ್ರವಲ್ಲ; ತಾನೇ ರಚಿಸಿದ್ದರಿಂದ ಸ್ವಲ್ಪ ದೂರ ಸರಿದು ನೋಡುವ ಪರಿಶೀಲಿಸುವ ಸಾಮರ್ಥ್ಯವೂ ಇರುವುದು. ಅದಕ್ಕೆ ಸಹಾಯಕವಾಗುವುದು ಭಾಷೆ. ಮನುಷ್ಯನ ಎಲ್ಲ ರಚನೆಗಳಿಗೆ ತಳಹದಿಯಾಗಿರುವ ಭಾಷೆಯನ್ನೂ ಒಂದು ರಚನೆ ಎಂದು ನೋಡುವುದಕ್ಕೆ ಕಾರಣವಾದ ಸಂಗತಿಗಳಲ್ಲಿ ವಿಕೋನ ಪುಸ್ತಕವೂ ಒಂದು ಮುಖ್ಯವಾದ ಪ್ರಚೋದನೆ.
 
ಅವನು ಯಾವುದನ್ನು ಹೊಸ ವಿಜ್ಞಾನ ಎಂದು ಕರೆದನೋ ಅದು ಕ್ರಮೇಣ ಸಂರಚನಾವಾದ ಎಂಬ ಹೆಸರಿನಲ್ಲಿ ದೊಡ್ಡ ತತ್ವವಾಗಿ ಬೆಳೆಯಿತು. ಮಾನವಿಕ ವಿಷಯಗಳ ಅಧ್ಯಯನಕ್ಕೆ ಹೊಸ ದಾರಿಯನ್ನು ತೋರಿಸಿತು.

ತೇಜಸ್ವಿಯವರ ಮಾತನ್ನು ಈ ಲೇಖನದ ಆರಂಭದಲ್ಲಿ ಹೇಳಿದ್ದೆ. ಕೊನೆಯಲ್ಲಿ ನಮ್ಮ ದೇಶದ ಪುರಾಣಗಳ ಒಂದು ಲಕ್ಷಣವನ್ನು ಸೂಚಿಸಬೇಕು ಅನ್ನಿಸಿದೆ. ನಮ್ಮೆಲ್ಲ ಪುರಾಣಗಳೂ ವಿಶ್ವ ಸೃಷ್ಟಿಯಿಂದ ಆರಂಭವಾಗಿ ವಿಶ್ವದಲ್ಲಿ ಭೂಮಿಯ ಸ್ಥಾನವನ್ನು ನಿರ್ದೇಶಿಸುವುದರಿಂದಲೇ ತೊಡಗುತ್ತವೆ. ಪಂಪನ ಆದಿಪುರಾಣವನ್ನೇ ನೋಡಿ.

ಲೋಕದ ಆಕಾರವರ್ಣನೆಯ ನಂತರ ಮಧ್ಯಮ ಲೋಕ, ಜಂಬೂದ್ವೀಪ, ಜಂಬೂದ್ವೀಪದಲ್ಲಿನ ಮಂದರ ಪರ್ವತ, ಅದರ ಬಳಿಯ ವಿದೇಹ, ಪಶ್ಚಿಮ ವಿದೇಹ, ಪಶ್ಚಿಮ ವಿದೇಹದ ಸೀತೋದಾ ನದಿ, ನದಿಯ ತಟದ ಗಂಧಿಳ ದೇಶ, ಗಂಧಿಳ ದೇಶದ ವಿಜಯಾರ್ಧ ಪರ್ವತ, ಆ ಪರ್ವತದ ಸಾನು ಪ್ರದೇಶ, ಅಲ್ಲಿನ ವಿದ್ಯಾಧರ ಶ್ರೇಣಿಗಳು, ಆ ಶ್ರೇಣಿಗಳಲ್ಲಿನ ಮಾವಿನ ಮರ, ಅಲ್ಲಿದ್ದ ಅರಮನೆಯಲ್ಲಿದ್ದ ರಾಜ ಹೀಗೆ ಕಾಲ-ದೇಶಗಳನ್ನು ನಿರ್ದಿಷ್ಟಗೊಳಿಸುತ್ತ, ಒಂದು ಜೀವಿಯ ಕಥೆಗೂ ಇಡೀ ವಿಶ್ವಕ್ಕೂ ಇರುವ ಸಂಬಂಧವನ್ನು ಕಟ್ಟಿಕೊಡುತ್ತ ಮುಂದುವರೆಯುತ್ತದೆ.

ಕಥೆ ಎಂದರೆ ಸಾಮಾನ್ಯವೇ? ಅದು ನಾವು ನೀವು ಕಟ್ಟಿಕೊಂಡಿರುವ ಲೋಕ. ಭಾಷೆ ಎಂದರೆ ಸಾಮಾನ್ಯವೇ? ಅದು ಕಥೆಯನ್ನೂ ಕಟ್ಟುವ, ಕಟ್ಟಿದ ಕಥೆಯನ್ನು ಬಿಡಿಸಿ ನೋಡುವುದಕ್ಕೂ ಒದಗುವ ಕರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT