ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಳ ನಗರದಲ್ಲಿ ಮೂರು ದಿನ ಕಂಡದ್ದು...

Last Updated 2 ಅಕ್ಟೋಬರ್ 2016, 4:37 IST
ಅಕ್ಷರ ಗಾತ್ರ

ಅಲ್ಲಿ ಮಳೆ ಎಂಬುದು ಮರೀಚಿಕೆ. ಬರೀ ಬಿಸಿಲಿನದೇ ಆಟ. ಅಲ್ಲಿ ಇರುವುದೇ ಎರಡು ಋತು. ಒಂದು ಬೇಸಿಗೆ ಕಾಲ: ಇನ್ನೊಂದು ಬಿರು ಬೇಸಿಗೆ ಕಾಲ. ಬಿಸಿಲಿಗೆ ಹೆದರಿ ಜನರು ಹೊರಗೆ ಸಂಚರಿಸುವುದೇ ಇಲ್ಲ. ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಕಾಣುವುದೇ ಇಲ್ಲ. ಎಲ್ಲರಿಗೂ ಒಂದೊಂದು ಕಾರು. ಎಲ್ಲ ಕಾರುಗಳಲ್ಲೂ ತಂಪು ವಾತಾನುಕೂಲ. ಮನೆ, ಕಟ್ಟಡಗಳೂ ಹಾಗೆಯೇ. ನೀರು ಇಲ್ಲ ಎನ್ನುವ ಹಾಗೇನೂ ಇಲ್ಲ. ಸುತ್ತ ಎಲ್ಲೆಲ್ಲೂ ನೀರು. ಆದರೆ, ಕುಡಿಯಲು ಮಾತ್ರ ಹನಿ ನೀರು ಭೂಮಿಯ ಮೇಲೂ ಇಲ್ಲ, ಒಳಗೂ ಇಲ್ಲ. ಆದರೂ ಅಲ್ಲಿ ಕೋಟಿಗಿಂತ ಮಿಗಿಲು ಜನರು ವಾಸವಾಗಿದ್ದಾರೆ. ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ : ಕುಡಿಯಲು ಹನಿ ನೀರು ಇಲ್ಲದ, ನೆರಳಿಗೆ ದೊಡ್ಡ ಮರ ಹೋಗಲಿ, ಕುರುಚಲು ಗಿಡವೂ ಚಿಗುರದ ಮರುಭೂಮಿಯಲ್ಲಿ ನಾಗರಿಕತೆ ಹೇಗೆ  ಹುಟ್ಟಿಕೊಂಡಿತು ಅಂತ!

ಮನುಷ್ಯನೇ ಹಾಗೆ. ಆತ ಕಟ್ಟಿದ ನಾಗರಿಕತೆಯ ಕಥೆಯೂ ಹಾಗೆಯೇ. ಕಳೆದ ವಾರ ದುಬೈನಲ್ಲಿ ಇದ್ದೆ. ಅದು ಅಲ್ಲಿಗೆ ನನ್ನ ಮೊದಲ ಪಯಣ. ಭಾರತೀಯರಿಗೆ, ಕನ್ನಡಿಗರಿಗೆ ದುಬೈ ಅಂಥ ಅಜೀಬು ನಗರವೇನೂ ಅಲ್ಲ. ಅಲ್ಲಿ ಇರುವ ಬಹುಪಾಲು ಹೋಟೆಲುಗಳೆಲ್ಲ ನಮ್ಮವರವೇ. ಎಡವಿ ಬಿದ್ದರೆ ಅಲ್ಲಿ ಒಬ್ಬ ಕನ್ನಡಿಗ ನಮಗೆ ಸಿಗುತ್ತಾನೆ. ಎಲ್ಲರೂ ಜೀವನ ಹುಡುಕಿಕೊಂಡು ಬಂದವರು. ಕಷ್ಟಪಟ್ಟು ದುಡಿಯುವವರು. ಅಲ್ಲಿ ಮೈಗಳ್ಳತನ ಮಾಡಲು ಸಾಧ್ಯವೇ ಇಲ್ಲ. ಕೆಲವರು ಬಿಳಿ ಕಾಲರ್‌  ಕೆಲಸ ಮಾಡುತ್ತಾರೆ. ಇನ್ನು ಕೆಲವರು ಕೂಲಿ, ಮನೆಗೆಲಸ ಮಾಡಿಕೊಂಡು ಇದ್ದಾರೆ. ಎಲ್ಲರಿಗೂ ಕನಸುಗಳು. ಇಲ್ಲಿ ದುಡಿದು ಮನೆಗಳನ್ನು ಕಟ್ಟಿ, ತಮ್ಮೂರಿನಲ್ಲಿ ಇರುವ ಮನೆಯನ್ನೂ ಸಲಹುವ ಕನಸು.

ದುಬೈ ನಗರವೇ ಹಾಗೆ. ಅದು ಕನಸುಗಳ ನಗರ. ಅಲ್ಲಿನ ದೊರೆ ಶೇಖ್‌  ಮೊಹಮ್ಮದ್‌ ಬಿನ್‌ ರಷೀದ್‌ ಅಲ್‌ ಮಕ್ತೂಮ್‌  ಅವರಿಗೆ  ಜಗತ್ತಿನ ಒಳ್ಳೆಯದೆಲ್ಲ ತಮ್ಮ ನಗರದಲ್ಲಿ ಇರಲಿ ಎಂದು ಆಸೆ. ಅವರದು ಪಶ್ಚಿಮದ ಕಡೆಗಿನ ಮುಖ. ಅಲ್ಲಿ ಇರುವ ವಸ್ತ್ರ ಸ್ವಾತಂತ್ರ್ಯ, ಕೆಲವು ಸಾರಿ ಅತಿ ಎನ್ನುವಂಥ ಸ್ವಚ್ಛಂದವೂ ತಮ್ಮ ಊರಿನಲ್ಲಿ ಇರಲಿ ಎನ್ನುವ ತವಕ. ಹಾಗೆಂದು ಅಲ್ಲಿ ವಾಕ್‌ ಸ್ವಾತಂತ್ರ್ಯ ಇಲ್ಲ. ಧಾರ್ಮಿಕ ಸ್ವಾತಂತ್ರ್ಯವೂ ಇಲ್ಲ. ಲೌಕಿಕ ಸುಖಗಳು, ಐಶ್ವರ್ಯಗಳು ಏನಾದರೂ ಇದ್ದರೆ, ಅದನ್ನು ಅನುಭವಿಸಬೇಕು ಎಂದು ಇದ್ದರೆ ಇತರ ಸಂಯುಕ್ತ ಅರಬ್‌ ದೇಶಗಳ ಪ್ರಜೆಗಳೂ ದುಬೈಗೇ ಬರುತ್ತಾರೆ. ಇಲ್ಲಿ ಕುಡಿದು, ಕುಣಿದು, ರಾತ್ರಿ ಕ್ಲಬ್‌ಗಳಿಗೆಲ್ಲ ಅಲೆದು ಮೈಮನ ತಣಿಸಿಕೊಂಡು ಮರುದಿನ ತಮ್ಮ ದೇಶಕ್ಕೆ ತೆರಳುತ್ತಾರೆ.

ದುಬೈ ದೊರೆ ಬರೀ ಹೀಗೆ ಮೋಜು ಮಸ್ತಿಗೆ ಮಾತ್ರ ಗಮನ ಕೊಟ್ಟಿಲ್ಲ. ಅವರು ತಮ್ಮ ನಗರವನ್ನು ಹೇಗೆ ನಿರ್ಮಿಸಿದ್ದಾರೆ ಎಂದು ನಮ್ಮ ನಗರ ಯೋಜಕರು ಒಂದು ಸಾರಿ ಅಲ್ಲಿ ಹೋಗಿ ನೋಡಿ ಬರಬೇಕು. ಅವರು ಸಮುದ್ರವನ್ನೇ ಪಳಗಿಸಿದ್ದಾರೆ. ಅವರ ಸಾಹಸಕ್ಕೆ ಮಣಿದು ಸಮುದ್ರವೂ ಅಲ್ಲಿ ಸಮಾಧಾನದಿಂದ ಹರಿಯುತ್ತದೆ, ಅಲೆಗಳು ಅಬ್ಬರಿಸುವುದಿಲ್ಲ. ಅದೇ ಸಮುದ್ರದ ಉಪ್ಪು ನೀರನ್ನೇ ನಿರ್ಲವಣೀಕರಣ ಮಾಡಿ ಕುಡಿಯಲು ಬಳಸುತ್ತಾರೆ.

ಅದು ಎಷ್ಟು ದುಬಾರಿ ಎಂದು ಹೇಳಬೇಕಿಲ್ಲ. ಅದು ಬಿಟ್ಟರೆ ಅವರಿಗೆ ನೀರಿನ ಬೇರೆ ಮೂಲವೇ ಇಲ್ಲ. ಈಚಲು ಮರದ ಹಾಗೆ  ಕಾಣುವ ಖರ್ಜೂರದ ಮರಗಳನ್ನು ಬಿಟ್ಟರೆ ಬೇರೆ ಮರಗಳೂ ಕಾಣುವುದಿಲ್ಲ. ನಿಸರ್ಗಕ್ಕೆ ಸವಾಲು ಹಾಕುವಂತೆ, ಬೇರೆ ದೇಶಗಳಿಂದ ಮಣ್ಣು ಆಮದು ಮಾಡಿಕೊಂಡು ತೋಟಗಳನ್ನು ಬೆಳೆಸಿದ್ದಾರೆ. ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲಲ್ಲಿ ರಸ್ತೆಯ ಅಂಚಿನಲ್ಲಿ ಹುಲ್ಲು ಹಾಸು ಬೆಳೆಸಿದ್ದಾರೆ. ಅದಕ್ಕೆ ತುಂತುರು ತುಂತುರಾಗಿ ನೀರು ಹರಿಸುತ್ತಾರೆ.

ಅವರು ಮಾಡುವ ಎಲ್ಲ ಕೆಲಸಗಳೂ ಹಾಗೆಯೇ. ಬಲು ಅಚ್ಚುಕಟ್ಟು. ದುಬೈನಲ್ಲಿನ ಮೆಟ್ರೊ ರೈಲನ್ನು ನಮ್ಮ ಮೆಟ್ರೊ ರೈಲು ಅಧಿಕಾರಿಗಳು ಒಂದು ಸಾರಿ ನೋಡಿಕೊಂಡು ಬರಬೇಕು. ಅಲ್ಲಿನ ಮೆಟ್ರೊ ರೈಲು ಯೋಜನೆ ನೋಡಿದರೆ ಬೆಂಗಳೂರಿನ ಮೆಟ್ರೊ ರೈಲು ದುಂದುಗಾರಿಕೆ ಎಂದು ಅನಿಸುತ್ತದೆ. ಅಲ್ಲಿಯೂ ಕಾಂಕ್ರೀಟ್‌ ಕಂಬಗಳ ಮೇಲೆಯೇ ಮೆಟ್ರೊ ರೈಲು ಸಂಚರಿಸುತ್ತದೆ.

ಆದರೆ, ಇಲ್ಲಿನ ಹಾಗೆ  ಅಲ್ಲಿನ ಕಂಬಗಳು ಕುರೂಪ ಎಂದು ಅನಿಸುವುದಿಲ್ಲ. ಕಂಬಗಳ ಮೇಲೆ ಹಳಿ ಜೋಡಿಸಲು ಹಾಕಿದ ಕಾಂಕ್ರೀಟ್‌ ಬ್ಲಾಕ್‌ಗಳೂ ಇಲ್ಲಿನ ಹಾಗೆ ಭಯಾನಕ ಎನ್ನುವಂತೆ  ಇಲ್ಲ. ಇಡೀ ಮೆಟ್ರೊ ಮಾರ್ಗಕ್ಕೆ ದುಬೈನ ಬಣ್ಣವಾದ ‘ತೆಳು ಹಳದಿ’ ಬಣ್ಣವನ್ನು ಬಳಿದಿದ್ದಾರೆ. ಅಲ್ಲಿನ ಮೆಟ್ರೊ ರೈಲು ಚಾಲಕ ರಹಿತವಾಗಿ ಓಡುತ್ತದೆ.

ಇಡೀ ಜಗತ್ತಿನಲ್ಲಿ ಅತಿ ಉದ್ದದ ಚಾಲಕ ರಹಿತ ಮೆಟ್ರೊ ರೈಲು ಓಡುತ್ತಿರುವುದು ದುಬೈನಲ್ಲಿ. ಅದೂ 75 ಕಿಲೋ ಮೀಟರ್‌ನಷ್ಟು ಉದ್ದ. ಮೆಟ್ರೊ ರೈಲಿಗೆ ಶಂಕು ಸ್ಥಾಪನೆ ಮಾಡುವಾಗ 2009ರ ಸೆಪ್ಟೆಂಬರ್‌ 9ರಂದು ರೈಲು ಸಂಚಾರವನ್ನು ಉದ್ಘಾಟನೆ ಮಾಡಲಾಗುವುದು ಎಂದು ಅಲ್ಲಿನ ದೊರೆ ಪ್ರಕಟಿಸಿದ್ದರು. ಉದ್ದೇಶಿತ 29 ಕಿಲೋಮೀಟರ್‌ ಮಾರ್ಗವನ್ನೂ ಅಂದೇ ಉದ್ಘಾಟನೆ ಮಾಡಲು ಆಗಲಿಲ್ಲ. ಆದರೆ, ಅಂದುಕೊಂಡತೆ 2009ರ ಸೆಪ್ಟೆಂಬರ್‌ 9ರಂದು ಬೆಳಿಗ್ಗೆ 9 ಗಂಟೆ ಒಂಬತ್ತು ನಿಮಿಷ ಒಂಬತ್ತು ಸೆಕೆಂಡಿಗೆ (09:09:09) ಹತ್ತು ಕಿಲೋ ಮೀಟರ್‌ ಮಾರ್ಗದಲ್ಲಿ ರೈಲು ಸಂಚಾರ  ಉದ್ಘಾಟನೆಯಾಯಿತು!

ಅಲ್ಲಿನ ದೊರೆ ಕನಸುಗಾರ ಎಂದೆ. ಅವರು ಸಮುದ್ರವನ್ನು ಒತ್ತಿ ಒಳಗೆ ಹೋಗಿ ನಗರವನ್ನು ವಿಸ್ತರಿಸಿದ್ದಾರೆ. ಸಮುದ್ರ ವಿಸ್ತರಿಸುವಾಗಲೂ ಬೇಕಾಬಿಟ್ಟಿ ವಿಸ್ತರಿಸಿಲ್ಲ.  ಒಂದು ಕಡೆ ಪಾಮ್‌ ಗಿಡದ ಹಾಗೆ ವಿಸ್ತರಿಸಿದ್ದಾರೆ. ಆಕಾಶದಿಂದ ಕೆಳಗೆ ನೋಡಿದರೆ ಪಾಮ್‌ ಗಿಡದ ಹಾಗೆ ಸಮುದ್ರವನ್ನು ಒತ್ತುವರಿ ಮಾಡಿದ್ದು ಕಾಣುತ್ತದೆ. ಅದರ ಕೊಂಬೆಗಳಲ್ಲಿ, ಎಲೆಗಳಲ್ಲಿ ಭವ್ಯವಾದ ಹಲವು ಅಂತಸ್ತಿನ ಮನೆಗಳು ಎದ್ದಿವೆ. ಅಲ್ಲಿಯೇ ನಮ್ಮ ಐಶ್ವರ್ಯಾ ರೈ, ಶಾರುಖ್‌ ಖಾನ್‌ ಮನೆ ಖರೀದಿಸಿದ್ದಾರಂತೆ.

ನಮ್ಮವರ ಕಪ್ಪು ಹಣವೂ ಅಲ್ಲಿಯೇ ಇದೆ ಎಂದು ಜನರು ಆಡಿಕೊಳ್ಳುತ್ತಾರೆ. ಕರ್ನಾಟಕದ ಒಬ್ಬಿಬ್ಬರು ಸಚಿವರು ತಮ್ಮ ಕ್ಷೇತ್ರಕ್ಕೆ ಹೋಗುವುದಕ್ಕಿಂತ ಹೆಚ್ಚು ಸಾರಿ ದುಬೈಗೆ ಬರುತ್ತಾರೆ ಎಂದೂ ಅಲ್ಲಿನ ಕನ್ನಡಿಗರು ನನಗೆ ಹೇಳಿದರು! ಅವರ ಹೆಸರನ್ನೂ ಹೇಳಿದರು. ಆದರೆ, ಹೇಗೆ ಬರೆಯುವುದು? ಅವರು ಅಲ್ಲಿಗೆ ಹೋಗಲು ಯಾರ ಅನುಮತಿಯೂ ಬೇಕಿಲ್ಲ. ಆದರೆ, ಅಲ್ಲಿನದನ್ನು ಕೊಂಚವಾದರೂ ಅನುಸರಿಸಿದರೆ ಇಲ್ಲಿನ ಜನರ ಬದುಕೂ ಹಾಯಾಗುತ್ತದಲ್ಲ!

ದುಬೈನ ಬುರ್ಜ್‌  ಖಲೀಫಾ ಕಟ್ಟಡದ ಬಗೆಗೆ ನಾನೇನೂ ಬರೆಯುವುದಿಲ್ಲ. ಅದರ ಮುಂದೆಯೇ ಒತ್ತಿದ ಸಮುದ್ರದಲ್ಲಿ  ಸಂಗೀತ ಕಾರಂಜಿ ಇದೆ. ಕೇವಲ ನಾಲ್ಕು ನಿಮಿಷದ ಕಾರ್ಯಕ್ರಮ ಅದು. ಪ್ರತಿ ಅರ್ಧ ಗಂಟೆಗೆ  ಒಂದು ಸಾರಿ ಪುನರಾವರ್ತನೆ ಆಗುತ್ತದೆ. ಆ ಗಳಿಗೆಗೆ  ಕಾಯುತ್ತ ಜಗತ್ತಿನ ಎಲ್ಲ ಕಡೆಗಳಿಂದ ಬಂದ  ಜನರು ನಿಂತಿರುತ್ತಾರೆ.

ಅದು ಒಂದು ಅದ್ಭುತ ಅನುಭವ. ಹಿನ್ನೆಲೆಯ ಸಂಗೀತ, ಕಾರಂಜಿ ಕುಣಿತದ ವೇಗ, ಲಯ, ಲಾಸ್ಯ ರಭಸ... ಕೊನೆಯಲ್ಲಿ ಸುಖದ ತುರೀಯಾವಸ್ಥೆಗೆ ಹೋಗಿ ನಿಂತಂತೆ ಕಾರಂಜಿ ಆಕಾಶದ ಎತ್ತರಕ್ಕೆ  ಹಾರಿ ಒಂದೇ ಸಾರಿ ಧೊಪ್ಪನೆ ಕೆಳಗೆ ಬೀಳುತ್ತದೆ. ಸಂತಸದ ಸಿಂಪರಣೆ ಸೂಸುವ ಹಾಗೆ ತುಂತುರು ಹನಿಗಳು ಇಡೀ ಸಮುದ್ರವನ್ನು ಆವರಿಸುತ್ತವೆ. ಜಗತ್ತಿನ ಎಲ್ಲ ಕಡೆಯ ಪ್ರವಾಸಿಗರು ಬರುವ ಜೋಗದಲ್ಲಿಯೂ ಒಂದು ಸಂಗೀತ ಕಾರಂಜಿ ಇದೆ. ಅದು ಎಷ್ಟು ಕಳಪೆಯಾಗಿದೆ ಎಂದರೆ ಅಲ್ಲಿನ ಅಧಿಕಾರಿಗಳು ಒಂದು ಸಾರಿ ದುಬೈಗೆ  ಹೋಗಿ ಬರಬೇಕು.
ನಮಗೆ ಯಾವುದನ್ನೂ ಸರಿಯಾಗಿ ಮಾಡಲು ಆಗದು ಎಂದು ಅನಿಸುತ್ತದೆ.

ನಮ್ಮ ರಸ್ತೆಗಳು, ಪಾದಚಾರಿ ಮಾರ್ಗಗಳು, ನಮ್ಮ ಕೆರೆಗಳು, ನಮ್ಮ ಉದ್ಯಾನಗಳು, ನಮ್ಮ ವಿಮಾನ ನಿಲ್ದಾಣಗಳು ಎಲ್ಲವೂ ಕಳಪೆ ಎಂದು ಏಕೆ ಅನಿಸುತ್ತದೆ? ನಾವೇ ಕಳಪೆ ಜನರು ಆಗಿರಬಹುದೇ? ನಾವು ಭ್ರಷ್ಟಾತಿಭ್ರಷ್ಟರೂ, ಸೋಮಾರಿಗಳೂ ಆಗಿರುವುದು ಕಾರಣ ಆಗಿರಬಹುದೇ? ದುಬೈನಲ್ಲಿ ದುಡಿಯುವ ವರ್ಗ ಎಂದರೆ ಭಾರತೀಯರು.

ಅದೇ ಭಾರತೀಯರು, ಕನ್ನಡಿಗರು ಇರುವ ಇಲ್ಲಿ ಏಕೆ ಹೀಗೆ? ಅಲ್ಲಿ ಜನರು ಕನಿಷ್ಠ 12 ಗಂಟೆ ಕೆಲಸ  ಮಾಡುತ್ತಾರೆ. ಬಿಸಿಲು ಇರಲಿ, ಅತಿ ಬಿಸಿಲು ಇರಲಿ. ನಿಗದಿಯಾದ ಸಮಯಕ್ಕೆ ಯೋಜನೆಗಳನ್ನು ಮುಗಿಸುತ್ತಾರೆ. ಅತಿ ಬಿಸಿಲು ಕಾಲದಲ್ಲಿ  ಬಯಲಿನಲ್ಲಿ ಕೆಲಸ ಮಾಡುವ ಜನರಿಗೆ ಏರು ಮುಂಜಾನೆಯಿಂದ  ಮಧ್ಯಾಹ್ನದ ವರೆಗೆ ಮೂರು ಗಂಟೆ ಬಿಡುವು ಇರುತ್ತದೆ.

ಮತ್ತೆ ಅವರು ಬಂದು ಕಟ್ಟುವ ಕೆಲಸದಲ್ಲಿ ತೊಡಗುತ್ತಾರೆ. ಆಗಲೂ 12 ಗಂಟೆ ಕೆಲಸ  ಮಾಡಿಯೇ ಮಾಡುತ್ತಾರೆ. ಅಲ್ಲಿ ದುಡಿಯುವ ಇಂಥ ಇಂಥ ಕೈಗಳಿಗೆ ರಕ್ಷಣೆ ಇದೆ. ಯಾರಾದರೂ ನಿರ್ಮಾಣ ಕಾಮಗಾರಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡರೆ ಗುತ್ತಿಗೆದಾರನನ್ನೇ ಮೊದಲು ಒಳಗೆ ಹಾಕುತ್ತಾರೆ. ಇಲ್ಲಿನ ಹಾಗೆ ಆತನಿಗೆ ರಕ್ಷಣೆ ಸಿಗುವುದಿಲ್ಲ. ಆತ ಹೆದರಿ ಎಲ್ಲ ಮುಂಜಾಗ್ರತೆ ತೆಗೆದುಕೊಳ್ಳುತ್ತಾನೆ. ರಕ್ಷಣೆ  ಇರುವುದರಿಂದ ಮತ್ತು ಹೆಚ್ಚು ಸಂಬಳ ಸಿಗುವುದರಿಂದ ಎಲ್ಲರೂ ಹೆಚ್ಚು ಹೆಚ್ಚು ದುಡಿಯುತ್ತಾರೆ.

ಭಾರತದಿಂದ ಅಲ್ಲಿ ಉದ್ಯೋಗ ಅರಸಿ ಹೋದವರೂ ಅಷ್ಟೇ. ಎಲ್ಲರ ಹಿಂದೆಯೂ ಒಂದೊಂದು ಕಥೆ ಇವೆ. ಇಲ್ಲಿ ದಿವಾಳಿಯಾದವರು ಅಲ್ಲಿ ಹೋಗಿ ಬದುಕು ಕಟ್ಟಿಕೊಂಡಿದ್ದಾರೆ.

ದುಬೈನಲ್ಲಿ ನೌಕರಿ ಮಾಡಬಹುದು. ಆದರೆ, ಸ್ವಂತ ಉದ್ಯಮ ಪ್ರಾರಂಭಿಸುವುದು ಕಷ್ಟ. ಅಲ್ಲಿನ ಒಬ್ಬ ಪಾಲುದಾರ ನಿಮ್ಮ ಜೊತೆಗೆ ಇರಲೇ ಬೇಕು. ಆತನ ಪಾಲು ಶೇಕಡ 51. ನಿಮ್ಮ ಪಾಲು ಶೇ 49 ಮಾತ್ರ. ಆತನ ಅಸ್ತಿತ್ವ ಕಡ್ಡಾಯವಾಗಿರುವುದರಿಂದ ಆತ ಹಣ ಹಾಕಬೇಕು ಎಂದು ಇಲ್ಲ. ದುಬೈನ ಮೂಲನಿವಾಸಿಗಳ ಸುಖ, ಸೌಕರ್ಯಗಳ ಗುಟ್ಟು ಇಲ್ಲಿ ಇದೆ. ಅವರು ದುಡಿಯಬೇಕು ಎಂದು ಇಲ್ಲ. ಅವರ ಹೆಸರನ್ನು ಇಟ್ಟುಕೊಂಡು ದುಡಿಯವ ಭಾರತೀಯರು ಬೇಕಾದಷ್ಟು ಮಂದಿ ಅಲ್ಲಿ ಇದ್ದಾರೆ. ಅವರಲ್ಲಿ ಬಹುಪಾಲು ಕೇರಳದವರು, ಉಳಿದವರು ಕನ್ನಡದವರು.

ಭಾರತೀಯರು ದುಡಿಯುವ ಜನ ಎಂದೋ ಏನೋ ದುಬೈ ಮಂದಿಗೆ ನಮ್ಮ ಬಗೆಗೆ ಅಂಥ ಗೌರವ ಇಲ್ಲ. ಅವರು ನೋಡುವುದು ಪಶ್ಚಿಮದ ಕಡೆಗೆ. ಬಿಳಿಯರಿಗೆ ಅಲ್ಲಿ ಹೆಚ್ಚಿನ ಗೌರವ. ಅಲ್ಲಿ ಏನಾದರೂ ನೌಕರಿ ಇದ್ದರೆ ಅದು ಮೊದಲು ಸಲ್ಲುವುದು ಬಿಳಿಯರಿಗೆ. ದುಬೈ ನಗರದ ಹೊರವಲಯದಲ್ಲಿ ಒಂದು ಅಂತರರಾಷ್ಟ್ರೀಯ ನಗರ ನಿರ್ಮಾಣ ಆಗಿದೆ.

ಅಲ್ಲಿ ಎಲ್ಲ ಪಾಶ್ಚಾತ್ಯ ದೇಶಗಳ ಮಾದರಿ ಮನೆಗಳ ಸಮೂಹಗಳು ಇವೆ. ಅಲ್ಲಿ ಇಟಲಿ ಮಾದರಿ ಇದೆ, ಇಂಗ್ಲೆಂಡ್‌ ಮಾದರಿ ಇದೆ, ಫ್ರಾನ್ಸ್‌, ಸ್ಪೇನ್‌ ಇತ್ಯಾದಿ ಎಲ್ಲ ಮಾದರಿ ಮನೆಗಳೂ ಇವೆ. ಭಾರತದ ಮಾದರಿ ಇಲ್ಲ. ಪಾಕಿಸ್ತಾನದ ಮಾದರಿ ಕೇಳುವುದೇ ಬೇಡ. ಆದರೆ, ದುಬೈನ ರಾತ್ರಿ ಕ್ಲಬ್‌ಗಳಲ್ಲಿ ಭಾರತ ಮತ್ತು ಪಾಕಿಸ್ತಾನಿ ಹುಡುಗಿಯರು ಅರೆ ಬರೆ ಬಟ್ಟೆ ಹಾಕಿಕೊಂಡು ಕುಣಿಯುತ್ತಾರೆ.

ಅವರ ಮುಂದೆ ದುಬೈನ ಶೇಖ್‌ಗಳು ದಿರಮ್‌ಗಳನ್ನು ಚೆಲ್ಲುತ್ತಾರೆ. ಯಾವ ಚೆಲುವೆ ತನ್ನ ಮುಂದೆ ಬಂದು ಕುಣಿಯಬೇಕು ಎಂದು ಆತ ಹೇಳುತ್ತಾನೆ. ಅದಕ್ಕೆ ತಕ್ಕ ಹಣ ಕೊಡುವ ಮಾತು ಕೊಡುತ್ತಾನೆ. ಮದ್ಯದ ಗ್ಲಾಸುಗಳ ಸದ್ದಿನ ನಡುವೆ, ಸಿಗರೇಟಿನ ಧೂಮದ ತೆರೆಯ ಮಧ್ಯೆ ಆಕೆ ಬಂದು ಎಲ್ಲರ ಮುಂದೆ ಬಳುಕುತ್ತಾಳೆ, ಕುಣಿಯುತ್ತಾಳೆ. 

ಧರೆಯ ಮೇಲೆ ಸ್ವರ್ಗವನ್ನು ನಿರ್ಮಿಸುವುದು ಎಂದರೆ ಇದೇ ಇರಬೇಕು. ಅಲ್ಲಿನ ಚಿನ್ನದ ಅಂಗಡಿಗಳ ಮುಂದೆ ಒಂದು ಸಾರಿ ಅಡ್ಡಾಡಿ ಬಂದರೆ  ಮಧ್ಯಪ್ರಾಚ್ಯದ ಸಂಪತ್ತು ಎಷ್ಟು ಎಂದು ತಿಳಿಯುತ್ತದೆ. ಚಿನ್ನದ ಅಂಗಡಿಗಳ ಮುಂಭಾಗದ ಷೋಕೇಸ್‌ಗಳಲ್ಲಿ ಬರೀ ಕಂಠೀಹಾರಗಳು ಮಾತ್ರವಲ್ಲ ಕೊರಳು, ಎದೆ ಮತ್ತು ಹೊಟ್ಟೆಯನ್ನು ಮುಚ್ಚುವಂಥ ಭಿನ್ನ ಭಿನ್ನ ಕುಸುರಿ ಕೆಲಸದ ಆಭರಣಗಳು ಕಣ್ಣು ಕುಕ್ಕುತ್ತವೆ.

ಹೆಂಡತಿಗೆ ಒಂದು ಉಂಗುರವನ್ನೂ ಕೊಡಿಸಲಾಗದ ಕೃಪಣರು ನಾವು. ಅವರು ನೋಡಿ : ಅವಳ ಇಡೀ ಮೈಯ ಒಂದೊಂದು ಅಂಗಾಂಗವನ್ನೂ ಮುಚ್ಚುವಂಥ ಆಭರಣ  ಕೊಡಿಸುತ್ತಾರೆ.

ಮಧ್ಯಪ್ರಾಚ್ಯದ ಜನರಿಗೆ ನಿಸರ್ಗ ನೀರು ಕರುಣಿಸಲಿಲ್ಲ. ತೈಲವನ್ನು ಕರುಣಿಸಿತು. ಅವರು ತೈಲ ಬಳಸಿಕೊಂಡು ಏನೆಲ್ಲ ಮಾಡಿದ್ದಾರೆ, ಸಾಧಿಸಿದ್ದಾರೆ ಎಂದು ಅಲ್ಲಿಗೆ ಹೋಗಿ ನೋಡಬೇಕು...ನಮಗೆ ನಿಸರ್ಗ ಕರುಣಿಸಿದ ನೀರು ವರವಾಗಿದೆಯೇ ಅಥವಾ ಶಾಪವಾಗಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT